ವಿಜಯಸಾಕ್ಷಿ ಸುದ್ದಿ, ರೋಣ : ಈ ಬಾರಿ ಬರಗಾಲದ ಛಾಯೆ ಆವರಿಸಿದೆ. ಈ ಹಿನ್ನೆಲೆಯಲ್ಲಿ ದುಡಿಯುವ ವರ್ಗಕ್ಕೆ ಮಳೆ ಇಲ್ಲದೆ, ಬೆಳೆ ಕೂಡ ಇಲ್ಲ. ಹೀಗಾಗಿ ಡ.ಸ ಹಡಗಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಜೂನ್ ಅಂತ್ಯದವರೆಗೂ ಕೆಲಸ ನೀಡಲಾಗುತ್ತದೆ ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಈಶ್ವರಗೌಡ ಪಾಟೀಲ ಹೇಳಿದರು.
ರೋಣ ತಾಲೂಕಿನ ಡ.ಸ. ಹಡಗಲಿ ಗ್ರಾ.ಪಂ.ನಲ್ಲಿ ಕಾಯಕ ಬಂಧುಗಳ ಸಭೆಯಲ್ಲಿ ಮಾತನಾಡಿದ ಅವರು, ದುಡಿಯುವ ವರ್ಗಕ್ಕೆ ಕೆಲಸ ಕೊಡುವ ಮೂಲಕ ಅತಿ ಹೆಚ್ಚು ಮಾನವ ದಿನಗಳ ಸೃಜನೆ ಮಾಡುವ ಗುರಿಯನ್ನು ಹೊಂದೋಣ. ಈ ಹಿನ್ನೆಲೆಯಲ್ಲಿ ತಾವೇಲ್ಲರೂ ಶ್ರಮ ವಹಿಸಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಎಂದು ಹೇಳಿದರು.
ಪ್ರತಿ ಸೋಮವಾರ ಕೆಲಸದ ಬೇಡಿಕೆ ಸಲ್ಲಿಸಿದ ಕೂಲಿಕಾರರ ವಿವರಗಳನ್ನು ಎಂ.ಐ.ಎಸ್.ನಲ್ಲಿ ದಾಖಲಿಸುವುದು ಮತ್ತು ಎರಡು ದಿನಗಳೊಳಗೆ ಕೆಲಸವನ್ನು ಒದಗಿಸುವದು ನಮ್ಮ ಕೆಲಸ. ಕೆಲಸದ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ನೆರಳಿನ ವ್ಯವಸ್ಥೆ ಮಾಡುವದು ಸಿಬ್ಬಂದಿಗಳ ಕೆಲಸವಾಗಿದ್ದು, ಇದನ್ನು ತಪ್ಪದೇ ಪಾಲಿಸಬೇಕು ಎಂದರು.
ಈ ಮೊದಲು ಮಕ್ಕಳಿಗೆ ಸರಿಯಾದ ಸೌಲಭ್ಯಗಳು ಇಲ್ಲದೇ ಇರುವ ಕಾರಣ, ಮಕ್ಕಳಿಗೆ ಸ್ವಲ್ಪ ತೊಂದರೆ ಆಗುತ್ತಿತ್ತು.. ಈ ಬಾರಿ ಗ್ರಾಮದಲ್ಲಿ ಕೂಸಿನ ಮನೆಯನ್ನು ತೆರಯಲಾಗಿದ್ದು, ಪಾಲಕರಿಗೆ ಮಕ್ಕಳನ್ನು ಅಲ್ಲಿ ಬಿಟ್ಟು ಹೊಗಲು ತಿಳಿಸುವ ಕೆಲಸ ಮಾಡಿ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಕಾರ್ಯದರ್ಶಿ ಬಸವರಾಜ ತಳವಾರ, ಐಇಸಿ ಮಂಜುನಾಥ, ಬಿಎಫ್‌ಟಿ ಪ್ರಕಾಶ ಅಂಬಕ್ಕಿ ಹಾಗೂ ಡ.ಸ. ಹಡಗಲಿ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಎನ್‌ಎಂಎಂಎಸ್ ಆ್ಯಪ್ ಬಗ್ಗೆ ಮಾಹಿತಿ ನೀಡಿ, ಕಾಯಕ ಬಂಧುಗಳು ಎನ್‌ಎಂಎಂಎಸ್ ಆ್ಯಪ್ ಮೂಲಕ ಹಾಜರಾತಿ ಹಾಕಿ, ಕೆಲಸದಲ್ಲಿ ಯಾವುದೇ ರೀತಿಯ ವಿಳಂಬವಾಗದಂತೆ ನೋಡಿಕೊಳ್ಳಬೇಕು. ಪ್ರತಿ ಕೂಲಿಗಾರರಿಗೆ ನರೇಗಾ ಕೂಲಿ ಯೋಜನೆಯಡಿ 316 ರೂ ಕೂಲಿ ಇದೆ. ಹಾಗಾಗಿ ಜನರಿಗೆ ತಿಳಿವಳಿಕೆ ನೀಡುವುದು, ಅವರನ್ನು ಹೆಚ್ಚು ಹೆಚ್ಚು ಕೆಲಸಕ್ಕೆ ಬರುವ ಹಾಗೆ ಮಾಡುವ ಜವಾಬ್ದಾರಿ ನಿಮ್ಮದಾಗಿರುತ್ತದೆ ಎಂದು ಹೇಳಿದರು.



