ಲಕ್ನೋ: ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸಿಇಒ ಆಗಿ ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ಅವರನ್ನು ನೇಮಿಸಲಾಗಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆ ಸಂದರ್ಭದಲ್ಲಿ ಪಶ್ಚಿಮ ವಾಯುಕಮಾಂಡ್ ಮುಖ್ಯಸ್ಥರಾಗಿದ್ದ ಜೀತೇಂದ್ರ ಮಿಶ್ರಾ, ಅನುಭವಿ ಯುದ್ಧ ವಿಮಾನ ಪೈಲಟ್ ಆಗಿಯೂ ಕಾರ್ಯನಿರ್ವಹಿಸಿದವರು.
ಇದಕ್ಕೂ ಮುನ್ನ ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮೂವರು ಹೊಸ ಟ್ರಸ್ಟಿಗಳನ್ನು ನೇಮಿಸಿತ್ತು. ದೆಹಲಿ ಮೂಲದ ಮಹೇಶ್ ಭಾಗ್‌ಚಂದ್ಕ, ಅಯೋಧ್ಯೆಯ ನಿವಾಸಿ ಮದನ್ ಮೋಹನ್ ಪಾಂಡೆ ಹಾಗೂ ಶಿಕೋಹಾಬಾದ್‌ನ ನಿರ್ಮಲಾ ಯಾದವ್ ಅವರನ್ನು ಹೊಸ ಟ್ರಸ್ಟಿಗಳನ್ನಾಗಿ ನೇಮಿಸಲಾಗಿತ್ತು.
ಮಹೇಶ್ ಭಾಗ್‌ಚಂದ್ಕ ಅವರು ದಿವಂಗತ ವಿಶ್ವ ಹಿಂದೂ ಪರಿಷತ್ ನಾಯಕ ಅಶೋಕ್ ಸಿಂಘಾಲ್ ಅವರ ಸಂಬಂಧಿ ಎಂದು ತಿಳಿದುಬಂದಿದೆ. ಮದನ್ ಮೋಹನ್ ಪಾಂಡೆ ಹಾಗೂ ನಿರ್ಮಲಾ ಯಾದವ್ ಅವರ ನೇಮಕಾತಿಯ ಕುರಿತು ರಾಮಮಂದಿರ ಟ್ರಸ್ಟ್‌ನ ಪ್ರಮುಖ ಸಭೆಯಲ್ಲಿ ನಿರ್ಧರಿಸಲಾಗಿತ್ತು.



