ಬೆಂಗಳೂರು: ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿ ಪ್ರತಿದಿನ ಬೆಳಿಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯವಾಗಿದ್ದು, ಈ ಕುರಿತು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಖಡಕ್ ಸೂಚನೆ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಈ ಆದೇಶವನ್ನು ಜಾರಿಗೆ ತಂದಿದ್ದಾರೆ. ಎಲ್ಲಾ ಸರ್ಕಾರಿ ನೌಕರರು ಬೆಳಿಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಹಾಜರಾತಿ ದಾಖಲಿಸಲು ‘ಕರ್ತವ್ಯ ಆ್ಯಪ್’ ಬಳಕೆ ಕಡ್ಡಾಯಗೊಳಿಸಲಾಗಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿ ಕಚೇರಿಗೆ ಬಂದ ತಕ್ಷಣ ‘Check In’ ಮತ್ತು ಕೆಲಸ ಮುಗಿದ ಬಳಿಕ ‘Check Out’ ಮಾಡಬೇಕೆಂದು ಆದೇಶದಲ್ಲಿ ಸೂಚಿಸಲಾಗಿದೆ.
ಇ-ಆಡಳಿತ ಇಲಾಖೆಯು AI ತಂತ್ರಜ್ಞಾನ ಬಳಸಿ ಜಿಲ್ಲಾವಾರು ಹಾಗೂ ಇಲಾಖಾವಾರು ಹಾಜರಾತಿ ಮಾಹಿತಿಯನ್ನು ಪ್ರತಿದಿನ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ಸ್ವಯಂಚಾಲಿತವಾಗಿ ಕಳುಹಿಸುವ ವ್ಯವಸ್ಥೆ ರೂಪಿಸಿದೆ. ಇಲಾಖಾ ಮುಖ್ಯಸ್ಥರು ತಮ್ಮ ಲಾಗಿನ್ ಮೂಲಕ ‘ಕರ್ತವ್ಯ ಡ್ಯಾಶ್‌ಬೋರ್ಡ್’ನಲ್ಲಿ ಹಾಜರಾತಿ ಪರಿಶೀಲನೆ ಮಾಡಬೇಕಾಗುತ್ತದೆ.
ಕಚೇರಿ ಕರ್ತವ್ಯದ ನಿಮಿತ್ತ ಹೊರಗೆ ತೆರಳುವ ಅಧಿಕಾರಿಗಳು ‘OOD’ ಆಯ್ಕೆಯನ್ನು ಬಳಸಿಕೊಂಡು ವಿವರಗಳನ್ನು ದಾಖಲಿಸಬೇಕು. ಇದನ್ನು ಸಂಬಂಧಿಸಿದ ಮೇಲಾಧಿಕಾರಿಗಳು ದೃಢೀಕರಿಸುವ ವ್ಯವಸ್ಥೆಯೂ ಇದೆ.



