ಬೆಂಗಳೂರು: ಮುಡಾ ಎಂದೇ ಕರೆಯಲ್ಪಡುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ವಿಚಾರದಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪ ಸದ್ದು ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಹೆಚ್ಚಿನ ಮೌಲ್ಯ ಹೊಂದಿರುವ ಬಡಾವಣೆಯಲ್ಲಿ ಮುಡಾ ಬದಲಿ ನಿವೇಶನ ನೀಡಿದೆ ಎಂಬ ಆರೋಪ ಕೇಳಿ ಬಂದ ಬಳಿಕ ಇದು ಮತ್ತಷ್ಟು ಜೋರಾಗಿದ್ದು,
ಇದೀಗ ಜಮೀನು ಮಾಲೀಕ ದೇವರಾಜು ವಿರುದ್ಧ ಅಣ್ಣನ ಮಗಳು ಜಮುನಾ ಮೈಸೂರಿನ ಜೆಎಂಎಫ್ಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಜಮುನಾ ಅವರು ದೇವಾರಜು ಅವರ ಅಣ್ಣ ಮೈಲಾರಯ್ಯ ಅವರ ಮಗಳು.ಹೌದು,
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರ ಹೆಸರಿನಲ್ಲಿರುವ ಜಮೀನು ದೇವರಾಜು ಅವರದ್ದು ಅಲ್ಲ, ಬದಲಿಗೆ ನಮ್ಮ ತಂದೆ ಮೈಲಾರಯ್ಯ ಅವರಿಗೆ ಸೇರಿದ್ದು ಎಂದು ಜಮುನಾ ದಾವೆ ಹೂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸೇರಿದಂತೆ 12 ಜನರ ಮೇಲೆ ಸಿವಿಲ್ ಕೇಸ್ ದಾಖಲಿಸಿದ್ದಾರೆ.
ನನ್ನ ಚಿಕ್ಕಪ್ಪ ದೇವರಾಜ್ ನಮಗೆ ಮೋಸ ಮಾಡಿದ್ದಾರೆ. ನನ್ನ ತಂದೆಯ ಪಾಲಿನ ಜಾಗವನ್ನು ಮೋಸದಿಂದ ಬರೆಸಿಕೊಂಡು ಈಗ ಬೇರೆಯವರಿಗೆ ಮಾರಿದ್ದಾರೆ. ನಮಗೆ ನ್ಯಾಯ ಬೇಕು ಹೀಗಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇನೆ. ಖಾತೆ ಮಾಡಿಸಿಕೊಡುವ ಹೆಸರಿನಲ್ಲಿ ಸಹಿ ಪಡೆದು ಮೋಸ ಮಾಡಿದ್ದಾರೆ. ನಮಗೆ ಈ ಜಮೀನು ವಿಚಾರ ಮಾಧ್ಯಮದ ಮೂಲಕ ಗೊತ್ತಾಗಿದೆ. ಹೀಗಾಗಿ ಈಗ ಕೇಸ್ ಹಾಕಿದ್ದೇವೆ ಎಂದು ಮೈಲಾರಯ್ಯನ ಮಗಳು ಜಮುನಾ ಹೇಳಿದ್ದಾರೆ.










