ವಿಜಯಸಾಕ್ಷಿ ಸುದ್ದಿ, ಗದಗ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ರೋಣ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ಹಾಗೂ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ಆಗ್ರಹಿಸಿದ್ದಾರೆ.
ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜಿ.ಎಸ್. ಪಾಟೀಲರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದ್ದು, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಪರಿಣಾಮಕಾರಿಯಾಗಿ ಪ್ರಸ್ತಾಪಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿರುವ ಯಲ್ಲಪ್ಪ ಬಾಬರಿ, “ಕ್ಷೇತ್ರದ ಜನರ ಆಶೋತ್ತರಗಳಿಗೆ ಸದಾ ಸ್ಪಂದಿಸುವ ನಾಯಕ ಜಿ.ಎಸ್. ಪಾಟೀಲರು. ಅವರ ಅನುಭವ ಮತ್ತು ಬದ್ಧತೆಯನ್ನು ಪರಿಗಣಿಸಿ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದರೆ ಉತ್ತರ ಕರ್ನಾಟಕ ಭಾಗಕ್ಕೆ ನ್ಯಾಯ ಸಿಗುತ್ತದೆ” ಎಂದು ಹೇಳಿದ್ದಾರೆ.
ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ದೊರೆತರೆ ರೋಣ ಕ್ಷೇತ್ರ ಮಾತ್ರವಲ್ಲದೆ ಇಡೀ ಗದಗ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ ಎಂಬ ಅಭಿಪ್ರಾಯ ಕಾರ್ಯಕರ್ತರಲ್ಲಿ ವ್ಯಕ್ತವಾಗಿದೆ.
ನೀರಾವರಿ, ಕೃಷಿ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಜಿ.ಎಸ್. ಪಾಟೀಲರು ವಿಶೇಷ ಕಾಳಜಿ ಹೊಂದಿದ್ದು, ಅವರ ನೇತೃತ್ವದಿಂದ ಜಿಲ್ಲೆಗೆ ಹೆಚ್ಚಿನ ಯೋಜನೆಗಳು ಸಿಗುವ ವಿಶ್ವಾಸವಿದೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ.
“ಅನುಭವ, ಹಿರಿತನ ಮತ್ತು ಜನಪರ ಕಾಳಜಿಯನ್ನು ಪರಿಗಣಿಸಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು.”
ಯಲ್ಲಪ್ಪ ಎಚ್. ಬಾಬರಿ



