ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗುವುದು ಎಂದು ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿರುವುದನ್ನು ಎಐಡಿಎಸ್ಓ (ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ) ಸ್ವಾಗತಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಎಐಡಿಎಸ್ಓ ಗದಗ ಜಿಲ್ಲಾ ಸಂಚಾಲಕಿ ಎಂ. ಶಾಂತಿ, “ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಒದಗಿಸಬೇಕು ಎಂಬ ಬೇಡಿಕೆಗೆ ದಶಕಗಳಿಂದ ಎಐಡಿಎಸ್ಓ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದರು. ಸರ್ಕಾರದ ಈ ಘೋಷಣೆ ವಿದ್ಯಾರ್ಥಿ ಹೋರಾಟಕ್ಕೆ ಸಂದ ಮಹತ್ವದ ಜಯವಾಗಿದೆ” ಎಂದು ತಿಳಿಸಿದ್ದಾರೆ.
ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತಲೇ, ಹೊಸ ಶೈಕ್ಷಣಿಕ ವರ್ಷದ ಆರಂಭದಿಂದಲೇ ಈ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಎಐಡಿಎಸ್ಓ ಸರ್ಕಾರವನ್ನು ಆಗ್ರಹಿಸಿದೆ.
ವಿದ್ಯಾರ್ಥಿಗಳ ಶಿಕ್ಷಣದ ಹಕ್ಕು ಹಾಗೂ ಸಂಚಾರದ ಸೌಲಭ್ಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಎಂ. ಶಾಂತಿ ಮನವಿ ಮಾಡಿದ್ದಾರೆ.



