ವಿಜಯಸಾಕ್ಷಿ ಸುದ್ದಿ, ಗದಗ: ಗ್ರಾಮೀಣ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಬೆಳಕು ಹಂಚುತ್ತಾ 25 ವರ್ಷದ ಸಾರ್ಥಕ ಪಯಣ ಪೂರೈಸಿರುವ ಗದುಗಿನ ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆ ಇದೀಗ ರಜತ ಮಹೋತ್ಸವದ ಸಂಭ್ರಮಕ್ಕೆ ಕಾಲಿಟ್ಟಿದೆ. 2002ರಲ್ಲಿ ಆರಂಭವಾದ ಸಂಸ್ಥೆ 2027ಕ್ಕೆ 25 ವರ್ಷ ಪೂರೈಸಲಿರುವ ಹಿನ್ನೆಲೆಯಲ್ಲಿ 2026-27ನೇ ಶೈಕ್ಷಣಿಕ ವರ್ಷವನ್ನು “ರಜತೋತ್ಸವ ವರ್ಷ”ವನ್ನಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಜತ ಮಹೋತ್ಸವ ಸಮಿತಿ ಉಸ್ತುವಾರಿ ಡಾ. ಜಿ.ಬಿ. ಪಾಟೀಲ, ಜೂನ್ 7ರಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಶ್ರೀಗಳ ಅಮೃತ ಹಸ್ತದಿಂದ ರಜತ ಮಹೋತ್ಸವ ಕಾರ್ಯಕ್ರಮಗಳಿಗೆ ವಿದ್ಯುಕ್ತ ಚಾಲನೆ ದೊರೆಯಲಿದೆ ಎಂದು ತಿಳಿಸಿದರು.
ಪ್ರಸ್ತುತ ಸಂಸ್ಥೆಯ ಅಡಿಯಲ್ಲಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗಳು, ಮೆಟ್ರಿಕ್ ಪೂರ್ವ ಮತ್ತು ನಂತರದ ವಸತಿ ನಿಲಯಗಳು, ಮಹಿಳಾ ವಸತಿ ನಿಲಯ ಹಾಗೂ ಐಟಿಐ ಕಾಲೇಜುಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ವೈದ್ಯಕೀಯ, ವಿಜ್ಞಾನ-ತಂತ್ರಜ್ಞಾನ, ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಹಾಗೂ ಕೇಂದ್ರ ಪಠ್ಯಕ್ರಮದ ಶಾಲಾ-ಕಾಲೇಜುಗಳನ್ನು ಆರಂಭಿಸುವ ಮಹತ್ವಾಕಾಂಕ್ಷಿ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ನಿವೃತ್ತ ನ್ಯಾಯಾಧೀಶರಾದ ಎಸ್.ಜಿ. ಪಲ್ಲೇದ ಮಾತನಾಡಿ, ರಜತೋತ್ಸವದ ಅಂಗವಾಗಿ ಸಂಸ್ಥೆಯ ಸಾಕ್ಷ್ಯಚಿತ್ರದ ವಿಡಿಯೋ ಕ್ಲಿಪ್ ಬಿಡುಗಡೆಗೊಳ್ಳಲಿದ್ದು, ನೂತನ ಕಟ್ಟಡದ ಆವರಣದಲ್ಲಿ 25 ಸಸಿಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸಲಾಗುವುದು ಎಂದರು.
ಬಳಿಕ ಬಯಲು ಆಂಜನೇಯ ದೇವಸ್ಥಾನದ ಆವರಣದ ವೇದಿಕೆಯಲ್ಲಿ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಭಕ್ತ ಸಾಗರವನ್ನು ಉದ್ದೇಶಿಸಿ ಆಶೀರ್ವಚನ ನೀಡಲಿದ್ದಾರೆ ಎಂದು ತಿಳಿಸಿದರು.
ರಜತೋತ್ಸವ ಕಾರ್ಯಕ್ರಮದಲ್ಲಿ ಸದ್ಭಾವನಾ ಪ್ರಶಸ್ತಿ ಪುರಸ್ಕೃತ ಹಿರಿಯ ಸಂತ-ರಾಜಕಾರಣಿ ಹಾಗೂ ಮಾಜಿ ಶಾಸಕ ಡಿ.ಆರ್. ಪಾಟೀಲ, ರಾಜ್ಯ ವಿದ್ಯುತ್ ನಿಗಮದ ನಿರ್ದೇಶಕ ಹಾಗೂ ಅಭಿಯಂತರರ ಸಂಘದ ಅಧ್ಯಕ್ಷ ಸಿ. ಬಸವಣ್ಣ ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಆಯ್ಕೆಯಾದ ಚಂದ್ರಶೇಖರ ನುಗ್ಗಲಿ ಅವರನ್ನು ಸನ್ಮಾನಿಸಲಾಗುವುದು.
ರಜತೋತ್ಸವದ ಅಂಗವಾಗಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ 90 ಶೇಕಡಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.
ಇದಲ್ಲದೆ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಯುವಜನರಿಗೆ ದೇಶಿ ಕ್ರೀಡೋತ್ಸವ, ಮಹಿಳಾ ಸಬಲೀಕರಣ ಕಾರ್ಯಕ್ರಮಗಳು, ಸಾಂಸ್ಕೃತಿಕ ಸ್ಪರ್ಧೆಗಳು, ಕಾನೂನು ಅರಿವು, ಅಪರಾಧ ತಡೆ ಜಾಗೃತಿ ಕಾರ್ಯಕ್ರಮಗಳು, ಸಾವಯವ ಕೃಷಿ ತರಬೇತಿ, ಉದ್ಯೋಗ ಮೇಳ, ವೃತ್ತಿ ಮಾರ್ಗದರ್ಶನ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಶಿಬಿರಗಳನ್ನು ಆಯೋಜಿಸಲು ಯೋಜಿಸಲಾಗಿದೆ.
ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಜಾನಪದ ಜಾತ್ರೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ರಜತ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ವರ್ಷಪೂರ್ತಿ ನಡೆದ ಎಲ್ಲಾ ಚಟುವಟಿಕೆಗಳನ್ನು ಒಳಗೊಂಡ ಸ್ಮರಣ ಸಂಚಿಕೆ ಬಿಡುಗಡೆಗೊಳ್ಳಲಿದೆ.
ಪತ್ರಿಕಾಗೋಷ್ಠಿಯಲ್ಲಿ ಬಿ.ಬಿ. ಭಾವಿಕಟ್ಟಿ, ಫಕೀರಪ್ಪ ಹೆಬಸೂರ, ಆರ್.ಡಿ. ಕಡ್ಲಿಕೊಪ್ಪ, ನೀಲಕಂಠ ಮರಡಿ, ವೈ.ಬಿ. ಭಾನಾಪೂರ, ಆರ್.ಎಂ. ನಿಂಬನಾಯ್ಕ, ಎಸ್.ಡಿ. ಸಿಂಗಟಾಲಕೇರಿ, ಎಸ್.ಎಸ್. ಕರಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಸಂಸ್ಥೆಯ ಮಹದಾಸೆ; ಶಿಕ್ಷಣದ ಜೊತೆಗೆ ಸಮಾಜಮುಖಿ ಮೌಲ್ಯಗಳನ್ನೂ ಬೆಳೆಸುವುದು ನಮ್ಮ ಗುರಿ”ಡಾ. ಜಿ.ಬಿ. ಪಾಟೀಲ, ರಜತ ಮಹೋತ್ಸವ ಸಮಿತಿ ಉಸ್ತುವಾರಿ



