ಬೆಂಗಳೂರು: ನೀಟ್ ಪರೀಕ್ಷಾ ಕೇಂದ್ರದ ಆವರಣಕ್ಕೆ ಮೊಬೈಲ್ ಫೋನ್ ಕೊಂಡೊಯ್ದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ಅಂಕಪಟ್ಟಿಯನ್ನು ತಡೆಹಿಡಿದಿದ್ದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಕ್ರಮಕ್ಕೆ ಹೈಕೋರ್ಟ್ ತಡೆ ನೀಡಿದೆ.
ರಾಣೆಬೆನ್ನೂರಿನ ವಿದ್ಯಾರ್ಥಿನಿ ಅನುಷ್ಕಾ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠ, ಎನ್ಟಿಎ ಕ್ರಮವನ್ನು ರದ್ದುಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಹಾಗೂ ನ್ಯಾಯಮೂರ್ತಿ ಹೇಮಾ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಪರೀಕ್ಷಾ ಕೊಠಡಿ ಪ್ರವೇಶಿಸುವ ಮೊದಲೇ ಮೊಬೈಲ್ ವಶ:
ಮೇ 3ರಂದು ನಡೆದ ನೀಟ್ ಪರೀಕ್ಷೆಗೆ ಅನುಷ್ಕಾ ಮೊಬೈಲ್ ಫೋನ್ ತೆಗೆದುಕೊಂಡು ಪರೀಕ್ಷಾ ಕೇಂದ್ರದ ಆವರಣಕ್ಕೆ ಬಂದಿದ್ದರು. ಆದರೆ ಪರೀಕ್ಷಾ ಕೊಠಡಿ ಪ್ರವೇಶಿಸುವ ಮೊದಲೇ ಅಧಿಕಾರಿಗಳು ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದಿದ್ದರು. ಬಳಿಕ ನೀಟ್ ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ಜೂನ್ 21ರಂದು ಮರುಪರೀಕ್ಷೆ ನಡೆಸಲಾಗಿತ್ತು.
ಈ ಮರುಪರೀಕ್ಷೆಯಲ್ಲಿ ಅನುಷ್ಕಾ 570 ಅಂಕಗಳನ್ನು ಗಳಿಸಿದ್ದರು. ಈ ಮೂಲಕ ಬೆಳಗಾವಿಯ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆಯುವ ಅವಕಾಶವೂ ಅವರಿಗೆ ಲಭಿಸಿತ್ತು. ಆದರೆ ಮೊಬೈಲ್ ಫೋನ್ ತಂದಿದ್ದ ಆರೋಪದ ಹಿನ್ನೆಲೆಯಲ್ಲಿ ಎನ್ಟಿಎ ಅವರ ಅಂಕಪಟ್ಟಿಯನ್ನು ತಡೆಹಿಡಿದಿತ್ತು. ಇದರಿಂದಾಗಿ ವಿದ್ಯಾರ್ಥಿನಿ ನ್ಯಾಯಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯದ ಮಧ್ಯಂತರ ಆದೇಶದ ಮೇರೆಗೆ ಅವರಿಗೆ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ದೊರೆತಿತ್ತು.
ವಿದ್ಯಾರ್ಥಿನಿಯ ಪರಿಶ್ರಮಕ್ಕೆ ನ್ಯಾಯ ಒದಗಿಸಿದ ಹೈಕೋರ್ಟ್:
ವಿದ್ಯಾರ್ಥಿನಿ ಪರೀಕ್ಷೆಯ ವೇಳೆ ಮೊಬೈಲ್ ಫೋನ್ ಬಳಸಿಲ್ಲ. ಪರೀಕ್ಷಾ ಕೊಠಡಿಗೆ ಪ್ರವೇಶಿಸುವ ಮೊದಲೇ ಮೊಬೈಲ್ ವಶಕ್ಕೆ ಪಡೆಯಲಾಗಿತ್ತು. ಇಂತಹ ಸಂದರ್ಭದಲ್ಲಿ ಅಂಕಪಟ್ಟಿಯನ್ನು ತಡೆಹಿಡಿದ ಎನ್ಟಿಎ ಕ್ರಮ ಸರಿಯಲ್ಲ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ವಿದ್ಯಾರ್ಥಿಯೊಬ್ಬರು ಗಳಿಸುವ ಅಂಕಗಳ ಹಿಂದೆ ಹಲವು ವರ್ಷಗಳ ಪರಿಶ್ರಮ, ನಿದ್ದೆಯಿಲ್ಲದ ರಾತ್ರಿಗಳು, ತ್ಯಾಗ ಹಾಗೂ ವೈದ್ಯರಾಗಬೇಕೆಂಬ ಕನಸು ಇರುತ್ತದೆ. ಕೇವಲ ತಾಂತ್ರಿಕ ಕಾರಣಗಳಿಂದ ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯವಾಗಬಾರದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅಂತಿಮವಾಗಿ ಅನುಷ್ಕಾ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್, ವಿದ್ಯಾರ್ಥಿನಿಯ ಅಂಕಪಟ್ಟಿಯನ್ನು ತಡೆಹಿಡಿದಿದ್ದ ಎನ್ಟಿಎ ನಿರ್ಧಾರವನ್ನು ರದ್ದುಗೊಳಿಸಿದೆ. ಈ ಮೂಲಕ ವಿದ್ಯಾರ್ಥಿನಿಗೆ ನ್ಯಾಯ ದೊರೆತಿದೆ.







