ವಿಜಯಸಾಕ್ಷಿ ಸುದ್ದಿ, ಡಂಬಳ : ಮಗುವಿನ ಭವಿಷ್ಯ ಅಂಗನವಾಡಿಯಿಂದ ಪ್ರಾರಂಭವಾಗುತ್ತದೆ. ಅವರಿಗೆ ಚಿಕ್ಕಂದಿನಿಂದಲೇ ಪೌಷ್ಠಿಕ ಆಹಾರ ಕೊಡುವದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಡಂಬಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿವಲೀಲಾ ದೇವಪ್ಪ ಬಂಡಿಹಾಳ ಹೇಳಿದರು.
ಡಂಬಳ ಗ್ರಾಮದ 1ನೇ ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಪೋಷಣ ಮಾಸಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪೋಷಣ ಅಭಿಯಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೇಲ್ವಿಚಾರಕರಾದ ಎಸ್.ಎಸ್. ಹಾದಿಮನಿ ಪ್ರಾಸ್ತಾವಿಕವಾಗಿ ಮಾತನಾಡಿ, ತಾಯಂದಿರು ಮತ್ತು ಪೋಷಕರು ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಕುರಿತು ಹೆಚ್ಚಿನ ಗಮನ ಹರಿಸಬೇಕು. ಇತ್ತೀಚಿನ ದಿನಗಳಲ್ಲಿ ಪೌಷ್ಠಿಕ ಆಹಾರಗಳ ಜಾಹೀರಾತಿಗೆ ಹೆಚ್ಚಿನ ಒಲವು ತೋರಿಸಿ ಅಂತಹ ಪದಾರ್ಥಗನ್ನೇ ಬಳಸುತ್ತಾರೆ. ಇದರಿಂದ ಮಕ್ಕಳಿಗೆ ಬೇಕಾದ ಪೋಷಕಾಂಶ ಸಿಗುವದಿಲ್ಲ. ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೌಷ್ಠಿಕ ಆಹಾರ ಪ್ರಕೃತಿದತ್ತವಾಗಿದ್ದಾಗ ಅವರ ಆರೋಗ್ಯ ಚೆನ್ನಾಗಿರುತ್ತದೆ ಎಂದು ಸಲಹೆ ನೀಡಿದರು.
ಹಿರಿಯ ಆರೋಗ್ಯ ಸಾಹಯಕಿ ಎಸ್.ಎಸ್. ಬಾರಕೇರ, ಪೋಷಣಾ ಅಭಿಯಾನ ತಾಲೂಕಾ ಕಾರ್ಯಕ್ರಮ ಸಂಯೋಜಕ ಎಚ್.ಎಂ. ಟಗರಮ್ಮನವರ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸುಶೀಲಾ ಚಲವಾದಿ, ಎ.ಕೆ. ನಗಾರಿ, ಎಸ್.ಡಿ. ಚಲವಾದಿ, ಎನ್.ಬಿ. ಶೇಖ್, ಸಿದ್ದಣ್ಣ ನಂಜಪ್ಪನವರ, ಶೋಭಾ ಹಿರೇಮಠ, ಎಸ್.ಡಿ. ತಿಪ್ಪಾಪೂರ, ಎಲ್.ಎ. ಬಂಗಾರಶೆಟ್ಟರ, ವಿಜಯದೇವಿ ಕಂಬಳಿ, ರೇಷ್ಮಾ ನದಾಫ್ ಸೇರಿದಂತೆ ಆರೋಗ್ಯ ಇಲಾಖೆ ಹಾಗೂ ಅಂಗನವಾಡಿ ಕಾರ್ಯಕರ್ತರು ಇದ್ದರು.



