ರಾಯಚೂರು: ಕರ್ನಾಟಕದ ಅನೇಕ ಹೋಟೆಲ್, ರೆಸ್ಟೋರೆಂಟ್, ಬೇಕರಿ ಹಾಗೂ ಬಾರ್ & ರೆಸ್ಟೋರೆಂಟ್‌ಗಳಲ್ಲಿ ಕಳಪೆ ಆಹಾರ ಪತ್ತೆಯಾಗುತ್ತಿರುವ ಹಿನ್ನೆಲೆ ಸಾರ್ವಜನಿಕರು ಎಚ್ಚರಿಕೆ ವಹಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ನಾಲ್ಕು ಇಲಾಖೆ ಅಧಿಕಾರಿಗಳು ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ್ದಾರೆ.
ರಾಯಚೂರು ಮಹಾನಗರ ಪಾಲಿಕೆ, ಕಂದಾಯ ಇಲಾಖೆ, ಆಹಾರ ಸುರಕ್ಷತಾ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಒಟ್ಟು 19 ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಎರಡು–ಮೂರು ದಿನಗಳಷ್ಟು ಹಳೆಯ ಮಾಂಸ ಹಾಗೂ ಪನ್ನೀರ್‌ಗಳನ್ನು ಫ್ರೀಜರ್‌ಗಳಲ್ಲಿ ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ಜೊತೆಗೆ ಕಲಬೆರಿಕೆ ಮಾಡಿರುವುದು ಹಾಗೂ ಸಂಶಯ ಹುಟ್ಟಿಸುವ ಆಹಾರ ಪದಾರ್ಥಗಳು ಕಂಡುಬಂದಿದ್ದು, ಇದನ್ನು ನೋಡಿ ಅಧಿಕಾರಿಗಳು ಅಚ್ಚರಿಗೊಂಡಿದ್ದಾರೆ.
ಪರಿಶೀಲನೆ ವೇಳೆ ಹಲವು ಹೋಟೆಲ್, ರೆಸ್ಟೋರೆಂಟ್ ಹಾಗೂ ಬೇಕರಿಗಳಲ್ಲಿ ಆಹಾರ ಗುಣಮಟ್ಟ ಕಳಪೆಯಾಗಿರುವುದು, ಶುಚಿತ್ವದ ಕೊರತೆ ಮತ್ತು ಅಗತ್ಯ ಲೈಸೆನ್ಸ್‌ಗಳಿಲ್ಲದೇ ವ್ಯಾಪಾರ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಕೆಲವು ಕಡೆಗಳಲ್ಲಿ ಅಪಾಯಕಾರಿ ರೀತಿಯಲ್ಲಿ ಬಳಸಲಾಗುತ್ತಿದ್ದ 27 ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಜಪ್ತಿ ಮಾಡಲಾಗಿದೆ.
ನಿಯಮ ಉಲ್ಲಂಘಿಸಿದ ವ್ಯಾಪಾರಸ್ಥರಿಗೆ ದಂಡ ವಿಧಿಸಿ ನೋಟಿಸ್ ನೀಡಲಾಗಿದ್ದು, ಒಟ್ಟು ₹1 ಲಕ್ಷ 8 ಸಾವಿರ ದಂಡ ವಸೂಲಿ ಮಾಡಲಾಗಿದೆ. ನಿಯಮ ಉಲ್ಲಂಘನೆ ಮುಂದುವರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೋಹಾಪಾತ್ರ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರು ಹೋಟೆಲ್‌ಗಳಲ್ಲಿ ಆಹಾರ ಸೇವಿಸುವ ಮುನ್ನ ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆ ಬಗ್ಗೆ ಜಾಗರೂಕರಾಗಿರಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.



