ಚಿಕ್ಕಬಳ್ಳಾಪುರ:- ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬಶೆಟ್ಟಿಹಳ್ಳಿ ಗ್ರಾಮದ ಬಳಿಯ ಎನ್‌ಕೆ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ಹಳೆಯ ದ್ವೇಷದಿಂದ ಬಾರ್ ಬಳಿ ವ್ಯಕ್ತಿಯೊಬ್ಬನ ಮೇಲೆ ಯುವಕ ದೊಣ್ಣೆಯಿಂದ ಬಲವಾಗಿ ಹಲ್ಲೆ ಮಾಡಿರುವ ಘಟನೆ ಜರುಗಿದೆ.
ವಿಜಿ ಎಂಬಾತ ಧನಮಿಟ್ಟೇನಹಳ್ಳಿ ಗ್ರಾಮದ ಶ್ರೀನಿವಾಸ್ ಎಂಬಾತನ ಮೇಲೆ ದೊಣ್ಣೆಯಿಂದ ಬಲವಾಗಿ ಹಲ್ಲೆ ಮಾಡಿದ್ದಾನೆ. ಘಟನೆಯ ದೃಶ್ಯ ಬಾರ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ದೃಶ್ಯ ಭಯಾನಕವಾಗಿದೆ. ಅಸಲಿಗೆ ಈ ಹಿಂದೆ ಶ್ರೀನಿವಾಸ್ ಬೇರೋಬ್ಬರ ಜೊತೆ ಜಗಳವಾಡುತ್ತಿದ್ದ ಸಮಯದಲ್ಲಿ ಶ್ರೀನಿವಾಸ್ ಜಗಳ ಬಿಡಿಸಿ ಬುದ್ಧಿವಾದ ಹೇಳಿ ಬೈದಿದ್ದನಂತೆ.
ಅದೇ ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ದ್ವೇಷ ಕಾರುತ್ತಿದ್ದ ವಿಜಿ ಬಾರ್‌ನಲ್ಲಿ ಶ್ರೀನಿವಾಸ್ ಕಂಡ ಕೂಡಲೇ ಆತನ ಜೊತೆ ಜಗಳಕ್ಕಿಳಿದಿದ್ದಾನೆ. ನಂತರ ಹೊರಗಡೆ ಬಂದ ಕೂಡಲೇ ಏಕಾಏಕಿ ಬಾರ್‌ನ ಹೊರಗಡೆಯಿದ್ದ ದೊಣ್ಣೆ ತಂದು ಒಂದೇ ಏಟು ಎಂಬಂತೆ ಶ್ರೀನಿವಾಸ್ ಕುತ್ತಿಗೆಗೆ ಹಾಕಿದ್ದಾನೆ. ಇದ್ರಿಂದ ಕ್ಷಣ ಮಾತ್ರದಲ್ಲಿ ಶ್ರೀನಿವಾಸ್ ಪ್ರಜ್ಞಾಹೀನನಾಗಿ ಕುಸಿದು ಬಿದ್ದಿದ್ದಾನೆ.
ಈ ಸಂಬಂಧ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರೂ ಕೇವಲ ಎನ್‌ಸಿಆರ್ ಮಾಡಿ ಕೈತೊಳೆದುಕೊಂಡಿದ್ದಾರಂತೆ, ಪ್ರಭಾವಿ ಸಚಿವರೊಬ್ಬರ ಸಂಬಂಧಿ ಎಂಬ ಕಾರಣಕ್ಕೆ ಕೊಲೆ ಯತ್ನ ಪ್ರಕರಣ ದಾಖಲಿಸದೇ ಆರೋಪಿಯನ್ನ ಬಿಟ್ಟು ಕಳುಹಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ. ಸದ್ಯ ಗಾಯಾಳು ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.