ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲೆಯ ಮುಳಗುಂದ ಪಟ್ಟಣದ ಸಾಮಾಜಿಕ ಕಾರ್ಯಕರ್ತ ಬಸವರಾಜ ಹಾರೋಗೇರಿ ಅವರ ಜನ್ಮದಿನದ ನಿಮಿತ್ತ ಜೂನ್ 13ರಂದು ಸಂಜೆ 4 ಗಂಟೆಗೆ ಎಸ್‌ಜೆಜೆಎಂ ಹೈಸ್ಕೂಲ್ ಮೈದಾನದಲ್ಲಿ ರಾಜ್ಯಮಟ್ಟದ ಟಗರಿನ ಕಾಳಗ ಹಮ್ಮಿಕೊಳ್ಳಲಾಗಿದೆ ಎಂದು ಗೂಳಪ್ಪ ಮಜ್ಜಿಗುಡ್ಡ ಹೇಳಿದರು.
ಸೋಮವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಿಡ್ ಬಸ್ಯಾ ಗ್ರೂಪ್ ವತಿಯಿಂದ ಈ ಸ್ಪರ್ಧೆ ಆಯೋಜಿಸಲಾಗಿದ್ದು, ಒಟ್ಟು 5 ವಿಭಾಗದಲ್ಲಿ ಟಗರಿನ ಕಾಳಗ ನಡೆಯಲಿದೆ.
ರಾಜ್ಯದ ಸುಮಾರು 20 ಜಿಲ್ಲೆಗಳಿಂದ ಟಗರುಗಳು ಆಗಮಿಸಲಿವೆ. ಪ್ರತಿಯೊಂದು ವಿಭಾಗಕ್ಕೂ ಪ್ರತ್ಯೇಕವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದರು.
ಬಸವರಾಜ ಹಾರೋಗೇರಿ ಅವರು ಮುಳಗುಂದ ಭಾಗದಲ್ಲಿ ತಮ್ಮ ಸಾಮಾಜಿಕ ಸೇವೆಗಳ ಮೂಲಕ ಜನಮನ ಸೆಳೆದಿದ್ದಾರೆ. ಗಗನ ಫೌಂಡೇಶನ್ ಮೂಲಕ ಪ್ರತಿ ವರ್ಷ 1 ಸಾವಿರ ನೋಟ್‌ಬುಕ್‌ಗಳನ್ನು ಸರಕಾರಿ ಶಾಲೆಯ ಬಡ ಮಕ್ಕಳಿಗೆ ವಿತರಿಸುತ್ತಿದ್ದರು. ಈ ಬಾರಿಯೂ ಬಡ ಮಕ್ಕಳಿಗೆ ನೋಟ್‌ಬುಕ್, ಬಡ ಹೆಣ್ಣು ಮಕ್ಕಳಿಗೆ 350 ಸೀರೆ ವಿತರಣೆ ಜೊತೆಗೆ ಗ್ರಾಮೀಣ ಕ್ರೀಡೆಗೂ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಟಗರಿನ ಕಾಳಗ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
8 ಹಲ್ಲಿನ ಟಗರಿನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ಮೋಟಾರ್ ಬೈಕ್ ನೀಡಲಾಗುತ್ತಿದೆ. ದ್ವಿತೀಯ ಬಹುಮಾನ 25 ಸಾವಿರ ರೂ. ನಗದು ಹಾಗೂ ತೃತೀಯ ಬಹುಮಾನ 11 ಸಾವಿರ ರೂ. ನೀಡಲಾಗುತ್ತದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ 7676392975 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವಸಂತ ಕಣವಿ, ಈರಣ್ಣ ಅಣ್ಣಿಗೇರಿ, ಮೋಹನ ಮುದ್ದಿನ ಇತರರು ಉಪಸ್ಥಿತರಿದ್ದರು.