ಭೋಪಾಲ್: ಮಧ್ಯಪ್ರದೇಶದ ಧಾರ್ ಜಿಲ್ಲೆಯ ದಶಕಗಳ ಭೋಜಶಾಲಾ-ಕಮಲ್ ಮೌಲಾ ಮಸೀದಿ ವಿವಾದಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಮಧ್ಯಪ್ರದೇಶ ಹೈಕೋರ್ಟ್ ಭೋಜಶಾಲಾ ಆವರಣವನ್ನು ದೇವಸ್ಥಾನ ಎಂದು ಘೋಷಿಸಿ ಐತಿಹಾಸಿಕ ತೀರ್ಪು ನೀಡಿದೆ.
ಇಂದೋರ್ ಪೀಠದ ಹೈಕೋರ್ಟ್, ಈ ಸಂಕೀರ್ಣದಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಸಂಪೂರ್ಣ ಹಕ್ಕು ಇದೆ ಎಂದು ಸ್ಪಷ್ಟಪಡಿಸಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ನಡೆಸಿದ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಆಧರಿಸಿ ನ್ಯಾಯಾಲಯ ಈ ಮಹತ್ವದ ತೀರ್ಪು ಪ್ರಕಟಿಸಿದೆ.
ನ್ಯಾಯಮೂರ್ತಿಗಳಾದ ವಿಜಯ್ ಕುಮಾರ್ ಶುಕ್ಲಾ ಮತ್ತು ಅಲೋಕ್ ಅವಸ್ತಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಮೇ 12ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಲಾಗಿದೆ.
ತೀರ್ಪಿನಲ್ಲಿ, ವಿವಾದಿತ ಸಂಪೂರ್ಣ ಸಂಕೀರ್ಣವು ಮೂಲತಃ ವಾಗ್ದೇವಿ ಅಂದರೆ ಸರಸ್ವತಿ ದೇವಸ್ಥಾನ ಹಾಗೂ ರಾಜ ಭೋಜ ಸ್ಥಾಪಿಸಿದ್ದ ಸಂಸ್ಕೃತ ಅಧ್ಯಯನ ಕೇಂದ್ರವಾಗಿತ್ತು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪ್ರಸ್ತುತ ಇರುವ ಮಸೀದಿ ರಚನೆ ಹಳೆಯ ದೇವಸ್ಥಾನದ ಅವಶೇಷಗಳು ಮತ್ತು ಸ್ತಂಭಗಳನ್ನು ಬಳಸಿ ನಿರ್ಮಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಎಎಸ್ಐ ಸಮೀಕ್ಷೆಯಲ್ಲಿ ಪತ್ತೆಯಾದ ಪರಮಾರ ರಾಜರ ಕಾಲದ ಸಂಸ್ಕೃತ ಮತ್ತು ಪ್ರಾಕೃತ ಶಾಸನಗಳು, ಶಿಲ್ಪ ಕೆತ್ತನೆಗಳು ಹಾಗೂ ಬ್ರಹ್ಮ, ಗಣೇಶ ಸೇರಿದಂತೆ 94ಕ್ಕೂ ಹೆಚ್ಚು ಹಿಂದೂ ದೇವತೆಗಳ ಭಿನ್ನಗೊಂಡ ವಿಗ್ರಹಗಳು ಈ ಸ್ಥಳದ ಮೂಲ ಸ್ವರೂಪವನ್ನು ದೃಢಪಡಿಸುತ್ತವೆ ಎಂದು ನ್ಯಾಯಾಲಯ ಉಲ್ಲೇಖಿಸಿದೆ.
ಇದಲ್ಲದೆ, ಪ್ರಸ್ತುತ ಇರುವ ಕಮಲ್ ಮೌಲಾ ಮಸೀದಿಯನ್ನು ಮುಸ್ಲಿಂ ಆಡಳಿತಗಾರರ ಕಾಲದಲ್ಲಿ ಪೂರ್ವ ಅಸ್ತಿತ್ವದಲ್ಲಿದ್ದ ಹಿಂದೂ ದೇವಸ್ಥಾನದ ಸ್ತಂಭಗಳು, ಕಲ್ಲುಗಳು ಮತ್ತು ಇತರ ಅವಶೇಷಗಳನ್ನು ಬಳಸಿ ನಿರ್ಮಿಸಲಾಗಿದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ಎಎಸ್ಐ ಸಮೀಕ್ಷೆ ಏಕಪಕ್ಷೀಯವಾಗಿದೆ ಹಾಗೂ ಮುಸ್ಲಿಂ ಅರ್ಜಿದಾರರ ಹಕ್ಕುಗಳನ್ನು ಕಡೆಗಣಿಸಲಾಗಿದೆ ಎಂಬ ಕಮಲ್ ಮೌಲಾ ಮಸೀದಿ ಸಮಿತಿಯ ವಾದಗಳನ್ನು ಹೈಕೋರ್ಟ್ ತಳ್ಳಿ ಹಾಕಿದೆ.
ಧಾರ್ಮಿಕ ಸ್ಥಳಗಳ ಸಂರಕ್ಷಣೆ ಹಾಗೂ ಭಕ್ತರಿಗೆ ಅಗತ್ಯ ಮೂಲಸೌಕರ್ಯ ಒದಗಿಸುವುದು ಸರ್ಕಾರದ ಸಾಂವಿಧಾನಿಕ ಜವಾಬ್ದಾರಿಯಾಗಿದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಈ ತೀರ್ಪು ದಶಕಗಳ ವಿವಾದಕ್ಕೆ ಅಂತ್ಯ ಹಾಡುವ ಸಾಧ್ಯತೆ ಮೂಡಿಸಿದ್ದು, ದೇಶದಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದೆ.



