Home Blog Page 10

ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲಿ

0

ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸರ್ಕಾರ ಹಲವು ಸೌಲಭ್ಯಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಹಾಗೂ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಮುಂದಾಗಿದ್ದು, ವಿದ್ಯಾರ್ಥಿಗಳು ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಡಿಡಿಪಿಐ ಆರ್.ಎಸ್. ಬುರಡಿ ಹೇಳಿದರು.

ಅವರು ಗುರುವಾರ ಗದುಗಿನ ಸಿದ್ಧಲಿಂಗ ನಗರದ ಸರ್ಕಾರಿಪ್ರೌಢ ಶಾಲೆಯಲ್ಲಿ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದಿಂದ ಎಸ್.ಎಸ್.ಎಲ್.ಸಿಯಲ್ಲಿ ಮೊದಲ 5 ಸ್ಥಾನ ಪಡೆದುಕೊಂಡ ಗದಗ ತಾಲೂಕಿನ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡುವದು, ದುಶ್ಚಟಗಳನ್ನು ರೂಢಿಸಿಕೊಳ್ಳುವದು ಸಲ್ಲದು. ಹಾಗೆಯೇ ಟಿವಿ ಮತ್ತು ಮೊಬೈಲ್‌ಗಳನ್ನು ಅಗತ್ಯವಿದ್ದರೆ ಮಾತ್ರ ಬಳಕೆ ಮಾಡಬೇಕು. ಜ್ಞಾನಾರ್ಜನೆಗೆ, ಸಂಪರ್ಕಕ್ಕೆ ಅಗತ್ಯಕ್ಕೆ ತಕ್ಕಂತೆ ಉಪಯೋಗಿಸಬೇಕು ಎಂದರು.

ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಸ್ಪೂರ್ತಿ ಉಡಚಗೊಂಡ, ಲಕ್ಷ್ಮೀ ನಲುಡಿ, ಕೀರ್ತಿ ನಾಯ್ಕರ್, ಶಾಕಾಂಬರಿ ನರೇಗಲ್ಲ, ಜ್ಯೋತಿ ಹೇಮಾದ್ರಿ ಅವರುಗಳಿಗೆ ಪ್ರತಿಭಾ ಪುರಸ್ಕಾರದ ಚೆಕ್, ಪ್ರಮಾಣ ಪತ್ರ, ಕಾಲೇಜು ಬ್ಯಾಗ್‌ಗಳನ್ನು ನೀಡಿ ಶಾಲೆಯ ಎಲ್ಲ ಮಕ್ಕಳಿಗೆ ಸಿಹಿ ವಿತರಿಸಿ ಶುಭ ಕೋರಲಾಯಿತು.

ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ ಪ್ರತಿಷ್ಠಾನದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಸುಭಾಸಚಂದ್ರ ಬೆಟದೂರ, ಖಜಾಂಚಿ ವಿಜಯಲಕ್ಷ್ಮೀ ಅಂಗಡಿ, ನಿರ್ದೆಶಕರಾದ ಡಾ. ಶರಣಬಸವ ಚೌಕಿಮಠ, ಡಾ. ಬಸಯ್ಯ ಬೆಳ್ಳೇರಿಮಠ, ಶಿವಪ್ಪ ಕತ್ತಿ, ಆಂಜನೇಯ ಕಟಗಿ, ಸಿದ್ಧಲಿಂಗನಗೌಡ ಪಾಟೀಲ, ಡಾ. ಬಸವರಾಜ ಚನ್ನಪ್ಪಗೌಡ್ರ, ಭಾರತಿ ಪಾಟೀಲ, ನೇಹಾ, ಸುಧಾರಾಣಿ, ಪ್ರಸನ್‌ಕುಮಾರ ಗುತ್ತಿ ಮುಂತಾದವರು ಪಾಲ್ಗೊಂಡಿದ್ದರು.

ಅಧ್ಯಕ್ಷತೆಯನ್ನು ಜೆ.ಬಿ. ಅಣ್ಣಿಗೇರಿ ವಹಿಸಿದ್ದರು. ಗಂಗಾ ಅಳವಡಿ ಸ್ವಾಗತಿಸಿದರು. ಎಸ್.ಎ. ಬಾಣದ ನಿರೂಪಿಸಿ ವಂದಿಸಿದರು.

ಉರ್ದು ಶಾಲೆಯಲ್ಲಿ: ಗದುಗಿನ ಹಳೇ ಬಸ್ ನಿಲ್ದಾಣದ ಬಳಿಯಿರುವ ಸರ್ಕಾರಿ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿಗಳಾದ ರೆಹಮತ್ ಉನ್ನಿಸಾ ಬೋದ್ಲೇಖಾನ್, ಅತೀಕಾ ಮಕಾನದಾರ, ಆಶಾ ಮಮ್ಮುನವರ, ಫಾಯಿಜಾ ಅಡವಿಸೋಮಾಪೂರ ಹಾಗೂ ಸುಹಾನ ಇಸ್ರಾರ್ ಬಬರ್ಚಿ ಅವರುಗಳಿಗೆ ಪ್ರತಿಭಾ ಪುರಸ್ಕಾರದ ಚೆಕ್, ಪ್ರಮಾಣ ಪತ್ರ, ಕಾಲೇಜು ಬ್ಯಾಗ್‌ಗಳನ್ನು ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಪ್ಯಾರಅಲಿ ನೂರಾನಿ ದಂಪತಿಗಳು ವಿದ್ಯಾರ್ಥಿಗಳಿಗೆ ಹಿತೋಪದೇಶ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ ಮಾತನಾಡಿ, ಗುರುಗಳಾದ ಬಿ.ಜಿ. ಅಣ್ಣಿಗೇರಿ ಪ್ರತಿಷ್ಠಾನವು ಸರ್ಕಾರಿ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸುತ್ತಿರುವುದು ನಿಜವಾದ ಗುರುವಂದನೆಯಾಗಿದೆ ಎಂದರು.

ನರೇಗಾ ಸಿಬ್ಬಂದಿಗಳ ಚಳುವಳಿ 4ನೇ ದಿನಕ್ಕೆ

0

ವಿಜಯಸಾಕ್ಷಿ ಸುದ್ದಿ, ರೋಣ: ಕಳೆದ 6 ತಿಂಗಳ ಬಾಕಿ ವೇತನವನ್ನು ಪಾವತಿಸುವಂತೆ ಒತ್ತಾಯಿಸಿ ನರೇಗಾ ನೌಕರರು ಹಮ್ಮಿಕೊಂಡಿರುವ 4ನೇ ದಿನದ ಅಸಹಕಾರ ಚಳುವಳಿಯ ಸ್ಥಳಕ್ಕೆ ರೋಣ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ, ವೇತನವಿಲ್ಲದೆ ಜೀವನ ನಡೆಸುವುದು ಬಹಳ ಕಷ್ಟಕರವಾದ ಸನ್ನಿವೇಶ. ಉದ್ಯೋಗ ಖಾತ್ರಿ ಯೋಜನೆಯನ್ನು ಅನುಷ್ಠಾನಗೊಳಿಸುವ ನೀವು ಈ ರೀತಿ ವೇತನಕ್ಕಾಗಿ ಮುಷ್ಕರ ಹಮ್ಮಿಕೊಳ್ಳುವಂತೆ ಆಗಬಾರದಿತ್ತು. ಇದು ರಾಜ್ಯಮಟ್ಟದ ತಾಂತ್ರಿಕ ಸಮಸ್ಯೆ ಆಗಿರುವುದರಿಂದ ಹೀಗಾಗಿದೆ. ಆಯುಕ್ತಾಲಯದಿಂದ ವೇತನ ಪಾವತಿಗೆ ಕ್ರಮ ವಹಿಸಲಾಗುತ್ತಿದೆ. ಆದಷ್ಟು ಬೇಗ ನಿಮ್ಮ ವೇತನ ಪಾವತಿಯಾಗಿ ಎಲ್ಲರೂ ಕೆಲಸಕ್ಕೆ ಮರಳುವಂತಾಗಲಿ ಎಂದರು.

ತಾ.ಪA ನರೇಗಾ ಆಡಳಿತ ಸಹಾಯಕ ಅರುಣ ಸಿಂಗ್ರಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ವೇತನವಿಲ್ಲದೇ ನರೇಗಾ ನೌಕರರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ವಿವರಿಸಿ, ನಮ್ಮ ಬದುಕು ಸದ್ಯ ಬೀದಿಗೆ ಬಂದಿದ್ದು, ಮಾನ್ಯರು ನಮ್ಮ ಬೇಡಿಕೆಯನ್ನು ಆಯುಕ್ತಾಲಯದ ಗಮನಕ್ಕೆ ತನ್ನಿ ಎಂದು ಹೇಳಿದರು.

ರೋಣ ತಾಲೂಕು ಪ್ರತಿನಿಧಿ ಶಾಂತಾ ತಿಮ್ಮರಡ್ಡಿ, ಬಿ.ಎಫ್.ಟಿ ಸಂಘದ ಗೌರವ ಅಧ್ಯಕ್ಷ ಅಶೋಕ ಕಂಬಳಿ, ಗ್ರಾಮ ಕಾಯಕ ಮಿತ್ರ ಪವಿತ್ರಾ ನಾಡಗೌಡ್ರ ಮಾತನಾಡಿದರು.

ನರೇಗಾ ಸಿಬ್ಬಂದಿಗಳಾದ ಅರುಣಕುಮಾರ ತಂಬ್ರಳ್ಳಿ, ವಸಂತ ಅನ್ವರಿ, ಪರಶುರಾಮ ಜಕ್ಕಣ್ಣವರ, ಮಲ್ಲಪ್ಪ ಕಟ್ಟಿಮನಿ, ಉಮೇಶ ಜಕ್ಕಲಿ, ರೇಷ್ಮಾ ಕೆಲೂರ, ಗುರು ಹಿರೇಮಠ, ಮಂಜುಳಾ ಪಾಟೀಲ, ಯಲ್ಲಪ್ಪ ಗೊರವರ, ಪ್ರಕಾಶ್ ಅಂಬಕ್ಕಿ, ಪ್ರಕಾಶ್ ತಳವಾರ, ಈರಣ್ಣ ಬೇಲೇರಿ, ವೀರಣ್ಣ ದಳವಾಯಿ, ಮೌನೇಶ್ ದಂಡಿನ, ಸಿ.ಬಿ. ಮಲ್ಲಗೌಡ್ರ ಮುಂತಾದವರು ಉಪಸ್ಥಿತರಿದ್ದರು.

ಗುರು ಅಜ್ಞಾನ ಕಳೆದು ಸುಜ್ಞಾನ ಬೆಳಗಿಸಬಲ್ಲ

0

ವಿಜಯಸಾಕ್ಷಿ ಸುದ್ದಿ, ಗದಗ: ಮನುಷ್ಯನ ಅಜ್ಞಾನವನ್ನು ದೂರ ಮಾಡಿ, ಸುಜ್ಞಾನದ ಬೆಳಕು ನೀಡುವ ಮೂಲಕ ಎಲ್ಲರನ್ನು ಧರ್ಮದ ಸನ್ಮಾರ್ಗದಲ್ಲಿ ಮುನ್ನಡೆಸಬಲ್ಲ ಅದಮ್ಯ ಶಕ್ತಿ ಗುರುವಿನಲ್ಲಿ ಇದೆ ಎಂದು ಗದುಗಿನ ಶಿವಾನಂದ ಬೃಹನ್ಮಠದ ಪೂಜ್ಯ ಜ. ಅಭಿನವ ಶಿವಾನಂದ ಮಹಾಸ್ವಾಮಿಗಳು ಹೇಳಿದರು.

ಅವರು ಗುರುವಾರ ಗದಗ ಜಿಲ್ಲಾ ರಡ್ಡಿ ಸಮಾಜ ಸಂಘವು ಗುರುಪೂರ್ಣೆಮೆ ಅಂಗವಾಗಿ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಆಶೀರ್ವಚನ ದಯಪಾಲಿಸಿದರು.

ಎಲ್ಲರ ಜೀವನದಲ್ಲಿ ಗುರುವಿಗೆ ಅತ್ಯಂತ ಮಹತ್ವದ, ಪೂಜ್ಯನೀಯ ಸ್ಥಾನವನ್ನು ನೀಡಲಾಗಿದೆ. ಜನ್ಮ ನೀಡಿದ ತಾಯಿ, ನೆಲೆ ಒದಗಿಸಿದ ಭೂಮಿ ಸ್ವರ್ಗಕ್ಕೂ ಮಿಗಿಲು. ತಾಯಿಯೇ ಮೊದಲ ಗುರು. ಅಂತೆಯೇ ಮಾತೃ ದೇವೋಭವ ಪಿತೃ ದೇವೋಭವ, ಆಚಾರ್ಯ ದೇವೋಭವ ಹಾಗೂ ಅತಿಥಿ ದೇವೋಭವ ಎಂದು ಹೇಳುವ ಮೂಲಕ ಗುರುವಿಗೆ ದೈವೀ ಸ್ವರೂಪ ನೀಡಲಾಗಿದೆ ಎಂದರು.

ಮನುಷ್ಯ ಧರ್ಮದ ಹಾದಿಯಲ್ಲಿ ಮುನ್ನಡೆಯಬೇಕು, ಸತ್ಸಂಗ, ಸಂತರ, ಗುರುವಿನ ಸಂಪರ್ಕದಲ್ಲಿದ್ದರೆ ಅಜ್ಞಾನ ದೂರವಾಗಿ ಸುಜ್ಞಾನವು ಪ್ರಜ್ವಲಿಸುವದು. ನಾವಿಂದು ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸಂಸ್ಕಾರ, ಸಂಸ್ಕೃತಿಯನ್ನು ರೂಢಿಸಬೇಕು. ಅವರಲ್ಲಿ ಆಧ್ಯಾತ್ಮಿಕ, ವೈಚಾರಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆ ಬೆಳೆದು ಬರುವಂತೆ ತಂದೆ-ತಾಯಿ, ಪೋಷಕರು ಮಾಡಬೇಕು ಎಂದು ಪೂಜ್ಯರು ಹೇಳಿದರು.

ಗದಗ ಜಿಲ್ಲಾ ರಡ್ಡಿ ಸಮಾಜ ಸಂಘದ ಹಿರಿಯರು, ಸಮಾಜ ಬಾಂಧವರು, ಮಹಿಳೆಯರು ಸಂಘಟಿತರಾಗಿ ಪೂಜ್ಯ ಜ. ಅಭಿನವ ಶಿವಾನಂದ ಮಹಾಸ್ವಾಮಿಗಳಿಗೆ ಶೃದ್ಧಾಭಕ್ತಿಯೊಂದಿಗೆ ಆರತಿ ಮಾಡಿ, ಗುರುಕಾಣಿಕೆ, ಫಲಪುಷ್ಪಗಳೊಂದಿಗೆ ಗುರುವಂದನೆ ಸಲ್ಲಿಸಿದರು.

ಎಸ್.ಎಚ್. ಶಿವನಗೌಡ್ರ ಸ್ವಾಗತಿಸಿ ನಿರೂಪಿಸಿದರು. ನಿಂಗಪ್ಪ ದೇಸಾಯಿ ಹಾಗೂ ಬಾಬು ಮಲ್ಲನಗೌಡ್ರ ಗುರುಪೂರ್ಣಿಮೆ ಕುರಿತು ಮಾತನಾಡಿದರು. ರಾಘು ಹೊಸಮನಿ ದಂಪತಿಗಳು ಪೂಜ್ಯರ ಪಾದಪೂಜೆ ಮಾಡಿ ಗುರುವಂದನೆ ಸಲ್ಲಿಸಿದರು. ಕೊನೆಗೆ ಮೋಹನ ಕಗದಾಳ ವಂದಿಸಿದರು.

ಮಹಾನ್ ಯೋಗಿ ವೇಮನ್ ಹಾಗೂ ಹೇಮರಡ್ಡಿ ಮಲ್ಲಮ್ಮ ಧರ್ಮ ಜಾಗೃತಿ, ವೈಚಾರಿಕ ಜಾಗೃತಿಯೊಂದಿಗೆ ಮನುಷ್ಯನ ಆದರ್ಶಮಯ ಬದುಕಿಗೆ ಬಹು ದೊಡ್ಡ ಮೌಲಿಕ ಸಾಹಿತ್ಯ, ತತ್ವ ಸಂದೇಶಗಳನ್ನು ನೀಡಿದ್ದಾರೆ. ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು. ಅಂದಾಗ ಮಾತ್ರ ನಮ್ಮ ಜೀವನ ಪಾವನ ಆಗಬಲ್ಲದು ಎಂದು ಪೂಜ್ಯ ಜ. ಅಭಿನವ ಶಿವಾನಂದ ಮಹಾಸ್ವಾಮಿಗಳು ಹೇಳಿದರು.

ಸಂಘಟನೆ ಬಲಿಷ್ಠಗೊಳಿಸುವುದು ಅತ್ಯಗತ್ಯ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರದ ಸ್ಲಂ ಜನರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಗದಗ ಜಿಲ್ಲಾ ಸ್ಲಂ ಸಮಿತಿಯಿಂದ ನಿರಂತರವಾಗಿ ಹೋರಾಟಗಳನ್ನು ನಡೆಸುತ್ತ ಬಂದಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಸ್ಲಂ ಪ್ರದೇಶದ ನಿವಾಸಿಗಳ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನಮ್ಮ ಸಂಘಟನೆಯನ್ನು ಬಲಿಷ್ಠಗೊಳಿಸುವುದು ಅಗತ್ಯವಾಗಿದೆ ಎಂದು ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್.ಮಾನ್ವಿ ಹೇಳಿದರು.

ಅವರು ನಗರದ ಗಂಗಿಮಡಿ ರಸ್ತೆಯ ನವನಗರ ಸ್ಲಂ ಪ್ರದೇಶದಲ್ಲಿ ಸ್ಥಳೀಯ ನಿವಾಸಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ನವನಗರ ಪ್ರದೇಶದಲ್ಲಿ ವಾಸವಾಗಿರುವ ಕುಟುಂಬಗಳಿಗೆ ಈಗಾಗಲೇ ಸ್ಲಂ ಬೋರ್ಡ್ನಿಂದ ವಸತಿ ಯೋಜನೆ ಕಲ್ಪಿಸಲಾಗಿದೆ. ಈ ಪ್ರದೇಶದಲ್ಲಿ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಸಂಘಟನೆಯ ಮೂಲಕ ನಿರಂತರ ಹೋರಾಟಗಳನ್ನು ನಡೆಸಲಾಗುತ್ತಿದೆ. ಇತ್ತೀಚೆಗೆ ನವನಗರ ಪ್ರದೇಶದ ಕುಟುಂಬಗಳನ್ನು ಎತ್ತಂಗಡಿ ಮಾಡಲು ಭೂ ಮಾಫಿಯಾಗಳು ಕುತಂತ್ರ ನಡೆಸುತ್ತಿರುವುದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸ್ಥಳೀಯ ಜನರಿಗೆ ರಕ್ಷಣೆ ನೀಡಬೇಕೆಂದು ಮನವಿ ಮಾಡಲಾಗಿದೆ ಎಂದರು.

ನವನಗರ ಸಮಿತಿ ಉಪಾಧ್ಯಕ್ಷ ಸಲೀಂ ಹರಿಹರ, ಕಾರ್ಯದರ್ಶಿ ಖಾಜಾಸಾಬ ಇಸ್ಮಾಯಿಲನವರ, ಶೇಖಪ್ಪ ಶೆಗಣಿ, ಅಶೋಕ ಗುಮಾಸ್ತೆ, ಮೊಹ್ಮದಗೌಸ ಅಕ್ಕಿ, ಇಬ್ರಾಹಿಂ ಮುಲ್ಲಾ, ಮಕ್ತುಮಸಾಬ ಮುಲ್ಲಾನವರ, ಖಾಜಾಸಾಬ ಗಬ್ಬೂರ. ಬಸವರಾಜ ಕಳಸದ, ದಾವಲಸಾಬ ಮೋಮಿನ, ಜಂದಿಸಾಬ ಢಾಲಾಯತ, ಮಹ್ಮದರಫೀಕ ಬರದೂರ, ಮೆಹಬೂಬ ಹುಯಿಲಗೋಳ, ರುದ್ರಪ್ಪ ಕಳಬಂಡಿ, ಮಂಜುನಾಥ ಮುಗಳಿ, ವೆಂಕಟೇಶ ಬಿಂಕದಕಟ್ಟಿ, ನಾರಾಯಣ ಗೌಳಿ, ಹಜರತಅಲಿ ಹಾವೇರಿ, ದಾದಾಪೀರ ಅಣ್ಣೀಗೇರಿ, ಖಾಜಾಸಾಬ ಉಮಚಗಿ, ರಿಜ್ವಾನ ಮುಲ್ಲಾ, ಯಾಸೀನ ನದಾಫ್, ನಾರಾಯಣ ಗಾಯಕವಾಡ ಸೇರಿದಂತೆ ನವನಗರ ಸ್ಲಂ ಪ್ರದೇಶದ ನೂರಾರು ನಿವಾಸಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ನವನಗರ ಶಾಖೆ ಸಮಿತಿ ಅಧ್ಯಕ್ಷ ಮೆಹಬೂಬಸಾಬ ಬಳ್ಳಾರಿ ಮಾತನಾಡಿ, ನಮ್ಮ ಭಾಗದ ಜನರ ಬೇಡಿಕೆಗಳಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು  ನಿರ್ಲಕ್ಷ್ಯ ಮಾಡುತ್ತಿದ್ದಾರೆ. ನಾವು ಕಾರ್ಮಿಕರು ಕಷ್ಟಪಟ್ಟು ದುಡಿದು ಹಣವನ್ನು ಕ್ರೋಢೀಕರಿಸಿ ಈ ಹಿಂದೆ ಖರೀದಿ ಮಾಡಿರುವ ನಮ್ಮ ನಿವೇಶನಗಳನ್ನು ಕಬಳಿಸಿಕೊಳ್ಳಲು ಭೂ ಮಾಫಿಯಾಗಳು ಕುತಂತ್ರ ನಡೆಸುತ್ತಿವೆ. ಇದನ್ನು ವಿರೋಧಿಸಿ ಗದಗ ಜಿಲ್ಲಾ ಸ್ಲಂ ಸಮಿತಿ ನೇತೃತ್ವದಲ್ಲಿ ನಿರಂತರವಾಗಿ ಹೋರಾಟಗಳನ್ನು ನಡೆಸುತ್ತಿದ್ದೇವೆ ಎಂದರು.

ಜುಲೈ 12ರಂದು ಯುವ ಕಾಂಗ್ರೆಸ್ ಪದಗ್ರಹಣ ಸಮಾರಂಭ

0

ವಿಜಯಸಾಕ್ಷಿ ಸುದ್ದಿ, ರೋಣ: ಜುಲೈ 12ರಂದು ಬೆಳಿಗ್ಗೆ 11ಕ್ಕೆ ಗದಗ ನಗರದ ಸ್ವಾಮಿ ವಿವೇಕಾನಂದ ಸಬಾಭವನದಲ್ಲಿ ಜರುಗುವ ಯುವ ಕಾಂಗ್ರೆಸ್ ಪದಗ್ರಹಣ ಸಮಾರಂಭಕ್ಕೆ ರೋಣ ತಾಲೂಕಿನಿಂದ 10ಸಾವಿರ ಯುವಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಾಲೂಕಾ ಯುವ ಕಾಂಗ್ರೆಸ್ ಅಧ್ಯಕ್ಷ ಮುತ್ತುರಾಜ ನವಲಗುಂದ ಹೇಳಿದರು.

ಅವರು ಗುರುವಾರ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದರು.

ಗದಗ ಜಿಲ್ಲಾ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಕೃಷ್ಣಗೌಡ ಎಚ್.ಪಾಟೀಲ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಕ್ಷಯ ಪಾಟೀಲ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕವಾದ ಯುವ ಮುಖಂಡರುಗಳ ಪದಗ್ರಹಣ ಸಮಾರಂಭ ಇದಾಗಿದೆ.

ಪದಗ್ರಹಣ ಸಮಾರಂಭಕ್ಕೆ ಸಚಿವರಾದ ಪ್ರಿಯಾಂಕ ಖರ್ಗೆ, ಸಚಿವರಾದ ಸಂತೋಷ ಲಾಡ್, ಎಚ್.ಕೆ. ಪಾಟೀಲ, ಶಾಸಕ ಜಿ.ಎಸ್.ಪಾಟೀಲ ಸೇರಿದಂತೆ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಅನೇಕ ಮುಖಂಡರು ಆಗಮಿಸಲಿದ್ದಾರೆ. ಪಕ್ಷದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ಯುವ ನಾಯಕರು ಸಹ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ತಾಲೂಕಿನ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು ಎಂದು ಕರೆ ನಿಡಿದರು.

ಉಪಾಧ್ಯಕ್ಷ ಅಸ್ಲಂ ಕೊಪ್ಪಳ, ಶಹರ ಘಟಕದ ಅಧ್ಯಕ್ಷ ಯಲ್ಲಪ್ಪ ಕಿರೇಸೂರ, ಉಪಾಧ್ಯಕ್ಷ ಗೋಪಿ ರಾಯನಗೌಡ್ರ, ಬ್ಲಾಕ್ ಕಮಿಟಿ ಉಪಾಧ್ಯಕ್ಷ ಸೋಮು ನಾಗರಾಜ, ಅಭಿಷೇಕ ನವಲಗುಂದ, ಆನಂದ ರಾಠೋಡ, ಬಶೀರ ಕಟ್ಟಿಮನಿ, ವಿನಾಯಕ ಜಕ್ಕನಗೌಡ್ರ, ಅಪ್ಪುರಾಜ ನವಲಗುಂದ, ಬಸವರಾಜ ಹೊಸಳ್ಳಿ, ಅಬ್ಬು ಹೊಸುರ, ಮಹೇಶ ಕಳಸಣ್ಣವರ ಸೇರಿದಂತೆ ಕಾಂಗ್ರೆಸ್ ಪಕ್ಷದ ಯುವ ಮುಖಂಡರು ಉಪಸ್ಥಿತರಿದ್ದರು.

ಸಮಾಜಮುಖಿ-ಜನಮುಖಿ ಕಾರ್ಯ ಮಾಡಿ

0

ವಿಜಯಸಾಕ್ಷಿ ಸುದ್ದಿ, ಗದಗ: ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು ಮತ್ತು ಸದಸ್ಯರು ಸಮಾಜಮುಖಿ ಹಾಗೂ ಜನಮುಖಿಯಾಗಿ ಕಾರ್ಯ ಮಾಡಬೇಕೆಂದು ಲಯನ್ಸ್ ಕ್ಲಬ್‌ನ ನಿಕಟಪೂರ್ವ ಜಿಲ್ಲಾ ಗವರ್ನರ್ ಡಾ. ರವಿ ನಾಡಗೇರ ಹೇಳಿದರು.

ಅವರು ಬುಧವಾರ ಲಯನ್ಸ್ ಶಾಲೆಯ ಸಭಾಂಗಣದಲ್ಲಿ ಗದಗ-ಬೆಟಗೇರಿ ಲಯನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು.

ಸಮಾಜ ಸೇವೆ ಮಾಡುವ ಮೂಲಕ ಅದರಲ್ಲಿ ಸಂತೃಪ್ತ ಭಾವನೆ ಕಾಣಲು ಇಂತಹ ಸಾಮಾಜಿಕ ಸಂಘಟನೆಗಳು ವೇದಿಕೆಯನ್ನು ಒದಗಿಸಬಲ್ಲವು. ಕ್ಲಬ್‌ಗಳಲ್ಲಿ ಎಲ್ಲರೂ ಸಂಘಟಿಕರಾಗಿ ಸೇರುವುದರಿಂದ ಸ್ನೇಹ ಬೆಳೆಯುವದರ ಜೊತೆಗೆ ನಾಯಕತ್ವದ ಗುಣಗಳು ಬೆಳೆದು ಬರುವವು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಲಯನ್ಸ್ ಕ್ಲಬ್‌ನ ನಿಕಟಪೂರ್ವ ಜಿಲ್ಲಾ ಗವರ್ನರ್‌ಗಳಾದ ಆನಂದ ಪೋತ್ನೀಸ್ ಹಾಗೂ ಸುಗ್ಗಲಾ ಯಳಮಲಿ ಮಾತನಾಡಿ, ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರು ಕ್ಲಬ್‌ನ ಬಲವರ್ಧನೆಗೆ ಶ್ರಮಿಸಬೇಕು. ತನ್ಮೂಲಕ ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಂಡು ಜನತೆಗೆ ಹಾಗೂ ಸಮಾಜಕ್ಕೆ ಉಪಯುಕ್ತವಾದ ಕಾರ್ಯಗಳನ್ನು ಮಾಡಬೇಕೆಂದರು.

ಗದಗ-ಬೆಟಗೇರಿ ಲಯನ್ಸ್ ಕ್ಲಬ್‌ನ ಲೇಡಿಸ್ ವಿಂಗ್‌ನ ಅಧ್ಯಕ್ಷೆಯಾಗಿ ಪೂಜಾ ಪಾಟೀಲ, ಕಾರ್ಯದರ್ಶಿಯಾಗಿ ಸುರೇಖಾ ಮಲ್ಲಾಡದ, ಖಜಾಂಚಿಯಾಗಿ ಸಹನಾ ಹಿರೇಮಠ ಅಧಿಕಾರ ವಹಿಸಿಕೊಂಡರು.

ಕನಿಷ್ಕ್ ಸುಲಾಖೆ ಪ್ರಾರ್ಥಿಸಿದರು. ನಿತೀಶ್ ಸಾಲಿ ಸ್ವಾಗತಿಸಿದರು, ಸಾವಿತ್ರಿ ಶಿಗ್ಲಿ ಹಾಗೂ ವೀಣಾ ಸುಲಾಖೆ ನಿರೂಪಿಸಿದರು. ರಾಜಣ್ಣ ಮಲ್ಲಾಡದ ವಂದಿಸಿದರು. ಕಾರ್ಯಕ್ರಮದಲ್ಲಿ ಕ್ಲಬ್‌ನ ಸರ್ವ ಸದಸ್ಯರು, ಗಣ್ಯರು ಪಾಲ್ಗೊಂಡಿದ್ದರು.

ಕ್ಲಬ್‌ನ ನೂತನ ಅಧ್ಯಕ್ಷರಾಗಿ ರಾಜು ವೇರ್ಣೆಕರ, ಉಪಾಧ್ಯಕ್ಷರಾಗಿ ಪ್ರವೀಣ ವಾರಕರ, ಡಾ. ನವೀನ ಹಿರೇಗೌಡ್ರ, ಡಾ. ತುಕಾರಾಮ ಸೂರಿ, ನಿಕಟಪೂರ್ವ ಅಧ್ಯಕ್ಷರಾಗಿ ನಿತೀಶ್ ಸಾಲಿ, ಕಾರ್ಯದರ್ಶಿಯಾಗಿ ರಾಜಣ್ಣ ಮಲ್ಲಾಡದ, ಜಂಟಿ ಕಾರ್ಯದರ್ಶಿಯಾಗಿ ಲಿಂಗರಾಜ ತೋಟದ, ಖಜಾಂಚಿಯಾಗಿ ರೇಣುಕಪ್ರಸಾದ ಹಿರೇಮಠ, ಸಹ ಖಜಾಂಚಿಯಾಗಿ ರೇಣುಕಪ್ರಸಾದ ಶಿಗ್ಲಿಮಠ ಅಧಿಕಾರ ವಹಿಸಿಕೊಂಡರು.

ನಿಮ್ಮ ಮನೆ ಬಾಗಿಲಿಗೆ `ಇ-ಖಾತಾ’ ಸೌಲಭ್ಯ

ವಿಜಯಸಾಕ್ಷಿ ಸುದ್ದಿ, ಡಂಬಳ: ಸರ್ಕಾರದಿಂದ ಪಿತ್ರಾರ್ಜಿತ ಆಸ್ತಿ ಹಕ್ಕನ್ನು ರೈತರ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಸರಳೀಕೃತಗೊಳಿಸಲು ಕಂದಾಯ ಇಲಾಖೆಯಿಂದ ಇ-ಪೌತಿ ಆಂದೋಲನ ನಡೆಸಲಾಗುತ್ತಿದೆ. ಗದಗ ಜಿಲ್ಲೆಯಲ್ಲಿ 70 ಸಾವಿರ ಪೌತಿ (ಮರಣ) ಖಾತೆ ಹೊಂದಿದ ಪ್ರಕರಣಗಳಿದ್ದು, ಈ ಎಲ್ಲಾ ರೈತರು ಇ-ಖಾತಾ ಹೊಂದಲು ತಮ್ಮ ಮನೆ ಬಾಗಿಲಿಗೆ ಬರುತ್ತಿದ್ದು, ಇದರ ಸಂಪೂರ್ಣ ಸೌಲಭ್ಯವನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಗದಗ ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ್ ಹೇಳಿದರು.

ಡಂಬಳ ಹೋಬಳಿಯ ವೆಂಕಟಾಪೂರ ಗ್ರಾಮದ ಅನ್ನದಾನೀಶ್ವರ ಮಠದ ಆವರಣದಲ್ಲಿ ಕಂದಾಯ ಇಲಾಖೆ ಮೂಲಕ ಇ-ಪೌತಿ ವಾರಸಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ಪೌತಿ ಮೃತರ ಉತ್ತರಾಧಿಕಾರಿಗಳ ಹೆಸರಿಗೆ ಬದಲಾಗದಿದ್ದರೆ ಅಂತಹ ಜಮೀನು ಸ್ವಾಧೀನ ಹೊಂದಿದ್ದರೂ ಸಹ ಕುಟುಂಬಸ್ಥರಿಗೆ ಜಮೀನು ಅಭಿವೃದ್ಧಿಪಡಿಸಲು, ಬೆಳೆಸಾಲ, ಕೃಷಿ, ತೋಟಗಾರಿಕೆ ಸೌಲಭ್ಯಗಳು ದೊರೆಯುವುದಿಲ್ಲ. ಬೆಳೆಹಾನಿ ಆದ ವೇಳೆ ಪರಿಹಾರ ಪಡೆಯಲು ದುಸ್ತರವಾಗುತ್ತದೆ. ಹೀಗಾಗಿ ಆಸ್ತಿ ಹಕ್ಕು ವರ್ಗಾವಣೆಗೆ ಇ-ಪೌತಿ ಆಂದೋಲನ ಆರಂಭಿಸಲಾಗಿದೆ ಎಂದರು.

ಕೆಲ ಪ್ರಕರಣದಲ್ಲಿ ಉತ್ತರಾಧಿಕಾರಿಗಳ ತಕರಾರು ಇದ್ದು, ಪೌತಿ ಖಾತೆ ಮಾಡಲು ಒಪ್ಪಿರುವುದಿಲ್ಲ ಎಂದು ಪಹಣಿ ಕಾಲಂ 11ರಲ್ಲಿ ನಮೂದಿಸಲಾಗುತ್ತದೆ. ಹೀಗಾಗಿ ಇ-ಪೌತಿ ಖಾತಾಗೆ ಬೇಕಾದ ವಂಶವೃಕ್ಷ ಮರಣ ಪ್ರಮಾಣದಂತಹ ಇತರ ದಾಖಲೆ ಸಿದ್ಧಪಡಿಸಿಕೊಂಡು ಆಂದೋಲನ ಯಶಸ್ವಿಗೆ ಜಿಲ್ಲೆಯ ರೈತರು ಸಹಕರಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗೆ ಸಂಬಂಧಿಸಿದಂತೆ ತಹಸೀಲ್ದಾರ, ಉಪತಹಸೀಲ್ದಾರ, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಲು ಮುಂದಾಗಬೇಕು ಎಂದು ಹೇಳಿದರು.

ಮುಂಡರಗಿ ತಹಸೀಲ್ದಾರ ಯರಿಸ್ವಾಮಿ ಪಿ.ಎಸ್. ಮಾತನಾಡಿ, ಮುಂಡರಗಿ ತಾಲೂಕಿನಲ್ಲಿ ಪೋತಿ ಇರುವ ಖಾತೆಗಳು 8000 ಸಾವಿರ, ವೆಂಕಟಾಪೂರ ಗ್ರಾಮದಲ್ಲಿ 180 ಪೋತಿ ಖಾತಾ ಇದ್ದು, ಈಗಾಗಲೇ 20 ಅರ್ಜಿಗಳು ಬಂದಿವೆ. ಅವರಿಗೆ ಶೀಘ್ರದಲ್ಲಿ ಇ-ಖಾತಾ ಮಾಡಿಕೊಡಲಾಗುವುದು. ಇದರ ಸದುಪಯೋಗವನ್ನು ಇನ್ನುಳಿದ ರೈತರು ಪಡೆಯಬೇಕು. ಈಗಾಗಲೇ ಮರಣ ಹೊಂದಿದವರ ಹೆಸರಿನಲ್ಲಿರುವ ವಾರಸುದಾರರಿಗೆ ತಿಳುವಳಿಕೆಯ ಪತ್ರವನ್ನು ನೀಡಿದ್ದು, ಇ-ಖಾತಾ ಹೊಂದಲು ರೈತರು ಮುಂದಾಗಬೇಕು ಎಂದು ಹೇಳಿದರು.

ಗದಗ ಚುನಾವಣಾ ತಹಸೀಲ್ದಾರ ಸಂತೋಷ ಹಿರೇಮಠ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪತಸೀಲ್ದಾರ್ ಎಸ್.ಎಸ್. ಬಿಚ್ಚಾಲಿ, ಕಂದಾಯ ನಿರೀಕ್ಷಕ ಪ್ರಭು ಬಾಗಲಿ, ಗ್ರಾಮ ಆಡಳಿತಾಧಿಕಾರಿಗಳಾದ ಪರಸು ಗಾಡಿ, ಲಕ್ಷ್ಮಣ ಗುಡಸಲಮನಿ, ವಿನೋದ ಹೊಸಮಠ, ಗ್ರಾಮದ ರೈತರಾದ ಚನ್ನಬಸಪ್ಪ ಹಳ್ಳಿ, ಕಲ್ಲೇಶ, ಸಂಗಪ್ಪ ಸಣ್ಣದ್ಯಾವಣ್ಣವರ, ಮಂಜುನಾಥ ಕಿನ್ನಾಳ, ಯಲ್ಲಪ ಸಣ್ಣದ್ಯಾವಣ್ಣವರ, ಮಲ್ಲಪ್ಪ ಹೊಸಮನಿ, ಬಸುರಾಜ ಕೊಪ್ಪಳ, ನಿಂಗಪ್ಪ ಹೊಸಮನಿ, ಶಂಕ್ರಪ್ಪ ಹೊಸಮನಿ, ಶುಭಾಸ ಚವಡಿ, ಗ್ರಾಮದ ಹಿರಿಯರು, ಕಂದಾಯ ಇಲಾಖೆ ಸಿಬ್ಬಂದಿ ವರ್ಗದವರು ಇದ್ದರು.

ಇ-ಪೌತಿ ಮಾಡಿಸಿಕೊಳ್ಳಲು ಸಂಬAಧಿಸಿದವರು ಮೃತರ ಮರಣ ಪ್ರಮಾಣಪತ್ರ, ಗಣಕೀಕೃತ ವಂಶವೃಕ್ಷ ಪ್ರಮಾಣಪತ್ರ, ಆಧಾರ್ ಕಾರ್ಡ್ ಗಳನ್ನು ಗ್ರಾಮಾಡಳಿತಾಧಿಕಾರಿಗಳಿಗೆ ಸಲ್ಲಿಸಬೇಕು. ಅವರು ಕಾನೂನು ಬದ್ಧ ವಾರಸುದಾರರ ಆಧಾರ್ ಇ-ಕೆವೈಸಿ ಮಾಡುತ್ತಾರೆ. ಉತ್ತರಾಧಿಕಾರಿ ಇದ್ದರೆ ಫೋಟೋ ತೆಗೆದು ಯಾಪ್ನಲ್ಲಿ ಅಪ್ಲೋಡ್ ಮಾಡುತ್ತಾರೆ. ಮೃತರ ಇನ್ನಿತರ ಯಾವುದೇ ಸರ್ವೇ ನಂಬರ್ ಇದ್ದರೂ ಸೇರ್ಪಡೆ ಮಾಡುತ್ತಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಹಡಪದ ಅಪ್ಪಣ್ಣ ಸಾಮಾಜಿಕ ಕ್ರಾಂತಿಯ ಹರಿಕಾರ

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಛೇರಿ ಹುಬ್ಬಳ್ಳಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಎಂ ಅವರು ಶಿವಶರಣ ಹಡಪದ ಅಪ್ಪಣ್ಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಣೆಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಪಿ.ಆರ್. ಕಿರಣಗಿ ಮಾತನಾಡಿ, ಶಿವಶರಣ ಶ್ರೀ ಹಡಪದ ಅಪ್ಪಣ್ಣನವರು 12ನೇ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು. ಇವರು ಬಸವಣ್ಣನವರ ಆಪ್ತವಲಯದಲ್ಲಿ ಗುರುತಿಸಲ್ಪಟ್ಟಿದ್ದರು. ಸಮಾಜದಲ್ಲಿರುವ ಮೇಲು, ಕೀಳು, ಮೂಢನಂಬಿಕೆ ಅಂಧ ಆಚರಣೆಗಳನ್ನು ಹೋಗಲಾಡಿಸಲು ಬಸವಣ್ಣನವರ ನೇತೃತ್ವದಲ್ಲಿ ಶ್ರಮಿಸಿದ್ದಾರೆ, ಅವರ ವ್ಯಕ್ತಿತ್ವವನ್ನು ಇಂದು ರೂಢಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ವಿಶ್ವಜ್ಞ, ಪಿ.ವೈ. ನಾಯಕ್, ಸಿದ್ದೇಶ್ವರ ಹೆಬ್ಬಾಳ, ಗಣೇಶ ರಾಠೋಡ್, ಶಶೀಧರ ಕುಂಬಾರ, ಜಗದಂಬಾ ಕೋಪರ್ಡೆ, ಶ್ರೀನಾಥ ಜಿ, ಅಧಿಕಾರಿಗಳಾದ ಎಂ.ಬಿ. ಕಪಲಿ, ನವೀನಕುಮಾರ ತಿಪ್ಪಾ, ದಯಾನಂದ ಪಾಟೀಲ, ಆರ್.ಎಲ್. ಭಜಂತ್ರಿ, ಕೇಂದ್ರ ಕಛೇರಿಯ ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿರೂಪಾಕ್ಷ ಕಟ್ಟಿಮನಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

ಗ್ಯಾರಂಟಿ ಯೋಜನೆ ಶೇ. 98ರಷ್ಟು ಯಶಸ್ವಿ

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನರೇಗಲ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿಗಳ ಅನುಷ್ಠಾನವು ಶೇ. 98ರಷ್ಟಾಗಿರುವುದು ಹೆಮ್ಮೆಯ ಸಂಗತಿ ಎಂದು ಗಜೇಂದ್ರಗಡ ತಾಲೂಕಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶರಣಪ್ಪ ಬೆಟಗೇರಿ ಹೇಳಿದರು.

ಪ.ಪಂ ಸಭಾಭವನದಲ್ಲಿ ಜರುಗಿದ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಸಭೆಯಲ್ಲಿ ಪ್ರಗತಿ ಪರಿಶೀಲನೆ ಮಾಡಿ ಅವರು ಮಾತನಾಡಿದರು.

ಶಾಸಕರಾದ ಜಿ.ಎಸ್. ಪಾಟೀಲರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ತಾಲೂಕಿನಾದ್ಯಂತ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಯಶಸ್ವಿಯಾಗಿದೆ. ಅದರಲ್ಲಿಯೂ ನರೇಗಲ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಯೋಜನೆ ಇಷ್ಟೊಂದು ಯಶಸ್ವಿಯಾಗಲು ಅಂಗನವಾಡಿ ಕಾರ್ಯಕರ್ತೆಯರು ಬಹುಮಟ್ಟಿಗೆ ಕಾರಣರಾಗಿದ್ದಾರೆ. ಅದಕ್ಕಾಗಿ ಅವರನ್ನು ಸಮಿತಿ ವತಿಯಿಂದ ಅಭಿನಂದಿಸುವುದಾಗಿ ತಿಳಿಸಿದರು.

ಈ ಯೋಜನೆ ತಲುಪದವರು ಪಟ್ಟಣ ಪಂಚಾಯಿತಿ, ಗ್ಯಾರಂಟಿ ಸಮಿತಿಯ ಸದಸ್ಯರನ್ನಾಗಲಿ ಸಂಪರ್ಕಿಸಬೇಕು. ಗೃಹಜ್ಯೋತಿ ಯೋಜನೆಯು ಶೇ. 99.99ರಷ್ಟು ಯಶಸ್ವಿಯಾಗಿದ್ದು, ಇನ್ನು ಯಾರಾದರೂ ಉಳಿದಿದ್ದರೆ ಅಂಥವರು ದಾಖಲೆಗಳೊಂದಿಗೆ ಸಮಿತಿಯ ಸದಸ್ಯರನ್ನು ತಕ್ಷಣವೆ ಸಂಪರ್ಕಿಸಬೇಕು. ಸಮಿತಿಯ ಸದಸ್ಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಉಳಿದ ಫಲಾನುಭವಿಗಳಿಗೆ ಯೋಜನೆಯನ್ನು ತಲುಪಿಸಲು ಮನೆಮನೆ ಸಮೀಕ್ಷೆಯನ್ನು ಮಾಡಿ ಶೇ. 100ರಷ್ಟು ಯಶಸ್ವಿ ಮಾಡಲು ಶ್ರಮಿಸಬೇಕೆಂದರು.

ಜಿಲ್ಲಾ ಗ್ಯಾರಂಟಿ ಸಮಿತಿ ಸದಸ್ಯ ಶಿವನಗೌಡ ಪಾಟೀಲ, ಪ.ಪಂ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಪ.ಪಂ ಸದಸ್ಯರು, ನಾಮನಿರ್ದೇಶಿತ ಸದಸ್ಯರು, ಗ್ಯಾರಂಟಿ ಸಮಿತಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಮುತ್ತಪ್ಪ ನೂಲ್ಕಿ ಉಪಸ್ಥಿತರಿದ್ದರು. ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ಮಹೇಶ ನಿಡಶೇಶಿ ಸ್ವಾಗತಿಸಿದರು.

ಅಂಗನವಾಡಿ ಮೇಲ್ವಿಚಾರಕಿ ರಾಧಿಕಾ ಪವಾರ ಮಾಹಿತಿ ನೀಡಿ, ಪಟ್ಟಣದ 6ನೇ ವಾರ್ಡಿನಲ್ಲಿ ಇನ್ನೂ 44 ಫಲಾನುಭವಿಗಳು ಯೋಜನೆಯ ಲಾಭ ಪಡೆದಿಲ್ಲ. ಇದಕ್ಕೆ ಹಲವಾರು ತಾಂತ್ರಿಕ ಕಾರಣಗಳಿದ್ದು, ಇನ್ನು ಕೆಲವೇ ದಿನಗಳಲ್ಲಿ ಅದೆಲ್ಲವನ್ನೂ ಸರಿಪಡಿಸಿ ಅವರಿಗೂ ಯೋಜನೆಯ ಲಾಭ ತಲುಪಿಸಲಾಗುವುದೆಂದರು.

ಅಲಗಿಲವಾಡ ಶಾಲೆಯಲ್ಲಿ ಹಡಪದ ಅಪ್ಪಣ್ಣ ಜಯಂತಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನ ಅಲಗಿಲವಾಡ ಶಾಲೆಯಲ್ಲಿ ನಿಜಶರಣ ಶ್ರೀ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವವನ್ನು ಆಯೋಜಿಸಲಾಗಿತ್ತು.

ಪ್ರಧಾನ ಗುರುಗಳಾದ ಹಾಲೇಶ ಜಕ್ಕಲಿ, ಶಿಕ್ಷಕ ನೆಮೇಶ ಯರಗುಪ್ಪಿ ಮಾತನಾಡಿ, ತಮ್ಮ ಕ್ಷೌರಿಕ ಕಾಯಕದಲ್ಲಿ ದೇವರನ್ನು ಕಂಡ ಹಡಪದ ಅಪ್ಪಣ್ಣನವರು ಸಮಾಜದ ಒಳಿತಿಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಹಡಪದ ಎಂದರೆ ಕ್ಷೌರಿಕ ಸಾಮಗ್ರಿಗಳನ್ನು ಇಟ್ಟುಕೊಳ್ಳುವ ಚೀಲ ಅಥವಾ ಎಲೆ ಅಡಿಕೆಯ ತಾಂಬೂಲನ್ನು ಇಟ್ಟುಕೊಳ್ಳುವ ಚೀಲ ಎಂತಲೂ ನಂಬಲಾಗಿದೆ. ಸಾಮಾಜಿಕ ಅಸಾಮಾನತೆ, ಅನ್ಯಾಯದ ವಿರುದ್ಧ ಹೋರಾಡುತ್ತಿದ್ದ ಇವರನ್ನು ಬಸವಣ್ಣನವರು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಂಡರು. ಇವರು ಬಸವಪ್ರಿಯ ಕೂಡಲ ಚೆನ್ನಬಸವಣ್ಣ ಎಂಬ ಅಂಕಿತನಾಮದಿಂದ 250 ವಚನಗಳನ್ನು ರಚಿಸಿದ್ದಾರೆ ಎಂದು ಮಕ್ಕಳಿಗೆ ತಿಳುವಳಿಕೆ ನೀಡಿದರು

ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಪ್ರಭಯ್ಯ ಹಸವಿಮಠ, ನಿಜಲಿಂಗಪ್ಪ ಮಾಯಕಾರ, ಅಡುಗೆಯ ಸಿಬ್ಬಂದಿಗಳಾದ ಹುಸೇನಬಿ ನದಾಫ್ ಸೇರಿದಂತೆ ವಿದ್ಯಾರ್ಥಿಗಳಿದ್ದರು.

error: Content is protected !!