Home Blog Page 11

ಗುರುವೆಂದರೆ ವ್ಯಕ್ತಿಯಲ್ಲ, ಮಹಾನ್ ಶಕ್ತಿ

ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು: ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅಗ್ರ ಸ್ಥಾನವಿದೆ. ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರ ಸ್ವರೂಪರೆಂದು ಭಾವಿಸುತ್ತಾರೆ. ಬದುಕನ್ನು ಅರಳಿಸುವ ಪಸರಿಸುವ ಮತ್ತು ದುಷ್ಟತನ ಅಳಿಸುವ ಶಕ್ತಿ ಗುರುವಿಗಿದೆ. ಅಜ್ಞಾನ ಕಳೆದು ಸುಜ್ಞಾನದ ಅರಿವನ್ನು ತುಂಬುವವನೇ ನಿಜವಾದ ಗುರುವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಗುರುವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಗುರುಪೂರ್ಣಿಮಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಗುರುವೆಂದರೆ ವ್ಯಕ್ತಿಯಲ್ಲ. ಅದೊಂದು ಮಹಾನ್ ಶಕ್ತಿ. ಜ್ಞಾನ ನೀಡಿ ಸನ್ಮಾರ್ಗದಲ್ಲಿ ನಡೆಸುವವನೇ ಗುರು ಎಂಬ ನಂಬಿಕೆಯಿದೆ. ಅಜ್ಞಾನ, ಅಹಂಕಾರ, ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾಸ್ತ್ರ ಸಾರುತ್ತದೆ. ಆಷಾಢ ಮಾಸದಲ್ಲಿ ಬರುವ ಹುಣ್ಣಿಮೆಯನ್ನು ಗುರು ಪೂರ್ಣಿಮಾ ಎಂತಲೂ, ವ್ಯಾಸರು ಹುಣ್ಣಿಮೆಯಂದೇ ಜನ್ಮ ತಾಳಿರುವ ಕಾರಣ ವ್ಯಾಸ ಪೂರ್ಣಿಮಾ ಎಂತಲೂ ಕರೆಯುತ್ತಾರೆ. ಮುಂದೆ ಗುರಿ, ಹಿಂದೆ ಒಬ್ಬ ಗುರುವಿನ ಕಾರುಣ್ಯ ಪ್ರತಿಯೊಬ್ಬರಿಗೂ ಬೇಕು ಎಂದರು.

ಗುರು ಪೂರ್ಣಿಮಾ ಅಂಗವಾಗಿ ಕ್ಷೇತ್ರದ ಎಲ್ಲ ದೈವಗಳಿಗೆ ವಿಶೇಷ ಪೂಜೆ ಜರುಗಿತು. ಈ ಪವಿತ್ರ ಸಮಾರಂಭದಲ್ಲಿ ಲಿಂಗದಹಳ್ಳಿ, ಮಳಲಿ, ಸಂಗೊಳ್ಳಿ, ಬಿಳಕಿ, ಬೇರುಗಂಡಿ, ನೆಗಳೂರು, ಕಾರ್ಜುವಳ್ಳಿ, ಮಳಖೇಡ, ದೊಡ್ಡಸಗರ, ಹುಡಗಿ, ಗುಂಡಪಲ್ಲಿ ಮಠಗಳ ಶಿವಾಚಾರ್ಯರು ಹಾಗೂ ಹುಬ್ಬಳ್ಳಿಯ ಆರ್.ಎಂ. ಹಿರೇಮಠ, ಸೋಲಾಪುರದ ರಾಜು, ನಾಂದೇಡದ ವಿನಾಯಕ, ಹೂವಿನಮಡಲು ಹಾಲಸ್ವಾಮಿ, ಶಿವಮೊಗ್ಗದ ಟಿ.ವಿ. ಶಿವಕುಮಾರ್, ಕೊಡಿಯಾಲ ಹೊಸಪೇಟೆ ಗಿರೀಶ್, ಚಿಕ್ಕಮಗಳೂರು ಪ್ರಭುಲಿಂಗಶಾಸ್ತಿç ಸೇರಿದಂತೆ ಲಿಂಗದಹಳ್ಳಿ ದೊಡ್ಡಸಗರ ಸದ್ಭಕ್ತರು ಪಾಲ್ಗೊಂಡು ಜಗದ್ಗುರುಗಳವರ ಪಾದ ಪೂಜಾ ನೆರವೇರಿಸಿ ಆಶೀರ್ವಾದ ಪಡೆದರು.

ಬಂದ ಎಲ್ಲ ಭಕ್ತರಿಗೂ ಅನ್ನ ದಾಸೋಹವನ್ನು ರಾಣೆಬೆನ್ನೂರು ತಾಲೂಕಿನ ಕೊಡಿಯಾಲ ಹೊಸಪೇಟೆ ಜುಂಜಪ್ಪ ಹೆಗ್ಗಪ್ಪನವರ ಮಕ್ಕಳು ನೆರವೇರಿಸಿದರು.

ಪಾಪ ಕಾರ್ಯಕ್ಕೆ ಮನಸ್ಸು ಹೋಗದಂತೆ, ಪುಣ್ಯ ಕಾರ್ಯದಲ್ಲಿ ಮನಸ್ಸು ಬೆಳೆಯುವಂತೆ ಉತ್ತಮ ಸ್ಫೂರ್ತಿ ನೀಡಿ ಮುಕ್ತಿ ಮಾರ್ಗ ತೋರುವ ಗುರುವನ್ನು ಪಡೆದು ಜೀವನ ಸಾರ್ಥಕಪಡಿಸಿಕೊಳ್ಳಬೇಕಾಗಿದೆ. ಆಷಾಢ ಮಾಸದಲ್ಲಿ ಬರುವ ಗುರು ಪೂರ್ಣಿಮಾ ದಿನದಂದು ಶಿವನು ಯೋಗ ವಿದ್ಯೆಯನ್ನು ಸಪ್ತ ಮಹರ್ಷಿಗಳಿಗೆ ಅರುಹಿ ಮೊದಲ ಗುರುವಾದನು ಎಂಬ ನಂಬಿಕೆಯಿದೆ. ಏಳಿ ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲಬೇಡಿ ಎಂಬ ವಿವೇಕಾನಂದರ ವಾಣಿಯಂತೆ ಜಾಗೃತರಾಗಿ ಶ್ರೇಷ್ಠ ಗುರುವನ್ನು ಪಡೆದು ಭವ ಬಂಧನದಿಂದ ಮುಕ್ತರಾಗಬೇಕೆಂದು ರಂಭಾಪುರಿ ಶ್ರೀಗಳು ನುಡಿದರು.

ಜು.12ರಂದು ಕಾಂಗ್ರೆಸ್ `ಯುವಧ್ವನಿ’ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಜು.12ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ `ಯುವಧ್ವನಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ತಿಂಗಳ ಹಿಂದೆ ಯುವ ಕಾಂಗ್ರೆಸ್‌ನ ಆಂತರಿಕ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಜಿಲ್ಲಾಧ್ಯಕ್ಷರ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲೆಯಲ್ಲಿ ಆಯ್ಕೆಯಾಗಿರುವ ಜಿಲ್ಲಾ ಮಟ್ಟದ, ತಾಲೂಕು ಮಟ್ಟದ, ಬ್ಲಾಕ್ ಮಟ್ಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ ಎಂದರು.

ಮಾರ್ಗದರ್ಶಕರಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ, ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಬಿ.ಆರ್. ಯಾವಗಲ್, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ ಮಂಜುನಾಥ ಗೌಡ, ವಿಭಾಗೀಯ ಅಧ್ಯಕ್ಷರಾದ ದೀಪಿಕಾ ಗೌಡ ಭಾಗವಹಿಸುವರು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಕ್ಷಯ ಪಾಟೀಲ, ಮುಖಂಡರಾದ ಅನ್ವರ ನದಾಫ್, ಮಲ್ಲಪ್ಪ ದಂಡಿನ, ಸಂಗಮೇಶ ಕೆರಕಲಮಟ್ಟಿ, ರಾಘವೇಂದ್ರ ದೊಡ್ಡಮನಿ ಇದ್ದರು.

ಗುರು ಪೂರ್ಣಿಮೆ ನಿಮಿತ್ತ ನಿವೃತ್ತ ಶಿಕ್ಷಕಿ ಲಲಿತಮ್ಮ ಅವರಿಗೆ ಸನ್ಮಾನ

0

ಹರಪನಹಳ್ಳಿ: ಹರಪನಹಳ್ಳಿ ಬಿಜೆಪಿ ಮಂಡಲದ ವತಿಯಿಂದ ಗುರು ಪೂರ್ಣಿಮೆ ನಿಮಿತ್ತ ನಿವೃತ್ತ ಶಿಕ್ಷಕಿ ಲಲಿತಮ್ಮ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಮಂಡಲ ಪ್ರಧಾನ ಕಾರ್ಯದರ್ಶಿ ಉದಯ್ ಕುಮಾರ್ ಬಾವಿಹಳ್ಳಿ, ಮಂಡಲ ಉಪಾಧ್ಯಕ್ಷ ಮುದುಕವ್ವನವರ ಶಂಕರ, ಹಲುವಾಗಲು ದ್ಯಾಮಣ್ಣ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಕಡೇಮನಿ ಸಂಗಮೇಶ, ಎಸ್.ಟಿ. ಮೋರ್ಚಾ ಉಪಾಧ್ಯಕ್ಷ ಶೃಂಗಾರ ತೋಟ ಗಿರೀಶ್, ಪಿ.ಎಂ. ಗುರುಬಸವರಾಜ್, ಮಟ್ಟಿ ಮಲ್ಲಿಕಾರ್ಜುನ, ಬದ್ರಿನಾಥ ಶೆಟ್ಟರು ಮುಂತಾದವರಿದ್ದರು.

ಜೈಲನ್ನು ಸ್ವಚ್ಛಗೊಳಿಸಬೇಕಿರುವುದು ಸರಕಾರದ ಕರ್ತವ್ಯ

0

ವಿಜಯಸಾಕ್ಷಿ ಸುದ್ದಿ, ಗದಗ: ಆಂತರಿಕ ಭದ್ರತೆಯ ಕಾಳಜಿ ಇಲ್ಲದೆ ಇರುವದರಿಂದ ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿವೆ. ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಗೃಹ ಸಚಿವ ಜಿ. ಪರಮೆಶ್ವರ ರಾಜೀನಾಮೆ ನೀಡಬೇಕು ಎಂದು ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಬಿಜೆಪಿ ಮುಖಂಡ ಬಾಸ್ಕರ ರಾವ್ ಆಗ್ರಹಿಸಿದರು.

ನಗರದ ಪ್ರವಾಸಿ ಮಂದರಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿನ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ರಾಜ್ಯ ಸರಕಾರ ಮಾಡಬೇಕಾದ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ. ಇತ್ತೀಚಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎನ್‌ಐಎ ದಾಳಿ ನಡೆಯಿತು. ದಾಳಿ ಸಂದರ್ಭದಲ್ಲಿ ಜೈಲಿನಲ್ಲಿ ಕೆಲಸ ಮಾಡುವ ಮನೋವೈದ್ಯ, ಎಎಸ್‌ಐ ಹಾಗೂ ಭಯೋತ್ಪಾದಕನ ತಾಯಿಯನ್ನು ಎನ್‌ಐಎ ವಶಕ್ಕೆ ಪಡೆದಿದೆ. ಇದೆಲ್ಲ ತಂತ್ರಜ್ಞಾನದ ಆಧಾರದ ಮೇಲೆ ನಡೆದ ತನಿಖೆಯೇ ಹೊರತು ಎದುರು ಕೂತು ಮಾಡಿದ ತನಿಖೆಯಲ್ಲ ಎಂದು ಹೇಳಿದರು.

ಸರಕಾರಿ ಅಧಿಕಾರಿ ದೇಶವಿರೋಧಿ ಕೃತ್ಯದಲ್ಲಿ ಭಾಗಿಯಾದವರಿಗೆ ಮೊಬೈಲ್ ಕೊಟ್ಟಿದ್ದಾನೆ. ಪೊಲೀಸ್ ಅಧಿಕಾರಿಯೂ ಭಯೋತ್ಪಾದಕರಿಗೆ ಸಿಮ್‌ಕಾರ್ಡ್ ಕೊಟ್ಟಿದ್ದಾನೆ. ಸತೀಶಗೌಡ ಎನ್ನುವನು ದೇಶವಿರೋಧಿ ಚಟುವಟಿಯಲ್ಲಿ ಭಾಗಿಯಾಗಿದ್ದಾನೆ. ಇದೆಲ್ಲ ಕರ್ನಾಟಕ ಆಂತರಿಕ ಭದ್ರತಾ ಇಲಾಖೆಗೆ ತಿಳಿಯದಿರುವುದು ಖೇದಕರ ಸಂಗತಿ ಎಂದರು.

ಆಂತರಿಕ ಭದ್ರತೆ ಬಗ್ಗೆ ಯಾವ ರೀತಿ ಕೆಲಸ ಮಾಡಬೇಕು ಎಂದು ಸರಕಾರ ಸೂಚನೆ ಕೊಡಬೇಕು. ಸಚಿವ ಪರಮೇಶ್ವರ ಹಾಗೂ ಸಿಎಂ ಅವರಿಗೆ ಜೈಲಿನ ಮೇಲೆ ಅಷ್ಟೊಂದು ಸಹಾನುಭೂತಿ ಯಾಕೆ? ಜೈಲನ್ನು ಸ್ವಚ್ಛ ಮಾಡಬೇಕಿರುವುದು ಸರಕಾರದ ಕರ್ತವ್ಯ ಎಂದು ಹೇಳಿದರು.

ಸರಕಾರ ಸಿಮ್‌ಕಾರ್ಡ್ ಪಡೆಯುವದನ್ನು ಸಾಕಷ್ಟು ಸುಲಭ ಮಾಡಿದೆ. ಯಾರು ಬೇಕಾದರೂ ಆಧಾರ್ ಕಾರ್ಡ್ ತೆಗೆದುಕೊಂಡು ಸಿಮ್ ಪಡೆಯಬಹುದು. ಸಚಿವರು ಒಮ್ಮೆಯೂ ಈ ಬಗ್ಗೆ ಸಭೆ ನಡೆಸಿಲ್ಲ. ಇದರಿಂದ ಬಾಂಗ್ಲಾ ನುಸುಳುಕೋರರ ಸಂಖ್ಯೆ ಹೆಚ್ಚಾಗಿದೆ ಎಂದು ಆರೋಪಿಸಿದರು.

ಗೃಹ ಸಚಿವರು ಬೆಂಗಳೂರು ಸೇರಿದಂತೆ ಕರ್ನಾಟಕದ ಜನರ ಜೀವನದ ಜೊತೆ ಚೆಲ್ಲಾಟ ಆಡಬಾರದು. ಸೆಲ್‌ಫೋನ್, ಸಿಮ್, ಕೆವೈಸಿ ಬಗ್ಗೆ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಗೃಹ ಸಚಿವರು ರಾಜೀನಾಮೆ ಕೊಡಬೇಕು. ಈ ಗೃಹ ಸಚಿವರು ಇನ್ನಷ್ಟು ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಭಯೋತ್ಪಾದಕರಿಂದ ಬಾಂಬ್ ಸ್ಪೋಟಗೊಂಡರೂ ಅಚ್ಚರಿ ಪಡಬೇಕಾಗಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಎಂ.ಎಸ್. ಕರಿಗೌಡ್ರ, ಎಂ.ಎಂ. ಹಿರೇಮಠ, ಲಿಂಗರಾಜ ಪಾಟೀಲ, ರಮೇಶ ಸಜ್ಜಗಾರ ಇದ್ದರು.

ಕರ್ನಾಟಕದಲ್ಲಿ ಆಂತರಿಕ ಭದ್ರತೆಗೆ ಧಕ್ಕೆ ಬರುವ ಘಟನೆ ನಡೆದಿದ್ದರೂ ಸಲಹೆ-ಸೂಚನೆ ಕೊಡುವಲ್ಲಿ ಗೃಹ ಸಚಿವರು ವಿಫಲರಾಗಿದ್ದಾರೆ. ಈ ಬಗ್ಗೆ ಏನೇ ಕೇಳಿದರೂ ಗೃಹ ಸಚಿವರು ತಿಳಿದುಕೊಂಡು ಹೇಳುತ್ತೇನೆ ಎಂದು ಉಡಾಫೆಯಿಂದ ತಳ್ಳಿಹಾಕುತ್ತಾರೆ. ತುಷ್ಟೀಕರಣ ನೀತಿಯಿಂದಾಗಿ ಕಾನೂನು ಸುವ್ಯಸ್ಥೆ ಮೇಲೆ ಪರಿಣಾಮ ಬೀರುತ್ತಿದೆ. ಜೈಲಿನಲ್ಲಿ ಕಾನೂನುಬಾಹಿರ ಚಟುವಟಕೆಗಳು ನಡೆದಿದ್ದರಿಂದ ಗೃಹ ಸಚಿವರು ಜೈಲಿಗೆ ಭೇಟಿ ಕೊಟ್ಟು ಯಾರೋ ಕಿರಿಯ ಅಧಿಕಾರಿಯನ್ನು ಸಸ್ಪೆಂಡ್ ಮಾಡಿದರು ಎಂದು ಭಾಸ್ಕರ್ ರಾವ್ ಹೇಳಿದರು.

 ಸ್ವಚ್ಛ ಭಾರತ ಅಭಿಯಾನಕ್ಕೆ ಮಹಿಳೆಯರ ಸಾರಥ್ಯ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಗ್ರಾಮದಲ್ಲಿನ ಕಸ ಸಾಗಣೆ ವಾಹನ ಚಾಲನೆಗೆ ಮಹಿಳೆಯರು ಸಾರಥ್ಯ ವಹಿಸಿರುವುದು ಹೆಮ್ಮೆಯ ಸಂಗತಿ ಎಂದು ತಾಲೂಕು ಪಂಚಾಯಿತಿ ನೋಡಲ್ ಅಧಿಕಾರಿ ಎಂ.ವಿ. ಚಳಗೇರಿ ಹೇಳಿದರು.

ಸಮೀಪದ ಅಡರಕಟ್ಟಿ ಗ್ರಾಮದಲ್ಲಿ ಗುರುವಾರ ಮಹಿಳಾ ಚಾಲಕರಿಗೆ ಕಸ ಸಾಗಾಣಿಕೆ ವಾಹನದ ಕೀಲಿ ನೀಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಲಕ್ಷ್ಮೇಶ್ವರ ತಾಲೂಕಿನಲ್ಲಿ 8 ಗ್ರಾಮದ ಕಸ ಸಾಗಾಣಿಕೆ ವಾಹನಗಳಿಗೆ ಮಹಿಳೆಯರೇ ಚಾಲಕರಾಗಿ ಕಾರ್ಯ ನಿರ್ವಹಿಸುವ ಮೂಲಕ ಮಹಿಳೆಯರ ಸ್ವಾವಲಂಬಿ ಬದುಕಿಗೆ ಪ್ರೇರಣೆಯಾಗಿದ್ದಾರೆ. ಗ್ರಾಮದ ಪ್ರತಿ ಮನೆಯಿಂದ ಒಣ ಕಸ/ ಹಸಿ ಕಸ ಪ್ರತ್ಯೇಕವಾಗಿ ಸಂಗ್ರಹ ಮಾಡಿ ಕಸ ವಿಲೇವಾರಿ ಘಟಕಕ್ಕೆ ಸಾಗಾಣಿಕೆ ಮಾಡುವ ಮೂಲಕ ಗ್ರಾಮದ ಸ್ವಚ್ಛತೆಗೆ ಶ್ರಮಿಸುತ್ತಿದ್ದಾರೆ. ಕಸ ವಿಲೇವಾರಿ ವಾಹನ ಚಾಲನೆ ಮಾಡುವ ಮಹಿಳೆಯರಿಗೆ ತರಬೇತಿ ಹಾಗೂ ಚಾಲನಾ ಪ್ರಮಾಣ ಪತ್ರ ನೀಡಿ ಅವರ ಸ್ವಾವಲಂಬಿ ಜೀವನಕ್ಕೆ ಅಣಿಯಾಗಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.

ಈ ವೇಳೆ ಗ್ರಾ.ಪಂ ಅಧ್ಯಕ್ಷೆ ಪ್ರೇಮಕ್ಕ ಲಮಾಣಿ, ಉಪಾಧ್ಯಕ್ಷೆ ಕಾಶವ್ವ ದೊಡ್ಡಮನಿ, ನಿಂಗಪ್ಪ ಪ್ಯಾಟಿ, ಗಣೇಶ ನಾಯ್ಕ, ಸೋಮಣ್ಣ ಹವಳದ, ಕಮಲವ್ವ ಲಮಾಣಿ, ಹರೀಶ್ ಲಮಾಣಿ, ಪಿಡಿಓ ಸವಿತಾ ಸೋಮಣ್ಣನವರ, ಕಾರ್ಯದರ್ಶಿ ಎಸ್.ಕೆ. ಡಂಬಳ, ಕಸ ವಿಲೇವಾರಿ ವಾಹನದ ಚಾಲಕಿ ಮಂಜುಳಾ ಹರಿಜನ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

ತಾ.ಪಂ ಇಓ ಕೃಷ್ಣಪ್ಪ ಧರ್ಮರ ಮಾತನಾಡಿ, ಗ್ರಾಮೀಣ ಭಾಗದ ಜನರು ಕಸವನ್ನು ಎಲ್ಲೆಂದರಲ್ಲಿ ಚೆಲ್ಲಿ ಪರಿಸರ ಹಾಳು ಮಾಡುವ ಬದಲು ನಿಮ್ಮ ಬಾಗಿಲಿಗೆ ಬರುವ ಕಸ ವಿಲೇವಾರಿ ವಾಹನಗಳಿಗೆ ಕಸ ಹಾಕುವ ಕಾರ್ಯ ಮಾಡಬೇಕು. ಇಂತಹ ಕಸ ಸಾಗಿಸುವ ವಾಹನದ ಚಾಲನೆಯನ್ನು ಮಹಿಳೆಯರು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಶ್ರೀ ಚನ್ನವೀರ ಶರಣರ ಪುಣ್ಯ ಸ್ಮರಣೋತ್ಸವ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಸುಕ್ಷೇತ್ರ ಬಳಗಾನೂರಿನ ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರ 30ನೇ ಪುಣ್ಯ ಸ್ಮರಣೋತ್ಸವ ಜುಲೈ 13ರಂದು ರವಿವಾರ ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಆನಂದರಾವ ಸರ್ಕಲ್‌ನ ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಸಮಸ್ತ ಶ್ರೀ ಶರಣರ ಬಳಗ ಬೆಂಗಳೂರು ಅವರ ಸಹಯೋಗದಲ್ಲಿ ಜರುಗುವುದು.

ಸುಕ್ಷೇತ್ರ ಬಳಗಾನೂರಿನ ಪರಮಪೂಜ್ಯ ಶ್ರೀ ಶಿವಶಾಂತವೀರ ಶರಣರು ಪಾವನ ಸನ್ನಿಧಾನ ವಹಿಸುವರು. ಬೆಂಗಳೂರಿನ ಉಚ್ಛ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾದ ವಿ. ಶ್ರೀಶಾನಂದ ಅವರು ಸಮಾರಂಭವನ್ನು ಉದ್ಘಾಟಿಸುವರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಇಳಕಲ್ಲನ ಡಾ. ಶಂಭು ಬಳಿಗಾರ ವಿಶೇಷ ಉಪನ್ಯಾಸ ನೀಡುವರು.

ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ರಾಜ್ಯಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತರಾದ ಕನಕಗಿರಿಯ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ವಿಜಯಕುಮಾರ ಮರಿಯಪ್ಪ ಭತ್ತದ ಶಿವಮೊಗ್ಗ ಇವರಿಗೆ ಗೌರವ ಸಮ್ಮಾನ ಜರುಗುವುದು. ಸ್ವಾಗತ ಸಮಿತಿಯ ಗೌರವಾಧ್ಯಕ್ಷ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಗೌರವ ಉಪಾಧ್ಯಕ್ಷ, ಕೇಂದ್ರ ಮಾಜಿ ಸಚಿವ ಬಸವರಾಜ ಪಾಟೀಲ ಅನ್ವರಿ, ವಿಧಾನಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಬಿ.ಎಂ. ಭತ್ತದ ಹಾಗೂ ಸಮಸ್ತ ಶರಣ ಬಳಗದ ಸರ್ವ ಪದಾಧಿಕಾರಿಗಳು ಉಪಸ್ಥಿತರಿರುವರು.

ಬೆಂಗಳೂರಿನ ವೆ.ಚಿ. ಅರುಣಕುಮಾರ ಹಾಗೂ ಕಲಾತಂಡದವರಿಂದ ಭಕ್ತಿ ಸಂಗೀತ ಜರುಗುವುದು. ಬೆಂಗಳೂರಿನ ಜಯಶರಣ ಸಲ್ಯೂಷನ್ಸ್ನ ಅನ್ನದಾನಿ ಹಿರೇಮಠ ಅವರಿಂದ ಪ್ರಸಾದದ ಭಕ್ತಿ ಸೇವೆ ಜರುಗುವುದು ಎಂದು ಪ್ರಕಟಣೆ ತಿಳಿಸಿದೆ.

ಹೂವಿನಶಿಗ್ಲಿ ಮಠದಲ್ಲಿ ಗುರು ಪೂರ್ಣಿಮೆ ಆಚರಣೆ

0

ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಸಮೀಪದ ಹೂವಿನಶಿಗ್ಲಿ ಮಠದಲ್ಲಿ ಗುರುಕುಲದ ವಿದ್ಯಾರ್ಥಿಗಳು ಶ್ರೀಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳ ಪಾದಪೂಜೆ ಮಾಡುವ ಮೂಲಕ ಗುರು ಪೂರ್ಣಿಮೆ ಆಚರಿಸಿದರು. ಈ ವೇಳೆ ಶ್ರೀಗಳು ಶಿಷ್ಯಂದಿರಿಗೆ ಶುಭಾಶೀರ್ವಾದ ಸಂದೇಶಗೈದರು.

ಸಂಗೀತದಿಂದ ಮನಸ್ಸಿಗೆ ನೆಮ್ಮದಿ

0

ವಿಜಯಸಾಕ್ಷಿ ಸುದ್ದಿ, ಗದಗ: ಸಂಗೀತ ಆಲಿಸುವುದರಿಂದ ಮನಸ್ಸಿಗೆ ಸಮಾಧಾನ, ನೆಮ್ಮದಿ ಸಿಗುತ್ತದೆ. ಮನುಷ್ಯನಿಗೆ ಇಂದು ಬೇಕಾಗಿರುವುದು ಕೂಡ ಅದೇ ಆಗಿದೆ ಎಂದು ಅರಳಹಳ್ಳಿಯ ಗವಿಶಿದ್ದಯ್ಯ ಸ್ವಾಮಿಗಳು ಹೇಳಿದರು.

ಅವರು ತಾಲೂಕಿನ ಹರ್ಲಾಪೂರ ಗ್ರಾಮದ ಶ್ರೀ ಗುರು ಬಸವಾನಂದ ಸಾಂಸ್ಕೃತಿಕ ಸೇವಾ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಗಾನ ಲಹರಿ ಸಂಗಿತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಾನವ ಎಲ್ಲದರಲ್ಲೂ ಮುಂದೆ ಇದ್ದಾನೆ. ಆದರೆ ಮನಸ್ಸಿಗೆ ನೆಮ್ಮದಿ ಪಡೆಯುವಲ್ಲಿ ಹಿಂದೆ ಇದ್ದಾನೆ. ಜೀವವನ್ನು ಕೊಡುವ ಶಕ್ತಿ ಜೀವನಪುರಿ ರಾಗಕ್ಕೆ ಇದ್ದರೆ, ಮೇಘ ಮಲಾರ ರಾಗಕ್ಕೆ ಮಳೆ ತರಿಸುವ ಶಕ್ತಿ ಇದೆ. ಸಂಗೀತಕ್ಕೆ ಸೋಲದೆ ಇರುವ ಮನಸ್ಸುಗಳು ಇಲ್ಲ. ಸೋಲದಿದ್ದರೆ ಅವು ಮನಸ್ಸುಗಳೇ ಅಲ್ಲ ಎಂದು ಆಶೀರ್ವಚನ ನೀಡಿದರು.

ಶರಯ್ಯಸ್ವಾಮಿ ವಕೀಲರು ಕಾರ್ಯಕ್ರಮ ಉದ್ಘಾಟಿಸಿದರು. ಫಕ್ಕಿರಪ್ಪ ತಳವಾರ, ಗ್ರಾ.ಪಂ ಮಾಜಿ ಅಧ್ಯಕ್ಷ ಶರಣಪ್ಪ ತೋಟದ, ಶರಣಪ್ಪ ಸರಗಣಾಚಾರ್ಯ, ಫಕ್ಕಿರಯ್ಯಸ್ವಾಮಿ ಹರ್ತಿಮಠ ಮುಂತಾದವರು ಉಪಸ್ಥಿತರಿದ್ದರು. ಬಸವರಾಜ ವಂದಿಸಿದರು.

ಉತ್ತಮ ಶಿಕ್ಷಕರು ವಿದ್ಯಾರ್ಥಿಗಳ ಬದುಕಿನ ದಾರಿದೀಪ

ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಕರ ಬದುಕು ಆದರ್ಶಮಯವಾಗಿದ್ದು, ಉತ್ತಮ ಶಿಕ್ಷಕರು ವಿದ್ಯಾರ್ಥಿಗಳ ಬದುಕಿನ ದಾರಿದೀಪವಾಗಿ ತಾವು ಎಂದೆಂದಿಗೂ ಗೌರವ ಪಡೆಯುವವರು. ಬಿ.ಜಿ. ಅಣ್ಣಿಗೇರಿ ಗುರುಗಳ ಶಿಷ್ಯ ಬಳಗವು ಉತ್ತಮ ಕಾರ್ಯಕ್ಕೆ ಅಡಿ ಇಟ್ಟಿದ್ದು, ಇದು ನಿರಂತರವಾಗಿ ಜನಮಾನಸದಲ್ಲಿ ಉಳಿಯುತ್ತದೆ ಎಂದು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವ್ಹಿ. ಶೆಟ್ಟೆಪ್ಪನವರ ಹೇಳಿದರು.

ಅವರು ಬುಧವಾರ ಗದುಗಿನ ರಾಜೀವ ಗಾಂಧಿ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದಿಂದ ಎಸ್.ಎಸ್.ಎಲ್.ಸಿಯಲ್ಲಿ ಮೊದಲ 5 ಸ್ಥಾನಗಳನ್ನು ಪಡೆದುಕೊಂಡ ಗದಗ ತಾಲೂಕಿನ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.

ಉತ್ತಮ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಆತ್ಮೀಯತೆ ಹೊಂದಿ ವಿವಿಧ ಬೋಧನಾ ಕೌಶಲ್ಯಗಳನ್ನು ಅಳವಡಿಸಿಕೊಂಡು ಮಕ್ಕಳ ಕಲಿಕೆಯನ್ನು ಅಭಿವೃದ್ಧಿಗೊಳಿಸುತ್ತಾರೆ. ಇಂದು ಪುರಸ್ಕಾರ ಪಡೆದ ಮಕ್ಕಳು ಪ್ರತಿಭಾನ್ವಿತರಾಗಲು ನಮ್ಮ ಶಿಕ್ಷಕ ಬಳಗ ಹಾಗೂ ಕುಟುಂಬವೂ ಸಹ ಕಾರಣವಾಗಿದೆ ಎಂದರಲ್ಲದೆ, ಮಕ್ಕಳ ಪ್ರತಿಭೆಗೆ ಪುರಸ್ಕಾರ ನೀಡಿ ಪ್ರೋತ್ಸಾಹಿಸುತ್ತಿರುವ ಪ್ರತಿಷ್ಠಾನವನ್ನು ಅಭಿನಂದಿಸಿದರು.

ಇನ್ನೋರ್ವ ಮುಖ್ಯ ಅತಿಥಿ, ಡಾ.ರಾಜಶೇಖರ ಪವಾಡಶೆಟ್ಟರ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಿಕ್ಕ ಅವಕಾಶಗಳನ್ನು, ಕೌಶಲ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಸಂಸ್ಕೃತಿ ಸಂಸ್ಕಾರಗಳನ್ನು ಅಳವಡಿಸಿಕೊಂಡು ಪ್ರಾಮಾಣಿಕತೆಯಿಂದ ಪ್ರಯತ್ನಶೀಲರಾಗಿ ಅಭ್ಯಾಸ ಮಾಡಬೇಕು. ದುಶ್ಚಟಗಳನ್ನು ದೂರವಿಟ್ಟು ನಿರಂತರ ಅಭ್ಯಾಸ ಮಾಡಿ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದರು.

ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಸರಸ್ವತಿ ವಿಭೂತಿ, ಅಣ್ಣಕ್ಕ ವಿಭೂತಿ, ಮಂಜುಳಾ ಹಡಪದ, ದರ್ಶನ ತಳಗಡೆ, ಯಶೋಧಾ ಢಕ್ಕಣ್ಣವರ ಅವರಿಗೆ ನಗದು ಪುರಸ್ಕಾರದ ಚೆಕ್, ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಅಧ್ಯಕ್ಷತೆಯನ್ನು ಎಸ್.ಬಿ. ಬಾಗೇವಾಡಿ ವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಪಾಟೀಲ ಬಿ.ಜಿ. ಅಣ್ಣಿಗೇರಿ ಅವರ ಬದುಕು, ಸೇವೆಯನ್ನು ಬಣ್ಣಿಸಿ ಪ್ರತಿಷ್ಠಾನದ ಕಾರ್ಯವೈಖರಿಯನ್ನು ವಿವರಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಸುಭಾಶ್ಚಂದ್ರ ಬೆಟ್ಟದೂರ, ಸಂಯೋಜಕರಾದ ಭಾರತಿ ಶಿವಕುಮಾರ ಪಾಟೀಲ, ನೇಹಾ, ಸುಧಾರಾಣಿ, ಪ್ರಸನ್ ಮುಂತಾದವರಿದ್ದರು. ಎಲ್.ಬಿ. ಕಾಲವಾಡ ಸ್ವಾಗತಿಸಿದರು. ವೈ.ಎಸ್. ಬಮ್ಮನಾಳ ನಿರೂಪಿಸಿದರು. ಕೊನೆಗೆ ವಿಜಯಲಕ್ಷ್ಮೀ ಚೂರಿ ವಂದಿಸಿದರು.

ಎಸ್‌ಎಂಕೆ ನಗರದಲ್ಲಿ: ಗದುಗಿನ ಎಸ್.ಎಂ. ಕೃಷ್ಣಾ ನಗರದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ವರ್ಷಾ ಗುಂಜಾಳ, ನಾಜೀಯಾ ಅಂಗಡಿ, ಜಗದೀಶ ಭಜಂತ್ರಿ, ವಿಜಯಲಕ್ಷ್ಮೀ ಸುಣಗಾರ, ಕಾರ್ತಿಕ ಮುನವಳ್ಳಿ ಅವರಿಗೆ ನಗದು ಪುರಸ್ಕಾರದ ಚೆಕ್, ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಎಸ್.ಸಿ. ನಾಗರಳ್ಳಿ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಡಾ. ಆರ್.ಟಿ. ಪವಾಡಶೆಟ್ಟರ ಆಗಮಿಸಿದ್ದರು. ವೇದಿಕೆಯಲ್ಲಿ ಪ್ರತಿಷ್ಠಾನದ ಪದಾಧಿಕಾರಿಗಳಿದ್ದರು. ಎಸ್.ಎಸ್. ಗೌಡರ ಸ್ವಾಗತಿಸಿ ವಂದಿಸಿದರು.

ಗಾಂಧಿ ನಗರದಲ್ಲಿ: ಬೆಟಗೇರಿಯ ಗಾಂಧಿ ನಗರದ ಸರ್ಕಾರಿ ಪ್ರೌಢಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಪ್ರಿಯಾಂಕ ಜೋಗಿ, ವರುಣಕುಮಾರ ಹೊಟ್ಟಿ, ಪರಶುರಾಮ ಸಕ್ರಗೌಡ ಅವರಿಗೆ ನಗದು ಪುರಸ್ಕಾರದ ಚೆಕ್, ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಎಂ.ಶಾರದಾ ವಹಿಸಿದ್ದರು. ವೇದಿಕೆಯಲ್ಲಿ ಪ್ರತಿಷ್ಠಾನದ ಪದಾಧಿಕಾರಿಗಳಿದ್ದರು. ಜ್ಯೋತಿ ಅಂಗಡಿ ನಿರೂಪಿಸಿದರು. ಶಾಲಿನಿ ಮೇರವಾಡೆ ವಂದಿಸಿದರು.

ಗುರುಗಳಿಗೆ ಗೌರವ ನಮನ, ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ 1988-1989ನೇ ಸಾಲಿನ ವಿದ್ಯಾರ್ಥಿಗಳಿಂದ ಗುರು ಪೌರ್ಣಿಮೆ ಅಂಗವಾಗಿ ಗುರುಗಳಿಗೆ ಗೌರವ ಸಮರ್ಪಣೆ, ಸನ್ಮಾನ ಕಾರ್ಯಕ್ರಮ ಜರುಗಿತು.

ಗುರುಗಳಾದ ಎಸ್.ಬಿ. ಇನಾಮತಿ, ಜಿ.ಪಿ. ದೇಶಪಾಂಡೆ, ಡಿ.ಎಂ. ಬಂಡಿ, ಆರ್.ಎಚ್. ಬಂಡಿ, ಕೆ.ಎಸ್. ಪಾಟೀಲ, ಪಿ.ವ್ಹಿ. ಶೇಷಗಿರಿ ಎ.ಎಂ. ಬದಾಮಿ ಇವರುಗಳ ಮನೆಗೆ ತೆರಳಿ ಸನ್ಮಾನಿಸಿದರೆ, ಕೆ.ಎನ್. ಪಾಪಳೆ ಅವರನ್ನು ನಿವೃತ್ತಿಯ ನಿಮಿತ್ತ ಸನ್ಮಾನಿಸಲಾಯಿತು.

ಈ ಸಂರ್ಭದಲ್ಲಿ ಶೈನಾಜ್ ಅಣ್ಣಿಗೇರಿ, ಮಧು ಜನಗೌಡ್ರ, ಮಹಾದೇವಿ ಚಳ್ಳಣ್ಣವರ, ಶೋಭಾ ಹಿಡ್ಕಿಮಠ, ಬಸವರಾಜ ಹೂಗಾರ, ಚನ್ನು ನಾಗಾವಿ, ಗೊಣೆಪ್ಪ ಉಮ್ಮಣ್ಣವರ, ಜೆ.ಡಿ. ಕುಕನೂರ, ಸಿದ್ದು ಹುಬ್ಬಳ್ಳಿ, ಶ್ರೀನಿವಾಸ ವಲ್ಲೂರು, ಉಮೇಶ ಸಜ್ಜನ, ಶ್ರೀಧರ್ ಅಧೋನಿ, ಮಹಮ್ಮದ್ ರಫೀಕ ಕಾಗದಗಾರ ಮುಂತಾದವರು ಉಪಸ್ಥಿತರಿದ್ದರು.

error: Content is protected !!