Home Blog Page 10

ಗಾಂಧೀಜಿ, ಪಟೇಲ್, ನೆಹರೂ, ಬೋಸ್ʼಗಿಂತ ಬಿಜೆಪಿಯವರು ದೊಡ್ಡವರೇ? ಪ್ರಿಯಾಂಕ್ ಖರ್ಗೆ ಕಿಡಿ

0

ಬೆಂಗಳೂರು: ವಂದೇ ಮಾತರಂ ಗಾಯನ ಹಾಗೂ ಭಾರತದ ವಿದೇಶಾಂಗ ನೀತಿಯ ವಿಚಾರವಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕ ಸರ್ಕಾರದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡಲು ನಿರ್ಧರಿಸಿರುವುದರ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, 1937ರಲ್ಲೇ ಸರ್ದಾರ್ ವಲ್ಲಭಭಾಯಿ ಪಟೇಲ್, ಜವಾಹರಲಾಲ್ ನೆಹರೂ, ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್ ಹಾಗೂ ರವೀಂದ್ರನಾಥ ಟ್ಯಾಗೋರ್ ಸೇರಿದಂತೆ ಎಂಟು ರಾಷ್ಟ್ರನಾಯಕರು ಸಭೆ ಸೇರಿ ಎರಡು ಚರಣಗಳನ್ನು ಹಾಡುವ ನಿರ್ಧಾರ ಕೈಗೊಂಡಿದ್ದರು ಎಂದು ಹೇಳಿದರು.

ಆ ಕಾಲದ ರಾಷ್ಟ್ರನಾಯಕರ ನಿರ್ಧಾರಕ್ಕಿಂತ ಬಿಜೆಪಿಯವರು ದೊಡ್ಡವರೇ ಎಂದು ಪ್ರಶ್ನಿಸಿದ ಅವರು, ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಹಾಗೂ ಅದಕ್ಕೂ ಮೊದಲು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಸರ್ಕಾರವಿದ್ದಾಗ ಈ ನಿಯಮವನ್ನು ಬದಲಾಯಿಸಲು ಏಕೆ ಮುಂದಾಗಲಿಲ್ಲ ಎಂದು ಪ್ರಶ್ನಿಸಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಕೊಡುಗೆ ಶೂನ್ಯ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಬ್ರಿಟಿಷರ ವಿರುದ್ಧ ಸೇನೆ ಕಟ್ಟುತ್ತಿದ್ದ ಸಂದರ್ಭದಲ್ಲಿ ಆರ್‌ಎಸ್‌ಎಸ್ ಹಾಗೂ ಸಾವರ್ಕರ್ ಬ್ರಿಟಿಷ್ ಸೇನೆಗೆ ಜನರನ್ನು ಸೇರಿಸುತ್ತಿದ್ದರು ಎಂದು ಟೀಕಿಸಿದರು. ಬ್ರಿಟಿಷರಿಂದ ಪಿಂಚಣಿ ಪಡೆಯುತ್ತಿದ್ದವರಿಂದ ಇಂದು ದೇಶಭಕ್ತಿಯ ಪಾಠ ಕಲಿಯಬೇಕಾದ ಅಗತ್ಯವಿಲ್ಲ ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ಬ್ರಿಕ್ಸ್ ಶೃಂಗಸಭೆ ಹಾಗೂ ಚೀನಾ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯನ್ನೂ ಪ್ರಿಯಾಂಕ್ ಖರ್ಗೆ ತರಾಟೆಗೆ ತೆಗೆದುಕೊಂಡರು. ಮೋದಿ ಅವರು ಈ ಹಿಂದೆ ಚೀನಾ ಅಧ್ಯಕ್ಷರೊಂದಿಗೆ ಗುಜರಾತ್‌ನಲ್ಲಿ ಜೋಕಾಲಿ ಆಡಿದ್ದರು ಹಾಗೂ ಮಹಾಬಲಿಪುರಂನಲ್ಲಿ ಮಾತುಕತೆ ನಡೆಸಿದ್ದರು ಎಂದು ಉಲ್ಲೇಖಿಸಿದ ಅವರು, ಇದೀಗ ಚೀನಾ ಅರುಣಾಚಲ ಪ್ರದೇಶದ ಮೇಲೆ ಹಕ್ಕು ಸಾಧಿಸುತ್ತಿದೆ ಹಾಗೂ ಭಾರತದ ಗಡಿಯೊಳಗೆ ಗ್ರಾಮಗಳನ್ನು ನಿರ್ಮಿಸುತ್ತಿದೆ ಎಂದು ಆರೋಪಿಸಿದರು.

ಚೀನಾ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿದೇಶಾಂಗ ನೀತಿ ವಿಫಲವಾಗಿದೆ ಎಂದು ಟೀಕಿಸಿದ ಪ್ರಿಯಾಂಕ್ ಖರ್ಗೆ, ದೇಶದ ಗಡಿ ಹಾಗೂ ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಸರ್ಕಾರದ ನಿಲುವಿನ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು.

ಈರುಳ್ಳಿ ದರ ಏರಿಕೆ ನಡುವೆ ಗುಡ್‌ನ್ಯೂಸ್: ಹಾಫ್‌ರೇಟ್‌ನಲ್ಲಿ SALE!

0

ಬೆಂಗಳೂರು: ಈರುಳ್ಳಿ ದರ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಇದೀಗ ಗುಡ್‌ನ್ಯೂಸ್ ಸಿಕ್ಕಿದೆ.

ಮಾರುಕಟ್ಟೆಯಲ್ಲಿ ಕೆ.ಜಿಗೆ 65ರಿಂದ 75 ರೂಪಾಯಿವರೆಗೆ ಮಾರಾಟವಾಗುತ್ತಿದ್ದ ಈರುಳ್ಳಿ, ಬೆಂಗಳೂರಿನಲ್ಲಿ ಇದೀಗ ಕೇವಲ 35 ರೂಪಾಯಿಗೆ ಸಿಗುತ್ತಿದೆ.

ಕೇಂದ್ರ ಸರ್ಕಾರದ ನಾಫೆಡ್ ಮೂಲಕ ಬೆಂಗಳೂರಿಗೆ ಈರುಳ್ಳಿ ತರಲಾಗಿದ್ದು, ನಗರದ ವಿವಿಧ ಭಾಗಗಳಲ್ಲಿ ನಾಫೆಡ್ ವಾಹನಗಳ ಮೂಲಕ ಕೆ.ಜಿಗೆ 35 ರೂಪಾಯಿಯಂತೆ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ. ಅಗ್ಗದ ದರದಲ್ಲಿ ಈರುಳ್ಳಿ ಸಿಗುತ್ತಿರುವ ಹಿನ್ನೆಲೆಯಲ್ಲಿ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.

ಅಷ್ಟಕ್ಕೂ ನಾಫೆಡ್ ಎಂದರೇನು? ಈರುಳ್ಳಿ ಬೆಲೆ ನಿಯಂತ್ರಣದಲ್ಲಿ ನಾಫೆಡ್ ಪಾತ್ರವೇನು?

NAFED ಎಂದರೆ National Agricultural Cooperative Marketing Federation of India. ಇದು ರೈತರ ಹಿತಕ್ಕಾಗಿ ಕೆಲಸ ಮಾಡುವ ಸಹಕಾರಿ ಸಂಸ್ಥೆಯಾಗಿದ್ದು, ರೈತರಿಗೆ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುವಂತೆ ಮಾಡುವುದರ ಜೊತೆಗೆ ಗ್ರಾಹಕರಿಗೆ ಅಗತ್ಯ ವಸ್ತುಗಳು ನ್ಯಾಯಯುತ ದರದಲ್ಲಿ ಸಿಗುವಂತೆ ಕ್ರಮ ಕೈಗೊಳ್ಳುತ್ತದೆ.

ಮಾರುಕಟ್ಟೆಯಲ್ಲಿ ಈರುಳ್ಳಿ, ಆಲೂಗಡ್ಡೆ, ಧಾನ್ಯಗಳು ಹಾಗೂ ಎಣ್ಣೆಕಾಳುಗಳ ಬೆಲೆ ಕುಸಿದಾಗ ರೈತರಿಗೆ ಬೆಂಬಲ ನೀಡಲು ನಾಫೆಡ್ ಉತ್ಪನ್ನಗಳನ್ನು ಖರೀದಿಸುತ್ತದೆ.

ಇನ್ನು ಅಗತ್ಯ ವಸ್ತುಗಳ ಬೆಲೆ ಮಾರುಕಟ್ಟೆಯಲ್ಲಿ ಹೆಚ್ಚಾದಾಗ, ನಾಫೆಡ್ ಸಂಗ್ರಹಿಸಿಟ್ಟಿರುವ ದಾಸ್ತಾನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. ಇದರಿಂದ ಪೂರೈಕೆ ಹೆಚ್ಚಿಸಿ ಬೆಲೆ ನಿಯಂತ್ರಣಕ್ಕೆ ತರುವ ಪ್ರಯತ್ನ ಮಾಡಲಾಗುತ್ತದೆ.

ಸದ್ಯ ಈರುಳ್ಳಿ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ನಾಫೆಡ್‌ನಿಂದ ಬೆಂಗಳೂರಿಗೆ ಈರುಳ್ಳಿ ತರಿಸಿ, ಕೆ.ಜಿಗೆ 35 ರೂಪಾಯಿಯಂತೆ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ.

ಒಟ್ಟಾರೆ, ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಬೆಂಗಳೂರಿನ ಗ್ರಾಹಕರಿಗೆ ನಾಫೆಡ್ ಮೂಲಕ ಅಗ್ಗದ ದರದಲ್ಲಿ ಈರುಳ್ಳಿ ಸಿಗುತ್ತಿರುವುದು ಕೊಂಚ ನೆಮ್ಮದಿ ತಂದಿದೆ.

ತಿರುಪತಿಗೆ ತೆರಳುವ ಭಕ್ತರೇ ಗಮನಿಸಿ: ಸೆಪ್ಟೆಂಬರ್ 13 ರಂದು ವಿಐಪಿ ದರ್ಶನ ಸಂಪೂರ್ಣ ರದ್ದು!

0

ತಿರುಮಲ: ಸತತ ರಜೆ ಹಾಗೂ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಭಕ್ತರ ದಟ್ಟಣೆ ಗಣನೀಯವಾಗಿ ಹೆಚ್ಚಾಗಿದೆ. ವೈಕುಂಠಂ ಕ್ಯೂ ಕಾಂಪ್ಲೆಕ್ಸ್ ಸೇರಿದಂತೆ ಸರತಿ ಸಾಲುಗಳು ಭಕ್ತರಿಂದ ಕಿಕ್ಕಿರಿದು ತುಂಬಿವೆ.

ಭಕ್ತರ ದಟ್ಟಣೆ ನಿಯಂತ್ರಿಸಿ ಸಾಮಾನ್ಯ ಭಕ್ತರಿಗೆ ಶೀಘ್ರ ದರ್ಶನ ಕಲ್ಪಿಸುವ ಉದ್ದೇಶದಿಂದ ತಿರುಮಲ ತಿರುಪತಿ ದೇವಸ್ಥಾನಂ (TTD) ಮಹತ್ವದ ನಿರ್ಧಾರ ಕೈಗೊಂಡಿದೆ. ಸೆಪ್ಟೆಂಬರ್ 13ರಂದು ಸಂಪೂರ್ಣವಾಗಿ ವಿಐಪಿ ದರ್ಶನ ರದ್ದುಗೊಳಿಸಲಾಗಿದ್ದು, ಸೆಪ್ಟೆಂಬರ್ 12ರಂದು ಯಾವುದೇ ವಿಐಪಿ ಶಿಫಾರಸು ಪತ್ರಗಳನ್ನು ಸ್ವೀಕರಿಸದಿರಲು ತೀರ್ಮಾನಿಸಲಾಗಿದೆ.

ವಿಐಪಿ ದರ್ಶನದ ಸಮಯವನ್ನು ಸಾಮಾನ್ಯ ಭಕ್ತರಿಗೆ ಮೀಸಲಿಡಲಾಗಿದ್ದು, ಪ್ರಸ್ತುತ ಸರತಿ ಸಾಲಿನಲ್ಲಿರುವ ಭಕ್ತರಿಗೆ ಶ್ರೀವಾರಿಯ ದರ್ಶನ ಪಡೆಯಲು ಸುಮಾರು 24 ಗಂಟೆಗಳ ಸಮಯ ಬೇಕಾಗುತ್ತಿದೆ ಎಂದು ತಿಳಿಸಲಾಗಿದೆ.

ಇದರ ನಡುವೆಯೇ ಶ್ರೀವಾರಿ ಹುಂಡಿ ಕಾಣಿಕೆಯಲ್ಲೂ ದಾಖಲೆ ನಿರ್ಮಾಣವಾಗಿದೆ. ಬುಧವಾರ ಬೆಳಿಗ್ಗೆಯಿಂದ ಮಧ್ಯರಾತ್ರಿವರೆಗೆ ಬಂದ ಕಾಣಿಕೆಗಳ ಎಣಿಕೆಯಲ್ಲಿ ಬರೋಬ್ಬರಿ 6.93 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಟಿಟಿಡಿ ಇತಿಹಾಸದಲ್ಲಿ ಹುಂಡಿ ಆದಾಯ 6 ಕೋಟಿ ರೂಪಾಯಿ ದಾಟಿರುವುದು ಇದು ಮೂರನೇ ಬಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ತಿರುಮಲದಲ್ಲಿ ಸೆಪ್ಟೆಂಬರ್ 14ರಿಂದ ಶ್ರೀವಾರಿ ಸಾಲಕಟ್ಲ ಬ್ರಹ್ಮೋತ್ಸವಗಳು ಆರಂಭವಾಗಲಿದ್ದು, ಸೆಪ್ಟೆಂಬರ್ 15ರಿಂದ 23ರವರೆಗೆ ಅದ್ದೂರಿಯಾಗಿ ನಡೆಯಲಿವೆ. ಬ್ರಹ್ಮೋತ್ಸವದ ಒಂಬತ್ತು ದಿನಗಳ ಕಾಲ ಸಕಲ ವಿಶೇಷ ಸೇವೆಗಳು ಹಾಗೂ ವಿಶೇಷ ಪ್ರವೇಶ ದರ್ಶನಗಳನ್ನು ಟಿಟಿಡಿ ರದ್ದುಗೊಳಿಸಿದೆ.

ಇದೇ ಸಂದರ್ಭದಲ್ಲಿ ನವೀಕರಿಸಲಾದ ಆಧುನಿಕ ಎಸ್‌ವಿ ವಸ್ತುಸಂಗ್ರಹಾಲಯವನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಉದ್ಘಾಟಿಸಲಿದ್ದಾರೆ.

ಭಕ್ತರ ಹೆಚ್ಚಿನ ಸಂಖ್ಯೆಯ ಆಗಮನ ಹಿನ್ನೆಲೆಯಲ್ಲಿ ಟಿಟಿಡಿ ಕೈಗೊಂಡಿರುವ ಬದಲಾವಣೆಗಳು ಮತ್ತು ನಿಯಮಾವಳಿಗಳಿಗೆ ಸಹಕರಿಸುವಂತೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.

ಜಾಗದ ವಿಚಾರಕ್ಕೆ ವಕೀಲರ ಮೇಲೆ ಹಲ್ಲೆ! ಶೆಡ್ ಬಾಗಿಲು ಒಡೆದು ಮಾರಕಾಸ್ತ್ರಗಳಿಂದ ದಾಳಿ?

0

ಬೆಂಗಳೂರು: ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದ ಜಾಗದ ವಿಚಾರವಾಗಿ ವಕೀಲ ಪುಟ್ಟಭೈರೇಗೌಡ ಅವರ ಮೇಲೆ 30ರಿಂದ 40 ಮಂದಿ ಗುಂಪು ಕಟ್ಟಿಕೊಂಡು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ತಮ್ಮದೇ ಜಾಗದಲ್ಲಿ ಅಭಿವೃದ್ಧಿ ಕೆಲಸಕ್ಕಾಗಿ ನಿರ್ಮಿಸಲಾಗಿದ್ದ ಶೆಡ್ ಪರಿಶೀಲಿಸಲು ಪುಟ್ಟಭೈರೇಗೌಡ ತೆರಳಿದ್ದ ವೇಳೆ ಗುಂಪೊಂದು ಅವರನ್ನು ಸುತ್ತುವರೆದಿದೆ ಎನ್ನಲಾಗಿದೆ. ಈ ವೇಳೆ ಅವರು ಶೆಡ್‌ನೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಆದರೆ ಶೆಡ್‌ನ ಬಾಗಿಲು ಒಡೆದು ಅವರನ್ನು ಹೊರಗೆ ಎಳೆದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಸ್ಥಳೀಯ ಬಿಜೆಪಿ ಕಾರ್ಯಕರ್ತ ಅನಿಲ್ ಹಾಗೂ ಅವರ ಸಹಚರರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಹಿಳೆಯರನ್ನು ಮುಂದೆ ಬಿಟ್ಟು ಹಲ್ಲೆ ಮಾಡಿಸಲಾಗಿದೆ ಹಾಗೂ ಆದಷ್ಟು ಬೇಗ ಜಾಗ ಖಾಲಿ ಮಾಡುವಂತೆ ಬೆದರಿಕೆ ಹಾಕಲಾಗಿದೆ ಎಂದು ದೂರಲಾಗಿದೆ.

ಇನ್ನು ಜಾಗದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ಕೆಲಸ ಮಾಡುತ್ತಿರಲಿಲ್ಲ ಎನ್ನಲಾಗಿದ್ದು, ಅಭಿವೃದ್ಧಿ ಕೆಲಸಕ್ಕಾಗಿ ಶೆಡ್ ನಿರ್ಮಿಸಲಾಗಿತ್ತು ಎಂದು ತಿಳಿದುಬಂದಿದೆ.

ಈ ಸಂಬಂಧ ಪುಟ್ಟಭೈರೇಗೌಡ ಅವರ ಸ್ನೇಹಿತ ಹುಳಿಮಾವು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಿವಿಲ್ ವ್ಯಾಜ್ಯದ ಜಾಗದ ವಿಚಾರವೇ ಹಲ್ಲೆಗೆ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಟೀ ಕಪ್‌ ಕಸದ ಬುಟ್ಟಿಗೆ ಹಾಕುವಂತೆ ಹೇಳಿದ್ದಕ್ಕೆ ಪೌರಕಾರ್ಮಿಕನ ಮೇಲೆ ಕಲ್ಲು ಎಸೆದ ಯುವತಿ!

0

ಬೆಂಗಳೂರು: ನಗರದ ಪಟ್ಟಂದೂರು ಅಗ್ರಹಾರ ಮುಖ್ಯ ರಸ್ತೆಯಲ್ಲಿ ಪೌರಕಾರ್ಮಿಕನ ಮೇಲೆ ಯುವತಿಯೊಬ್ಬಳು ಕಲ್ಲು ಎಸೆದಿರುವ ಘಟನೆ ನಡೆದಿದೆ.

ಕೇರಳ ಮೂಲದ ವೈದೇಹಿ ಎಂಬ ಯುವತಿ ತನ್ನ ಗೆಳೆಯನೊಂದಿಗೆ ರಸ್ತೆ ಬದಿಯಲ್ಲಿ ಟೀ ಕುಡಿಯುತ್ತಿದ್ದರು. ಈ ವೇಳೆ ಟೀ ಕುಡಿದ ಕಪ್‌ ಅನ್ನು ರಸ್ತೆ ಬದಿಗೆ ಎಸೆಯದೆ, ಕಸದ ಬುಟ್ಟಿಗೆ ಹಾಕುವಂತೆ ಪೌರಕಾರ್ಮಿಕರು ಸೂಚಿಸಿದ್ದಾರೆ ಎನ್ನಲಾಗಿದೆ.

ಇದರಿಂದ ಆಕ್ರೋಶಗೊಂಡ ಯುವತಿ ಪೌರಕಾರ್ಮಿಕನ ಮೇಲೆ ಕಲ್ಲು ಎಸೆದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ ಹಾಗೂ ಕೈ ಸನ್ನೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.

ಘಟನೆ ವೇಳೆ ಯುವತಿ ನಶೆಯಲ್ಲಿದ್ದಳು ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಈ ಸಂಬಂಧ ಪೌರಕಾರ್ಮಿಕ ನೀಡಿದ ದೂರಿನ ಮೇರೆಗೆ ವೈಟ್‌ಫೀಲ್ಡ್‌ ಪೊಲೀಸರು ಯುವಕ ಹಾಗೂ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದು, ತನಿಖೆಯ ಬಳಿಕ ಹೆಚ್ಚಿನ ವಿವರಗಳು ತಿಳಿದುಬರಬೇಕಿದೆ.

ಚಾಮರಾಜನಗರದಲ್ಲಿ ತಡರಾತ್ರಿ ಭೀಕರ ಅಪಘಾತ; ಮೂವರು ದುರ್ಮರಣ!

0

ಚಾಮರಾಜನಗರ: ಹನೂರು ತಾಲೂಕಿನ ಆರ್.ಎಸ್. ದೊಡ್ಡಿ ಸಮೀಪ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಅಪಘಾತದಲ್ಲಿ ಹನೂರು ತಾಲೂಕಿನ ಕೊಪ್ಪ ಗ್ರಾಮದ ನಿವಾಸಿಗಳಾದ ರಮೇಶ್, ಸುರೇಶ್ ಹಾಗೂ ಮುನಿಯಪ್ಪ ಮೃತಪಟ್ಟಿದ್ದಾರೆ. ತಡರಾತ್ರಿ ನಡೆದ ಅಪಘಾತದ ತೀವ್ರತೆಗೆ ಮೂವರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಕುರಿತು ಮಾಹಿತಿ ದೊರೆತ ಕೂಡಲೇ ಹನೂರು ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ಕಾರಣ ಹಾಗೂ ಘಟನೆಯ ಸಂಪೂರ್ಣ ವಿವರಗಳ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದು, ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದುಬರಬೇಕಿದೆ.

ಟ್ಯಾಕ್ಸಿ-ಟ್ರಕ್ ನಡುವೆ ಅಪಘಾತ: 6 ಮಂದಿ ಸಾವು, 8 ಜನರಿಗೆ ಗಂಭೀರ ಗಾಯ!

0

ಮುಂಬೈ: ಮಹಾರಾಷ್ಟ್ರದ ನಾಂದೇಡ್-ಭೋಕರ್ ಹೆದ್ದಾರಿಯಲ್ಲಿ ಟ್ಯಾಕ್ಸಿ ಮತ್ತು ಟ್ರಕ್ ನಡುವೆ ಅಪಘಾತ ಸಂಭವಿಸಿದ್ದು, ಆರು ಮಂದಿ ಮೃತಪಟ್ಟಿದ್ದಾರೆ. ಎಂಟು ಜನರಿಗೆ ಗಂಭೀರ ಗಾಯಗಳಾಗಿವೆ.

ನಾಂದೇಡ್‌ನಿಂದ ಭೋಕರ್ ಕಡೆಗೆ ಟಾಟಾ ಮ್ಯಾಜಿಕ್ ವಾಹನ ತೆರಳುತ್ತಿದ್ದ ವೇಳೆ ರಾತ್ರಿ 8 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಕ್‌ಗೆ ಟಾಟಾ ಮ್ಯಾಜಿಕ್ ವಾಹನ ಡಿಕ್ಕಿ ಹೊಡೆದ ಪರಿಣಾಮ ವಾಹನ ಸಂಪೂರ್ಣವಾಗಿ ಹಾನಿಗೊಂಡಿದೆ.

ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಎಂಟು ಮಂದಿಯನ್ನು ನಾಂದೇಡ್ ಹಾಗೂ ಭೋಕರ್‌ನ ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಹೆದ್ದಾರಿ ಪೊಲೀಸರು ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ED ಶೋಧ; ‘ಇದು ದಾಳಿ ಅಲ್ಲ, ಸರ್ಚ್’ ಎಂದ ಸಚಿವ!

0

ಬೆಂಗಳೂರು: ತಮ್ಮ ನಿವಾಸ ಹಾಗೂ ಇತರ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ಶೋಧ ಕಾರ್ಯಾಚರಣೆ ರಾಜಕೀಯ ಪ್ರೇರಿತವಾಗಿರಬಹುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಡಿ ಶೋಧಕ್ಕೆ ಕಾರಣವೇನು ಎಂಬುದು ತಕ್ಷಣಕ್ಕೆ ತಿಳಿದಿಲ್ಲ. ಅಧಿಕಾರಿಗಳ ಬಳಿ ಯಾವುದಾದರೂ ಮಾಹಿತಿ ಇರಬಹುದು. ಆದರೆ, ನೋಟಿಸ್ ನೀಡಿ ಮಾಹಿತಿ ಪಡೆಯಬಹುದಿತ್ತು. ಹಲವು ವಿಚಾರಗಳಿದ್ದರೂ ನಮ್ಮ ಕಡೆಗೆ ತನಿಖೆ ಬಂದಿರುವುದು ಆಶ್ಚರ್ಯವಾಗಿದೆ ಎಂದರು.

‘ಇದು ದಾಳಿ ಅಲ್ಲ, ಸರ್ಚ್’:

ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ತಿಳಿದಿಲ್ಲದ ವಿಚಾರಗಳ ಬಗ್ಗೆ ಮಾಹಿತಿ ನೀಡಲು ಸಮಯ ಕೇಳಿದ್ದೇನೆ. ಇದು ಇಡಿ ದಾಳಿ ಅಲ್ಲ, ಸರ್ಚ್ ಅಷ್ಟೇ. ಮುಂದೆ ನೋಟಿಸ್ ನೀಡಿದರೆ ಅಗತ್ಯ ಮಾಹಿತಿ ನೀಡುತ್ತೇನೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ವಿದೇಶಿ ಹೂಡಿಕೆ ಮಾಡಿದ್ದೀರಾ ಎಂದು ಇಡಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಆದರೆ, ವಿದೇಶದಲ್ಲಿ ಯಾವುದೇ ಹೂಡಿಕೆ ಮಾಡಿಲ್ಲ. ಹೂಡಿಕೆ ಮಾಡುವ ಕುರಿತು ಚಟುವಟಿಕೆಗಳು ನಡೆಯುತ್ತಿವೆ. ಈ ಸಂಬಂಧ ಇನ್ನೂ ಆರ್‌ಬಿಐನಿಂದ ಕಾನೂನುಬದ್ಧ ಅನುಮತಿ ಪಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ನೋಟಿಸ್‌ನಲ್ಲಿ FEMA ಕಾಯ್ದೆಯ ಉಲ್ಲೇಖವಿದ್ದು, ಅದರ ಅಡಿಯಲ್ಲಿ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು.

ನಗದು ನಮ್ಮದೇ ಎಂದಿದ್ದೇವೆ:

ಶೋಧದ ವೇಳೆ ಸುಮಾರು ಎರಡು ಕೋಟಿವರೆಗೆ ನಗದು ಪತ್ತೆಯಾಗಿದೆ. ಆ ಹಣ ನಮ್ಮದೇ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇವೆ. ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ, ಕಾನೂನು ಪ್ರಕಾರ ಹಣವನ್ನು ಕ್ಲೈಮ್ ಮಾಡುತ್ತೇವೆ ಎಂದು ಹೇಳಿದರು.

7–8 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಅಧಿಕಾರಿಗಳು ಕೇಳಿದ ಮಾಹಿತಿಯನ್ನು ನೀಡಿದ್ದೇವೆ. ತಮ್ಮ ಮಕ್ಕಳಿಗೂ ಇಡಿ ಅಧಿಕಾರಿಗಳ ವಿಚಾರಣೆಗೆ ಸಹಕರಿಸುವಂತೆ ತಿಳಿಸಿದ್ದೇನೆ ಎಂದರು.

ದೇಶಾದ್ಯಂತ ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಂಡು ತನಿಖೆ ನಡೆಯುತ್ತಿದೆ ಎಂಬ ಅಭಿಪ್ರಾಯವನ್ನು ಸತೀಶ್ ಜಾರಕಿಹೊಳಿ ವ್ಯಕ್ತಪಡಿಸಿದರು.

‘ನಾನೇ ಕೊನೆಯವನು ಎಂದುಕೊಂಡಿದ್ದೆ. ಆದರೆ ನಾನೇ ಮೊದಲಿದ್ದೇನೆ. ಇನ್ನೂ ದೊಡ್ಡ ಪ್ರಕರಣಗಳಿವೆ. ಅವುಗಳನ್ನು ಬಿಟ್ಟು ನಮ್ಮ ಕಡೆಗೆ ಬಂದಿದ್ದಾರೆ. ತಮ್ಮಿಂದ ಸಣ್ಣಪುಟ್ಟ ತಪ್ಪುಗಳು ಆಗಿರಬಹುದು. ನೂರಕ್ಕೆ ನೂರು ಸರಿಯಾಗಿದ್ದೇವೆ ಎಂದು ಹೇಳುವುದಿಲ್ಲ. ಆದರೆ ಬಿಜೆಪಿಯವರ ಮೇಲೆ ಇಂತಹ ಶೋಧಗಳು ನಡೆಯುತ್ತಿಲ್ಲ ಎಂದು ಪ್ರಶ್ನಿಸಿದರು.

ಸಮಾಜದಲ್ಲಿ ನಾಗೇಂದ್ರ ಅವರ ಪ್ರಕರಣದ ಬಳಿಕ ಇದೀಗ ತಮ್ಮ ಮೇಲೂ ಇಡಿ ಶೋಧ ನಡೆದಿರುವುದರಿಂದ ಸಮುದಾಯವನ್ನು ಗುರಿಯಾಗಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಜನರಲ್ಲಿ ಮೂಡುತ್ತಿದೆ.  ಇಡಿ ಅಧಿಕಾರಿಗಳು ನ್ಯಾಯಯುತವಾಗಿ ತನಿಖೆ ನಡೆಸುತ್ತಾರೆ ಎಂಬ ವಿಶ್ವಾಸವಿದೆ. ಎಲ್ಲಾ ಸ್ಥಳಗಳ ಶೋಧ ಮುಗಿದಿದ್ದು, ಶುಕ್ರವಾರ ಬೆಳಗಾವಿಗೆ ತೆರಳುತ್ತೇನೆ. ಸಾಧ್ಯವಾದರೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡುತ್ತೇನೆ ಎಂದು ಅವರು ತಿಳಿಸಿದರು.

ತಮಿಳುನಾಡಿಗೆ ಮತ್ತೆ ಕಾವೇರಿ ನೀರು! KRSನಿಂದ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ

0

ಮಂಡ್ಯ: ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ, ಅಗತ್ಯವಿದ್ದರೆ ಸುಪ್ರೀಂಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ರಾಜ್ಯ ಸರ್ಕಾರ ಹೇಳಿದ್ದರೂ, ಇದೀಗ ಜಲಾಶಯಗಳಿಂದ ಭಾರಿ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಕಾವೇರಿ ನೀರು ನಿಯಂತ್ರಣ ಸಮಿತಿ ಮುಂದಿನ 15 ದಿನಗಳ ಕಾಲ ಪ್ರತಿದಿನ 6 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಿರುವ ಬೆನ್ನಲ್ಲೇ ಕೆಆರ್‌ಎಸ್ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ. ರಾಜ್ಯದ ಜಲಾಶಯಗಳಲ್ಲಿ ನೀರಿನ ಕೊರತೆಯಿರುವ ಸಂದರ್ಭದಲ್ಲೇ ನೀರು ಹರಿಸುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ಕೆಆರ್‌ಎಸ್‌ನಿಂದ 8,121 ಕ್ಯೂಸೆಕ್ ಹೊರಹರಿವು:

ಸದ್ಯ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 106.42 ಅಡಿ ಇದ್ದು, ಸುಮಾರು 28.275 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯಕ್ಕೆ ಒಳಹರಿವು 2,304 ಕ್ಯೂಸೆಕ್ ಇದೆ. ಆದರೆ ಹೊರಹರಿವು 8,121 ಕ್ಯೂಸೆಕ್ನಷ್ಟಿದೆ.

ಒಳಹರಿವಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿರುವುದರಿಂದ ಜಲಾಶಯದ ನೀರಿನ ಮಟ್ಟದ ಬಗ್ಗೆ ರೈತರಲ್ಲಿ ಆತಂಕ ಹೆಚ್ಚಾಗಿದೆ.

ಹಾರಂಗಿಯಿಂದಲೂ ನೀರು ಬಿಡುಗಡೆ:

ಕೊಡಗಿನ ಹಾರಂಗಿ ಜಲಾಶಯದಿಂದಲೂ ನೀರು ಹೊರಬಿಡಲಾಗುತ್ತಿದೆ. ಜಲಾಶಯದ ನಾಲ್ಕು ಕ್ರೆಸ್ಟ್ ಗೇಟ್‌ಗಳ ಮೂಲಕ ಸುಮಾರು 3,000 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.

ಕೊಡಗಿನಲ್ಲಿ ಕಳೆದ ಒಂದು ವಾರದಿಂದ ಮಳೆಯಿಲ್ಲದ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯದ ಒಳಹರಿವು 1,324 ಕ್ಯೂಸೆಕ್‌ಗೆ ಇಳಿಕೆಯಾಗಿದೆ. ಜಲಾಶಯದ ನೀರಿನ ಮಟ್ಟವೂ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನೀರು ಬಿಡುಗಡೆ ವಿಚಾರ ಗಮನ ಸೆಳೆದಿದೆ.

ಮೈಸೂರಿನಲ್ಲಿ ವಿನೂತನ ಪ್ರತಿಭಟನೆ:

ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶ ಹಾಗೂ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಮೈಸೂರಿನಲ್ಲಿ ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸಿದರು.

ಮೈಸೂರಿನ ಕಾಡಾ ಕಚೇರಿ ಎದುರು ತಲೆ ಮೇಲೆ ಚಪ್ಪಡಿ ಕಲ್ಲುಗಳನ್ನು ಹೊತ್ತು ಪ್ರತಿಭಟಿಸಿದ ಹೋರಾಟಗಾರರು, ‘ಕಾವೇರಿ ನಮ್ಮದು, ನಮಗೆ ನ್ಯಾಯ ಬೇಕು’ ಎಂದು ಘೋಷಣೆ ಕೂಗಿದರು.

ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು ಹಾಗೂ ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆಯನ್ನು ಜಾರಿಗೆ ತರಬೇಕು ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದರು.

Chikkaballapura Breaking: ಬಾಡಿಗೆ ರೂಮ್‌ನಲ್ಲಿ ಆಂಧ್ರ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ನೇಣಿಗೆ ಶರಣು!

0

ಚಿಕ್ಕಬಳ್ಳಾಪುರ: ಬಾಡಿಗೆ ರೂಮ್‌ನಲ್ಲಿ ವಾಸವಾಗಿದ್ದ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಆಂಧ್ರಪ್ರದೇಶದ ಹಿಂದೂಪುರ ಮೂಲದ 21 ವರ್ಷದ ಸಾಯಿ ತರುಣ್ ರೆಡ್ಡಿ ಮೃತ ವಿದ್ಯಾರ್ಥಿ. ಚಿಕ್ಕಬಳ್ಳಾಪುರ ನಗರದ ಗಂಗಮ್ಮಗುಡಿ ರಸ್ತೆಯಲ್ಲಿ ರೂಮ್ ಮಾಡಿಕೊಂಡು ವಾಸವಾಗಿದ್ದ ಅವರು, ನಗರದ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು.

ಮುಂಜಾನೆ ಎಂದಿನಂತೆ ಸಾಯಿ ತರುಣ್ ಕಾಲೇಜಿಗೆ ತೆರಳಬೇಕಿತ್ತು. ಆದರೆ ಅವರು ರೂಮ್‌ನಿಂದ ಹೊರಬರದಿರುವುದು ಸ್ನೇಹಿತರಲ್ಲಿ ಅನುಮಾನ ಮೂಡಿಸಿತ್ತು.

ಬೆಳಗ್ಗೆ ಸ್ನೇಹಿತನೊಬ್ಬ ರೂಮ್‌ಗೆ ಬಂದು ಬಾಗಿಲು ತಟ್ಟಿದ್ದಾನೆ. ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಸಾಯಿ ತರುಣ್ ಮಲಗಿರಬಹುದು ಎಂದು ಭಾವಿಸಿ ಸ್ನೇಹಿತ ಕಾಲೇಜಿಗೆ ತೆರಳಿದ್ದಾನೆ. ಆದರೆ ಕಾಲೇಜಿಗೂ ಸಾಯಿ ತರುಣ್ ಹಾಜರಾಗದ ಹಿನ್ನೆಲೆಯಲ್ಲಿ ಸ್ನೇಹಿತರಿಗೆ ಮತ್ತಷ್ಟು ಅನುಮಾನ ಮೂಡಿದೆ.

ಮೊಬೈಲ್‌ಗೆ ಹಲವು ಬಾರಿ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಸ್ನೇಹಿತರು ಮತ್ತೆ ರೂಮ್‌ಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಾಗಿಲು ತೆರೆದು ನೋಡಿದಾಗ ಸಾಯಿ ತರುಣ್ ಮೃತಪಟ್ಟಿರುವುದು ಪತ್ತೆಯಾಗಿದೆ.

ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿಯ ಸಾವಿಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

ಇತ್ತ ಮಗನ ಸಾವಿನ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.