Home Blog Page 9

ಸಿಎಂ ಕುರ್ಚಿ ಗೊಂದಲಗಳಿಗೆ ಹೈಕಮಾಂಡೇ ಉತ್ತರ ನೀಡಬೇಕು: ಸಚಿವ ಡಾ. ಜಿ. ಪರಮೇಶ್ವರ್ 

0

ಬೆಂಗಳೂರು: ಸಿಎಂ ಕುರ್ಚಿ ವಿಚಾರದಲ್ಲಿ ಉಂಟಾಗಿರುವ ಗೊಂದಲಗಳಿಗೆ ಹೈಕಮಾಂಡ್‌ವೇ ಉತ್ತರ ನೀಡಬೇಕು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.ಸಿಎಂ ಸ್ಥಾನಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳು ತಮ್ಮ ಹೆಸರು ಕೂಗುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ವಿಷಯದಲ್ಲಿ ಸಾಕಷ್ಟು ಗೊಂದಲಗಳು ಈಗಾಗಲೇ ಉಂಟಾಗಿವೆ. ನಾನು ಅದನ್ನು ಇನ್ನಷ್ಟು ಗೊಂದಲಗೊಳಿಸಲು ಸಿದ್ಧನಿಲ್ಲ ಎಂದು ತಿಳಿಸಿದ್ದಾರೆ.

ಅನೇಕರು ತಮ್ಮನ್ನು ಪ್ರಶ್ನಿಸುತ್ತಾರೆ. ಕೆಲ ಅಭಿಮಾನಿಗಳು ಸಿಎಂ ಆಗಬೇಕು ಎಂದು ಘೋಷಣೆಗಳನ್ನು ಕೂಗುತ್ತಾರೆ. ಆದರೆ ಇದರ ಕುರಿತು ಉತ್ತರ ನೀಡಬೇಕಾಗಿರುವುದು ಹೈಕಮಾಂಡ್. ಯಾವ ಸಮಯದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕೋ, ಆ ಸಮಯದಲ್ಲಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

ನಾನು ಯಾವತ್ತೂ ಲಾಬಿ ಮಾಡಲು ಹೋಗಿಲ್ಲ. ದೆಹಲಿಗೂ ಹೋಗಿಲ್ಲ. ಯಾವುದೇ ರೀತಿಯ ಲಾಬಿ ಮಾಡುತ್ತಿಲ್ಲ. ನಮ್ಮ ಹಿತೈಷಿಗಳು ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿರಬಹುದು.

ಅವರಿಗೆ ಮಾಡಬೇಡಿ ಎಂದು ಹೇಳುವುದು ಕಷ್ಟ. 2-3 ಬಾರಿ ಹಾಗೆ ಮಾಡಬೇಡಿ ಎಂದು ಹೇಳಿದ್ದೇನೆ. ಆದರೆ ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಈ ಗೊಂದಲಕ್ಕೆ ನಾನು ಕೈಜೋಡಿಸುವುದಿಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

“ನೀನೇ ಖುಷಿಯಾಗಿರು”: ಸ್ಟೇಟಸ್ ಹಾಕಿ ನೀರಿಗೆ ಹಾರಿ 19 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ!

0

ತುಮಕೂರು: “ನೀನೇ ಖುಷಿಯಾಗಿರು, ನಾನು ಪ್ರಪಂಚನೇ ಬಿಟ್ಟು ಹೋಗ್ತಿದಿನಿ” ಎಂದು ಮೊಬೈಲ್‌ನಲ್ಲಿ ಸ್ಟೇಟಸ್ ಹಾಕಿ ವಿದ್ಯಾರ್ಥಿಯೊಬ್ಬ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ತುರುವೇಕೆರೆ ಪಟ್ಟಣದಲ್ಲಿ ನಡೆದಿದೆ. ತುರುವೇಕೆರೆ ತಾಲ್ಲೂಕಿನ ಕೊಂಡಜ್ಜಿ ಬಳಿಯ ಗೋಪ್ಪೆನಹಳ್ಳಿ ಗ್ರಾಮದ ಧನುಷ್ (19) ಮೃತ ವಿದ್ಯಾರ್ಥಿ. ಎರಡನೇ ವರ್ಷದ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.

ಬುಧವಾರ (ಫೆ.25) ಬೆಳಿಗ್ಗೆ ಕಾಲೇಜಿಗೆ ಹೋಗುತ್ತೇನೆಂದು ಹೇಳಿ ಮನೆಯಿಂದ ಹೊರಟಿದ್ದ ಧನುಷ್, ಸಂಜೆಯಾದರೂ ಮನೆಗೆ ಮರಳಿರಲಿಲ್ಲ. ಪೋಷಕರು ಕರೆ ಮಾಡಿದರೂ ಮೊಬೈಲ್ ಸ್ವೀಕರಿಸಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಎಲ್ಲೆಡೆ ಹುಡುಕಾಟ ಆರಂಭಿಸಿದರು.

ಹುಡುಕಾಟದ ವೇಳೆ ಡಿಪ್ಲೋಮಾ ಕಾಲೇಜಿನ ಹಿಂಭಾಗದಲ್ಲಿರುವ ಕಟ್ಟೆ ಬಳಿ ಧನುಷ್  ಬ್ಯಾಗ್, ಚಪ್ಪಲಿ ಮತ್ತು ಮೊಬೈಲ್ ಪತ್ತೆಯಾಗಿದೆ. ಜೊತೆಗೆ ಆತ್ಮಹತ್ಯೆಗೆ ಮುನ್ನ ಮೊಬೈಲ್‌ನಲ್ಲಿ ಸ್ಟೇಟಸ್ ಹಾಕಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಪೋಷಕರು ತುರುವೇಕೆರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ನೀರಿನ ಕಟ್ಟೆಯಲ್ಲಿ ಶೋಧ ಕಾರ್ಯ ನಡೆಸಿ ವಿದ್ಯಾರ್ಥಿ ಧನುಷ್  ಮೃತದೇಹವನ್ನು ಪತ್ತೆಹಚ್ಚಿದರು. ಬಳಿಕ ಮೃತದೇಹವನ್ನು ಹೊರತೆಗೆದು ತುರುವೇಕೆರೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

 ತಾಯಿಗೆ ‘ಐ ಲವ್ ಯೂ ಸೋ ಮಚ್’ ಎಂದು ಸಂದೇಶ ಕಳುಹಿಸಿ ವಿದ್ಯಾರ್ಥಿನಿ ಆತ್ಮಹತ್ಯೆ!

0

ಹೈದರಾಬಾದ್: ಯೂಟ್ಯೂಬರ್ ಹಾಗೂ ಬಿಎಸ್ಸಿ ವಿದ್ಯಾರ್ಥಿನಿಯೊಬ್ಬಳು ಹೈದರಾಬಾದ್‌ನ ತನ್ನ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಫೆಬ್ರವರಿ 23ರಂದು (ಸೋಮವಾರ) ನಡೆದಿದೆ. ಸಾಯುವ ಮುನ್ನ ಕುವೈತ್‌ನಲ್ಲಿ ಕೆಲಸ ಮಾಡುತ್ತಿರುವ ತಾಯಿಗೆ “ಐ ಲವ್ ಯೂ ಸೋ ಮಚ್” ಎಂಬ ಸಂದೇಶ ಕಳುಹಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಳನ್ನು ಕೋಮಲಿ (21) ಎಂದು ಗುರುತಿಸಲಾಗಿದೆ. ಆಕೆ ಮೂಲತಃ ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೂಲದವರು. ಕಳೆದ 11 ತಿಂಗಳಿನಿಂದ ಹೈದರಾಬಾದ್‌ನಲ್ಲಿರುವ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ ಆಕೆ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಅಭ್ಯಾಸ ಮಾಡುತ್ತಿದ್ದರು. ವಿಜ್ಞಾನ ವಿದ್ಯಾರ್ಥಿನಿಯಾಗಿದ್ದ ಕೋಮಲಿ ಯೂಟ್ಯೂಬರ್ ಆಗಿಯೂ ಗುರುತಿಸಿಕೊಂಡಿದ್ದರು.

ಫೆಬ್ರವರಿ 23ರ ಬೆಳಗ್ಗೆ, ಕೋಮಲಿ ತನ್ನ ತಾಯಿ ಬಿ. ಸತ್ಯ ವರಲಕ್ಷ್ಮಿಗೆ “ನಿಮ್ಮನ್ನು ತುಂಬಾ ಪ್ರೀತಿಸುತ್ತೀನಿ ಅಮ್ಮ” ಎಂದು ಸಂದೇಶ ಕಳುಹಿಸಿ, ಕಿರಿಯ ಸಹೋದರನನ್ನು ನೋಡಿಕೊಳ್ಳುವಂತೆ ಮನವಿ ಮಾಡಿದ್ದಾಳೆ. ಬಳಿಕ ಆಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು.ತಾಯಿ ಹಲವು ಬಾರಿ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗದೆ, ಸ್ನೇಹಿತರನ್ನು ಸಂಪರ್ಕಿಸಿ ಕೋಮಲಿಯ ಫ್ಲಾಟ್‌ಗೆ ಹೋಗುವಂತೆ ತಿಳಿಸಿದ್ದಾರೆ.

ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಸ್ನೇಹಿತರು ಫ್ಲಾಟ್‌ಗೆ ತೆರಳಿದ್ದು, ಬಾಗಿಲು ತಟ್ಟಿದರೂ ಪ್ರತಿಕ್ರಿಯೆ ಬಂದಿಲ್ಲ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿ ಬೀಗ ಮುರಿದು ಒಳ ಪ್ರವೇಶಿಸಿದರು. ಅಲ್ಲಿ ಕೋಮಲಿಯ ಶವ ಸೀಲಿಂಗ್ ಫ್ಯಾನ್‌ಗೆ ನೇತಾಡುತ್ತಿರುವುದು ಕಂಡುಬಂದಿದೆ. ಸ್ಥಳದಿಂದ ಸಣ್ಣ ಏಣಿ ಹಾಗೂ ಸೀರೆ ವಶಪಡಿಸಿಕೊಳ್ಳಲಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಕೋಮಲಿ ಕಳೆದ ಮೂರು ವರ್ಷಗಳಿಂದ 27 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಜೊತೆ ಸಂಬಂಧ ಹೊಂದಿದ್ದಳು. ಇತ್ತೀಚೆಗೆ ಇಬ್ಬರೂ ಸಂಬಂಧ ಮುರಿದಿರುವ ಮಾಹಿತಿ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರು ತಿಂಗಳ ಹಿಂದೆಯೂ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹೆಚ್ಚಿನ ತನಿಖೆಗಾಗಿ ಭೌತಿಕ ಹಾಗೂ ಡಿಜಿಟಲ್ ಪುರಾವೆಗಳನ್ನು ಸಂಗ್ರಹಿಸಿದ್ದಾರೆ.

ಶಿವಾಜಿ ಜಯಂತಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ: NIA ತನಿಖೆಗೆ ಶ್ರೀರಾಮುಲು ಮನವಿ

0

ಬಾಗಲಕೋಟೆ: ಜಿಲ್ಲೆಯಲ್ಲಿನ ಶಿವಾಜಿ ಜಯಂತಿ ಮೆರವಣಿಗೆಯ ಮೇಲೆ ನಡೆದ ಕಲ್ಲು ತೂರಾಟ ಮತ್ತು ಚಪ್ಪಲಿ ಎಸೆದಿರುವ ಘಟನೆಗೆ ತೀವ್ರ ಅಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ ಹಾಗೂ ಸಂಸದ ಬಿ. ಶ್ರೀರಾಮುಲು, ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಹಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಘಟನೆಯ ವಿವರ

ಫೆಬ್ರವರಿ 19ರಂದು ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ಸಾಗುತ್ತಿದ್ದಾಗ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಮೆರವಣಿಗೆಯ ಮೇಲೆ ಚಪ್ಪಲಿ ಎಸೆದು ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಶ್ರೀರಾಮುಲು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದು ಕೇವಲ ಸ್ಥಳೀಯ ಕಿಡಿಗೇಡಿತನವಲ್ಲ, ಇದರ ಹಿಂದೆ ದೊಡ್ಡ ಸಂಚು ಇರುವ ಸಾಧ್ಯತೆ ಇದೆ ಎಂದು ಶ್ರೀರಾಮುಲು ಅಭಿಪ್ರಾಯಪಟ್ಟಿದ್ದಾರೆ. ಸತ್ಯಾಸತ್ಯತೆ ಹೊರಬರಲು ಎನ್‌ಐಎ ತನಿಖೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಘಟನೆಗಳ ಮಾದರಿಯಲ್ಲೇ ರಾಜ್ಯದಲ್ಲಿ ಹಿಂದೂ ಸಂಘಟನೆಗಳ ಮೆರವಣಿಗೆಗಳ ಮೇಲೆ ದಾಳಿಗಳು ನಡೆಯುತ್ತಿವೆ ಎಂದು ಆರೋಪಿಸಿರುವ ಅವರು, ಇಂತಹ ಕೃತ್ಯಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ. ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಂತಿ ಕಾಪಾಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಇದರ ನಡುವೆ ಕೆಲ ಯುವಕರು ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನಾಕಾರಿ ವಿಡಿಯೋ ಹಂಚಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. “15 ನಿಮಿಷ ಪೊಲೀಸರು ಸುಮ್ಮನಿರಲಿ, ಇಸ್ಲಾಂ ಪವರ್ ತೋರಿಸುತ್ತೇವೆ” ಎಂಬ ಅರ್ಥದ ಹೇಳಿಕೆ ಪೋಸ್ಟ್‌ನಲ್ಲಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ಮಕ್ಕಳ ಆರೈಕೆ ರಜೆ ಮಗುವಿನ ಹಕ್ಕು: ಹೈಕೋರ್ಟ್ ಆದೇಶ

0

ಬೆಂಗಳೂರು: ಮಕ್ಕಳ ಆರೈಕೆ ರಜೆ ಮಗುವಿನ ಹಕ್ಕಾಗಿದ್ದು, ಈ ರಜೆಯನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಸಿಸಿಎಲ್‌ ಕೋರಿ ಬಂದ ಅರ್ಜಿಗಳನ್ನು ಆದ್ಯತೆ ಮೇರೆಗೆ ಮಂಜೂರು ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಕೇಂದ್ರ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿರುವ ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್‌ಡ್ ಕಂಪ್ಯೂಟಿಂಗ್‌ನಲ್ಲಿ (ಸಿ-ಡ್ಯಾಕ್) ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕವಿತಾ ವಡ್ಡೆ ಅವರಿಗೆ ಫೆಬ್ರವರಿ 6ರಿಂದ ಮೇ 20ರವರೆಗೆ ಚೈಲ್ಡ್ ಕೇರ್ ಲೀವ್ ಮಂಜೂರು ಮಾಡುವಂತೆ ಹೈಕೋರ್ಟ್ ಆದೇಶಿಸಿದೆ.

ಫೆಬ್ರವರಿ 5ರಂದು ಕೇಂದ್ರ ಆಡಳಿತ ನ್ಯಾಯಮಂಡಳಿ (CAT) ರಜೆ ಮಂಜೂರು ಮಾಡಲು ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ನ್ಯಾಯಮೂರ್ತಿಗಳಾದ ಎಸ್.ಜಿ. ಪಂಡಿತ್ ಮತ್ತು ಕೆ.ವಿ. ಅರವಿಂದ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ, ಸಿಎಟಿ ಆದೇಶವನ್ನು ಎತ್ತಿಹಿಡಿದು ಮೇಲ್ಮನವಿಯನ್ನು ವಜಾಗೊಳಿಸಿದೆ.

ನ್ಯಾಯಪೀಠ ತಿಳಿಸಿದಂತೆ, ಇತರೆ ರಜೆಗಳನ್ನು ಮಂಜೂರು ಮಾಡುವುದು ಅಥವಾ ನಿರಾಕರಿಸುವುದು ಉದ್ಯೋಗದಾತರ ವಿವೇಚನೆಗೆ ಒಳಪಟ್ಟಿರಬಹುದು. ಆದರೆ ಸಿಸಿಎಲ್‌ ವಿಚಾರದಲ್ಲಿ ಅಂತಹ ವಿವೇಚನಾ ಅಧಿಕಾರ ಅನ್ವಯಿಸುವುದಿಲ್ಲ. ಮಕ್ಕಳ ಆರೈಕೆಗೆ ಮೀಸಲಾದ ಈ ರಜೆ ನೀಡಲೇಬೇಕು ಎಂದು ಸ್ಪಷ್ಟಪಡಿಸಿದೆ. ತಾಯಿಗೆ ರಜೆ ನಿರಾಕರಿಸಿದರೆ ಅದು ಮಕ್ಕಳ ಮೇಲೆ ಒತ್ತಡ ಉಂಟುಮಾಡಬಹುದು. ಆದ್ದರಿಂದ ಸಿಸಿಎಲ್‌ ಮಗುವಿನ ಹಕ್ಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅರ್ಜಿದಾರರ ಪರ ವಕೀಲರು, 5 ತಿಂಗಳ ಸಿಸಿಎಲ್‌ ಕೋರಿದ್ದರೂ ಕೇವಲ 18 ದಿನಗಳ ರಜೆ ಮಾತ್ರ ಮಂಜೂರು ಮಾಡಲಾಗಿದೆ. ಇದು ಕೇಂದ್ರ ನಾಗರಿಕ ಸೇವಾ ರಜೆ ನಿಯಮ 43ಸಿ ಉಲ್ಲಂಘನೆಯಾಗಿದೆ ಎಂದು ವಾದಿಸಿದರು.
ಮಕ್ಕಳ ಶಿಕ್ಷಣ ಮತ್ತು ಅಭಿವೃದ್ಧಿಗಾಗಿ ತಾಯಿಯ ಆರೈಕೆ ಅಗತ್ಯವಿದೆ. ಪರೀಕ್ಷಾ ಅವಧಿಯಲ್ಲಿರುವ ಮಕ್ಕಳಿಗೆ ತಾಯಿಯ ಬೆಂಬಲ ಮುಖ್ಯವಾಗಿದ್ದು, ರಜೆ ನಿರಾಕರಣೆ ಒತ್ತಡಕ್ಕೆ ಕಾರಣವಾಗುತ್ತದೆ ಎಂದು ನ್ಯಾಯಪೀಠಕ್ಕೆ ತಿಳಿಸಲಾಯಿತು. ವಾದ ಆಲಿಸಿದ ಹೈಕೋರ್ಟ್, ಫೆಬ್ರವರಿ 6ರಿಂದ ಮೇ 20ರವರೆಗೆ ಸಿಸಿಎಲ್‌ ರಜೆ ನೀಡುವಂತೆ ಅಂತಿಮ ಆದೇಶ ನೀಡಿದೆ.

ಟ್ರಂಪ್‌ಗೆ ಮೀರಿದ ಮೋದಿ ಡಿಜಿಟಲ್ ದಾಪುಗಾಲು: ನೆಸ್ಸೆಟ್ ಗೌರವವೂ ಪ್ರಧಾನಿ ಖಾತೆಗೆ

0

ನವದೆಹಲಿ: ನರೇಂದ್ರ ಮೋದಿ ಅವರ ಜನಪ್ರಿಯತೆ ಇದೀಗ ಮತ್ತೊಂದು ದಾಖಲೆ ನಿರ್ಮಿಸಿದೆ. ಇನ್‌ಸ್ಟಾಗ್ರಾಂನಲ್ಲಿ 100 ಮಿಲಿಯನ್ ಫಾಲೋವರ್ಸ್ ಗಳಿಸುವ ಮೂಲಕ ಅವರು ವಿಶ್ವದ ಮೊದಲ ನಾಯಕ ಮತ್ತು ರಾಜಕಾರಣಿಯಾಗಿ ಐತಿಹಾಸಿಕ ಮೈಲಿಗಲ್ಲು ತಲುಪಿದ್ದಾರೆ.

2014ರಲ್ಲಿ ಮೆಟಾ ವೇದಿಕೆಯಾದ ಇನ್‌ಸ್ಟಾಗ್ರಾಂನಲ್ಲಿ ಖಾತೆ ತೆರೆದ ಪ್ರಧಾನಿ ಮೋದಿ, ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹಿಂದಿಕ್ಕಿದ್ದಾರೆ. ಟ್ರಂಪ್ 43.2 ಮಿಲಿಯನ್ ಫಾಲೋವರ್ಸ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ 15 ಮಿಲಿಯನ್ ಫಾಲೋವರ್ಸ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಬ್ರೆಜಿಲ್ ಅಧ್ಯಕ್ಷ ಲೂಲಾ ಡಾ ಸಿಲ್ವಾ 14.4 ಮಿಲಿಯನ್ ಫಾಲೋವರ್ಸ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ 11.6 ಮಿಲಿಯನ್ ಫಾಲೋವರ್ಸ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದು, ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮೈಲಿ 6.4 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ಭಾರತದೊಳಗೆ ಪ್ರಧಾನಿ ಮೋದಿ ನಂತರ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (16.1 ಮಿಲಿಯನ್). ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸುಮಾರು 12.6 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ಕೀನ್ಯಾದ ಯುವ ಶಾಸಕ ಕ್ಯಾಲೆಬ್ ಭಗವದ್ಗೀತೆ ಹಿಡಿದು ಪ್ರಮಾಣವಚನ: ಮೊಂಬಾಸಾದಲ್ಲಿ ಐತಿಹಾಸಿಕ ಕ್ಷಣ

0

ಕೀನ್ಯಾ: ಮೊಂಬಾಸಾ ಕೌಂಟಿಯ ವಿಧಾನಸಭೆಯಲ್ಲಿ ಯುವ ನಾಯಕರೊಬ್ಬರು ಬಲಗೈಯಲ್ಲಿ ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಚಂಗಮ್ವೆ ಕ್ಷೇತ್ರವನ್ನು ಪ್ರತಿನಿಧಿಸುವ ಯುವ ಶಾಸಕ ಕ್ಯಾಲೆಬ್ ಈ ವಿಭಿನ್ನ ಹೆಜ್ಜೆ ಇಟ್ಟಿದ್ದಾರೆ.

ಮೊಂಬಾಸಾ ಯುವ ಅಸೆಂಬ್ಲಿಯ ಕಾರ್ಯಕ್ರಮದ ವೇಳೆ, ಸದಸ್ಯರ ಸಮ್ಮುಖದಲ್ಲಿ ಕ್ಯಾಲೆಬ್ ಅವರು ‘ಭಗವದ್ಗೀತೆ ಆಸ್ ಇಟ್ ಇಸ್’ ಗ್ರಂಥವನ್ನು ಎತ್ತಿಹಿಡಿದು ಶಪಥ ಸ್ವೀಕರಿಸಿದರು. ಸಾರ್ವಜನಿಕ ಹುದ್ದೆಗಳು ಸಾಮಾನ್ಯವಾಗಿ ಪ್ರಬಲ ಧಾರ್ಮಿಕ ಸಂಪ್ರದಾಯಗಳೊಂದಿಗೆ ಸಂಬಂಧ ಹೊಂದಿರುವ ದೇಶದಲ್ಲಿ ಈ ನಡೆ ವಿಶೇಷ ಮಹತ್ವ ಪಡೆದುಕೊಂಡಿದೆ.

ಈ ಕುರಿತು ಇಸ್ಕಾನ್ನ ಓಂಕಾರ ಮುಕುಂದ ದಾಸ್ ಪ್ರತಿಕ್ರಿಯಿಸಿ, ಇದು ನಾಟಕೀಯ ನಡೆ ಅಲ್ಲ, ಹೃದಯದಿಂದ ಬಂದ ಭಾವನೆ ಎಂದು ಹೇಳಿದ್ದಾರೆ.

ಕ್ಯಾಲೆಬ್ ಹರೇ ಕೃಷ್ಣ ಸಮುದಾಯದ ಭಕ್ತರಾಗಿದ್ದು, ತಮ್ಮ ಅಣ್ಣನ ಮೂಲಕ ಇಸ್ಕಾನ್ ಸಂಘಟನೆಯೊಂದಿಗೆ ಸೇರಿಕೊಂಡಿದ್ದಾರೆ. 2021ರಲ್ಲಿ ಸ್ಥಾಪಿತವಾದ ‘ದಿ ಬೆಟರ್ ಯು ಕ್ಲಬ್’ ಎಂಬ ವಿಶ್ವವಿದ್ಯಾಲಯ ಆಧಾರಿತ ಉಪಕ್ರಮದ ಅಧ್ಯಕ್ಷರಾಗಿ 180ಕ್ಕೂ ಹೆಚ್ಚು ಸದಸ್ಯರನ್ನು ಒಗ್ಗೂಡಿಸಿದ್ದಾರೆ.

ರಾತ್ರಿ ಮಲಗುವ ಮುನ್ನ 2 ಲವಂಗ ತಿನ್ನುವುದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು..?

0

ಲವಂಗವು ಶಕ್ತಿಯುತ ಉತ್ಕರ್ಷಣ ನಿರೋಧಕ (antioxidant) ಗುಣಗಳನ್ನು ಹೊಂದಿದ್ದು, ಜೀವಕೋಶಗಳ ಹಾನಿ ತಡೆಯಲು ಸಹಾಯ ಮಾಡುತ್ತದೆ ಮತ್ತು ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಪುರುಷರ ಆರೋಗ್ಯಕ್ಕೆ ಅದರ ವಿಶೇಷ ಪ್ರಯೋಜನಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ:

  1. ಅಕಾಲಿಕ ಸ್ಖಲನ ನಿಯಂತ್ರಣ: ಕೆಲ ಪುರುಷರು ಸಂಭೋಗದ ವೇಳೆ ಅಕಾಲಿಕ ಸ್ಖಲನದಿಂದ ತೊಂದರೆ ಅನುಭವಿಸುತ್ತಾರೆ. ನಿಯಮಿತ ಲವಂಗ ಸೇವನೆ ಈ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  2. ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ತಡೆಯುವುದು: ಲವಂಗದ ಸಕ್ರಿಯ ಪದಾರ್ಥಗಳು ರಕ್ತ ಪರಿಚಲನೆಯನ್ನು ಸುಧಾರಿಸಿ, ಖಾಸಗಿ ಅಂಗಗಳ ಆರೋಗ್ಯಕ್ಕೆ ಉತ್ತಮವಾಗಿದೆ.
  3. ವೀರ್ಯದ ಗುಣಮಟ್ಟ ಸುಧಾರಣೆ: ಕಡಿಮೆ ವೀರ್ಯಾಣು ಸಂಖ್ಯೆಯ ಪುರುಷರಿಗೆ ಲವಂಗವು ಸಹಾಯ ಮಾಡಿ, ವೀರ್ಯದ ಸಂಖ್ಯೆಯನ್ನು ಮತ್ತು ಚಟುವಟಿಕೆಯನ್ನು ಹೆಚ್ಚಿಸುತ್ತದೆ.
  4. ಬ್ಲಡ್ ಶುಗರ್ ನಿಯಂತ್ರಣ: ಲವಂಗದಲ್ಲಿ ಇರುವ ಯುಜೆನಾಲ್ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಸಮತೋಲಗೊಳಿಸಲು ನೆರವಾಗುತ್ತದೆ, ಇದರಿಂದ ಮಧುಮೇಹ ನಿಯಂತ್ರಣ ಸಾಧ್ಯ.
  5. ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳು: ಲವಂಗದ ಆಂಟಿಆಕ್ಸಿಡೆಂಟ್‌ಗಳು ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಸಹಕಾರಿ.
  6. ಹಲ್ಲಿನ ಆರೋಗ್ಯ: ಹಲ್ಲು ನೋವು ಇರುವ ಸಂದರ್ಭದಲ್ಲಿ ಲವಂಗವನ್ನು ಬಳಸುವದು ತ್ವರಿತ ಪರಿಹಾರ ನೀಡುತ್ತದೆ.
  7. ಜೀರ್ಣಕ್ರಿಯೆ ಸುಧಾರಣೆ: ಲವಂಗವು ಆಹಾರ ಜೀರ್ಣವಾಗಲು ಸಹಾಯಮಾಡುತ್ತದೆ.
  8. ಬಾಯಿ ದುರ್ವಾಸನೆ ನಿವಾರಣೆ: ಬಾಯಿಯ ದುರ್ವಾಸನೆ ತಡೆಯಲು ಲವಂಗವು ಪರಿಣಾಮಕಾರಿ.
  9. ರೋಗನಿರೋಧಕ ಶಕ್ತಿ: ಲವಂಗವು ದೇಹದ ರೋಗಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಸೇವಿಸುವ ವಿಧಾನ:
ಪ್ರತಿದಿನ 2–3 ಲವಂಗವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ರಾತ್ರಿ ಊಟದ ನಂತರ ಹಾಲು ಅಥವಾ ಬೆಚ್ಚಗಿನ ನೀರಿನೊಂದಿಗೆ ಸೇವಿಸಬಹುದು. ಲವಂಗವನ್ನು ಚೆನ್ನಾಗಿ ಅಗಿದು ನುಂಗಬೇಕು.

ಎಚ್ಚರಿಕೆ:
ಹೆಚ್ಚು ಪ್ರಮಾಣದಲ್ಲಿ ಸೇವನೆ ಮಾಡಿದರೆ ಹೊಟ್ಟೆ ಕಿರಿಕಿರಿ ಅಥವಾ ಉಸಿರಾಟದ ತೊಂದರೆಗಳು ಉಂಟಾಗಬಹುದು. ಶಿಫಾರಸು ಮಾಡಿದ ಪ್ರಮಾಣವನ್ನು ಮೀರಿ ಸೇವಿಸಬಾರದು.

ಅಧಿಕೃತವಾಗಿ ಸತಿ-ಪತಿಯಾದ ರಶ್ಮಿಕಾ, ವಿಜಯ್; ಅದ್ದೂರಿ ನಡೆದ ವಿವಾಹ!

0

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ಅವರ ಮದುವೆ ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ನೆರವೇರಿತು.

ಬೆಳಗ್ಗೆ 8 ಗಂಟೆಗೆ ನಡೆದ ಶುಭ ಮುಹೂರ್ತದಲ್ಲಿ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿದ್ದು, ಕುಟುಂಬಸ್ಥರು ಮತ್ತು ಆಪ್ತರ ಮಾತ್ರ ಆಹ್ವಾನಿತರಾಗಿದ್ದರು. ಹಲವು ವರ್ಷಗಳಿಂದ ಪ್ರೀತಿಸುತ್ತಾ ಬಂದ ಈ ಜೋಡಿ, ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಮದುವೆ ವೇಳೆ ರಶ್ಮಿಕಾ ಕುಟುಂಬದ ಕೊಡವ ಸಂಪ್ರದಾಯ ಮತ್ತು ವಿಜಯ್ ಕುಟುಂಬದ ಆಂಧ್ರ ಸಂಪ್ರದಾಯಗಳನ್ನು ಗೌರವಿಸಲು ವಿಭಿನ್ನ ಆಚರಣೆಗಳು ಆಯೋಜಿಸಲ್ಪಟ್ಟಿದ್ದು, ಹಳದಿ ಶಾಸ್ತ್ರ, ಮೆಹಂದಿ, ಸಂಗೀತ ಕಾರ್ಯಕ್ರಮಗಳು ಪೂರ್ಣವಾಗಿ ಪ್ಲ್ಯಾನ್ ಆಗಿ ನಡೆದವು. ಮದುವೆಗೆ ಸಾಂದರ್ಭಿಕವಾಗಿ ರವಿತೇಜ್, ಸಂದೀಪ್ ರೆಡ್ಡಿ ವಂಗಾ, ಆಶಿಕಾ ರಂಗನಾಥ್ ಹಾಗೂ ರಶ್ಮಿಕಾ ಗೆಳತಿಯರು ಉಪಸ್ಥಿತರಿದ್ದರು.

ದೇವರಕೊಂಡ ಸಮುದಾಯದ ಸಂಪ್ರದಾಯದಂತೆ ಮುಂಜಾನೆ ಮುಹೂರ್ತದಲ್ಲಿ ಮದುವೆ ನೆರವೇರಿದ್ದು, ಬಳಿಕ ಸಂಜೆ ರಶ್ಮಿಕಾ ಕುಟುಂಬದ ಸಂಪ್ರದಾಯದಂತೆ ಕೊಡವ ಆಚರಣೆಗೂ ಜೋಡಿ ಭಾಗಿಯಾಗಲಿದೆ. ಮಾರ್ಚ್ 4 ರಂದು ಮದುವೆಯ ಆರತಕ್ಷತೆ ನಡೆಯಲಿದ್ದು, ಕನ್ನಡ ಸಿನಿಮಾ ರಂಗದ ಹಲವರು, ಸ್ಯಾಂಡಲ್‌ವುಡ್‌ನ ಶಿವರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್ ಕುಟುಂಬ, ಗಣೇಶ್, ಧ್ರುವ ಸರ್ಜಾ, ಯಶ್, ಕಿಚ್ಚ ಸುದೀಪ್ ಸೇರಿದಂತೆ, ಆಹ್ವಾನಿತರಾಗಿದ್ದಾರೆ.

ಪಿಯುಸಿ ಪರೀಕ್ಷೆಗೂ ಮುನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಶ್ನೆ ಪತ್ರಿಕೆ ಮಾರಾಟ ಪೋಸ್ಟ್: ವಿದ್ಯಾರ್ಥಿಗಳಲ್ಲಿ ಆತಂಕ

0

ಬೆಂಗಳೂರು: ಫೆಬ್ರವರಿ 28ರಿಂದ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಆರಂಭವಾಗಲಿವೆ. ಪರೀಕ್ಷೆಗೆ ಕೇವಲ ಎರಡು ದಿನ ಬಾಕಿ ಇರುವಾಗ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಶ್ನೆ ಪತ್ರಿಕೆ ಮಾರಾಟ ಮಾಡುವುದಾಗಿ ಪೋಸ್ಟ್ ಹರಿದಾಡುತ್ತಿರುವುದು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಮೂಡಿಸಿದೆ.

‘ಡಾ. ಕನ್ನಡಿಗ’ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ “ಯಾವುದಾದರೂ ಪ್ರಶ್ನೆ ಪತ್ರಿಕೆ ಬೇಕು ಅಂದ್ರೆ ಮೆಸೇಜ್ ಮಾಡಿ. ಅಮೌಂಟ್ ಎಷ್ಟು ಅಂತ ಆಮೇಲೆ ಹೇಳ್ತಿನಿ” ಎಂದು ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರೀಕ್ಷಾ ವ್ಯವಸ್ಥೆಯ ಮೇಲೆ ಅನುಮಾನ ಹುಟ್ಟಿಸಿದೆ.

ಆದರೆ, ಯಾವ ವಿಷಯದ ಪ್ರಶ್ನೆ ಪತ್ರಿಕೆ ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಪರೀಕ್ಷಾ ಸಮಯದಲ್ಲಿ ಹಳೆಯ ಅಥವಾ ನಕಲಿ ಪ್ರಶ್ನೆ ಪತ್ರಿಕೆಗಳನ್ನು ನೀಡಿ ಹಣ ಮಾಡುವ ಉದ್ದೇಶದಿಂದ ಇಂತಹ ಮೋಸಗಳು ನಡೆಯುವ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಸಿದೆ. ಇಂತಹ ಜಾಲಗಳಿಗೆ ಸಿಲುಕಿ ಹಣ ಕಳೆದುಕೊಳ್ಳಬಾರದು ಮತ್ತು ಭವಿಷ್ಯ ಹಾಳು ಮಾಡಿಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.

ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ದ್ವಿತೀಯ ಪಿಯುಸಿ ಪೂರ್ವಸಿದ್ಧತಾ ಪರೀಕ್ಷೆಯ ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆಯ ಘಟನೆ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿತ್ತು. ಜನವರಿ 6, 2026ರಂದು ಪರೀಕ್ಷೆ ಆರಂಭಕ್ಕೂ ಮುನ್ನವೇ ಪ್ರಶ್ನೆ ಪತ್ರಿಕೆ ವಾಟ್ಸಾಪ್ ಮೂಲಕ ಹರಿದಾಡಿತ್ತು. ಶಿವಮೊಗ್ಗ ಜಿಲ್ಲೆಯ ಕೋಡ್ ಹೊಂದಿದ್ದ ಪ್ರಶ್ನೆ ಪತ್ರಿಕೆ ತುಮಕೂರು ಜಿಲ್ಲೆಯಲ್ಲೂ ಪತ್ತೆಯಾಗಿತ್ತು.

ಈ ಸಂಬಂಧ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

error: Content is protected !!