Home Blog Page 8

ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ ಆರೋಪ: ಯಾದಗಿರಿ ಶಹಾಪುರದಲ್ಲಿ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಕೇಸ್ – ನಾಪತ್ತೆ ಬಗ್ಗೆ ಚರ್ಚೆ!

0

ಯಾದಗಿರಿ: ಜಿಲ್ಲೆಯಲ್ಲಿ ಧಾರ್ಮಿಕ ವಲಯಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಘಟನೆ ಬೆಳಕಿಗೆ ಬಂದಿದೆ. ಶಹಾಪುರ ತಾಲೂಕಿನ ಮಹಲ್ ರೋಜಾ ಗ್ರಾಮದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ. ಪ್ರಕರಣದ ಬಳಿಕ ಮುತ್ಯಾ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಹರಿದಾಡುತ್ತಿದೆ.

ಮಕ್ಕಳ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಪ್ರಕರಣದ ತನಿಖೆ ಚುರುಕುಗೊಂಡಿದೆ. ಮಠದಲ್ಲಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಕೂಡ ಭಾಗವಹಿಸಿದ್ದರು. ಆರೋಪಿಗೆ ಶೀಘ್ರದಲ್ಲೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮುತ್ಯಾ ಬೆಂಬಲಿಗರು, ವಿಡಿಯೋವನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಹೇಳಿದ್ದು, ಮಲ್ಲಿಕಾರ್ಜುನ ಮುತ್ಯಾ ಎಲ್ಲೂ ಪರಾರಿ ಆಗಿಲ್ಲ ಎಂದು ಅವರ ಕುಟುಂಬ ಸದಸ್ಯರು ಸ್ಪಷ್ಟಪಡಿಸಿದ್ದಾರೆ. ಈ ಘಟನೆ ಸ್ಥಳೀಯವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ.

ಲಕ್ಷ ಲಕ್ಷ ಸಾಲ ಮಾಡಿ ತೀರಿಸಲಾಗದೆ 120 ಅಡಿ ಹೈ ಟೆನ್ಷನ್ ಕಂಬ ಏರಿ ಆತ್ಮಹತ್ಯೆಗೆ ಯತ್ನಸಿದ ರೈತ.!

0

ತುಮಕೂರು: 120 ಅಡಿ ಎತ್ತರದ ವಿದ್ಯುತ್ ಹೈ ಟೆನ್ಷನ್ ಕಂಬ ಏರಿ ರೈತನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಬಿ.ಕೆ. ಹಳ್ಳಿ–ದಳವೆಹಳ್ಳಿ ರಸ್ತೆಯಲ್ಲಿ ನಡೆದಿದೆ. ಅಗ್ನಿಶಾಮಕ ದಳ ಹಾಗೂ ಪೊಲೀಸರು ಸುಮಾರು ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ರೈತನನ್ನು ರಕ್ಷಿಸಿದ್ದಾರೆ.

ಬಿ.ಕೆ. ಹಳ್ಳಿ ಗ್ರಾಮದ ಗೋಪಾಲ್ (53) ಆತ್ಮಹತ್ಯೆಗೆ ಯತ್ನಿಸಿದ ರೈತ. ಮದ್ಯ ಸೇವಿಸಿದ ಸ್ಥಿತಿಯಲ್ಲಿ ವಿದ್ಯುತ್ ಹೈ ಟೆನ್ಷನ್ ಕಂಬ ಏರಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳೀಯರು ಈ ದೃಶ್ಯ ಗಮನಿಸಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸ ಪಟ್ಟು ಕಾರ್ಯಾಚರಣೆ ನಡೆಸಿದರು. ಸುಮಾರು ಮೂರು ಗಂಟೆಗಳ ಪ್ರಯತ್ನದ ಬಳಿಕ ಯಾವುದೇ ಅನಾಹುತವಾಗದಂತೆ ಗೋಪಾಲ್ ಅವರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು.

ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಗೋಪಾಲ್ ತಿಳಿಸಿದ್ದಾರೆ. ಜಮೀನಿಗೆ ಬೋರ್‌ವೆಲ್ ಕೊರೆಸಲು ಹಾಗೂ ಮಗಳ ಮದುವೆಗಾಗಿ ಸುಮಾರು 6 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದಾಗಿ ಹೇಳಿದ್ದಾರೆ. ಸಾಲಗಾರರ ಒತ್ತಡ ಹೆಚ್ಚಾಗಿದ್ದರಿಂದ ಮನನೊಂದು ಮದ್ಯ ಸೇವಿಸಿ ಕಂಬ ಏರಿದ್ದಾಗಿ ತಿಳಿಸಿದ್ದಾರೆ. ಸದ್ಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಗೋಪಾಲ್ ಅವರನ್ನು ಸುರಕ್ಷಿತವಾಗಿ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಯಾಂಡಲ್ ವುಡ್ ನಿರ್ದೇಶಕನ ಕಿಡ್ನ್ಯಾಪ್ ಕೇಸ್: ಚಿನ್ನಾಭರಣ ದೋಚಿದ್ದ ಗ್ಯಾಂಗ್ ಅರೆಸ್ಟ್!

0

ಬೆಂಗಳೂರು: ನಿರ್ದೇಶಕ ಅನೀಶ್ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಘಟನೆ ಬೆಂಗಳೂರಿನ ಆಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.

ಅನೀಶ್ “ಜೀವನದ ಭಾಷೆ” ಎಂಬ ಸಿನಿಮಾವನ್ನು ನಿರ್ದೇಶಿಸುತ್ತಿದ್ದರು. ಇದಕ್ಕೂ ಮುನ್ನ “ಭರವಸೆಯ ಜೀವನ” ಎಂಬ ಶಾರ್ಟ್ ಮೂವಿ ನಿರ್ಮಿಸಿದ್ದರು. ಕೆಲವು ಕಾರಣಗಳಿಂದ ಸಿನಿಮಾ ನಿಲ್ಲಿಸಿ ಬಳಿಕ ಮುಂಬೈಗೆ ಸ್ಥಳಾಂತರವಾಗಿದ್ದರು.

ಈ ನಡುವೆ, ತಮ್ಮ ಕಾರು ಮಾರಾಟದ ಬಗ್ಗೆ ನಟಿ ಐಶ್ವರ್ಯ ಅವರಿಗೆ ಮಾಹಿತಿ ನೀಡಿದ್ದರು. ದುನಿಯಾ ವಿಜಯ್ ಅಭಿನಯದ “ಭೀಮ” ಸಿನಿಮಾದಲ್ಲಿ ನಟಿಸಿದ್ದ ಐಶ್ವರ್ಯ ಮೂಲಕ ಆರೋಪಿಗಳು ಮಾಹಿತಿ ಕಲೆಹಾಕಿದ್ದಾರೆ. ಕಾರು ಖರೀದಿ ಮಾಡುವುದಾಗಿ ಹೇಳಿ ಅನೀಶ್ ಅವರನ್ನು ಸಂಪರ್ಕಿಸಿ, ನಟಿಯ ಮೂಲಕ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ.

ಬೆಂಗಳೂರಿಗೆ ಬಂದ ಬಳಿಕ ಕಾರು ಖರೀದಿ ನೆಪದಲ್ಲಿ ಅನೀಶ್ ಅವರನ್ನು ಕಿಡ್ನ್ಯಾಪ್ ಮಾಡಲಾಗಿದೆ. ನಿರ್ದೇಶಕನೊಂದಿಗೆ ಐದು ಲಕ್ಷ ರೂಪಾಯಿ ಹಣದ ವಿಚಾರವಾಗಿ ಉಂಟಾದ ಜಗಳವೇ ಈ ಕೃತ್ಯಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ 11 ಆರೋಪಿಗಳನ್ನು ಬಂಧಿಸಿರುವ ಆಡುಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಡಾ. ರಾಜ್‌ಕುಮಾರ್ ಅಪಹರಣ ಪ್ರಕರಣ: ವೀರಪ್ಪನ್ ಸಹಚರರ ಖುಲಾಸೆ ತೀರ್ಪು ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್

ಡಾ. ರಾಜ್‌ಕುಮಾರ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ 25 ವರ್ಷಗಳ ಬಳಿಕ ಮಹತ್ವದ ಕಾನೂನು ಬೆಳವಣಿಗೆ ಸಂಭವಿಸಿದೆ. ಮದ್ರಾಸ್ ಹೈಕೋರ್ಟ್ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸುವ ಮೂಲಕ ಕೆಳ ನ್ಯಾಯಾಲಯದ ಖುಲಾಸೆ ತೀರ್ಪನ್ನು ಎತ್ತಿಹಿಡಿದಿದೆ.

2000ರ ಜುಲೈ 30ರಂದು ದೊಡ್ಡಗಾಜನೂರಿನ ಫಾರ್ಮ್‌ಹೌಸ್‌ನಿಂದ ಡಾ. ರಾಜ್‌ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ್ದ. 108 ದಿನಗಳ ಕಾಲ ನಡೆದ ಈ ನಾಟಕೀಯ ಘಟನೆ ಕರ್ನಾಟಕ ಮತ್ತು ತಮಿಳುನಾಡಿನ ರಾಜಕೀಯ ಹಾಗೂ ಕಾನೂನು ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು.

ಪ್ರಕರಣದಲ್ಲಿ 14 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಎನ್‌ಕೌಂಟರ್‌ನಲ್ಲಿ ವೀರಪ್ಪನ್ ಸೇರಿ ನಾಲ್ವರು ಸಾವನ್ನಪ್ಪಿದ ಬಳಿಕ, ಉಳಿದ ಒಂಬತ್ತು ಮಂದಿಯ ವಿರುದ್ಧ ದೀರ್ಘಾವಧಿ ವಿಚಾರಣೆ ನಡೆದಿತ್ತು. ಸುಮಾರು 10 ನ್ಯಾಯಮೂರ್ತಿಗಳು ಬದಲಾಗಿದ್ದ ಈ ಪ್ರಕರಣ 18 ವರ್ಷಗಳ ಬಳಿಕ 2018ರಲ್ಲಿ ಖುಲಾಸೆ ತೀರ್ಪಿನಿಂದ ಅಂತ್ಯಗೊಂಡಿತ್ತು.

ಆ ತೀರ್ಪಿಗೆ ವಿರೋಧವಾಗಿ 2019ರಲ್ಲಿ ಸಲ್ಲಿಸಿದ ಮೇಲ್ಮನವಿಯನ್ನು ಇದೀಗ ಹೈಕೋರ್ಟ್ ತಿರಸ್ಕರಿಸಿದೆ. ಇದರೊಂದಿಗೆ ಎರಡು ದಶಕಗಳಿಗೂ ಅಧಿಕ ಕಾಲ ಮುಂದುವರಿದ ಕಾನೂನು ಹೋರಾಟಕ್ಕೆ ಅಂತಿಮ ತೆರೆ ಬಿದ್ದಂತಾಗಿದೆ.

ಪಿ. ಲಂಕೇಶ್ ಪರಂಪರೆಗೆ ಮೂರನೇ ಕಿರೀಟ: ಸಮರ್ಜಿತ್ ಲಂಕೇಶ್ ಗೆ ಫಿಲ್ಮ್‌ಫೇರ್ ಗೌರವ

70ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭವು ಲಂಕೇಶ್ ಕುಟುಂಬಕ್ಕೆ ಮತ್ತೊಮ್ಮೆ ಗೌರವ ತಂದಿದೆ. ಸಮರ್ಜಿತ್ ಲಂಕೇಶ್ ಅವರು ‘ಗೌರಿ’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನವನಟ ಪ್ರಶಸ್ತಿ ಗೆದ್ದು ಕುಟುಂಬದ ಸಾಧನೆಯನ್ನು ಮುಂದುವರಿಸಿದ್ದಾರೆ.

ಕನ್ನಡ ಸಾಹಿತ್ಯ ಹಾಗೂ ಚಿತ್ರರಂಗದಲ್ಲಿ ವಿಶಿಷ್ಟ ಗುರುತು ಮೂಡಿಸಿದ ಪಿ. ಲಂಕೇಶ್ ಅವರು ಎಲ್ಲಿಂದಲೋ ಬಂದವರು ಚಿತ್ರದ ಮೂಲಕ ಫಿಲ್ಮ್‌ಫೇರ್ ಗೌರವ ಪಡೆದಿದ್ದರು. ಅವರ ಪುತ್ರ ಇಂದ್ರಜಿತ್ ಲಂಕೇಶ್ ನಿರ್ದೇಶನ ಕ್ಷೇತ್ರದಲ್ಲಿ ‘ಐಶ್ವರ್ಯ’ ಚಿತ್ರದಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದಿದ್ದರು.

ಈಗ ಸಮರ್ಜಿತ್ ಲಂಕೇಶ್ ‘ಗೌರಿ’ ಮೂಲಕ ಯಶಸ್ವಿ ಆರಂಭ ಮಾಡಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ವೃಷಭ ಚಿತ್ರದಲ್ಲಿ ಮೋಹನ್ಲಾಲ್ ಜೊತೆ ಅಭಿನಯಿಸಿದ್ದು ಅವರ ಕರಿಯರ್‌ಗೆ ಹೊಸ ಆಯಾಮ ನೀಡಿದೆ. ಒಂದು ಕನ್ನಡ ಹಾಗೂ ಒಂದು ಹಿಂದಿ ಸಿನಿಮಾವನ್ನು ಅವರು ಒಪ್ಪಿಕೊಂಡಿದ್ದು, ಶೀಘ್ರದಲ್ಲೇ ಅಧಿಕೃತ ಮಾಹಿತಿ ಹೊರಬೀಳಲಿದೆ.

ಲಂಕೇಶ್ ಕುಟುಂಬದ ಚಿತ್ರಯಾನ ಮೂರನೇ ತಲೆಮಾರಿನೊಂದಿಗೆ ಮತ್ತಷ್ಟು ಬಲ ಪಡೆಯುತ್ತಿದೆ.

ತೆಲುಗು ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಶ್ಮಿಕಾ-ವಿಜಯ್ ದೇವರಕೊಂಡ

ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಸಮಾರಂಭ ಭಾರಿ ಗಮನ ಸೆಳೆದಿದೆ. ರಾಜಸ್ಥಾನದ ಉದಯಪುರದ ಐಷಾರಾಮಿ ರೆಸಾರ್ಟ್‌ನಲ್ಲಿ ಇಂದು ಬೆಳಗ್ಗೆ ಈ ಜೋಡಿ ಅಧಿಕೃತವಾಗಿ ವಿವಾಹವಾಗಿದ್ದಾರೆ.

ಕುಟುಂಬದ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ನಡೆದ ವಿವಾಹವು ತೆಲುಗು ಸಂಪ್ರದಾಯದಂತೆ ನೆರವೇರಿತು. ಕಳೆದ ವರ್ಷ ನಡೆದ ನಿಶ್ಚಿತಾರ್ಥದ ನಂತರ ಈ ಜೋಡಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದೆ. ಮದುವೆಗೆ ಮುನ್ನ ಮೆಹಂದಿ, ಹಳದಿ ಮತ್ತು ಸಂಗೀತ್ ಕಾರ್ಯಕ್ರಮಗಳು ನಡೆಯುವ ಮೂಲಕ ಮದುವೆ ಸಂಭ್ರಮ ಆರಂಭವಾಗಿತ್ತು.

ಈ ಜೋಡಿ ವಿಭಿನ್ನ ಸಂಪ್ರದಾಯಗಳಿಗೆ ಸೇರಿದ ಕುಟುಂಬಗಳಿಂದ ಬಂದಿರುವ ಕಾರಣ, ತೆಲುಗು ಮತ್ತು ಕೊಡವ ಸಂಪ್ರದಾಯಗಳನ್ನು ಸಮನಾಗಿ ಪಾಲಿಸುವ ರೀತಿಯಲ್ಲಿ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಂಜೆ ವೇಳೆಗೆ ಕೊಡವ ಸಂಪ್ರದಾಯದ ಶಾಸ್ತ್ರಗಳು ನಡೆಯುವ ನಿರೀಕ್ಷೆಯಿದೆ.

ಚಿತ್ರರಂಗ ಮತ್ತು ರಾಜಕೀಯ ವಲಯದ ಗಣ್ಯರು ಭಾಗವಹಿಸುವ ನಿರೀಕ್ಷೆಯಿದ್ದು, ಮಾರ್ಚ್ ಮೊದಲ ವಾರದಲ್ಲಿ ಹೈದರಾಬಾದ್‌ನಲ್ಲಿ ಭರ್ಜರಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

ಸಿಎಂ ಕುರ್ಚಿ ಗೊಂದಲಗಳಿಗೆ ಹೈಕಮಾಂಡೇ ಉತ್ತರ ನೀಡಬೇಕು: ಸಚಿವ ಡಾ. ಜಿ. ಪರಮೇಶ್ವರ್ 

0

ಬೆಂಗಳೂರು: ಸಿಎಂ ಕುರ್ಚಿ ವಿಚಾರದಲ್ಲಿ ಉಂಟಾಗಿರುವ ಗೊಂದಲಗಳಿಗೆ ಹೈಕಮಾಂಡ್‌ವೇ ಉತ್ತರ ನೀಡಬೇಕು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.ಸಿಎಂ ಸ್ಥಾನಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳು ತಮ್ಮ ಹೆಸರು ಕೂಗುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ವಿಷಯದಲ್ಲಿ ಸಾಕಷ್ಟು ಗೊಂದಲಗಳು ಈಗಾಗಲೇ ಉಂಟಾಗಿವೆ. ನಾನು ಅದನ್ನು ಇನ್ನಷ್ಟು ಗೊಂದಲಗೊಳಿಸಲು ಸಿದ್ಧನಿಲ್ಲ ಎಂದು ತಿಳಿಸಿದ್ದಾರೆ.

ಅನೇಕರು ತಮ್ಮನ್ನು ಪ್ರಶ್ನಿಸುತ್ತಾರೆ. ಕೆಲ ಅಭಿಮಾನಿಗಳು ಸಿಎಂ ಆಗಬೇಕು ಎಂದು ಘೋಷಣೆಗಳನ್ನು ಕೂಗುತ್ತಾರೆ. ಆದರೆ ಇದರ ಕುರಿತು ಉತ್ತರ ನೀಡಬೇಕಾಗಿರುವುದು ಹೈಕಮಾಂಡ್. ಯಾವ ಸಮಯದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕೋ, ಆ ಸಮಯದಲ್ಲಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

ನಾನು ಯಾವತ್ತೂ ಲಾಬಿ ಮಾಡಲು ಹೋಗಿಲ್ಲ. ದೆಹಲಿಗೂ ಹೋಗಿಲ್ಲ. ಯಾವುದೇ ರೀತಿಯ ಲಾಬಿ ಮಾಡುತ್ತಿಲ್ಲ. ನಮ್ಮ ಹಿತೈಷಿಗಳು ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿರಬಹುದು.

ಅವರಿಗೆ ಮಾಡಬೇಡಿ ಎಂದು ಹೇಳುವುದು ಕಷ್ಟ. 2-3 ಬಾರಿ ಹಾಗೆ ಮಾಡಬೇಡಿ ಎಂದು ಹೇಳಿದ್ದೇನೆ. ಆದರೆ ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಈ ಗೊಂದಲಕ್ಕೆ ನಾನು ಕೈಜೋಡಿಸುವುದಿಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

“ನೀನೇ ಖುಷಿಯಾಗಿರು”: ಸ್ಟೇಟಸ್ ಹಾಕಿ ನೀರಿಗೆ ಹಾರಿ 19 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ!

0

ತುಮಕೂರು: “ನೀನೇ ಖುಷಿಯಾಗಿರು, ನಾನು ಪ್ರಪಂಚನೇ ಬಿಟ್ಟು ಹೋಗ್ತಿದಿನಿ” ಎಂದು ಮೊಬೈಲ್‌ನಲ್ಲಿ ಸ್ಟೇಟಸ್ ಹಾಕಿ ವಿದ್ಯಾರ್ಥಿಯೊಬ್ಬ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ತುರುವೇಕೆರೆ ಪಟ್ಟಣದಲ್ಲಿ ನಡೆದಿದೆ. ತುರುವೇಕೆರೆ ತಾಲ್ಲೂಕಿನ ಕೊಂಡಜ್ಜಿ ಬಳಿಯ ಗೋಪ್ಪೆನಹಳ್ಳಿ ಗ್ರಾಮದ ಧನುಷ್ (19) ಮೃತ ವಿದ್ಯಾರ್ಥಿ. ಎರಡನೇ ವರ್ಷದ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.

ಬುಧವಾರ (ಫೆ.25) ಬೆಳಿಗ್ಗೆ ಕಾಲೇಜಿಗೆ ಹೋಗುತ್ತೇನೆಂದು ಹೇಳಿ ಮನೆಯಿಂದ ಹೊರಟಿದ್ದ ಧನುಷ್, ಸಂಜೆಯಾದರೂ ಮನೆಗೆ ಮರಳಿರಲಿಲ್ಲ. ಪೋಷಕರು ಕರೆ ಮಾಡಿದರೂ ಮೊಬೈಲ್ ಸ್ವೀಕರಿಸಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಎಲ್ಲೆಡೆ ಹುಡುಕಾಟ ಆರಂಭಿಸಿದರು.

ಹುಡುಕಾಟದ ವೇಳೆ ಡಿಪ್ಲೋಮಾ ಕಾಲೇಜಿನ ಹಿಂಭಾಗದಲ್ಲಿರುವ ಕಟ್ಟೆ ಬಳಿ ಧನುಷ್  ಬ್ಯಾಗ್, ಚಪ್ಪಲಿ ಮತ್ತು ಮೊಬೈಲ್ ಪತ್ತೆಯಾಗಿದೆ. ಜೊತೆಗೆ ಆತ್ಮಹತ್ಯೆಗೆ ಮುನ್ನ ಮೊಬೈಲ್‌ನಲ್ಲಿ ಸ್ಟೇಟಸ್ ಹಾಕಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಪೋಷಕರು ತುರುವೇಕೆರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ನೀರಿನ ಕಟ್ಟೆಯಲ್ಲಿ ಶೋಧ ಕಾರ್ಯ ನಡೆಸಿ ವಿದ್ಯಾರ್ಥಿ ಧನುಷ್  ಮೃತದೇಹವನ್ನು ಪತ್ತೆಹಚ್ಚಿದರು. ಬಳಿಕ ಮೃತದೇಹವನ್ನು ಹೊರತೆಗೆದು ತುರುವೇಕೆರೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

 ತಾಯಿಗೆ ‘ಐ ಲವ್ ಯೂ ಸೋ ಮಚ್’ ಎಂದು ಸಂದೇಶ ಕಳುಹಿಸಿ ವಿದ್ಯಾರ್ಥಿನಿ ಆತ್ಮಹತ್ಯೆ!

0

ಹೈದರಾಬಾದ್: ಯೂಟ್ಯೂಬರ್ ಹಾಗೂ ಬಿಎಸ್ಸಿ ವಿದ್ಯಾರ್ಥಿನಿಯೊಬ್ಬಳು ಹೈದರಾಬಾದ್‌ನ ತನ್ನ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಫೆಬ್ರವರಿ 23ರಂದು (ಸೋಮವಾರ) ನಡೆದಿದೆ. ಸಾಯುವ ಮುನ್ನ ಕುವೈತ್‌ನಲ್ಲಿ ಕೆಲಸ ಮಾಡುತ್ತಿರುವ ತಾಯಿಗೆ “ಐ ಲವ್ ಯೂ ಸೋ ಮಚ್” ಎಂಬ ಸಂದೇಶ ಕಳುಹಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಳನ್ನು ಕೋಮಲಿ (21) ಎಂದು ಗುರುತಿಸಲಾಗಿದೆ. ಆಕೆ ಮೂಲತಃ ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೂಲದವರು. ಕಳೆದ 11 ತಿಂಗಳಿನಿಂದ ಹೈದರಾಬಾದ್‌ನಲ್ಲಿರುವ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ ಆಕೆ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಅಭ್ಯಾಸ ಮಾಡುತ್ತಿದ್ದರು. ವಿಜ್ಞಾನ ವಿದ್ಯಾರ್ಥಿನಿಯಾಗಿದ್ದ ಕೋಮಲಿ ಯೂಟ್ಯೂಬರ್ ಆಗಿಯೂ ಗುರುತಿಸಿಕೊಂಡಿದ್ದರು.

ಫೆಬ್ರವರಿ 23ರ ಬೆಳಗ್ಗೆ, ಕೋಮಲಿ ತನ್ನ ತಾಯಿ ಬಿ. ಸತ್ಯ ವರಲಕ್ಷ್ಮಿಗೆ “ನಿಮ್ಮನ್ನು ತುಂಬಾ ಪ್ರೀತಿಸುತ್ತೀನಿ ಅಮ್ಮ” ಎಂದು ಸಂದೇಶ ಕಳುಹಿಸಿ, ಕಿರಿಯ ಸಹೋದರನನ್ನು ನೋಡಿಕೊಳ್ಳುವಂತೆ ಮನವಿ ಮಾಡಿದ್ದಾಳೆ. ಬಳಿಕ ಆಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು.ತಾಯಿ ಹಲವು ಬಾರಿ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗದೆ, ಸ್ನೇಹಿತರನ್ನು ಸಂಪರ್ಕಿಸಿ ಕೋಮಲಿಯ ಫ್ಲಾಟ್‌ಗೆ ಹೋಗುವಂತೆ ತಿಳಿಸಿದ್ದಾರೆ.

ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಸ್ನೇಹಿತರು ಫ್ಲಾಟ್‌ಗೆ ತೆರಳಿದ್ದು, ಬಾಗಿಲು ತಟ್ಟಿದರೂ ಪ್ರತಿಕ್ರಿಯೆ ಬಂದಿಲ್ಲ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿ ಬೀಗ ಮುರಿದು ಒಳ ಪ್ರವೇಶಿಸಿದರು. ಅಲ್ಲಿ ಕೋಮಲಿಯ ಶವ ಸೀಲಿಂಗ್ ಫ್ಯಾನ್‌ಗೆ ನೇತಾಡುತ್ತಿರುವುದು ಕಂಡುಬಂದಿದೆ. ಸ್ಥಳದಿಂದ ಸಣ್ಣ ಏಣಿ ಹಾಗೂ ಸೀರೆ ವಶಪಡಿಸಿಕೊಳ್ಳಲಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಕೋಮಲಿ ಕಳೆದ ಮೂರು ವರ್ಷಗಳಿಂದ 27 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಜೊತೆ ಸಂಬಂಧ ಹೊಂದಿದ್ದಳು. ಇತ್ತೀಚೆಗೆ ಇಬ್ಬರೂ ಸಂಬಂಧ ಮುರಿದಿರುವ ಮಾಹಿತಿ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರು ತಿಂಗಳ ಹಿಂದೆಯೂ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹೆಚ್ಚಿನ ತನಿಖೆಗಾಗಿ ಭೌತಿಕ ಹಾಗೂ ಡಿಜಿಟಲ್ ಪುರಾವೆಗಳನ್ನು ಸಂಗ್ರಹಿಸಿದ್ದಾರೆ.

ಶಿವಾಜಿ ಜಯಂತಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ: NIA ತನಿಖೆಗೆ ಶ್ರೀರಾಮುಲು ಮನವಿ

0

ಬಾಗಲಕೋಟೆ: ಜಿಲ್ಲೆಯಲ್ಲಿನ ಶಿವಾಜಿ ಜಯಂತಿ ಮೆರವಣಿಗೆಯ ಮೇಲೆ ನಡೆದ ಕಲ್ಲು ತೂರಾಟ ಮತ್ತು ಚಪ್ಪಲಿ ಎಸೆದಿರುವ ಘಟನೆಗೆ ತೀವ್ರ ಅಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ ಹಾಗೂ ಸಂಸದ ಬಿ. ಶ್ರೀರಾಮುಲು, ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಹಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಘಟನೆಯ ವಿವರ

ಫೆಬ್ರವರಿ 19ರಂದು ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ಸಾಗುತ್ತಿದ್ದಾಗ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಮೆರವಣಿಗೆಯ ಮೇಲೆ ಚಪ್ಪಲಿ ಎಸೆದು ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಶ್ರೀರಾಮುಲು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದು ಕೇವಲ ಸ್ಥಳೀಯ ಕಿಡಿಗೇಡಿತನವಲ್ಲ, ಇದರ ಹಿಂದೆ ದೊಡ್ಡ ಸಂಚು ಇರುವ ಸಾಧ್ಯತೆ ಇದೆ ಎಂದು ಶ್ರೀರಾಮುಲು ಅಭಿಪ್ರಾಯಪಟ್ಟಿದ್ದಾರೆ. ಸತ್ಯಾಸತ್ಯತೆ ಹೊರಬರಲು ಎನ್‌ಐಎ ತನಿಖೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಘಟನೆಗಳ ಮಾದರಿಯಲ್ಲೇ ರಾಜ್ಯದಲ್ಲಿ ಹಿಂದೂ ಸಂಘಟನೆಗಳ ಮೆರವಣಿಗೆಗಳ ಮೇಲೆ ದಾಳಿಗಳು ನಡೆಯುತ್ತಿವೆ ಎಂದು ಆರೋಪಿಸಿರುವ ಅವರು, ಇಂತಹ ಕೃತ್ಯಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ. ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಂತಿ ಕಾಪಾಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಇದರ ನಡುವೆ ಕೆಲ ಯುವಕರು ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನಾಕಾರಿ ವಿಡಿಯೋ ಹಂಚಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. “15 ನಿಮಿಷ ಪೊಲೀಸರು ಸುಮ್ಮನಿರಲಿ, ಇಸ್ಲಾಂ ಪವರ್ ತೋರಿಸುತ್ತೇವೆ” ಎಂಬ ಅರ್ಥದ ಹೇಳಿಕೆ ಪೋಸ್ಟ್‌ನಲ್ಲಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

error: Content is protected !!