Home Blog Page 10

ಉತ್ತಮ ಶಿಕ್ಷಕರು ಪ್ರಭಾವ ಬೀರುವ ಶಕ್ತಿಗಳು: ಕವಿತಾ ದಂಡಿನ

0

ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಕರು ಕೇವಲ ಪಾಠ ಬೋಧನೆಗೆ ಸೀಮಿತರಲ್ಲ. ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿ, ವ್ಯಕ್ತಿತ್ವ ವಿಕಸನ, ಚಿಂತನಶೀಲತೆ ಹಾಗೂ ಜೀವನ ಮೌಲ್ಯಗಳನ್ನು ರೂಪಿಸುವ ಮೂಲಕ ಆಧುನಿಕ ಸಮಾಜದ ನಿರ್ಮಾತರಾಗಿದ್ದಾರೆ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ಹೇಳಿದರು.

ನಗರದ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ವತಿಯಿಂದ ಶನಿವಾರ ತೋಂಟದಾರ್ಯ ಮಠದ ಅನುಭವ ಮಂಟಪದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ‘ಶಿಕ್ಷಕರು ಆಧುನಿಕ ಸಮಾಜದ ನಿರ್ಮಾತರು’ ವಿಷಯ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.

ಉತ್ತಮ ಶಿಕ್ಷಕರು ಪ್ರಭಾವ ಬೀರುವ ಶಕ್ತಿಗಳಾಗಿದ್ದು, ಅವರ ಪ್ರಭಾವ ಒಬ್ಬ ವಿದ್ಯಾರ್ಥಿಯ ಜೀವನಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಶಿಕ್ಷಕರಿಂದ ಜ್ಞಾನ ಪಡೆದ ಮಕ್ಕಳು ಮುಂದೆ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಾರೆ. ಹೀಗಾಗಿ ಶಿಕ್ಷಕರು ರಾಷ್ಟ್ರದ ಉಜ್ವಲ ಭವಿಷ್ಯಕ್ಕೆ ಮಕ್ಕಳನ್ನು ಸಿದ್ಧಪಡಿಸುವ ಶಕ್ತಿಯಾಗಿದ್ದಾರೆ ಎಂದರು.

ಮೈಸೂರಿನ ವಿವೇಕಾನಂದ ಯೋಗ ಎಜುಕೇಷನ್ ಆ್ಯಂಡ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಿಂದ ‘ರಾಜಯೋಗಿ ಟಿ. ಕೃಷ್ಣಮಾಚಾರ್ಯ ಪ್ರಶಸ್ತಿ-೨೦೨೬’ ಪಡೆದ ಗದಗದ ಯೋಗಾಚಾರ್ಯ ಕೆ.ಎಸ್. ಪಲ್ಲೇದ ಮಾತನಾಡಿ, ಉತ್ತಮ ಶಿಕ್ಷಕರು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವ ಮೂಲಕ ಸಮಾಜ ನಿರ್ಮಾಣದ ಕೈಂಕರ್ಯಕ್ಕೆ ಅಣಿಯಾಗುತ್ತಾರೆ. ವಿದ್ಯಾರ್ಥಿಗಳನ್ನು ಮೌಲ್ಯಯುತ ನಾಗರಿಕರನ್ನಾಗಿ ರೂಪಿಸಿದಾಗ ಉತ್ತಮ ನಾಗರಿಕರಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಶಿಕ್ಷಕರು ಸಮಾಜದ ಮಾರ್ಗದರ್ಶಕರಾಗಿ ಜ್ಞಾನ ದೀವಿಗೆ ಬೆಳಗಿಸುವ ನಿರಂತರ ಜ್ಯೋತಿಗಳಾಗಿದ್ದಾರೆ ಎಂದರು.

ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ವತಿಯಿಂದ ಗದಗ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತೆ ಶ್ರೀಮತಿ ಭಾರತಿ ಕುಲಕರ್ಣಿ, ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ, ಯೋಗಾಚಾರ್ಯ ಕೆ.ಎಸ್. ಪಲ್ಲೇದ ಹಾಗೂ ಯೋಗ ಶಿಕ್ಷಕರಾದ ಸುನಂದಾ ಜಾನೋಪಂತರ, ಜಯಶ್ರೀ ಡಾವಣಗೆರೆ, ಲಕ್ಷ್ಮೀ ನಿಡವಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರು ಕೃತಜ್ಞತೆ ವ್ಯಕ್ತಪಡಿಸಿ ಮಾತನಾಡಿದರು.

ಅರುಣಾ ಹಳಕಟ್ಟಿ ವಚನ ಪ್ರಾರ್ಥನೆ ನೆರವೇರಿಸಿದರು. ಶಾರದಾ ಬೊಮ್ಮಸಾಗರ ನಿರೂಪಿಸಿದರು. ರೇಣುಕಾ ಅಮಾತ್ಯ ಹಾಗೂ ಶಶಿಕಲಾ ಮಾಲೀಪಾಟೀಲ ಪರಿಚಯಿಸಿದರು. ಸುಗ್ಗಲಾ ಯಳಮಲಿ ಕಾರ್ಯಕ್ರಮ ನಿರ್ವಹಿಸಿದರು. ಪುಷ್ಪಾ ಬಂಡಾರಿ ವಂದಿಸಿದರು.

ಗೌರವಾಧ್ಯಕ್ಷರಾದ ನಿರ್ಮಲಾ ಪಾಟೀಲ, ಅಕ್ಕಮಹಾದೇವಿ ಚಟ್ಟಿ, ಸದಸ್ಯರಾದ ಶೀಲಾ ಗೋಟಡಕಿ, ಶಾರದಾ ಸಜ್ಜನರ, ಜಯಶ್ರೀ ಹುಬ್ಬಳ್ಳಿ, ಅಕ್ಕಮ್ಮ ವಸ್ತ್ರದ, ಶಕುಂತಲಾ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಟಿಕೆಟ್ ದರದ ಜೊತೆಗೆ ಜಾಹೀರಾತಿನಿಂದಲೂ ಆದಾಯ ಹೆಚ್ಚಿಸಿಕೊಳ್ಳಲು BMTC ಪ್ಲ್ಯಾನ್!

0

ಬೆಂಗಳೂರು: ಟಿಕೆಟ್ ದರದ ಹೊರತಾಗಿ ಜಾಹೀರಾತುಗಳ ಮೂಲಕವೂ ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಹೊಸ ಯೋಜನೆಗೆ ಮುಂದಾಗಿದೆ. ನಗರದ ಬಿಎಂಟಿಸಿ ಬಸ್‌ಗಳಲ್ಲಿ ಆಡಿಯೋ ಜಾಹೀರಾತು ವ್ಯವಸ್ಥೆ ಅಳವಡಿಸಿ ನಿರ್ವಹಿಸಲು ಸಂಸ್ಥೆ ಕಳೆದ ವಾರ ಟೆಂಡರ್ ಕರೆದಿದೆ. ಹೀಗಾಗಿ ಇನ್ನು ಮುಂದೆ ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರು ತಮ್ಮ ಪ್ರಯಾಣದ ವೇಳೆ ಜಾಹೀರಾತುಗಳನ್ನೂ ಕೇಳಬೇಕಾಗಬಹುದು.

ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ಸಂಚರಿಸುವ 300 ನಾನ್‌-ಎಸಿ ಬಿಎಂಟಿಸಿ ಬಸ್‌ಗಳಲ್ಲಿ ಆಡಿಯೋ ಜಾಹೀರಾತುಗಳನ್ನು ಪ್ರಸಾರ ಮಾಡಲು ಉದ್ದೇಶಿಸಲಾಗಿದೆ. ಟೆಂಡರ್‌ನಲ್ಲಿ ಆಯ್ಕೆಯಾಗುವ ಏಜೆನ್ಸಿಯು ಸಂಪೂರ್ಣ ವ್ಯವಸ್ಥೆಯನ್ನು ಪೂರೈಸುವುದು, ಅಳವಡಿಸುವುದು, ನಿರ್ವಹಣೆ ಹಾಗೂ ಕಾರ್ಯಾಚರಣೆಯ ಜವಾಬ್ದಾರಿ ವಹಿಸಬೇಕಾಗುತ್ತದೆ.

ದಕ್ಷಿಣ ಭಾರತದಲ್ಲೇ ಮೊದಲ ಪ್ರಯತ್ನ

ಬಿಎಂಟಿಸಿ ಪ್ರಕಾರ, ದಕ್ಷಿಣ ಭಾರತದಲ್ಲೇ ಇದೇ ಮೊದಲ ಬಾರಿಗೆ ಸಾರ್ವಜನಿಕ ಸಾರಿಗೆ ಬಸ್‌ಗಳಲ್ಲಿ ಈ ರೀತಿಯ ಆಡಿಯೋ ಜಾಹೀರಾತು ವ್ಯವಸ್ಥೆ ಜಾರಿಗೆ ಬರಲಿದೆ. ಬಿಎಂಟಿಸಿಯ ಸಾಮಾನ್ಯ, ಎಕ್ಸ್‌ಪ್ರೆಸ್ ಹಾಗೂ ರಾತ್ರಿ ಸೇವೆಯ ಬಸ್‌ಗಳಲ್ಲಿ ಜಾಹೀರಾತುಗಳನ್ನು ಪ್ರಸಾರ ಮಾಡಲು ಯೋಜಿಸಲಾಗಿದೆ.

ಕನ್ನಡದ ಪ್ರತಿ ಆಡಿಯೋ ಜಾಹೀರಾತಿನ ಸ್ಲಾಟ್ ಗರಿಷ್ಠ 10 ಸೆಕೆಂಡ್‌ಗಳವರೆಗೆ ಇರಲಿದೆ. ಜಾಹೀರಾತಿನ ಇಂಗ್ಲಿಷ್ ಅನುವಾದ ಐಚ್ಛಿಕವಾಗಿರಲಿದೆ. ಪ್ರತಿ ಬಸ್‌ಗೆ ಮಾಸಿಕ ಶುಲ್ಕ ವಿಧಿಸುವ ವ್ಯವಸ್ಥೆ ಇರಲಿದ್ದು, ಆಯ್ಕೆಯಾಗುವ ಸಂಸ್ಥೆಗೆ ಮೂರು ವರ್ಷಗಳ ಗುತ್ತಿಗೆ ನೀಡಲಾಗುತ್ತದೆ. ಬಳಿಕ ಗುತ್ತಿಗೆಯನ್ನು ವಿಸ್ತರಿಸುವ ಅವಕಾಶವೂ ಇರಲಿದೆ.

GPS ಜೊತೆ ಜಾಹೀರಾತು ವ್ಯವಸ್ಥೆ ಸಂಯೋಜನೆ

ಈಗಾಗಲೇ ಬಿಎಂಟಿಸಿ ಬಸ್‌ಗಳಲ್ಲಿ ಅಳವಡಿಸಲಾಗಿರುವ GPS ವ್ಯವಸ್ಥೆಯೊಂದಿಗೆ ಆಡಿಯೋ ಜಾಹೀರಾತು ವ್ಯವಸ್ಥೆಯನ್ನು ಸಂಯೋಜಿಸಲು ಯೋಜಿಸಲಾಗಿದೆ. ಇದರ ಮೂಲಕ ಸ್ಥಳ ಆಧಾರಿತ ಜಾಹೀರಾತುಗಳನ್ನು ಪ್ರಸಾರ ಮಾಡಲು ಸಂಸ್ಥೆ ಉದ್ದೇಶಿಸಿದೆ.

ಆದರೆ ಪ್ರಯಾಣಿಕರ ನಿಲ್ದಾಣಗಳ ಘೋಷಣೆಗಳಿಗೆ ಯಾವುದೇ ರೀತಿಯ ಅಡ್ಡಿಯಾಗದಂತೆ ಜಾಹೀರಾತುಗಳನ್ನು ಪ್ರಸಾರ ಮಾಡಲಾಗುತ್ತದೆ ಎಂದು ಬಿಎಂಟಿಸಿ ತಿಳಿಸಿದೆ. ಒಟ್ಟು ಜಾಹೀರಾತು ಪ್ರಸಾರದ ಸಮಯದಲ್ಲಿ ಶೇ.10ರಷ್ಟು ಸಮಯವನ್ನು ಬಿಎಂಟಿಸಿ ತನ್ನದೇ ಘೋಷಣೆಗಳು, ಸಾರ್ವಜನಿಕ ಸೇವಾ ಸಂದೇಶಗಳು ಹಾಗೂ ಅಧಿಕೃತ ಮಾಹಿತಿಗಾಗಿ ಮೀಸಲಿಡಲಿದೆ. ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಇನ್ನಷ್ಟು ಬಿಎಂಟಿಸಿ ಬಸ್‌ಗಳಿಗೆ ವಿಸ್ತರಿಸುವ ಉದ್ದೇಶವನ್ನೂ ಸಂಸ್ಥೆ ಹೊಂದಿದೆ ಎನ್ನಲಾಗಿದೆ.

ಪ್ರಯಾಣಿಕರಿಗೆ ತೊಂದರೆಯಾಗದಂತೆ ನಿಯಂತ್ರಣ?

ಆಡಿಯೋ ಜಾಹೀರಾತುಗಳಿಂದ ಪ್ರಯಾಣಿಕರಿಗೆ ತೊಂದರೆಯಾಗದಂತೆ ಧ್ವನಿಯ ಪ್ರಮಾಣ, ಜಾಹೀರಾತುಗಳ ಗುಣಮಟ್ಟ ಹಾಗೂ ಭಾಷಾ ನಿಯಮಗಳನ್ನು ನಿಯಂತ್ರಿಸುವುದಾಗಿ ಬಿಎಂಟಿಸಿ ಭರವಸೆ ನೀಡಿದೆ.

ಆದರೆ, ಬಸ್ ಪ್ರಯಾಣದ ವೇಳೆ ನಿರಂತರವಾಗಿ ಜಾಹೀರಾತುಗಳು ಪ್ರಸಾರವಾಗುವುದರಿಂದ ಪ್ರಯಾಣಿಕರಿಗೆ ಕಿರಿಕಿರಿಯಾಗಬಹುದು ಎಂಬ ಆತಂಕವೂ ವ್ಯಕ್ತವಾಗಿದೆ. ವಿಶೇಷವಾಗಿ ಪೀಕ್ ಅವರ್‌ಗಳಲ್ಲಿ ಜಾಹೀರಾತುಗಳು ಜೋರಾಗಿ ಪ್ರಸಾರವಾದರೆ, ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ಸಂಘರ್ಷಕ್ಕೂ ಕಾರಣವಾಗಬಹುದು ಎಂಬ ಅಭಿಪ್ರಾಯ ಕೇಳಿಬಂದಿದೆ.

ಅದರಲ್ಲೂ ಬಸ್ ನಿಲ್ದಾಣಗಳ ಘೋಷಣೆಗಳು ಪ್ರಯಾಣಿಕರಿಗೆ ಸ್ಪಷ್ಟವಾಗಿ ಕೇಳಿಸುವಂತಿರಬೇಕು. ಯಾವುದೇ ಕಾರಣಕ್ಕೂ ಜಾಹೀರಾತುಗಳಿಂದ ನಿಲ್ದಾಣದ ಮಾಹಿತಿ ಅಥವಾ ಸಾರ್ವಜನಿಕ ಸುರಕ್ಷತೆಗೆ ಸಂಬಂಧಿಸಿದ ಘೋಷಣೆಗಳಿಗೆ ಅಡ್ಡಿಯಾಗಬಾರದು ಎಂಬುದು ಪ್ರಯಾಣಿಕರ ಪ್ರಮುಖ ಬೇಡಿಕೆಯಾಗಿದೆ ಎಂದು ವರದಿಯಾಗಿದೆ.

ಬಿಜೆಪಿ ಮಾತು ಕೇಳಿ ಶಿಸ್ತುಕ್ರಮ ಕೈಗೊಳ್ಳಲು ಸಾಧ್ಯವಿಲ್ಲ: ತೀರ್ಮಾನ ಮಾಡೋದು SP ಅಲ್ಲ, ನಾನು ಎಂದ ಪ್ರಿಯಾಂಕ್ ಖರ್ಗೆ

0

ಬೆಂಗಳೂರು: ಮೈಸೂರು ಜಿಲ್ಲೆಯ ಟಿ. ನರಸೀಪುರ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ಅವರ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೂಡಿರುವ ‘ಅಮಾನತು’ ಅಸ್ತ್ರಕ್ಕೆ ರಾಜ್ಯ ಸರ್ಕಾರ ಮಣಿಯುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯವರು ಆಗ್ರಹಿಸಿದ್ದಾರೆ ಎಂಬ ಕಾರಣಕ್ಕೆ ತಕ್ಷಣವೇ ಅಧಿಕಾರಿಯನ್ನು ಅಮಾನತು ಮಾಡಲು ಸಾಧ್ಯವಿಲ್ಲ ಎಂದು ಅವರು ಖಡಕ್ ತಿರುಗೇಟು ನೀಡಿದ್ದಾರೆ.

ಗಣೇಶ ಮೆರವಣಿಗೆ ಭದ್ರತೆ ಹಾಗೂ ಟಿ. ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ್ ಅವರ ಹೇಳಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, “ಬಿಜೆಪಿಯವರು ಹೇಳಿದಂತೆ ನಾವು ಕೇಳಲು ಅಥವಾ ಆಡಳಿತ ನಡೆಸಲು ಸಾಧ್ಯವಿಲ್ಲ. ಅವರ ಮಾತಿಗೆ ಮಣಿದು ಅಧಿಕಾರಿಯನ್ನು ಅಮಾನತು ಮಾಡುವ ಪ್ರಶ್ನೆಯೇ ಇಲ್ಲ” ಎಂದು ಹೇಳಿದ್ದಾರೆ.

ಇನ್‌ಸ್ಪೆಕ್ಟರ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ವಿಚಾರದಲ್ಲಿ ಎಸ್‌ಪಿ ವರದಿಯ ಬಳಿಕ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ಸಚಿವರು ತಿಳಿಸಿದ್ದಾರೆ. ಎಸ್‌ಪಿ ವರದಿ ನೀಡಿದ ನಂತರ ಅದನ್ನು ಪರಿಶೀಲಿಸಿ ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಗಣೇಶೋತ್ಸವ, ಈದ್ ಸೇರಿದಂತೆ ಎಲ್ಲ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಲು ಸರ್ಕಾರ ಮತ್ತು ಪೊಲೀಸ್ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವರು ಹೇಳಿದ್ದಾರೆ. ಹಬ್ಬಗಳ ವಿಚಾರದಲ್ಲಿ ವಿರೋಧ ಪಕ್ಷಗಳು ಅನಗತ್ಯವಾಗಿ ವಿವಾದ ಸೃಷ್ಟಿಸುವುದನ್ನು ಬಿಟ್ಟು, ಜನರು ಶಾಂತಿಯುತವಾಗಿ ಹಬ್ಬ ಆಚರಿಸಲು ಅವಕಾಶ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇದೇ ವೇಳೆ ಮಾಜಿ ಗೃಹ ಸಚಿವ ಆರ್. ಅಶೋಕ್ ಅವರನ್ನೂ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. “ಆರ್. ಅಶೋಕ್ ಗೃಹ ಸಚಿವರಾಗಿದ್ದಾಗ ಇಂತಹ ಶಾಂತಿ ಸಭೆಗಳನ್ನು ನಡೆಸಿ ನಿಯಮಾವಳಿಗಳನ್ನು ರೂಪಿಸಿರಲಿಲ್ಲವೇ? ಅಂದು ಇದ್ದ ನಿಯಮಗಳೇ ಇಂದೂ ಇವೆ” ಎಂದು ಹೇಳಿದ್ದಾರೆ.

ಮೈಸೂರಿನ ಬಿಜೆಪಿ ನಾಯಕರ ವಿರುದ್ಧವೂ ವಾಗ್ದಾಳಿ ನಡೆಸಿದ ಸಚಿವರು, ಠಾಣೆಗೆ ನುಗ್ಗುತ್ತೇವೆ ಎಂದು ಬೆದರಿಕೆ ಹಾಕುವ ಬದಲು ಕಾನೂನು ಪಾಲಿಸಬೇಕು ಎಂದು ಹೇಳಿದ್ದಾರೆ. “ಅವರದೇ ಸರ್ಕಾರ ಇದ್ದಾಗ ಯಾರಾದರೂ ಠಾಣೆಗೆ ನುಗ್ಗುತ್ತೇವೆ ಎಂದಿದ್ದರೆ ಸುಮ್ಮನಿರುತ್ತಿದ್ದರಾ?” ಎಂದು ಪ್ರಶ್ನಿಸಿದ್ದಾರೆ.

ಹಬ್ಬದ ದಿನಗಳಲ್ಲಿ ಪೊಲೀಸರು ತಮ್ಮ ಕುಟುಂಬ ಹಾಗೂ ಹಬ್ಬ-ಹರಿದಿನಗಳನ್ನು ಬದಿಗಿಟ್ಟು ಸಾರ್ವಜನಿಕರ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಹೀಗಾಗಿ ಸಾರ್ವಜನಿಕರು ಹಾಗೂ ಮೆರವಣಿಗೆ ಆಯೋಜಕರು ಪೊಲೀಸರ ಸೂಚನೆಗಳನ್ನು ಗೌರವಿಸಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಯಾವುದೇ ಆಚರಣೆಯಿಂದ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಬಾರದು ಎಂದು ಅವರು ತಿಳಿಸಿದ್ದಾರೆ.

ಇನ್‌ಸ್ಪೆಕ್ಟರ್ ಹೇಳಿಕೆ ಬಗ್ಗೆ ಸಚಿವರ ಸಮರ್ಥನೆ

ಟಿ. ನರಸೀಪುರ ಇನ್‌ಸ್ಪೆಕ್ಟರ್ ಧನಂಜಯ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಇನ್‌ಸ್ಪೆಕ್ಟರ್ ಸ್ವಲ್ಪ ಖಾರವಾಗಿ ಮಾತನಾಡಿರಬಹುದು. ಆದರೆ ಮೆರವಣಿಗೆಗೆ ಹಲವು ಮಾರ್ಗಗಳಿದ್ದು, ನಿಯಮಗಳನ್ನು ಪಾಲಿಸುವುದು ಮುಖ್ಯ ಎಂದು ಹೇಳಿದ್ದಾರೆ.

“ನಿರ್ದಿಷ್ಟ ಸೂಕ್ಷ್ಮ ಸ್ಥಳದಲ್ಲೇ ಪಟಾಕಿ ಹಚ್ಚುವುದು ಏಕೆ ಎಂಬ ಪ್ರಶ್ನೆ ಬರುತ್ತದೆ” ಎಂದು ಸಚಿವರು ಹೇಳಿದ್ದಾರೆ. ಕಳೆದ ಮೂರು ವರ್ಷಗಳಿಂದ ಧನಂಜಯ್ ಅವರು ಅದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸ್ಥಳೀಯ ಸೂಕ್ಷ್ಮತೆ ಹಾಗೂ ಹಿಂದಿನ ವರ್ಷ ಉಂಟಾಗಿದ್ದ ಗೊಂದಲಗಳ ಬಗ್ಗೆ ಅವರಿಗೆ ಸ್ಪಷ್ಟ ಅರಿವಿದೆ ಎಂದು ತಿಳಿಸಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸರು ನೀಡಿದ ಸೂಚನೆಗಳನ್ನೇ ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಶಾಂತಿ ಕದಡಲು ಯತ್ನಿಸುತ್ತಿರುವವರು ಯಾರು ಎಂಬುದನ್ನು ತಿಳಿಯಲು ಬಿಜೆಪಿಯವರು ಮೊದಲು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಮಾತುಗಳನ್ನು ಕೇಳಲಿ ಎಂದು ಲೇವಡಿ ಮಾಡಿದ್ದಾರೆ.

ಬರದ ನಡುವೆಯೂ ಗಣೇಶ ಹಬ್ಬದ ಖರೀದಿ ಭರಾಟೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬರಗಾಲದ ಸಂಕಷ್ಟದಿಂದ ರೈತರ ಬದುಕು ಕಮರುತ್ತಿದ್ದರೂ ಗಣೇಶ ಹಬ್ಬದ ಸಂಭ್ರಮಕ್ಕೆ ಮಾತ್ರ ಬರದ ಛಾಯೆ ತಟ್ಟಿಲ್ಲ. ವಿಘ್ನವಿನಾಶಕನ ಸ್ವಾಗತಕ್ಕೆ ಸಜ್ಜಾದ ಜನತೆ ಹಬ್ಬದ ಮುನ್ನಾದಿನವಾದ ಭಾನುವಾರ ಪಟ್ಟಣದ ಮಾರುಕಟ್ಟೆಗೆ ಮುಗಿಬಿದ್ದು ಗಣೇಶ ಮೂರ್ತಿ, ಹೂವು-ಹಣ್ಣು, ತಳಿರು-ತೋರಣ, ದಿನಸಿ ಹಾಗೂ ಅಲಂಕಾರಿಕ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದರು. ಹೊರತಾಲೂಕುಗಳಿಂದಲೂ ಜನರು ಆಗಮಿಸಿದ್ದರಿಂದ ಮಾರುಕಟ್ಟೆ ಜನಜಂಗುಳಿಯಿಂದ ಕಿಕ್ಕಿರಿದು, ವ್ಯಾಪಾರ-ವಹಿವಾಟು ಗರಿಗೆದರಿತ್ತು.

ಸೋಮವಾರ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಭಾನುವಾರ ಪಟ್ಟಣದಲ್ಲಿ ಖರೀದಿ ಭರಾಟೆ ಜೋರಾಗಿತ್ತು. ವಿವಿಧೆಡೆ ಮನೆ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಂದ ಮೂರ್ತಿ ಪ್ರತಿಷ್ಠಾಪನೆಗೆ ಸಿದ್ಧತೆಗಳು ಪೂರ್ಣಗೊಂಡಿದ್ದವು. ಯುವಕರು ತಂಡಗಳನ್ನು ರಚಿಸಿಕೊಂಡು ವಿಶೇಷ ಪೂಜೆ, ಅನ್ನಸಂತರ್ಪಣೆ ಹಾಗೂ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಜ್ಜಾಗಿದ್ದಾರೆ. ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೂ ಬೇಡಿಕೆ ಕಂಡುಬಂದಿತು.

ಬೆಲೆ ಏರಿಕೆಯ ನಡುವೆಯೂ ಖರೀದಿ ಜೋರು

ಬರಗಾಲದಿಂದ ಮುಂಗಾರು ಬೆಳೆಗಳು ಕೈಕೊಟ್ಟಿರುವುದು ರೈತರ ಆರ್ಥಿಕ ಸ್ಥಿತಿಗೆ ಹೊಡೆತ ನೀಡಿದೆ. ಬೆಳೆಗಾಗಿ ಮಾಡಿದ ಖರ್ಚು ಮರಳದೆ ಸಂಕಷ್ಟದಲ್ಲಿದ್ದರೂ ಹಬ್ಬದ ಸಂಪ್ರದಾಯವನ್ನು ಕೈಬಿಡಲು ಜನರು ಸಿದ್ಧರಿಲ್ಲ. ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅಗತ್ಯ ವಸ್ತುಗಳನ್ನು ಖರೀದಿಸಿ ಗಣೇಶ ಹಬ್ಬ ಆಚರಿಸಲು ಮುಂದಾಗಿದ್ದಾರೆ. ಹೂವು, ಬಾಳೆ, ಕಬ್ಬು, ವೀಳ್ಯದೆಲೆ, ದಿನಸಿ ಹಾಗೂ ಅಲಂಕಾರಿಕ ವಸ್ತುಗಳ ಬೆಲೆಯಲ್ಲಿ ಕೊಂಚ ಏರಿಕೆಯಾಗಿತ್ತು. ಡಜನ್ ಬಾಳೆಹಣ್ಣು, ಸೇಬು, ಕಿತ್ತಳೆ, ಚಿಕ್ಕೂ ಹಾಗೂ ಮೋಸಂಬಿ ಒಳಗೊಂಡ ಐದು ಬಗೆಯ ಹಣ್ಣುಗಳ ಸೆಟ್‌ಗೆ ₹೧೫೦ರಿಂದ ₹೨೦೦ರವರೆಗೆ ದರವಿತ್ತು.

 ಮಾರುಕಟ್ಟೆಯಲ್ಲಿ ಜನಸಂದಣಿ; ಸಂಚಾರ ಅಸ್ತವ್ಯಸ್ತ

ತಾಲೂಕಿನ ವಿವಿಧ ಗ್ರಾಮಗಳಷ್ಟೇ ಅಲ್ಲದೆ ನೆರೆಯ ಕುಂದಗೋಳ, ಶಿರಹಟ್ಟಿ, ಶಿಗ್ಗಾಂವ ಹಾಗೂ ಸವಣೂರು ತಾಲೂಕುಗಳಿಂದಲೂ ಜನರು ವ್ಯಾಪಾರಕ್ಕಾಗಿ ಆಗಮಿಸಿದ್ದರಿಂದ ಪ್ರಮುಖ ಮಾರುಕಟ್ಟೆ ಪ್ರದೇಶ ಜನಸಂದಣಿಯಿಂದ ತುಂಬಿತ್ತು. ವಾಹನ ಸಂಚಾರ ಹೆಚ್ಚಾಗಿ ಟ್ರಾಫಿಕ್ ಕಿರಿಕಿರಿ ಉಂಟಾಗಿದ್ದು, ಪೊಲೀಸರು ಸಂಚಾರ ನಿಯಂತ್ರಣಕ್ಕೆ ಹರಸಾಹಸಪಟ್ಟರು. ಬಸ್ ನಿಲ್ದಾಣದಲ್ಲಿಯೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು.

ಹಬ್ಬದ ದಿನ ಮತ್ತಷ್ಟು ಜನದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಪುರಸಭೆ ಹಾಗೂ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಪಟ್ಟಣದ ಸೊಪ್ಪಿನಕೇರಿ ಓಣಿಯ ಗಣೇಶ ಮೂರ್ತಿಯನ್ನು ಶನಿವಾರವೇ ಅದ್ದೂರಿ ಮೆರವಣಿಗೆ ಹಾಗೂ ದೀಪಾಲಂಕಾರದೊಂದಿಗೆ ಬರಮಾಡಿಕೊಳ್ಳಲಾಯಿತು. ಹಬ್ಬದ ಸಂದರ್ಭದಲ್ಲಿ ಶಾಂತಿ ಕಾಪಾಡಲು ಪಟ್ಟಣದಲ್ಲಿ ಅಪಾರ ಸಂಖ್ಯೆಯ ಪೊಲೀಸರು ಬೀಡುಬಿಟ್ಟಿದ್ದಾರೆ.

ಬರದ ಸಂಕಷ್ಟದ ನಡುವೆಯೂ ವಿಘ್ನವಿನಾಶಕನ ಕೃಪೆಯಿಂದ ಉತ್ತಮ ಮಳೆ ಸುರಿದು ರೈತರ ಬದುಕು ಹಸನಾಗಲಿ, ಸಂಕಷ್ಟಗಳು ದೂರವಾಗಲಿ ಎಂಬ ಆಶಯದೊಂದಿಗೆ ತಾಲೂಕಿನ ಜನತೆ ಗಣೇಶನ ಸ್ವಾಗತಕ್ಕೆ ಸಜ್ಜಾಗಿದ್ದಾರೆ.

ಸಂಸ್ಕಾರವೇ ನನ್ನ ಶಕ್ತಿ: ಜಿ.ಎಸ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಯಿ ಹಾಗೂ ಹಿರಿಯರು ತಮ್ಮನ್ನು ಮತ್ತು ಸಹೋದರರನ್ನು ಪ್ರೀತಿ ಹಾಗೂ ಸಂಸ್ಕಾರದಿಂದ ಬೆಳೆಸಿದ್ದಾರೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುತ್ತಿದ್ದೇವೆ. ಲಿಂಗೈಕ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು, ಹಾಳಕೇರಿಯ ಅಭಿನವ ಅನ್ನದಾನ ಮಹಾಸ್ವಾಮಿಗಳು, ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹಾಗೂ ತಮ್ಮೆಲ್ಲರ ಶುಭ ಹಾರೈಕೆಗಳು ತಾವು ಈ ಉನ್ನತ ಸ್ಥಾನಕ್ಕೇರಲು ಕಾರಣವಾಗಿವೆ ಎಂದು ನೂತನ ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ 2814ನೇ ಶಿವಾನುಭವದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು. ದೇಶದ ಭದ್ರಬುನಾದಿ, ಏಳಿಗೆ ಹಾಗೂ ಭವಿಷ್ಯಕ್ಕೆ ಉತ್ತಮ ಮಕ್ಕಳೇ ಆಧಾರ. ಮಕ್ಕಳಲ್ಲಿ ಸದ್ಗುಣಗಳು ಬೆಳೆಯುವಂತೆ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಶಿವಾನುಭವದ ಸಾನ್ನಿಧ್ಯ ವಹಿಸಿ ಹೇಳಿದರು.

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಸಾವಿತ್ರಿಬಾಯಿ ಫುಲೆ ಅವರು ಈ ನಾಡು ಕಂಡ ಶ್ರೇಷ್ಠ ಶಿಕ್ಷಕರು. ಮಕ್ಕಳಿಗೆ ತಾಯಿಯೇ ಮೊದಲ ಗುರು. ಮಕ್ಕಳಲ್ಲಿ ಉತ್ತಮ ಸಂಸ್ಕಾರ, ನಡೆ-ನುಡಿ ಹಾಗೂ ಆದರ್ಶಗಳನ್ನು ತುಂಬಬೇಕು. ಇಂದಿನ ಮಕ್ಕಳೇ ದೇಶದ ಮುಂದಿನ ಪ್ರಜೆಗಳು. ದೇಶ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣದ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಬೇಕು ಎಂದರು.

ಈ ಸಂದರ್ಭದಲ್ಲಿ ವಿಧಾನಸಭಾಧ್ಯಕ್ಷರಾಗಿ ಆಯ್ಕೆಯಾದ ಜಿ.ಎಸ್. ಪಾಟೀಲ ಅವರನ್ನು ಶ್ರೀಗಳು ಸನ್ಮಾನಿಸಿ ಶುಭ ಹಾರೈಸಿದರು.

ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್. ಪಾಟೀಲ ಮುಖ್ಯ ಅತಿಥಿಗಳಾಗಿ ಮಾತನಾಡಿ, ಜಿ.ಎಸ್. ಪಾಟೀಲ ಅವರು ವಿಧಾನಸಭಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. ಅವರ ಅವಧಿಯಲ್ಲಿ ವಿಧಾನಸಭೆಯ ಕಾರ್ಯಕಲಾಪಗಳು ಅರ್ಥಪೂರ್ಣವಾಗಿ ನಡೆಯಲಿ ಎಂದು ಹಾರೈಸಿದರು.

ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಹೆಚ್ಚಿನ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ. ಮಕ್ಕಳ ಮೇಲೆ ಪಾಲಕರು ಹೆಚ್ಚಿನ ಗಮನ ಹರಿಸಬೇಕು ಎಂದರು.

ಶಿವಾನುಭವದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ಜಿ.ಎಸ್. ಪಾಟೀಲ ಅವರು ತಮ್ಮ ತಾಯಿಯ ಆಶೀರ್ವಾದದ ಬಲದಿಂದ ವಿಧಾನಸಭಾಧ್ಯಕ್ಷ ಸ್ಥಾನ ಪಡೆಯಲು ಸಾಧ್ಯವಾಗಿದೆ. ಅವರಿಗೆ ಬಸವಾದಿ ಶಿವಶರಣರ ಆಶೀರ್ವಾದ ಸದಾಕಾಲ ಇರಲಿ ಎಂದು ಹಾರೈಸಿದರು.

ಶಿಕ್ಷಕರ ದಿನಾಚರಣೆ ಅಂಗವಾಗಿ ನಾಡೋಜ ಡಾ. ಚನ್ನವೀರ ಕಣವಿ ಅವರ ತಂದೆ ಲಿಂಗೈಕ್ಯ ಸಕ್ರಪ್ಪ ಕಣವಿ ಹಾಗೂ ಶಿಕ್ಷಣ ತಜ್ಞ ಡಾ. ಬಿ. ಮಲ್ಲಿಕಾರ್ಜುನ ಅವರ ತಂದೆ ಲಿಂಗೈಕ್ಯ ಬಳ್ಳಾರಿ ಚಿತ್ರಕಿ ಕೊಟ್ರಪ್ಪ ಅವರ ಸ್ಮರಣಾರ್ಥ ನೀಡಲಾಗುವ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ಆಲಮಟ್ಟಿಯ ಹಳಕಟ್ಟಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಜಿ.ಎಂ. ಕೋಟ್ಯಾಳ ಹಾಗೂ ಬೆಳ್ಳಟ್ಟಿಯ ಎಸ್.ಜೆ.ಎಫ್. ಪ್ರೌಢಶಾಲೆಯ ಕನ್ನಡ ಶಿಕ್ಷಕಿ ಮಹೇಶ್ವರಿ ಸಿದ್ದರಾಮಪ್ಪ ಸವಡಿ ಅವರಿಗೆ ಪರಮಪೂಜ್ಯರು ಪ್ರಧಾನ ಮಾಡಿದರು.

ಗಿರಿಜಕ್ಕ ಧರ್ಮರಡ್ಡಿ ಅವರು ಶ್ರಾವಣ ಮಾಸದಲ್ಲಿ ‘ಶರಣರು ಕಂಡ ಅನಾದಿ ಬಸವಣ್ಣ’ ವಿಷಯದ ಕುರಿತು ನೀಡಿದ ಪ್ರವಚನದ ಮಂಗಲೋತ್ಸವ ನಡೆಯಿತು. ಡಿ.ಸಿ. ಪಾವಟೆ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕಾವೇರಿ ಬಡಿಗೇರ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಲಿಂಗೈಕ್ಯರಾದ ಶರಣೆ ರತ್ನಕ್ಕ ಬಸನಗೌಡ ಪಾಟೀಲ ಹಾಗೂ ಬಸವದಳದ ಮಾಜಿ ಅಧ್ಯಕ್ಷ ಹೂಗಾರ ಅವರ ಅಗಲಿಕೆಗೆ ಮೌನಾಚರಣೆ ನಡೆಸಿ ಸಂತಾಪ ಸೂಚಿಸಲಾಯಿತು.

ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ, ಧರ್ಮಗ್ರಂಥ ಪಠಣವನ್ನು ಸಂಜನಾ ಎಂ. ಹದ್ಲಿ ಹಾಗೂ ವಚನ ಚಿಂತನವನ್ನು ಸನ್ನಿಧಿ ಎಂ. ಹದ್ಲಿ ನಡೆಸಿಕೊಟ್ಟರು. ಕಾರಟಗಿಯ ಎಲ್.ವಿ.ಟಿ. ಮಾಲೀಕ ಸಣ್ಣಸೂಗಪ್ಪ, ಹುಬ್ಬಳ್ಳಿಯ ಡಾ. ಎಸ್.ಎಸ್. ಅಕ್ಕಮಹಾದೇವಿ, ವೀರಣ್ಣ ಬೇವಿನಮರದ ಹಾಗೂ 2026ನೇ ಸಾಲಿನ ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ದಾಸೋಹ ಸೇವೆ ವಹಿಸಿಕೊಂಡಿದ್ದರು.

ಶಿವಾನುಭವ ಸಮಿತಿಯ ಚೇರ್ಮನ್ ಡಾ. ರಮೇಶ ಕಲ್ಲನಗೌಡರ ನಿರೂಪಿಸಿದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಸ್ವಾಗತಿಸಿದರು.

ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಮಠ, ಆದೇಶ ಅಂಗಡಿ ಸೇರಿದಂತೆ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.

ತಾಯಿಯ ಆಶೀರ್ವಾದದ ಬಲದಿಂದ ಜಿ.ಎಸ್. ಪಾಟೀಲ ಅವರು ವಿಧಾನಸಭಾಧ್ಯಕ್ಷ ಸ್ಥಾನ ಪಡೆಯಲು ಸಾಧ್ಯವಾಗಿದೆ. ಅವರಿಗೆ ಬಸವಾದಿ ಶಿವಶರಣರ ಆಶೀರ್ವಾದ ಸದಾಕಾಲ ಇರಲಿ.

— ಎಸ್.ಎಸ್. ಪಾಟೀಲ, ಮಾಜಿ ಸಚಿವ

ಕ್ರೀಡೆಯಲ್ಲಿ ಕ್ರೀಡಾಸ್ಫೂರ್ತಿಯೇ ಮುಖ್ಯ: ಮೋಹನ ಲಿಂಬಿಕಾಯಿ

0

ವಿಜಯಸಾಕ್ಷಿ ಸುದ್ದಿ, ಗದಗ: ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಕ್ರೀಡಾಸ್ಫೂರ್ತಿಯಿಂದ ಭಾಗವಹಿಸುವುದು ಮುಖ್ಯ. ಗೆಲುವಿನ ಜತೆಗೆ ಸೋಲನ್ನೂ ಸಮಾನ ಮನೋಭಾವದಿಂದ ಸ್ವೀಕರಿಸುವ ಗುಣ ಕ್ರೀಡಾಪಟುಗಳಲ್ಲಿ ಬೆಳೆಯಬೇಕು ಎಂದು ಮೋಹನ ಲಿಂಬಿಕಾಯಿ ಹೇಳಿದರು.

ಹುಲಕೋಟಿಯ ಸ್ಪೂರ್ತಿ ಸ್ವತಂತ್ರ ಪದವಿಪೂರ್ವ ಕಾಲೇಜು ಮೈದಾನದಲ್ಲಿ 2026-27ನೇ ಸಾಲಿನ ಗದಗ ತಾಲೂಕು ಮಟ್ಟದ ‘ಎ’ ವಲಯದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ, ಬಲೂನ್‌ಗಳನ್ನು ಆಕಾಶಕ್ಕೆ ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿವಿಧ ಪದವಿಪೂರ್ವ ಕಾಲೇಜುಗಳಿಂದ ಆಗಮಿಸಿದ್ದ ಕ್ರೀಡಾಪಟುಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ನಗರಸಭೆ ಮಾಜಿ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ಗದಗ ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹಾಕಿ ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ, ಫುಟ್‌ಬಾಲ್ ಹಾಗೂ ಕ್ರಿಕೆಟ್ ತರಬೇತಿ ಕ್ರೀಡಾಂಗಣಗಳ ಜತೆಗೆ ನಗರದಲ್ಲಿ ನಾಲ್ಕೈದು ಈಜುಕೊಳಗಳನ್ನು ನಿರ್ಮಿಸಲಾಗಿದೆ. ಕ್ರೀಡಾಪಟುಗಳು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.

ರಮೇಶ ಹೊನ್ನಿನಾಯ್ಕರ ಕ್ರೀಡಾಪಟುಗಳನ್ನು ಅಭಿನಂದಿಸಿ, ಪ್ರೋತ್ಸಾಹಿಸಿದರು. ವಿವಿಧ ಕಾಲೇಜುಗಳಿಂದ ಆಗಮಿಸಿದ ಕ್ರೀಡಾಪಟುಗಳಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಅಕ್ಬರಸಾಬ ಬಬರ್ಚಿ, ಜಿ.ಕೆ. ಆದಪ್ಪಗೌಡ್ರ, ಎಸ್.ಕೆ. ಪಾಟೀಲ, ಸಚಿನ್ ಡಿ. ಪಾಟೀಲ, ವ್ಹಿ.ಎಂ. ಪಾಟೀಲ, ಬಿ.ಎನ್. ಪಾಟೀಲ, ಕೃಷ್ಣಾ ಓದುಗೌಡರ, ಚಾಂದಸಾಬ ಕೊಟ್ಟೂರ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಪ್ರಾಚಾರ್ಯ ವ್ಹಿ. ಚರಣಕುಮಾರ ಸ್ವಾಗತಿಸಿದರು. ಪ್ರೊ. ಅಶ್ವಿನಿ ಓದುಗೌಡರ ವಂದಿಸಿದರು.

ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಆದರೆ ಕ್ರೀಡಾ ಮನೋಭಾವದಿಂದ ಸ್ಪರ್ಧಿಸುವುದು ಅತ್ಯಂತ ಮುಖ್ಯ. ಕ್ರೀಡಾಪಟುಗಳು ಗೆಲುವಿನಷ್ಟೇ ಕ್ರೀಡಾಸ್ಫೂರ್ತಿಗೂ ಮಹತ್ವ ನೀಡಬೇಕು.

— ಮೋಹನ ಲಿಂಬಿಕಾಯಿ

ಅಲ್ಪಸಂಖ್ಯಾತರ ಜನಸಂಖ್ಯೆ ಆಧಾರದಲ್ಲಿ ಅನುದಾನ ನೀಡಿ: ಸಚಿವ ಯು.ಟಿ. ಖಾದರ್

0

 

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ಜನಸಂಖ್ಯೆ ಆಧಾರದಲ್ಲಿ ಸರ್ಕಾರದ ವಿವಿಧ ಯೋಜನೆಗಳಿಗೆ ಅನುದಾನ ಮಂಜೂರು ಮಾಡಿ, ಅರ್ಹ ಬಡ ಕುಟುಂಬಗಳಿಗೆ ಯೋಜನೆಗಳ ಪ್ರಯೋಜನ ತಲುಪಿಸಬೇಕು ಎಂದು ಆಗ್ರಹಿಸಿ ಗದಗ ಜಿಲ್ಲಾ ಸ್ಲಂ ಸಮಿತಿ ಹಾಗೂ ಗದಗ ಜಿಲ್ಲಾ ಅಲ್ಪಸಂಖ್ಯಾತರ ಹೋರಾಟ ಸಮಿತಿ ವತಿಯಿಂದ ಆರೋಗ್ಯ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ಕುಟುಂಬಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಅವರನ್ನು ಮುಖ್ಯವಾಹಿನಿಗೆ ತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಕೋಟ್ಯಂತರ ರೂಪಾಯಿ ಅನುದಾನ ಮೀಸಲಿಟ್ಟಿದ್ದರೂ ಜಿಲ್ಲೆಯ ಬಡ ಅಲ್ಪಸಂಖ್ಯಾತ ಕುಟುಂಬಗಳಿಗೆ ಯೋಜನೆಗಳ ಸಮರ್ಪಕ ಪ್ರಯೋಜನ ದೊರೆಯುತ್ತಿಲ್ಲ ಎಂದು ಮನವಿದಾರರು ಆರೋಪಿಸಿದ್ದಾರೆ.

ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ್ ಆರ್. ಮಾನ್ವಿ ಮಾತನಾಡಿ, ಜಿಲ್ಲೆಯಲ್ಲಿ ಸಾವಿರಾರು ಬಡ ಅಲ್ಪಸಂಖ್ಯಾತ ಕುಟುಂಬಗಳು ಕಟ್ಟಡ ಕಾರ್ಮಿಕರು, ಹಮಾಲಿ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಸೇರಿದಂತೆ ವಿವಿಧ ಶ್ರಮಿಕ ವೃತ್ತಿಗಳಲ್ಲಿ ದುಡಿಯುತ್ತಿದ್ದಾರೆ. ಸ್ವಯಂ ಉದ್ಯೋಗ ಹಾಗೂ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಸರ್ಕಾರ ಸಹಾಯಧನ ಮತ್ತು ಸಬ್ಸಿಡಿ ನೀಡುತ್ತಿದ್ದರೂ ಅರ್ಹರಿಗೆ ಯೋಜನೆಗಳ ಮಾಹಿತಿ ಹಾಗೂ ಸೌಲಭ್ಯ ಸಮರ್ಪಕವಾಗಿ ತಲುಪುತ್ತಿಲ್ಲ ಎಂದರು.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ, ಅರಿವು, ಮೈಕ್ರೊ ಸಾಲ, ಶ್ರಮಶಕ್ತಿ, ಭೂ ಒಡೆತನ ಹಾಗೂ ಪ್ರವಾಸಿ ಟ್ಯಾಕ್ಸಿ ಸೇರಿದಂತೆ ಹಲವು ಯೋಜನೆಗಳಿಗೆ ಪ್ರತಿವರ್ಷ ಅನುದಾನ ನೀಡಲಾಗುತ್ತಿದೆ. ಆದರೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದ ಬಡ ಕುಟುಂಬಗಳು ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.

ಯೋಜನೆಗಳ ಅನುಷ್ಠಾನದಲ್ಲಿ ಮಧ್ಯವರ್ತಿಗಳ ಹಾವಳಿ ಹಾಗೂ ಕಮಿಷನ್ ಆಧಾರಿತ ವ್ಯವಸ್ಥೆ ಇದೆ ಎಂಬ ದೂರುಗಳಿದ್ದು, ಇದರಿಂದ ನಿಜವಾದ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ. ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳ ಕುರಿತು ಮಾಹಿತಿ ನೀಡಲು ಜಿಲ್ಲೆಯಲ್ಲಿ ಮಾಹಿತಿ ಕೇಂದ್ರಗಳನ್ನು ಆರಂಭಿಸಲಾಗಿದ್ದರೂ, ಅಲ್ಪಸಂಖ್ಯಾತರು ವಾಸಿಸುವ ಪ್ರದೇಶಗಳಲ್ಲಿ ಸಮರ್ಪಕ ಮಾಹಿತಿ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಇದರಿಂದ ಅನೇಕ ಅರ್ಹ ಕುಟುಂಬಗಳು ಯೋಜನೆಗಳ ಪ್ರಯೋಜನದಿಂದ ವಂಚಿತರಾಗುತ್ತಿದ್ದಾರೆ ಎಂದು ತಿಳಿಸಿದರು.

ಕಳೆದ 20 ವರ್ಷಗಳಿಂದ ಒಂದೇ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಕಾರ್ಯವೈಖರಿಯನ್ನೂ ಪರಿಶೀಲಿಸಿ, ಬಡ ಫಲಾನುಭವಿಗಳಿಗೆ ಯೋಜನೆಗಳ ಸೌಲಭ್ಯ ತಲುಪಿಸುವಲ್ಲಿ ವಿಫಲರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿದಾರರು ಆಗ್ರಹಿಸಿದರು.

ಗದಗ ಜಿಲ್ಲಾ ಸ್ಲಂ ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಮುಖಂಡರಾದ ಮೌಲಾಸಾಬ ಗಚ್ಚಿ, ಶರಣಪ್ಪ ಸೂಡಿ, ಪುಷ್ಪಾ ಬಿಜಾಪೂರ, ಇಬ್ರಾಹಿಂ ಮುಲ್ಲಾ, ಸಲೀಂ ಹರಿಹರ, ಸಾಕ್ರುಬಾಯಿ ಗೋಸಾವಿ, ಖಾಜಾಸಾಬ ಇಸ್ಮಾಯಿಲನವರ, ದಾದು ಗೋಸಾವಿ, ಮಕ್ತುಮಸಾಬ ಮುಲ್ಲಾನವರ, ಶಂಕ್ರಪ್ಪ ರೋಣದ, ಹುಸೇನ ಮುಲ್ಲಾನವರ, ನಜಮುನಿಸಾ ಮುರಗೋಡ ಸೇರಿದಂತೆ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನ ನೀಡುತ್ತಿದ್ದರೂ ಅದರ ಫಲ ನಿಜವಾದ ಬಡ ಅಲ್ಪಸಂಖ್ಯಾತ ಕುಟುಂಬಗಳಿಗೆ ತಲುಪದಿದ್ದರೆ ಯೋಜನೆಗಳ ಉದ್ದೇಶವೇ ವಿಫಲವಾಗುತ್ತದೆ. ಜನಸಂಖ್ಯೆ ಆಧಾರದಲ್ಲಿ ಅನುದಾನ ಹೆಚ್ಚಿಸಿ, ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ ಅರ್ಹರಿಗೆ ನೇರವಾಗಿ ಸೌಲಭ್ಯ ದೊರಕಿಸುವ ವ್ಯವಸ್ಥೆ ಮಾಡಬೇಕು.

— ಇಮ್ತಿಯಾಜ್ ಆರ್. ಮಾನ್ವಿ, ಅಧ್ಯಕ್ಷರು, ಗದಗ ಜಿಲ್ಲಾ ಸ್ಲಂ ಸಮಿತಿ

ಸೇವಾ ಸಂಕಲ್ಪಕ್ಕೆ ಮಹಿಳಾ ಮೋರ್ಚಾ ಸಜ್ಜು

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆ ಹಾಗೂ ಸೇವಾ ಸಂಕಲ್ಪ ಅಭಿಯಾನದ ಕಾರ್ಯಾಗಾರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಿರ್ಮಲಾ ಕೊಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳನ್ನು ಮಹಿಳೆಯರಿಗೆ ತಲುಪಿಸುವ ಜತೆಗೆ ಮಹಿಳಾ ಫಲಾನುಭವಿಗಳನ್ನು ಸಂಪರ್ಕಿಸಿ ಸಂಘಟನೆಯ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದು ಮಹಿಳಾ ಮೋರ್ಚಾ ಪದಾಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.

ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೋಭಾ ನಿಸ್ಸಿಮ್ ಗೌಡ್ರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸೇವಾ ಸಂಕಲ್ಪ ಅಭಿಯಾನದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕು. ಕೇಂದ್ರ ಸರ್ಕಾರದ ವತಿಯಿಂದ ನೀಡಲಾಗಿರುವ ಎಲ್ಲ ಸೇವಾ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಮಹಿಳಾ ಮೋರ್ಚಾ ಪದಾಧಿಕಾರಿಗಳು ಮುಂಚೂಣಿಯಲ್ಲಿ ನಿಲ್ಲಬೇಕು ಎಂದರು.

ಜಿಲ್ಲಾಧ್ಯಕ್ಷೆ ನಿರ್ಮಲಾ ಕೊಳ್ಳಿ ಮಾತನಾಡಿ, ಮಹಿಳಾ ಮೋರ್ಚಾ ಪದಾಧಿಕಾರಿಗಳು ಒಗ್ಗಟ್ಟಿನಿಂದ ಸೇವಾ ಕಾರ್ಯಗಳನ್ನು ಜಿಲ್ಲಾದ್ಯಂತ ಹಬ್ಬದ ರೀತಿಯಲ್ಲಿ ವಿಜೃಂಭಣೆಯಿಂದ ನಡೆಸೋಣ ಎಂದು ಕರೆ ನೀಡಿದರು.

ಸೇವಾ ಸಂಕಲ್ಪ ಅಭಿಯಾನದ ಜಿಲ್ಲಾ ಸಂಚಾಲಕ ಅನಿಲ್ ಅಬ್ಬಿಗೇರಿ ಮಾತನಾಡಿ, ಸೆ.17ರಿಂದ ಅ.17ರವರೆಗೆ ನಡೆಯಲಿರುವ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಕೇಂದ್ರ ಸರ್ಕಾರ ಸೂಚಿಸಿರುವ ವಿವಿಧ ಸೇವಾ ಕಾರ್ಯಗಳ ಕುರಿತು ಮಾಹಿತಿ ನೀಡಿದರು. ಕವಿತಾ ಉಳ್ಳಾಗಡ್ಡಿ ರಾಜ್ಯದಿಂದ ಬಂದಿರುವ ಆದೇಶಗಳ ಕುರಿತು ವಿವರಿಸಿದರು. ಸಾಮಾಜಿಕ ಜಾಲತಾಣಗಳ ಬಳಕೆ ಹಾಗೂ ಅಭಿಯಾನದ ಪ್ರಚಾರದ ಕುರಿತು ಪ್ರೀತಿ ಶಿವಪ್ಪನಮಠ ಮಾಹಿತಿ ಹಂಚಿಕೊಂಡರು.

ವಿಜಯಲಕ್ಷ್ಮೀ ಮಾನ್ವಿ ಸ್ವಾಗತಿಸಿದರು. ಕಸ್ತೂರಿ ಕಮ್ಮಾರ ಪ್ರಾರ್ಥನೆ ನಡೆಸಿಕೊಟ್ಟರು. ಅಶ್ವಿನಿ ಅಂಕಲಕೋಟೆ ನಿರೂಪಿಸಿದರು. ಜ್ಯೋತಿ ಹಾನಗಲ ವಂದಿಸಿದರು.

ಅರುಣ ಪಾಟೀಲ, ಪಾರ್ವತಿ ಪತ್ತಾರ, ಪೂರ್ಣಿಮಾ ಆಟದ, ಶಾರದಾ ಜವಳಿ, ಸುಜಾತಾ ಕಾಡಪ್ಪನವರ್, ನಿರ್ಮಲ ಪಾಟೀಲ, ಅನುಸೂಯಾ ಸೋಮಗೇರಿ, ಜಯಶ್ರೀ ಉಗಲಾಟದ, ವಂದನ ವೇರನೆಕರ್, ಅಶ್ವಿನಿ ಜಗತಾಪ್, ಶಾರದಾ ಸಜ್ಜನರ, ಪಾರ್ವತಿ ಪಟ್ಟಣಶೆಟ್ಟಿ, ಪದ್ಮಿನಿ ಮುತ್ತಲದಿನ್ನಿ, ಕವಿತಾ ಬಂಗಾರಿ, ಮೇಘನಾ ಕೊಟ್ಟೂರ, ಸ್ವಾತಿ ಅಕ್ಕಿ, ರೇಖಾ ಗವಳಿ, ಪುಷ್ಪ ಪೂಜಾರ್, ಶ್ರೀದೇವಿ ಲಕ್ಷ್ಮಾಪುರ, ನೇತ್ರಾ ಜೋಗಿನ್, ಕೌಶಲ್ಯ ಬದಿ, ಸುನೀತಾ ಹಳ್ಳಿ ಸೇರಿದಂತೆ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಮಹಿಳಾ ಫಲಾನುಭವಿಗಳನ್ನು ತಲುಪಿ, ಕೇಂದ್ರದ ಯೋಜನೆಗಳ ಪ್ರಯೋಜನವನ್ನು ಅವರಿಗೆ ದೊರಕಿಸುವ ಜತೆಗೆ ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕು.

— ರಾಜು ಕುರಡಗಿ, ಬಿಜೆಪಿ ಜಿಲ್ಲಾಧ್ಯಕ್ಷ

ಕೌಶಲ್ಯ ಕಲಿಸಿ ಸ್ವಾವಲಂಬನೆ ಬೆಳೆಸಿದ ಶಿಕ್ಷಕರಿಗೆ ಗೌರವ

0

ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಣದ ಜೊತೆಗೆ ಜೀವನೋಪಯೋಗಿ ಕೌಶಲ್ಯಗಳನ್ನು ಕಲಿಸಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಕಾರ್ಯದಲ್ಲಿ ತೊಡಗಿರುವ ಶಿಕ್ಷಕರನ್ನು ಗದಗ-ಬೆಟಗೇರಿ ಇನ್ನರ್ ವೀಲ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಸನ್ಮಾನಿಸಲಾಯಿತು.

ನಗರದ ರೋಟರಿ ಐ ಕೇರ್ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆದರ್ಶ ಫೌಂಡೇಶನ್ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ಮೂಲಕ ಹೊಲಿಗೆ ತರಬೇತಿ ನೀಡಿ ಮಹಿಳಾ ಸಬಲೀಕರಣಕ್ಕೆ ಶ್ರಮಿಸುತ್ತಿರುವ ಆದರ್ಶ ಶಿಕ್ಷಣ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಗುರುನಾಥ ಹಬೀಬ, ಮುಖ್ಯ ಶಿಕ್ಷಕರಾದ ಶಿಲ್ಪಾ ಹಬೀಬ, ಅನ್ನಪೂರ್ಣ ದೋಂಗಡಿ, ದೀಪಾ ರಾಯಬಾಗಿ, ದೀಪಾ ಹಬೀಬ್ ಹಾಗೂ ಸಹಾಯಕ ಶಿಕ್ಷಕಿ ಅಂಬಿಕಾ ಬಾಕಳೆ ಅವರನ್ನು ಅಭಿನಂದಿಸಿ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಮಂಜುಳಾ ಅಕ್ಕಿ ಮಾತನಾಡಿ, ಶಿಕ್ಷಕರು ಸಮಾಜದ ಭವಿಷ್ಯ ರೂಪಿಸುವ ಶಿಲ್ಪಿಗಳು. ಶಿಕ್ಷಣದ ಜತೆಗೆ ಜೀವನೋಪಯೋಗಿ ಕೌಶಲ್ಯಗಳನ್ನು ಕಲಿಸುವ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಲು ಅವಕಾಶ ಕಲ್ಪಿಸುತ್ತಿರುವ ಶಿಕ್ಷಕರ ಸೇವೆ ಶ್ಲಾಘನೀಯ. ಇಂತಹ ಸೇವಾ ಮನೋಭಾವವನ್ನು ಗೌರವಿಸುವುದು ಇನ್ನರ್ ವೀಲ್ ಕ್ಲಬ್‌ಗೆ ಹೆಮ್ಮೆಯ ಸಂಗತಿ. ಮಹಿಳಾ ಸಬಲೀಕರಣಕ್ಕೆ ಕೌಶಲ್ಯ ತರಬೇತಿಯ ಮೂಲಕ ಮತ್ತಷ್ಟು ಉತ್ತೇಜನ ನೀಡಬೇಕು ಎಂದರು.

ಪರಿಸರ ಸ್ನೇಹಿ ಜೀವನಶೈಲಿಯನ್ನು ಉತ್ತೇಜಿಸುವ ಉದ್ದೇಶದಿಂದ ಇನ್ನರ್ ವೀಲ್ ಬ್ರ್ಯಾಂಡಿಂಗ್ ಹೊಂದಿರುವ ಸ್ಟೇನ್‌ಲೆಸ್ ಸ್ಟೀಲ್ ನೀರಿನ ಬಾಟಲಿಗಳನ್ನು ಶಿಕ್ಷಕರಿಗೆ ಉಡುಗೊರೆಯಾಗಿ ನೀಡಿ ಸನ್ಮಾನಿಸಲಾಯಿತು.

ಪಿಡಿಸಿ ಪ್ರೇಮಾ ಗುಳಗೌಡ ಮಾತನಾಡಿ, ವೃತ್ತಿ ಶಿಕ್ಷಣವು ಹೆಣ್ಣುಮಕ್ಕಳು ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಹಾಗೂ ಭವಿಷ್ಯದಲ್ಲಿ ಸ್ವಾವಲಂಬಿಗಳಾಗಲು ಬಹಳಷ್ಟು ಸಹಾಯ ಮಾಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಪೂಜಾ ಭೂಮಾ, ಉಪಾಧ್ಯಕ್ಷೆ ಶಿವಲೀಲಾ ಅಕ್ಕಿ, ಸಹ ಕಾರ್ಯದರ್ಶಿ ಪುಷ್ಪಾ ಭಂಡಾರಿ, ಸಂಪಾದಕಿ ಮೀನಾಕ್ಷಿ ಕೊರವನವರ, ಖಜಾಂಚಿ ವೀಣಾ ಕಾವೇರಿ, ಐಎಸ್‌ಒ ವಿದ್ಯಾ ಶಿವನಗುತ್ತಿ, ಕ್ಲಬ್‌ನ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಯೋಗಾಚಾರ್ಯರಿಗೆ ರಾಜ್ಯ ಪ್ರಶಸ್ತಿ ಪ್ರದಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಮೈಸೂರಿನ ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಯೋಗ ಸ್ಪೋರ್ಟ್ಸ್ ಫೌಂಡೇಶನ್ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ ತಿಂಗಳಾದ್ಯಂತ ಹಮ್ಮಿಕೊಂಡಿರುವ ‘ಗುರುವಂದನಾ ಸಂಭ್ರಮಾಚರಣೆ’ ಕಾರ್ಯಕ್ರಮದ ಅಂಗವಾಗಿ ಯೋಗ ಸೇವಾ ಶಿಕ್ಷಕರನ್ನು ಗುರುತಿಸಿ ರಾಜ್ಯ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸೆ.11ರಂದು ಮೈಸೂರಿನ ಪತ್ರಿಕಾ ಭವನದಲ್ಲಿ ಯೋಗ ಸಾಧನೆ, ಬೋಧನೆ, ತರಬೇತಿ, ಪ್ರಸಾರ ಹಾಗೂ ಸೇವೆಯಲ್ಲಿ ತೊಡಗಿರುವ 14 ಯೋಗಾಚಾರ್ಯರಿಗೆ ‘ರಾಜಯೋಗಿ ಟಿ. ಕೃಷ್ಣಮಾಚಾರ್ಯ ಪ್ರಶಸ್ತಿ-2026’ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ವಿಶ್ವ ಯೋಗಾಶ್ರಮದ ಶ್ರೀ ಶ್ರೀ ನಿತ್ಯಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೈಸೂರು ಜಿಲ್ಲಾ ಆಯುಷ್ ಅಧಿಕಾರಿ ಡಾ. ರೇಣುಕಾದೇವಿ ಸಮ್ಮುಖ ವಹಿಸಿದ್ದರು. ಮೈಸೂರು ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಸಂಚಾಲಕ ಡಾ. ಪಿ.ಎನ್. ಗಣೇಶಕುಮಾರ್, ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ಮೋಹನ್, ಯೋಗ ಸ್ಪೋರ್ಟ್ಸ್ ಫೌಂಡೇಶನ್ ಖಜಾಂಚಿ ವಿವೇಕ್ ಹಾಗೂ ನಿರ್ದೇಶಕ ನಿಶಾಂತ್ ಉಪಸ್ಥಿತರಿದ್ದರು.

ಡಾ. ಪಿ.ಎನ್. ಗಣೇಶಕುಮಾರ್ ಮಾತನಾಡಿ, ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಯೋಗದ ಅಭಿವೃದ್ಧಿ ಹಾಗೂ ಪ್ರಸಾರಕ್ಕೆ ಮಹತ್ತರ ಕೊಡುಗೆ ನೀಡಿದ ಯೋಗಾಚಾರ್ಯ ಟಿ. ಕೃಷ್ಣಮಾಚಾರ್ಯ ಅವರ ಹೆಸರಿನಲ್ಲಿ ರಾಜ್ಯ ಪ್ರಶಸ್ತಿ ಸ್ಥಾಪಿಸಲಾಗಿದೆ. ಗುರು ಪರಂಪರೆಯನ್ನು ಸ್ಥಿರವಾಗಿ ಮುಂದುವರಿಸುವುದು ಪ್ರಶಸ್ತಿಯ ಉದ್ದೇಶವಾಗಿದೆ ಎಂದರು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಕೃಷ್ಣಪ್ಪ, ರಮೇಶಕುಮಾರ್ ಹಾಗೂ ಕೆ.ಎಸ್. ಪಲ್ಲೇದ ಮಾತನಾಡಿ, ಯೋಗವನ್ನು ಜೆನ್ ಅಲ್ಪಾ ಹಾಗೂ ಜೆನ್ ಝೀ ಸಮುದಾಯದ ಯುವಜನರಿಗೆ ತಲುಪಿಸಬೇಕು. ಶಾಲಾ-ಕಾಲೇಜುಗಳ ಪರೀಕ್ಷೆ ಹಾಗೂ ಪ್ರಮಾಣಪತ್ರಗಳಲ್ಲಿ ಯೋಗಕ್ಕೆ ಅಂಕಗಳನ್ನು ಕಡ್ಡಾಯಗೊಳಿಸಬೇಕು. ಯೋಗಾಸನ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜಯೋಗಿ ಟಿ. ಕೃಷ್ಣಮಾಚಾರ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ಸಂಘಟಕರಿಗೆ ಗದುಗಿನ ಎಸ್.ವೈ.ಬಿ.ಎಂ.ಎಸ್. ಯೋಗ ಪಾಠಶಾಲೆ, ಬಸವ ಯೋಗ ಮಹಾವಿದ್ಯಾಲಯ, ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ, ಗದಗ ಜಿಲ್ಲಾ ಯೋಗ ಒಕ್ಕೂಟ, ಗದಗ ಜಿಲ್ಲಾ ಅಮೇಚೂರ್ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್, ಬಸವ ಯೋಗ ಚಿಂತನ ಕೂಟ, ಶ್ರೀ ಕುಮಾರೇಶ್ವರ ಯೋಗ ಜೀಮ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರ ಪರವಾಗಿ ಗದಗ ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ಎಂ.ಎಸ್. ಶಿರಿಯಣ್ಣವರ ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ.