Home Blog Page 10

ಬಗರ್ ಹುಕುಂ ಹಗರಣ: ಜೆಡಿಎಸ್​​ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಸಿಐಡಿ ವಶಕ್ಕೆ

0

ಹಾಸನ: ಬಹುಕೋಟಿ ಮೌಲ್ಯದ ಬಗರ್ ಹುಕುಂ ಜಮೀನು ಮಂಜೂರಾತಿ ಅಕ್ರಮ ಪ್ರಕರಣದಲ್ಲಿ ಬೇಲೂರು ಕ್ಷೇತ್ರದ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ವಿರುದ್ಧ ಸಿಐಡಿ ಮಹತ್ವದ ಕ್ರಮ ಕೈಗೊಂಡಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದೆ.

2016ರಿಂದ 2022ರ ಅವಧಿಯಲ್ಲಿ ಬಗರ್ ಹುಕುಂ ಸಮಿತಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸರ್ಕಾರಿ ಜಮೀನುಗಳ ಹಂಚಿಕೆಯಲ್ಲಿ ಭಾರೀ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ. ಸುಮಾರು 2,750 ಎಕರೆ ಸರ್ಕಾರಿ ಭೂಮಿಯನ್ನು ನಕಲಿ ದಾಖಲೆಗಳ ಆಧಾರದ ಮೇಲೆ 1,430 ಅಕ್ರಮ ಫಲಾನುಭವಿಗಳಿಗೆ ಮಂಜೂರು ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೋಲಾರದ ಸಾಮಾಜಿಕ ಕಾರ್ಯಕರ್ತ ರಮೇಶ್ ಕುಮಾರ್ ನೀಡಿದ ದೂರಿನ ಮೇರೆಗೆ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಂತರ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು.

ಪ್ರಕರಣದಲ್ಲಿ ಮಾಜಿ ಶಾಸಕ ಲಿಂಗೇಶ್ ಸೇರಿದಂತೆ ಹಲವರ ವಿರುದ್ಧ ವಂಚನೆ, ನಕಲಿ ದಾಖಲೆ ಸೃಷ್ಟಿ ಹಾಗೂ ಸರ್ಕಾರಿ ಆಸ್ತಿ ದುರುಪಯೋಗ ಸೇರಿದಂತೆ ವಿವಿಧ ಆರೋಪಗಳಡಿ ಕೇಸ್ ದಾಖಲಾಗಿದೆ.

ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದ ಬಳಿಕ ತನಿಖೆ ಚುರುಕುಗೊಂಡಿದ್ದು, ಇದೀಗ ಸಿಐಡಿ ಅಧಿಕಾರಿಗಳು ಲಿಂಗೇಶ್ ಅವರನ್ನು ಹಳೇಬೀಡಿನ ನಿವಾಸದಿಂದ ವಶಕ್ಕೆ ಪಡೆದಿದ್ದಾರೆ.

ಪ್ರಕರಣದ ಸಂಪೂರ್ಣ ಜಾಲ ಹಾಗೂ ಇತರ ಆರೋಪಿಗಳ ಪಾತ್ರದ ಕುರಿತು ಸಿಐಡಿ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಜಾತಿ ನಿಂದನೆ, ಮಾನಸಿಕ ಕಿರುಕುಳ ಆರೋಪ: ಮುಖ್ಯ ಶಿಕ್ಷಕ ಆತ್ಮಹತ್ಯೆ ಪ್ರಕರಣದಲ್ಲಿ 11 ಮಂದಿ ವಿರುದ್ಧ ಕೇಸ್

0

ದಾವಣಗೆರೆ: ಕೊಕ್ಕನೂರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಜಯಪ್ಪ (54) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಸಹ ಶಿಕ್ಷಕರು, ಬಿಸಿಯೂಟ ಸಿಬ್ಬಂದಿ, ಸಿಆರ್‌ಪಿ ಹಾಗೂ ಬಿಆರ್‌ಪಿ ಸೇರಿದಂತೆ ಒಟ್ಟು 11 ಮಂದಿಯ ವಿರುದ್ಧ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಮೃತ ಜಯಪ್ಪ ಅವರ ಪತ್ನಿ ಅಂಜನಮ್ಮ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಮಾನಸಿಕ ಕಿರುಕುಳ ಹಾಗೂ ಜಾತಿ ನಿಂದನೆ ಆರೋಪದಡಿ ಸಿಆರ್‌ಪಿ, ಬಿಆರ್‌ಪಿ, ಸಹ ಶಿಕ್ಷಕರಾದ ಶ್ರೀಕಾಂತಚಾರಿ, ವೆಂಕಟೇಶ್, ರಂಜನಿ, ಚೇತನಾ, ಮಹಾಂತೇಶ್ ಗೌಳಿ ಹಾಗೂ ಬಿಸಿಯೂಟ ಸಿಬ್ಬಂದಿಗಳಾದ ಸುಮಾ, ಚೆನ್ನಮ್ಮ, ರೂಪಾ ಮತ್ತು ವಿಜಯಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.

ಹರಿಹರ ತಾಲೂಕಿನ ಕೊಕ್ಕನೂರು ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಜಯಪ್ಪ, ನಿರಂತರ ಮಾನಸಿಕ ಕಿರುಕುಳ ಮತ್ತು ಜಾತಿ ನಿಂದನೆಯಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಪ್ರಕರಣ ದಾಖಲಾಗುತ್ತಿದ್ದಂತೆ ಬಂಧನ ಭೀತಿಯಿಂದ ಆರೋಪಿತ ಸಹ ಶಿಕ್ಷಕರು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಅಡಚಣೆ ಆಗದಂತೆ ತಾತ್ಕಾಲಿಕವಾಗಿ ಅನುದಾನಿತ ಶಾಲಾ ಶಿಕ್ಷಕರನ್ನು ನಿಯೋಜಿಸಲಾಗಿದೆ.

ಘಟನೆಯ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವುದರಿಂದ ಪೊಲೀಸರು ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಧಾರವಾಡ: ಜಿಲ್ಲಾ ಕೋರ್ಟ್ ಗೆ ಬಾಂಬ್ ಬೆದರಿಕೆ ಇಮೇಲ್: ತೀವ್ರ ಶೋಧ

ಧಾರವಾಡ: ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಇಮೇಲ್ ಬಂದ ಹಿನ್ನೆಲೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ನ್ಯಾಯಾಲಯದ ಆಡಳಿತ ಕಚೇರಿಗೆ ಬಂದ ಇಮೇಲ್‌ನಲ್ಲಿ ಸ್ಫೋಟದ ಬಗ್ಗೆ ಬೆದರಿಕೆ ಹಾಕಲಾಗಿದ್ದರಿಂದ ಭದ್ರತಾ ಸಿಬ್ಬಂದಿ ತಕ್ಷಣ ಎಚ್ಚೆತ್ತುಕೊಂಡರು.

ಮುನ್ನೆಚ್ಚರಿಕಾ ಕ್ರಮವಾಗಿ ನ್ಯಾಯಾಲಯದ ಆವರಣದಲ್ಲಿದ್ದ ವಕೀಲರು, ಕಕ್ಷಿದಾರರು ಹಾಗೂ ಸಿಬ್ಬಂದಿಯನ್ನು ಹೊರಗೆ ಸ್ಥಳಾಂತರಿಸಲಾಯಿತು. ಬೆದರಿಕೆ ಸಂದೇಶದಲ್ಲಿ, “ನಿನ್ನೆ ಮಧ್ಯಾಹ್ನ 2 ಗಂಟೆಗೆ ನಿಮ್ಮ ನ್ಯಾಯಾಲಯದಲ್ಲಿ 23 ಸೈನೈಡ್ ಅನಿಲ ಬಾಂಬ್‌ಗಳು ಸ್ಫೋಟಗೊಂಡಿವೆ. ನಿನ್ನೆ ನಡೆದದ್ದು ಕೇವಲ ಪರೀಕ್ಷೆ, ಇಂದು ನಡೆಯುವುದು ನಿಜವಾದ ದಾಳಿ” ಎಂದು ಉಲ್ಲೇಖಿಸಲಾಗಿತ್ತು.

ಇಮೇಲ್‌ನಲ್ಲಿನ ಈ ಬೆದರಿಕೆ ನ್ಯಾಯಾಲಯದ ಸುತ್ತಮುತ್ತ ಆತಂಕ ಸೃಷ್ಟಿಸಿತು. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿ ನ್ಯಾಯಾಲಯದ ಆವರಣವನ್ನು ಸಂಪೂರ್ಣವಾಗಿ ಪರಿಶೀಲಿಸಿದರು.

ಪರಿಶೀಲನಾ ಕಾರ್ಯಾಚರಣೆಯ ವೇಳೆ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದ್ದು, ಬೆದರಿಕೆ ಇಮೇಲ್‌ನ ಮೂಲವನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸೈಬರ್ ತಜ್ಞರ ಸಹಾಯದಿಂದ ಇಮೇಲ್ ಕಳುಹಿಸಿದ ವ್ಯಕ್ತಿ ಅಥವಾ ಗುಂಪಿನ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಭದ್ರತಾ ದೃಷ್ಟಿಯಿಂದ ನ್ಯಾಯಾಲಯದ ಆವರಣದಲ್ಲಿ ಕೆಲಕಾಲ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

ಅಮೆರಿಕ-ಇರಾನ್ ಮಹತ್ವದ ರಾಜತಾಂತ್ರಿಕ ಮಾತುಕತೆ ದಿಢೀರ್ ರದ್ದು!

0

ಬರ್ನ್: ಅಮೆರಿಕ ಮತ್ತು ಇರಾನ್ ನಡುವಿನ ಮಹತ್ವದ ರಾಜತಾಂತ್ರಿಕ ಮಾತುಕತೆಗಳು ಕೊನೆಯ ಕ್ಷಣದಲ್ಲಿ ಮುಂದೂಡಲ್ಪಟ್ಟಿವೆ. ಸ್ವಿಟ್ಜರ್ಲೆಂಡ್‌ನ ಬರ್ಗೆನ್‌ಸ್ಟಾಕ್‌ನಲ್ಲಿ ಇಂದು ನಡೆಯಬೇಕಿದ್ದ ಉನ್ನತ ಮಟ್ಟದ ಸಭೆಯನ್ನು ಸದ್ಯಕ್ಕೆ ರದ್ದುಗೊಳಿಸಲಾಗಿದೆ ಎಂದು ಸ್ವಿಟ್ಜರ್ಲೆಂಡ್ ವಿದೇಶಾಂಗ ಸಚಿವಾಲಯ ಅಧಿಕೃತವಾಗಿ ತಿಳಿಸಿದೆ.

ಮಾಹಿತಿಯ ಪ್ರಕಾರ, ಅಮೆರಿಕದ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರು ಸ್ವಿಟ್ಜರ್ಲೆಂಡ್‌ಗೆ ಕೈಗೊಳ್ಳಬೇಕಿದ್ದ ಅಧಿಕೃತ ಪ್ರವಾಸವನ್ನು ದಿಢೀರ್ ಮುಂದೂಡಿದ್ದಾರೆ. ಅವರ ಗೈರುಹಾಜರಿಯ ಕಾರಣದಿಂದ ಇರಾನ್ ಪ್ರತಿನಿಧಿಗಳೊಂದಿಗೆ ನಿಗದಿಯಾಗಿದ್ದ ಈ ಮಹತ್ವದ ಮಾತುಕತೆ ನಡೆಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ತಗ್ಗಿಸುವ ಉದ್ದೇಶದಿಂದ ಈ ಸಭೆ ಆಯೋಜಿಸಲಾಗಿತ್ತು. ಸ್ವಿಟ್ಜರ್ಲೆಂಡ್ ಆತಿಥ್ಯದಲ್ಲಿ ನಡೆಯಬೇಕಿದ್ದ ಈ ಮಾತುಕತೆಯಲ್ಲಿ ಅಮೆರಿಕ, ಇರಾನ್, ಕತಾರ್ ಮತ್ತು ಪಾಕಿಸ್ತಾನದ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇತ್ತು. ಕತಾರ್ ಹಾಗೂ ಪಾಕಿಸ್ತಾನ ದೇಶಗಳು ಮಧ್ಯಸ್ಥಿಕೆ ವಹಿಸುವ ಪ್ರಮುಖ ಪಾತ್ರದಲ್ಲಿದ್ದವು.

ಈ ಕುರಿತು ಪ್ರಕಟಣೆ ಹೊರಡಿಸಿರುವ ಸ್ವಿಟ್ಜರ್ಲೆಂಡ್ ವಿದೇಶಾಂಗ ಸಚಿವಾಲಯ, ಅಮೆರಿಕ, ಇರಾನ್, ಕತಾರ್ ಮತ್ತು ಪಾಕಿಸ್ತಾನದ ನಡುವೆ ನಡೆಯಬೇಕಿದ್ದ ಮಾತುಕತೆಗಳನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಸಭೆ ಮುಂದೂಡಿಕೆಗೆ ನಿಖರ ಕಾರಣವೇನು ಎಂಬುದನ್ನು ಸಚಿವಾಲಯ ಬಹಿರಂಗಪಡಿಸಿಲ್ಲ. ಅಲ್ಲದೆ, ಹೊಸ ದಿನಾಂಕವನ್ನೂ ಘೋಷಿಸಿಲ್ಲ. ಆದರೆ ಭವಿಷ್ಯದಲ್ಲಿ ಮಾತುಕತೆಗಳನ್ನು ಯಶಸ್ವಿಯಾಗಿ ಆಯೋಜಿಸಲು ಅಗತ್ಯ ಸಿದ್ಧತೆಗಳನ್ನು ಮುಂದುವರಿಸಲಾಗುವುದು ಎಂದು ತಿಳಿಸಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಸಂಬಂಧಗಳು ಈಗಾಗಲೇ ಸೂಕ್ಷ್ಮ ಹಂತದಲ್ಲಿರುವ ಸಂದರ್ಭದಲ್ಲಿ ಈ ಮಾತುಕತೆ ಮುಂದೂಡಿಕೆಯಾಗಿರುವುದು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಹೊಸ ಆತಂಕಕ್ಕೆ ಕಾರಣವಾಗಿದೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಸಂಬಂಧಿಸಿದ ಪ್ರಯತ್ನಗಳಿಗೆ ಇದು ತಾತ್ಕಾಲಿಕ ಹಿನ್ನಡೆಯಾಗಿ ಪರಿಣಮಿಸಿದೆ.

ಕೇರಳ ಮದರಸಾದಲ್ಲಿ ಪತ್ತೆಯಾದ ಕೊಡಗಿನ ತಾಯಿ-ಮಗು: ಮತಾಂತರ ಆರೋಪದಡಿ ಅಂಗಡಿ ಮಾಲೀಕ ಸೇರಿ ಇಬ್ಬರ ಬಂಧನ

0

ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರದಿಂದ ನಾಪತ್ತೆಯಾಗಿದ್ದ ಮಹಿಳೆ ಹಾಗೂ ಆಕೆಯ ಅಪ್ರಾಪ್ತ ಪುತ್ರ ಕೇರಳದಲ್ಲಿ ಪತ್ತೆಯಾಗಿರುವ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣದ ತನಿಖೆಯ ವೇಳೆ ಮತಾಂತರ ಆರೋಪಗಳು ಕೇಳಿಬಂದಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಸಚಿತಾ ಎಂಬ ಮಹಿಳೆ ಮತ್ತು ಆಕೆಯ 9 ವರ್ಷದ ಪುತ್ರ ಸುಮಾರು ಒಂದೂವರೆ ತಿಂಗಳ ಹಿಂದೆ ಕುಶಾಲನಗರದಿಂದ ನಾಪತ್ತೆಯಾಗಿದ್ದರು. ಪತ್ನಿ ಮತ್ತು ಮಗುವಿನ ಕಾಣೆಯಾದ ಕುರಿತು ಮಹಿಳೆಯ ಪತಿ ದೂರು ದಾಖಲಿಸಿದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದರು.

ಶೋಧ ಕಾರ್ಯಾಚರಣೆ ವೇಳೆ ಇಬ್ಬರೂ ಕೇರಳದ ಮಲಪ್ಪುರಂ ಜಿಲ್ಲೆಯ ಮದರಸವೊಂದರಲ್ಲಿ ಪತ್ತೆಯಾಗಿದ್ದಾರೆ. ಮಹಿಳೆ ಕೆಲಸ ಮಾಡುತ್ತಿದ್ದ ಅಂಗಡಿಯ ಮಾಲೀಕ ಸಲೀಂ ಸಂಪರ್ಕಕ್ಕೆ ಬಂದ ಬಳಿಕವೇ ಈ ಬೆಳವಣಿಗೆ ನಡೆದಿರುವುದಾಗಿ ಆರೋಪಿಸಲಾಗಿದೆ.

ತನಿಖೆಯ ಪ್ರಾಥಮಿಕ ಹಂತದಲ್ಲಿ ಮಹಿಳೆ ಧರ್ಮಾಂತರಗೊಂಡಿರುವುದಾಗಿ ಹಾಗೂ ಮಗುವಿನ ಮೇಲೂ ಧಾರ್ಮಿಕ ಆಚರಣೆ ನಡೆಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಪ್ರಕರಣದ ಹಿನ್ನೆಲೆ ಅಂಗಡಿ ಮಾಲೀಕ ಸಲೀಂ ಹಾಗೂ ಜಲೀಲ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಹಿಂದೂಪರ ಸಂಘಟನೆಗಳು ಈ ಪ್ರಕರಣವನ್ನು ಮತಾಂತರ ಮತ್ತು ಲವ್ ಜಿಹಾದ್ ಜಾಲದ ಭಾಗ ಎಂದು ಆರೋಪಿಸಿದ್ದು, ಕುಶಾಲನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂತಹ ಚಟುವಟಿಕೆಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿವೆ.

ಆದರೆ ಆರೋಪಗಳ ಸತ್ಯಾಸತ್ಯತೆ ಕುರಿತು ಅಂತಿಮ ನಿರ್ಣಯ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ. ಪ್ರಕರಣದ ಎಲ್ಲ ಆಯಾಮಗಳ ಕುರಿತೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ನಾಯಿ ಜೀವ ಉಳಿಸಲು ಹೋಗಿ ತಾಯಿಯನ್ನು ಕಳೆದುಕೊಂಡ ಮಗ: ಬೈಕ್ ಅಪಘಾತದಲ್ಲಿ ತಾಯಿ ಸಾವು, ಮಗನ ಕಣ್ಣೀರು

0

ಬೆಳಗಾವಿ: ಮಾನವೀಯತೆಯ ನಿರ್ಧಾರವೊಂದು ಕ್ಷಣಾರ್ಧದಲ್ಲಿ ದುರಂತವಾಗಿ ಬದಲಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಸಾಂಬ್ರಾ ಸಮೀಪ ನಡೆದಿದೆ. ರಸ್ತೆಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಯತ್ನಿಸಿದ ವೇಳೆ ಬೈಕ್ ಅಪಘಾತಕ್ಕೀಡಾಗಿ ತಾಯಿ ಮೃತಪಟ್ಟಿದ್ದು, ಪುತ್ರ ಪಾರಾಗಿದ್ದಾನೆ.

ಪಂಥಬಾಳೆಕುಂದ್ರಿ ಗ್ರಾಮದ ಶಾಂತವ್ವ ಕಲ್ಮಠ ಮೃತ ಮಹಿಳೆ. ಪುತ್ರ ಈರಣ್ಣಾ ಕಲ್ಮಠ ಬೈಕ್‌ನಲ್ಲಿ ತಾಯಿಯನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಸಾಂಬ್ರಾ ಬಳಿ ನಾಯಿಯೊಂದು ರಸ್ತೆಗೆ ಅಡ್ಡ ಬಂದಿದೆ. ನಾಯಿಗೆ ಡಿಕ್ಕಿ ಹೊಡೆಯದಂತೆ ಬೈಕ್ ನಿಯಂತ್ರಿಸಲು ಯತ್ನಿಸಿದಾಗ ವಾಹನ ಸಮತೋಲನ ಕಳೆದುಕೊಂಡು ರಸ್ತೆಗೆ ಉರುಳಿದೆ.

ಅಪಘಾತದ ತೀವ್ರತೆಗೆ ಶಾಂತವ್ವ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ಪುತ್ರ ತಾಯಿಯನ್ನು ತಕ್ಷಣ ಬಿಮ್ಸ್ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ.

ಆಸ್ಪತ್ರೆಯಲ್ಲಿ ತಾಯಿಯ ಸಾವಿನ ಸುದ್ದಿ ಕೇಳುತ್ತಿದ್ದಂತೆ ಪುತ್ರ ಈರಣ್ಣಾ ತೀವ್ರ ದುಃಖದಲ್ಲಿ ಮುಳುಗಿದ್ದು, ತಾಯಿ ಕೈಯಲ್ಲಿದ್ದ ಬ್ಯಾಗ್ ಅನ್ನು ಎದೆಗೆ ಅಪ್ಪಿಕೊಂಡು ಕಣ್ಣೀರಿಟ್ಟ ದೃಶ್ಯ ನೋಡುಗರ ಕಣ್ಣಂಚನ್ನೂ ತೇವಗೊಳಿಸಿತು.

ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಅಡ್ಡ ಮತದಾನ ಮಾಡಿದ ದ್ರೋಹಿಗಳನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ: ಬಿ.ವೈ. ವಿಜಯೇಂದ್ರ

ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ನಡೆಸುವ ಮೂಲಕ ಪಕ್ಷ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಗೆ ದ್ರೋಹ ಎಸಗಿದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ಅವರ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳುವುದು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪರಿಷತ್ ಚುನಾವಣೆಯ ಫಲಿತಾಂಶ ಪಕ್ಷಕ್ಕೆ ಆಘಾತಕಾರಿಯಾಗಿದೆ ಎಂದು ಹೇಳಿದರು. ಜೆಡಿಎಸ್‌ನಿಂದ ಸುಮಾರು ಆರೇಳು ಶಾಸಕರು ಹಾಗೂ ಬಿಜೆಪಿಯಿಂದ ನಾಲ್ಕೈದು ಶಾಸಕರು ಅಡ್ಡ ಮತದಾನ ಮಾಡಿರುವ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದರು.

“ಈ ರೀತಿಯ ಘಟನೆ ನಡೆಯಬಾರದಿತ್ತು. ಆದರೆ ದುರದೃಷ್ಟವಶಾತ್ ಅದು ನಡೆದಿದೆ. ಪಕ್ಷದ ಬೆನ್ನಿಗೆ ಇರಿದು ರಾಜಕೀಯ ಆಟ ಆಡಿದವರು ಯಾರು ಎಂಬುದರ ಬಗ್ಗೆ ಸಾಕಷ್ಟು ಮಾಹಿತಿ ನಮ್ಮ ಬಳಿ ಇದೆ. ಇವತ್ತು ಅಥವಾ ನಾಳೆಯೊಳಗೆ ಸಂಪೂರ್ಣ ಚಿತ್ರಣ ದೊರೆಯಲಿದೆ,” ಎಂದು ವಿಜಯೇಂದ್ರ ಹೇಳಿದರು.

ಈ ಕ್ರಾಸ್ ವೋಟಿಂಗ್‌ನಿಂದ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತೀವ್ರ ಬೇಸರವಾಗಿದೆ. ಬಿಜೆಪಿಗೂ ಇದೇ ಮಟ್ಟದ ನೋವಾಗಿದೆ. ಈ ರಾಜಕೀಯ ದ್ರೋಹವನ್ನು ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಅತ್ಯಂತ ಗಂಭೀರವಾಗಿ ಪರಿಗಣಿಸಿವೆ ಎಂದು ಅವರು ತಿಳಿಸಿದರು.

ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಲು ಈಗಾಗಲೇ ಸಮಯ ಕೋರಿದ್ದು, ಇವತ್ತು ಅಥವಾ ಸೋಮವಾರ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಲಿದ್ದೇನೆ. ಪಕ್ಷದಲ್ಲೇ ಇದ್ದುಕೊಂಡು ದ್ರೋಹ ಎಸಗಿರುವ ‘ಮೀರ್ ಸಾದಿಕ್’ಗಳ ಕುರಿತು ಸಂಪೂರ್ಣ ಮಾಹಿತಿಯನ್ನು ವರಿಷ್ಠರಿಗೆ ನೀಡಲಿದ್ದೇನೆ ಎಂದು ವಿಜಯೇಂದ್ರ ಹೇಳಿದರು.

ಪ್ರಸ್ತುತ ರಾಜಕೀಯ ಬೆಳವಣಿಗೆಗಳು ಹಾಗೂ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಕುರಿತು ಪಕ್ಷದ ರಾಷ್ಟ್ರೀಯ ನಾಯಕರೊಂದಿಗೆ ಸಮಾಲೋಚನೆ ನಡೆಸಿ, ದ್ರೋಹ ಎಸಗಿದವರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿದರು.

ಐಟಿಐ ವಿದ್ಯಾರ್ಥಿಗಳಿಗೆ ಜಾಬ್ ಅಲರ್ಟ್: ಮಂಗಳೂರಿನಲ್ಲಿ ಜೂನ್ 22ರಂದು ಮೆಗಾ ಉದ್ಯೋಗ ಮೇಳ

0

ಮಂಗಳೂರು: ಐಟಿಐ ವಿದ್ಯಾರ್ಥಿಗಳು ಹಾಗೂ ಉದ್ಯೋಗ ಅರಸುತ್ತಿರುವ ಯುವಕರಿಗೆ ಮಹತ್ವದ ಅವಕಾಶ ಒದಗಿಸುವ ನಿಟ್ಟಿನಲ್ಲಿ ಜೂನ್ 22ರಂದು ಮಂಗಳೂರಿನಲ್ಲಿ ಬೃಹತ್ ಉದ್ಯೋಗ ಮತ್ತು ಅಪ್ರೆಂಟಿಸ್‌ಶಿಪ್ ಮೇಳ ನಡೆಯಲಿದೆ.

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ಮಾರ್ಗದರ್ಶನದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ), ಮಂಗಳೂರು ಈ ಮೇಳವನ್ನು ಆಯೋಜಿಸಿದ್ದು, ಕಾರ್ಯಕ್ರಮವು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ) ಆವರಣದಲ್ಲಿ ಬೆಳಗ್ಗೆ 10 ಗಂಟೆಯಿಂದ ಆರಂಭವಾಗಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕೈಗಾರಿಕಾ ಮತ್ತು ಉತ್ಪಾದನಾ ವಲಯದ ಪ್ರಮುಖ ಸಂಸ್ಥೆಗಳು ಮೇಳದಲ್ಲಿ ಭಾಗವಹಿಸಿ ಖಾಲಿ ಹುದ್ದೆಗಳ ನೇಮಕಾತಿ ಹಾಗೂ ಅಪ್ರೆಂಟಿಸ್ ತರಬೇತಿಗಾಗಿ ಅಭ್ಯರ್ಥಿಗಳ ಆಯ್ಕೆ ನಡೆಸಲಿವೆ.

ಐಟಿಐ ಉತ್ತೀರ್ಣ ಅಭ್ಯರ್ಥಿಗಳು, ಅಂತಿಮ ವರ್ಷದ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಅರ್ಜಿದಾರರು ತಮ್ಮ ಮೂಲ ದಾಖಲಾತಿಗಳು, ಪ್ರಮಾಣಪತ್ರಗಳು, ರೆಸ್ಯೂಮ್ ಹಾಗೂ ಜೆರಾಕ್ಸ್ ಪ್ರತಿಗಳೊಂದಿಗೆ ಮೇಳಕ್ಕೆ ಹಾಜರಾಗಬೇಕು.

ಸ್ಥಳೀಯ ಯುವಜನತೆಗೆ ಉದ್ಯೋಗ ಮತ್ತು ಕೈಗಾರಿಕಾ ತರಬೇತಿ ಅವಕಾಶ ಕಲ್ಪಿಸುವ ಉದ್ದೇಶದಿಂದ ಆಯೋಜಿಸಲಾಗುತ್ತಿರುವ ಈ ಮೇಳದ ಪ್ರಯೋಜನವನ್ನು ಅರ್ಹ ಅಭ್ಯರ್ಥಿಗಳು ಪಡೆದುಕೊಳ್ಳಬೇಕು ಎಂದು ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.

ಕೆವಿಎನ್ ಪ್ರೊಡಕ್ಷನ್ಸ್ ಮತ್ತೊಂದು ಮಾಸ್ಟರ್ ಸ್ಟ್ರೋಕ್: ಹ್ಯಾಟ್ರಿಕ್ ಹೀರೋ ನರ್ನೆ ನಿತಿನ್ ಜೊತೆ ಹೊಸ ತೆಲುಗು ಸಿನಿಮಾ ಘೋಷಣೆ

ಹೈದರಾಬಾದ್: ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ತನ್ನ ತೆಲುಗು ಸಿನಿ ಪಯಣವನ್ನು ಮತ್ತಷ್ಟು ವಿಸ್ತರಿಸಿದ್ದು, ಯುವ ನಟ ನರ್ನೆ ನಿತಿನ್ ಅಭಿನಯದ ಹೊಸ ಸಿನಿಮಾವನ್ನು ಅಧಿಕೃತವಾಗಿ ಘೋಷಿಸಿದೆ.

‘ಮ್ಯಾಡ್’, ‘ಆಯ್’ ಮತ್ತು ‘ಮ್ಯಾಡ್ ಸ್ಕ್ವೇರ್’ ಚಿತ್ರಗಳ ಯಶಸ್ಸಿನ ಬಳಿಕ ಭರವಸೆಯ ನಟನಾಗಿ ಹೊರಹೊಮ್ಮಿರುವ ನರ್ನೆ ನಿತಿನ್, ಇದೀಗ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಜೊತೆ ಕೈಜೋಡಿಸಿದ್ದಾರೆ. ‘ಜೂನಿಯರ್’ ಸಿನಿಮಾ ಮೂಲಕ ಗುರುತಿಸಿಕೊಂಡಿರುವ ರಾಧಾಕೃಷ್ಣ ರೆಡ್ಡಿ ಈ ಹೊಸ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ನರ್ನೆ ನಿತಿನ್ ಜನ್ಮದಿನದ ಪ್ರಯುಕ್ತ ಬಿಡುಗಡೆಗೊಂಡ ಪೋಸ್ಟರ್ ಸಿನಿಪ್ರಿಯರ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣದ ಪೋಸ್ಟ್ ಮಾದರಿಯಲ್ಲಿ ರೂಪುಗೊಂಡಿರುವ ಪೋಸ್ಟರ್‌ನಲ್ಲಿ ‘ಆಕಾಶದಲ್ಲಿರುತ್ತೆ ಮೂನ್.. ನೀವೇ ನನ್ನ ಲೈಫ್‌ಗೆ ಕ್ವೀನ್’ ಎಂಬ ಟ್ಯಾಗ್‌ಲೈನ್ ಬಳಸಲಾಗಿದೆ. ಚಿತ್ರದ ಕಥೆ ಪ್ರೇಮಕಥೆ ಆಧಾರಿತವಾಗಿರುವ ಸಾಧ್ಯತೆ ಹೆಚ್ಚಿದೆ.

ಇದೇ ವೇಳೆ ಪೋಸ್ಟರ್‌ನಲ್ಲಿ ಜೂನಿಯರ್ ಎನ್‌ಟಿಆರ್ ಲೈಕ್ ಮಾಡಿರುವ ವಿನ್ಯಾಸವನ್ನು ಸೇರಿಸಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಚಿತ್ರದ ತಾಂತ್ರಿಕ ತಂಡದಲ್ಲಿ ರಾಮ ಮಾರುತಿ ಎಂ (ಛಾಯಾಗ್ರಹಣ), ನಿರಂಜನ್ ದೇವರಮನೆ (ಸಂಕಲನ) ಮತ್ತು ಶಿವ ಕಮೇಶ್ ಡಿ. (ಕಲಾ ನಿರ್ದೇಶನ) ಕಾರ್ಯನಿರ್ವಹಿಸಲಿದ್ದಾರೆ.

ಸದ್ಯ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ‘ಟಾಕ್ಸಿಕ್’, ‘ಜನ ನಾಯಗನ್’, ‘ಬೇಲ್’, ಚಿರಂಜೀವಿ ಅಭಿನಯದ ಹೊಸ ಸಿನಿಮಾ ಹಾಗೂ ಅಕ್ಷಯ್ ಕುಮಾರ್ ನಟನೆಯ ‘ಹೈವಾನ್’ ಸೇರಿದಂತೆ ಹಲವು ದೊಡ್ಡ ಪ್ರಾಜೆಕ್ಟ್‌ಗಳು ವಿವಿಧ ಹಂತಗಳಲ್ಲಿ ಸಾಗುತ್ತಿವೆ. ಈ ಸಾಲಿಗೆ ಈಗ ನರ್ನೆ ನಿತಿನ್ ಅಭಿನಯದ ಹೊಸ ತೆಲುಗು ಸಿನಿಮಾ ಸೇರ್ಪಡೆಯಾಗಿರುವುದು ಸಂಸ್ಥೆಯ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.

NEET-UG ಮರುಪರೀಕ್ಷೆ ಹಿನ್ನೆಲೆ ಟೆಲಿಗ್ರಾಂ ತಾತ್ಕಾಲಿಕ ನಿಷೇಧ: ಕೇಂದ್ರ ಸರ್ಕಾರದ ಕ್ರಮಕ್ಕೆ ದೆಹಲಿ ಹೈಕೋರ್ಟ್ ಬೆಂಬಲ

0

ನವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-UG) 2026ರ ಮರುಪರೀಕ್ಷೆ ಹಿನ್ನೆಲೆಯಲ್ಲಿ ಭಾರತದಲ್ಲಿ ಟೆಲಿಗ್ರಾಂ ಆ್ಯಪ್‌ ಮೇಲೆ ವಿಧಿಸಲಾಗಿರುವ ತಾತ್ಕಾಲಿಕ ನಿರ್ಬಂಧವನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿದೆ. ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಕೈಗೊಂಡಿರುವ ಈ ಕ್ರಮ ನ್ಯಾಯಸಮ್ಮತವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಟೆಲಿಗ್ರಾಂ ಸಂಸ್ಥೆ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ಏಕಸದಸ್ಯ ಪೀಠ ಜೂನ್ 18ರಂದು ನಡೆಸಿತ್ತು. ಬಳಿಕ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ, ಕೇಂದ್ರ ಸರ್ಕಾರದ ಕ್ರಮವನ್ನು ಸಮರ್ಥಿಸಿದೆ.

ವಿಚಾರಣೆ ವೇಳೆ ನ್ಯಾಯಾಲಯ, ಸರ್ಕಾರದ ಕ್ರಮವು ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೈಗೊಳ್ಳಲಾದ ಕನಿಷ್ಠ ಮಟ್ಟದ ನಿರ್ಬಂಧವಾಗಿದೆ. ಹೀಗಾಗಿ ಈ ಆದೇಶವನ್ನು ಅಸಮಾನ ಅಥವಾ ಅಸಮಂಜಸ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಜೂನ್ 21ರಂದು ನಡೆಯಲಿರುವ NEET-UG ಮರುಪರೀಕ್ಷೆಗೆ ಮುನ್ನ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಭಾರತದಲ್ಲಿ ಜೂನ್ 22ರವರೆಗೆ ಟೆಲಿಗ್ರಾಂ ಆ್ಯಪ್‌ಗೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನೀಡಿದ ಶಿಫಾರಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ, ಈಗಾಗಲೇ ಪೋಸ್ಟ್ ಮಾಡಿರುವ ಸಂದೇಶಗಳನ್ನು ಜೂನ್ 30ರವರೆಗೆ ಎಡಿಟ್ ಮಾಡುವ ಸೌಲಭ್ಯವನ್ನು ಸ್ಥಗಿತಗೊಳಿಸುವಂತೆ ಟೆಲಿಗ್ರಾಂಗೆ ಸೂಚಿಸಲಾಗಿದೆ.

ಮೇ 3ರಂದು ನಡೆದಿದ್ದ NEET-UG 2026 ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ನಂತರ ಮರುಪರೀಕ್ಷೆಯ ದಿನಾಂಕವನ್ನು ನಿಗದಿಪಡಿಸಲಾಗಿದ್ದು, ಈ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳ (CBI) ಮುಂದುವರಿಸಿದೆ.

ಈ ಬೆಳವಣಿಗೆಗಳ ನಡುವೆ ಪರೀಕ್ಷೆಯ ಪಾರದರ್ಶಕತೆ ಮತ್ತು ಭದ್ರತೆಯನ್ನು ಕಾಪಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಕೈಗೊಂಡಿರುವ ಟೆಲಿಗ್ರಾಂ ಮೇಲಿನ ತಾತ್ಕಾಲಿಕ ನಿರ್ಬಂಧಕ್ಕೆ ದೆಹಲಿ ಹೈಕೋರ್ಟ್ ಬೆಂಬಲ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದೆ.

error: Content is protected !!