Home Blog Page 10

ತಾಲೂಕಾ ಆಸ್ಪತ್ರೆಗಳಲ್ಲಿ ಉಚಿತ ಇಸಿಜಿ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ರಾಜ್ಯದ ಯುವಸಮೂಹಕ್ಕೆ ಮಾದರಿಯಾಗಿದ್ದ ನಟ ಪುನೀತರಾಜಕುಮಾರ ಅವರ ಹೆಸರಿನಲ್ಲಿ ರಾಜ್ಯ ಸರಕಾರ ಜಾರಿಗೊಳಿಸಿರುವ ಡಾ. ಪುನೀತ್ ರಾಜ್‌ಕುಮಾರ ಹೃದಯ ಜ್ಯೋತಿ ಯೋಜನೆ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ವರವಾಗುತ್ತಿದೆ.

ಜಿಲ್ಲೆಯ ಶಿರಹಟ್ಟಿ ಮತ್ತು ನರಗುಂದ ತಾಲೂಕಾ ಆಸ್ಪತ್ರೆಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಉಚಿತವಾಗಿ ಇಸಿಜಿ ಮಾಡುವ ವ್ಯವಸ್ಥೆ ಜಾರಿಯಲ್ಲಿದ್ದು, ಇಸಿಜಿ ಮಾಡಿದ ನಂತರ ಹೃದಯತಜ್ಞರ ಸಲಹೆ ಮೇರೆಗೆ ತುರ್ತಾಗಿ ಚಿಕಿತ್ಸೆ ಅವಶ್ಯವಿದ್ದವರಿಗೆ ಮೇಲ್ಮಟ್ಟದ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈ ಯೋಜನೆಯಡಿ 2024ರ ಮಾರ್ಚ್‌ ನಿಂದ ಜೂನ್-2025ರವರೆಗೆ ಒಟ್ಟು 6681 ಇಸಿಜಿ ಮಾಡಲಾಗಿದೆ. ಇದರಲ್ಲಿ 3491 ನಾರ್ಮಲ್ ಇದ್ದು, 48 ಹೃದಯ ಸಂಬಂಧಿ ಕಾಯಿಲೆ ಇದ್ದವರಿಗೆ ಹೆಚ್ಚಿನ ಚಿಕಿತ್ಸೆ ನೀಡಿ 35 ಜನರ ಜೀವವನ್ನು ಉಳಿಸಲಾಗಿದೆ. ಕಳೆದ 3 ತಿಂಗಳಲ್ಲಿ ಕಾರ್ಡಿಯಾಕ್‌ನಿಂದ 78 ಜನರು ಮೃತಪಟ್ಟಿದ್ದು, ಶಿರಹಟ್ಟಿ ತಾಲೂಕಿನಲ್ಲಿ 4 ಮತ್ತು ಲಕ್ಷ್ಮೇಶ್ವರ ತಾಲೂಕಿನಲ್ಲಿ 2 ಹೃದಯಾಘಾತದಿಂದ ಸಾವನ್ನಪಿರುವುದಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೆಚ್ಚುತ್ತಿರುವ ಹೃದಯಾಘಾತಕ್ಕೆ ಮತ್ತು ಹೃದಯ ಸಂಬಂಧಿತ ಕಾಯಿಲೆಗಳಿಗೆ ಆಧುನಿಕ ಜೀವನಶೈಲಿಯೇ ಪ್ರಮುಖ ಕಾರಣವಾಗಿದೆ ಎಂದು ಹೃದಯತಜ್ಞರ ಅಭಿಪ್ರಾಯವಾಗಿದೆ. ಅಲ್ಲದೆ, ಪರಿಸರ ಮಾಲಿನ್ಯದಿಂದ ಕಲುಷಿತ ಆಹಾರ, ವಂಶವಾಹಿ, ಅತಿಯಾದ ಧೂಮಪಾನ-ಮದ್ಯಪಾನ ಸಹ ಹೃದಯಾಘಾತಕ್ಕೆ ಪ್ರಮುಖ ಕಾರಣವಾಗುತ್ತಿವೆ.

ಜಿಲ್ಲೆಯಲ್ಲಿಯ ಹೃದಯ ಸಂಬಂಧಿ ಕಾಯಲೆಗಳಿಂದ ಬಳಲುತ್ತಿರುವವರು ದೂರದ ಬೆಂಗಳೂರು-ಬೆಳಗಾಂವಗಳ ಪ್ರತಿಷ್ಠಿತ ಆಸ್ಪತ್ರೆಗಳಿಗೆ ತೆರಳಬೇಕಿತ್ತು. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರ ಇಚ್ಛಾಶಕ್ತಿಯ ಪರಿಣಾಮ ಗದಗ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಆರಂಭವಾಗಿರುವ ಕ್ಯಾಥ್‌ಲ್ಯಾಬ್ ಹೃದಯ ರೋಗದಿಂದ ಬಳಲುತ್ತಿರುವ ಬಡ ಜನತೆಯ ಪಾಲಿಗೆ ವರವಾಗಿದೆ.

ತಾಲೂಕಾ ಆರೋಗ್ಯಾಧಿಕಾರಿ ಡಾ. ಸುಭಾಸ ದೈಗೊಂಡ ಪ್ರತಿಕ್ರಿಯಿಸಿ, ಗ್ರಾಮೀಣ ಭಾಗದಲ್ಲಿ ಬಿಎಚ್‌ಓಗಳ ಮೂಲಕ ಹೃದಯ ಸಂಬಂಧಿತ ಕಾಯಿಲೆಗಳ ಕುರಿತು ಮುನ್ನೆಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಆಧುನಿಕ ಆಹಾರ ಪದ್ಧತಿ, ಕೆಲಸದ ಒತ್ತಡ, ಧೂಮಪಾನ-ಮದ್ಯಪಾನದಿಂದ ದೂರವಿರಬೇಕು. ವರ್ಷಕ್ಕೆ 1 ಬಾರಿಯಾದರೂ ಹೃದಯ ಪರೀಕ್ಷೆ ಮಾಡಿಸಬೇಕೆಂದು ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಪ.ಪಂ ಸದಸ್ಯ ಮಂಜುನಾಥ ಘಂಟಿ, ಯುವಪೀಳಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿಲ್ಲ. ಇದರಿಂದ ಅಲ್ಲಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವುದು ಕೇಳಿ ಬರುತ್ತಿದ್ದು, ಜಂಕ್ ಫುಡ್ ಸೇವಿಸುವುದನ್ನು ಬಿಡಬೇಕು. ಹೃದಯ ಸಂಬಂಧಿ ಆರೋಗ್ಯದ ಕುರಿತು ಇಲಾಖೆಯು ಇನ್ನೂ ಹೆಚ್ಚಿನ ರೀತಿಯಲ್ಲಿ ಜನತೆಗೆ ಈ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಇಲಾಖೆಯ ಸಮೀಕ್ಷಣಾಧಿಕಾರಿ ಹಾಗೂ ಸ್ಟೆಮಿ ಜಿಲ್ಲಾ ನೋಡಲ್ ಅಧಿಕಾರಿ ಡಾ. ವೆಂಕಟೇಶ ರಾಠೋಡ, ಜಿಲ್ಲೆಯ ಉಪ ಕೇಂದ್ರಗಳ ಮಟ್ಟದಲ್ಲಿ ರಕ್ತದೊತ್ತಡ ಮತ್ತು ಮಧುಮೇಹ, ಬಾಯಿ, ಸ್ತನ, ಸರ್ವಿಕಲ್ ಕ್ಯಾನ್ಸರ್‌ಗಳ ಕುರಿತು ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಜಿಲ್ಲೆಯ ಶಿರಹಟ್ಟಿ-ನರಗುಂದ ತಾಲೂಕಾ ಆಸ್ಪತ್ರೆಗಳಲ್ಲಿ ಹೃದಯ ಜ್ಯೋತಿ ಕಾರ್ಯಕ್ರಮದಡಿ ಹೃದಯ ಸಂಬಂಧಿ ಕಾಯಿಲೆ ಇದ್ದವರಿಗೆ ತಪಾಸಣೆ ನಡೆಸಿ ಅಗತ್ಯವಿದ್ದವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಸಾರ್ವಜನಿಕರು ಆಧುನಿಕ ಜೀವನಶೈಲಿಯಿಂದ ದೂರವಿದ್ದು, ಆರೋಗ್ಯವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ ಎಂದರು.

ಉಭಯ ಶ್ರೀಗಳ ಕನಸು ಕಲ್ಲಯ್ಯಜ್ಜನವರಿಂದ ಸಾಕಾರ

ವಿಜಯಸಾಕ್ಷಿ ಸುದ್ದಿ, ಗದಗ: ಲಿಂ. ಪಂ. ಪಂಚಾಕ್ಷರಿ ಗವಾಯಿಗಳವರ ಹಾಗೂ ಲಿಂ. ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ಮಾರ್ಗದರ್ಶದಲ್ಲಿ ಪೂಜ್ಯಶ್ರೀ ಕಲ್ಲಯ್ಯಜ್ಜನವರು ವಿರೇಶ್ವರ ಪುಣ್ಯಾಶ್ರಮವನ್ನು ಮುನ್ನಡೆಸಿಕೊಂಡು ಹೋಗುತ್ತ ಉಭಯ ಗುರುಗಳ ಕನಸನ್ನು ಸಾಕಾರಗೊಳಿಸಿದ್ದಾರೆ ಎಂದು ಕಪೋತಗಿರಿ ನಂದಿವೇರಿ ಶ್ರೀಮಠದ ಪೂಜ್ಯಶ್ರೀ ಶಿವಕುಮಾರ ಶ್ರೀಗಳು ಹೇಳಿದರು.

ಅವರು ನಗರದ ವಿರೇಶ್ವರ ಪುಣ್ಯಾಶ್ರಮದಲ್ಲಿ ಪೂಜ್ಯಶ್ರೀ ಕಲ್ಲಯ್ಯಜ್ಜನವರ 55ನೇ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ತುಲಾಭಾರ ಸೇವೆ ನೆರವೇರಿಸಿ ಮಾತನಾಡಿದರು.

ಪೂಜ್ಯಶ್ರೀ ಕಲ್ಲಯ್ಯಜ್ಜನವರ ನೇತೃತ್ವದಲ್ಲಿ ಪುಣ್ಯಾಶ್ರಮವು ಉತ್ತರೋತ್ತರವಾಗಿ ಅಭಿವೃದ್ದಿಗೊಳ್ಳಲಿ. ಹಾನಗಲ್ ಶ್ರೀಗುರು ಕುಮಾರೇಶ್ವರರ, ಪಂ. ಪಂಚಾಕ್ಷರ ಗವಾಯಿಗಳವರ ಹಾಗೂ ಪಂ. ಪುಟ್ಟರಾಜ ಗವಾಯಿಗಳವರ ಶ್ರೀರಕ್ಷೆ ಕಲ್ಲಯ್ಯಜ್ಜನವರ ಮೇಲೆ ಸದಾ ಇರಲಿದೆ ಎಂದು ಶುಭ ಹಾರೈಸಿದರು.

ಲಿಂಗಸೂರಿನ ಮಾಣಿಕೇಶ್ವರಿ ಅಶ್ರಮದ ಪೂಜ್ಯಶ್ರೀ ಶಿವಶರಣೆ ನಂದೀಶ್ವರಿ ಅಮ್ಮನವರು ಪೂಜ್ಯಶ್ರೀ ಕಲ್ಲಯ್ಯಜ್ಜನವರ ತುಲಾಭಾರ ಸೇವೆಯನ್ನು ನೆರವೇರಿಸಿದರು. ಇದೇ ಸಂದರ್ಭದಲ್ಲಿ ನಂದಿಶ್ವರಿ ಅಮ್ಮನವರಿಗೆ `ನಡೆದಾಡುವ ನಕ್ಷತ್ರ’ ಎಂಬ ಬಿರುದು ನೀಡಿ ಶ್ರೀಮಠದಿಂದ ಗೌರವಿಸಲಾಯಿತು.

ವೇದಿಕೆ ಮೇಲೆ ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ-ಡಾವಣಗೆರೆ ಸೋಲ್‌ಟ್ರಸ್ಟ್ನ ಸದಸ್ಯರಾದ ಪಿ.ಎಫ್. ಕಟ್ಟಿಮನಿ, ಪಿ.ಸಿ. ಹಿರೇಮಠ, ಸಾರಿಗೆ ನಿಗಮದ ಉಪಾಧ್ಯಕ್ಷ ಪೀರಸಾಬ ಕೌತಾಳ, ಜೋಹರಾ ಕೌತಾಳ, ಜೇವರ್ಗಿಯ ನಾಡಗೌಡ ಅಪ್ಪಾಸಾಬ ಪಾಟೀಲ, ವೀರೇಶ್ವರ ಪುಣ್ಯಾಶ್ರಮದ ವ್ಯವಸ್ಥಾಪಕರಾದ ಹೇಮರಾಜಶಾಸ್ತ್ರಿ ಹಿರೇಮಠ ಹೆಡಿಗ್ಗೊಂಡ ಮುಂತಾದವರು ಉಪಸ್ಥಿತರಿದ್ದರು.

ಉಚಿತ ಮೋತಿಬಿಂದು ಶಸ್ತ್ರಚಿಕಿತ್ಸೆ

ವಿಜಯಸಾಕ್ಷಿ ಸುದ್ದಿ, ಗದಗ: ಹುಲಕೋಟಿಯ ಕೆ.ಎಚ್. ಪಾಟೀಲ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆ ಹಾಗೂ ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆ ಹುಬ್ಬಳ್ಳಿ ಇವರ ಸಹಯೋಗದಲ್ಲಿ, ಗದಗ ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗದಗ ಇವರ ಸಹಕಾರ ಹಾಗೂ ಎಚ್.ಕೆ. ಪಾಟೀಲ ಸೇವಾ ತಂಡದ ಸಹಾಯದಿಂದ ಒಟ್ಟು 21 ಜನ ಫಲಾನುಭವಿಗಳಿಗೆ ಉಚಿತವಾಗಿ ಕಣ್ಣಿನ ಪೊರೆಯ ಶಸ್ತ್ರ (ಮೋತಿ ಬಿಂದು) ಚಿಕಿತ್ಸೆಯನ್ನು ಹುಲಕೋಟಿಯ ಕೆ.ಎಚ್. ಪಾಟೀಲ ಆಸ್ಪತ್ರೆಯಲ್ಲಿ ನಡೆಸಲಾಯಿತು.

ಸಂಸ್ಥೆಯ ಚೇರಮನ್ ಡಾ. ಎಸ್.ಆರ್. ನಾಗನೂರ ಹಾಗೂ ಗೌರವ ಕಾರ್ಯದರ್ಶಿ ಡಾ. ವೇಮನ್ ಆರ್.ಸಾವಕಾರ ಶಿಬಿರದಲ್ಲಿ ಉಪಸ್ಥಿತರಿದ್ದು ಮಾರ್ಗದರ್ಶನ ಮಾಡಿದರು. ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯನ್ನು ಎಂ.ಎಂ. ಜೋಶಿ ಆಸ್ಪತ್ರೆಯ ಖ್ಯಾತ ವೈದ್ಯರು ನಡೆಸಿದರು. ಶಿಬಿರದಲ್ಲಿ ಕೆ.ಎಚ್. ಪಾಟೀಲ ಆಸ್ಪತ್ರೆಯ ಸಿಬ್ಬಂದಿ ಪಾಲ್ಗೊಂಡು ಸಹಾಯ ಸಹಕಾರ ನೀಡಿದರು.

ಅಂಜುಮನ್ ಸಂಸ್ಥೆಯ ಚುನಾವಣೆಗೆ ವಿಳಂಬ: ಖಂಡನೆ

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿಗೆ ನಡೆಯಬೇಕಾಗಿರುವ ಚುನಾವಣೆ ಪ್ರಕ್ರಿಯೆಯನ್ನು ಅನವಶ್ಯಕವಾಗಿ ವಿಳಂಬಗೊಳಿಸಲಾಗುತ್ತಿದೆ. ಶಿಕ್ಷಣ ಮತ್ತು ಸಮುದಾಯ ಸೇವೆಯಲ್ಲಿ ಅಪಾರ ಸೇವೆ ಸಲ್ಲಿಸುತ್ತಿರುವ ಇಂತಹ ಮಹತ್ವದ ಸಂಸ್ಥೆಯ ಆಡಳಿತಾತ್ಮಕ ಶಿಷ್ಟಾಚಾರಗಳನ್ನು ಹಾಗೂ ಬದ್ಧತೆಯನ್ನು ದಿಕ್ಕು ತಪ್ಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದನ್ನು ಎಸ್‌ಡಿಪಿಐ ಗದಗ ಜಿಲ್ಲಾಧ್ಯಕ್ಷ ಬಿಲಾಲ ಗೋಕಾವಿ ತೀವ್ರವಾಗಿ ಖಂಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಯಾವುದೇ ಸ್ಥಳೀಯ ರಾಜಕೀಯ ವ್ಯಕ್ತಿಗಳ ಅಥವಾ ರಾಜಕಾರಣಿಗಳ ಬಾಹ್ಯ ಒತ್ತಡಗಳ ಅಡಿಯಲ್ಲಿ ನಿರ್ಧಾರಗಳನ್ನು ಕೈಗೊಳ್ಳದೆ, ಸಂಪೂರ್ಣ ನ್ಯಾಯಸಮ್ಮತ, ಪಾರದರ್ಶಕ ಮತ್ತು ಸಮಯಬದ್ಧವಾಗಿ ಚುನಾವಣೆ ಪ್ರಕ್ರಿಯೆಯನ್ನು ನಡೆಸಬೇಕು.

ಸ್ಥಳೀಯ ಸಮುದಾಯದ ನಂಬಿಕೆ ಮತ್ತು ವಿಶ್ವಾಸ ಉಳಿಸಿಕೊಳ್ಳಬೇಕಾದದ್ದು ಸಂಬಂಧಿತ ಆಡಳಿತ ಮತ್ತು ಚುನಾವಣೆ ಅಧಿಕಾರಿಗಳ ನೈತಿಕ ಜವಾಬ್ದಾರಿಯಾಗಿದೆ. ಸಮುದಾಯದ ಭವಿಷ್ಯಕ್ಕೆ ರೂಪಕೊಡುವಂತಹ ಪಾರದರ್ಶಕ ಚುನಾವಣಾ ಪ್ರಕ್ರಿಯೆಗೆ ಶೀಘ್ರದಲ್ಲಿ ಚಾಲನೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಚಿಕ್ಕಮಗಳೂರು SP ಕಚೇರಿ ಎದುರು ವಿಷ ಸೇವಿಸಿದ ವ್ಯಕ್ತಿ: ಆಗಿದ್ದೇನು?

ಚಿಕ್ಕಮಗಳೂರು:- ವ್ಯಕ್ತಿಯೋರ್ವರು ಚಿಕ್ಕಮಗಳೂರು SP ಕಚೇರಿ ಎದುರೇ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿದ ಘಟನೆ ಜರುಗಿದೆ.

ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಆಲ್ದೂರು ಪಟ್ಟಣದ ಖಾಲಿದ್ ಹುಸೇನ್ ಎಂದು ಗುರುತಿಸಲಾಗಿದೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ಖಾಲಿದ್ ಹುಸೇನ್​ ಅವರನ್ನು ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆಲ್ದೂರು ಪೊಲೀಸ್​ ಠಾಣೆಯ ASI ಶಿವಕುಮಾರ್​ ಕಿರುಕುಳ ನೀಡಿದ್ದು, ಹೀಗಾಗಿ ನ್ಯಾಯ ಕೊಡಿಸುವಂತೆ ಈ ವ್ಯಕ್ತಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕಚೇರಿ ಎದುರೇ ವಿಷ ಸೇವಿಸಿದ್ದಾರೆ ಎಂದು ತಿಳಿದು ಬಂದಿದೆ.

ಮೆಟ್ರೋ ಪ್ರಯಾಣಿಕರೇ.. ಭಾನುವಾರ ಈ ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯ!

ಬೆಂಗಳೂರು:- ನಮ್ಮ ಮೆಟ್ರೋ ಕಾಮಗಾರಿ ಹಿನ್ನೆಲೆ ಭಾನುವಾರ ಅಂದ್ರೆ ಜುಲೈ 6 ರಂದು ನೇರಳೆ ಮಾರ್ಗದಲ್ಲಿ ರೈಲುಗಳ ಸಂಚಾರದಲ್ಲಿ ಕೊಂಚ ವ್ಯತ್ಯಯವಾಗಲಿದೆ. ಹೀಗಾಗಿ ಪ್ರಯಾಣಿಕರು ಸಹಕರಿಸುವಂತೆ BMRCL ಕೋರಿದೆ.

ಈ ಬಗ್ಗೆ ಬಿಎಂಆರ್​ ಸಿಎಲ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಮೆಟ್ರೋ ಕಾಮಗಾರಿ ಹಿನ್ನೆಲೆ, ಭಾನುವಾರ ಬೆಳಗ್ಗೆ 7 ರಿಂದ ಬೆಳಗ್ಗೆ 8ರ ವರೆಗೆ ಒಂದು ಗಂಟೆ ಕಾಲ ಇಂದಿರಾನಗರ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸಂಚಾರ ಇರುವುದಿಲ್ಲ.

ನೇರಳೆ ಮಾರ್ಗದಲ್ಲಿ ಜುಲೈ 06 ಭಾನುವಾರ ಬೆಳಿಗ್ಗೆ 7 ರಿಂದ 8ರವರೆಗೆ ಅಂದರೆ ಒಂದು ಗಂಟೆಯ ಅವಧಿಗೆ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣ ಟು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ನಡುವಿನ ಅಗತ್ಯ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲಿದೆ. ಹೀಗಾಗಿ ಬೆಳಗ್ಗೆ 7 ರಿಂದ 8ರವರೆಗೆ ಇಂದಿರಾನಗರ ಮತ್ತು ಬೈಯಪ್ಪನಹಳ್ಳಿ ಮಾರ್ಗದಲ್ಲಿ ಮೆಟ್ರೋ ಸಂಚಾರ ತಾತ್ಕಾಲಿಕ ಸ್ಥಗಿತವಾಗಲಿದ್ದು, ಬೆಳಿಗೆ 8 ರಿಂದ ಸಾಮಾನ್ಯ ರೈಲು ಸಂಚಾರ ಸೇವೆ ಎಂದಿನಂತೆ ಸಾಮಾನ್ಯವಾಗಿ ಪುನರಾರಂಭಿಸುತ್ತದೆ.

ಇತರೆ ಎಲ್ಲಾ ಮಾರ್ಗಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸಲಿದ್ದು, ಚಲ್ಲಘಟ್ಟದಿಂದ ಇಂದಿರಾನಗರ, ಬೈಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ (ಕಾಡುಗೋಡಿ), ಮಾದಾವರದಿಂದ ರೇಷ್ಮೆ ಸಂಸ್ಥೆ ವರೆಗಿನ ಸೇವೆಗಳು ಬೆಳಿಗ್ಗೆ 7 ಗಂಟೆಯಿಂದ ಮೆಟ್ರೋ ಸಂಚಾರವಿರಲಿದೆ ಎಂದು ಬಿಎಂಆರ್ ಸಿಎಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಈ ತಾತ್ಕಾಲಿಕ ತೊಂದರೆಗೆ ವಿಷಾದ ವ್ಯಕ್ತಪಡಿಸಿರುವ ಬಿಎಂಆರ್‌ಸಿಎಲ್, ಪ್ರಯಾಣಿಕರು ತಮ್ಮ ದಿನಚರಿ ಪ್ರವಾಸದ ಯೋಜನೆಯನ್ನು ಮುಂಚಿತವಾಗಿ ರೂಪಿಸಿಕೊಳ್ಳುವಂತೆ ವಿನಂತಿಸಿದೆ.

ಯುವಕರೂ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ

ವಿಜಯಸಾಕ್ಷಿ ಸುದ್ದಿ, ಗದಗ: ಯುವಕರನ್ನು ಆಧ್ಯಾತ್ಮಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸುವ ಮೂಲಕ ಅವರನ್ನು ಧರ್ಮದ ಸನ್ಮಾರ್ಗದಲ್ಲಿ ಮುನ್ನಡೆಯುವಂತೆ ಸನ್ನದ್ಧಗೊಳಿಸುವದು ಎಂದಿಗಿಂತ ಇಂದು ಅವಶ್ಯವಿದೆ ಎಂದು ಅಡ್ನೂರ ರಾಜೂರ ಗದಗ ಬೃಹನ್ಮಠದ ಪೂಜ್ಯ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ಅವರು ಗುರುವಾರ ನಗರದ ಗಾಣಿಗ ಭವನದಲ್ಲಿ ಗದಗ-ಬೆಟಗೇರಿ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಸಮಿತಿ ಶ್ರೀಮದ್ ಕಾಶೀ ನೂತನ ಜಗದ್ಗುರುಗಳವರ ಆಷಾಡ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.

ಯುವಕರೂ ಸಹ ಇಂತಹ ಇಷ್ಟಲಿಂಗ ಮಹಾಪೂಜೆ, ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಅಂದಾಗ ಅವರಲ್ಲಿ ಧರ್ಮ ಸಂಸ್ಕಾರ, ಆಧ್ಯಾತ್ಮಿಕ ಸಂಸ್ಕೃತಿ ತಿಳಿಯುವದು. ಆ ಮೂಲಕ ಅವರಲ್ಲಿ ಸದ್ಗುಣಗಳು ಬಂದು ಅವರು ಜೀವನಲ್ಲಿ ಸತ್ಪ್ರಜೆಗಳಾಗಿ ಬಾಳಲು ಪೂರಕವಾಗುವದು ಎಂದರು.

ಸಾನ್ನಿಧ್ಯ ವಹಿಸಿ ಮಾತನಾಡಿದ ಜಂಗಮವಾಡಿಮಠ ವಾರಣಾಸಿ ಕಾಶೀ ಮಹಾಪೀಠದ ಜ. ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು, ಸತ್ಯ, ನಿಷ್ಠೆ, ಪ್ರಾಮಾಣಿಕತೆಯುಳ್ಳವರು ಜೀವನದಲ್ಲಿ ಯಶಸ್ಸನ್ನು ಸಾಧಿಸಬಲ್ಲರು. ಇವರಿಗೆ ಸಮಾಜದಲ್ಲಿ ಗೌರವ ಇದೆ ಎಂದರು.

ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜ್ಞಾನಾರ್ಜನೆಗೆ ಹಾಗೂ ಸತ್ಕಾರ್ಯಗಳಿಗೆ ಸದುಪಯೋಗ ಮಾಡಿಕೊಳ್ಳಬೇಕು. ಇಂದು ಮೊಬೈಲ್ ಬಂದು ಸುಳ್ಳು ಹೇಳುವದನ್ನು ಇನ್ನಷ್ಟು ಸುಗಮಗೊಳಿಸಿದೆ. ಆದರೆ ಸುಳ್ಳು ಸದಾವಕಾಲ ಫಲಿಸದು, ಅದರಿಂದ ಹಾನಿಯೇ ಹೆಚ್ಚು. ಆದ್ದರಿಂದ ಮನೆಯಲ್ಲಿ ಹಿರಿಯರು ಸತ್ಯವನ್ನು ಮಾತನಾಡುವ ಮೂಲಕ ಮಕ್ಕಳಿಗೂ ಅಂತಹ ಸಂಸ್ಕಾರವನ್ನು ರೂಢಿಸಬೇಕು ಎಂದರು.

ಭಕ್ತಿ ಸೇವೆ ವಹಿಸಿಕೊಂಡಿದ್ದ ಪ್ರಭುಸ್ವಾಮಿ ದಂಡಾವತಿಮಠ, ಸಿದ್ಧರಾಮೇಶ್ವರ ಬಾರಕೇರ, ಕೆ.ಎಸ್. ಕೋರಿಮಠ, ಶರಣಪ್ಪ ಕುರಡಗಿ, ಮಲ್ಲಿಕಾರ್ಜುನ ಸುರಕೋಡ, ಶಿವಯೋಗಿ ತೆಗ್ಗಿನಮಠ, ಪ್ರಶಾಂತ ತಂಬ್ರಳ್ಳಿಮಠ, ಚನ್ನಬಸವರಾಜ ಹಿರೇಮಠ, ಪ್ರವೀಣ ಚನ್ನಳ್ಳಿಮಠ, ಫಕ್ಕೀರಯ್ಯಶಾಸ್ತ್ರಿ ಹಿರೇಮಠ, ರೋಹಿತ ಅಬ್ಬಿಗೇರಿ, ಆಂಜನೇಯ ಕಟಗಿ, ರಾಜಶೇಖರ ಮುಧೋಳ ದಂಪತಿಗಳನ್ನು ಪೂಜ್ಯರು ಸನ್ಮಾನಿಸಿ ಗೌರವಿಸಿದರು.

ಮಂಗಳಾ ಯಾನಮಶೆಟ್ಟಿ ಪ್ರಾರ್ಥಿಸಿದರು. ಗದಗ ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಸ್ವಾಗತಿಸಿದರು. ಸಮಿತಿಯ ಕಾರ್ಯಾಧ್ಯಕ್ಷ ವ್ಹಿ.ಕೆ. ಗುರುಮಠ ನಿರೂಪಿಸಿ ವಂದಿಸಿದರು.

ನರೇಗಲ್ ಹಿರೇಮಠದ ಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಶ್ರೀ ಸಿದ್ಧಾಂತ ಶಿಖಾಮಣಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಭಯ ದುರ್ಗುಣಗಳ ಸೇನಾಧಿಪತಿಯಾಗಿದ್ದು, ಸತ್ಯ ಮತ್ತು ಪ್ರಾಮಾಣಿಕತೆಯಿಂದ ಜೀವನ ಮಾಡುವವರು ಯಾವುದಕ್ಕೂ ಭಯಪಡುವ ಅಗತ್ಯವಿಲ್ಲ. ಸತ್ಯ ಪರಿಪಾಲನೆಯ ಅಗತ್ಯವಿದೆ. ಸತ್ಯದಿಂದ ನಡೆಯುವದೂ ಸಹ ಒಂದು ತಪಸ್ಸು ಇದ್ದಂತೆ ಎಂದರು.

ಬಿಎಲ್‌ಓ ಕೆಲಸದಿಂದ ಬಿಡುಗಡೆಗೊಳಿಸಲು ಮನವಿ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಅಂಗನವಾಡಿ ಕಾರ್ಯಕರ್ತೆಯರು ತಮ್ಮನ್ನು ಬಿಎಲ್‌ಓ ಕೆಲಸದಿಂದ ಬಿಡುಗಡೆಗೊಳಿಸುವಂತೆ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಎ.ಎನ್. ನಾಯಕ, ಉಪಾಧ್ಯಕ್ಷೆ ವ್ಹಿ.ಬಿ. ಗದಗ, ಶಿರಹಟ್ಟಿ-ಲಕ್ಷ್ಮೇಶ್ವರ ತಾಲೂಕುಗಳಲ್ಲಿಯ ಅಂಗನವಾಡಿ ಕಾರ್ಯಕರ್ತೆಯರನ್ನು ಬಿಎಲ್‌ಓ ಕೆಲಸದಿಂದ ಬಿಡುಗಡೆ ಮಾಡಲು ಹಲವಾರು ಬಾರಿ ವಿನಂತಿಸಿದ್ದರೂ ಕ್ರಮವಹಿಸಿಲ್ಲ. ನಮ್ಮ ಇಲಾಖೆಯ ಹೆಚ್ಚಿನ ಕೆಲಸಗಳನ್ನು ಮೊಬೈಲ್ ಮೂಲಕವೇ ಮಾಡುತ್ತಿರುವದರಿಂದ ನಮಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ನಮ್ಮನ್ನು ಬಿಎಲ್‌ಓ ಕೆಲಸದಿಂದ ಬಿಡುಗಡೆ ಮಾಡಬೇಕೆಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಎಸ್.ಸಿ. ಕಿತ್ತೂರ, ಎಂ.ಎ. ಕಾಂಬಳೆ, ಎಂ.ಎಸ್. ಕಾಳಿ, ಆರ್.ಬಿ. ಮಣ್ಣೂರ, ಎಸ್.ಬಿ. ಬಣಗಾರ, ಎಸ್.ಬಿ. ಪಲ್ಲೇದ, ಎಸ್.ಎಸ್. ಮಣ್ಣೂರ, ಆರ್.ಎಸ್. ವಡವಿ, ಜಿ.ಡಿ. ಪತ್ರದ, ಕೆ.ಎನ್. ಬಡಿಗೇರ, ಎಸ್.ಎಫ್. ಮೊರಬದ, ಎಂ.ಎಚ್. ಹರಿಜನ, ಪಿ.ಎಂ. ಹೊಸಮನಿ, ಜಯಲಕ್ಷ್ಮೀ ಥೋರಾತ, ವಿನೋದಾ ಭಾವನೂರ, ಸುಧಾ ಹೇಮಗಿರಿಮಠ, ಎಂ.ಆರ್. ವಾರದ, ಸ್ನೇಹಾ ಅಂದಾನಪ್ಪನವರ, ಜೆ.ಸಿ. ತೋಟದ, ಜಿ.ಪಿ. ಕೆಂಪಣ್ಣನವರ, ಡಿ.ಕೆ. ಸನದಿ, ಎಸ್.ಎಸ್. ಚಿಲಕವಾಡ ಮುಂತಾದವರು ಉಪಸ್ಥಿತರಿದ್ದರು.

ಡಾ. ಬಳ್ಳಾರಿ ಅಮ್ಮ ಫೌಂಡೇಷನ್ ಬೆನ್ನೆಲುಬು

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಗದಗ ಘಟಕದ ಜಿಲ್ಲಾಧ್ಯಕ್ಷರಾಗಿ ರವಿ ಎಲ್. ಗುಂಜಿಕರ ಸತತ ಮೂರು ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಅವರ ಸೇವಾ ನಿವೃತ್ತಿಯಿಂದ ತೆರವಾಗಿದ್ದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಗುರುವಾರ ಸರಕಾರಿ ನೌಕರರ ಭವನದಲ್ಲಿ ಚುನಾವಣೆ ನಡೆದು, ಡಾ. ಬಸವರಾಜ ಬಳ್ಳಾರಿ 55 ಮತಗಳನ್ನು ಪಡೆಯುವ ಮೂಲಕ ವಿಜಯಶಾಲಿಯಾಗಿರುವುದಕ್ಕೆ ಬೆಂಗಳೂರಿನ ಅಮ್ಮ ಫೌಂಡೇಷನ್ ಅದ್ಯಕ್ಷರು ಹಾಗೂ ಸದಸ್ಯರು ಹರ್ಷ ವ್ಯಕ್ತಪಡಿಸಿದರು.

ಡಾ. ಬಸವರಾಜ ಬಳ್ಳಾರಿ ಅವರು ಮೊದಲು ವಸತಿ ನಿಲಯದ ನಿಲಯಪಾಲಕರಾಗಿ ಕಾರ್ಯ ನಿರ್ವಹಿಸಿ, ಸದ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಗದಗ ತಾಲೂಕು ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ಅಮ್ಮ ಫೌಂಡೇಷನ್ ಮಾರ್ಗದರ್ಶಕರೂ ಆಗಿ ಫೌಂಡೇಷನ್ ವತಿಯಿಂದ ಹಲವಾರು ಸಾಮಾಜಿಕ, ಶೈಕ್ಷಣಿಕ ಕಾರ್ಯಗಳನ್ನು ಮಾಡುವುದಕ್ಕೆ ಮಾರ್ಗದರ್ಶನ ನೀಡುತ್ತ ನಮ್ಮ ಬೆನ್ನೆಲುಬಾಗಿ ನಿಂತಿದ್ದಾರೆ ಎಂದರು.

ಅಮ್ಮ ಫೌಂಡೇಷನ್ ಅಧ್ಯಕ್ಷರು ಹಾಗೂ ವಕೀಲರಾದ ಮೈಲಾರಪ್ಪ ಡಿ.ಎಚ್ ಮಾತನಾಡಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳಾರಿ ಅವರು ನೌಕರರ ಕ್ಷೇಮಾಭಿವೃದ್ಧಿ ಜೊತೆಗೆ ಜನಸಾಮಾನ್ಯರ ಸಮಸ್ಯೆಗಳಿಗೆ ತಮ್ಮ ಹಂತದಲ್ಲಿ ಶ್ರಮಿಸಿ ಮಾದರಿ ಅಧ್ಯಕ್ಷರಾಗುವಲ್ಲಿ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯದರ್ಶಿ ವಿಶ್ವನಾಥ ದಲಾಲಿ ಮಾತನಾಡಿ, ನಮ್ಮ ಅಮ್ಮ ಫೌಂಡೇಷನ್ ವತಿಯಿಂದ ಬಡ ಮಕ್ಕಳಿಗಾಗಿ ಪುಸ್ತಕಗಳು, ಅವಶ್ಯ ಸಾಮಗ್ರಿಗಳನ್ನು ಒದಗಿಸುವುದು, ಆರೋಗ್ಯ ಶಿಬಿರ, ಪರಿಸರ ಸಂರಕ್ಷಣೆಯ ಕಾರ್ಯಕ್ಕೆ ಅಮ್ಮ ಫೌಂಡೇಷನ್ ಮಾರ್ಗದರ್ಶಕರಾದ ಬಳ್ಳಾರಿ ಅವರು ಸದಾ ಸಹಕಾರ ನೀಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಖಜಾಂಚಿ ಮಾರುತಿ ಜಿ.ಎಚ್, ಸಂಘಟನಾ ಕಾರ್ಯದರ್ಶಿ ಸುರೇಶ ಹಾಳಕೇರಿ, ಸಾಂಸ್ಕೃತಿಕ ಕಾರ್ಯದರ್ಶಿ ಪರಶುರಾಮ ತಳವಾರ, ಅಣ್ಣಪ್ಪ ಗುತ್ತೆಮ್ಮನವರ, ಕಿರಣ, ಶಿವು ದೊಡ್ಡಮನಿ ಇತರರು ಇದ್ದರು.


 

ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷದ ಬಲ ಹೆಚ್ಚಿಸಿ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಈ ದೇಶಕ್ಕೆ ಯುವಶಕ್ತಿಯ ಕೊಡುಗೆ ಅಪಾರವಾಗಿದೆ. ಅದರಂತೆ ಕಾಂಗ್ರೆಸ್ ಪಕ್ಷದಲ್ಲಿ ಯುವಕರಿಗೆ ಆದ್ಯತೆ ಇಲ್ಲ ಎನ್ನುವ ವಿರೋಧ ಪಕ್ಷಗಳ ಟೀಕೆಗೆ ಕಾಂಗ್ರೆಸ್‌ನಲ್ಲಿ ಯುವಕರಿಗೆ ಸದಾ ಹೆಚ್ಚು ಆದ್ಯತೆ ನೀಡುವ ಮೂಲಕ ಉತ್ತರ ಕೊಡುತ್ತಿದೆ. ಯುವ ಶಕ್ತಿ ಇತ್ತೀಚೆಗೆ ಕಾಂಗ್ರೆಸ್ ಕಡೆಗೆ ಹೆಚ್ಚು ವಾಲುತ್ತಿದ್ದಾರೆ ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ಕೃಷ್ಣಗೌಡ ಎಚ್.ಪಾಟೀಲ ಅಭಿಪ್ರಾಯಪಟ್ಟರು.

ಅವರು ಶುಕ್ರವಾರ ಪಟ್ಟಣದ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಅವರ ನಿವಾಸದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಜುಲೈ 12ರಂದು ನಡೆಯುವ ಚುನಾಯಿತ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಯುವ ಶಕ್ತಿಯನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಗದುಗಿನಲ್ಲಿ ನಡೆಯುವ ಪದಗ್ರಹಣ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮೂಹ ಭಾಗವಹಿಸಬೇಕು. ಜಿಲ್ಲೆಯಲ್ಲಿ ಪಕ್ಷದ ಹಿರಿಯರ ಮಾರ್ಗದರ್ಶನಲ್ಲಿ ಯುವಕರು ಪಕ್ಷದ ಬಲ ಹೆಚ್ಚಿಸಬೇಕು. ಜು.12ರಂದು ಗದುಗಿನ ಸ್ವಾಮಿ ವಿವೇಕಾನಂದ ಸಭಾ ಭವನದಲ್ಲಿ ನಡೆಯುವ `ಯುವ ಧ್ವನಿ’ ಕಾರ್ಯಕ್ರಮಕ್ಕೆ ಸಹಸ್ರ ಸಂಖ್ಯೆಯಲ್ಲಿ ಕಾರ್ಯಕರ್ತರು ಬಂದು ಯಶಸ್ವಿಗೊಳಿಸಬೇಕು. ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್, ಸಚಿವ ಪ್ರಿಯಾಂಕ ಖರ್ಗೆ, ಜಿಲ್ಲಾಧ್ಯಕ್ಷ ಜಿ.ಎಸ್. ಪಾಟೀಲ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರು ಪದಾಧಿಕಾರಿಗಳು, ಪಕ್ಷದ ಶಾಸಕರು, ಮಾಜಿ ಶಾಸಕರು, ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಪ್ರ.ಕಾರ್ಯದರ್ಶಿ ಅಕ್ಷಯ ಪಾಟೀಲ, ಉದಯಗೌಡ ವೀರನಗೌಡ, ಹಜರೇಸಾಬ ನದಾಫ್, ಲೊಕೇಶ ದೊಡ್ಡಮನಿ, ತಾಲೂಕಾ ಅಧ್ಯಕ್ಷ ರಾಹುಲ್ ಹೊಳಲಾಪುರ, ನಗರ ಅಧ್ಯಕ್ಷ ಅಮರೇಶ ತೆಂಬದಮನಿ, ಜಯಮ್ಮ ಕಳ್ಳಿ, ರಾಜರತ್ನ ಹುಲಗೂರ, ಕಿರಣ ನವಲೆ, ಮಹಾಂತೇಶ ಗುಡಿಸಲಮನಿ, ಪ್ರಕಾಶ ಕೊಂಚಿಗೇರಿಮಠ, ವಾಸಿಂ ಮುಚ್ಚಾಲೆ, ನೀಲಪ್ಪ ಶೇರಸೂರಿ, ದಾದಾಪೀರ ಟಕ್ಕೇದ, ಯಲ್ಲಪ್ಪ ಹಂಜಗಿ, ರಾಜು ಓಲೆಕಾರ, ಶಿದ್ದು ದುರಗಣ್ಣವರ, ಸರ್ಫರಾಜ ಸೂರಣಗಿ, ಮಹಾದೇವ ಹಾದಿಮನಿ, ಬಸವರಾಜ ಬೆಟಗೇರಿ, ರಾಜು ಓಲೇಕಾರ, ರಾಜು ಬೆಂಚಳ್ಳಿ, ಬಾಬು ಅಳವಂಡಿ ಸೇರಿದಂತೆ ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು ಇದ್ದರು.

ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿ, ಪಕ್ಷಕ್ಕೆ ಯುವ ಶಕ್ತಿ ಆನೆಬಲ ಇದ್ದಂತೆ. ಪಕ್ಷವನ್ನು ಹಿರಿಯರು ಕಟ್ಟಿ ಬೆಳೆಸಿದ್ದರೆ, ಅದನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಹೋಗುವ ಶಕ್ತಿ ಯುವಕರಿಗಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಯುವ ಕಾಂಗ್ರೆಸ್ ಸಮಾವೇಶ ರಾಜ್ಯಕ್ಕೆ ಒಂದು ಸಂದೇಶವನ್ನು ನೀಡಲಿದೆ. ಅದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದರು.

error: Content is protected !!