Home Blog Page 9

ಬೆಳಗಾವಿ: ಶಾರ್ಟ್ ಸರ್ಕ್ಯೂಟ್ ನಿಂದ ರಸ್ತೆ ಮಧ್ಯೆ ಹೊತ್ತಿ ಉರಿದ ಕಾರು!

ಬೆಳಗಾವಿ:- ಬೆಳಗಾವಿ ನಗರ ಕೇಂದ್ರ ಬಸ್ ನಿಲ್ದಾಣ ಬಳಿ ಕಾರೊಂದು ಹೊತ್ತಿ ಉರಿದ ಘಟನೆ ಜರುಗಿದೆ.

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿರುವ ಶಂಕೆ ವ್ಯಕ್ತವಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ. ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತ ತಪ್ಪಿದೆ.

ಬೆಂಕಿ ಅವಘಡಕ್ಕೆ ಒಳಗಾದ ಕಾರು ವಿನಯ ನೂಲಿ ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ. ಕಾರು ಸ್ಟಾಪ್ ಮಾಡಿ ಕೆಳಗಡೆ ಇಳಿಯುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಅವಘಡದಿಂದ ವಾಹನ ಸಂಪೂರ್ಣ ಸುಟ್ಟು ಕರಕಲಾಗಿದೆ.

ಸ್ಥಳಕ್ಕೆ ಮಾರ್ಕೆಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಬೆಳಗಾವಿ ಮಾರ್ಕೆಟ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಧಾರಾಕಾರ ಮಳೆ: ಇಂದು ಕೂಡ ಈ ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ!

ಬೆಂಗಳೂರು:- ಮುಂದಿನ ಎರಡು ದಿನಗಳು ರಾಜ್ಯದಾದ್ಯಂತ ಧಾರಕಾರ ಮಳೆ ಆಗುವ ಹಿನ್ನೆಲೆ ಮುಂಜಾಗ್ರತ ಕ್ರಮವಾಗಿ ಇಂದು ಕೂಡ ಕೆಲ ಜಿಲ್ಲೆಗಳ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಚಿಕ್ಕಮಗಳೂರು, ಕಳಸ, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕಿನಲ್ಲಿ ಅಂಗನವಾಡಿಗಳಿಗೆ ಇವತ್ತು ರಜೆ ಘೋಷಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್​ರಿಂದ ಆದೇಶ ಹೊರಡಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ಹಲವೆಡೆ ಕೂಡ ಮಳೆ ಆರ್ಭಟ ಮುಂದುವರೆದಿದ್ದು, ಮುಂಜಾಗ್ರತಾ ಕ್ರಮವಾಗಿ ಸಾಗರ, ಹೊಸನಗರ ತಾಲೂಕಿನ ಶಾಲಾ, ಕಾಲೇಜುಗಳಿಗೆ ಆಯಾ ತಾಲೂಕಿನ ತಹಶೀಲ್ದಾರ್​ ರಜೆ ಘೋಷಿಸಿದ್ದಾರೆ.

ಇನ್ನೂ ಕರ್ನಾಟಕದಲ್ಲಿ ಉತ್ತಮ ಮಳೆಯಾಗುತ್ತಿದೆ. ಪರಿಣಾಮ ಹಲವು ಅಣೆಕಟ್ಟೆಗಳು ವಾಡಿಕೆ ಅವಧಿಗಿಂತ ಮೊದಲೇ ಭರ್ತಿಯಾಗಿವೆ. ನದಿಗಳು ಮೈದುಂಬಿ ಹರಿಯುತ್ತಿವೆ. ಜುಲೈ 10ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಾಡೆಲ್ ಗೆ ಹಿಗ್ಗಾಮುಗ್ಗಾ ಥಳಿಸಿದ ಬಸ್ ಸಿಬ್ಬಂದಿ: ಕ್ಷುಲ್ಲಕ ವಿಚಾರಕ್ಕೆ ನಡೀತು ಮಾರಾಮಾರಿ!

ಬೆಂಗಳೂರು:- ಕ್ಷುಲ್ಲಕ ವಿಚಾರಕ್ಕೆ ಮಾಡೆಲ್ ಗೆ ಬಸ್ ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ.

ಧ್ರುವ್ ನಾಯ್ಕ್ ಹಲ್ಲೆಗೊಳಗಾದ ಮಾಡೆಲ್. ಮಾಡೆಲ್ ಆಗಿರುವ ಧ್ರುವ್ ನಾಯ್ಕ್, ಥಾಯ್ ಲ್ಯಾಂಡ್​ಗೆ ಹೋಗಿ ಜುಲೈ 1 ರಂದು ಬೆಳಗ್ಗೆ ಬೆಂಗಳೂರಿಗೆ ಬಂದಿದ್ದರು. ಹೀಗೆ ಬಂದವರು ಖಾಸಗಿ ಹೋಟೆಲ್​ನಲ್ಲಿ‌‌ ಉಳಿದುಕೊಂಡಿದ್ದು, ರಾತ್ರಿ 11.30ಕ್ಕೆ ಬೆಂಗಳೂರಿನಿಂದ ತಮ್ಮೂರು ಹುಬ್ಬಳ್ಳಿಗೆ ಹೋಗಲು ಸೀ ಬರ್ಡ್ ಬಸ್ ಬುಕ್ ಮಾಡಿದ್ದಾರೆ. ರಾತ್ರಿ ಬಸ್ ಏರಲು ಬಂದವರು ನರಕ ಕಾಣುವಂತಾಗಿದೆ.

ರಾತ್ರಿ 1 ಗಂಟೆಗೆ ತನ್ನ ಸ್ನೇಹಿತರ ಜೊತೆಗೆ ಊರಿಗೆ ತೆರಳಲು ಆನಂದ್ ರಾವ್ ಸರ್ಕಲ್ ಬಳಿಗೆ ಧ್ರುವ್ ನಾಯ್ಕ್ ಬಂದಿದ್ದರು. ಹೀಗೆ ಬಂದವರು ಓರ್ವ ಸ್ನೇಹಿತನ ಜೊತೆಗೆ ಕೆಳ ನಿಂತು ಸಿಗರೇಟ್ ಸೇದುತ್ತಿದ್ದರು. ಈ ವೇಳೆ ಬಸ್ ಬಾಗಿಲು ಬಂದ್ ಮಾಡಿದ ಚಾಲಕ ಬಸ್ ನಿಧಾನವಾಗಿ ಮೂವ್ ಮಾಡಿದ್ದ, ಈ ವೇಳೆ ಧ್ರುವ ಕೈ ಅಡ್ಡಗಟ್ಟಿ ನಾನು ಬರೋದಿದೆ ಬಸ್ ನಿಲ್ಲಿಸಿ ಎಂದಿದ್ದಾರೆ. ಈ ವೇಳೆ ಸೀ ಬರ್ಡ್ ಸಿಬ್ಬಂದಿ ಮತ್ತು ಧ್ರುವ ನಾಯ್ಕ್ ಮಧ್ಯೆ ಗಲಾಟೆ ಉಂಟಾಗಿದೆ.

ಇದೇ ವೇಳೆ ಸಿಬ್ಬಂದಿಗಳೆಲ್ಲಾ ಸೇರಿ ಧ್ರುವ್ ನಾಯ್ಕ್ ಮೇಲೆ ಹಲ್ಲೆ ಮಾಡಿದ್ದಾರೆ. ಮುಖ, ಕತ್ತು, ಎದೆ, ಭಾಗಕ್ಕೆ ಪರಚಿದ ಗುರುತಾಗಿದ್ದು, ಬೆನ್ನು ಮತ್ತು ಭುಜದ ಮೇಲೆ ಬಾಸುಂಡೆ ಬರುವಂತೆ ಥಳಿಸಿದ್ದಾರೆ.‌ ಇದೇ ವೇಳೆ ದುಬಾರಿ ಬೆಲೆಯ ಶೂ, ಏರ್ ಬರ್ಡ್ಸ್, 44 ಸಾವಿರ ರೂ ಬೆಲೆ ಸನ್ ಗ್ಲಾಸ್, 1.85 ಲಕ್ಷ ರೂ ಬೆಲೆಯ ಪ್ಲಾಟಿನಂ ಪೆಂಡೆಂಟ್ ಇರುವ ಸಿಲ್ವರ್ ಚೈನ್, ಪಾಸ್ ಪೋರ್ಟ್, 45 ಸಾವಿರ ರೂ ಬೆಲೆಯ ವಾಚ್, 40 ಸಾವಿರ ರೂ ಮೌಲ್ಯದ ಪ್ಲಾಟಿನಂ ರಿಂಗ್ ಸೇರಿದಂತೆ ಪರ್ಸ್​ನಲ್ಲಿದ್ದ 10 ಸಾವಿರ ರೂ ಹಣ ಕದ್ದಿರುವುದಾಗಿ ಧ್ರುವ್ ನಾಯ್ಕ್ ಆರೋಪಿಸಿದ್ದಾರೆ.

ಘಟನೆ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆದರೆ ಪೊಲೀಸರು ಮಾತ್ರ ತನಿಖೆ ಆರಂಭಿಸದೇ, ಸಿಸಿಟಿವಿ ಪರಿಶೀಲನೆ ಕೂಡ ನಡೆಸದೇ ಬೇಜವಾಬ್ದಾರಿ ತೋರಿದ್ದಾರೆ‌‌‌ ಎಂದು ಧ್ರುವ್ ನಾಯ್ಕ್ ಪರ ವಕೀಲರು ಆರೋಪಿಸಿದ್ದು, ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.

ಹೆದ್ದಾರಿಯಲ್ಲಿ ಲಾರಿ ಪಲ್ಟಿ: 15 ಲಕ್ಷ ಮೌಲ್ಯದ ಟೊಮೆಟೊ ನಜ್ಜುಗುಜ್ಜು!

ಬೆಂಗಳೂರು ಗ್ರಾಮಾಂತರ:- ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಸಮೀಪ ಟೊಮೆಟೊ ತುಂಬಿಕೊಂಡು ತೆರಳುತ್ತಿದ್ದ ಲಾರಿ ಪಲ್ಟಿ ಹೊಡೆದಿರುವ ಘಟನೆ ಜರುಗಿದೆ.

ಘಟನೆಯಲ್ಲಿ ಲಕ್ಷಾಂತರ ಮೌಲ್ಯದ ಟೊಮೆಟೊ ಸಂಪೂರ್ಣ ನಾಶವಾಗಿದೆ. ಮತ್ತೊಂದು ವಾಹನಕ್ಕೆ ಸೈಡ್ ಕೊಡಲು ಹೋಗಿ ಟೊಮೆಟೊ ಲಾರಿ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಕೋಲಾರದ ಟೊಮೆಟೊ ಮಾರ್ಕೆಟ್ ನಿಂದ 24 ಟನ್ ಟೊಮೆಟೊ ತುಂಬಿಕೊಂಡು ಗುಜರಾತ್ ಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಘಟನೆಯಲ್ಲಿ ಸುಮಾರು 15 ಲಕ್ಷ ಮೌಲ್ಯದ ಟೊಮೆಟೊ ಸಂಪೂರ್ಣ ನಜ್ಜು ಗುಜ್ಜಾಗಿ‌ ನಾಶವಾಗಿದೆ. ಲಾರಿ ಪಲ್ಟಿ‌ಹೊಡೆದ ಪರಿಣಾಮ ಲಾರಿ ಚಾಲಕ ಹಾಗೂ‌ ಕ್ಲಿನರ್ ಗೆ ಗಾಯವಾಗಿದ್ದು, ದೊಡ್ಡಬಳ್ಳಾಪುರ ಸರ್ಕಾರಿ‌ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳರ ಕೈಚಳಕ: ರಾತ್ರೋ ರಾತ್ರಿ ಫಸಲಿಗೆ ಬಂದಿದ್ದ 7.50 ಲಕ್ಷ ಮೌಲ್ಯದ ದಾಳಿಂಬೆ ಕದ್ದೊಯ್ದ ಖದೀಮರು!

ದಾವಣಗೆರೆ:- ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಜಮೀನೊಂದರಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಫಸಲಿಗೆ ಬಂದಿದ್ದ 7.50 ಲಕ್ಷ ರೂ. ಮೌಲ್ಯದ ದಾಳಿಂಬೆಯನ್ನು ರಾತ್ರೋ ರಾತ್ರಿ ಖದೀಮರು ಕಳ್ಳತನ ಮಾಡಿರುವ ಘಟನೆ ಜರುಗಿದೆ.

ರವಿಕುಮಾರ್ ಎಂಬ ರೈತನಿಗೆ ಸೇರಿದ್ದ ಜಮೀನಿನಲ್ಲಿ ಕಳ್ಳರು ಈ ಕೃತ್ಯ ಎಸಗಿದ್ದಾರೆ. 10 ಲಕ್ಷ ರೂ. ಬಂಡವಾಳ ಹೂಡಿ, ಎರಡು ಎಕರೆ ಭೂಮಿಯಲ್ಲಿ ದಾಳಿಂಬೆ ಬೆಳೆದಿದ್ದರು. ಉತ್ತಮ ಫಸಲು ಬಂದಿದ್ದು, ಇನ್ನೆರಡು ದಿನದಲ್ಲಿ ಕಟಾವು ಮಾಡಬೇಕಿತ್ತು. ಆದರೆ ರಾತ್ರೋರಾತ್ರಿ ಜಮೀನಿಗೆ ನುಗ್ಗಿದ ಕಳ್ಳರು 7.50 ಲಕ್ಷ ರೂ. ಮೌಲ್ಯದ ದಾಳಿಂಬೆ ಕಳವು ಮಾಡಿದ್ದಾರೆ.

ಮಾರನೇ ದಿನ ಜಮೀನಿಗೆ ಹೋದ ರೈತನಿಗೆ ದಾಳಿಂಬೆ ಕಳ್ಳತನ ವಿಷಯ ತಿಳಿದು ಸಿಡಿಲು ಬಡಿದಂತಾಗಿದೆ. ಸದ್ಯ ರೈತ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅನೈತಿಕ ಸಂಬಂಧದ ಶಂಕೆ: ಪತ್ನಿಯ ಜೀವ ತೆಗೆದ ಪಾಪಿ ಗಂಡ!

ಚೆನ್ನೈ:- ತನ್ನ ಪತ್ನಿ ಅನೈತಿಕ ಸಂಬಂಧ ಹೊಂದಿರಬಹುದು ಎಂದು ಶಂಕಿಸಿ ಗಂಡನೇ ಪತ್ನಿಯನ್ನು ಮುಗಿಸಿರುವ ಘಟನೆ ತಮಿಳುನಾಡಿನ ಅವಧಿ ಜಿಲ್ಲೆಯಲ್ಲಿ ಜರುಗಿದೆ.

ಗೋಮಿತಿ ಮೃತ ಹೆಂಡ್ತಿ. ಇವರು ವಿಸಿಕೆ ಪಕ್ಷದಿಂದ ಕೌನ್ಸಿಲರ್ ಆಗಿ ಸ್ಥಳೀಯ ಸಂಸ್ಥೆಗೆ ಆಯ್ಕೆಯಾಗಿದ್ದರು. ಗೋಮಿತಿ ಅವರು, ತಿರುನಿನರವೂರ್ ನಗರದ ಜಯರಾಮ ನಗರ ರಸ್ತೆಯಲ್ಲಿ ನಿಂತುಕೊಂಡು ಮತ್ತೊಬ್ಬ ವ್ಯಕ್ತಿಯ ಜೊತೆ ಮಾತನಾಡುತ್ತಿದ್ದರು. ಈ ವೇಳೆ ಪತಿ ಸ್ಟೀಫನ್ ರಾಜ್ ಅಲ್ಲಿಗೆ ಬಂದಿದ್ದಾರೆ. ಈ ವೇಳೆ ಗಂಡ- ಹೆಂಡತಿ ನಡುವೆ ಜಗಳ ಶುರುವಾಗಿ ವಿಕೋಪಕ್ಕೆ ಹೋಗಿದೆ. ತಕ್ಷಣವೇ ಪತಿ ಸ್ಟೀಫನ್ ರಾಜ್, ಚಾಕುವಿನಿಂದ ಗೋಮತಿ ಮೇಲೆ ದಾಳಿ ನಡೆಸಿದ್ದಾನೆ. ಕೆಳಕ್ಕೆ ಕುಸಿದು ಬಿದ್ದ ಗೋಮತಿ, ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ.

ಹೀಗೆ ಪತ್ನಿಯನ್ನು ಮುಗಿಸಿದ ಬಳಿಕ ಸ್ಟೀಫನ್ ರಾಜ್, ನೇರ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಪೊಲೀಸರು, ಆರೋಪಿ ಸ್ಟೀಫನ್ ರಾಜ್​​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಕೆ. ಲಮಾಣಿ ಅವರಿಗೆ ಸನ್ಮಾನ

ಗದಗ: ಕರ್ನಾಟಕ ರಾಜ್ಯ ಮಾಧ್ಯಮಿಕ ನೌಕರರ ಸಂಘದ ಗದಗ ಜಿಲ್ಲಾಧ್ಯಕ್ಷ ಹಾಗೂ ಶಿರಹಟ್ಟಿ ತಾಲೂಕಿನ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಕೆ. ಲಮಾಣಿ ಅವರನ್ನು ಹಿರಿಯ ರಾಜಕಾರಣಿ ಡಿ.ಆರ್. ಪಾಟೀಲ್ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಕೆ.ಎ. ಬಳಿಗೇರ, ಸುಧಾ ಹುಚ್ಚಣ್ಣನವರ್, ಹಿರಿಯ ಸಾಹಿತಿ ಜೆ.ಕೆ. ಜಮಾದಾರ್, ಜಿಲ್ಲಾ ಕಾರ್ಯದರ್ಶಿ ಬೂದಪ್ಪ ಅಂಗಡಿ ಮುಂತಾದವರಿದ್ದರು.

ಹಳಕಟ್ಟಿ, ಲಿಂಗಾನಂದರು ಎರಡು ನಕ್ಷತ್ರಗಳು

ವಿಜಯಸಾಕ್ಷಿ ಸುದ್ದಿ, ಗದಗ:  ಕಲ್ಯಾಣಕ್ರಾಂತಿಯಲ್ಲಿ ಶರಣರ ಕಗ್ಗೊಲೆ, ವಚನ ಸಾಹಿತ್ಯ ದಹಿಸುವಿಕೆ, ಎಳೆಹೂಟೆಯಂಥಹ ನಿರ್ದಯ ಕ್ರಮಗಳಿಂದ ಕಂಗೆಟ್ಟ ಶರಣರು ಚೆನ್ನಬಸವಣ್ಣನವರ ನೇತೃತ್ವದಲ್ಲಿ ಲಿಂಗಾಯತ ಧರ್ಮಗ್ರಂಥ ರಕ್ಷಣೆಗಾಗಿ ವಚನ ಕಟ್ಟುಗಳನ್ನು ಹೊತ್ತುಕೊಂಡು ಉಳವಿಯತ್ತ ನಡೆದರು. ಕಲ್ಯಾಣದ ಘಟನೆ ಲಿಂಗಾಯತ ಧರ್ಮಕ್ಕೆ ದೊಡ್ಡ ಹಿನ್ನಡೆ ನೀಡಿತು. ಮುಂದೆ 15ನೇ ಶತಮಾನದಲ್ಲಿ ಎಡೆಯೂರು ಸಿದ್ಧಲಿಂಗೇಶ್ವರ ಹಾಗೂ ಅವರ ಶಿಷ್ಯಂದಿರು ವಚನ ಸಾಹಿತ್ಯದ ಪುನಶ್ಚೇತನ ನಡೆಯಿತು. ಮುಂದಿನ 4 ಶತಮಾನಗಳ ನಂತರ ಫ.ಗು. ಹಳಕಟ್ಟಿ ಎಂಬ ಮಹಿಮರ ಮೂಲಕ ವಚನ ತಾಡೋಲೆಗಳ ರಕ್ಷಣೆ, ಅವುಗಳ ಪ್ರಕಟನೆ ನಡೆದು ವಚನ ಸಾಹಿತ್ಯ ರಕ್ಷಣೆಯಾಗುವಂತಾಯಿತೆಂದು ಶಿಕ್ಷಕರಾದ ಎಸ್.ಎಚ್. ಹಿರೇಸಕ್ಕರಗೌಡ್ರ ನುಡಿದರು.

ಅವರು ಬಸವದಳದ 1652ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ವಚನ ಸಂಶೋಧನೆಯ ಪಿತಾಮಹ ಡಾ. ಫ.ಗು. ಹಳಕಟ್ಟಿಯವರ 61ನೇ ಸ್ಮರಣೆ ಹಾಗೂ ಪೂ. ಲಿಂಗಾನಂದ ಸ್ವಾಮಿಗಳ 30ನೇ ಸ್ಮರಣೆ ಕಾರ್ಯಕ್ರಮದಲ್ಲಿ ಫ.ಗು. ಹಳಕಟ್ಟಿಯವರ ಜೀವನ ಚರಿತ್ರೆ ಕುರಿತು ಮಾತನಾಡಿದರು.

ಫಕೀರಪ್ಪನವರ ತಂದೆ ಗುರುಬಸಪ್ಪನವರು ಶಿಕ್ಷಕರಾಗಿದ್ದರು. ಜೊತೆಗೆ ಶರಣತತ್ವ ಚಿಂತಕರಾದ ಮಾವ ತಮ್ಮಣ್ಣಪ್ಪ ಚಿಕ್ಕೋಡಿಯವರ ಒಡನಾಟದ ಪರಿಣಾಮ ಶರಣ ಸಾಹಿತ್ಯದತ್ತ ಆಸಕ್ತಿ ಬೆಳೆಯಿತು. ವಿದ್ಯಾರ್ಥಿ ದೆಸೆಯಿಂದಲೂ ಪ್ರತಿಭಾವಂತರಾಗಿದ್ದ ಅವರು ಕಾನೂನು ಪದವಿ ಪಡೆದು ವಕೀಲ ವೃತ್ತಿ ಮಾಡಲಾರಂಭಿಸಿದರು. ಅದೇ ಸಂದರ್ಭದಲ್ಲಿ ಭಾಗೀರಥಿ ಜೊತೆ ವಿವಾಹವಾಯಿತು. ಶಿವಲಿಂಗಪ್ಪ ಮಂಚಾಲೆ ಇವರ ಮನೆಯಲ್ಲಿದ್ದ `ಪ್ರಭುದೇವರ ವಚನಗಳ’ ತಾಳೆಗರಿಯ ವಚನ ಕಟ್ಟುಗಳನ್ನು ಕಂಡು ಪ್ರಭಾವಿತರಾದರು. ಒಟ್ಟಾರೆಯಾಗಿ ಫ.ಗು. ಹಳಕಟ್ಟಿ ಹಾಗೂ ಲಿಂಗಾನಂದ ಮಹಾಸ್ವಾಮಿಗಳು ಲಿಂಗಾಯತ ಧರ್ಮದ ಎರಡು ನಕ್ಷತ್ರಗಳಾಗಿವೆ ಎಂದು ನುಡಿದರು.

ಮುಖ್ಯ ಅತಿಥಿಗಳಾಗಿ ನಿಶಿಕ್ಷಕಿ ವನಜಾಕ್ಷಿ ಕಪ್ಪರದ ಮಾತನಾಡಿ, ತಾವು ಕೂಡಾ ಲಿಂಗಾನAದ ಸ್ವಾಮಿಗಳ ಪ್ರವಚನದ ಪ್ರಭಾವಕ್ಕೆ ಒಳಗಾಗಿದ್ದೇನೆ. ಅವರು ಹೇಳುತ್ತಿದ್ದ ಧರ್ಮಗುರು ಬಸವಣ್ಣ, ಧರ್ಮಗ್ರಂಥ ವಚನ ಸಾಹಿತ್ಯ, ಧರ್ಮದೇವರು ಇಷ್ಟಲಿಂಗವೆಂಬುದನ್ನು ಪೂಜ್ಯರಿಂದ ಅರಿತಿದ್ದಾಗಿ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಬಸವದಳ ಅಧ್ಯಕ್ಷ ವಿ.ಕೆ. ಕರೇಗೌಡ್ರ ಮಾತನಾಡಿ, ನಮ್ಮ ಬಸವದಳ ಕಳೆದ ಮೂರು ದಶಕಗಳಿಂದಲೂ ಶರಣ ಸಾಹಿತ್ಯ ಪ್ರಸರಣ ಮಾಡುತ್ತಿದೆ. ಮನೆ, ಮನೆಗಳಿಗೂ ವಚನ ಸಾಹಿತ್ಯ ಮುಟ್ಟಿಸಲು ಕಟಿಬದ್ಧರಾಗಿದ್ದೇವೆಂದರು.

ಆರಂಭದಲ್ಲಿ ವಚನ ಪ್ರಾರ್ಥನೆಯು ರೇಣಕ್ಕ ಕರೀಗೌಡ್ರ ನಡೆಸಿದರು. ಸಹನಾ ಆಲತಗಿಯವರು ಸ್ವಾಗತಿಸಿದರು. ಕಳ್ಳಿಮನಿ ರಾಮಣ್ಣ ನಿರೂಪಿಸಿದರು. ಪ್ರಕಾಶ ಅಸುಂಡಿ ಶರಣು ಸಮರ್ಪಣೆಗೈದರು.

ನಿವೃತ್ತ ಶಿಕ್ಷಕಿ ಗಂಗಮ್ಮಾ ಹೂಗಾರ ಪೂಜ್ಯ ಲಿಂಗಾನಂದ ಸ್ವಾಮೀಜಿಯವರ ಬಗ್ಗೆ ಮಾತನಾಡುತ್ತಾ, ಹಳಕಟ್ಟಿಯವರು ವಚನ ತಾಡೋಲೆಗಳನ್ನು ಸಂಗ್ರಹಿಸಿ ಗ್ರಂಥಗಳ ಮೂಲಕ ಪ್ರಕಟಿಸಿದರು. ಆ ವಚನ ಸಾಹಿತ್ಯವನ್ನು ನಾಡಿನಾದ್ಯಂತ ತಮ್ಮ ಪ್ರವಚನಗಳ ಮೂಲಕ ಪ್ರಸಾರ ಮಾಡಿದ ಕೀರ್ತಿ ಪೂ. ಲಿಂಗಾನಂದ ಮಹಾಸ್ವಾಮಿಗಳಿಗೆ ಸಲ್ಲುತ್ತದೆ. ಅಲ್ಲದೇ ಶರಣ ಧರ್ಮ ಅರಿವಂತಾಗಲು ನಾಡಿನಾದ್ಯಂತ ರಾಷ್ಟ್ರೀಯ ಬಸವದಳಗಳನ್ನು ಸ್ಥಾಪಿಸಿ ಅಲ್ಲಿ ಶರಣರ ವಿಚಾರ ಚರ್ಚೆ, ಚಿಂತನೆ ನಡೆಸಲು ಅನುವು ಮಾಡಿಕೊಟ್ಟರು. ಇದು ದೊಡ್ಡ ಪರಿಣಾಮ ಬೀರಿ ಜನರಿಗೆ ನಿಜವಾದ ಲಿಂಗಾಯತ ಧರ್ಮದ ಸ್ವರೂಪದ ಪರಿಚಯವಾಯಿತು ಎಂದು ತಿಳಿಸಿದರು.

ತಾಲೂಕಾ ಆಸ್ಪತ್ರೆಗಳಲ್ಲಿ ಉಚಿತ ಇಸಿಜಿ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ರಾಜ್ಯದ ಯುವಸಮೂಹಕ್ಕೆ ಮಾದರಿಯಾಗಿದ್ದ ನಟ ಪುನೀತರಾಜಕುಮಾರ ಅವರ ಹೆಸರಿನಲ್ಲಿ ರಾಜ್ಯ ಸರಕಾರ ಜಾರಿಗೊಳಿಸಿರುವ ಡಾ. ಪುನೀತ್ ರಾಜ್‌ಕುಮಾರ ಹೃದಯ ಜ್ಯೋತಿ ಯೋಜನೆ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ವರವಾಗುತ್ತಿದೆ.

ಜಿಲ್ಲೆಯ ಶಿರಹಟ್ಟಿ ಮತ್ತು ನರಗುಂದ ತಾಲೂಕಾ ಆಸ್ಪತ್ರೆಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಉಚಿತವಾಗಿ ಇಸಿಜಿ ಮಾಡುವ ವ್ಯವಸ್ಥೆ ಜಾರಿಯಲ್ಲಿದ್ದು, ಇಸಿಜಿ ಮಾಡಿದ ನಂತರ ಹೃದಯತಜ್ಞರ ಸಲಹೆ ಮೇರೆಗೆ ತುರ್ತಾಗಿ ಚಿಕಿತ್ಸೆ ಅವಶ್ಯವಿದ್ದವರಿಗೆ ಮೇಲ್ಮಟ್ಟದ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈ ಯೋಜನೆಯಡಿ 2024ರ ಮಾರ್ಚ್‌ ನಿಂದ ಜೂನ್-2025ರವರೆಗೆ ಒಟ್ಟು 6681 ಇಸಿಜಿ ಮಾಡಲಾಗಿದೆ. ಇದರಲ್ಲಿ 3491 ನಾರ್ಮಲ್ ಇದ್ದು, 48 ಹೃದಯ ಸಂಬಂಧಿ ಕಾಯಿಲೆ ಇದ್ದವರಿಗೆ ಹೆಚ್ಚಿನ ಚಿಕಿತ್ಸೆ ನೀಡಿ 35 ಜನರ ಜೀವವನ್ನು ಉಳಿಸಲಾಗಿದೆ. ಕಳೆದ 3 ತಿಂಗಳಲ್ಲಿ ಕಾರ್ಡಿಯಾಕ್‌ನಿಂದ 78 ಜನರು ಮೃತಪಟ್ಟಿದ್ದು, ಶಿರಹಟ್ಟಿ ತಾಲೂಕಿನಲ್ಲಿ 4 ಮತ್ತು ಲಕ್ಷ್ಮೇಶ್ವರ ತಾಲೂಕಿನಲ್ಲಿ 2 ಹೃದಯಾಘಾತದಿಂದ ಸಾವನ್ನಪಿರುವುದಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೆಚ್ಚುತ್ತಿರುವ ಹೃದಯಾಘಾತಕ್ಕೆ ಮತ್ತು ಹೃದಯ ಸಂಬಂಧಿತ ಕಾಯಿಲೆಗಳಿಗೆ ಆಧುನಿಕ ಜೀವನಶೈಲಿಯೇ ಪ್ರಮುಖ ಕಾರಣವಾಗಿದೆ ಎಂದು ಹೃದಯತಜ್ಞರ ಅಭಿಪ್ರಾಯವಾಗಿದೆ. ಅಲ್ಲದೆ, ಪರಿಸರ ಮಾಲಿನ್ಯದಿಂದ ಕಲುಷಿತ ಆಹಾರ, ವಂಶವಾಹಿ, ಅತಿಯಾದ ಧೂಮಪಾನ-ಮದ್ಯಪಾನ ಸಹ ಹೃದಯಾಘಾತಕ್ಕೆ ಪ್ರಮುಖ ಕಾರಣವಾಗುತ್ತಿವೆ.

ಜಿಲ್ಲೆಯಲ್ಲಿಯ ಹೃದಯ ಸಂಬಂಧಿ ಕಾಯಲೆಗಳಿಂದ ಬಳಲುತ್ತಿರುವವರು ದೂರದ ಬೆಂಗಳೂರು-ಬೆಳಗಾಂವಗಳ ಪ್ರತಿಷ್ಠಿತ ಆಸ್ಪತ್ರೆಗಳಿಗೆ ತೆರಳಬೇಕಿತ್ತು. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರ ಇಚ್ಛಾಶಕ್ತಿಯ ಪರಿಣಾಮ ಗದಗ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಆರಂಭವಾಗಿರುವ ಕ್ಯಾಥ್‌ಲ್ಯಾಬ್ ಹೃದಯ ರೋಗದಿಂದ ಬಳಲುತ್ತಿರುವ ಬಡ ಜನತೆಯ ಪಾಲಿಗೆ ವರವಾಗಿದೆ.

ತಾಲೂಕಾ ಆರೋಗ್ಯಾಧಿಕಾರಿ ಡಾ. ಸುಭಾಸ ದೈಗೊಂಡ ಪ್ರತಿಕ್ರಿಯಿಸಿ, ಗ್ರಾಮೀಣ ಭಾಗದಲ್ಲಿ ಬಿಎಚ್‌ಓಗಳ ಮೂಲಕ ಹೃದಯ ಸಂಬಂಧಿತ ಕಾಯಿಲೆಗಳ ಕುರಿತು ಮುನ್ನೆಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಆಧುನಿಕ ಆಹಾರ ಪದ್ಧತಿ, ಕೆಲಸದ ಒತ್ತಡ, ಧೂಮಪಾನ-ಮದ್ಯಪಾನದಿಂದ ದೂರವಿರಬೇಕು. ವರ್ಷಕ್ಕೆ 1 ಬಾರಿಯಾದರೂ ಹೃದಯ ಪರೀಕ್ಷೆ ಮಾಡಿಸಬೇಕೆಂದು ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಪ.ಪಂ ಸದಸ್ಯ ಮಂಜುನಾಥ ಘಂಟಿ, ಯುವಪೀಳಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿಲ್ಲ. ಇದರಿಂದ ಅಲ್ಲಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವುದು ಕೇಳಿ ಬರುತ್ತಿದ್ದು, ಜಂಕ್ ಫುಡ್ ಸೇವಿಸುವುದನ್ನು ಬಿಡಬೇಕು. ಹೃದಯ ಸಂಬಂಧಿ ಆರೋಗ್ಯದ ಕುರಿತು ಇಲಾಖೆಯು ಇನ್ನೂ ಹೆಚ್ಚಿನ ರೀತಿಯಲ್ಲಿ ಜನತೆಗೆ ಈ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಇಲಾಖೆಯ ಸಮೀಕ್ಷಣಾಧಿಕಾರಿ ಹಾಗೂ ಸ್ಟೆಮಿ ಜಿಲ್ಲಾ ನೋಡಲ್ ಅಧಿಕಾರಿ ಡಾ. ವೆಂಕಟೇಶ ರಾಠೋಡ, ಜಿಲ್ಲೆಯ ಉಪ ಕೇಂದ್ರಗಳ ಮಟ್ಟದಲ್ಲಿ ರಕ್ತದೊತ್ತಡ ಮತ್ತು ಮಧುಮೇಹ, ಬಾಯಿ, ಸ್ತನ, ಸರ್ವಿಕಲ್ ಕ್ಯಾನ್ಸರ್‌ಗಳ ಕುರಿತು ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಜಿಲ್ಲೆಯ ಶಿರಹಟ್ಟಿ-ನರಗುಂದ ತಾಲೂಕಾ ಆಸ್ಪತ್ರೆಗಳಲ್ಲಿ ಹೃದಯ ಜ್ಯೋತಿ ಕಾರ್ಯಕ್ರಮದಡಿ ಹೃದಯ ಸಂಬಂಧಿ ಕಾಯಿಲೆ ಇದ್ದವರಿಗೆ ತಪಾಸಣೆ ನಡೆಸಿ ಅಗತ್ಯವಿದ್ದವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಸಾರ್ವಜನಿಕರು ಆಧುನಿಕ ಜೀವನಶೈಲಿಯಿಂದ ದೂರವಿದ್ದು, ಆರೋಗ್ಯವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ ಎಂದರು.

ಉಭಯ ಶ್ರೀಗಳ ಕನಸು ಕಲ್ಲಯ್ಯಜ್ಜನವರಿಂದ ಸಾಕಾರ

ವಿಜಯಸಾಕ್ಷಿ ಸುದ್ದಿ, ಗದಗ: ಲಿಂ. ಪಂ. ಪಂಚಾಕ್ಷರಿ ಗವಾಯಿಗಳವರ ಹಾಗೂ ಲಿಂ. ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ಮಾರ್ಗದರ್ಶದಲ್ಲಿ ಪೂಜ್ಯಶ್ರೀ ಕಲ್ಲಯ್ಯಜ್ಜನವರು ವಿರೇಶ್ವರ ಪುಣ್ಯಾಶ್ರಮವನ್ನು ಮುನ್ನಡೆಸಿಕೊಂಡು ಹೋಗುತ್ತ ಉಭಯ ಗುರುಗಳ ಕನಸನ್ನು ಸಾಕಾರಗೊಳಿಸಿದ್ದಾರೆ ಎಂದು ಕಪೋತಗಿರಿ ನಂದಿವೇರಿ ಶ್ರೀಮಠದ ಪೂಜ್ಯಶ್ರೀ ಶಿವಕುಮಾರ ಶ್ರೀಗಳು ಹೇಳಿದರು.

ಅವರು ನಗರದ ವಿರೇಶ್ವರ ಪುಣ್ಯಾಶ್ರಮದಲ್ಲಿ ಪೂಜ್ಯಶ್ರೀ ಕಲ್ಲಯ್ಯಜ್ಜನವರ 55ನೇ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ತುಲಾಭಾರ ಸೇವೆ ನೆರವೇರಿಸಿ ಮಾತನಾಡಿದರು.

ಪೂಜ್ಯಶ್ರೀ ಕಲ್ಲಯ್ಯಜ್ಜನವರ ನೇತೃತ್ವದಲ್ಲಿ ಪುಣ್ಯಾಶ್ರಮವು ಉತ್ತರೋತ್ತರವಾಗಿ ಅಭಿವೃದ್ದಿಗೊಳ್ಳಲಿ. ಹಾನಗಲ್ ಶ್ರೀಗುರು ಕುಮಾರೇಶ್ವರರ, ಪಂ. ಪಂಚಾಕ್ಷರ ಗವಾಯಿಗಳವರ ಹಾಗೂ ಪಂ. ಪುಟ್ಟರಾಜ ಗವಾಯಿಗಳವರ ಶ್ರೀರಕ್ಷೆ ಕಲ್ಲಯ್ಯಜ್ಜನವರ ಮೇಲೆ ಸದಾ ಇರಲಿದೆ ಎಂದು ಶುಭ ಹಾರೈಸಿದರು.

ಲಿಂಗಸೂರಿನ ಮಾಣಿಕೇಶ್ವರಿ ಅಶ್ರಮದ ಪೂಜ್ಯಶ್ರೀ ಶಿವಶರಣೆ ನಂದೀಶ್ವರಿ ಅಮ್ಮನವರು ಪೂಜ್ಯಶ್ರೀ ಕಲ್ಲಯ್ಯಜ್ಜನವರ ತುಲಾಭಾರ ಸೇವೆಯನ್ನು ನೆರವೇರಿಸಿದರು. ಇದೇ ಸಂದರ್ಭದಲ್ಲಿ ನಂದಿಶ್ವರಿ ಅಮ್ಮನವರಿಗೆ `ನಡೆದಾಡುವ ನಕ್ಷತ್ರ’ ಎಂಬ ಬಿರುದು ನೀಡಿ ಶ್ರೀಮಠದಿಂದ ಗೌರವಿಸಲಾಯಿತು.

ವೇದಿಕೆ ಮೇಲೆ ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ-ಡಾವಣಗೆರೆ ಸೋಲ್‌ಟ್ರಸ್ಟ್ನ ಸದಸ್ಯರಾದ ಪಿ.ಎಫ್. ಕಟ್ಟಿಮನಿ, ಪಿ.ಸಿ. ಹಿರೇಮಠ, ಸಾರಿಗೆ ನಿಗಮದ ಉಪಾಧ್ಯಕ್ಷ ಪೀರಸಾಬ ಕೌತಾಳ, ಜೋಹರಾ ಕೌತಾಳ, ಜೇವರ್ಗಿಯ ನಾಡಗೌಡ ಅಪ್ಪಾಸಾಬ ಪಾಟೀಲ, ವೀರೇಶ್ವರ ಪುಣ್ಯಾಶ್ರಮದ ವ್ಯವಸ್ಥಾಪಕರಾದ ಹೇಮರಾಜಶಾಸ್ತ್ರಿ ಹಿರೇಮಠ ಹೆಡಿಗ್ಗೊಂಡ ಮುಂತಾದವರು ಉಪಸ್ಥಿತರಿದ್ದರು.

error: Content is protected !!