Home Blog Page 101

ಮಡಿಕೇರಿ- ಅಕ್ರಮ ಹೋಂಸ್ಟೇಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

0

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಸಾವಿರಾರು ಹೋಂಸ್ಟೇಗಳು ಪ್ರವಾಸೋದ್ಯಮ ಕ್ಷೇತ್ರಕ್ಕೆ ಗಂಭೀರ ಸವಾಲಾಗಿ ಪರಿಣಮಿಸಿವೆ. ವಿದೇಶಿ ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣದ ಬಳಿಕ ಸುರಕ್ಷತೆ ವಿಚಾರ ಮತ್ತೊಮ್ಮೆ ಚರ್ಚೆಗೆ ಬಂದಿದೆ.

ಹೋಂಸ್ಟೇ ಮಾಲೀಕರ ಸಂಘ ಸರ್ಕಾರವನ್ನು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದು, ಆಡಳಿತದ ನಿರ್ಲಕ್ಷ್ಯವೇ ಇಂತಹ ಅಕ್ರಮ ಚಟುವಟಿಕೆಗಳಿಗೆ ಕಾರಣ ಎಂದು ದೂರಿದೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಮುಖ್ಯ ಹುದ್ದೆಗಳು ಖಾಲಿ ಇರುವುದರಿಂದ ನಿಯಂತ್ರಣ ವ್ಯವಸ್ಥೆ ಕುಸಿದಿದೆ ಎಂದು ಸಂಘದ ಅಧ್ಯಕ್ಷೆ ಮೊಂತಿ ಗಣೇಶ್ ಹೇಳಿದ್ದಾರೆ.

ಜಿಲ್ಲೆಯಲ್ಲಿ ಸಾವಿರಾರು ನೋಂದಾಯಿತ ಹೋಂಸ್ಟೇಗಳ ಜೊತೆಗೆ 2,000ಕ್ಕೂ ಹೆಚ್ಚು ಅಕ್ರಮ ತಾಣಗಳು ಕಾರ್ಯನಿರ್ವಹಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಬ್ರೋಕರ್‌ಗಳ ಮೂಲಕ ಪ್ರವಾಸಿಗರನ್ನು ತಪ್ಪು ಸ್ಥಳಗಳಿಗೆ ಕರೆದೊಯ್ಯುವ ದಂಧೆ ಕೂಡ ಹೆಚ್ಚಾಗಿದೆ.

ಈ ಹಿನ್ನೆಲೆಯಲ್ಲಿ ಕೊಡಗು ಎಸ್‌ಪಿ ಕೆ. ಬಿಂದು ಮಣಿ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಪ್ರವಾಸಿಗರ ಸುರಕ್ಷತೆ ಲೋಪವಾದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ರೈಲಿನಿಂದ ಮಗು ಬಿದ್ದರೂ ನಿಲ್ಲದ ರೈಲು: ತುರ್ತು ಸರಪಳಿ ಎಳೆದರೂ ಸ್ಪಂದಿಸದ ವ್ಯವಸ್ಥೆ, ತಾಯಿಯ ಆಕ್ರಂದನ

0

ಕೋಲ್ಕತ್ತಾ: ಜಲ್ಪೈಗುರಿ ಮತ್ತು ರಾಮನಗರ ನಡುವಿನ ರೈಲು ಪ್ರಯಾಣದ ವೇಳೆ ಬೆಚ್ಚಿಬೀಳಿಸುವ ಘಟನೆ ಸಂಭವಿಸಿದ್ದು, ಕೈಜಾರಿ ಮಗು ರೈಲಿನಿಂದ ಕೆಳಗೆ ಬಿದ್ದರೂ ತುರ್ತು ಸರಪಳಿ ಎಳೆದರೂ ರೈಲು ನಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.

ಮಗು ಬಿದ್ದ ಕ್ಷಣವೇ ಗಾಬರಿಗೊಂಡ ತಾಯಿ ತುರ್ತು ಸರಪಳಿಯನ್ನು ಎಳೆದರೂ ರೈಲು ನಿಲ್ಲಲಿಲ್ಲ. ಬೋಗಿಯಲ್ಲಿದ್ದ ಇತರ ಪ್ರಯಾಣಿಕರೂ ಸಹಕರಿಸಿ ಪದೇ ಪದೇ ಸರಪಳಿ ಎಳೆದರೂ ಬ್ರೇಕ್ ವ್ಯವಸ್ಥೆ ಸ್ಪಂದಿಸದೇ ರೈಲು ಮುಂದುವರಿದಿದೆ. ಈ ಘಟನೆ ರೈಲ್ವೆಯ ಸುರಕ್ಷತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆ ಎಬ್ಬಿಸಿದೆ.

ಘಟನೆಯ ವೇಳೆ ಬೋಗಿಯಲ್ಲಿದ್ದ ಯುವಕನೊಬ್ಬ ತಕ್ಷಣವೇ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಹಾಗೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಸಂಪೂರ್ಣ ಘಟನೆಯನ್ನು ವೀಡಿಯೋದಲ್ಲಿ ಸೆರೆಹಿಡಿದಿದ್ದಾನೆ. “ಸರಪಳಿ ಎಳೆಯುತ್ತಿದ್ದೇವೆ, ಎಲ್ಲರಿಗೂ ಕರೆ ಮಾಡಿದ್ದೇವೆ, ಆದರೂ ರೈಲು ನಿಲ್ಲುತ್ತಿಲ್ಲ” ಎಂದು ಆತ ಅಸಹಾಯಕತೆ ವ್ಯಕ್ತಪಡಿಸಿದ್ದಾನೆ.

ರೈಲು ನಿಲ್ಲದೇ ಮುಂದಿನ ನಿಲ್ದಾಣ ತಲುಪುವವರೆಗೆ ತಾಯಿ ಮಗುವಿನ ಬಳಿ ಹೋಗಲು ಸಾಧ್ಯವಾಗದೇ ಕಣ್ಣೀರಿಡುತ್ತಾ ಕುಳಿತಿದ್ದಳು. ಬಳಿಕ ಪೊಲೀಸರು ಮತ್ತು ರೈಲ್ವೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಗುವಿನ ಶೋಧ ಕಾರ್ಯ ಆರಂಭಿಸಿದ್ದಾರೆ.

ಕರ್ನಾಟಕದಲ್ಲಿ ಬಿಸಿಲಿನ ಕ್ರೌರ್ಯ: ಕೋಳಿಗಳ ಸಾವು, ಕೆರೆಯಲ್ಲಿ ಮೀನುಗಳ ಮಾರಣಹೋಮ, ನೀರಿಗಾಗಿ ಹಾಹಾಕಾರ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಉಷ್ಣಾಂಶ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬಿಸಿಲಿನ ಅಬ್ಬರ ಜನಜೀವನವನ್ನು ಕಂಗೆಡಿಸಿದೆ. ಮಾನವರು ಮಾತ್ರವಲ್ಲದೆ ಪ್ರಾಣಿ-ಪಕ್ಷಿಗಳು ಮತ್ತು ಜಲಚರಗಳೂ ಸಹ ಉಷ್ಣತೆಯಿಂದ ಸಂಕಷ್ಟ ಅನುಭವಿಸುತ್ತಿವೆ.

ಕೊಪ್ಪಳ ಜಿಲ್ಲೆಯಲ್ಲಿ ಕೋಳಿ ಸಾಕಾಣಿಕೆ ಕ್ಷೇತ್ರಕ್ಕೆ ಭಾರೀ ಹೊಡೆತ ಬಿದ್ದಿದ್ದು, ತಾಪಮಾನ ತಾಳಲಾರದೆ ಕೋಳಿಗಳು ಸಾವನ್ನಪ್ಪುತ್ತಿವೆ. ಫಾರ್ಮ್‌ಗಳನ್ನು ತಂಪಾಗಿಡಲು ಸ್ಪಿಂಕ್ಲರ್, ಫಾಗರ್‌ಗಳನ್ನು ಬಳಸುತ್ತಿದ್ದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ.

ಇನ್ನೊಂದೆಡೆ ಚಿಕ್ಕಬಳ್ಳಾಪುರ ಜಿಲ್ಲೆಯ ಕಂದವಾರ ಕೆರೆಯಲ್ಲಿ ಸಾವಿರಾರು ಮೀನುಗಳು ಆಮ್ಲಜನಕ ಕೊರತೆಯಿಂದ ಸತ್ತು ತೇಲುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಬತ್ತುತ್ತಿರುವ ಜಲಮೂಲಗಳು ಪರಿಸರದ ಸಮತೋಲನಕ್ಕೂ ಧಕ್ಕೆಯಾಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಬಿಸಿಲಿನಿಂದ ರಕ್ಷಣೆಗಾಗಿ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಗ್ರೀನ್ ಮ್ಯಾಟ್ ಅಳವಡಿಸಲಾಗಿದ್ದರೂ, ಪೊಲೀಸರಿಗೆ ಮೂಲಭೂತ ನೆರಳಿನ ಸೌಲಭ್ಯ ಇಲ್ಲದಿರುವುದು ಟೀಕೆಗೆ ಗುರಿಯಾಗಿದೆ.

ಬೀದರ್ ಜಿಲ್ಲೆಯ ಬ್ರೀಮ್ಸ್ ಆಸ್ಪತ್ರೆಯಲ್ಲೂ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ರೋಗಿಗಳು ಮತ್ತು ಸಂಬಂಧಿಕರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದ ಹಲವು ಭಾಗಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಮಳೆಯ ಕೊರತೆ ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ. ಆರೋಗ್ಯ ತಜ್ಞರು ಜನರಿಗೆ ಹೆಚ್ಚು ನೀರು ಸೇವನೆ ಮತ್ತು ಮಧ್ಯಾಹ್ನ ಹೊರಗೆ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ.

ಮಠದ ಹಣದ ಲೆಕ್ಕದ ಮೇಲೆ ಮಹಾ ಗದ್ದಲ: ಪಂಚಮಸಾಲಿ ಪೀಠದಲ್ಲಿ ಉಚ್ಚಾಟನೆಗಳ ಸರಣಿ

0

ದಾವಣಗೆರೆ: ಪಂಚಮಸಾಲಿ ಮಠದ ವಿವಾದ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಈಗ ಉಚ್ಚಾಟನೆಗಳ ಸರಣಿಗೆ ತಲುಪಿದೆ. ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮಠದ ಟ್ರಸ್ಟಿಗಳ ವಿರುದ್ಧ ದೇಣಿಗೆ ಹಣದ ಲೆಕ್ಕದ ಕುರಿತು ಕಿಡಿಕಾರಿದ ಬೆನ್ನಲ್ಲೇ, ಟ್ರಸ್ಟ್ ಒಳಗೆ ಭಿನ್ನಾಭಿಪ್ರಾಯಗಳು ಬಹಿರಂಗವಾಗಿವೆ.

ಇದೇ ವೇಳೆ ಕರ್ನಾಟಕ ರಾಜ್ಯ ಲಿಂಗಾಯತ ಪಂಚಮಸಾಲಿ ಸಂಘ ಮಧ್ಯಪ್ರವೇಶಿಸಿ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಮಾಲಿ ಪಾಟೀಲ್ ಸುದ್ದಿಗೋಷ್ಠಿಯಲ್ಲಿ, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಬಿ.ಸಿ. ಉಮಾಪತಿ, ಟ್ರಸ್ಟಿ ಚಂದ್ರಶೇಖರ್ ಪೂಜಾರ್ ಮತ್ತು ಜ್ಯೋತಿ ಪ್ರಕಾಶ್ ಅವರನ್ನು ಉಚ್ಚಾಟನೆ ಮಾಡಿರುವುದಾಗಿ ಘೋಷಿಸಿದರು.

ಲೆಕ್ಕ ವಿಚಾರದಿಂದ ಶುರುವಾದ ಗೊಂದಲ ಇದೀಗ ಸ್ವಾಮೀಜಿಗಳ ಉಚ್ಚಾಟನೆದಿಂದ ಟ್ರಸ್ಟಿಗಳ ವಿರುದ್ಧದ ಕ್ರಮಗಳವರೆಗೆ ವಿಸ್ತರಿಸಿದ್ದು, ಮಠದ ಒಳಜಗಳ ಬಹಿರಂಗ ರಾಜಕೀಯ ಮತ್ತು ಸಾಮಾಜಿಕ ಚರ್ಚೆಯ ಕೇಂದ್ರಬಿಂದುವಾಗಿದೆ.

ಇಂದು ನಡೆಯುತ್ತಿರುವ ಲೆಕ್ಕ ಸಮಾವೇಶದ ಹಿನ್ನೆಲೆ, ಎರಡು ಬಣಗಳ ತಿಕ್ಕಾಟ ತಾರಕಕ್ಕೇ ಏರುವ ಸಾಧ್ಯತೆ ಇದ್ದು, ಪರಿಸ್ಥಿತಿ ತೀವ್ರಗೊಳ್ಳುವ ಸೂಚನೆಗಳು ಸ್ಪಷ್ಟವಾಗಿವೆ.

ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ! ವೈದ್ಯರಿಲ್ಲದೇ ಹೆರಿಗೆ, ಮಹಿಳೆಯರ ಸಾಹಸಕ್ಕೆ ಮೆಚ್ಚುಗೆ!

ಮಂಗಳೂರು: ಮಂಗಳೂರು-ಬೆಂಗಳೂರು ರೈಲಿನಲ್ಲಿ ಗರ್ಭಿಣಿಯೊಬ್ಬರು ಪ್ರಯಾಣಿಸುತ್ತಿದ್ದ ವೇಳೆ ಹೆರಿಗೆ ನೋವು ಕಾಣಿಸಿಕೊಂಡು, ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ ಅಪರೂಪದ ಘಟನೆ ನಡೆದಿದೆ.

ಮಂಗಳೂರಿನಿಂದ ಮೈಸೂರಿನತ್ತ ಪ್ರಯಾಣಿಸುತ್ತಿದ್ದ ತುಂಬು ಗರ್ಭಿಣಿಗೆ ಅಕಸ್ಮಿಕವಾಗಿ ಹೆರಿಗೆ ನೋವು ಶುರುವಾಯಿತು. ರೈಲಿನಲ್ಲಿ ವೈದ್ಯಕೀಯ ಸೌಲಭ್ಯಗಳಿಲ್ಲದ ಹಿನ್ನೆಲೆಯಲ್ಲಿ ಪ್ರಯಾಣಿಕರು ಸುಮಾರು 30 ನಿಮಿಷಗಳ ಕಾಲ ಸಹಾಯಕ್ಕಾಗಿ ಕಾಯ್ದರು. ನಂತರ ಪರಿಸ್ಥಿತಿಯ ತುರ್ತುತೆಯನ್ನು ಮನಗಂಡ ಮಹಿಳಾ ಪ್ರಯಾಣಿಕರು ಪರದೆ ಕಟ್ಟಿ, ತಮ್ಮದೇ ಧೈರ್ಯದಿಂದ ಹೆರಿಗೆ ಮಾಡಿಸಿದರು.

ಈ ವೇಳೆ ಗರ್ಭಿಣಿಗೆ ತೀವ್ರ ರಕ್ತಸ್ರಾವ ಉಂಟಾದರೂ, ಮಹಿಳೆಯರ ತಕ್ಷಣದ ನೆರವಿನಿಂದ ಸುರಕ್ಷಿತವಾಗಿ ಹೆರಿಗೆ ನೆರವೇರಿತು. ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ ರೋಡ್‌ನಲ್ಲಿ ರೈಲು ನಿಲ್ಲಿಸಿ ತಾಯಿ ಮತ್ತು ಮಗುವನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.

ಸದ್ಯ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಹನೂರು ಕಾಡಿನಲ್ಲಿ ‘ಬ್ಲಾಕ್ ಬ್ಯೂಟಿ’ ಎಂಟ್ರಿ: ಕರಿಚಿರತೆ ಕಂಡು ಪ್ರವಾಸಿಗರಿಗೆ ರೋಮಾಂಚನ!

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಸಫಾರಿ ವಲಯದಲ್ಲಿ ಅಪರೂಪದ ಕಪ್ಪು ಚಿರತೆಯೊಂದು ಕಾಣಿಸಿಕೊಂಡಿದ್ದು, ಪ್ರವಾಸಿಗರ ಗಮನ ಸೆಳೆದಿದೆ.

ಬೆಳ್ಳಂಬೆಳಗ್ಗೆ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಈ ಕರಿಚಿರತೆಯ ದರ್ಶನವಾಗಿದ್ದು, ಅದನ್ನು ಕಂಡು ಅವರು ಆಶ್ಚರ್ಯ ಮತ್ತು ಸಂತಸ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಚಿರತೆಗಳು ಹಳದಿ ಬಣ್ಣದ ಮೈಮೇಲೆ ಕಪ್ಪು ಚುಕ್ಕೆಗಳೊಂದಿಗೆ ಕಾಣಿಸಿಕೊಳ್ಳುತ್ತವೆ. ಆದರೆ, ಈ ಚಿರತೆ ಮೆಲನಿಸ್ಟಿಕ್ ಗುಣಲಕ್ಷಣ ಹೊಂದಿರುವುದರಿಂದ ಸಂಪೂರ್ಣ ಕಪ್ಪು ಬಣ್ಣದಲ್ಲಿ ಕಾಣಿಸಿಕೊಂಡಿದೆ.

ಪಿ.ಜಿ.ಪಾಳ್ಯ ಸಫಾರಿ ವಲಯವು ನಾಗರಹೊಳೆ ಮತ್ತು ಬಂಡೀಪುರ ಅರಣ್ಯ ಪ್ರದೇಶಗಳ ವ್ಯಾಪ್ತಿಗೆ ಸೇರಿದ್ದು, ಅಪರೂಪದ ವನ್ಯಜೀವಿಗಳಿಗೆ ಆಶ್ರಯಸ್ಥಳವಾಗಿದೆ. ಇಂತಹ ಕರಿಚಿರತೆಯ ಕಾಣಿಕೆ ಈ ಪ್ರದೇಶದ ಜೈವಿಕ ವೈವಿಧ್ಯತೆಗೆ ಮತ್ತಷ್ಟು ಮೆರಗು ನೀಡಿದೆ.

ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಇಂತಹ ಕಪ್ಪು ಚಿರತೆಗಳ ದರ್ಶನವು ಅತ್ಯಂತ ವಿರಳವಾಗಿದ್ದು, ವನ್ಯಜೀವಿ ಪ್ರಿಯರಿಗೆ ಇದು ವಿಶೇಷ ಅನುಭವವಾಗಿದೆ.

ಆರ್ ಸಿಬಿ-ಜಿಟಿ ಪಂದ್ಯದಲ್ಲಿ ನಡೆದಿತ್ತು ಆಘಾತಕಾರಿ ಘಟನೆ! ಏಕಾಏಕಿ 240 ಸಿಸಿಟಿವಿ ಕ್ಯಾಮೆರಾಗಳು ಆಫ್ ಆಗಿದ್ದೇಕೆ?

ಬೆಂಗಳೂರು: ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದಿನಾಂಕ 24 ರಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ಭಾರೀ ಭದ್ರತಾ ಲೋಪ ಉಂಟಾಗಿದೆ.

ಪಂದ್ಯಕ್ಕೂ ಮುನ್ನವೇ ಕ್ರೀಡಾಂಗಣದ ಸುತ್ತಮುತ್ತ ಅಳವಡಿಸಲಾಗಿದ್ದ ಸುಮಾರು 240 ಸಿಸಿಟಿವಿ ಕ್ಯಾಮೆರಾಗಳ ಸಂಪರ್ಕವನ್ನು ಉದ್ದೇಶಪೂರ್ವಕವಾಗಿ ಕಡಿತಗೊಳಿಸಲಾಗಿತ್ತು.

ಪಂದ್ಯ ದಿನ ಬೆಳಗ್ಗೆ ಏಕಾಏಕಿ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸದೆ ಇದ್ದುದ್ದರಿಂದ ಪೊಲೀಸರು ಗೊಂದಲಕ್ಕೀಡಾದರು. ನಂತರ ನಡೆದ ತನಿಖೆಯಲ್ಲಿ IVS Digital Solutions ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಮತ್ತು ಅಬ್ದುಲ್ ಕಲಾಂ ಎಂಬ ಇಬ್ಬರು ಪಾಸ್ ಇಲ್ಲದೇ ನಿಷ್ಕ್ರಿಯಗೊಂಡ ಕಾರ್ಡ್ ಬಳಸಿ ಸರ್ವರ್ ರೂಂಗೆ ಅನಧಿಕೃತವಾಗಿ ಪ್ರವೇಶಿಸಿದ್ದರೆಂದು ತಿಳಿದುಬಂದಿದೆ. ಆರೋಪಿಗಳು ಎನ್‌ವಿಆರ್ ಹಾಗೂ ಫೈಬರ್ ಸಂಪರ್ಕಗಳನ್ನು ಕಡಿತಗೊಳಿಸಿರುವುದು ವಿಚಾರಣೆಯಲ್ಲಿ ಬಹಿರಂಗವಾಗಿದೆ.

ಈ ದುಷ್ಕೃತ್ಯದ ಪರಿಣಾಮವಾಗಿ ಕ್ರೀಡಾಂಗಣದ ಪ್ರವೇಶ ದ್ವಾರಗಳು ಸೇರಿದಂತೆ ಹಲವು ಭಾಗಗಳಲ್ಲಿ ಭದ್ರತಾ ಮೇಲ್ವಿಚಾರಣೆಯಲ್ಲಿ ವ್ಯತ್ಯಯ ಉಂಟಾಯಿತು. ಆದಾಗ್ಯೂ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ ಪೊಲೀಸರು ತಕ್ಷಣ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಬದಲಿ ತಾಂತ್ರಿಕ ವ್ಯವಸ್ಥೆ ಕಲ್ಪಿಸಿ ಯಾವುದೇ ಅನಾಹುತವಾಗದಂತೆ ಕ್ರಮ ಕೈಗೊಂಡರು.

ಸದ್ಯ ಪ್ರಕರಣ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿಗಳ ವಿರುದ್ಧ ತನಿಖೆ ಮುಂದುವರಿದಿದೆ.

IPL 2026: ಸೂಪರ್ ಓವರ್ ಥ್ರಿಲ್ಲರ್‌ನಲ್ಲಿ ಕೆಕೆಆರ್ ಗೆ ಗೆಲುವು: ಗೆಲ್ಲೋ ಪಂದ್ಯ ಕೈ ಚೆಲ್ಲಿದ ಲಕ್ನೋ!

0

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ‘ಸೂಪರ್’ ಜಯ ಸಾಧಿಸಿ ಪ್ಲೇಆಫ್‌ ರೇಸ್‌ನಲ್ಲಿ ಜೀವಂತವಾಗಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ 7 ವಿಕೆಟ್‌ ನಷ್ಟಕ್ಕೆ 155 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಲಕ್ನೋ ತಂಡ 8 ವಿಕೆಟ್‌ ಕಳೆದುಕೊಂಡು ಸಮಬಲ ಸಾಧಿಸಿ ಪಂದ್ಯವನ್ನು ಟೈಗೆ ತಳ್ಳಿತು. ಕೊನೆಯ ಓವರ್‌ನಲ್ಲಿ 17 ರನ್‌ ಬೇಕಿದ್ದಾಗ ರೋಚಕ ಕ್ಷಣಗಳು ನಿರ್ಮಾಣವಾದವು. ನಿರ್ಣಾಯಕ ಕ್ಷಣದಲ್ಲಿ ನೋಬಾಲ್‌ಗಳ ಸಹಾಯದಿಂದ ಸಮೀಕರಣ ಬದಲಾಗಿದ್ದು, ಕೊನೆಯ ಎಸೆತಕ್ಕೆ 7 ರನ್‌ ಅಗತ್ಯವಿದ್ದಾಗ ಶಮಿ ಸಿಕ್ಸರ್‌ ಸಿಡಿಸಿ ಪಂದ್ಯವನ್ನು ಡ್ರಾಗೆ ಕೊಂಡೊಯ್ದರು.

ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ತಂಡ ಸಂಪೂರ್ಣ ವೈಫಲ್ಯ ಅನುಭವಿಸಿತು. ನಿಕೊಲಸ್ ಪೂರನ್ ಮೊದಲ ಎಸೆತದಲ್ಲೇ ಔಟಾದರೆ, ನಂತರ ರಿಷಬ್ ಪಂತ್ ಸಿಂಗಲ್‌ ಮಾತ್ರ ಕಲೆಹಾಕಿದರು. ಐಡೆನ್ ಮಾರ್ಕ್ರಾಮ್ ದೊಡ್ಡ ಶಾಟ್‌ಗೆ ಮುಂದಾಗಿ ವಿಕೆಟ್ ಒಪ್ಪಿಸಿದರು. ಈ ವೇಳೆ ಸುನಿಲ್ ನರೈನ್ ಅದ್ಭುತ ಬೌಲಿಂಗ್‌ ಪ್ರದರ್ಶನ ನೀಡಿ ಎರಡು ವಿಕೆಟ್‌ ಕಬಳಿಸಿ ಲಕ್ನೋ ತಂಡವನ್ನು ಕೇವಲ 1 ರನ್‌ಗೆ ಸೀಮಿತಗೊಳಿಸಿದರು. ಗೆಲುವಿಗೆ 2 ರನ್ ಗುರಿ ಪಡೆದ ಕೆಕೆಆರ್ ಪರ ರಿಂಕು ಸಿಂಗ್ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಪಂದ್ಯದಲ್ಲಿ ಲಕ್ನೋ ತಂಡದ ಬ್ಯಾಟಿಂಗ್‌ ಮಿಶ್ರ ಪ್ರದರ್ಶನ ಕಂಡಿತು. ಐಡೆನ್ ಮಾರ್ಕ್ರಾಮ್ 31, ನಾಯಕ ರಿಷಬ್ ಪಂತ್ 42, ಆಯುಷ್ ಬದೋನಿ 24, ಹಿಮ್ಮತ್ ಸಿಂಗ್ 19 ರನ್ ಗಳಿಸಿದರೂ, ಇತರ ಆಟಗಾರರ ವೈಫಲ್ಯ ತಂಡಕ್ಕೆ ಹೊಡೆತ ನೀಡಿತು. ಮತ್ತೊಂದೆಡೆ ಕೆಕೆಆರ್ ಆರಂಭದಲ್ಲಿ ಸಂಕಷ್ಟಕ್ಕೆ ಸಿಲುಕಿದರೂ, ಕ್ಯಾಮರೂನ್ ಗ್ರೀನ್ ಮತ್ತು ರಿಂಕು ಸಿಂಗ್ ಜೋಡಿ ತಂಡವನ್ನು ಪುನಶ್ಚೇತನಗೊಳಿಸಿತು. ಗ್ರೀನ್ 34 ರನ್ ಗಳಿಸಿದರೆ, ರಿಂಕು ಸಿಂಗ್ 51 ಎಸೆತಗಳಲ್ಲಿ 83 ರನ್ ಸಿಡಿಸಿ ತಂಡದ ಮೊತ್ತ 150ರ ಗಡಿ ದಾಟಲು ನೆರವಾದರು. ವಿಶೇಷವಾಗಿ ಕೊನೆಯ ಓವರ್‌ನಲ್ಲಿ ನಾಲ್ಕು ಸಿಕ್ಸರ್‌ ಸಿಡಿಸಿದ ರಿಂಕು ಅವರ ಸ್ಫೋಟಕ ಆಟವೇ ಪಂದ್ಯದಲ್ಲಿ ತಿರುವು ತಂದಿತು.

ನಮ್ಮ ಮೆಟ್ರೋದಲ್ಲಿ ನೆಟ್‌ವರ್ಕ್ ಸಮಸ್ಯೆ: ಆನ್‌ಲೈನ್ ಸೇವೆಗಳು ಸ್ಥಗಿತ, ಪ್ರಯಾಣಿಕರಿಗೆ ಸಂಕಷ್ಟ!

ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ನೆಟ್‌ವರ್ಕ್ ಸಮಸ್ಯೆ ತೀವ್ರಗೊಂಡಿದ್ದು, ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮೆಟ್ರೋ ಒಳಭಾಗದಲ್ಲಿ ಮೊಬೈಲ್ ಸಿಗ್ನಲ್ ಸಿಗದೇ ಆನ್‌ಲೈನ್ ವ್ಯವಹಾರಗಳು ಅಸ್ತವ್ಯಸ್ತವಾಗಿವೆ.

ಲಕ್ಷಾಂತರ ಮಂದಿ ಪ್ರತಿದಿನ ಪ್ರಯಾಣಿಸುವ ಮೆಟ್ರೋದಲ್ಲಿ ಇಂತಹ ಸಮಸ್ಯೆ ಕಾಣಿಸಿಕೊಂಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ವಿಶೇಷವಾಗಿ ಆರ್.ವಿ ರಸ್ತೆ ಮೆಟ್ರೋ ಸ್ಟೇಷನ್, ಜಯನಗರ ಸೇರಿದಂತೆ ಹಲವೆಡೆ ಸಿಗ್ನಲ್ ಸಮಸ್ಯೆ ತಲೆದೋರಿದೆ.

ಈ ಹಿನ್ನೆಲೆಯಲ್ಲಿ BMRCL ಪ್ರಯಾಣಿಕರಿಗೆ ನೋಟಿಸ್ ನೀಡಿದ್ದು, ಮೆಟ್ರೋ ನಿಲ್ದಾಣದ ಒಳಗೆ ಆನ್‌ಲೈನ್ ಪೇಮೆಂಟ್, ಬುಕ್ಕಿಂಗ್ ಅಥವಾ ಕಾರ್ಡ್ ಲೋಡಿಂಗ್ ಮಾಡಲು ಸಾಧ್ಯವಿಲ್ಲದ ಕಾರಣ, ಸ್ಟೇಷನ್ ಹೊರಗಡೆ ಈ ಕಾರ್ಯಗಳನ್ನು ಮುಗಿಸಿಕೊಳ್ಳುವಂತೆ ಸೂಚಿಸಿದೆ.

ನೆಟ್‌ವರ್ಕ್ ಇಲ್ಲದ ಕಾರಣ ಓಲಾ, ಊಬರ್ ಬುಕ್ಕಿಂಗ್ ಸೇರಿದಂತೆ ಹಲವು ಆನ್‌ಲೈನ್ ಸೇವೆಗಳು ಸ್ಥಗಿತಗೊಂಡಿದ್ದು, ಪ್ರಯಾಣಿಕರು ಸ್ಟೇಷನ್ ಹೊರಗೆ ಬಂದು ನೆಟ್‌ವರ್ಕ್ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಸಮಸ್ಯೆ ಕುರಿತು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ತಕ್ಷಣವೇ ನೆಟ್‌ವರ್ಕ್ ವ್ಯವಸ್ಥೆ ಸುಧಾರಿಸುವಂತೆ ಆಗ್ರಹಿಸುತ್ತಿದ್ದಾರೆ.

IPL 2026: ತವರಲ್ಲೇ ಸೈಲೆಂಟ್ ಆದ ಚೆನ್ನೈ; ಗುಜರಾತ್​ಗೆ 8 ವಿಕೆಟ್​ ಜಯ

0

ಐಪಿಎಲ್ 2026ರ 37ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು MA ಚಿದಂಬರಂ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಭರ್ಜರಿ ಜಯ ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಪವರ್‌ಪ್ಲೇನಲ್ಲಿ ಕೇವಲ 28 ರನ್ ಗಳಿಸಿದ CSK ಮೂರು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಒತ್ತಡಕ್ಕೆ ಒಳಗಾಯಿತು. ನಾಯಕ ರುತುರಾಜ್ ಗಾಯಕ್ವಾಡ್ ಹಾಗೂ ಶಿವಂ ದುಬೆ ನಡುವೆ 59 ರನ್‌ಗಳ ಜೊತೆಯಾಟ ನಡೆದರೂ, ಇತರೆ ಬ್ಯಾಟರ್‌ಗಳಿಂದ ದೊಡ್ಡ ಕೊಡುಗೆ ಬರಲಿಲ್ಲ. ಅಂತಿಮವಾಗಿ CSK 20 ಓವರ್‌ಗಳಲ್ಲಿ 158 ರನ್‌ಗಳಿಗೆ ಸೀಮಿತವಾಯಿತು. ಗಾಯಕ್ವಾಡ್ ಅಜೇಯ 74 ರನ್ ಗಳಿಸಿ ತಂಡದ ಪರ ಟಾಪ್ ಸ್ಕೋರರ್ ಆಗಿದ್ದರು.

ಗುರಿ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ಉತ್ತಮ ಆರಂಭ ಕಂಡಿತು. ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಮೊದಲ ವಿಕೆಟ್‌ಗೆ 58 ರನ್‌ಗಳ ಜೊತೆಯಾಟ ನೀಡಿದರು. ಗಿಲ್ 33 ರನ್ ಗಳಿಸಿ ಔಟಾದ ಬಳಿಕ ಸಾಯಿ ಸುದರ್ಶನ್ ಹಾಗೂ ಜೋಸ್ ಬಟ್ಲರ್ ಆಟವನ್ನು ನಿಯಂತ್ರಿಸಿದರು. ಸುದರ್ಶನ್ 46 ಎಸೆತಗಳಲ್ಲಿ 87 ರನ್‌ಗಳ ಭರ್ಜರಿ ಇನ್ನಿಂಗ್ಸ್ ಆಡಿದರೆ, ಬಟ್ಲರ್ ಅಜೇಯ 39 ರನ್ ಗಳಿಸಿದರು.

ಅಂತಿಮವಾಗಿ ಗುಜರಾತ್ ಟೈಟಾನ್ಸ್ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಈ ಜಯದೊಂದಿಗೆ ಗುಜರಾತ್ ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದರೆ, ಚೆನ್ನೈ ಸೂಪರ್ ಕಿಂಗ್ಸ್ 6ನೇ ಸ್ಥಾನಕ್ಕೆ ಕುಸಿದಿದೆ.

error: Content is protected !!