ಮಂಗಳೂರು: ಮಂಗಳೂರು-ಬೆಂಗಳೂರು ರೈಲಿನಲ್ಲಿ ಗರ್ಭಿಣಿಯೊಬ್ಬರು ಪ್ರಯಾಣಿಸುತ್ತಿದ್ದ ವೇಳೆ ಹೆರಿಗೆ ನೋವು ಕಾಣಿಸಿಕೊಂಡು, ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ ಅಪರೂಪದ ಘಟನೆ ನಡೆದಿದೆ.
ಮಂಗಳೂರಿನಿಂದ ಮೈಸೂರಿನತ್ತ ಪ್ರಯಾಣಿಸುತ್ತಿದ್ದ ತುಂಬು ಗರ್ಭಿಣಿಗೆ ಅಕಸ್ಮಿಕವಾಗಿ ಹೆರಿಗೆ ನೋವು ಶುರುವಾಯಿತು. ರೈಲಿನಲ್ಲಿ ವೈದ್ಯಕೀಯ ಸೌಲಭ್ಯಗಳಿಲ್ಲದ ಹಿನ್ನೆಲೆಯಲ್ಲಿ ಪ್ರಯಾಣಿಕರು ಸುಮಾರು 30 ನಿಮಿಷಗಳ ಕಾಲ ಸಹಾಯಕ್ಕಾಗಿ ಕಾಯ್ದರು. ನಂತರ ಪರಿಸ್ಥಿತಿಯ ತುರ್ತುತೆಯನ್ನು ಮನಗಂಡ ಮಹಿಳಾ ಪ್ರಯಾಣಿಕರು ಪರದೆ ಕಟ್ಟಿ, ತಮ್ಮದೇ ಧೈರ್ಯದಿಂದ ಹೆರಿಗೆ ಮಾಡಿಸಿದರು.
ಈ ವೇಳೆ ಗರ್ಭಿಣಿಗೆ ತೀವ್ರ ರಕ್ತಸ್ರಾವ ಉಂಟಾದರೂ, ಮಹಿಳೆಯರ ತಕ್ಷಣದ ನೆರವಿನಿಂದ ಸುರಕ್ಷಿತವಾಗಿ ಹೆರಿಗೆ ನೆರವೇರಿತು. ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ ರೋಡ್ನಲ್ಲಿ ರೈಲು ನಿಲ್ಲಿಸಿ ತಾಯಿ ಮತ್ತು ಮಗುವನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
ಸದ್ಯ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.



