Home Blog Page 104

ದೇಣಿಗೆ ಹಣದಲ್ಲಿ ಐಷಾರಾಮಿ ಬದುಕು! ರಾಮಮಂದಿರ ಹಗರಣದಲ್ಲಿ ಯುವ ಉದ್ಯೋಗಿ ಸೇರಿ 7 ಆರೋಪಿಗಳ ಆಸ್ತಿ ತನಿಖೆ

0

ಅಯೋಧ್ಯೆ: ರಾಮಮಂದಿರ ದೇಣಿಗೆ ಹಣವನ್ನು ಅಕ್ರಮವಾಗಿ ದುರುಪಯೋಗಪಡಿಸಿಕೊಂಡ ಹಗರಣದ ತನಿಖೆ ಮುಂದುವರಿದಿದ್ದು, ಆರೋಪಿಗಳ ವಿರುದ್ಧ ಆಸ್ತಿ ಮುಟ್ಟುಗೋಲು ಕ್ರಮಗಳನ್ನು ಪೊಲೀಸರು ಆರಂಭಿಸಿದ್ದಾರೆ. ಪ್ರಕರಣದಲ್ಲಿ 22 ವರ್ಷದ ಬ್ಯಾಂಕ್ ಔಟ್‌ಸೋರ್ಸಿಂಗ್ ಉದ್ಯೋಗಿ ಅನುಕಲ್ಪ್ ಮಿಶ್ರಾ ಪ್ರಮುಖ ಪಾತ್ರ ವಹಿಸಿದ್ದಾನೆ ಎಂಬುದು ತನಿಖೆಯಿಂದ ಸ್ಪಷ್ಟವಾಗಿದೆ.

ಕೇವಲ ₹15,000 ಮಾಸಿಕ ವೇತನ ಹೊಂದಿದ್ದ ಈತ, ಕೆಲವೇ ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು ಗಳಿಸಿರುವುದು ತನಿಖಾಧಿಕಾರಿಗಳನ್ನು ಶಾಕ್‌ಗೆ ಒಳಪಡಿಸಿದೆ. ಅಯೋಧ್ಯೆಯಲ್ಲಿ ₹65 ಲಕ್ಷ ಮೌಲ್ಯದ ಮನೆ, ಗ್ರಾಮದಲ್ಲಿ ಫಾರ್ಮ್‌ಹೌಸ್, ಹೊಸ ವಾಹನಗಳು ಹಾಗೂ ದುಬಾರಿ ಬೈಕ್ ಖರೀದಿ ಸೇರಿದಂತೆ ಹಲವು ಆಸ್ತಿಗಳು ಈತನ ಹೆಸರಿನಲ್ಲಿ ಪತ್ತೆಯಾಗಿವೆ.

ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ತನ್ನ ಸ್ವಗ್ರಾಮದಲ್ಲಿ ಭಾರಿ ವೆಚ್ಚದ 7 ದಿನಗಳ ಧಾರ್ಮಿಕ ಕಾರ್ಯಕ್ರಮವನ್ನೂ ನಡೆಸಿದ್ದಾನೆ. ಇವೆಲ್ಲವೂ ದೇವಾಲಯದ ದೇಣಿಗೆ ಹಣದ ದುರುಪಯೋಗದಿಂದಲೇ ನಡೆದಿದೆ ಎಂಬ ಶಂಕೆ ಬಲವಾಗಿದೆ.

ಭಾನುವಾರ ನಡೆಸಿದ ದಾಳಿಯಲ್ಲಿ ಆತನ ಮನೆಯಿಂದ ಪ್ರಮುಖ ಆಸ್ತಿ ದಾಖಲೆಗಳು ವಶಪಡಿಸಿಕೊಳ್ಳಲಾಗಿದೆ. ಬ್ಯಾಂಕ್ ಖಾತೆಗಳು, ಹಣಕಾಸು ವಹಿವಾಟು ದಾಖಲೆಗಳು ಹಾಗೂ ಆಸ್ತಿ ಹೂಡಿಕೆಗಳ ಮೂಲದ ಕುರಿತು ತೀವ್ರ ತನಿಖೆ ನಡೆಯುತ್ತಿದೆ.

ಪ್ರಕರಣದಲ್ಲಿ ಬಂಧಿತ ಇತರ 7 ಆರೋಪಿಗಳ ಚರ-ಸ್ಥಿರ ಆಸ್ತಿಗಳನ್ನೂ ಪರಿಶೀಲಿಸಲಾಗುತ್ತಿದ್ದು, ಹಣದ ಹರಿವು (Money Trail) ಪತ್ತೆಹಚ್ಚಲು ವಿಶೇಷ ತಂಡ ಕಾರ್ಯನಿರ್ವಹಿಸುತ್ತಿದೆ. ಅಕ್ರಮ ಸಾಬೀತಾದರೆ ಎಲ್ಲಾ ಆಸ್ತಿಗಳನ್ನು ಸರ್ಕಾರ ಜಪ್ತಿ ಮಾಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟನಲ್ ರಸ್ತೆಗಳಿಗೆ ಸಾವಿರಾರು ಕೋಟಿ, ಬಿಎಂಟಿಸಿಗೆ ಇಲ್ಲವೇ?:  4,500 ಇ-ಬಸ್ ವಿಳಂಬದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ

ಬೆಂಗಳೂರು: ಬಿಎಂಟಿಸಿಗೆ ಕೇಂದ್ರ ಸರ್ಕಾರ ಮಂಜೂರು ಮಾಡಿರುವ 4,500 ಎಲೆಕ್ಟ್ರಿಕ್ ಬಸ್‌ಗಳ ನಿಯೋಜನೆಗೆ ರಾಜ್ಯ ಸರ್ಕಾರ ಕ್ಯಾಬಿನೆಟ್ ಅನುಮೋದನೆ ನೀಡದೇ ವಿಳಂಬ ಮಾಡುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

ಈ ಯೋಜನೆಗಾಗಿ ರಾಜ್ಯ ಸರ್ಕಾರ ನೀಡಬೇಕಿರುವ ಹಣ ಅತ್ಯಲ್ಪ ಪ್ರಮಾಣದಲ್ಲಿದೆ. ಆದರೂ ಸಾರ್ವಜನಿಕ ಸಾರಿಗೆ ಬಲಪಡಿಸುವ ಮಹತ್ವದ ಯೋಜನೆಗೆ ಕಾಂಗ್ರೆಸ್ ಸರ್ಕಾರ ಒಪ್ಪಿಗೆ ನೀಡುತ್ತಿಲ್ಲ ಎಂದು ಅವರು ಹೇಳಿದರು.

“ವಿಐಪಿ ಯೋಜನೆಗಳಾದ ಟನಲ್ ರಸ್ತೆಗಳಿಗಾಗಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಲು ಸರ್ಕಾರ ಸಿದ್ಧವಾಗಿದೆ. ಆದರೆ ಪ್ರತಿದಿನ ಬಿಎಂಟಿಸಿ ಬಸ್ ಹಾಗೂ ಮೆಟ್ರೋ ಬಳಸುವ ಸಾಮಾನ್ಯ ಜನರಿಗಾಗಿ ಹಣ ಖರ್ಚು ಮಾಡಲು ಹಿಂದೇಟು ಹಾಕುತ್ತಿದೆ” ಎಂದು ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸರ್ಕಾರ ಸಾಮಾನ್ಯ ನಾಗರಿಕರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ನೋಡುತ್ತಿದೆ. ಮಹಿಳೆಯರು, ಪಾದಚಾರಿಗಳು ಮತ್ತು ಸಾರ್ವಜನಿಕ ಸಾರಿಗೆ ಬಳಕೆದಾರರು ಸರ್ಕಾರದ ಆದ್ಯತೆಯಲ್ಲಿ ಇಲ್ಲ ಎಂದು ಆರೋಪಿಸಿದರು.

ಬನಶಂಕರಿ ಸ್ಕೈವಾಕ್ ಕಾಮಗಾರಿ ಸ್ಥಗಿತಗೊಂಡಿರುವುದಕ್ಕೂ ಅವರು ಆಕ್ರೋಶ ವ್ಯಕ್ತಪಡಿಸಿದರು. ಉಪಮುಖ್ಯಮಂತ್ರಿಯಾಗಿದ್ದಾಗ ಡಿ.ಕೆ. ಶಿವಕುಮಾರ್ ಸ್ವತಃ ಗುದ್ದಲಿ ಪೂಜೆ ನೆರವೇರಿಸಿದ್ದ ಯೋಜನೆಯನ್ನು ಈಗ ಅರ್ಧಕ್ಕೆ ನಿಲ್ಲಿಸಲಾಗಿದೆ ಎಂದು ದೂರಿದರು.

8 ಅಡಿ ಎತ್ತರದಿಂದ ಹೆಡ್ ಡೈವ್: 4 ಅಡಿ ಆಳದ ಪೂಲ್‌ನಲ್ಲಿ ಯುವಕನ ದಾರುಣ ಅಂತ್ಯ, ವಿಡಿಯೋ ವೈರಲ್

0

ಸಿಂಧುದುರ್ಗ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ರೆಸಾರ್ಟ್‌ನಲ್ಲಿ ನಡೆದ ನಿರ್ಲಕ್ಷ್ಯದ ಸಾಹಸ ಯುವಕನ ಜೀವ ಬಲಿಯಾಗಿಸಿದೆ. ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ 25 ವರ್ಷದ ಶ್ರೇಣಿಕ್ ಮಿಲಿಂದ್ ಟಾಕಳೆ ಈಜುಕೊಳದ ಆಳ ತಿಳಿಯದೆ ಹೆಡ್ ಡೈವ್ ಮಾಡಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸ್ನೇಹಿತರ ಸಂಭ್ರಮದ ನಡುವೆ ಸುಮಾರು 8ರಿಂದ 10 ಅಡಿ ಎತ್ತರದ ಗೋಡೆಯಿಂದ ಈಜುಕೊಳಕ್ಕೆ ತಲೆಕೆಳಗಾಗಿ ಹಾರಿದ ಶ್ರೇಣಿಕ್, ಕೇವಲ ನಾಲ್ಕು ಅಡಿ ಆಳವಿದ್ದ ಮಕ್ಕಳ ಈಜುಕೊಳಕ್ಕೆ ಬಿದ್ದಿದ್ದಾರೆ. ಪರಿಣಾಮ ಅವರ ತಲೆ ನೇರವಾಗಿ ಕಾಂಕ್ರೀಟ್ ನೆಲಕ್ಕೆ ಅಪ್ಪಳಿಸಿ ಮಾರಣಾಂತಿಕ ಗಾಯವಾಗಿದೆ.

ದುರಂತದ ದೃಶ್ಯ ಸ್ನೇಹಿತನ ಮೊಬೈಲ್‌ನಲ್ಲಿ ಸೆರೆ ಸಿಕ್ಕಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಗಂಭೀರವಾಗಿ ಗಾಯಗೊಂಡ ಶ್ರೇಣಿಕ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಘಟನೆ ಸಂಬಂಧ ಮಾಲ್ವಣ್ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಗಣೇಶ್ ಮಾನೆ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ. ಇದೇ ವೇಳೆ ರೆಸಾರ್ಟ್‌ಗಳಲ್ಲಿ ಅಪಾಯಕಾರಿ ಸಾಹಸಗಳಿಗೆ ಕೈಹಾಕದಂತೆ ಪೊಲೀಸರು ಪ್ರವಾಸಿಗರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

‘ನನ್ನನ್ನು ರಕ್ಷಿಸುತ್ತಿದ್ದ ವ್ಯಕ್ತಿಯನ್ನು ಕಳೆದುಕೊಂಡಿದ್ದೇನೆ’; ವೈಶಾಕ್ ಸಾವಿನ ಕುರಿತು ಕೃಷಿ ತಾಪಂಡ ಭಾವುಕ

ಆಪ್ತ ಸ್ನೇಹಿತ ವೈಶಾಕ್ ಆತ್ಮಹತ್ಯೆ ಪ್ರಕರಣದ ಬಳಿಕ ನಟಿ ಕೃಷಿ ತಾಪಂಡ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿದ್ದು, ನಿರಂತರ ಊಹಾಪೋಹಗಳು ಮತ್ತು ವದಂತಿಗಳನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿರುವ ಸರಣಿ ಪೋಸ್ಟ್‌ಗಳಲ್ಲಿ ಮಾತನಾಡಿರುವ ಅವರು, “ನಾನು ಇನ್ನೂ ಈ ಆಘಾತದಿಂದ ಹೊರಬಂದಿಲ್ಲ. ನನ್ನನ್ನು ಸದಾ ರಕ್ಷಿಸುತ್ತಿದ್ದ ವ್ಯಕ್ತಿಯನ್ನು ಕಳೆದುಕೊಂಡ ನೋವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಸಮಯದಲ್ಲಿ ಸಾರ್ವಜನಿಕ ಹೇಳಿಕೆ ನೀಡುವ ಶಕ್ತಿಯೂ ನನ್ನಲ್ಲಿಲ್ಲ” ಎಂದು ಬರೆದುಕೊಂಡಿದ್ದಾರೆ.

ವೈಶಾಕ್ ಸಾವಿನ ಬಳಿಕ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕುಟುಂಬ ಮತ್ತು ಸ್ನೇಹಿತರು ದುಃಖದಲ್ಲಿರುವ ಸಂದರ್ಭದಲ್ಲೂ ಕೆಲವರು ಸಂವೇದನಾಶೀಲತೆ ಮರೆತು ಕೇವಲ ಪ್ರತಿಕ್ರಿಯೆಗಾಗಿ ಒತ್ತಡ ಹೇರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಒಂದು ಕುಟುಂಬ ತನ್ನ ಮಗನನ್ನು ಕಳೆದುಕೊಂಡಿದೆ. ಸ್ನೇಹಿತರು ತಮ್ಮ ಆತ್ಮೀಯನನ್ನು ಕಳೆದುಕೊಂಡಿದ್ದಾರೆ. ಇಂತಹ ಸಮಯದಲ್ಲಿ ವದಂತಿಗಳು ಮತ್ತು ಆಧಾರರಹಿತ ಚರ್ಚೆಗಳು ನಮ್ಮ ನೋವನ್ನು ಇನ್ನಷ್ಟು ಹೆಚ್ಚಿಸುತ್ತವೆ. ದಯವಿಟ್ಟು ನಮಗೆ ಶಾಂತಿಯಿಂದ ದುಃಖಿಸಲು ಅವಕಾಶ ನೀಡಿ” ಎಂದು ಅವರು ವಿನಂತಿಸಿದ್ದಾರೆ.

ಇದೇ ವೇಳೆ ತಮ್ಮ ಪರವಾಗಿ ನಿಂತು ಪ್ರಾರ್ಥನೆ, ಪ್ರೀತಿ ಮತ್ತು ಬೆಂಬಲ ವ್ಯಕ್ತಪಡಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿರುವ ಕೃಷಿ, ಕೊನೆಯ ಸಂದೇಶದಲ್ಲಿ “ಬದುಕಲು ಕಾರಣ ನೀಡಲು ಸಾಧ್ಯವಾಗದಿದ್ದರೂ, ಯಾರೊಬ್ಬರ ಭರವಸೆಯನ್ನೂ ಕಸಿಯಬೇಡಿ. ದಯವಿಟ್ಟು ದಯೆ ಮತ್ತು ಮಾನವೀಯತೆಯನ್ನು ಆರಿಸಿ” ಎಂದು ಭಾವುಕ ಮನವಿ ಮಾಡಿದ್ದಾರೆ.

ರಥದ ಚಕ್ರ ವಿವಾದಕ್ಕೆ ಕ್ರಿಮಿನಲ್ ಟ್ವಿಸ್ಟ್..! ಕೋಮು ಸೌಹಾರ್ದಕ್ಕೆ ಧಕ್ಕೆ ಆರೋಪ; ರಾಜು ಖಾನಪ್ಪನವರ ಸೇರಿ 12 ಜನರ ವಿರುದ್ಧ ಕೇಸ್

0

ಗದಗ: ದೇವಸ್ಥಾನದ ರಥಕ್ಕೆ ಮುಸ್ಲಿಂ ಮುಖಂಡರು ದೇಣಿಗೆಯಾಗಿ ನೀಡಿದ್ದ ಚಕ್ರದ ವಿವಾದ ಇದೀಗ ಕ್ರಿಮಿನಲ್ ಪ್ರಕರಣದ ಹಂತ ತಲುಪಿದೆ. ಪತ್ರಿಕಾಗೋಷ್ಠಿಯಲ್ಲಿ ನೀಡಿದ ಹೇಳಿಕೆಗಳು ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡಿ, ಎರಡು ಸಮುದಾಯಗಳ ನಡುವೆ ದ್ವೇಷ ಹಾಗೂ ಉದ್ವಿಗ್ನತೆ ಸೃಷ್ಟಿಸುವ ಉದ್ದೇಶ ಹೊಂದಿದ್ದವು ಎಂಬ ಆರೋಪದಡಿ ಗದಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದಲ್ಲಿ ರಾಜು ಖಾನಪ್ಪನವರ, ಮಹೇಶ್ ರೋಖಡೆ, ಶಿವಕುಮಾರ ಮಿಟ್ಟಿಮಠ, ಶಿವಯೋಗಿ ಹಿರೇಮಠ, ಬಿ.ಕೆ. ಕಾಳೆ, ಶಂಕರ ಕಾರದಕಟ್ಟಿ, ವೆಂಕಟೇಶ ದೊಡ್ಡಮನಿ, ಈರಪ್ಪ ಹೆಬಸೂರ, ವಿಶಾಲ್ ಗೋಕಾವಿ, ಆನಂದ ಹರಿಕೇರಿ, ಸತೀಶ ಕುಂಬಾರ ಹಾಗೂ ಸಂಜು ಚಟ್ಟಿ ಅವರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 196(1), 196(2), 197(1), 299, 300 ಹಾಗೂ 353(1) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜೂನ್ 22ರಂದು ಗದಗ-ಮುಳಗುಂದ ರಸ್ತೆಯ ಹುಡ್ಕೋ ಕಾಲೋನಿಯ ಬಳಿ ಇರುವ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಗಳು ಮಾತನಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ವೇಳೆ ಮುಸ್ಲಿಂ ಮುಖಂಡ ಫೀರಸಾಬ್ ಕೌತಾಳ ಅವರು ಶ್ರೀ ವೀರೇಶ್ವರ ಪುಣ್ಯಾಶ್ರಮದ ರಥಕ್ಕೆ ಚಕ್ರವನ್ನು ದೇಣಿಗೆಯಾಗಿ ನೀಡಿರುವುದು, ಅದರ ಮೇಲೆ ತಮ್ಮ ಪತ್ನಿಯ ಹೆಸರನ್ನು ಬರೆಯಿಸಿರುವುದು ಹಾಗೂ ಗಂಗಾಪುರ ಪೇಟೆಯ ಶ್ರೀ ದುರ್ಗಾದೇವಿ ದೇವಸ್ಥಾನದ ನೂತನ ರಥಕ್ಕೂ ದೇಣಿಗೆ ನೀಡಿರುವ ವಿಚಾರವನ್ನು ಪ್ರಸ್ತಾಪಿಸಲಾಗಿದೆ.

ಈ ಸಂದರ್ಭದಲ್ಲಿ ದೇವಸ್ಥಾನದ ರಥದ ಮೇಲೆ ಮುಸ್ಲಿಂ ಮಹಿಳೆಯ ಹೆಸರನ್ನು ಬರೆಯುವುದು ಅಕ್ಷಮ್ಯ ಅಪರಾಧ ಎಂದು ಹೇಳುವ ಮೂಲಕ ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ದ್ವೇಷ, ವೈಮನಸ್ಸು ಮತ್ತು ಉದ್ವಿಗ್ನತೆ ಉಂಟಾಗುವ ರೀತಿಯಲ್ಲಿ ಭಾಷಣ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಅಲ್ಲದೆ, ಈ ಹೇಳಿಕೆಗಳ ವಿಡಿಯೊಗಳನ್ನು ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿ, ಮಠ ಹಾಗೂ ದೇವಸ್ಥಾನಗಳ ಕುರಿತು ಅವಹೇಳನಕಾರಿ ಹಾಗೂ ಪ್ರಚೋದನಕಾರಿ ಹೇಳಿಕೆಗಳನ್ನು ಹರಿಬಿಟ್ಟಿದ್ದಾರೆ. ಈ ಕೃತ್ಯದಿಂದ ಸಾರ್ವಜನಿಕ ಶಾಂತಿ ಮತ್ತು ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟುಮಾಡುವ ಉದ್ದೇಶ ಹೊಂದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕಣಗಿನಹಾಳ ಗ್ರಾಮದ ರೈತ ಕಳಕಪ್ಪ ಬಸಪ್ಪ ನೀರಲಗಿ ಅವರು ನೀಡಿದ ದೂರಿನ ಮೇರೆಗೆ ಗದಗ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಚಿತ್ರದುರ್ಗದ ಗೊಡಬನಹಾಳ್‌ನಲ್ಲಿ ಸೆರೆಸಿಕ್ಕ ಚಿರತೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು!

ಚಿತ್ರದುರ್ಗ: ಗೊಡಬನಹಾಳ್ ಗ್ರಾಮದಲ್ಲಿ ಅರಣ್ಯ ಇಲಾಖೆಗೆ ಚಿರತೆ ಸೆರೆ ಸಿಕ್ಕಿರುವ ಘಟನೆ ನಡೆದಿದೆ.

ಗ್ರಾಮದ ಎರೆ ಹೊಲದಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆ ಬೆಳಿಗ್ಗೆಯಿಂದಲೇ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೆರೆ ಕಾರ್ಯಾಚರಣೆ ಆರಂಭಿಸಿದ್ದರು.

ಸಂಜೆ ವೇಳೆಗೆ ಅರವಳಿಕೆ ಮದ್ದು ನೀಡಿ ಚಿರತೆಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.

ಚಿರತೆ ಸೆರೆ ಸಿಕ್ಕ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಗ್ರಾಮಸ್ಥರು ಜಮಾಯಿಸಿದ್ದು, ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಚಿರತೆ ಸುರಕ್ಷಿತವಾಗಿ ಸೆರೆ ಸಿಕ್ಕಿದ್ದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಅಧಿಕಾರಿಗಳು ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ.

ಧಾರವಾಡದಲ್ಲಿ ಸಾಧಾರಣ ಮಳೆ: ರೈತರ ಮೊಗದಲ್ಲಿ ಮಂದಹಾಸ!

ಧಾರವಾಡ: ಕಳೆದ ಐದು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದರೂ ಮಳೆ ಸುರಿಯದೆ ಆತಂಕದಲ್ಲಿದ್ದ ಧಾರವಾಡ ಜಿಲ್ಲೆಯ ರೈತರಿಗೆ ಭಾನುವಾರ ಮಧ್ಯಾಹ್ನ ಹಾಗೂ ಸಂಜೆ ಸುರಿದ ಸಾಧಾರಣ ಮಳೆ ಸ್ವಲ್ಪ ಮಟ್ಟಿನ ನೆಮ್ಮದಿ ತಂದಿದೆ.

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ಕೆಲಕಾಲ ಜನಜೀವನ ಅಸ್ತವ್ಯಸ್ತಗೊಂಡಿತು. ಆದರೆ ಈ ಮಳೆಯಿಂದ ರೈತ ಸಮುದಾಯದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ.

ಈಗಾಗಲೇ ಹೊಲಗಳಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಳಿಸಿರುವ ರೈತರು ಮಳೆಗಾಗಿ ಕಾತರದಿಂದ ಕಾಯುತ್ತಿದ್ದರು. ಮಳೆ ವಿಳಂಬವಾದರೆ ಬಿತ್ತಿದ ಬೀಜ ಮೊಳಕೆ ಒಡೆಯದೆ ನಷ್ಟವಾಗುವ ಆತಂಕದಲ್ಲಿದ್ದರು. ಇಂದಿನ ಮಳೆ ಆ ಆತಂಕವನ್ನು ಕೆಲಮಟ್ಟಿಗೆ ಕಡಿಮೆ ಮಾಡಿದೆ.

ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಸುಮಾರು 2 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ ಎಂದು ಅಂದಾಜಿಸಲಾಗಿದೆ. ಮುಂದಿನ ದಿನಗಳಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಮುಂದುವರಿದರೆ ಉತ್ತಮ ಫಸಲು ಕೈ ಸೇರುವ ನಿರೀಕ್ಷೆಯಿದೆ.

ಸದ್ಯ ಸುರಿದ ಮಳೆಯಿಂದ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಮುಂದಿನ ಮಳೆಯ ಮೇಲೆ ಕೃಷಿ ಭವಿಷ್ಯ ಅವಲಂಬಿತವಾಗಿದೆ.

ಸೌದಿ ಅರೇಬಿಯಾದಲ್ಲಿ ಹೆಲಿಕಾಪ್ಟರ್ ಪತನ: 14 ಮಂದಿ ಸಾವು!

0

ರಿಯಾಧ್: ಸೌದಿ ಅರೇಬಿಯಾದ ರಾಸ್ ತನೂರಾ ನಗರದಲ್ಲಿ ಸೌದಿ ಅರಾಮ್ಕೊ ತೈಲ ಕಂಪನಿಗೆ ಸೇರಿದ ಹೆಲಿಕಾಪ್ಟರ್ ಭೀಕರ ಅಪಘಾತಕ್ಕೀಡಾಗಿ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದಾರೆ.

ಭಾನುವಾರ ನಡೆದ ಈ ದುರಂತದಲ್ಲಿ ಹೆಲಿಕಾಪ್ಟರ್ ಸಂಪೂರ್ಣವಾಗಿ ಪತನಗೊಂಡಿದ್ದು, ಎಲ್ಲರೂ ಸೌದಿ ನಾಗರಿಕರೇ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಆದರೆ ಮೃತರ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

ಅಪಘಾತದ ನಿಖರ ಸಮಯ ಮತ್ತು ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ಹಾಗೂ ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ಈ ಕುರಿತು ತನಿಖೆ ಮುಂದುವರಿದಿದೆ.

ಸೌದಿ ಇಂಧನ ಸಚಿವಾಲಯ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದೆ.

ರಾಸ್ ತನೂರಾ ಪ್ರದೇಶವು ಸೌದಿ ಅರಾಮ್ಕೊ ಸಂಸ್ಥೆಯ ಪ್ರಮುಖ ತೈಲ ಕಾರ್ಯಾಚರಣೆ ಕೇಂದ್ರವಾಗಿದ್ದು, ವಿಶ್ವದ ಪ್ರಮುಖ ತೈಲ ರಫ್ತು ಟರ್ಮಿನಲ್‌ಗಳಲ್ಲಿ ಒಂದಾಗಿದೆ.

ಭಾರೀ ಮಳೆಗೆ ಕಂಗೆಟ್ಟ ಉತ್ತರ ಕನ್ನಡ: ಗೋಕರ್ಣ ಬೀದಿಗಳು ಹಳ್ಳಗಳಂತೆ ಜಲಾವೃತ!

ಉತ್ತರ ಕನ್ನಡ: ಜಿಲ್ಲೆಯ ಕರಾವಳಿ ಭಾಗದಲ್ಲಿ ಕೇವಲ ಒಂದು ದಿನದ ಭಾರೀ ಮಳೆಯೇ ವ್ಯಾಪಕ ಅವಾಂತರವನ್ನು ಸೃಷ್ಟಿಸಿದೆ.

ನಿರಂತರ ಮಳೆಯ ಪರಿಣಾಮ ಪ್ರಸಿದ್ಧ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೂ ನೀರು ನುಗ್ಗುವ ಆತಂಕ ಎದುರಾಗಿದ್ದು, ಭಕ್ತರ ಸುರಕ್ಷತೆ ದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಮಳೆ ನೀರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಗರ್ಭಗುಡಿಗೆ ನೀರು ನುಗ್ಗುವ ಸಾಧ್ಯತೆ ಇರುವುದರಿಂದ ಆತ್ಮಲಿಂಗದ ಸ್ಪರ್ಶ ದರ್ಶನಕ್ಕೆ ಭಕ್ತರಿಗೆ ತಾತ್ಕಾಲಿಕವಾಗಿ ನಿರ್ಬಂಧ ಹೇರಲಾಗಿದೆ. ಇದರಿಂದ ದೂರದೂರಿನಿಂದ ಆಗಮಿಸುತ್ತಿದ್ದ ಭಕ್ತರು ನಿರಾಶರಾಗುವ ಪರಿಸ್ಥಿತಿ ಉಂಟಾಗಿದೆ.

ಸ್ಥಳೀಯ ಮೂಲಗಳ ಪ್ರಕಾರ, ಚರಂಡಿ ವ್ಯವಸ್ಥೆ ಸರಿಯಾಗಿ ಸ್ವಚ್ಛಗೊಳಿಸದಿರುವುದು ಮತ್ತು ನೀರು ಹರಿವಿನ ಸರಿಯಾದ ವ್ಯವಸ್ಥೆ ಇಲ್ಲದಿರುವುದರಿಂದ ಗೋಕರ್ಣ ಪಟ್ಟಣದ ಪ್ರಮುಖ ಬೀದಿಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ರಸ್ತೆಗಳು ಹಳ್ಳಗಳಂತಾಗಿ ನೀರು ತುಂಬಿಕೊಂಡಿರುವುದರಿಂದ ವ್ಯಾಪಾರ ವಹಿವಾಟಿಗೂ ಅಡ್ಡಿಯಾಗಿದೆ. ಜೊತೆಗೆ ಮಧ್ಯಾಹ್ನ 12:30ಕ್ಕೆ ನಡೆಯುವ ನಿತ್ಯ ಮಹಾಪೂಜೆಯಲ್ಲೂ ವ್ಯತ್ಯಯ ಉಂಟಾಗಿದೆ.

ಇನ್ನೊಂದೆಡೆ, ಕುಮಟಾ ತಾಲೂಕಿನ ವಾಲಗಳ್ಳಿ ಸಮೀಪ ಕುಮಟಾ–ಸಿದ್ದಾಪುರ ಸಂಪರ್ಕಿಸುವ ರಾಜ್ಯ ಹೆದ್ದಾರಿ ಸಂಪೂರ್ಣವಾಗಿ ಜಲಾವೃತವಾಗಿದೆ. ರಸ್ತೆಯ ಮೇಲೆ ನದಿಯಂತೆ ನೀರು ಹರಿಯುತ್ತಿರುವ ದೃಶ್ಯ ಕಂಡು ವಾಹನ ಸವಾರರು ಆತಂಕದಲ್ಲಿ ಸಂಚರಿಸುವಂತಾಗಿದೆ. ಹಲವು ದ್ವಿಚಕ್ರ ಹಾಗೂ ಲಘು ವಾಹನಗಳು ನೀರಿನಲ್ಲಿ ಸಿಲುಕಿಕೊಂಡಿರುವ ಮಾಹಿತಿ ಕೂಡ ಬಂದಿದೆ.

ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು, ವಾಹನ ಸವಾರರು ಜೀವದ ಹಂಗು ತೊರೆದು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತುರ್ತು ಸೇವಾ ವಾಹನಗಳ ಸಂಚಾರಕ್ಕೂ ತೊಂದರೆ ಉಂಟಾಗಿದೆ.

ಸ್ಥಳೀಯರು ಮತ್ತು ಸಾರ್ವಜನಿಕರು ತಕ್ಷಣದ ನೀರು ಹರಿವು ವ್ಯವಸ್ಥೆ, ಚರಂಡಿ ಸ್ವಚ್ಛತೆ ಹಾಗೂ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಮಳೆ ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತವಾಗಿದೆ.

ರಾಯಚೂರಿನಲ್ಲಿ ಭೀಕರ ದುರಂತ: ಕಟ್ಟಡದ ಮೆಟ್ಟಿಲು-ಗೋಡೆ ಕುಸಿದು ಇಬ್ಬರು ಯುವಕರು ಸಾವು

ರಾಯಚೂರು: ಜಿಲ್ಲೆಯ ದೇವದುರ್ಗ ಪಟ್ಟಣದ ಬಸ್ ನಿಲ್ದಾಣದ ಸಮೀಪ ಜನನಿಬಿಡ ಪ್ರದೇಶದಲ್ಲಿದ್ದ ವಾಣಿಜ್ಯ ಸಂಕೀರ್ಣದ ಮೆಟ್ಟಿಲು ಹಾಗೂ ಗೋಡೆ ಏಕಾಏಕಿ ಕುಸಿದು ಬಿದ್ದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಮೃತರನ್ನು ನಾಗರಾಜ್ ಕ್ಯಾದಿಗೇರಾ (26) ಹಾಗೂ ರವಿಕುಮಾರ್ (27) ಎಂದು ಗುರುತಿಸಲಾಗಿದೆ.

ಗಾಯಗೊಂಡಿರುವ ಉಮೇಶ್ ಮತ್ತು ಅಭಿಷೇಕ್ ಅವರನ್ನು ತಕ್ಷಣ ದೇವದುರ್ಗ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರತಿನಿತ್ಯದಂತೆ ವಾಣಿಜ್ಯ ಸಂಕೀರ್ಣದಲ್ಲಿನ ಅಂಗಡಿಗಳಲ್ಲಿ ವ್ಯಾಪಾರ-ವಹಿವಾಟು ನಡೆಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಏಕಾಏಕಿ ಕಟ್ಟಡದ ಮೆಟ್ಟಿಲು ಹಾಗೂ ಗೋಡೆ ಕುಸಿದು ಬಿದ್ದಿದ್ದು, ಅದೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನಾಲ್ವರು ಯುವಕರು ಅವಶೇಷಗಳಡಿ ಸಿಲುಕಿಕೊಂಡರು. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡರು.

ಮಾಹಿತಿ ತಿಳಿಯುತ್ತಿದ್ದಂತೆ ದೇವದುರ್ಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದೇ ವೇಳೆ ದೇವದುರ್ಗ ಶಾಸಕಿ ಕರೆಮ್ಮಾ ನಾಯಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಕುರಿತು ಪೊಲೀಸರಿಂದ ಮಾಹಿತಿ ಪಡೆದು, ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.