Home Blog Page 108

ಕಷ್ಟದಲ್ಲಿರುವವರಿಗೆ ನೆರವಾಗುವುದೇ ನಿಜವಾದ ಧರ್ಮ: ಬೂದೀಶ್ವರ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಒಕ್ಕಲಗೇರಿ ಓಣಿಯ ಗ್ರಾಮ ದೇವತೆಗಳಾದ ಶ್ರೀ ದ್ಯಾಮವ್ವ ಹಾಗೂ ಶ್ರೀ ದುರ್ಗಮ್ಮ ದೇವಿಯರ ಹರಿಜಾತ್ರಾ ಮಹೋತ್ಸವದ ಮೊದಲ ದಿನದ ಸಭಾ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಹೊಸಳ್ಳಿ ಬೂದೀಶ್ವರ ಮಠದ ಪೂಜ್ಯ ಅಭಿನವ ಜಗದ್ಗುರು ಬೂದೀಶ್ವರ ಮಹಾಸ್ವಾಮಿಗಳು ಮಾತನಾಡಿ, ಹುಟ್ಟು-ಸಾವು ಪ್ರಕೃತಿಯ ನಿಯಮವಾಗಿದ್ದು, ಇವೆರಡರ ನಡುವಿನ ಬದುಕನ್ನು ಸಾರ್ಥಕಪಡಿಸಿಕೊಳ್ಳುವುದು ಮನುಷ್ಯನ ಕರ್ತವ್ಯ ಎಂದರು.

ಮನುಷ್ಯನಿಗೆ 84 ಲಕ್ಷ ಜೀವ ರಾಶಿಗಳಿಗಿಂತ ಭಿನ್ನವಾದ ಅರಿವಿನ ಶಕ್ತಿ ದೊರೆತಿದೆ. ಈ ಅರಿವನ್ನು ಸದುಪಯೋಗಪಡಿಸಿಕೊಂಡು ಮಾನವ ಜನ್ಮವನ್ನು ಸಾರ್ಥಕಗೊಳಿಸಬೇಕು. ದೇವರು ನಾವು ಮಾಡುವ ಪೂಜೆಯನ್ನು ಮಾತ್ರ ನೋಡುವುದಿಲ್ಲ; ನಾವು ಮಾಡುವ ಉತ್ತಮ ಕಾರ್ಯಗಳನ್ನು ಖಂಡಿತ ನೋಡುತ್ತಾನೆ. ದುಷ್ಟ ಆಲೋಚನೆಗಳನ್ನು ದೂರ ಮಾಡಿ ಪ್ರವಚನ ಆಲಿಸುವ ಮೂಲಕ ಹರಿಜಾತ್ರೆಯನ್ನು ಸಾರ್ಥಕಗೊಳಿಸಬೇಕು ಎಂದು ಅವರು ಕರೆ ನೀಡಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ಡಾ. ಸಿದ್ಧವೀರ ಮಹಾಸ್ವಾಮಿಗಳು ಗುರುಸಿದ್ದಯ್ಯ ಹಿರೇಮಠ ಮಾತನಾಡಿ, ದ್ಯಾಮವ್ವ–ದುರ್ಗಮ್ಮ ದೇವಿಯರ ಹರಿಜಾತ್ರೆ ಹರಕೆ ತೀರಿಸುವ ಪವಿತ್ರ ದಿನವಾಗಿದೆ ಎಂದರು. ರಕ್ತಬೀಜಾಸುರನ ಸಂಹಾರ ಮಾಡಿ ಶ್ರೀದೇವಿ ಜಗಜ್ಜನನಿಯಾಗಿ ಹೊರಹೊಮ್ಮಿದ ಪರಂಪರೆಯನ್ನು ವಿವರಿಸಿದರು.

ಮನುಷ್ಯನ ಬದುಕಿನಲ್ಲಿ ವಿವಿಧ ರೀತಿಯ ಸುಖಗಳನ್ನು ಕಾಣಬಹುದು. ದೇವಸ್ಥಾನದಲ್ಲಿ ದರ್ಶನ ಪಡೆದ ಬಳಿಕ ನೀಡುವ ಬಾಳೆಹಣ್ಣಿನ ಪ್ರಸಾದದ ಸಿಪ್ಪೆ ತೆಗೆದು ಸೇವಿಸುವ ಮೂಲಕ ಒಳಗಿನ ಸುಖವನ್ನು, ಜಾತ್ರೆಯಲ್ಲಿ ಉತ್ತತ್ತಿ ಎಸೆದು ಮರಳಿ ಪಡೆದು ಸೇವಿಸುವ ಮೂಲಕ ಹೊರಗಿನ ಸುಖವನ್ನು ಹಾಗೂ ಮಠಾಧೀಶರಿಂದ ಆಶೀರ್ವಾದ ಪಡೆದು ನೀಡುವ ಕಲ್ಲುಸಕ್ಕರೆಯನ್ನು ಸೇವಿಸುವ ಮೂಲಕ ಪೂರ್ಣ ಸುಖವನ್ನು ಅನುಭವಿಸಬಹುದು ಎಂದು ಅವರು ವಿಶ್ಲೇಷಿಸಿದರು.

ಕಾರ್ಯಕ್ರಮದಲ್ಲಿ ಗದಗದ ಆಧ್ಯಾತ್ಮಿಕ ವಿದ್ಯಾಶ್ರಮದ ಪೂಜ್ಯ ಶಿವಶರಣೆ ನೀಲಮ್ಮತಾಯಿ ಅಸುಂಡಿ, ಟ್ರಸ್ಟ್ ಕಮಿಟಿ ಅಧ್ಯಕ್ಷ ಕೊಟ್ರಪ್ಪ ಕಮತರ, ಜಾತ್ರಾ ಕಮಿಟಿ ಕಾರ್ಯಾಧ್ಯಕ್ಷ ಫಕೀರಪ್ಪ ಹೆಬಸೂರ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನೀಲಮ್ಮ ಬೋಳನವರ, ಕಿತ್ತೂರು ಕರ್ನಾಟಕ ದಿನಪತ್ರಿಕೆ ಸಂಪಾದಕ ಮಂಜುನಾಥ ಅಬ್ಬಿಗೇರಿ, ಎಸ್‌ಎಸ್‌ಕೆ ಸಮಾಜದ ಮುಖಂಡ ಕಿಶನ ಮೆಹರವಾಡೆ, ನಗರಸಭೆ ಸದಸ್ಯೆ ಲಕ್ಷ್ಮಿ ಸಿದ್ದಮ್ಮನಹಳ್ಳಿ, ಮಾಧೂಸಾ ಮೆಹರವಾಡೆ, ಶಕುಂತಲಾ ಅಕ್ಕಿ, ಲಕ್ಷ್ಮಿ ಕಾಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಗೀತಾಂಜಲಿ ಗೌಡರ ಪ್ರಾರ್ಥಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು. ಪಂಚಾಕ್ಷರಿ ಅಂಗಡಿ ವಂದಿಸಿದರು.

ನಂತರ ಮಂಡ್ಯ ಹಾಗೂ ಮೈಸೂರಿನ ಸವಿತಾ ಪೂಜಾ ಕುಣಿತ ತಂಡದಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

“ಹಸಿದವರಿಗೆ ಅನ್ನ, ಬಾಯಾರಿದವರಿಗೆ ನೀರು, ಮಾನ ಮುಚ್ಚಿಕೊಳ್ಳಲು ಬಟ್ಟೆ ನೀಡಿ, ಕಷ್ಟದಲ್ಲಿರುವವರಿಗೆ ನೆರವಾದಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ. ನನ್ನನ್ನು ಪ್ರೀತಿಸಿದಂತೆ ಮತ್ತೊಬ್ಬರನ್ನು ಪ್ರೀತಿಸಬೇಕು. ಕಷ್ಟದ ಸಂದರ್ಭದಲ್ಲಿ ನಾವು ಮಾಡಿದ ಧರ್ಮ ಮಾತ್ರ ನಮ್ಮನ್ನು ಕಾಯುತ್ತದೆ. ಆದ್ದರಿಂದ ಧರ್ಮವಂತರಾಗಿ ಬಾಳಬೇಕು.”

— ಅಭಿನವ ಜಗದ್ಗುರು ಬೂದೀಶ್ವರ ಮಹಾಸ್ವಾಮಿಗಳು

300ಕ್ಕೂ ಹೆಚ್ಚು ಬೀದಿ ನಾಯಿಗಳು, 80 ಹಂದಿಗಳು ಸ್ಥಳಾಂತರ!

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ಹೆಚ್ಚಾಗಿದ್ದ ಬೀದಿ ನಾಯಿಗಳು ಹಾಗೂ ಹಂದಿಗಳ ಹಾವಳಿಗೆ ಕಡಿವಾಣ ಹಾಕಲು ಪುರಸಭೆ ವಿಶೇಷ ಕಾರ್ಯಾಚರಣೆ ನಡೆಸಿದ್ದು, ಎರಡು ದಿನಗಳಲ್ಲಿ 300ಕ್ಕೂ ಹೆಚ್ಚು ಬೀದಿ ನಾಯಿಗಳು ಹಾಗೂ 80 ಹಂದಿಗಳನ್ನು ಹಿಡಿದು ಸ್ಥಳಾಂತರಿಸಿದೆ.

ಇತ್ತೀಚೆಗೆ ಬೀದಿ ನಾಯಿಗಳು ಮಕ್ಕಳು, ಆಕಳ ಕರುಗಳು, ಆಡು-ಕುರಿ ಮರಿಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ ಘಟನೆಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದವು. ಕಳೆದ ಏಳು ತಿಂಗಳಲ್ಲಿ 1,100 ನಾಯಿ ಕಡಿತ ಪ್ರಕರಣಗಳು ನಡೆದಿರುವ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಗುಂಪು ಗುಂಪಾಗಿ ಸಂಚರಿಸುವ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಪುರಸಭೆಗೆ ಒತ್ತಾಯಿಸಿದ್ದರು.

ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿದ ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ಗುಡದಾರಿ ಅವರು ಪರಿಣಿತ ತಂಡವನ್ನು ಕರೆಯಿಸಿ ಮಂಗಳವಾರ ಹಾಗೂ ಬುಧವಾರ ವಿಶೇಷ ಕಾರ್ಯಾಚರಣೆ ನಡೆಸಿದರು. ಪಟ್ಟಣದ ಮುಖ್ಯ ಬಜಾರ್ ರಸ್ತೆ, ಕೆಂಚಲಾಪುರ ಹಳ್ಳ, ದೂದಪೀರಾಂ ದರ್ಗಾ, ಶಾದಿಮಹಲ್, ಚಿಕನ್ ಮಾರ್ಕೆಟ್, ಹೂವಿನ ಬಜಾರ್, ಶಿಗ್ಲಿ ಕ್ರಾಸ್, ಪೊಲೀಸ್ ಠಾಣೆ, ಇಂದಿರಾನಗರ, ಬಸ್ ನಿಲ್ದಾಣ, ಪುರಸಭೆ ಕಚೇರಿ, ಸೋಮೇಶ್ವರ ಗುಡಿ, ಅಂಬೇಡ್ಕರ್ ನಗರ, ಮಂಜಲಾಪುರ ಸೇರಿದಂತೆ ವಿವಿಧೆಡೆ ಕಾರ್ಯಾಚರಣೆ ನಡೆಯಿತು.

ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ಪಟ್ಟಣದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪ್ರತ್ಯೇಕ ಶೆಡ್ ನಿರ್ಮಿಸಿ ಸಂತಾನಹರಣ ಚಿಕಿತ್ಸೆ ನೀಡಲು ಪುರಸಭೆ ಮುಂದಾಗಿದೆ. ಈ ಸಂಬಂಧ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ಗುಡದಾರಿ ಹಾಗೂ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ ತಿಳಿಸಿದ್ದಾರೆ.

ಬೀದಿ ನಾಯಿಗಳ ನಿಯಂತ್ರಣಕ್ಕೆ ನಿರಂತರ ಕಾರ್ಯಾಚರಣೆ, ಸಂತಾನಹರಣ ಚಿಕಿತ್ಸೆ ಹಾಗೂ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಅಗತ್ಯವಾಗಿದೆ. ಪುರಸಭೆಯ ಕ್ರಮಕ್ಕೆ ಸಾರ್ವಜನಿಕರಿಂದಲೂ ಸಹಕಾರ ದೊರೆತರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ. ಸದ್ಯದ ಕಾರ್ಯಾಚರಣೆಯಿಂದ ಸಾರ್ವಜನಿಕರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಪುರಸಭೆ ನಿರಂತರ ನಿಗಾವಹಿಸಿ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದುಪಡಿಸಿ ನೇರ ವೇತನ ಜಾರಿಗೊಳಿಸಿ

0

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಗುತ್ತಿಗೆ, ಹೊರಗುತ್ತಿಗೆ, ದಿನಗೂಲಿ ಹಾಗೂ ತಾತ್ಕಾಲಿಕ ಕಾರ್ಮಿಕ ಪದ್ಧತಿಯನ್ನು ರದ್ದುಪಡಿಸಿ, ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸಬೇಕು. ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರಿಗೆ ನೇರ ವೇತನ ಪಾವತಿ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ರಾಜ್ಯಮಟ್ಟದ ಪ್ರತಿಭಟನೆ ನಡೆಸಿತು.

ಎಐಸಿಸಿಟಿಯು ರಾಷ್ಟ್ರೀಯ ಉಪಾಧ್ಯಕ್ಷ ಕ್ಲಿಫ್ಟನ್ ಡಿ’ರೋಜಾರಿಯೊ ಮಾತನಾಡಿ, ಸರ್ಕಾರಿ ಕಚೇರಿಗಳು, ಕಾರ್ಖಾನೆಗಳು, ಆಸ್ಪತ್ರೆಗಳು ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಹಲವು ವರ್ಷಗಳಿಂದ ನಿರಂತರ ಕೆಲಸ ಮಾಡುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಮತ್ತು ಸಾಮಾಜಿಕ ಭದ್ರತೆ ದೊರೆಯುತ್ತಿಲ್ಲ. ನಿಯಮಿತ ನೌಕರರು ನಿರ್ವಹಿಸುವ ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ಕಾನೂನುಬದ್ಧ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಮೈತ್ರಿ ಕೃಷ್ಣನ್ ಮಾತನಾಡಿ, ಮೇ 22ರಂದು ಅಧಿಸೂಚನೆಗೊಂಡ ಪರಿಷ್ಕೃತ ಕನಿಷ್ಠ ವೇತನವನ್ನು ಯಾವುದೇ ಕಾರಣಕ್ಕೂ ತಡೆಹಿಡಿಯದೆ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕನಿಷ್ಠ ವೇತನಕ್ಕಿಂತ ಕಡಿಮೆ ವೇತನ ಪಾವತಿಸುವ ಉದ್ಯೋಗದಾತರ ವಿರುದ್ಧ ತಕ್ಷಣ ತಪಾಸಣೆ ನಡೆಸಿ, ಬಾಕಿ ವೇತನ ವಸೂಲಿ ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ನಿರಂತರವಾಗಿ ಏರುತ್ತಿರುವ ಜೀವನ ವೆಚ್ಚವನ್ನು ಪರಿಗಣಿಸಿ ಕಾರ್ಮಿಕರ ಕನಿಷ್ಠ ವೇತನವನ್ನು ತಿಂಗಳಿಗೆ ₹42 ಸಾವಿರಕ್ಕೆ ಪರಿಷ್ಕರಿಸಬೇಕು. ಎಲ್ಲ ಅರ್ಹ ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರಿಗೆ ಇಎಸ್‌ಐ ಸೌಲಭ್ಯ ಕಲ್ಪಿಸಿ, ಇಎಸ್‌ಐ ವೇತನ ಮಿತಿಯನ್ನು ಸಮರ್ಪಕವಾಗಿ ಪರಿಷ್ಕರಿಸಲು ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.

ಕಾರ್ಮಿಕರಿಗೆ ಉದ್ಯೋಗ ಹಾಗೂ ಸಾಮಾಜಿಕ ಭದ್ರತೆ, ಆರೋಗ್ಯ, ಹೆರಿಗೆ, ಪಿಂಚಣಿ ಸೌಲಭ್ಯ, ಮಹಿಳಾ ಕಾರ್ಮಿಕರಿಗೆ ಸುರಕ್ಷಿತ ಕೆಲಸದ ವಾತಾವರಣ ಹಾಗೂ ಸಂಘಟನೆಯ ಹಕ್ಕುಗಳನ್ನು ಖಾತರಿಪಡಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಪ್ರತಿಭಟನಾಕಾರರು ಮುಂದಿಟ್ಟರು.

ಅಪ್ಪಣ್ಣ, ನಿರ್ಮಲಾ, ನಾಗರಾಜ ಪೂಜಾರ್, ಮೋಹನ್, ರಾಮಣ್ಣ ವಿಟ್ಲ ಸೇರಿದಂತೆ ಕಾರ್ಮಿಕ ಮುಖಂಡರು ಮಾತನಾಡಿದರು. ಕೆ. ನಾಗಲಿಂಗಸ್ವಾಮಿ, ಅಜೀಜ್ ಜಾಗೀರ್ದಾರ್, ಕೇಶವ ನಾಯಕ್, ಅಶೋಕಗೌಡ, ಮಾಯಮ್ಮ, ಪರಶುರಾಮ, ಉಮಾ, ಭಾನುಪ್ರಕಾಶ್, ಬಸವರಾಜ ಎಂ., ಗೌರಿ, ಚಂದ್ರಶೇಖರ್ ಶಿರುಗುಪ್ಪಿ ಸೇರಿದಂತೆ ವಿವಿಧ ಜಿಲ್ಲೆಗಳ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

“ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ನಿರ್ಲಕ್ಷಿಸಿದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು.”

— ಎಐಸಿಸಿಟಿಯು ಮುಖಂಡರು

ಹಾಲು ಮಣ್ಣುಪಾಲು ಮಾಡಬೇಡಿ: ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಗದಗ: ಬಸವಣ್ಣನವರ ಆದರ್ಶಗಳನ್ನು ಪಾಲಿಸುವ ಮೂಲಕ ಅರ್ಥಪೂರ್ಣವಾಗಿ ಬಸವ ಪಂಚಮಿ ಆಚರಿಸುತ್ತಿರುವುದು ಸಂತಸದ ಸಂಗತಿ. ನಾಗರ ಪಂಚಮಿಯಂದು ಕಲ್ಲು ನಾಗರಕ್ಕೆ ಹಾಲೆರೆದು ಪೌಷ್ಟಿಕ ಆಹಾರವನ್ನು ವ್ಯರ್ಥ ಮಾಡುವ ಬದಲು ಅಗತ್ಯವಿರುವವರಿಗೆ ಹಂಚಬೇಕು ಎಂದು ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ನಗರದ ಬ್ಯಾಂಕರ್ಸ್ ಕಾಲೋನಿಯ ಜೀವನ ಸಂಧ್ಯಾ ಸುಖಾಲಯ ವೃದ್ಧಾಶ್ರಮದಲ್ಲಿ ಬಸವದಳ, ಬಸವ ಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಸ್ಥೆ, ಶರಣ ಸಾಹಿತ್ಯ ಪರಿಷತ್, ಕದಳಿವೇದಿಕೆ, ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ಹಡಪದ ಲಿಂಗಮ್ಮ ಮಹಿಳಾ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಬಸವ ಪಂಚಮಿ ಅಂಗವಾಗಿ ಹಮ್ಮಿಕೊಂಡಿದ್ದ ಹಾಲುಣ್ಣಿಸುವ ಕಾರ್ಯಕ್ರಮದಲ್ಲಿ ವೃದ್ಧರಿಗೆ ಹಾಲು ವಿತರಿಸಿ ಅವರು ಆಶೀರ್ವಚನ ನೀಡಿದರು.

ನಾಗರ ಪಂಚಮಿಯಂದು ಕಲ್ಲು ನಾಗರಕ್ಕೆ ಹಾಲೆರೆದು ಲಕ್ಷಾಂತರ ಲೀಟರ್ ಹಾಲು ಮಣ್ಣುಪಾಲಾಗುತ್ತಿದೆ. ಬಸವಣ್ಣನವರು ಸುಮಾರು 900 ವರ್ಷಗಳ ಹಿಂದೆಯೇ ಈ ಅರ್ಥಹೀನ ಆಚರಣೆಯನ್ನು ಪ್ರಶ್ನಿಸಿ, “ಕಲ್ಲನಾಗರ ಕಂಡರೆ ಹಾಲನೆರೆಯವರೆಂಬರು, ದಿಟ ನಾಗರ ಕಂಡರೆ ಕೊಲ್ಲೆಂಬರಯ್ಯ” ಎಂದು ವಚನದ ಮೂಲಕ ಜಾಗೃತಿ ಮೂಡಿಸಿದ್ದರು. ಅವರ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮೂಢನಂಬಿಕೆ ಹಾಗೂ ಅರ್ಥಹೀನ ಆಚರಣೆಗಳಿಂದ ದೂರವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ವೃದ್ಧಾಶ್ರಮದ ಅಧ್ಯಕ್ಷ ಹರೀಶ ಮುನವರ, ಟ್ರಸ್ಟಿಗಳಾದ ವೀರೇಂದ್ರ ಪದಮಸಿ, ವಿಪುಲ ಲೋಡಾಯಿ, ಹಿತೇಂದ್ರ ವೀರಾ, ವ್ಯವಸ್ಥಾಪಕಿ ಲಕ್ಷ್ಮೀ, ಬಸವ ಕೇಂದ್ರದ ಕಾರ್ಯದರ್ಶಿ ಎಸ್.ಎಂ. ಕವಳಿಕಾಯಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ, ಬಸವದಳದ ಅಧ್ಯಕ್ಷ ವಿ.ಕೆ. ಕರಿಗೌಡ್ರ ಸೇರಿದಂತೆ ವಿವಿಧ ಬಸವಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಬಸವಾಭಿಮಾನಿಗಳು ಉಪಸ್ಥಿತರಿದ್ದರು. ಎಂ.ಬಿ. ಲಿಂಗದಾಳ ಹಾಲಿನ ದಾಸೋಹ ಸೇವೆ ಸಲ್ಲಿಸಿದರು.

ಬಳಿಕ ಜಿಲ್ಲಾ ಆಸ್ಪತ್ರೆಗೆ ತೆರಳಿ ಒಳರೋಗಿಗಳಿಗೆ ಹಾಲು ಹಾಗೂ ಬಿಸ್ಕೀಟ್ ವಿತರಿಸಲಾಯಿತು. ನಂತರ ಭೀಷ್ಮ ಕೆರೆ ಆವರಣದಲ್ಲಿರುವ 116 ಅಡಿ ಎತ್ತರದ ಬಸವಣ್ಣನವರ ಮೂರ್ತಿ ಎದುರು ವಚನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು.

“ಹಾಲು ಅತ್ಯಮೂಲ್ಯ ಪೌಷ್ಟಿಕ ಆಹಾರ. ಅದನ್ನು ವ್ಯರ್ಥ ಮಾಡದೆ ಅಗತ್ಯವಿರುವವರಿಗೆ ನೀಡುವ ಮೂಲಕ ಬಸವಣ್ಣನವರ ಕಾಯಕ-ದಾಸೋಹದ ಆಶಯವನ್ನು ಪಾಲಿಸಬೇಕು.”

— ಜ. ಡಾ. ತೋಂಟದ ಸಿದ್ಧರಾಮ ಶ್ರೀಗಳು

ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ₹66.78 ಲಕ್ಷ ಮೌಲ್ಯದ ಚಿನ್ನದ ಅಷ್ಟಲಕ್ಷ್ಮಿ ಕಲಶ ಕೊಡುಗೆ!

0

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಟಿವಿಎಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವೇಣು ಶ್ರೀನಿವಾಸನ್ ಅವರು ₹66.78 ಲಕ್ಷ ಮೌಲ್ಯದ ಚಿನ್ನದ ಅಷ್ಟಲಕ್ಷ್ಮಿ ಕಲಶವನ್ನು ಕೊಡುಗೆಯಾಗಿ ನೀಡಿದ್ದಾರೆ.

ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಉಮಾ ಅವರಿಗೆ ಚಿನ್ನದ ಕಲಶವನ್ನು ಹಸ್ತಾಂತರಿಸಲಾಯಿತು. ಕಲಶದ ಸುತ್ತಲೂ ಅಷ್ಟಲಕ್ಷ್ಮಿಯರ ಚಿತ್ರಗಳನ್ನು ಕೆತ್ತಲಾಗಿದ್ದು, 398.580 ಗ್ರಾಂ ಶುದ್ಧ ಬಂಗಾರದಿಂದ ಕಲಶವನ್ನು ನಿರ್ಮಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ವೇಣು ಶ್ರೀನಿವಾಸನ್, ಸುಮಾರು 27 ವರ್ಷಗಳ ಹಿಂದೆ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಬೇಕು ಎಂಬ ಆಸೆ ಮೂಡಿತ್ತು. ಆದರೆ ಅಂದು ಸಾಧ್ಯವಾಗಿರಲಿಲ್ಲ. ಇದೀಗ ಕನಸಿನಲ್ಲಿ ಶ್ರೀರಂಗನಾಥಸ್ವಾಮಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಆಗಮಿಸಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ ಎಂದು ಹೇಳಿದರು.

ಭಕ್ತಿಯ ಸಂಕೇತವಾಗಿ ದೇವಾಲಯಕ್ಕೆ ಚಿನ್ನದ ಅಷ್ಟಲಕ್ಷ್ಮಿ ಕಲಶವನ್ನು ಸಮರ್ಪಿಸಿರುವುದಾಗಿ ಅವರು ತಿಳಿಸಿದರು.

ಇತಿಹಾಸ ಪ್ರಸಿದ್ಧ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಚಿನ್ನದ ಕಲಶ ಕೊಡುಗೆಯಾಗಿ ನೀಡಿರುವುದು ಭಕ್ತರ ಗಮನ ಸೆಳೆದಿದೆ.

ರಸ್ತೆ ಗುಂಡಿ ತಪ್ಪಿಸಲು ಹೋಗಿ ಬೈಕ್‌ಗೆ ಟ್ಯಾಂಕರ್ ಡಿಕ್ಕಿ: ಕೂದಲೆಳೆ ಅಂತರದಲ್ಲಿ ಪಾರಾದ ಸವಾರ

0

ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳ ಅವಾಂತರ ಮುಂದುವರಿದಿದ್ದು, ರಸ್ತೆ ಗುಂಡಿ ತಪ್ಪಿಸಲು ಹೋಗುತ್ತಿದ್ದ ಬೈಕ್ ಸವಾರನಿಗೆ ಹಿಂಬದಿಯಿಂದ ಟ್ಯಾಂಕರ್ ಡಿಕ್ಕಿ ಹೊಡೆದಿರುವ ಘಟನೆ ವರ್ತೂರಿನ ಗುಂಜೂರು ಬಳಿ ನಡೆದಿದೆ.

ರಸ್ತೆಯಲ್ಲಿ ಗುಂಡಿಗಳನ್ನು ತಪ್ಪಿಸಿಕೊಂಡು ಬೈಕ್ ಚಲಾಯಿಸುತ್ತಿದ್ದ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಟ್ಯಾಂಕರ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ತಕ್ಷಣ ಬೈಕ್‌ನಿಂದ ಜಿಗಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇನ್ನು ಅಪಘಾತಕ್ಕೆ ಕಾರಣವಾದ ಟ್ಯಾಂಕರ್‌ಗೆ ನಂಬರ್ ಪ್ಲೇಟ್ ಕೂಡ ಇರಲಿಲ್ಲ ಎನ್ನಲಾಗಿದೆ. ಅಪಘಾತದ ಬಳಿಕ ಟ್ಯಾಂಕರ್ ಚಾಲಕ ವಾಹನ ನಿಲ್ಲಿಸದೆ ತೆರಳಲು ಯತ್ನಿಸಿದ್ದು, ಇತರ ವಾಹನ ಸವಾರರು ಟ್ಯಾಂಕರ್‌ನ್ನು ಬೆನ್ನಟ್ಟಿ ಹಿಡಿದಿದ್ದಾರೆ.

ವಾಹನವನ್ನು ಪರಿಶೀಲಿಸಿದಾಗ ಚಾಲಕನ ಬಳಿ ಡ್ರೈವಿಂಗ್ ಲೈಸೆನ್ಸ್ ಕೂಡ ಇಲ್ಲದೆ ವಾಹನ ಚಲಾಯಿಸುತ್ತಿದ್ದ ವಿಷಯ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ರಸ್ತೆ ಗುಂಡಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ:

ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿಗಳಿಂದಾಗಿ ಅಪಘಾತಗಳು ಸಂಭವಿಸುತ್ತಿದ್ದು, ಕೆಲವರು ಪ್ರಾಣ ಕಳೆದುಕೊಂಡಿರುವ ಘಟನೆಗಳೂ ನಡೆದಿವೆ. ಆದರೂ ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆ ಗುಂಡಿ ಮುಚ್ಚಲು ಕೋಟ್ಯಂತರ ರೂಪಾಯಿ ಹಣ ಬಿಡುಗಡೆಯಾಗುತ್ತಿದ್ದರೂ, ಗುಂಡಿಗಳು ಮಾತ್ರ ಹಾಗೆಯೇ ಉಳಿದಿವೆ. ಈ ಹಣ ಎಲ್ಲಿ ಹೋಗುತ್ತಿದೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಗುಂಜೂರು ಭಾಗದಲ್ಲಿ ಅಪಘಾತಕ್ಕೆ ಕಾರಣವಾಗಿರುವ ರಸ್ತೆ ಗುಂಡಿಗಳನ್ನು ಕೂಡಲೇ ಮುಚ್ಚಬೇಕು. ಜೊತೆಗೆ ನಂಬರ್ ಪ್ಲೇಟ್ ಇಲ್ಲದೆ ಹಾಗೂ ಪರವಾನಗಿ ಇಲ್ಲದ ಚಾಲಕರಿಂದ ವಾಹನ ಚಲಾಯಿಸುವುದನ್ನು ತಡೆಯಲು ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ನಿಂತಿದ್ದ ಲಾರಿಗೆ ಓಮಿನಿ ಕಾರು ಡಿಕ್ಕಿ: ಹಾಲು ಹಾಕಿ ಮನೆಗೆ ಮರಳುತ್ತಿದ್ದ ಯುವಕ ದಾರುಣ ಸಾವು

0

ನೆಲಮಂಗಲ: ನಿಂತಿದ್ದ ಲಾರಿಗೆ ಓಮಿನಿ ಕಾರು ಡಿಕ್ಕಿ ಹೊಡೆದ ಪರಿಣಾಮ 26 ವರ್ಷದ ಯುವಕ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಬಳಿ ನಡೆದಿದೆ.

ಮೃತರನ್ನು ಯಡಿಯೂರು ನಿವಾಸಿ ದರ್ಶನ್ (26) ಎಂದು ಗುರುತಿಸಲಾಗಿದೆ. ತಾಯಿ ಇಲ್ಲದ ಕುಟುಂಬದಲ್ಲಿ ತಂದೆ ವೆಂಕಟೇಶ್ ಅವರೊಂದಿಗೆ ವಾಸವಿದ್ದ ದರ್ಶನ್ ರೈತನಾಗಿ ಕೆಲಸ ಮಾಡುತ್ತಿದ್ದರು. ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಕಳೆದ 5–6 ತಿಂಗಳಿಂದ ಡೈರಿಗೆ ಹಾಲು ಹಾಕುವ ಕೆಲಸವನ್ನೂ ಮಾಡುತ್ತಿದ್ದರು ಎನ್ನಲಾಗಿದೆ.

ಗುರುವಾರ ಬೆಳಗಿನ ಜಾವ ನೆಲಮಂಗಲಕ್ಕೆ ಹಾಲು ಹಾಕಿ ಓಮಿನಿ ಕಾರಿನಲ್ಲಿ ಯಡಿಯೂರಿಗೆ ವಾಪಸ್ ತೆರಳುತ್ತಿದ್ದ ವೇಳೆ ಸುಮಾರು 4.30ರ ಸಮಯದಲ್ಲಿ ಯಂಟಗಾನಹಳ್ಳಿ ಬಳಿ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ದರ್ಶನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ದರ್ಶನ್ ಅವರಿಗೆ ಸಂಬಂಧಿಕರಲ್ಲಿಯೇ ಯುವತಿಯನ್ನು ನೋಡಿ ಮದುವೆ ಮಾತುಕತೆ ಕೂಡ ನಡೆದಿತ್ತು ಎನ್ನಲಾಗಿದೆ. ಆದರೆ ಮದುವೆ ನಿಶ್ಚಯವಾಗುವ ಮುನ್ನವೇ ದುರಂತ ಸಂಭವಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಕುಟುಂಬಕ್ಕೆ ಆಧಾರವಾಗಿದ್ದ ದರ್ಶನ್ ಅವರನ್ನು ಕಳೆದುಕೊಂಡು ಮನೆಯ ದೀಪವೇ ಆರಿದಂತಾಗಿದೆ ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ನೆಲಮಂಗಲ ಶವಾಗಾರಕ್ಕೆ ರವಾನಿಸಿದ್ದಾರೆ. ಲಾರಿ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಇನ್ನು ಹೆದ್ದಾರಿ ಬದಿಯಲ್ಲಿ ರಾತ್ರಿ ವೇಳೆ ಲಾರಿ ಸೇರಿದಂತೆ ಭಾರೀ ವಾಹನಗಳನ್ನು ನಿಲ್ಲಿಸುವುದರಿಂದ ಇಂತಹ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹೆದ್ದಾರಿ ಬದಿಯಲ್ಲಿ ವಾಹನಗಳ ಪಾರ್ಕಿಂಗ್ ನಿಯಂತ್ರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ವಿದ್ಯಾರ್ಥಿಗೆ ‘ವಂದೇ ಮಾತರಂ’ ಘೋಷಣೆ ಕೂಗದಂತೆ ಬೆದರಿಕೆ ಆರೋಪ; ಪ್ರಾಂಶುಪಾಲರ ವಿರುದ್ಧ ಕೇಸ್

0

ಬೀದರ್: ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ‘ವಂದೇ ಮಾತರಂ’ ಹಾಗೂ ‘ಭಾರತ್ ಮಾತಾಕಿ ಜೈ’ ಘೋಷಣೆ ಕೂಗಿದ ವಿದ್ಯಾರ್ಥಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಲೇಜು ಪ್ರಾಂಶುಪಾಲರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಬೀದರ್ ಜಿಲ್ಲೆಯ ಚಿಟಗುಪ್ಪ ಪಟ್ಟಣದ ಕಾಲೇಜೊಂದರಲ್ಲಿ ಆ.15ರಂದು 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆದಿತ್ತು. ಧ್ವಜಾರೋಹಣದ ಬಳಿಕ ಪಿಯುಸಿ ವಿದ್ಯಾರ್ಥಿ ಸಾಗರ್ ಗೌಳಿ ‘ವಂದೇ ಮಾತರಂ’ ಹಾಗೂ ‘ಭಾರತ್ ಮಾತಾಕಿ ಜೈ’ ಘೋಷಣೆ ಕೂಗಿದ್ದ ಎನ್ನಲಾಗಿದೆ.

ಈ ವೇಳೆ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಹಕೀಮ್ ಅವರು ವಿದ್ಯಾರ್ಥಿಗೆ ಹಾಗೂ ಇತರ ವಿದ್ಯಾರ್ಥಿಗಳಿಗೆ ಘೋಷಣೆ ಕೂಗದಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಒಂದು ಧಾರ್ಮಿಕ ಸಮುದಾಯಕ್ಕೆ ಸಂಬಂಧಿಸಿದ ಘೋಷಣೆ ಎಂದು ಹೇಳಿ, ಇಂತಹ ಘೋಷಣೆಗಳನ್ನು ಕಾಲೇಜಿನಲ್ಲಿ ಸಹಿಸುವುದಿಲ್ಲ ಎಂದು ಪ್ರಾಂಶುಪಾಲರು ಎಚ್ಚರಿಕೆ ನೀಡಿದ್ದರು ಎಂದು ವಿದ್ಯಾರ್ಥಿಯ ತಂದೆ ಹಿರೋಬಾ ಗೌಳಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಚಿಟಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಾಂಶುಪಾಲ ಅಬ್ದುಲ್ ಹಕೀಮ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದಾರೆ.

ಕಾಲೇಜಿನಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಒಟ್ಟಿಗೆ ವಿದ್ಯಾಭ್ಯಾಸ ಮಾಡುತ್ತಿದ್ದು, ಪ್ರಾಂಶುಪಾಲರು ವಿದ್ಯಾರ್ಥಿಗಳ ನಡುವೆ ಧಾರ್ಮಿಕ ತಾರತಮ್ಯ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇಂತಹ ನಡೆ ವಿದ್ಯಾರ್ಥಿಗಳ ನಡುವೆ ವೈಮನಸ್ಸು ಮೂಡಿಸುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆ ಖಂಡಿಸಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಕಾಲೇಜಿನ ಮುಂಭಾಗ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು, ವಿದ್ಯಾರ್ಥಿಗಳಿಗೆ ಧಾರ್ಮಿಕ ತಾರತಮ್ಯ ಮಾಡದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಗಳ ಸತ್ಯಾಸತ್ಯತೆ ತನಿಖೆಯ ಬಳಿಕ ತಿಳಿದುಬರಬೇಕಿದೆ.

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ಅಂತಿಮ: ತುಮಕೂರಿನಲ್ಲಿ ನಿರ್ಮಿಸುವ ಪ್ರಸ್ತಾಪವೇ ಇಲ್ಲ ಎಂದ ಸರ್ಕಾರ

0

ಬೆಂಗಳೂರು: ನಗರದಲ್ಲಿ ಎರಡನೇ ವಿಮಾನ ನಿಲ್ದಾಣಕ್ಕೆ ಮೂರು ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದ್ದು, ಅದರಲ್ಲಿ ತುಮಕೂರು ಜಿಲ್ಲೆಯಲ್ಲಿ ಮಾಡುವ ಪ್ರಸ್ತಾಪ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಅಧಿವೇಶನದಲ್ಲಿ ತುಮಕೂರು ಶಾಸಕ ಜ್ಯೋತಿ ಗಣೇಶ್ ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಸಚಿವ ಎಂ.ಬಿ.ಪಾಟೀಲ್ ಉತ್ತರಿಸಿದರು. ಎರಡನೇ ವಿಮಾನ ನಿಲ್ದಾಣಕ್ಕೆ ಸೋಮನಹಳ್ಳಿ-ಕನಕಪುರ ರಸ್ತೆ ರಾಮನಗರ, ಚೂಡಹಳ್ಳಿ-ಕನಕಪುರ ರಸ್ತೆ ರಾಮನಗರ ಹಾಗೂ ಗುಡೆಮಾರನಹಳ್ಳಿ ನೆಲಮಂಗಲ ಎಂಬ ಮೂರು ಸ್ಥಳಗಳು ಶಾರ್ಟ್‌ಲಿಸ್ಟ್ ಆಗಿವೆ ಎಂದು ಸದನಕ್ಕೆ ಮಾಹಿತಿ ನೀಡಿದ ಅವರು, ಹಾರೋಹಳ್ಳಿ ಕೂಡ ಅಂತಿಮ ಪರಿಶೀಲನೆಯ ಹಂತದಲ್ಲಿದೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ತುಮಕೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ಬೇಕು ಎಂದು ಪರಮೇಶ್ವರ್, ಸೋಮಣ್ಣ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಕೇಂದ್ರ ಸರ್ಕಾರದ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ನೀತಿಯ ಪ್ರಕಾರ, ಹಾಲಿ ಇರುವ ನಾಗರಿಕ ವಿಮಾನ ನಿಲ್ದಾಣದಿಂದ 150 ಕಿ.ಮೀ ವ್ಯಾಪ್ತಿಯಲ್ಲಿ ಇನ್ನೊಂದು ಹೊಸ ವಿಮಾನ ನಿಲ್ದಾಣಕ್ಕೆ ಸಾಮಾನ್ಯವಾಗಿ ಅನುಮತಿ ನೀಡಲಾಗುವುದಿಲ್ಲ ಎಂದು ವಿವರಿಸಿದರು.

ಒಂದು ವೇಳೆ ಈ ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸಬೇಕಾದರೆ, ಹಾಲಿ ಇರುವ ವಿಮಾನ ನಿಲ್ದಾಣದ ಮೇಲಾಗುವ ಪ್ರಭಾವವನ್ನು ಆಧರಿಸಿ ಪ್ರತ್ಯೇಕವಾಗಿ ಪರಿಶೀಲಿಸಿ ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದರು.

ಮುಂಬರುವ ಬಜೆಟ್‌ನಲ್ಲಿ ತುಮಕೂರು ವಿಮಾನ ನಿಲ್ದಾಣಕ್ಕೆ ಹಣ ಕಾಯ್ದಿರಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ, ಅಂತಹ ಯಾವುದೇ ಯೋಜನೆ ಸರ್ಕಾರದ ಪರಿಶೀಲನೆಯಲ್ಲಿ ಇಲ್ಲದಿರುವುದರಿಂದ ಅನುದಾನ ಹಂಚಿಕೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಶೀಘ್ರದಲ್ಲೇ ನಕಲಿ ಔಷಧಿ ಜಾಲ ತನಿಖೆಗೆ SIT: ಸಚಿವ ಯು.ಟಿ. ಖಾದರ್ ಘೋಷಣೆ

0

ಬೆಂಗಳೂರು: ನಕಲಿ ಔಷಧಿ ಜಾಲ ಸಂಬಂಧ ಶೀಘ್ರದಲ್ಲಿಯೇ ಎಸ್ಐಟಿ (Special Investigation Team) ರಚನೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ನಕಲಿ ಔಷಧಿ ಜಾಲ ಪತ್ತೆ ಬಹಳ ಗಂಭೀರ ವಿಷಯ, ಅಂತಾರಾಜ್ಯ ಮಟ್ಟದಲ್ಲಿ ಜಾಲ ಇದ್ದು,

ರಾಜ್ಯದಲ್ಲಿ ಬೇರೆ ಎಲ್ಲೆಲ್ಲಿದೆ ಎಂಬುದನ್ನು ಕಂಡುಹಿಡಿಯಬೇಕು ಎಂದು ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು. ಅದೇ ರೀತಿ ಸಂಬಂಧಪಟ್ಟ ರಾಜ್ಯಗಳ ಸಚಿವರಿಗೂ ಪತ್ರ ಬರೆದಿದ್ದು, ಆ ಫ್ಯಾಕ್ಟರಿ ಮೇಲೆ ಅವರೇ ಕ್ರಮ ಜರುಗಿಸಬೇಕು, ಎಸ್ಐಟಿ ಮುಖಾಂತರ ತನಿಖೆ ನಡೆಸಬೇಕು ಎಂದು ಕೋರಿರುವುದಾಗಿ ಹೇಳಿದರು. ಈಗಾಗಲೇ ರಾಮನಗರ ಎಸ್ಪಿ ಮತ್ತು ಪೊಲೀಸರು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದರು.

ಹಿಂದಿನ ಆರೋಗ್ಯ ಸಚಿವರಿಗೆ ಇದರ ಬಗ್ಗೆ ಮಾಹಿತಿ ಇರಲಿಲ್ಲವೇ ಎಂಬ ಪ್ರಶ್ನೆಗೆ, ಹಿಂದಿನ ಎಲ್ಲಾ ಸಚಿವರು ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದು, ಅದನ್ನು ತಾವು ಮುಂದುವರೆಸಿಕೊಂಡು ಹೋಗುತ್ತಿರುವುದಾಗಿ ಸಚಿವರು ಸ್ಪಷ್ಟಪಡಿಸಿದರು. ಇದು ಕೇವಲ ಆರೋಗ್ಯ ಇಲಾಖೆ ಅಥವಾ ಆಹಾರ ಇಲಾಖೆಯಿಂದ ಸಾಧ್ಯವಿಲ್ಲ,

ರಾಜ್ಯದಲ್ಲಿ 6.5 ಕೋಟಿ ಜನಸಂಖ್ಯೆ ಇರುವುದಾಗಿ ತಿಳಿಸಿದ ಅವರು, ಇಲಾಖೆಯಲ್ಲಿರುವ 150 ಜನರಿಂದ ಇದನ್ನು ನೋಡಲು ಕಷ್ಟವಾಗುತ್ತದೆ, ಸಮಾಜದಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಒಂದೇ ಔಷಧಿ ಎರಡು ಅಂಗಡಿಗಳಲ್ಲಿ ಬೇರೆ ಬೇರೆ ದರದಲ್ಲಿ ಮಾರಾಟವಾಗುತ್ತಿದ್ದರೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಕೋರಿದರು.

ಎಷ್ಟು ವರ್ಷಗಳಿಂದ ಈ ನಕಲಿ ಔಷಧಿಗಳು ಮಾರುಕಟ್ಟೆಯಲ್ಲಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಎಲ್ಲಾ ವಿಚಾರಗಳು ತನಿಖೆ ಆದ ಬಳಿಕ ಹೊರಬರುತ್ತವೆ ಎಂದು ತಿಳಿಸಿ, ಯಾವ್ಯಾವ ಆಸ್ಪತ್ರೆಗಳಿಗೆ ಇದು ತಲುಪಿದೆ, ಯಾವ ರೋಗಿಗಳಿಗೆ ನೀಡಲಾಗಿದೆ ಎಂಬುದೂ ತನಿಖೆಯ ನಂತರ ಗೊತ್ತಾಗುತ್ತದೆ ಎಂದರು.

ಸಾವಿಗೆ ಪ್ರೇರಣೆಯಾಗುವ ಸಂಬಂಧ ಸೆಕ್ಷನ್ 302 ಅನ್ವಯಿಸುವಂತೆಯೂ ಸೂಚಿಸಿರುವುದಾಗಿ ತಿಳಿಸಿದ ಸಚಿವರು, ಈಗಾಗಲೇ 6 ಕಂಪನಿಗಳನ್ನು ಲೇಬಲ್ ಮಾಡಲಾಗಿದ್ದು, ತಂದು ಮಾರಾಟ ಮಾಡುತ್ತಿದ್ದವರ ಮೇಲೆ ಕೇಸ್ ದಾಖಲಾಗಿದೆ ಎಂದರು. ಇದರಲ್ಲಿ ಭಾಗಿಯಾದ ಎಲ್ಲರ ಮೇಲೂ ಕೇಸ್ ದಾಖಲಾಗಲಿದೆ ಎಂದು ಸ್ಪಷ್ಟಪಡಿಸಿದರು.