Home Blog Page 11

ಬೆಳಗಾವಿ| ಚೋರ್ಲಾ ಘಾಟ್‌ನಲ್ಲಿ ₹400 ಕೋಟಿ ನಗದು ದರೋಡೆ; ಇದು ದೇಶದ ಅತಿದೊಡ್ಡ ರಾಬರಿ ಕೇಸ್!

0

ಬೆಳಗಾವಿ:- ಜಿಲ್ಲೆಯ ಖಾನಾಪುರ ತಾಲೂಕಿನ ಚೋರ್ಲಾ ಘಾಟ್‌ನಲ್ಲಿ ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದ್ದ 400 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ನಿಷೇಧಿತ 2,000 ರೂ. ಮುಖಬೆಲೆಯ ನೋಟುಗಳಿದ್ದ ಎರಡು ಕಂಟೇನರ್‌ಗಳನ್ನು ಹೈಜಾಕ್ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

2025ರ ಅಕ್ಟೋಬರ್ 16ರಂದು ನಡೆದ ಈ ದರೋಡೆ ಪ್ರಕರಣವು ಅಂತರರಾಜ್ಯ ಮಟ್ಟದ ಭಾರೀ ನಗದು ದರೋಡೆಯಾಗಿದ್ದು, ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಪೊಲೀಸರನ್ನು ತೀವ್ರ ಅಚ್ಚರಿಗೆ ಗುರಿಮಾಡಿದೆ. ಮಹಾರಾಷ್ಟ್ರದ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ ಅವರಿಗೆ ಸೇರಿದ ಹಣ ಇದಾಗಿದ್ದು, ಅಪಾಯಕಾರಿ ಹಾಗೂ ಅರಣ್ಯ ಪ್ರದೇಶವಾದ ಚೋರ್ಲಾ ಘಾಟ್ ಮಾರ್ಗದಲ್ಲಿ ಕಂಟೇನರ್‌ಗಳು ಏಕಾಏಕಿ ನಾಪತ್ತೆಯಾಗಿದ್ದವು ಎಂಬುದು ತನಿಖೆಯಿಂದ ಗೊತ್ತಾಗಿದೆ.

ಈ ದರೋಡೆ ಪ್ರಕರಣ ಹಲವು ತಿಂಗಳುಗಳು ಗುಪ್ತವಾಗಿಯೇ ಉಳಿದಿದ್ದು, ನಾಸಿಕ್ ಮೂಲದ ಸಂದೀಪ್ ಪಾಟೀಲ ಎಂಬಾತನ ಅಪಹರಣ ಪ್ರಕರಣದ ದೂರಿನ ಮೂಲಕ ಸಂಪೂರ್ಣ ಬಹಿರಂಗವಾಗಿದೆ.

ಕಂಟೇನರ್ ಹೈಜಾಕ್ ಆದ ಕೆಲ ದಿನಗಳ ಬಳಿಕ, ಕಿಶೋರ್ ಶೇಟ್ ಅವರ ಸಹಚರರು ಸಂದೀಪ್ ಪಾಟೀಲನನ್ನು ಗನ್ ಪಾಯಿಂಟ್‌ನಲ್ಲಿ ಅಪಹರಿಸಿ, ಸುಮಾರು ಒಂದೂವರೆ ತಿಂಗಳ ಕಾಲ ಅಕ್ರಮ ಬಂಧನದಲ್ಲಿಟ್ಟು 400 ಕೋಟಿ ರೂ. ಹಣ ಕೊಡದಿದ್ದರೆ ಜೀವ ಉಳಿಯೋದಿಲ್ಲ ಎಂದು ಬೆದರಿಕೆ ಹಾಕಿ ಮಾನಸಿಕ ಹಾಗೂ ದೈಹಿಕ ಚಿತ್ರಹಿಂಸೆ ನೀಡಿದ್ದರು. ನಂತರ ಅಪಹರಣಕಾರರಿಂದ ತಪ್ಪಿಸಿಕೊಂಡ ಸಂದೀಪ್, 2026ರ ಜನವರಿ 1ರಂದು ನಾಸಿಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕವೇ ಈ ಭಾರೀ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ.

ದೂರು ಆಧರಿಸಿ ತಕ್ಷಣ ಕಾರ್ಯಾಚರಣೆ ನಡೆಸಿದ ಮಹಾರಾಷ್ಟ್ರ ಪೊಲೀಸರು ಈವರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಇನ್ನೂ ಇಬ್ಬರು ಪ್ರಮುಖ ಆರೋಪಿಗಳು ಪರಾರಿಯಾಗಿದ್ದಾರೆ. ಅವರ ಬಂಧನದ ನಂತರವೇ ಕಂಟೇನರ್‌ಗಳು ಹಾಗೂ ನಗದು ಹಣ ಪತ್ತೆಯಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಕರಣದ ಗಂಭೀರತೆಯನ್ನು ಗಮನಿಸಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ವಿಶೇಷ ತನಿಖಾ ತಂಡ (SIT) ರಚಿಸುವಂತೆ ಆದೇಶಿಸಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈ ಹಣ ಬಳಕೆಯಾಗಿದೆ ಎಂಬ ಅನುಮಾನವೂ ತನಿಖಾಧಿಕಾರಿಗಳಲ್ಲಿ ಮೂಡಿದ್ದು, ಈ ಪ್ರಕರಣ ರಾಜಕೀಯ ಹಾಗೂ ಆರ್ಥಿಕ ವಲಯಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.

ಬಿಯರ್ ಕುಡಿಸಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ; ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ, 8.76 ಲಕ್ಷ ದಂಡ!

0

ಬೆಳಗಾವಿ:- ಬೆಳಗಾವಿಯಲ್ಲಿ ಅಪ್ರಾಪ್ತೆಗೆ ಬಿಯರ್ ಕುಡಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಪೋಕ್ಸೋ ವಿಶೇಷ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ.

ಪ್ರಕರಣವನ್ನು ಕೇವಲ 8 ತಿಂಗಳಲ್ಲಿ ಇತ್ಯರ್ಥಗೊಳಿಸಿದ ನ್ಯಾಯಾಲಯ, ಸಾಕೀಬ್ ನಿಜಾಮಿ (22) ಹಾಗೂ ರವಿ ನಾಯ್ಯೋಡಿಗೆ ಜೀವಾವಧಿ ಜೈಲು ಶಿಕ್ಷೆ ಹಾಗೂ 8.76 ಲಕ್ಷ ರೂ. ದಂಡ ವಿಧಿಸಿದೆ. ಕೃತ್ಯಕ್ಕೆ ಸಹಕರಿಸಿದ ರೋಹನ್ ಪಾಟೀಲ್ ಮತ್ತು ಅಶುತೋಷ್ ಪಾಟೀಲ್‌ಗೆ ತಲಾ 20 ವರ್ಷ ಜೈಲು ಶಿಕ್ಷೆ ಮತ್ತು 6 ಲಕ್ಷ ರೂ. ದಂಡ ವಿಧಿಸಲಾಗಿದೆ.

ಜೊತೆಗೆ ಸಂತ್ರಸ್ತೆಗೆ 10 ಲಕ್ಷ ರೂ. ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚನೆ ನೀಡಲಾಗಿದೆ. 2025 ಮೇ 10ರಂದು ಸಾವಗಾಂವ್‌ನ ಫಾರ್ಮ್‌ಹೌಸ್‌ನಲ್ಲಿ ನಡೆದ ಈ ಕೃತ್ಯದ ಕುರಿತು ಸಂತ್ರಸ್ತೆಯ ಪೋಷಕರು ದೂರು ದಾಖಲಿಸಿದ್ದು, ಸರ್ಕಾರದ ಪರ ವಿಶೇಷ ಅಭಿಯೋಜಕ ಎಲ್.ವಿ. ಪಾಟೀಲ್ ವಕಾಲತ್ತು ನಡೆಸಿದರು.

ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂದೂಗಳ ಮೇಲಿನ ದಾಳಿ; 23 ವರ್ಷದ ಯುವಕ ಸಜೀವ ದಹನ!

0

ಢಾಕಾ;- ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಸರಣಿ ಹತ್ಯೆ ಮುಂದುವರಿದಿದೆ.

ಬಾಂಗ್ಲಾದೇಶದ ನರಸಿಂಗ್ಡಿ ಜಿಲ್ಲೆಯಲ್ಲಿ 23 ವರ್ಷದ ಹಿಂದೂ ಯುವಕ ಚಂಚಲ್ ಚಂದ್ರ ಭೌಮಿಕ್ ಅವರನ್ನು ಗ್ಯಾರೇಜ್ ಒಳಗೆ ಪೆಟ್ರೋಲ್ ಸುರಿದು ಸಜೀವ ದಹನ ಮಾಡಿರುವ ಅಮಾನುಷ ಘಟನೆ ನಡೆದಿದೆ.

ಕೆಲಸದ ನಿಮಿತ್ತ ನರಸಿಂಗ್ಡಿಯಲ್ಲಿ ವಾಸವಿದ್ದ ಚಂಚಲ್, ಶುಕ್ರವಾರ ತಡರಾತ್ರಿ ಗ್ಯಾರೇಜ್‌ನಲ್ಲಿ ಮಲಗಿದ್ದ ವೇಳೆ ಕಿಡಿಗೇಡಿಗಳು ಹೊರಗಿನಿಂದ ಶಟರ್‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಬೆಂಕಿ ವೇಗವಾಗಿ ವ್ಯಾಪಿಸಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ದಾಳಿ ಪೂರ್ವನಿಯೋಜಿತ ಕೃತ್ಯ ಎಂದು ಕುಟುಂಬಸ್ಥರು ಆರೋಪಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬೆಂಕಿ ಹಚ್ಚಿದ ದೃಶ್ಯ ವೈರಲ್ ಆಗಿದೆ.

ಅಗ್ನಿಶಾಮಕ ದಳ ಒಂದು ಗಂಟೆಯ ಪರಿಶ್ರಮದ ಬಳಿಕ ಬೆಂಕಿ ನಂದಿಸಿದ್ದು, ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.

ಒನ್ ವೇ ಸವಾರರೇ ಟಾರ್ಗೆಟ್: ಸಿಕ್ಕಿಬಿದ್ದೋರ ಡಿಎಲ್ ಕ್ಯಾನ್ಸಲ್; ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಪ್ಲ್ಯಾನ್!

0

ಬೆಂಗಳೂರು:- ನಗರದಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಇದಕ್ಕೆ ಸವಾರರ ಅವೈಜ್ಞಾನಿಕ ಒನ್‌ವೇ ಸಂಚಾರವೇ ಪ್ರಮುಖ ಕಾರಣ ಎಂಬುದು ಸಂಚಾರಿ ಪೊಲೀಸರ ಆಂತರಿಕ ಸಮೀಕ್ಷೆಯಿಂದ ಬಹಿರಂಗವಾಗಿದೆ.

50–100 ಮೀಟರ್ ಮಾತ್ರವೆಂದು ನಿಯಮ ಉಲ್ಲಂಘಿಸಿ ಒನ್‌ವೇಗಳಲ್ಲಿ ನುಗ್ಗುವ ಸವಾರರಿಂದ ಎದುರುಬರುವ ವಾಹನಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದು, ಇದರಿಂದ ನಗರದಲ್ಲಿ ಸಂಚಾರ ಅಸ್ತವ್ಯಸ್ತವಾಗುತ್ತಿದೆ. ಈ ಹಿನ್ನೆಲೆ ಟ್ರಾಫಿಕ್ ಹತೋಟಿಗೆ ಮೊದಲ ಹೆಜ್ಜೆಯಾಗಿ ಬೆಂಗಳೂರು ಸಂಚಾರಿ ಪೊಲೀಸರು ಆರ್‌ಟಿಓ ಜೊತೆ ಕೈಜೋಡಿಸಿ ಒನ್‌ವೇ ಸವಾರರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ವಿಶೇಷ ತಂಡಗಳನ್ನು ರಚಿಸಿ ನಿಯಮ ಉಲ್ಲಂಘಿಸುವ ಸವಾರರನ್ನು ಪತ್ತೆಹಚ್ಚಿ, ಅವರ ಚಾಲನಾ ಪರವಾನಗಿಗಳನ್ನು ಆರ್‌ಟಿಓಗೆ ರವಾನೆ ಮಾಡಲಾಗುತ್ತಿದ್ದು, ಪೊಲೀಸರ ಶಿಫಾರಸಿನ ಮೇರೆಗೆ ಇಂತಹ ಡಿಎಲ್‌ಗಳನ್ನು ಮೂರು ತಿಂಗಳ ಕಾಲ ಅಮಾನತು ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.

ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ: ಪಾಕಿಸ್ತಾನ ತಂಡ ಪ್ರಕಟ, ಸಲ್ಮಾನ್ ಅಲಿ ಅಘಾ ನಾಯಕ

0

ಇಸ್ಲಾಮಾಬಾದ್: ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಟಿ20 ಸರಣಿಗೆ ಪಾಕಿಸ್ತಾನ್ ಟಿ20 ತಂಡವನ್ನು ಪ್ರಕಟಿಸಲಾಗಿದೆ. 16 ಸದಸ್ಯರ ಈ ತಂಡವನ್ನು ಸಲ್ಮಾನ್ ಅಲಿ ಅಘಾ ಮುನ್ನಡೆಸಲಿದ್ದು, ಟಿ20 ವಿಶ್ವಕಪ್‌ನಲ್ಲಿಯೂ ಅವರು ಪಾಕ್ ತಂಡದ ನಾಯಕನಾಗಿ ಮುಂದುವರೆಯುವುದು ಖಚಿತವಾಗಿದೆ.

ಈ ತಂಡದಲ್ಲಿ ಹಿರಿಯ ಆಟಗಾರರಾದ ಬಾಬರ್ ಆಝಂ ಹಾಗೂ ಶಾಹೀನ್ ಶಾ ಅಫ್ರಿದಿಗೆ ಮರು ಅವಕಾಶ ನೀಡಲಾಗಿದೆ. ಕಳಪೆ ಫಾರ್ಮ್ ಹಿನ್ನೆಲೆ ಇಬ್ಬರನ್ನೂ ತಂಡದಿಂದ ಹೊರಗಿಡಲಾಗಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಸರಣಿಗೆ ಪಾಕ್ ಕ್ರಿಕೆಟ್ ಮಂಡಳಿ ಅನುಭವಿ ಆಟಗಾರರ ಮೇಲೆ ಮತ್ತೆ ನಂಬಿಕೆ ಇಟ್ಟಿದೆ.

ಇನ್ನೊಂದೆಡೆ, ಅನುಭವಿ ವಿಕೆಟ್ ಕೀಪರ್ ಮೊಹಮ್ಮದ್ ರಿಝ್ವಾನ್ ಅವರನ್ನು ಈ ಸರಣಿಗೆ ಆಯ್ಕೆ ಮಾಡಿಲ್ಲ. ಜೊತೆಗೆ ವೇಗಿ ಹ್ಯಾರಿಸ್ ರೌಫ್ ಅವರಿಗೂ ಟಿ20 ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಈ ಆಯ್ಕೆ ಕುರಿತಾಗಿ ಪಾಕ್ ಕ್ರಿಕೆಟ್ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಪಾಕಿಸ್ತಾನ್ ಟಿ20 ತಂಡ

ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಬಾಬರ್ ಆಝಂ, ಫಹೀಮ್ ಅಶ್ರಫ್, ಫಖರ್ ಝಮಾನ್, ಖ್ವಾಜಾ ಮೊಹಮ್ಮದ್ ನಫಯ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಝ್, ಮೊಹಮ್ಮದ್ ಸಲ್ಮಾನ್ ಮಿರ್ಝ, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಸಾಹಿಬ್ಝಾದ ಫರ್ಹಾನ್ (ವಿಕೆಟ್ ಕೀಪರ್), ಶಾಹೀನ್ ಶಾ ಅಫ್ರಿದಿ, ಸೈಮ್ ಅಯ್ಯೂಬ್, ಶಾದಾಬ್ ಖಾನ್, ಉಸ್ಮಾನ್ ಖಾನ್ (ವಿಕೆಟ್ ಕೀಪರ್), ಉಸ್ಮಾನ್ ತಾರಿಖ್.

ಆಸ್ಟ್ರೇಲಿಯಾ ಟಿ20 ತಂಡ

ಮಿಚೆಲ್ ಮಾರ್ಷ್ (ನಾಯಕ), ಶಾನ್ ಅಬಾಟ್, ಕ್ಸೇವಿಯರ್ ಬಾರ್ಟ್ಲೆಟ್, ಮಹ್ಲಿ ಬಿಯರ್ಡ್ಮನ್, ಕೂಪರ್ ಕೊನೊಲಿ, ಬೆನ್ ದ್ವಾರ್ಶುಯಿಸ್, ಜ್ಯಾಕ್ ಎಡ್ವರ್ಡ್ಸ್, ಕ್ಯಾಮರೋನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಮ್ಯಾಥ್ಯೂ ಕುಹ್ನೆಮನ್, ಮಿಚೆಲ್ ಓವನ್, ಜೋಶ್ ಫಿಲಿಪಿ, ಮ್ಯಾಥ್ಯೂ ರೆನ್ಶಾ, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ಆ್ಯಡಂ ಝಂಪಾ.

ರಥಸಪ್ತಮಿ 2026: ಹಬ್ಬದ ಆಚರಣೆ ಮತ್ತು ಮಹತ್ವವನ್ನು ತಿಳಿಯಿರಿ!

0

ರಥಸಪ್ತಮಿಯು ಹಿಂದೂ ಧರ್ಮದಲ್ಲಿ ಅತ್ಯಂತ ಮಹತ್ವದ ಹಾಗೂ ಮಂಗಳಕರ ಪರ್ವ ಕಾಲಗಳಲ್ಲಿ ಒಂದಾಗಿದೆ.

ಜಗದ ಚಕ್ಷು ಹಾಗೂ ಬ್ರಹ್ಮಾಂಡದ ಶಕ್ತಿಯ ಮೂಲವಾದ ಸೂರ್ಯ ಭಗವಾನರ ಜನ್ಮದಿನವೆಂದು ಆಚರಿಸಲಾಗುತ್ತದೆ. ಮಾಘ ಮಾಸದ ಶುಕ್ಲಪಕ್ಷದ ಸಪ್ತಮಿ ದಿನದಂದು ಈ ಪರ್ವ ನಡೆಯುತ್ತಿದ್ದು, ಈ ದಿನ ಸೂರ್ಯನ ವಿಶೇಷ ಲಹರಿಗಳು ಇಡೀ ಬ್ರಹ್ಮಾಂಡದ ಮೇಲೆ ಪ್ರಭಾವ ಬೀರುತ್ತವೆ ಎಂದು ನಂಬಲಾಗಿದೆ.

2026ರಲ್ಲಿ ರಥಸಪ್ತಮಿ ಜನವರಿ 25ರ ಭಾನುವಾರವಾಗಿದ್ದು, ಸಪ್ತಮಿ ತಿಥಿ ಬೆಳಗ್ಗೆ 12:39ರಿಂದ ರಾತ್ರಿ 11:10ರವರೆಗೆ ಇರುತ್ತದೆ. ಈ ದಿನ ಬೆಳಗಿನ ಜಾವ ಏಳು ಎಕ್ಕದ ಎಲೆಗಳನ್ನು ತಲೆ, ಭುಜ, ಮೊಣಕಾಲು ಹಾಗೂ ಪಾದಗಳ ಮೇಲೆ ಇಟ್ಟುಕೊಂಡು ಪೂರ್ವಾಭಿಮುಖವಾಗಿ ಸೂರ್ಯನನ್ನು ಸ್ಮರಿಸುತ್ತಾ ಸ್ನಾನ ಮಾಡುವ ಪದ್ಧತಿ ಇದೆ. ಇದರಿಂದ ಆಯುರಾರೋಗ್ಯ, ಐಶ್ವರ್ಯ, ಪ್ರಜ್ಞಾವರ್ಧನೆ ಆಗುವುದರ ಜೊತೆಗೆ ಮಾಟಮಂತ್ರ ಹಾಗೂ ದುಷ್ಟಶಕ್ತಿಗಳಿಂದ ರಕ್ಷಣೆ ದೊರೆಯುತ್ತದೆ ಎಂದು ನಂಬಲಾಗಿದೆ.

ಸೂರ್ಯನಿಗೆ ಎಕ್ಕದ ಎಲೆಗಳು ಅತ್ಯಂತ ಪ್ರಿಯವಾದುದರಿಂದ ಈ ಸ್ನಾನವು ಜನ್ಮಪಾಪಗಳನ್ನು ನಿವಾರಿಸಿ ಮನಸ್ಸನ್ನು ಶುದ್ಧಗೊಳಿಸಿ ಜೀವನದಲ್ಲಿ ಉತ್ಸಾಹವನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತದೆ. ಇದೇ ವೇಳೆ ರಥಸಪ್ತಮಿ ದಿನ ಸೂರ್ಯನ ಚೈತನ್ಯಶಕ್ತಿ ಸಪ್ತ ನದಿಗಳಲ್ಲಿ ವಿಶೇಷವಾಗಿ ಪ್ರವಹಿಸುವುದರಿಂದ ನದಿಸ್ನಾನಕ್ಕೆ ಹೆಚ್ಚಿನ ಮಹತ್ವವಿದ್ದು, ಶ್ರೀರಂಗಪಟ್ಟಣ, ಹೇಮಗಿರಿ, ಶಿಕಾರಿಪುರ, ಇಡಗುಂಜಿ, ಕೊಪ್ಪಳ ಮುಂತಾದ ಪವಿತ್ರ ಸ್ಥಳಗಳಲ್ಲಿ ಸ್ನಾನ ಹಾಗೂ ಬ್ರಹ್ಮರಥೋತ್ಸವಗಳು ಭಕ್ತಿಯಿಂದ ಆಚರಿಸಲಾಗುತ್ತವೆ.

ನೆಲಮಂಗಲ ಜಾಸ್ ಟೋಲ್ ಬಳಿ ಸರಣಿ ಅಪಘಾತ; ತಪ್ಪಿದ ದುರಂತ, ಕಾರುಗಳು ಜಖಂ!

0

ನೆಲಮಂಗಲ:- ನೆಲಮಂಗಲ ಜಾಸ್ ಟೋಲ್ ಬಳಿ ಮೂರು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಮೂರು ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಪರಿಣಾಮ ಕಾರುಗಳು ಜಖಂ ಆಗಿವೆ. ಸ್ಥಳಕ್ಕೆ ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 22 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ನೆಲಮಂಗಲ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ದಟ್ಟಣೆ ಹೆಚ್ಚಾಗಿದೆ. ಜೊತೆಗೆ ನಿನ್ನೆ ಶನಿವಾರ ವೀಕೆಂಡ್, ಭಾನುವಾರ ರಜೆ, ಸೋಮವಾರ ಗಣರಾಜ್ಯೋತ್ಸವ ರಜೆ ಹೀಗಾಗಿ ಜನ ತಮ್ಮ ತಮ್ಮ ಊರುಗಳತ್ತ ತೆರಳುತ್ತಿದ್ದಾರೆ.

ಇನ್ನೂ ಕೆಲವರು ಪ್ರವಾಸಿ ತಾಣಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಬಳಿಕ ಸಂಚಾರಿ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ.

ದೇಶದ ಉದ್ಧಾರಕ್ಕೆ ಕಂಕಣಬದ್ಧರಾಗೋಣ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಹಿಂದೂ ಸಮ್ಮೇಳನ ಸಮಿತಿಯ ವತಿಯಿಂದ ಶನಿವಾರ ಪಟ್ಟಣದಲ್ಲಿ ನಡೆದ ಹಿಂದೂ ಸಮಾವೇಶಕ್ಕೂ ಮುಂಚೆ ನಡೆದ ಶೋಭಾಯಾತ್ರೆಯು ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಕೊಂತಿ ಮಲ್ಲಪ್ಪನ ದೇವಸ್ಥಾನದ ಎದುರು ಬೃಹತ್ ಶೋಭಾಯಾತ್ರೆಗೆ ನರೇಗಲ್ಲ ಹಿರೇಮಠದ ಷ.ಬ್ರ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ನಿಶಾನೆ ತೋರುವುದರ ಮೂಲಕ ಚಾಲನೆ ನೀಡಿದರು. ನರೇಗಲ್ಲ ಹೋಬಳಿಯ 21 ಗ್ರಾಮಗಳಿಂದ ಆಗಮಿಸಿದ್ದ ಎಲ್ಲ ಹಿಂದೂಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಯಾತ್ರೆಗೆ ವಿಶೇಷ ಮೆರುಗು ನೀಡಿದರು.

ಗೊಂಬೆ ಕುಣಿತ, ಹನುಮಂತನ ವೇಷ, ಮಹಿಳೆಯರ ಡೊಳ್ಳು, ಜಾಂಜ್ ಮೇಳ ಮುಂತಾದವುಗಳು ಮೆರವಣಿಗೆಯ ಆಕರ್ಷಣೆ ಹೆಚ್ಚಿಸಿದ್ದವು. ಮಹಿಳೆಯರು ಮತ್ತು ಮಕ್ಕಳು ವಿವಿಧ ವೇಷಭೂಷಣಗಳನ್ನು ತೊಟ್ಟು ಮೆರವಣಿಗೆಯುದ್ದಕ್ಕೂ ಸಾಗಿದರು. ಅದರಲ್ಲಿ ರಾಮ, ಲಕ್ಷ್ಮಣ, ಸೀತೆ, ಹನುಮಂತ, ಇತ್ಯಾದಿ ಮಹಾನುಭಾವರ ವೇಷಭೂಷಣಗಳು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರುಗಳ ವೇಷಭೂಷಣಗಳಿದ್ದವು. ಶೋಭಾಯಾತ್ರೆ ಸಾಗಿದ ರಸ್ತೆಯುದ್ದಕ್ಕೂ ನೆರೆದು ಯಾತ್ರೆ ನೋಡುತ್ತಿದ್ದ ಜನರಲ್ಲಿ ಆಧ್ಯಾತ್ಮಿಕದ ಅಲೆ, ದೇಶ ಭಕ್ತಿಯ ಅಲೆಯನ್ನೇ ಎಬ್ಬಿಸಿದವು.

ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಶಿವಾಚಾರ್ಯರು, ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎನ್ನುವ ಭಾವನೆ ಎಂದಿಗೂ ನಮ್ಮಲ್ಲಿರಬೇಕು. ನಮ್ಮ ನಡುವಿನ ಚಿಕ್ಕಪುಟ್ಟ ಭಿನ್ನಾಭಿಪ್ರಾಯಗಳನ್ನು ತೊಡೆದು ಹಾಕಿ ನಾವು ದೇಶದ ಉದ್ಧಾರಕ್ಕೆ ಕಂಕಣಬದ್ಧರಾಗಬೇಕು. ಶಕ್ತಿಶಾಲಿ ದೇಶವನ್ನು ಕಟ್ಟಲು ಮುಂದಾಗಬೇಕು. ನಮ್ಮ ಮಕ್ಕಳಲ್ಲಿ ದೇಶದ ಬಗ್ಗೆ ಪ್ರೀತಿಯನ್ನು ಹುಟ್ಟಿಸುವುದರ ಜೊತೆಗೆ, ಅವರಲ್ಲಿ ಆಧ್ಯಾತ್ಮಿಕ ಅರಿವನ್ನೂ, ಸಂಸ್ಕೃತಿಯನ್ನೂ ಬಿತ್ತಬೇಕು. ನಮ್ಮ ಮಕ್ಕಳಲ್ಲಿ ಅಂತಹ ಗುಣಗಳು ಇಂತಹ ಸಮ್ಮೇಳನಗಳಿಂದ ಬರುತ್ತವೆ. ಆದ್ದರಿಂದ ಎಲ್ಲಿಯಾದರೂ ಇಂತಹ ಸಮ್ಮೇಳನಗಳು ನಡೆದರೆ ನಿಮ್ಮ ಮಕ್ಕಳೊಂದಿಗೆ ಪಾಲ್ಗೊಳ್ಳಿ. ಇಂದು ಇಲ್ಲಿ ನೆರೆದಿರುವ ಹಿಂದೂ ಸಮಾಜದ ಜನರನ್ನು ಕಂಡು ಸಂತಸವಾಗಿದೆ ಎಂದು ಹೇಳಿದರು.

ಖವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ ಮಾರ್ಗದರ್ಶನದಲ್ಲಿ ನರೇಗಲ್ಲ ಪೊಲೀಸ್ ಠಾಣೆಯ ಪಿಎಸ್‌ಐ ಐಶ್ವರ್ಯ ನಾಗರಾಳ ಮತ್ತು ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ವ್ಯವಸ್ಥೆ ನಿರ್ವಹಿಸಿದರು. ಈ ಸಂದರ್ಭದಲ್ಲಿ ಗಜೇಂದ್ರಗಡ ಪಿಎಸ್‌ಐ ಡಿ. ಪ್ರಕಾಶ, ರೋಣ ಪಿಎಸ್‌ಐ ಪ್ರಕಾಶ ಬಣಕಾರ, ಅಪರಾಧ ವಿಭಾಗದ ಪಿಎಸ್‌ಐ ಚವಡಿ ಬೀರಣ್ಣ ಅವರ ಜೊತೆಗೆ ರೋಣ, ಗಜೇಂದ್ರಗಡ, ಮುಂಡರಗಿ, ನರಗುಂದ ಠಾಣಾ ಸಿಬ್ಬಂದಿಗಳು ಇದ್ದರು.

ಕೊಂತಿ ಮಲ್ಲಪ್ಪನ ಗುಡಿಯಿಂದ ಪ್ರಾರಂಭವಾದ ಶೋಭಾಯಾತ್ರೆಯು ಶ್ರೀ ದ್ಯಾಮವ್ವ-ಶ್ರೀ ವೀರಭದ್ರ ದೇವಸ್ಥಾನ, ಶ್ರೀ ವಿನಾಯಕ ದೇವಸ್ಥಾನ ಮೂಲಕ ಸಂತೆ ಬಜಾರ, ಹಳೆ ಬಸ್ ನಿಲ್ದಾಣ, ಪಟ್ಟಣದ ಮುಖ್ಯ ಬೀದಿ, ಹೊಸ ಬಸ್ ನಿಲ್ದಾಣದ ಮೂಲಕ ಸಮಾರಂಭದ ಮುಖ್ಯ ವೇದಿಕೆ ಹಿರೇಮಠದ ಮುಖ್ಯ ವೇದಿಕೆಗೆ ತಲುಪಿತು.

ಕೊಳೆಗೇರಿ ಜನರೂ ಮುಖ್ಯವಾಹಿನಿಗೆ ಬರಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಕೊಳೆಗೇರಿ ಜನರೂ ಮುಖ್ಯವಾಹಿನಿಗೆ ಬರಬೇಕು. ಇದಕ್ಕಾಗಿ ಇಷ್ಟು ಬೃಹತ್ ಪ್ರಮಾಣದಲ್ಲಿ ಮನೆ ವಿತರಣೆ ಮಾಡುತ್ತಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳು ಇರುವುದೇ ಬಡವರನ್ನು ಮುಖ್ಯವಾಹಿನಿಗೆ ತರಲು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ವಸತಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಗೃಹ ಮಂಡಳಿ ವತಿಯಿಂದ ಶನಿವಾರ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗೃಹ ಮಂಡಳಿ ನಿರ್ಮಿಸಿರುವ 42,345 ಮನೆಗಳು ಹಾಗೂ ಕೊಳೆಗೇರಿ ಅಭಿವೃದ್ಧಿ ಮಂಡಳಿಯ 46,000 ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿ ಅವರು ಶುಭ ಹಾರೈಸಿ ಮಾತನಾಡಿದರು.

ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ನಮ್ಮ ಕಾಂಗ್ರೆಸ್ ಸರ್ಕಾರ 1,45,8000 ಮನೆಗಳನ್ನು ಕಟ್ಟಿ ಇತಿಹಾಸ ನಿರ್ಮಿಸಿ ವಸತಿ ಕ್ರಾಂತಿ ಮಾಡಿದ್ದೆವು. ಎರಡನೇ ಬಾರಿ ಮುಖ್ಯಮಂತ್ರಿ ಆದ ಬಳಿಕ 2024ರಲ್ಲಿ 36,789 ಮನೆಗಳನ್ನು ಮೊದಲ ಹಂತದಲ್ಲಿ ವಿತರಿಸಿದ್ದ ನಮ್ಮ ಸರ್ಕಾರದಿಂದ ಎರಡನೇ ಹಂತದಲ್ಲಿ 45 ಸಾವಿರ ಮನೆಗಳನ್ನು ಹಂಚುತ್ತಿದ್ದೇವೆ ಎಂದರು.

ನಾವು ಹೇಳಿದ ಎಲ್ಲವನ್ನೂ ಮಾಡಿ ನುಡಿದಂತೆ ನಡೆದಿದ್ದೇವೆ. ಅವರು ಹೇಳಿದ್ದನ್ನು ಮಾಡದೆ ನಮ್ಮ ಬಗ್ಗೆ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ವಿದೇಶದಿಂದ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದರು. ಮಹದಾಯಿ, ಕೃಷ್ಣ ಮೇಲ್ದಂಡೆ, ಭದ್ರಾ ಮೇಲ್ದಂಡೆ ಎಲ್ಲದರಲ್ಲೂ ಭಾಜಪಾ ಮತ್ತು ಕೇಂದ್ರ ಸರ್ಕಾರ ಮಾತು ತಪ್ಪಿದೆ. ರಾಜ್ಯದ ಜನತೆಗೆ ವಂಚಿಸಿದೆ ಎಂದು ಆರೋಪಿಸಿದರಲ್ಲದೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದರು.

ಒಂದು ಮನೆಗೆ 4ರಿಂದ 5 ಲಕ್ಷ ರೂಪಾಯಿಯನ್ನು ಕೊಡುವುದು ರಾಜ್ಯ ಸರ್ಕಾರ. ಕೇಂದ್ರ ಸರ್ಕಾರ ಕೊಡುವುದು ಒಂದು ಲಕ್ಷಕ್ಕಿಂತಲೂ ಕಡಿಮೆ. ಆದರೆ ಹೆಸರು ಮಾತ್ರ ಪ್ರಧಾನಮಂತ್ರಿ ಆವಾಸ್ ಯೋಜನೆ. ಹಣ ನಮ್ಮದು, ರಾಜ್ಯ ಸರ್ಕಾರದ್ದು. ಹೆಸರು ಮಾತ್ರ ಕೇಂದ್ರದ್ದು ಎಂದು ಟೀಕಿಸಿದರು.

ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್, ಸಚಿವರುಗಳಾದ ಸತೀಶ್ ಜಾರಕಿಹೊಳಿ, ಹೆಚ್.ಸಿ. ಮಹದೇವಪ್ಪ, ಹೆಚ್.ಕೆ. ಪಾಟೀಲ್, ಕೆ.ಹೆಚ್. ಮುನಿಯಪ್ಪ, ಸಂತೋಷ್ ಲಾಡ್, ಶಾಸಕರು, ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆದ ಪ್ರಸಾದ್ ಅಬ್ಬಯ್ಯ, ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್, ಸಲೀಂ ಅಹ್ಮದ್ ಸೇರಿದಂತೆ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

ನಮ್ಮ ಸರ್ಕಾರ ಬಂದ ಬಳಿಕ 5,500 ಕೋಟಿ ರೂಪಾಯಿ ಹಣವನ್ನು ಎರಡು ವರ್ಷದಲ್ಲಿ ನಾವು, ನಮ್ಮ ಕಾಂಗ್ರೆಸ್ ಸರ್ಕಾರ ಮನೆಗಳಿಗಾಗಿ ಖರ್ಚು ಮಾಡಿದ್ದೇವೆ. ಇಷ್ಟೆಲ್ಲಾ ಆದರೂ ಸರ್ಕಾರದ ಬೊಕ್ಕಸ ಖಾಲಿ ಎಂದು ಭಾಜಪಾ ಸುಳ್ಳು ವದಂತಿ ಹಂಚುತ್ತಾ ತಿರುಗುತ್ತಿದೆ. ರೈತರ ಪಂಪ್ ಸೆಟ್‌ಗಳಿಗೆ 2,500 ಕೋಟಿ ರೂ. ಸಬ್ಸಿಡಿ ಪ್ರತಿ ವರ್ಷ ಕೊಡುತ್ತಿದ್ದೇವೆ. ಇದರ ಜೊತೆಗೆ ವಿಧವಾ ವೇತನ, ವೃದ್ಧಾಪ್ಯ ವೇತನ ಸೇರಿ ಪ್ರತಿಯೊಂದಕ್ಕೂ ಹೇರಳವಾಗಿ ಹಣ ಬಿಡುಗಡೆ ಮಾಡುತ್ತಲೇ ಇದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇಟ್ಟಿಗೆರೆ ಕೆರೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಶಾಸಕ ಡಾ.ಚಂದ್ರು ಲಮಾಣಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರೈತರಿಗೆ, ಜನ-ಜಾನುವಾರುಗಳಿಗೆ ನೀರು ಪೂರೈಸುವ ಪಟ್ಟಣದ ಇಟ್ಟಿಗೆರೆ ಕೆರೆ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿರುವ ಹಿನ್ನೆಲೆ ಶನಿವಾರ ಸ್ಥಳಕ್ಕೆ ಶಾಸಕ ಡಾ.ಚಂದ್ರು ಲಮಾಣಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ಕೆರೆಯ ಅಳತೆ ಮತ್ತು ಅಲ್ಲಿ ನಡೆದಿರುವ ಕಾಮಗಾರಿಯಿಂದ ಆಗುವ ಸಮಸ್ಯೆ ಮತ್ತು ಅನುಕೂಲತೆಗಳನ್ನು ಕುರಿತು ಅಲ್ಲಿನ ನಿವಾಸಿಗಳು, ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಕೆರೆಯ ಸುತ್ತಲಿನ ಪ್ರದೇಶವನ್ನು ವೀಕ್ಷಿಸಿದ ಅವರು, ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಮಣ್ಣಿನ ಬಂಡು ಹಾಕಿರುವುದನ್ನು ಗಮನಿಸಿ, ಅದರ ಹಿಂದಿನ ಪ್ರದೇಶವು ಮತ್ತೆ ತಗ್ಗು ಪ್ರದೇಶವಾಗುವದರಿಂದ ನೀರು ನಿಲ್ಲುವ ಅಪಾಯ ತಪ್ಪಿದ್ದಲ್ಲ. ಇದರ ಬಗ್ಗೆ ಯಾರೂ ಗಮನ ಹರಿಸದಿರುವದು ವಿಷಾದನೀಯ. ಅಲ್ಲದೆ ಮೇಲಿನಿಂದ ಹರಿದು ಬರುವ ನೀರು ಹೊರಹೋಗುವ ಮಾರ್ಗವೂ ಇಲ್ಲದಿರುವುದು, ರಾಜಕಾಲುವೆ ನಿರ್ಮಾಣ ಮಾಡುವ ಬಗ್ಗೆ ಸರಿಯಾದ ನಿರ್ದೇಶನ ಇಲ್ಲದಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಶಾಸಕರು, ಮಣ್ಣಿನ ಬಂಡು ಹಾಕಿರುವ ಹಿಂದಿನ ಪ್ರದೇಶಕ್ಕೆ ಅಲ್ಲಿನ ನಿವಾಸಿಗಳು ಇಡಿ ಪ್ರದೇಶವನ್ನು ಅಷ್ಟೇ ಎತ್ತರದ ಮಣ್ಣಿನಿಂದ ತುಂಬಿಕೊಳ್ಳುವದು ಸಾಧ್ಯವೇ ಎಂದು ಪ್ರಶ್ನಿಸಿದರು.

ಈ ವೇಳೆ ಕೆಲವರು ಒಂದೆರಡು ಮನೆಗಳನ್ನು ಉಳಿಸುವ ನಿಟ್ಟಿನಲ್ಲಿ ಇಡೀ ಕೆರೆಯನ್ನು ಬಲಿ ಕೊಡಬಾರದು ಎಂದು ಒತ್ತಾಯಿಸಿದರು. ಮೇಲಿನಿಂದ ಬರುವ ನೀರು ಹರಿದು ಹೋಗಲು ಕಾಲುವೆ ನಿರ್ಮಿಸಿದರೆ ಯಾವುದೇ ತೊಂದರೆಯಾಗುವುದಿಲ್ಲ. ಕೆರೆಯ ಜಾಗೆಯು ಯಾವುದೇ ರೀತಿಯಿಂದಲೂ ಅತಿಕ್ರಮಣವಾಗಿಲ್ಲ. ಇಲ್ಲಿ ವಾಸಿಸುವ ಎಲ್ಲರ ನಿವೇಶನಗಳು ಸಹ ಕಾನೂನು ಪ್ರಕಾರ ಮಾಲ್ಕಿಯದ್ದಾಗಿವೆ. ಸುತ್ತಮುತ್ತಲಿನ ನಿವೇಶನಗಳಿಗೆ ಅನುಕೂಲವಾಗುವಂತೆ ಸುಮಾರು 3 ಎಕರೆ ಪ್ರದೇಶದಷ್ಟು ಜಾಗೆಯಲ್ಲಿ ಮಣ್ಣು ಹಾಕಿ ರಸ್ತೆ ಮಾಡಲಾಗಿದ್ದು, ಅದನ್ನು ತೆಗೆದರೆ ನೀರು ತುಂಬಿ ಕೋಡಿ ಹರಿಯುವ ಪ್ರಶ್ನೆ ಉದ್ಭವಿಸುವುದಿಲ್ಲ. ಈ ಹಿಂದೆ ನೀರು ತುಂಬಿಕೊಂಡಾಗ ಇಲ್ಲಿನ ನಿವಾಸಿಗಳು ಸಾಕಷ್ಟು ತೊಂದರೆ, ನೋವು ಅನುಭವಿಸಿದ್ದೇವೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಿ, ಕೆರೆಯ ಅಳತೆಯ ಪ್ರಕಾರ ಅತಿಕ್ರಮಣವಾಗಿರುವ ಜಾಗೆಯನ್ನು ತೆರವುಗೊಳಿಸಿದರೆ ಇಲ್ಲಿನ ನಿವಾಸಿಗಳ ತೊಂದರೆ ತಪ್ಪಿಸಬಹುದಾಗಿದೆ ಎಂದು ಶಂಕರ ಬ್ಯಾಡಗಿ ಹೇಳಿದರು.

ಈ ವೇಳೆ ಉಪವಿಭಾಗಾಧಿಕಾರಿ ಎ.ಸಿ. ಗಂಗಪ್ಪ, ತಹಸೀಲ್ದಾರ ಧನಂಜಯ ಎಂ, ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ವ್ಯವಸ್ಥಾಪಕಿ ಮಂಜುಳಾ ಹೂಗಾರ, ಆರೋಗ್ಯ ನೀರೀಕ್ಷಕ ಮಂಜುನಾಥ ಮುದಗಲ್ ಮುಂತಾದವರಿದ್ದರು.

ನಂತರ ಪುರಸಭೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕರು, ಈ ಕುರಿತು ಅಧಿಕಾರಿಗಳು ಸಮಗ್ರವಾಗಿ ಪರಿಶೀಲನೆ ನಡೆಸಿ ಕಾಮಗಾರಿಯನ್ನು ಮುಂದುವರೆಸಬೇಕು. ಇಲ್ಲಿಯವರೆಗೂ ನಡೆದ ಕಾಮಗಾರಿಯ ಬಗ್ಗೆ ಮಾಹಿತಿ ನೀಡಿ, ಆಗಿರುವ ಕಾಮಗಾರಿಯ ಬಗ್ಗೆ ಇರುವ ದೂರುಗಳನ್ನು ಪರಿಶೀಲಿಸಬೇಕು ಮತ್ತು ಕೆರೆಯ ಅಳತೆಯ ಬಗ್ಗೆಯೂ ಇರುವ ದೂರುಗಳನ್ನು ಸರಿಯಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಇದು ಈ ಭಾಗದ ದೊಡ್ಡ ಮತ್ತು ಹಳೆಯ ಕೆರೆಯಾಗಿದ್ದು, ಅದನ್ನು ಅಭಿವೃದ್ಧಿಪಡಿಸಲು ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

error: Content is protected !!