Home Blog Page 12

ನೆಲಮಂಗಲ ಜಾಸ್ ಟೋಲ್ ಬಳಿ ಸರಣಿ ಅಪಘಾತ; ತಪ್ಪಿದ ದುರಂತ, ಕಾರುಗಳು ಜಖಂ!

0

ನೆಲಮಂಗಲ:- ನೆಲಮಂಗಲ ಜಾಸ್ ಟೋಲ್ ಬಳಿ ಮೂರು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಮೂರು ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಪರಿಣಾಮ ಕಾರುಗಳು ಜಖಂ ಆಗಿವೆ. ಸ್ಥಳಕ್ಕೆ ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 22 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ನೆಲಮಂಗಲ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ದಟ್ಟಣೆ ಹೆಚ್ಚಾಗಿದೆ. ಜೊತೆಗೆ ನಿನ್ನೆ ಶನಿವಾರ ವೀಕೆಂಡ್, ಭಾನುವಾರ ರಜೆ, ಸೋಮವಾರ ಗಣರಾಜ್ಯೋತ್ಸವ ರಜೆ ಹೀಗಾಗಿ ಜನ ತಮ್ಮ ತಮ್ಮ ಊರುಗಳತ್ತ ತೆರಳುತ್ತಿದ್ದಾರೆ.

ಇನ್ನೂ ಕೆಲವರು ಪ್ರವಾಸಿ ತಾಣಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಬಳಿಕ ಸಂಚಾರಿ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ.

ದೇಶದ ಉದ್ಧಾರಕ್ಕೆ ಕಂಕಣಬದ್ಧರಾಗೋಣ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಹಿಂದೂ ಸಮ್ಮೇಳನ ಸಮಿತಿಯ ವತಿಯಿಂದ ಶನಿವಾರ ಪಟ್ಟಣದಲ್ಲಿ ನಡೆದ ಹಿಂದೂ ಸಮಾವೇಶಕ್ಕೂ ಮುಂಚೆ ನಡೆದ ಶೋಭಾಯಾತ್ರೆಯು ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಕೊಂತಿ ಮಲ್ಲಪ್ಪನ ದೇವಸ್ಥಾನದ ಎದುರು ಬೃಹತ್ ಶೋಭಾಯಾತ್ರೆಗೆ ನರೇಗಲ್ಲ ಹಿರೇಮಠದ ಷ.ಬ್ರ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ನಿಶಾನೆ ತೋರುವುದರ ಮೂಲಕ ಚಾಲನೆ ನೀಡಿದರು. ನರೇಗಲ್ಲ ಹೋಬಳಿಯ 21 ಗ್ರಾಮಗಳಿಂದ ಆಗಮಿಸಿದ್ದ ಎಲ್ಲ ಹಿಂದೂಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಯಾತ್ರೆಗೆ ವಿಶೇಷ ಮೆರುಗು ನೀಡಿದರು.

ಗೊಂಬೆ ಕುಣಿತ, ಹನುಮಂತನ ವೇಷ, ಮಹಿಳೆಯರ ಡೊಳ್ಳು, ಜಾಂಜ್ ಮೇಳ ಮುಂತಾದವುಗಳು ಮೆರವಣಿಗೆಯ ಆಕರ್ಷಣೆ ಹೆಚ್ಚಿಸಿದ್ದವು. ಮಹಿಳೆಯರು ಮತ್ತು ಮಕ್ಕಳು ವಿವಿಧ ವೇಷಭೂಷಣಗಳನ್ನು ತೊಟ್ಟು ಮೆರವಣಿಗೆಯುದ್ದಕ್ಕೂ ಸಾಗಿದರು. ಅದರಲ್ಲಿ ರಾಮ, ಲಕ್ಷ್ಮಣ, ಸೀತೆ, ಹನುಮಂತ, ಇತ್ಯಾದಿ ಮಹಾನುಭಾವರ ವೇಷಭೂಷಣಗಳು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರುಗಳ ವೇಷಭೂಷಣಗಳಿದ್ದವು. ಶೋಭಾಯಾತ್ರೆ ಸಾಗಿದ ರಸ್ತೆಯುದ್ದಕ್ಕೂ ನೆರೆದು ಯಾತ್ರೆ ನೋಡುತ್ತಿದ್ದ ಜನರಲ್ಲಿ ಆಧ್ಯಾತ್ಮಿಕದ ಅಲೆ, ದೇಶ ಭಕ್ತಿಯ ಅಲೆಯನ್ನೇ ಎಬ್ಬಿಸಿದವು.

ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಶಿವಾಚಾರ್ಯರು, ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎನ್ನುವ ಭಾವನೆ ಎಂದಿಗೂ ನಮ್ಮಲ್ಲಿರಬೇಕು. ನಮ್ಮ ನಡುವಿನ ಚಿಕ್ಕಪುಟ್ಟ ಭಿನ್ನಾಭಿಪ್ರಾಯಗಳನ್ನು ತೊಡೆದು ಹಾಕಿ ನಾವು ದೇಶದ ಉದ್ಧಾರಕ್ಕೆ ಕಂಕಣಬದ್ಧರಾಗಬೇಕು. ಶಕ್ತಿಶಾಲಿ ದೇಶವನ್ನು ಕಟ್ಟಲು ಮುಂದಾಗಬೇಕು. ನಮ್ಮ ಮಕ್ಕಳಲ್ಲಿ ದೇಶದ ಬಗ್ಗೆ ಪ್ರೀತಿಯನ್ನು ಹುಟ್ಟಿಸುವುದರ ಜೊತೆಗೆ, ಅವರಲ್ಲಿ ಆಧ್ಯಾತ್ಮಿಕ ಅರಿವನ್ನೂ, ಸಂಸ್ಕೃತಿಯನ್ನೂ ಬಿತ್ತಬೇಕು. ನಮ್ಮ ಮಕ್ಕಳಲ್ಲಿ ಅಂತಹ ಗುಣಗಳು ಇಂತಹ ಸಮ್ಮೇಳನಗಳಿಂದ ಬರುತ್ತವೆ. ಆದ್ದರಿಂದ ಎಲ್ಲಿಯಾದರೂ ಇಂತಹ ಸಮ್ಮೇಳನಗಳು ನಡೆದರೆ ನಿಮ್ಮ ಮಕ್ಕಳೊಂದಿಗೆ ಪಾಲ್ಗೊಳ್ಳಿ. ಇಂದು ಇಲ್ಲಿ ನೆರೆದಿರುವ ಹಿಂದೂ ಸಮಾಜದ ಜನರನ್ನು ಕಂಡು ಸಂತಸವಾಗಿದೆ ಎಂದು ಹೇಳಿದರು.

ಖವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ ಮಾರ್ಗದರ್ಶನದಲ್ಲಿ ನರೇಗಲ್ಲ ಪೊಲೀಸ್ ಠಾಣೆಯ ಪಿಎಸ್‌ಐ ಐಶ್ವರ್ಯ ನಾಗರಾಳ ಮತ್ತು ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ವ್ಯವಸ್ಥೆ ನಿರ್ವಹಿಸಿದರು. ಈ ಸಂದರ್ಭದಲ್ಲಿ ಗಜೇಂದ್ರಗಡ ಪಿಎಸ್‌ಐ ಡಿ. ಪ್ರಕಾಶ, ರೋಣ ಪಿಎಸ್‌ಐ ಪ್ರಕಾಶ ಬಣಕಾರ, ಅಪರಾಧ ವಿಭಾಗದ ಪಿಎಸ್‌ಐ ಚವಡಿ ಬೀರಣ್ಣ ಅವರ ಜೊತೆಗೆ ರೋಣ, ಗಜೇಂದ್ರಗಡ, ಮುಂಡರಗಿ, ನರಗುಂದ ಠಾಣಾ ಸಿಬ್ಬಂದಿಗಳು ಇದ್ದರು.

ಕೊಂತಿ ಮಲ್ಲಪ್ಪನ ಗುಡಿಯಿಂದ ಪ್ರಾರಂಭವಾದ ಶೋಭಾಯಾತ್ರೆಯು ಶ್ರೀ ದ್ಯಾಮವ್ವ-ಶ್ರೀ ವೀರಭದ್ರ ದೇವಸ್ಥಾನ, ಶ್ರೀ ವಿನಾಯಕ ದೇವಸ್ಥಾನ ಮೂಲಕ ಸಂತೆ ಬಜಾರ, ಹಳೆ ಬಸ್ ನಿಲ್ದಾಣ, ಪಟ್ಟಣದ ಮುಖ್ಯ ಬೀದಿ, ಹೊಸ ಬಸ್ ನಿಲ್ದಾಣದ ಮೂಲಕ ಸಮಾರಂಭದ ಮುಖ್ಯ ವೇದಿಕೆ ಹಿರೇಮಠದ ಮುಖ್ಯ ವೇದಿಕೆಗೆ ತಲುಪಿತು.

ಕೊಳೆಗೇರಿ ಜನರೂ ಮುಖ್ಯವಾಹಿನಿಗೆ ಬರಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಕೊಳೆಗೇರಿ ಜನರೂ ಮುಖ್ಯವಾಹಿನಿಗೆ ಬರಬೇಕು. ಇದಕ್ಕಾಗಿ ಇಷ್ಟು ಬೃಹತ್ ಪ್ರಮಾಣದಲ್ಲಿ ಮನೆ ವಿತರಣೆ ಮಾಡುತ್ತಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳು ಇರುವುದೇ ಬಡವರನ್ನು ಮುಖ್ಯವಾಹಿನಿಗೆ ತರಲು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ವಸತಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಗೃಹ ಮಂಡಳಿ ವತಿಯಿಂದ ಶನಿವಾರ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗೃಹ ಮಂಡಳಿ ನಿರ್ಮಿಸಿರುವ 42,345 ಮನೆಗಳು ಹಾಗೂ ಕೊಳೆಗೇರಿ ಅಭಿವೃದ್ಧಿ ಮಂಡಳಿಯ 46,000 ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿ ಅವರು ಶುಭ ಹಾರೈಸಿ ಮಾತನಾಡಿದರು.

ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ನಮ್ಮ ಕಾಂಗ್ರೆಸ್ ಸರ್ಕಾರ 1,45,8000 ಮನೆಗಳನ್ನು ಕಟ್ಟಿ ಇತಿಹಾಸ ನಿರ್ಮಿಸಿ ವಸತಿ ಕ್ರಾಂತಿ ಮಾಡಿದ್ದೆವು. ಎರಡನೇ ಬಾರಿ ಮುಖ್ಯಮಂತ್ರಿ ಆದ ಬಳಿಕ 2024ರಲ್ಲಿ 36,789 ಮನೆಗಳನ್ನು ಮೊದಲ ಹಂತದಲ್ಲಿ ವಿತರಿಸಿದ್ದ ನಮ್ಮ ಸರ್ಕಾರದಿಂದ ಎರಡನೇ ಹಂತದಲ್ಲಿ 45 ಸಾವಿರ ಮನೆಗಳನ್ನು ಹಂಚುತ್ತಿದ್ದೇವೆ ಎಂದರು.

ನಾವು ಹೇಳಿದ ಎಲ್ಲವನ್ನೂ ಮಾಡಿ ನುಡಿದಂತೆ ನಡೆದಿದ್ದೇವೆ. ಅವರು ಹೇಳಿದ್ದನ್ನು ಮಾಡದೆ ನಮ್ಮ ಬಗ್ಗೆ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ವಿದೇಶದಿಂದ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದರು. ಮಹದಾಯಿ, ಕೃಷ್ಣ ಮೇಲ್ದಂಡೆ, ಭದ್ರಾ ಮೇಲ್ದಂಡೆ ಎಲ್ಲದರಲ್ಲೂ ಭಾಜಪಾ ಮತ್ತು ಕೇಂದ್ರ ಸರ್ಕಾರ ಮಾತು ತಪ್ಪಿದೆ. ರಾಜ್ಯದ ಜನತೆಗೆ ವಂಚಿಸಿದೆ ಎಂದು ಆರೋಪಿಸಿದರಲ್ಲದೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದರು.

ಒಂದು ಮನೆಗೆ 4ರಿಂದ 5 ಲಕ್ಷ ರೂಪಾಯಿಯನ್ನು ಕೊಡುವುದು ರಾಜ್ಯ ಸರ್ಕಾರ. ಕೇಂದ್ರ ಸರ್ಕಾರ ಕೊಡುವುದು ಒಂದು ಲಕ್ಷಕ್ಕಿಂತಲೂ ಕಡಿಮೆ. ಆದರೆ ಹೆಸರು ಮಾತ್ರ ಪ್ರಧಾನಮಂತ್ರಿ ಆವಾಸ್ ಯೋಜನೆ. ಹಣ ನಮ್ಮದು, ರಾಜ್ಯ ಸರ್ಕಾರದ್ದು. ಹೆಸರು ಮಾತ್ರ ಕೇಂದ್ರದ್ದು ಎಂದು ಟೀಕಿಸಿದರು.

ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್, ಸಚಿವರುಗಳಾದ ಸತೀಶ್ ಜಾರಕಿಹೊಳಿ, ಹೆಚ್.ಸಿ. ಮಹದೇವಪ್ಪ, ಹೆಚ್.ಕೆ. ಪಾಟೀಲ್, ಕೆ.ಹೆಚ್. ಮುನಿಯಪ್ಪ, ಸಂತೋಷ್ ಲಾಡ್, ಶಾಸಕರು, ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆದ ಪ್ರಸಾದ್ ಅಬ್ಬಯ್ಯ, ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್, ಸಲೀಂ ಅಹ್ಮದ್ ಸೇರಿದಂತೆ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

ನಮ್ಮ ಸರ್ಕಾರ ಬಂದ ಬಳಿಕ 5,500 ಕೋಟಿ ರೂಪಾಯಿ ಹಣವನ್ನು ಎರಡು ವರ್ಷದಲ್ಲಿ ನಾವು, ನಮ್ಮ ಕಾಂಗ್ರೆಸ್ ಸರ್ಕಾರ ಮನೆಗಳಿಗಾಗಿ ಖರ್ಚು ಮಾಡಿದ್ದೇವೆ. ಇಷ್ಟೆಲ್ಲಾ ಆದರೂ ಸರ್ಕಾರದ ಬೊಕ್ಕಸ ಖಾಲಿ ಎಂದು ಭಾಜಪಾ ಸುಳ್ಳು ವದಂತಿ ಹಂಚುತ್ತಾ ತಿರುಗುತ್ತಿದೆ. ರೈತರ ಪಂಪ್ ಸೆಟ್‌ಗಳಿಗೆ 2,500 ಕೋಟಿ ರೂ. ಸಬ್ಸಿಡಿ ಪ್ರತಿ ವರ್ಷ ಕೊಡುತ್ತಿದ್ದೇವೆ. ಇದರ ಜೊತೆಗೆ ವಿಧವಾ ವೇತನ, ವೃದ್ಧಾಪ್ಯ ವೇತನ ಸೇರಿ ಪ್ರತಿಯೊಂದಕ್ಕೂ ಹೇರಳವಾಗಿ ಹಣ ಬಿಡುಗಡೆ ಮಾಡುತ್ತಲೇ ಇದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇಟ್ಟಿಗೆರೆ ಕೆರೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಶಾಸಕ ಡಾ.ಚಂದ್ರು ಲಮಾಣಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರೈತರಿಗೆ, ಜನ-ಜಾನುವಾರುಗಳಿಗೆ ನೀರು ಪೂರೈಸುವ ಪಟ್ಟಣದ ಇಟ್ಟಿಗೆರೆ ಕೆರೆ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿರುವ ಹಿನ್ನೆಲೆ ಶನಿವಾರ ಸ್ಥಳಕ್ಕೆ ಶಾಸಕ ಡಾ.ಚಂದ್ರು ಲಮಾಣಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ಕೆರೆಯ ಅಳತೆ ಮತ್ತು ಅಲ್ಲಿ ನಡೆದಿರುವ ಕಾಮಗಾರಿಯಿಂದ ಆಗುವ ಸಮಸ್ಯೆ ಮತ್ತು ಅನುಕೂಲತೆಗಳನ್ನು ಕುರಿತು ಅಲ್ಲಿನ ನಿವಾಸಿಗಳು, ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಕೆರೆಯ ಸುತ್ತಲಿನ ಪ್ರದೇಶವನ್ನು ವೀಕ್ಷಿಸಿದ ಅವರು, ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಮಣ್ಣಿನ ಬಂಡು ಹಾಕಿರುವುದನ್ನು ಗಮನಿಸಿ, ಅದರ ಹಿಂದಿನ ಪ್ರದೇಶವು ಮತ್ತೆ ತಗ್ಗು ಪ್ರದೇಶವಾಗುವದರಿಂದ ನೀರು ನಿಲ್ಲುವ ಅಪಾಯ ತಪ್ಪಿದ್ದಲ್ಲ. ಇದರ ಬಗ್ಗೆ ಯಾರೂ ಗಮನ ಹರಿಸದಿರುವದು ವಿಷಾದನೀಯ. ಅಲ್ಲದೆ ಮೇಲಿನಿಂದ ಹರಿದು ಬರುವ ನೀರು ಹೊರಹೋಗುವ ಮಾರ್ಗವೂ ಇಲ್ಲದಿರುವುದು, ರಾಜಕಾಲುವೆ ನಿರ್ಮಾಣ ಮಾಡುವ ಬಗ್ಗೆ ಸರಿಯಾದ ನಿರ್ದೇಶನ ಇಲ್ಲದಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಶಾಸಕರು, ಮಣ್ಣಿನ ಬಂಡು ಹಾಕಿರುವ ಹಿಂದಿನ ಪ್ರದೇಶಕ್ಕೆ ಅಲ್ಲಿನ ನಿವಾಸಿಗಳು ಇಡಿ ಪ್ರದೇಶವನ್ನು ಅಷ್ಟೇ ಎತ್ತರದ ಮಣ್ಣಿನಿಂದ ತುಂಬಿಕೊಳ್ಳುವದು ಸಾಧ್ಯವೇ ಎಂದು ಪ್ರಶ್ನಿಸಿದರು.

ಈ ವೇಳೆ ಕೆಲವರು ಒಂದೆರಡು ಮನೆಗಳನ್ನು ಉಳಿಸುವ ನಿಟ್ಟಿನಲ್ಲಿ ಇಡೀ ಕೆರೆಯನ್ನು ಬಲಿ ಕೊಡಬಾರದು ಎಂದು ಒತ್ತಾಯಿಸಿದರು. ಮೇಲಿನಿಂದ ಬರುವ ನೀರು ಹರಿದು ಹೋಗಲು ಕಾಲುವೆ ನಿರ್ಮಿಸಿದರೆ ಯಾವುದೇ ತೊಂದರೆಯಾಗುವುದಿಲ್ಲ. ಕೆರೆಯ ಜಾಗೆಯು ಯಾವುದೇ ರೀತಿಯಿಂದಲೂ ಅತಿಕ್ರಮಣವಾಗಿಲ್ಲ. ಇಲ್ಲಿ ವಾಸಿಸುವ ಎಲ್ಲರ ನಿವೇಶನಗಳು ಸಹ ಕಾನೂನು ಪ್ರಕಾರ ಮಾಲ್ಕಿಯದ್ದಾಗಿವೆ. ಸುತ್ತಮುತ್ತಲಿನ ನಿವೇಶನಗಳಿಗೆ ಅನುಕೂಲವಾಗುವಂತೆ ಸುಮಾರು 3 ಎಕರೆ ಪ್ರದೇಶದಷ್ಟು ಜಾಗೆಯಲ್ಲಿ ಮಣ್ಣು ಹಾಕಿ ರಸ್ತೆ ಮಾಡಲಾಗಿದ್ದು, ಅದನ್ನು ತೆಗೆದರೆ ನೀರು ತುಂಬಿ ಕೋಡಿ ಹರಿಯುವ ಪ್ರಶ್ನೆ ಉದ್ಭವಿಸುವುದಿಲ್ಲ. ಈ ಹಿಂದೆ ನೀರು ತುಂಬಿಕೊಂಡಾಗ ಇಲ್ಲಿನ ನಿವಾಸಿಗಳು ಸಾಕಷ್ಟು ತೊಂದರೆ, ನೋವು ಅನುಭವಿಸಿದ್ದೇವೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಿ, ಕೆರೆಯ ಅಳತೆಯ ಪ್ರಕಾರ ಅತಿಕ್ರಮಣವಾಗಿರುವ ಜಾಗೆಯನ್ನು ತೆರವುಗೊಳಿಸಿದರೆ ಇಲ್ಲಿನ ನಿವಾಸಿಗಳ ತೊಂದರೆ ತಪ್ಪಿಸಬಹುದಾಗಿದೆ ಎಂದು ಶಂಕರ ಬ್ಯಾಡಗಿ ಹೇಳಿದರು.

ಈ ವೇಳೆ ಉಪವಿಭಾಗಾಧಿಕಾರಿ ಎ.ಸಿ. ಗಂಗಪ್ಪ, ತಹಸೀಲ್ದಾರ ಧನಂಜಯ ಎಂ, ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ವ್ಯವಸ್ಥಾಪಕಿ ಮಂಜುಳಾ ಹೂಗಾರ, ಆರೋಗ್ಯ ನೀರೀಕ್ಷಕ ಮಂಜುನಾಥ ಮುದಗಲ್ ಮುಂತಾದವರಿದ್ದರು.

ನಂತರ ಪುರಸಭೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕರು, ಈ ಕುರಿತು ಅಧಿಕಾರಿಗಳು ಸಮಗ್ರವಾಗಿ ಪರಿಶೀಲನೆ ನಡೆಸಿ ಕಾಮಗಾರಿಯನ್ನು ಮುಂದುವರೆಸಬೇಕು. ಇಲ್ಲಿಯವರೆಗೂ ನಡೆದ ಕಾಮಗಾರಿಯ ಬಗ್ಗೆ ಮಾಹಿತಿ ನೀಡಿ, ಆಗಿರುವ ಕಾಮಗಾರಿಯ ಬಗ್ಗೆ ಇರುವ ದೂರುಗಳನ್ನು ಪರಿಶೀಲಿಸಬೇಕು ಮತ್ತು ಕೆರೆಯ ಅಳತೆಯ ಬಗ್ಗೆಯೂ ಇರುವ ದೂರುಗಳನ್ನು ಸರಿಯಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಇದು ಈ ಭಾಗದ ದೊಡ್ಡ ಮತ್ತು ಹಳೆಯ ಕೆರೆಯಾಗಿದ್ದು, ಅದನ್ನು ಅಭಿವೃದ್ಧಿಪಡಿಸಲು ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

ಗುತ್ತಿಗೆ ಪೌರಕಾರ್ಮಿಕರ ಮರುನೇಮಕಕ್ಕೆ ಒತ್ತಾಯ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪುರಸಭೆಯ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೌರಕಾರ್ಮಿಕರನ್ನು ಕೆಲಸದಿಂದ ತೆಗೆದಿದ್ದು, ಪುನಃ ನೇಮಿಸಿಕೊಳ್ಳಬೇಕು ಎಂದು ಗುತ್ತಿಗೆ ಕಾರ್ಮಿಕರು ಶನಿವಾರ ಆಡಳಿತಾಧಿಕಾರಿ ಹಾಗೂ ಗದಗ ಜಿಲ್ಲಾ ಉಪವಿಭಾಗಾಧಿಕಾರಿ ಎ.ಸಿ ಗಂಗಪ್ಪ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಗುತ್ತಿಗೆದಾರ ಪೌರಕಾರ್ಮಿಕರು ಮಾತನಾಡಿ, ಕಳೆದ 10 ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ನ್ಯಾಯ ಸಿಗುತ್ತಿಲ್ಲ. ಕಳೆದ ಮಾರ್ಚ್‌ನಿಂದ ನಾಲ್ಕು ತಿಂಗಳು ಕಾರ್ಯನಿರ್ವಹಿಸಿದ್ದಾರೆ. ಅದರಲ್ಲಿ ಗುತ್ತಿಗೆದಾರರ 2 ತಿಂಗಳ ಗೌರವಧನ ಕೊಟ್ಟು ಇನ್ನು ಎರಡು ತಿಂಗಳು ಗೌರವಧನ ಕೊಟ್ಟಿಲ್ಲ. 10 ಜನರಲ್ಲಿ 6 ಜನರನ್ನು ತೆಗೆದುಕೊಂಡಿದ್ದು, ನಾಲ್ಕು ಜನರನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಈ ಎಲ್ಲರನ್ನೂ ಮತ್ತೆ ಕೆಲಸಕ್ಕೆ ಸೇರಿಸಿಕೊಂಡಲ್ಲಿ ಜೀವನ ನಿರ್ವಹಣೆಗೆ ಅನುಕೂಲವಾಗುತ್ತದೆ ಎಂದು ವಿನಂತಿಸಿದರು.

ಪುರಸಭೆ ಮಾಜಿ ಉಪಾಧ್ಯಕ್ಷ ರಾಮಪ್ಪ ಗಡದವರ ಹಾಗೂ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಬಸವಣ್ಣಪ್ಪ ನಂದೆಣ್ಣವರ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ 10 ಜನರನ್ನು ನೇಮಿಸಿಕೊಳ್ಳಲು ಆಡಳಿತ ಮಂಡಳಿಯು ಠರಾವು ಮಾಡಿದ್ದು, ಅವರಿಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಇರುವ ಸಮಸ್ಯೆಗಳನ್ನು ಬಗೆಹರಿಸಿ ಕೂಡಲೇ ಅನುಕೂಲತೆ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗುತ್ತಿಗೆ ಪೌರಕಾರ್ಮಿಕರಾದ ಕಲ್ಯಾಣಕುಮಾರ ಹಾದಿಮನಿ, ಅಭಿಜಿತ್ ನಂದೆಣ್ಣವರ, ರಾಮಪ್ಪ ಅಯ್ಯಣ್ಣವರ, ನೀಲಪ್ಪ ಶಿರಹಟ್ಟಿ, ಪರಮೇಶ ಗಡದವರ, ಅರುಣ ನಂದೆಣ್ಣವರ, ಹೊನ್ನಪ್ಪ ಮೇಗಲಮನಿ, ಪ್ರಕಾಶ ಗಡದವರ, ಮಂಜುನಾಥ ದೊಡ್ಡಮನಿ, ನೀಲಪ್ಪ ಭಜಕ್ಕನವರ ಸೇರಿದಂತೆ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ವ್ಯವಸ್ಥಾಪಕಿ ಮಂಜುಳಾ ಹೂಗಾರ, ಹನುಮಂತ ನಂದೆಣ್ಣವರ ಮುಂತಾದವರಿದ್ದರು.

ರುಚಿಕರ ಉಪಹಾರ, ಮಧ್ಯಾಹ್ನದ ಊಟ | ವ್ಯವಸ್ಥಿತ ವಿತರಣೆಗೆ ತೃಪ್ತರಾದ 1.35 ಲಕ್ಷಕ್ಕೂ ಅಧಿಕ ಜನ

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಐತಿಹಾಸಿಕ ಕಾರ್ಯಕ್ರಮದಲ್ಲಿ 2 ಲಕ್ಷಕ್ಕೂ ಅಧಿಕ ಜನಸ್ತೋಮ ಭಾಗವಹಿಸಿತ್ತು. ಸಮಾರಂಭಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ರುಚಿ-ಶುಚಿಯಾದ ಊಟ, ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮಕ್ಕೆ ಆಗಮಿಸಿದ್ದವರಿಗೆ ಶಿಸ್ತುಬದ್ಧವಾಗಿ ಆಹಾರ ವಿತರಣೆ ವ್ಯವಸ್ಥೆಗೆ ವ್ಯಾಪಕ ಸಿದ್ಧತೆ ಮಾಡಲಾಗಿತ್ತು. ರುಚಿಕರವಾದ ಉಪಹಾರ ಹಾಗೂ ಮಧ್ಯಾಹ್ನದ ಊಟವನ್ನು ಶಿಸ್ತುಬದ್ಧವಾಗಿ ವಿತರಣೆ ಮಾಡಲಾಯಿತು. ಭಾರೀ ಜನಸಂದಣಿ ಇದ್ದರೂ ಸಹ, ಬೆಳಿಗ್ಗೆ 30 ಸಾವಿರಕ್ಕೂ ಅಧಿಕ ಜನರಿಗೆ ಉಪಹಾರ ವಿತರಿಸಲಾಯಿತು.

ಊಟ, ಉಪಹಾರ ವಿತರಣೆಗೆ ಒಟ್ಟು 124 ಕೌಂಟರ್‌ಗಳನ್ನು ಸ್ಥಾಪಿಸಲಾಗಿತ್ತು. ಬೆಳಗಿನ ಉಪಹಾರವಾಗಿ 30 ಸಾವಿರ ಜನರಿಗೆ ಉಪ್ಪಿಟ್ಟು ವಿತರಣೆ ಮಾಡಲಾಯಿತು. ನಂತರ ಮಧ್ಯಾಹ್ನದ ಊಟವಾಗಿ ಪಲಾವ್, ಮೊಸರನ್ನ, ಮೈಸೂರು ಪಾಕ್ ಹಾಗೂ ಸೇರುವಾ ವಿತರಿಸಲಾಯಿತು. ಒಟ್ಟು 1.50 ಲಕ್ಷಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದಲ್ಲದೆ, 2 ಲಕ್ಷ ಜನರಿಗೆ ವಾಟರ್ ಬಾಟಲ್ ವ್ಯವಸ್ಥೆ ಮಾಡಲಾಗಿತ್ತು.

ಉಪಹಾರ, ಊಟದ ಸಿದ್ಧತೆಗಾಗಿ 300 ಜನ, ಊಟದ ವಿತರಣೆಗಾಗಿ 200 ಸಿಬ್ಬಂದಿ ಹಾಗೂ ಸ್ವಚ್ಛತಾ ಕಾರ್ಯಕ್ಕೆ 150 ಕಾರ್ಮಿಕರನ್ನು ನಿಯೋಜಿಸಲಾಗಿತ್ತು. ಊಟದ ನಂತರ ಜನರಿಗೆ ಕೈ ತೊಳೆಯುವ ವ್ಯವಸ್ಥೆಗೆ 20 ನೀರಿನ ಟ್ಯಾಂಕರ್‌ಗಳನ್ನು ನಿಲ್ಲಿಸಲಾಗಿತ್ತು. ಆಹಾರ ವಿತರಣೆಯಲ್ಲಿ ಶುದ್ಧತೆ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಅಡಿಗೆ ತಯಾರಿಕೆ, ಊಟ ಬಡಾವಣೆ ಮತ್ತು ಸ್ವಚ್ಛತಾ ಕಾರ್ಯಗಳು ವಿವಿಧ ವಿಭಾಗದ ಕಾರ್ಮಿಕರ ಸಮನ್ವಯದಿಂದ ನಡೆದವು.

ಅದ್ಭುತವಾದ ಕಾರ್ಯಕ್ರಮ ಮತ್ತು ರುಚಿಕರವಾದ ಊಟದಿಂದ ತೃಪ್ತರಾದ ಸಾರ್ವಜನಿಕರು, ಆಯೋಜಕರು ನಿರ್ವಹಿಸಿದ ಕಾರ್ಯವನ್ನು ಮನದುಂಬಿ ಶ್ಲಾಘಿಸಿದರು.

ಜನಸಂದಣಿ ಹೆಚ್ಚಿದ್ದರೂ ಸಹ ಯಾವುದೇ ರೀತಿಯ ಗೊಂದಲ ಉಂಟಾಗದಂತೆ ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು. ಒಟ್ಟಾರೆ ಭಾರೀ ಜನಸಾಗರದ ನಡುವೆಯೂ ಆಹಾರ ವ್ಯವಸ್ಥೆಯನ್ನು ಅತ್ಯುತ್ತಮವಾಗಿ, ಅಚ್ಚುಕಟ್ಟಾಗಿ ನಿರ್ವಹಿಸಿದ ಸಹಾಯಕ ಪೊಲೀಸ್ ಆಯುಕ್ತ ಮಂಜುನಾಥ ಬಳಗಾನೂರಮಠ ಹಾಗೂ ಕರ್ನಾಟಕ ಕೊಳಚೆ ಅಭಿವೃದ್ಧಿ ನಿಗಮದ ಕಾರ್ಯಪಾಲಕ ಅಭಿಯಂತರ ಪ್ರಸನ್ನಕುಮಾರ, ಜವಾಹರ ಜೋಗಿ, ಚೇತನಕುಮಾರ ಅವರ ನೇತೃತ್ವದಲ್ಲಿ ಸಮರ್ಥವಾಗಿ ಹಾಗೂ ಶಿಸ್ತುಬದ್ಧವಾಗಿ ನಿರ್ವಹಿಸಲಾಯಿತು.

ಜ. 27ರಂದು ಅಖಿಲ ಭಾರತ ಬ್ಯಾಂಕ್ ನೌಕರರ ಮುಷ್ಕರ

0

ವಿಜಯಸಾಕ್ಷಿ ಸುದ್ದಿ, ಗದಗ: ಉದ್ಯೋಗಿಗಳ ಹಾಗೂ ಅಧಿಕಾರಿಗಳ 9 ಸಂಘಟನೆಗಳನ್ನು ಒಳಗೊಂಡಿರುವ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜ. 27ರಂದು ದೇಶದಾದ್ಯಂತ ಬ್ಯಾಂಕ್ ನೌಕರರ ಮುಷ್ಕರವನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಈ ಮುಷ್ಕರದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು, ಖಾಸಗಿ ವಲಯದ ಬ್ಯಾಂಕುಗಳು, ವಿದೇಶಿ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಸಹಕಾರ ಬ್ಯಾಂಕುಗಳ ನೌಕರರು ಪಾಲ್ಗೊಳ್ಳಲಿದ್ದಾರೆ.

ಬ್ಯಾಂಕ್ ನೌಕರರ ಬೇಡಿಕೆಗಳಾದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಾರಕ್ಕೆ 5 ದಿನಗಳ ಕೆಲಸ ವ್ಯವಸ್ಥೆ ಜಾರಿಗೆ ತರಲು ಸರ್ಕಾರದ ಅನುಮೋದನೆ ನೀಡಬೇಕು, ಪ್ರಸ್ತುತ ಬ್ಯಾಂಕುಗಳಿಗೆ ರಜೆ ಆಗಿರುವ 2ನೇ ಮತ್ತು 4ನೇ ಶನಿವಾರಗಳ ಹೊರತಾಗಿ ಉಳಿದ ಎಲ್ಲಾ ಶನಿವಾರಗಳನ್ನು ರಜೆ ಎಂದು ಘೋಷಿಸಬೇಕು ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಧರಣಿ ನಡೆಸಲಿದ್ದಾರೆ.

ಬ್ಯಾಂಕುಗಳಲ್ಲಿ ಈಗಾಗಲೇ 2ನೇ ಮತ್ತು 4ನೇ ಶನಿವಾರಗಳು ರಜೆಯಾಗಿರುವುದರಿಂದ, ಸೋಮವಾರದಿಂದ ಶುಕ್ರವಾರದವರೆಗೆ ಕೆಲಸದ ಸಮಯವನ್ನು ಹೆಚ್ಚಿಸಿ ಉಳಿದ ಶನಿವಾರಗಳನ್ನು ರಜೆ ಎಂದು ಘೋಷಿಸುವುದರಿಂದ ವಿವಿಧ ಪರ್ಯಾಯ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುವ ಇಂದಿನ ಪರಿಸ್ಥಿತಿಯಲ್ಲಿ ಗ್ರಾಹಕರಿಗೆ ಯಾವುದೇ ದೊಡ್ಡ ಸಮಸ್ಯೆಯಾಗುವುದಿಲ್ಲ. ಬ್ಯಾಂಕ್ ಉದ್ಯೋಗಿಗಳು ಮತ್ತು ಅಧಿಕಾರಿಗಳು ತಮಗೆ ಮಾತ್ರ ಅನ್ಯಾಯವಾಗುತ್ತಿರುವುದರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿ ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಪಿಎಂಸಿ ಪ್ರಾದೇಶಿಕ ಕಚೇರಿಯ ಮುಂದೆ ಮತ ಪ್ರದರ್ಶನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.

ಈ ಮತ ಪ್ರದರ್ಶನದಲ್ಲಿ ಹನುಮೇಶ್ ಎಂ.ಗಂಗರಾಹುತರ, ಅಮರೇಶ್ವರ, ಶಿವಾನಂದ್, ಪ್ರೇಮ್ ಕುಮಾರ, ಸೂರ್ಯಪ್ರಕಾಶ್, ದೀಪ ಮಾಲಾ, ನೇಹಾ, ಸುಧಾರಾಣಿ, ಪ್ರೀತಿ, ಲೋಕೇಶ್, ಹರೀಶ, ದೀಪಕ, ವಿನೋದ, ವಿಜಯ, ಸಿದ್ದಲಿಂಗೇಶ, ರಾಜು ಸಿಂಗಾಡಿ ಮುಂತಾದವರು ಪಾಲ್ಗೊಂಡಿದ್ದರು.

ಹಣಕಾಸು ಕ್ಷೇತ್ರದಲ್ಲಿ ಈಗಾಗಲೇ ಆರ್.ಬಿ.ಐ, ಎಲ್.ಐ.ಸಿ ಮತ್ತು ಜಿ.ಐ.ಸಿಗಳಲ್ಲಿ ವಾರಕ್ಕೆ 5 ದಿನಗಳ ಕೆಲಸ ವ್ಯವಸ್ಥೆ ಜಾರಿಗೆ ಬಂದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲಾ ಕಚೇರಿಗಳು ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಕಾರ್ಯನಿರ್ವಹಿಸುತ್ತವೆ. ಷೇರುಪೇಟೆಗಳು ಸಹ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಕಾರ್ಯನಿರ್ವಹಿಸುತ್ತವೆ. ಹಣ ಮಾರುಕಟ್ಟೆ ವಿದೇಶಿ ವಿನಿಮಯ ವ್ಯವಹಾರಗಳು ಶನಿವಾರ ಹಾಗೂ ಭಾನುವಾರ ಮುಚ್ಚಿರುತ್ತವೆ ಎಂದು ಯೂನಿಯನ್ ಮುಖ್ಯಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಧಕ ರತ್ನಗಳಿಗೆ `ಶರಣಶ್ರೀ ಪ್ರಶಸ್ತಿ’

ಕವಿತಾ ಮಿಶ್ರಾ ಹೈದಾರಾಬಾದ ಕರ್ನಾಟಕ ಪ್ರದೇಶದ ರಾಯಚೂರ ಜಿಲ್ಲೆಯ ಶಿರವಾರ ತಾಲೂಕು ಕವಿತಾಳ ಗ್ರಾಮದವರು. ವಿದ್ಯಾಕಾಶಿ ಧಾರವಾಡದ ಪ್ರಸೆಂಟೇಶನ್ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ, ಕಿಟಲ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿ ನಾಡಿನ ಪ್ರತಿಷ್ಠಿತ ಹುಬ್ಬಳ್ಳಿಯ ಬಿ.ವ್ಹಿ. ಭೂಮರಡ್ಡಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬಿ.ಇ. ಸಿವಿಲ್ ಪದವಿ ಹಾಗೂ ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು.

ಓದಿದ್ದು ಇಂಜಿನಿಯರಿಯಿಂಗ್ ಹಾಗೂ ಮನಃಶಾಸ್ತ್ರ ವಿಷಯವಾದರೂ ಸಹ ಇವರು ಕೃಷಿ, ತೋಟಗಾರಿಕೆ, ಅರಣ್ಯ ವಿಜ್ಞಾನದಲ್ಲಿ ಆಸಕ್ತಿ ತೋರಿಸಿದರು. ಜೇನು ಕೃಷಿ, ಕುರಿ ಸಾಕಾಣಿಕೆ, ಕುಕ್ಕುಟೋದ್ಯಮ, ಪಶುಪಾಲನೆ, ಹೈನುಗಾರಿಕೆ, ಸಸ್ಯಗಳ ಪಾಲನೆ (ನರ್ಸರಿ) ಮನಃಪೂರ್ವಕವಾಗಿ ಮಾಡಿ ನಿರೀಕ್ಷೆಗೂ ಮೀರಿದ ಆದಾಯ ಗಳಿಸುವುದರ ಜೊತೆಗೆ ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು ಎಂಬುದನ್ನು ಸಾಕಾರಗೊಳಿಸಿದ ಶ್ರೇಯಸ್ಸು ಇವರದಾಗಿದೆ.

ಮನಸ್ಸಿದ್ದಲ್ಲಿ ಮಾರ್ಗವೆಂಬಂತೆ ನಮ್ಮ ದೇಶದ ಮೂಲ ಕಸಬನ್ನು ನಿರ್ವಹಿಸಿ ಅದರಲ್ಲಿ ಯಶಸ್ಸನ್ನು ಕಾಣುವುದರ ಮೂಲಕ ಯುವಸಮುದಾಯಕ್ಕೆ, ರೈತ ವರ್ಗಕ್ಕೆ ಮಾದರಿಯಾಗಿರುವರು. ಬೀದರ ಪಶುವೈದ್ಯಕೀಯ, ಮೀನುಗಾರಿಕಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಯಚೂರು ಕೃಷಿ ವಿ.ವಿಯಿಂದ ಅತ್ಯುತ್ತಮ ಕೃಷಿಕ ಪ್ರಶಸ್ತಿ, ಹೈದಾರಾಬಾದ ಅಂತಾರಾಷ್ಟ್ರೀಯ ಸಂಶೋಧನಾ ಸಂಸ್ಥೆಯಿನಿಂದ ಸುವರ್ಣ ಪ್ರಶಸ್ತಿ, ಬಾಗಲಕೋಟೆ ತೋಟಗಾರಿಕಾ ವಿ.ವಿಯಿಂದ ಅತ್ಯುತ್ತಮ ತೋಟಗಾರಿಕಾ ರೈತ ಮಹಿಳೆ ಪ್ರಶಸ್ತಿ, ಕೇಂದ್ರ ಸರ್ಕಾರದ ಕೃಷಿ ವಿಜ್ಞಾನ ಸಚಿವಾಲಯದಿಂದ ಕೃಷಿಕ ಪ್ರಶಸ್ತಿ ಜೊತೆಗೆ ಕೃಷಿ ಆಹಾರ ತಂತ್ರಜ್ಞಾನ ಸಚಿವಾಲಯದಿಂದ ಆರ್.ಎಸ್.ಎಸ್ ದೆಹಲಿಯವರಿಂದ ಪ್ರೇರಣಾದೀಪ ಗೌರವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ, ಸನ್ಮಾನಗಳಿಗೆ ಭಾಜನರಾಗಿದ್ದಾರೆ.

ಅವರಗೀಗ ಚಿಕೇನಕೊಪ್ಪದ ಶ್ರೀಚನ್ನವೀರ ಶರಣರ ಮಠ ಸುಕ್ಷೇತ್ರ ಬಳಗಾನೂರ ಹಾಗೂ ಸಿದ್ಧಲಿಂಗನಗೌಡ ಎಸ್.ಜಂಗ್ಲೆಪ್ಪಗೌಡ್ರ ಉಮಾ ವಿದ್ಯಾಶ್ರೀ ಟ್ರಸ್ಟ್ ನವಲಗುಂದ ಅವರ ಸಹಯೋಗದಲ್ಲಿ ಶರಣಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಚಲನಚಿತ್ರ ಹಿನ್ನೆಲೆ ಗಾಯಕ ಕಡಬಗೇರಿ ಮುನಿರಾಜು ಬೆಂಗಳೂರು ಎಂ.ಕೆಪಯ್ಯ ಪುತ್ರ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ನಾಡಿನ ಶ್ರೇಷ್ಠ ಜನಪದ ಕಲಾವಿದರಾಗಿ, ಹಿನ್ನೆಲೆ ಗಾಯಕರಾಗಿ ಪ್ರಸಿದ್ಧಿ ಪಡೆದಿದ್ದಾರೆ. ಅನೇಕ ಚಲನಚಿತ್ರ ಗೀತೆಗಳಿಗೆ ಹಿನ್ನೆಲೆ ನೀಡಿ, ಅವುಗಳಿಗೆ ಜೀವತುಂಬಿ ಚಲನಚಿತ್ರ ಯಶಸ್ವಿಯಾಗಲು ಹೆಚ್ಚು ಶ್ರಮಿಸುತ್ತಿರುವರು. ಸುಮಾರು 60 ಚಲನಚಿತ್ರಗಳಿಗೆ ಹಿನ್ನೆಲೆ ಗಾಯನ ನೀಡಿದ ಹೆಗ್ಗಳಿಕೆ ಇವರದಾಗಿದೆ. ದಕ್ಷಿಣ ಭಾರತ ಮಿರ್ಚಿ ಸಂಗೀತ ಪ್ರಶಸ್ತಿ, ಚಂದನವನ ಸಿನಿಮಾ ಪ್ರಶಸ್ತಿ, ಆದಿಜ್ಯೋತಿ ಬ್ಯಾನೋ ರಾಷ್ಟ್ರೀಯ ಪ್ರಶಸ್ತಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ನಟಸಾರ್ವಭೌಮ ಡಾ. ರಾಜಕುಮಾರ ಚಾಲುಕ್ಯ ಪ್ರಶಸ್ತಿಯು ಜಾನಪದ ಕ್ಷೇತ್ರದ ಬೆಳವಣಿಗೆ ಹಾಗೂ ಯುವ ಸಬಲೀಕರಣಕ್ಕಾಗಿ ಕಾರ್ಯಕ್ರಮಗಳನ್ನು ನೀಡಿರುವುದರ ಪ್ರಯಕ್ತ ಲಭಿಸಿವೆ.

ಅತ್ಯುತ್ತಮ ಹಾಡುಗಾರ ಎಂದು 2023-24ರಲ್ಲಿ ನಾಮನಿರ್ದೇಶಿತರಾಗಿದ್ದಾರೆ. 4 ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಾಡಿನ ಒಳ-ಹೊರಗೆ ನೀಡಿ ಜನರಲ್ಲಿ ಜನಪದ ಜಾಗೃತಿ ಮೂಡಿಸುವುದರ ಮೂಲಕ ಜನಪದ, ಕಲೆಯ ಉಳಿವು ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. ಡಿಡಿ ಚಂದನ ದೂರದರ್ಶನದಿಂದ ಗಾನಗಾರುಡಿಗ ಪ್ರಶಸ್ತಿಗೆ ಪಾತ್ರರಾದ ಅವರಗೀಗ ಶರಣಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅನ್ನಪೂರ್ಣ ಬಸಯ್ಯ ಬಳೂಲಮಠ ಬಸವನಾಡು ಬಾಗಲಕೋಟೆ ನಗರದ ಸರಳ ಸಾತ್ವಿಕ ಶರಣಜೀವಿ, ವೇ.ಮೂ. ಬಸಯ್ಯ-ಪ್ರಭಾವತಿ ಅವರ ಪುಣ್ಯಗರ್ಭದಲ್ಲಿ 23-02-1998ರಂದು ಜನಿಸಿದರು. ಇವರ ಕುಟುಂಬ ಪೂಜ್ಯ ಶರಣರ ಪ್ರಭಾವ ವಲಯದಲ್ಲಿ ಬೆಳೆದು ಬಂದಿರುವುದು ಹೆಮ್ಮೆ. ಇವರು ಪ್ರಾಥಮಿಕ ಶಿಕ್ಷಣದಿಂದ ಬಿ.ಇ. ಪದವಿಯವರೆಗೆ ಬಾಗಲಕೋಟೆಯಲ್ಲಿ ಶಿಕ್ಷಣ ಪೂರೈಸಿದರು. ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬಂತೆ ಬಾಲ್ಯದಿಂದಲೂ ಸತತ ಅಭ್ಯಾಸ, ಅಧ್ಯಯನ, ಓದು, ಬರಹಗಳೊಂದಿಗೆ ಮುಂಚೂಣಿಯಲ್ಲಿದ್ದು, ಪ್ರತಿಭಾಶಾಲಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಬಿ.ಇ. ಸಿವಿಲ್ ವಿಭಾಗದಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ನಾಡಿನ ಪ್ರತಿಷ್ಠಿತ ಸುರತಕಲ್ ಇಂಜಿನಿಯರಿಯಿಂಗ್ ಕಾಲೇಜಿನಲ್ಲಿ ಎಂ.ಟೆಕ್ ಸ್ನಾತಕೋತ್ತರ ಪದವಿಯನ್ನು ವ್ಯಾಸಂಗ ಮಾಡಿ ತೇರ್ಗಡೆ ಹೊಂದಿದರು.

ರಾಷ್ಟ್ರದ ಪ್ರತಿಷ್ಠಿತ ಧಾರವಾಡ ಐ.ಐ.ಟಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಆಯ್ಕೆಯಾಗಿ ಹೈಡ್ರೋ ಮೆಕ್ಯಾನಿಕಲ್ ಬಿಹೇವಿಯರ್ ಆಫ್ ಅನ್‌ಸಾಚ್ಯೂರೇಟಡ್ ರೈಲ್ವೇ ಎಂಬಾಕಮೆಂಟ್ ವಿಷಯವನ್ನು ಆಧರಿಸಿ ಪ್ರಸ್ತುತ ರೈಲುಮಾರ್ಗದಲ್ಲಿಯ ಮಣ್ಣಿನ ಗುಣಲಕ್ಷಣಗಳು ಕುರಿತು ವಿಶೇಷ ಸಂಶೋಧನೆ ಕೈಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಅನೇಕ ಶೈಕ್ಷಣಿಕ ಕಾರ್ಯಾಗಾರಗಳಲ್ಲಿ ಭಾಗವಹಿಸಿದ ಇವರು ತಮ್ಮ ಅಭ್ಯಾಸಪೂರ್ಣ ವಿದ್ವತ್‌ಪೂರ್ಣ ಪ್ರಬಂಧಗಳನ್ನು ಮಂಡಿಸಿ, ಪ್ರಸ್ತುತ ವಿಷಯಗಳ ಕುರಿತು ವಿಶೇಷ ಬೆಳಕು ಚೆಲ್ಲಿರುವರು. ಬಿ.ಟೆಕ್ ಪದವಿಯಲ್ಲಿ 6ನೇ ರ‍್ಯಾಂಕ್ ಗಳಿಸುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಸುರಂಗಮಾರ್ಗದ ಕುರಿತು ಮಣ್ಣಿನಲ್ಲಿಯ ಖನಿಜಾಂಶಗಳು, ಅವುಗಳ ವಿಧಗಳ ಕುರಿತು ಬಹುಕರಾರುವಕ್ಕಾಗಿ ಅಧ್ಯಯನ ಮಾಡುವುದರ ಮೂಲಕ ವಿಷಯಪ್ರಭುತ್ವ ಹೊಂದಿದ್ದಾರೆ. ಸಿವಿಲ್ ಇಂಜಿನಿಯರಿಯಿಂಗ್ ಕ್ಷೇತ್ರದಲ್ಲಿ ಹೊಸಭರವಸೆ, ನಿರೀಕ್ಷೆಗಳನ್ನು ಹೊಂದಿರುವ ಇವರು ನವ-ನವೀನ ಸಂಶೋಧನೆಗಳ ಮೂಲಕ ಆ ಕ್ಷೇತ್ರವನ್ನು ಶ್ರೀಮಂತಗೊಳಿಸುತ್ತಿದ್ದಾರೆ. ಇವರ ಗ್ರಂಥಗಳ ಪ್ರಕಟಣೆ ಅಧ್ಯಯನಾಸಕ್ತರಿಗೆ ಆಕರಗ್ರಂಥಗಳಾಗಿರುವುದು ಇವರ ಬಹುಮುಖ ಪ್ರತಿಭಾಸಂಪನ್ನತಿಗೆ ಸಾಕ್ಷಿಯಾಗಿದೆ. ಅನೇಕ ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾದ ಅವರಗೀಗ ಚಿಕೇನಕೊಪ್ಪದ ಶ್ರೀಚನ್ನವೀರ ಶರಣರ ಮಠ ಸುಕ್ಷೇತ್ರ ಬಳಗಾನೂರ ಹಾಗೂ ಸಿದ್ಧಲಿಂಗನಗೌಡ ಎಸ್.ಜಂಗ್ಲೆಪ್ಪಗೌಡ್ರ ಉಮಾ ವಿದ್ಯಾಶ್ರೀ ಟ್ರಸ್ಟ್ ಕೊಡಮಾಡುವ ಶರಣಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

  • ಬಿ.ವಾಯ್. ಡೊಳ್ಳಿನ.
    ಮುಂಡರಗಿ.

ಸಾಕ್ಷಾತ್ ಶ್ರೀಹರಿಯ ಸ್ವರೂಪ ಡಾ. ಮಹೇಶ ಹಿರೇಮಠ

ಭಾರತೀಯ ಸನಾತನ ಪರಂಪರೆಯಲ್ಲಿ `ವೈದ್ಯೋ ನಾರಾಯಣೋ ಹರಿಃ’ ಎಂದು ಹೇಳಲಾಗಿದೆ. ಅಂದರೆ ರೋಗಗಳನ್ನು ಗುಣಪಡಿಸುವ ತಜ್ಞ ವೈದ್ಯರು ಸಾಕ್ಷತ್ ಹರಿ ನಾರಾಯಣನ ಸ್ವರೂಪವೇ ಆಗಿರುತ್ತಾರೆ. ಇಂದಿನ ಆಧುನಿಕ ಒತ್ತಡದ ಜಂಜಾಟದ ಜೀವನ ಶೈಲಿಯಲ್ಲಿ ಬಿ.ಪಿ, ಶುಗರ್‌ನಂತಹ ಅನೇಕ ರೋಗಗಳು ಮನುಷ್ಯನನ್ನು ಜರ್ಜರಿತನನ್ನಾಗಿಸುತ್ತವೆ. ಜೀವನ ಶೈಲಿಯ ರೋಗಗಳಿಗೆ ನಿಧಾನವಾಗಿಯಾದರೂ ಸರಿ, ಶಾಶ್ವತ ಪರಿಹಾರವನ್ನು ನೀಡುವುದೇ ಆಯುರ್ವೇದ.

ಈ ರೋಗಗಳಿಂದ ಜನರನ್ನು ಮುಕ್ತರನ್ನಾಗಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ಗುರಿಯನ್ನು ಹೊಂದಿದವರು ಆಯುರ್ವೇದ ತಜ್ಞ ಚಿಕಿತ್ಸಕರಾದ ಡಾ. ಮಹೇಶ ಹಿರೇಮಠ ಮತ್ತು ಡಾ. ಸೌಮ್ಯಶ್ರೀ ಹಿರೇಮಠ ದಂಪತಿಗಳು. ಹಲವು ವರ್ಷಗಳಿಂದ ಗದುಗಿನ ವಿವೇಕಾನಂದ ನಗರದಲ್ಲಿರುವ ಅಕ್ಷಯ ಆಯುರ್ಧಾಮದ ಮೂಲಕ ಈ ದಂಪತಿಗಳು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಮೂಲತಃ ಚಿಕ್ಕಹಂದಿಗೋಳದವರಾದ ಮಹೇಶ ಹಿರೇಮಠರು ಸುಸಂಸ್ಕೃತ ಹಿರೇಮಠ ಮನೆತನದಲ್ಲಿ 1983ರಲ್ಲಿ ಗದಿಗೆಯ್ಯ ಮತ್ತು ಗಿರಿಜಾ ದಂಪತಿಗಳ ಸುಪುತ್ರರಾಗಿ ಕೊಪ್ಪಳದಲ್ಲಿ ಜನಿಸಿದರು. ತಮ್ಮ ಆರಂಭಿಕ ಶಿಕ್ಷಣವನ್ನು ರೋಣದಲ್ಲಿ ಪಡೆದು ಮುಂದೆ ಗದುಗಿನ ಮಾಡಲ್ ಹೈಸ್ಕೂಲ್‌ನಲ್ಲಿ ಪ್ರೌಢಶಿಕ್ಷಣ, ಜೆ.ಟಿ ಪ.ಪೂ. ಕಾಲೇಜಿನಿಂದ ಪಿಯುಸಿ ಶಿಕ್ಷಣ ಪಡೆದರು. ಆರಂಭದಿಯಿಂದಲೂ ಇವರಿಗೆ ಪಾರಂಪರಿಕ ವೈದ್ಯಕೀಯ ಪದ್ಧತಿಯಲ್ಲಿ ಅಪಾರ ಆಸಕ್ತಿ. ಇವರ ಅಜ್ಜನವರಾದ ಡಾ. ಗಂಗಾಧರಯ್ಯ ಹಿರೇಮಠರವರು ಪಾರಂಪರಿಕ ಆಯುರ್ವೇದ ತಜ್ಞರಾಗಿರುವುದು ಇವರ ಮೇಲೆ ಪ್ರಭಾವ ಬೀರಿತು. ಗದುಗಿನ ಪ್ರತಿಷ್ಠಿತ ಡಿ.ಜಿ.ಎಂ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಬಿ.ಎ.ಎಂ.ಎಸ್ ಪದವಿಯನ್ನು ಪಡೆದು, 2010ರಲ್ಲಿ ಗದುಗಿನ ವಿವೇಕಾನಂದ ನಗರದಲ್ಲಿ ತಮ್ಮ `ಅಕ್ಷಯ ಆಯುರ್ಧಾಮ’ ಚಿಕಿತ್ಸಾಲಯವನ್ನು ಪ್ರಾರಂಭಿಸಿದರು. ಮುಂದೆ ಕಾರಟಗಿ ಹತ್ತಿರದ ಸೋಮನಾಳ ಗ್ರಾಮದವರಾದ ಆಯುರ್ವೇದದಲ್ಲಿ ಎಂ.ಡಿ ಪದವಿ ಪಡೆದ ಡಾ. ಸೌಮ್ಯಶ್ರೀಯವರನ್ನು ವಿವಾಹವಾಗಿ ದಂಪತಿಗಳಿಬ್ಬರೂ ಸೇರಿ ಜನ ಸೇವೆಯ ಕಾಯಕದಲ್ಲಿ ತೊಡಗಿದರು.

ಕಳೆದ 16 ವರ್ಷಗಳಿಂದ ಆಯುರ್ವೇದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತ ಬಂದಿರುವ ಇವರು ಮೈಸೂರು ಸರಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಕಾಯಚಿಕಿತ್ಸೆಯಲ್ಲಿ ಎಂ.ಡಿ ಪದವಿ ಪಡೆದಿರುವುದರಿಂದ ಪಂಚಕರ್ಮ ಚಿಕಿತ್ಸೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ನೀಡುತ್ತಾರೆ. ಪಾರ್ಶ್ವವಾಯು, ಚರ್ಮರೋಗ, ಸಂಧಿವಾತ, ಅಸಿಡಿಟಿ, ಕರಳು ಕಾಯಿಲೆಗಳು, ಗಾಲ್‌ಬ್ಲಾಡರ್ ಮತ್ತು ಕಿಡ್ನಿಸ್ಟೋನ್ ಮುಂತಾದ ರೋಗಗಳನ್ನು ಅಲೋಪಥಿ ಪದ್ಧತಿಯನ್ನು ಅನುಸರಿಸದೇ ಶುದ್ಧವಾದ ಆಯುರ್ವೇದ ಪದ್ಧತಿಯಿಂದಲೇ ಗುಣಪಡಿಸುತ್ತಾ ಬಂದಿರುವುದು ಇವರ ಹೆಗ್ಗಳಿಕೆಯಾಗಿದೆ. ಇವರು ಸಾವಿರಾರು ರೋಗಿಗಳನ್ನು ಗುಣಮುಖರನ್ನಾಗಿ ಮಾಡಿದ್ದಾರೆ.

ತಮ್ಮ 16 ವರ್ಷಗಳ ನಿರಂತರ ವೈದ್ಯಕೀಯ ಸೇವೆಯ ಜೊತೆಗೆ ಅಧ್ಯಯನಶೀಲರೂ, ಸಂಶೋಧನಾಸಕ್ತರೂ ಆಗಿರುವ ಡಾ. ಹಿರೇಮಠರವರು ದೇಶದ ವಿವಿಧ ಪ್ರದೇಶಗಳಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ವಿವಿಧ ಆಯುರ್ವೇದ ಸಮ್ಮೇಳನಗಳಲ್ಲಿ ಉಪನ್ಯಾಸಕರಾಗಿ, ನಿರ್ಣಾಯಕರಾಗಿ ಪಾಲ್ಗೊಂಡಿದ್ದಾರೆ. ನೂರಾರು ಪ್ರಬಂಧಗಳನ್ನು ಮಂಡಿಸಿ ಜಾಗತಿಕ ಮನ್ನಣೆ ಪಡೆದಿದ್ದಾರೆ.

ಹೀಗೆ ನಿರಂತರವಾದ ಆಯುರ್ವೇದ ಕ್ಷೇತ್ರದ ತಮ್ಮ ಸಾಧನೆ-ಸೇವೆಗಾಗಿ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ತಮ್ಮ ಸ್ನಾತಕೋತ್ತರ ಪದವಿ ಅಧ್ಯಯನ ಸಂದರ್ಭದಲ್ಲಿಯೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ ಜಿಜ್ಞಾಸು ಸಮ್ಮೇಳನದಲ್ಲಿ ಉತ್ತಮ ಪ್ರಬಂಧ ಮಂಡಿಸಿದ್ದಕ್ಕಾಗಿ “ಜಿಜ್ಞಾಸು” ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಯೋಗದ ಬಗೆಗೂ ವಿಶೇಷ ಪರಿಣಿತಿ ಮತ್ತು ಆಸಕ್ತಿ ಹೊಂದಿರುವ ಇವರು ಯೋಗದಲ್ಲಿ ವಿಶಿಷ್ಟ ಸಾಧನೆಗೆ ‘ಯೋಗ ಪ್ರಬೋಧಿನಿ’ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

ಡಾ. ಮಹೇಶ ಹಿರೇಮಠರ ಮತ್ತೊಂದು ವಿಶೇಷತೆಯೆಂದರೆ, ನಾಡಿ ನೋಡಿ ಗುಣ ಪಡಿಸುವ ಅವರ ಕೌಶಲ್ಯ. ರೋಗ ನಿಧಾನ ತಂತ್ರಗಾರಿಕೆಯಲ್ಲಿ ಪಾರಂಪರಿಕ ವೈದ್ಯ ಪದ್ಧತಿಯಂತೆ ನಾಡಿ ನೋಡಿಯೇ ರೋಗದ ಗುಣಲಕ್ಷಣವನ್ನು ನಿರ್ಧರಿಸುತ್ತಾರೆ. “ವಿಶ್ವಾಸೋ ಫಲದಾಯಕ” ಎಂಬ ನುಡಿಯಂತೆ ಸದಾ ಹಸನ್ಮುಖಿಯಾಗಿ ಪ್ರೀತಿ, ಅಂತಃಕರಣ, ಕಕ್ಕುಲತೆಯಿಂದ ರೋಗಿಗಳನ್ನು ಮಾತನಾಡಿಸಿ ತಮ್ಮ ಮಾತಿನಿಂದಲೇ ಅರ್ಧ ರೋಗ, ಔಷಧಿಗಳಿಂದ ಅರ್ಧ ರೋಗ ಗುಣಮುಖಪಡಿಸುವುದು ಇವರ ವೈಶಿಷ್ಟ್ಯತೆಯಾಗಿದೆ. ಚಿಕಿತ್ಸೆಯಲ್ಲಿ ಔಷಧದ ಸೇವನೆ ಅತ್ಯಂತ ಪ್ರಮುಖವಾಗಿರುತ್ತದೆ. ಹೀಗಾಗಿ ಡಾ. ಹಿರೇಮಠ ದಂಪತಿಗಳು ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿ ರಥ ಸಪ್ತಮಿಯ ಶುಭದಿನದಂದು `ಹಿರೇಮಠ ನ್ಯಾಚರಲ್ಸ್’ ನೈಸರ್ಗಿಕ ಆಹಾರ ಉತ್ಪನ್ನಗಳ ಘಟಕದ ಉದ್ಘಾಟನೆಯೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದ್ದಾರೆ.

  • ಡಾ. ಡಿ.ಎಲ್. ಪಾಟೀಲ (ಗದಗ)

ವಾರ್ಡ ನಂ. 29 ರ ಹಾತಲಗೇರಿ ನಾಕಾ ಬಳಿ ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಸಾರ್ವಜನಿಕರಿಂದ ರಸ್ತೆ ತಡೆದು ಪ್ರತಿಭಟನೆ

0

ಗದಗ: ನಗರದ ವಾರ್ಡ ನಂ. 29 ರ ಹಾತಲಗೇರಿ ನಾಕಾ ಬಳಿ ಇಂದು ಶಂಕರ ಹೇಮರಡ್ಡಿ ಮುದರಡ್ಡಿ ಇವರ ನೇತೃತ್ವದಲ್ಲಿ ಹಾತಲಗೇರಿ ನಾಕಾದಿಂದ ಧನುಷ್ಯ ಹೋಟೆಲ್‌ನ ವರೆಗಿನ 1, 2 ಮತ್ತು 3 ಅಡ್ಡ ರಸ್ತೆಯ ಸಾರ್ವಜನಿಕರು ಇಂದು ದಿಢೀರನೆ ಪ್ರತಿಭಟನೆ ನಡೆಸಿದರು.

ಮೂಲಭೂತ ಸೌಕರ್ಯಗಳಾದ ಒಳಚರಂಡಿ, ಗಟಾರು, ನೀರು ನಿಂತಲ್ಲೇ ನಿಲ್ಲುತ್ತಿದ್ದು, ಸೊಳ್ಳೆಗಾಳ ಕಾಟ, ಇಲ್ಲೇ ಹತ್ತಿರ ಇಂಡಸ್ಟ್ರಿಯಲ್ ಇರುವುದರಿಂದ ಕಾರ್ಖಾನೆಯಿಂದ ಬಿಡುವ ಹೊಗೆ, ಮಕ್ಕಳ, ವೃದ್ಧರ ಆರೋಗ್ಯಕ್ಕೆ ತೊಂದರೆಯಾಗುತ್ತಿದ್ದು, ಈ ಪ್ರದೇಶದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಮಕ್ಕಳು, ಮಹಿಳೆಯರು, ವೃದ್ಧರು ಇದರಿಂದ ಭಯಭೀತಗೊಂಡಿದ್ದಾರೆ.

ಕೆ. ಎಲ್. ಜಿ. ಕಾಲೇಜು ಕಂಪೌಂಡ್ ಹತ್ತಿರ ಮಾಂಸದ ಅಂಗಡಿಗಳಾಗಿದ್ದು, ಇದರ ದುರ್ವಾಸನೆ ಮತ್ತು ನಾಯಿಗಳ ಕಾಟದಿಂದ ಮಕ್ಕಳು ಭಯಭೀತರಾಗಿದ್ದಾರೆ.

ಈ ಪ್ರದೇಶದಲ್ಲಿ ಕೆ. ಎಲ್. ಇ. ಸೇರಿದಂದ ಶಾಲಾ ಕಾಲೇಜು ಇದ್ದು, ಇಲ್ಲಿ ರಸ್ತೆ ಸಂಚಾರ ಬಹಳ ದಟ್ಟಣೆಯಾಗಿದ್ದು, ರಸ್ತೆಗಳಲ್ಲಿ ಮಕ್ಕಳು ಶಾಲೆ ಕಾಲೇಜುಗಳಿಗೆ ತೆರಳು ಪರದಾಡುವಂತಾಗಿದೆ. ಹಾತಲಗೇರಿ ಮುಖ್ಯ ರಸ್ತೆಯಿಂದ ಸಾಗುವ ಗಟಾರ ಸಂಪೂರ್ಣವಾಗಿ ಹಾಳಾಗಿದ್ದು, ಅದನ್ನು ದುರಸ್ತಿಗೊಳಿಸಬೇಕೆಂದು ಹೀಗೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಹಲವಾರು ಬಾರಿ ನಗರಸಭೆ ಪೌರಾಯುಕ್ತರಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ, ನಗರಸಭೆ ಸದಸ್ಯರಿಗೆ ಮನವಿ ಮಾಡಿಕೊಂಡಿದ್ದು ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಹಾತಲಗೇರಿ ನಾಕಾದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ತಕ್ಷಣವೇ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಕೂಡಲೇ ತಮ್ಮ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಹೇಳಿದರು.

ಶಂಕರ ಹೇಮರಡ್ಡಿ ಮುದರಡ್ಡಿಯವರು ಮಾತನಾಡಿ ಈ ಎಲ್ಲ ಸಮಸ್ಯೆಗಳನ್ನು ಒಂದು ವಾರದೊಳಗೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಆರ್. ಎಸ್. ಪೂಜಾರ, ಬಿ. ಟಿ. ಪಾಟೀಲ, ಮಹಮ್ಮದ ನದಾಫ, ಎಸ್. ಸಿ. ಅಂಗಡಿ, ಪ್ರಕಾಶ ಹಬೀಬ, ಎ. ಸಿ. ಸಿಂಧೂರ, ಮಂಜುನಾಥ ಕಬಾಡಿ ಸೇರಿದಂತೆ ಗುರುಹಿರಿಯರು, ಸಾರ್ವಜನಿಕರು, ಯುವಕರು, ಮಹಿಳೆಯರು ಪಾಲ್ಗೊಂಡಿದ್ದರು.

error: Content is protected !!