Home Blog Page 13

ಸಾಕ್ಷಾತ್ ಶ್ರೀಹರಿಯ ಸ್ವರೂಪ ಡಾ. ಮಹೇಶ ಹಿರೇಮಠ

ಭಾರತೀಯ ಸನಾತನ ಪರಂಪರೆಯಲ್ಲಿ `ವೈದ್ಯೋ ನಾರಾಯಣೋ ಹರಿಃ’ ಎಂದು ಹೇಳಲಾಗಿದೆ. ಅಂದರೆ ರೋಗಗಳನ್ನು ಗುಣಪಡಿಸುವ ತಜ್ಞ ವೈದ್ಯರು ಸಾಕ್ಷತ್ ಹರಿ ನಾರಾಯಣನ ಸ್ವರೂಪವೇ ಆಗಿರುತ್ತಾರೆ. ಇಂದಿನ ಆಧುನಿಕ ಒತ್ತಡದ ಜಂಜಾಟದ ಜೀವನ ಶೈಲಿಯಲ್ಲಿ ಬಿ.ಪಿ, ಶುಗರ್‌ನಂತಹ ಅನೇಕ ರೋಗಗಳು ಮನುಷ್ಯನನ್ನು ಜರ್ಜರಿತನನ್ನಾಗಿಸುತ್ತವೆ. ಜೀವನ ಶೈಲಿಯ ರೋಗಗಳಿಗೆ ನಿಧಾನವಾಗಿಯಾದರೂ ಸರಿ, ಶಾಶ್ವತ ಪರಿಹಾರವನ್ನು ನೀಡುವುದೇ ಆಯುರ್ವೇದ.

ಈ ರೋಗಗಳಿಂದ ಜನರನ್ನು ಮುಕ್ತರನ್ನಾಗಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ಗುರಿಯನ್ನು ಹೊಂದಿದವರು ಆಯುರ್ವೇದ ತಜ್ಞ ಚಿಕಿತ್ಸಕರಾದ ಡಾ. ಮಹೇಶ ಹಿರೇಮಠ ಮತ್ತು ಡಾ. ಸೌಮ್ಯಶ್ರೀ ಹಿರೇಮಠ ದಂಪತಿಗಳು. ಹಲವು ವರ್ಷಗಳಿಂದ ಗದುಗಿನ ವಿವೇಕಾನಂದ ನಗರದಲ್ಲಿರುವ ಅಕ್ಷಯ ಆಯುರ್ಧಾಮದ ಮೂಲಕ ಈ ದಂಪತಿಗಳು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಮೂಲತಃ ಚಿಕ್ಕಹಂದಿಗೋಳದವರಾದ ಮಹೇಶ ಹಿರೇಮಠರು ಸುಸಂಸ್ಕೃತ ಹಿರೇಮಠ ಮನೆತನದಲ್ಲಿ 1983ರಲ್ಲಿ ಗದಿಗೆಯ್ಯ ಮತ್ತು ಗಿರಿಜಾ ದಂಪತಿಗಳ ಸುಪುತ್ರರಾಗಿ ಕೊಪ್ಪಳದಲ್ಲಿ ಜನಿಸಿದರು. ತಮ್ಮ ಆರಂಭಿಕ ಶಿಕ್ಷಣವನ್ನು ರೋಣದಲ್ಲಿ ಪಡೆದು ಮುಂದೆ ಗದುಗಿನ ಮಾಡಲ್ ಹೈಸ್ಕೂಲ್‌ನಲ್ಲಿ ಪ್ರೌಢಶಿಕ್ಷಣ, ಜೆ.ಟಿ ಪ.ಪೂ. ಕಾಲೇಜಿನಿಂದ ಪಿಯುಸಿ ಶಿಕ್ಷಣ ಪಡೆದರು. ಆರಂಭದಿಯಿಂದಲೂ ಇವರಿಗೆ ಪಾರಂಪರಿಕ ವೈದ್ಯಕೀಯ ಪದ್ಧತಿಯಲ್ಲಿ ಅಪಾರ ಆಸಕ್ತಿ. ಇವರ ಅಜ್ಜನವರಾದ ಡಾ. ಗಂಗಾಧರಯ್ಯ ಹಿರೇಮಠರವರು ಪಾರಂಪರಿಕ ಆಯುರ್ವೇದ ತಜ್ಞರಾಗಿರುವುದು ಇವರ ಮೇಲೆ ಪ್ರಭಾವ ಬೀರಿತು. ಗದುಗಿನ ಪ್ರತಿಷ್ಠಿತ ಡಿ.ಜಿ.ಎಂ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಬಿ.ಎ.ಎಂ.ಎಸ್ ಪದವಿಯನ್ನು ಪಡೆದು, 2010ರಲ್ಲಿ ಗದುಗಿನ ವಿವೇಕಾನಂದ ನಗರದಲ್ಲಿ ತಮ್ಮ `ಅಕ್ಷಯ ಆಯುರ್ಧಾಮ’ ಚಿಕಿತ್ಸಾಲಯವನ್ನು ಪ್ರಾರಂಭಿಸಿದರು. ಮುಂದೆ ಕಾರಟಗಿ ಹತ್ತಿರದ ಸೋಮನಾಳ ಗ್ರಾಮದವರಾದ ಆಯುರ್ವೇದದಲ್ಲಿ ಎಂ.ಡಿ ಪದವಿ ಪಡೆದ ಡಾ. ಸೌಮ್ಯಶ್ರೀಯವರನ್ನು ವಿವಾಹವಾಗಿ ದಂಪತಿಗಳಿಬ್ಬರೂ ಸೇರಿ ಜನ ಸೇವೆಯ ಕಾಯಕದಲ್ಲಿ ತೊಡಗಿದರು.

ಕಳೆದ 16 ವರ್ಷಗಳಿಂದ ಆಯುರ್ವೇದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತ ಬಂದಿರುವ ಇವರು ಮೈಸೂರು ಸರಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಕಾಯಚಿಕಿತ್ಸೆಯಲ್ಲಿ ಎಂ.ಡಿ ಪದವಿ ಪಡೆದಿರುವುದರಿಂದ ಪಂಚಕರ್ಮ ಚಿಕಿತ್ಸೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ನೀಡುತ್ತಾರೆ. ಪಾರ್ಶ್ವವಾಯು, ಚರ್ಮರೋಗ, ಸಂಧಿವಾತ, ಅಸಿಡಿಟಿ, ಕರಳು ಕಾಯಿಲೆಗಳು, ಗಾಲ್‌ಬ್ಲಾಡರ್ ಮತ್ತು ಕಿಡ್ನಿಸ್ಟೋನ್ ಮುಂತಾದ ರೋಗಗಳನ್ನು ಅಲೋಪಥಿ ಪದ್ಧತಿಯನ್ನು ಅನುಸರಿಸದೇ ಶುದ್ಧವಾದ ಆಯುರ್ವೇದ ಪದ್ಧತಿಯಿಂದಲೇ ಗುಣಪಡಿಸುತ್ತಾ ಬಂದಿರುವುದು ಇವರ ಹೆಗ್ಗಳಿಕೆಯಾಗಿದೆ. ಇವರು ಸಾವಿರಾರು ರೋಗಿಗಳನ್ನು ಗುಣಮುಖರನ್ನಾಗಿ ಮಾಡಿದ್ದಾರೆ.

ತಮ್ಮ 16 ವರ್ಷಗಳ ನಿರಂತರ ವೈದ್ಯಕೀಯ ಸೇವೆಯ ಜೊತೆಗೆ ಅಧ್ಯಯನಶೀಲರೂ, ಸಂಶೋಧನಾಸಕ್ತರೂ ಆಗಿರುವ ಡಾ. ಹಿರೇಮಠರವರು ದೇಶದ ವಿವಿಧ ಪ್ರದೇಶಗಳಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ವಿವಿಧ ಆಯುರ್ವೇದ ಸಮ್ಮೇಳನಗಳಲ್ಲಿ ಉಪನ್ಯಾಸಕರಾಗಿ, ನಿರ್ಣಾಯಕರಾಗಿ ಪಾಲ್ಗೊಂಡಿದ್ದಾರೆ. ನೂರಾರು ಪ್ರಬಂಧಗಳನ್ನು ಮಂಡಿಸಿ ಜಾಗತಿಕ ಮನ್ನಣೆ ಪಡೆದಿದ್ದಾರೆ.

ಹೀಗೆ ನಿರಂತರವಾದ ಆಯುರ್ವೇದ ಕ್ಷೇತ್ರದ ತಮ್ಮ ಸಾಧನೆ-ಸೇವೆಗಾಗಿ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ತಮ್ಮ ಸ್ನಾತಕೋತ್ತರ ಪದವಿ ಅಧ್ಯಯನ ಸಂದರ್ಭದಲ್ಲಿಯೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ ಜಿಜ್ಞಾಸು ಸಮ್ಮೇಳನದಲ್ಲಿ ಉತ್ತಮ ಪ್ರಬಂಧ ಮಂಡಿಸಿದ್ದಕ್ಕಾಗಿ “ಜಿಜ್ಞಾಸು” ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಯೋಗದ ಬಗೆಗೂ ವಿಶೇಷ ಪರಿಣಿತಿ ಮತ್ತು ಆಸಕ್ತಿ ಹೊಂದಿರುವ ಇವರು ಯೋಗದಲ್ಲಿ ವಿಶಿಷ್ಟ ಸಾಧನೆಗೆ ‘ಯೋಗ ಪ್ರಬೋಧಿನಿ’ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

ಡಾ. ಮಹೇಶ ಹಿರೇಮಠರ ಮತ್ತೊಂದು ವಿಶೇಷತೆಯೆಂದರೆ, ನಾಡಿ ನೋಡಿ ಗುಣ ಪಡಿಸುವ ಅವರ ಕೌಶಲ್ಯ. ರೋಗ ನಿಧಾನ ತಂತ್ರಗಾರಿಕೆಯಲ್ಲಿ ಪಾರಂಪರಿಕ ವೈದ್ಯ ಪದ್ಧತಿಯಂತೆ ನಾಡಿ ನೋಡಿಯೇ ರೋಗದ ಗುಣಲಕ್ಷಣವನ್ನು ನಿರ್ಧರಿಸುತ್ತಾರೆ. “ವಿಶ್ವಾಸೋ ಫಲದಾಯಕ” ಎಂಬ ನುಡಿಯಂತೆ ಸದಾ ಹಸನ್ಮುಖಿಯಾಗಿ ಪ್ರೀತಿ, ಅಂತಃಕರಣ, ಕಕ್ಕುಲತೆಯಿಂದ ರೋಗಿಗಳನ್ನು ಮಾತನಾಡಿಸಿ ತಮ್ಮ ಮಾತಿನಿಂದಲೇ ಅರ್ಧ ರೋಗ, ಔಷಧಿಗಳಿಂದ ಅರ್ಧ ರೋಗ ಗುಣಮುಖಪಡಿಸುವುದು ಇವರ ವೈಶಿಷ್ಟ್ಯತೆಯಾಗಿದೆ. ಚಿಕಿತ್ಸೆಯಲ್ಲಿ ಔಷಧದ ಸೇವನೆ ಅತ್ಯಂತ ಪ್ರಮುಖವಾಗಿರುತ್ತದೆ. ಹೀಗಾಗಿ ಡಾ. ಹಿರೇಮಠ ದಂಪತಿಗಳು ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿ ರಥ ಸಪ್ತಮಿಯ ಶುಭದಿನದಂದು `ಹಿರೇಮಠ ನ್ಯಾಚರಲ್ಸ್’ ನೈಸರ್ಗಿಕ ಆಹಾರ ಉತ್ಪನ್ನಗಳ ಘಟಕದ ಉದ್ಘಾಟನೆಯೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದ್ದಾರೆ.

  • ಡಾ. ಡಿ.ಎಲ್. ಪಾಟೀಲ (ಗದಗ)

ವಾರ್ಡ ನಂ. 29 ರ ಹಾತಲಗೇರಿ ನಾಕಾ ಬಳಿ ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಸಾರ್ವಜನಿಕರಿಂದ ರಸ್ತೆ ತಡೆದು ಪ್ರತಿಭಟನೆ

0

ಗದಗ: ನಗರದ ವಾರ್ಡ ನಂ. 29 ರ ಹಾತಲಗೇರಿ ನಾಕಾ ಬಳಿ ಇಂದು ಶಂಕರ ಹೇಮರಡ್ಡಿ ಮುದರಡ್ಡಿ ಇವರ ನೇತೃತ್ವದಲ್ಲಿ ಹಾತಲಗೇರಿ ನಾಕಾದಿಂದ ಧನುಷ್ಯ ಹೋಟೆಲ್‌ನ ವರೆಗಿನ 1, 2 ಮತ್ತು 3 ಅಡ್ಡ ರಸ್ತೆಯ ಸಾರ್ವಜನಿಕರು ಇಂದು ದಿಢೀರನೆ ಪ್ರತಿಭಟನೆ ನಡೆಸಿದರು.

ಮೂಲಭೂತ ಸೌಕರ್ಯಗಳಾದ ಒಳಚರಂಡಿ, ಗಟಾರು, ನೀರು ನಿಂತಲ್ಲೇ ನಿಲ್ಲುತ್ತಿದ್ದು, ಸೊಳ್ಳೆಗಾಳ ಕಾಟ, ಇಲ್ಲೇ ಹತ್ತಿರ ಇಂಡಸ್ಟ್ರಿಯಲ್ ಇರುವುದರಿಂದ ಕಾರ್ಖಾನೆಯಿಂದ ಬಿಡುವ ಹೊಗೆ, ಮಕ್ಕಳ, ವೃದ್ಧರ ಆರೋಗ್ಯಕ್ಕೆ ತೊಂದರೆಯಾಗುತ್ತಿದ್ದು, ಈ ಪ್ರದೇಶದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಮಕ್ಕಳು, ಮಹಿಳೆಯರು, ವೃದ್ಧರು ಇದರಿಂದ ಭಯಭೀತಗೊಂಡಿದ್ದಾರೆ.

ಕೆ. ಎಲ್. ಜಿ. ಕಾಲೇಜು ಕಂಪೌಂಡ್ ಹತ್ತಿರ ಮಾಂಸದ ಅಂಗಡಿಗಳಾಗಿದ್ದು, ಇದರ ದುರ್ವಾಸನೆ ಮತ್ತು ನಾಯಿಗಳ ಕಾಟದಿಂದ ಮಕ್ಕಳು ಭಯಭೀತರಾಗಿದ್ದಾರೆ.

ಈ ಪ್ರದೇಶದಲ್ಲಿ ಕೆ. ಎಲ್. ಇ. ಸೇರಿದಂದ ಶಾಲಾ ಕಾಲೇಜು ಇದ್ದು, ಇಲ್ಲಿ ರಸ್ತೆ ಸಂಚಾರ ಬಹಳ ದಟ್ಟಣೆಯಾಗಿದ್ದು, ರಸ್ತೆಗಳಲ್ಲಿ ಮಕ್ಕಳು ಶಾಲೆ ಕಾಲೇಜುಗಳಿಗೆ ತೆರಳು ಪರದಾಡುವಂತಾಗಿದೆ. ಹಾತಲಗೇರಿ ಮುಖ್ಯ ರಸ್ತೆಯಿಂದ ಸಾಗುವ ಗಟಾರ ಸಂಪೂರ್ಣವಾಗಿ ಹಾಳಾಗಿದ್ದು, ಅದನ್ನು ದುರಸ್ತಿಗೊಳಿಸಬೇಕೆಂದು ಹೀಗೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಹಲವಾರು ಬಾರಿ ನಗರಸಭೆ ಪೌರಾಯುಕ್ತರಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ, ನಗರಸಭೆ ಸದಸ್ಯರಿಗೆ ಮನವಿ ಮಾಡಿಕೊಂಡಿದ್ದು ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಹಾತಲಗೇರಿ ನಾಕಾದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ತಕ್ಷಣವೇ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಕೂಡಲೇ ತಮ್ಮ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಹೇಳಿದರು.

ಶಂಕರ ಹೇಮರಡ್ಡಿ ಮುದರಡ್ಡಿಯವರು ಮಾತನಾಡಿ ಈ ಎಲ್ಲ ಸಮಸ್ಯೆಗಳನ್ನು ಒಂದು ವಾರದೊಳಗೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಆರ್. ಎಸ್. ಪೂಜಾರ, ಬಿ. ಟಿ. ಪಾಟೀಲ, ಮಹಮ್ಮದ ನದಾಫ, ಎಸ್. ಸಿ. ಅಂಗಡಿ, ಪ್ರಕಾಶ ಹಬೀಬ, ಎ. ಸಿ. ಸಿಂಧೂರ, ಮಂಜುನಾಥ ಕಬಾಡಿ ಸೇರಿದಂತೆ ಗುರುಹಿರಿಯರು, ಸಾರ್ವಜನಿಕರು, ಯುವಕರು, ಮಹಿಳೆಯರು ಪಾಲ್ಗೊಂಡಿದ್ದರು.

ಸಂಭ್ರಮದ ಮಕರ ಸಂಕ್ರಾಂತಿ ಆಚರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಸರಾಫ್ ಬಜಾರ್ ಅಂಬಾಭವಾನಿ ದೇವಸ್ಥಾನದಲ್ಲಿ ಮಕರ ಸಂಕ್ರಮಣವನ್ನು ಸಂಭ್ರಮದಿಂದ ಆಚರಿಸಲಾಯಿತು.

ತ್ರಿಷಾ ವೆಂಕಟೇಶ್ ಬಾಕಳೆ ನೃತ್ಯದೊಂದಿಗೆ ಪ್ರಾರಂಭವಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮುಳಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಫಾರ್ಮಸಿಸ್ಟ್ ಗೀತಾ ಕಲಬುರ್ಗಿ ಆಗಮಿಸಿದ್ದರು.

ಬೆಟಗೇರಿ ಮಹಿಳಾ ಮಂಡಲದ ಅಧ್ಯಕ್ಷೆ ಸರೋಜ ಎಚ್. ಕಬಾಡಿ ಮಾತನಾಡಿ, ಸೂರ್ಯದೇವನ ಪಥ ಸಂಚಲನ, ಎಳ್ಳು-ಬೆಲ್ಲ ಬೀರುವ ಮಹತ್ವವನ್ನು ತಿಳಿಸಿದರು. ಮಾಜಿ ಅಧ್ಯಕ್ಷೆ ಸರೋಜಾಬಾಯಿ ಟಿಕಂದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಎರಡು ವರ್ಷಕ್ಕೊಮ್ಮೆ ಬದಲಾವಣೆಯಾಗುವ ಅಧ್ಯಕ್ಷ ಸ್ಥಾನಕ್ಕೆ ಮಹಿಳಾ ಮಂಡಲದ ಉಪಾಧ್ಯಕ್ಷೆ ಸ್ನೇಹಲತಾ ಕಬಾಡಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಧ್ಯಕ್ಷೆ ಉಮಾಬಾಯಿ ಎಸ್. ಬೇವಿನಕಟ್ಟಿ ಎರಡು ವರ್ಷ ತಾವು ಮಾಡಿದ ಕಾರ್ಯಕ್ರಮಗಳ ವಿವರಣೆ ನೀಡಿದರು.

ಕಾರ್ಯದರ್ಶಿ ರೇಖಾಬಾಯಿ ಬೇವಿನಕಟ್ಟಿ ಮತ್ತು ಖಜಾಂಚಿ ಕಸ್ತೂರಬಾಯಿ ಭಾಂಡಗೆ, ಸಹ ಕಾರ್ಯದರ್ಶಿ ಗೀತಾ ಹಬೀಬ ವೇದಿಕೆಯಲ್ಲಿದ್ದರು. ಲಲಿತಾಬಾಯಿ ಬಾಕಳೆ ಪ್ರಾರ್ಥಿಸಿದರು. ರತ್ನಾಬಾಯಿ ಹಬೀಬ ಸ್ವಾಗತಿಸಿದರೆ, ರೇಖಾಬಾಯಿ ಖಟವಟೆ ಕಾರ್ಯಕ್ರಮ ನಿರೂಪಿಸಿದರು. ಹೇಮಾ ಬೇವಿನಕಟ್ಟಿ ವಂದಿಸಿದರು.

ಮಹಿಳಾ ಮಂಡಲದ ಸದಸ್ಯರಾದ ಗೀತಬಾಯಿ ಭಾಂಡಗೆ, ಲಕ್ಷ್ಮೀ ಆರ್. ಖಟವಟೆ, ಸುನಂದಾಬಾಯಿ ಕೆ. ಹಬೀಬ, ಅಂಬೂಬಾಯಿ ಬೇವಿನಕಟ್ಟಿ, ಅನ್ನಪೂರ್ಣ ಶಿದ್ಲಿಂಗ್, ಶಾಂತಾಬಾಯಿ ಬಾಕಳೆ, ಶೋಭಾ ಭಾಂಡಗೆ, ಲಕ್ಷ್ಮೀ ಎಂ. ಖಟವಟೆ, ಭಾವನಾ ಭಾಂಡಗೆ, ಸುನಂದಾಬಾಯಿ ಎಸ್. ಹಬೀಬ್, ಪದ್ಮಾ ಕಬಾಡಿ, ನೀತಾ ಹಬೀಬ, ವಂದನಾ ವಿ. ಶಿದ್ಲಿಂಗ್ ಉಪಸ್ಥಿತರಿದ್ದರು.

ಮತದಾನ ದೇಶದ ಭವಿಷ್ಯವನ್ನು ರೂಪಿಸುತ್ತದೆ: ಪಾರ್ವತಿ ಹೊಂಬಳ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಪ್ರತಿಯೊಬ್ಬರ ಮತದಾನವೂ ಅಮೂಲ್ಯವಾದುದು. ಅದನ್ನು ಬೇಕಾಬಿಟ್ಟಿಯಾಗಿ ಚಲಾಯಿಸಬಾರದು. ತಪ್ಪು ಮತದಾನ ಅಸಮರ್ಥ ನಾಯಕನ ಆಯ್ಕೆಗೆ ಕಾರಣವಾಗುತ್ತದೆ ಎಂದು ಅಭಿವೃದ್ಧಿ ಅಧಿಕಾರಿ ಪಾರ್ವತಿ ಹೊಂಬಳ ಹೇಳಿದರು.

ಡಂಬಳ ಗ್ರಾಮದ ಸರ್ಕಾರಿ ಉರ್ದು ಶಾಲೆಯ ಆವರಣದಲ್ಲಿ ಗದಗ ಜಿಲ್ಲಾ ಪಂಚಾಯಿತಿ, ಮುಂಡರಗಿ ತಾಲೂಕು ಪಂಚಾಯಿತಿ, ಡಂಬಳ ಗ್ರಾಮ ಪಂಚಾಯಿತಿಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಮತದಾನವನ್ನು ಪಾವಿತ್ರ್ಯತೆಗೆ ಹೋಲಿಸುತ್ತಾರೆ. ಈ ಪವಿತ್ರ ಮತಗಳನ್ನು ಅರ್ಹರಿಗೆ ಚಲಾಯಿಸಿ ಸಮರ್ಥರನ್ನು ಚುನಾಯಿಸಬೇಕು. ಮತದಾನ ನಮ್ಮ ದೇಶದ ಭವಿಷ್ಯವನ್ನು ರೂಪಿಸುತ್ತದೆ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುತ್ತದೆ ಎಂದು ಹೇಳಿದರು.

ಮುಖ್ಯೋಪಾಧ್ಯಾಯ ಡಿ.ಕೆ. ಹೊಳೆಮ್ಮನವರ, ಗ್ರಾ.ಪಂ ಕಾರ್ಯದರ್ಶಿ ಚಾಂದಮುನ್ನಿ ನೂರಭಾಷಾ ಮಾತನಾಡಿ, ಪ್ರಜೆಗಳು ದೇಶದ ಪ್ರಾಣಧಾತು ಇದ್ದಂತೆ. ಅವರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಆ ದೇಶದ ಮೌಲ್ಯ ನಿರ್ಣಯವಾಗುತ್ತದೆ. ಪ್ರಜಾಪ್ರಭುತ್ವದ ಗೆಲವು ಆಗಬೇಕಾದರೆ ಸಜ್ಜನರನ್ನು ಚುನಾಯಿಸುವ ಶಕ್ತಿ ಮತದಾನಕ್ಕಿದೆ ಎಂಬುದನ್ನು ದೃಢಪಡಿಸಲು ಮುಂದಾಗಬೇಕು ಎಂದು ಹೇಳಿದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತದಾನದ ಕುರಿತು ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಎಸ್‌ಡಿಎಮ್‌ಸಿ ಅಧ್ಯಕ್ಷ ಎಂ.ಜೆ. ಕಾಸ್ತಾರ, ಶಿಕ್ಷಕಿಯರಾದ ಸುಸನ್ನಾ ಕನವಳ್ಳಿ, ಹಸೀನಾ ಬಸರಿ, ನುಜಹತ್ತ ಶೈಕ್, ತಸ್ಲಿಮಾ ಪಟವಾರಿ, ಗ್ರಾ.ಪಂ ಸಿಬ್ಬಂದಿಗಳಾದ ಫರಾನಾ ಸೋಟಕ್ಕನಾಳ, ಭೀಮನಗೌಡ ತಿಪ್ಪಾಪುರ, ಸರಳಾ ಯಾವಗಲ್ಲ, ಭೀಮವ್ವ ಬಂಡಿ, ಅಂಗನವಾಡಿ ಕಾರ್ಯಕರ್ತೆಯರಾದ ಎನ್.ಎಫ್. ಆನಿ, ಶೋಭಾ ಹಿರೇಮಠ, ವಿ.ಜಿ. ಬಡಿಗೇರ, ಸಾಮಕ್ಕ ನಡವಲಕೇರಿ, ಎಸ್‌ಡಿಎಂಸಿ ಸದಸ್ಯರು, ವಿದ್ಯಾರ್ಥಿಗಳು ಇದ್ದರು.

ಗ್ರಾ.ಪಂ ಕರ ವಸುಲಿಗಾರ ಯಲ್ಲಪ್ಪ ಹಾದಿಮನಿ, ಗ್ರಂಥಪಾಲಕರ ಅಧ್ಯಕ್ಷ ಗವಸಿದ್ದಪ್ಪ ಹಳ್ಳಾಕಾರ ಮಾತನಾಡಿ, ಮತದಾನದ ಕುರಿತು ಯುವಜನರಲ್ಲಿ ಪ್ರಜ್ಞೆ ಮೂಡಿಸಬೇಕು. ಹೊಸ ಮತದಾರರು ಮತ ಚಲಾಯಿಸುವಂತೆ ಪ್ರೇರೇಪಿಸಬೇಕು. ನಾವು ಒಬ್ಬರು ಮತ ಚಲಾಯಿಸದಿದ್ದರೆ ಏನೂ ಆಗುವುದಿಲ್ಲವೆಂಬ ಉದಾಸೀನ ಬೇಡ. ಸಮರ್ಥರು ಚುನಾಯಿತಗೊಳ್ಳಲು ಮತ ಚಲಾಯಿಸಬೇಕು. ಆಸೆ ಆಮಿಷಗಳಿಗೆ ಬಲಿಯಾಗದೆ ಮತ ಹಾಕಿ ಎಂದು ಹೇಳಿದರು.

`ಮಾವುತ’ ಚಿತ್ರದ ಟ್ರೇಲರ್ ಬಿಡುಗಡೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಲಕ್ಷ್ಮೀಪತಿ ಬಾಲಾಜಿ ನಿರ್ಮಿಸಿ, ನಾಯಕನಾಗಿ ನಟಿಸಿರುವ 2ನೇ ಚಿತ್ರ `ಮಾವುತ’ದ ಟ್ರೇಲರ್ ಬಿಡುಗಡೆ ಸಮಾರಂಭ ರೇಣುಕಾಂಬ ಸ್ಟುಡಿಯೋದಲ್ಲಿ ನೆರವೇರಿತು.

ಡಿ.ಸಿ.ಪಿ (ದೆಹಲಿ) ಶಂಕರ್ ಬಿ, ಬಿ.ಜೆ.ಪಿ ಮುಖಂಡರಾದ ಕವಿತಾ ಸಿಂಗ್, ನಿವೃತ್ತ ಪೊಲೀಸ್ ಅಧಿಕಾರಿ ನಂಜುಂಡಸ್ವಾಮಿ, ಸಮಾಜ ಸೇವಕರಾದ ಭಜರಂಗಿ ಉಮೇಶ್ ಮುಂತಾದವರು ಅತಿಥಿಗಳಾಗಿ ಆಗಮಿಸಿದ್ದರು. `ಮಾವುತ’ ಕಾಡಿನಲ್ಲಿ ನಡೆಯುವ ಕೆಲವು ಅಕ್ರಮಗಳನ್ನು ಪತ್ತೆ ಮಾಡಿ, ಕಾಡನ್ನು ಉಳಿಸಿಕೊಳ್ಳುವ ಮಾವುತ ಹಾಗೂ ಆನೆಯ ಕಥೆಯಾಗಿದೆ. ಲಕ್ಷ್ಮೀಪತಿ ಬಾಲಾಜಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡುವುದರ ಜೊತೆಗೆ ನಾಯಕನಾಗಿಯೂ ನಟಿಸಿದ್ದಾರೆ ಎಂದು ನಿರ್ದೇಶಕ ರವಿಶಂಕರ್ ನಾಗ್ ತಿಳಿಸಿದರು.

ನಾಯಕಿಯರಾದ ಮಹಾಲಕ್ಷ್ಮಿ, ದಿವ್ಯಶ್ರೀ, ನಟರಾದ ಲಯ ಕೋಕಿಲ, ಕೈಲಾಶ್ ಕುಟ್ಟಪ್ಪ, ಹಿನ್ನೆಲೆ ಸಂಗೀತ ನೀಡಿರುವ ರವಿವರ್ಮ ಹಾಗೂ ಸಿರಿ ಮ್ಯೂಸಿಕ್‌ನ ಚಿಕ್ಕಣ್ಣ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

ಸಹ ನಿರ್ಮಾಪಕರಾಗಿ ಮುರುಳಿಧರ ತಿಪ್ಪೂರು, ಚಲುವರಾಜ್ ಎನ್ ಅವರು ಸಾಥ್ ಕೊಟ್ಟಿದ್ದಾರೆ. ರವಿಶಂಕರ್ ನಾಗ್ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಛಾಯಾಗ್ರಹಣ ವೀನಸ್ ಮೂರ್ತಿ, ವಿನು ಮನಸು ಸಂಗೀತ, ರವಿವರ್ಮ ಹಿನ್ನೆಲೆ ಸಂಗೀತ, ವೆಂಕಿ ಯುಡಿವಿ ಸಂಕಲನ, ಕಮಲ್ ಗೋಯಲ್ ಡಿಐ, ಅಕ್ಷಯ ಅವರ ಸಿಜಿ ಕಾರ್ಯ, ಥ್ರಿಲ್ಲರ್ ಮಂಜು ಸಾಹಸ, ಪಿಆರ್‌ಓ ಸುಧೀಂದ್ರ ವೆಂಕಟೇಶ, ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಿಗಿ ಅವರಾಗಿದ್ದಾರೆ. ತಾರಾಬಳಗದಲ್ಲಿ ಲಕ್ಷ್ಮೀಪತಿ ಬಾಲಾಜಿ, ಮಹಾಲಕ್ಷ್ಮಿ, ದಿವ್ಯಶ್ರೀ, ಥ್ರಿಲ್ಲರ್ ಮಂಜು, ಪದ್ಮಾ ವಾಸಂತಿ, ಬಲರಾಜ್‌ವಾಡಿ, ಲಯ ಕೋಕಿಲ, ನಂಜು ಸಿದ್ದಪ್ಪ, ಕೈಲಾಶ್ ಕುಟ್ಟಪ್ಪ, ಮೈಸೂರು ಸುಂದರ್, ಮೈಸೂರು ಮಂಜುಳ ಮೊದಲಾದವರು ಅಭಿನಯಿಸಿದ್ದಾರೆ.

ಸಾಗರ್ ಎಂಬ ಆನೆ ಚಿತ್ರದಲ್ಲಿ ಅಮೋಘವಾಗಿ ಅಭಿನಯಿಸಿದೆ. ಅನೇಕ ಬಾರಿ ಅಂಬಾರಿ ಹೊತ್ತು, ಈಗ ನಮ್ಮೊಡನೆ ಇರದ ಅರ್ಜುನನೇ ಸ್ಫೂರ್ತಿ. ನಮ್ಮ ಈ ಚಿತ್ರ ಅರ್ಜುನನಿಗೆ ಅರ್ಪಣೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದರು ಲಕ್ಷ್ಮೀಪತಿ ಬಾಲಾಜಿ. ಸಾಹಸ ಸಂಯೋಜನೆಯ ಜೊತೆಗೆ ಪ್ರಮುಖ ಪಾತ್ರದಲ್ಲಿ ಅಭಿನಯ ಕೂಡ ಮಾಡಿದ್ದೇನೆ ಎಂದು ಥ್ರಿಲ್ಲರ್ ಮಂಜು ತಿಳಿಸಿದರು.

ಹೊಳೆಆಲೂರು ವಿದ್ಯಾರ್ಥಿಗಳ ಸಾಧನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ಮೈಸೂರಿನಲ್ಲಿ ಪ್ರೋಪಾತ್ ಅಕಾಡೆಮಿ ವತಿಯಿಂದ 7ನೇ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಸದ್ವಿದ್ಯಾ ಅಬಾಕಸ್ ಬ್ರಾಂಚ್, ಹೊಳೆಆಲೂರು ವತಿಯಿಂದ ಭಾಗವಹಿಸಿದ್ದ 21 ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿ ಒಟ್ಟು 14 ಟ್ರೋಫಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಜ್ಯೂನಿಯರ್ ವಿಭಾಗದಲ್ಲಿ ನಫೀಸ್ ಕೊತಬಾಳ ಚಾಂಪಿಯನ್ ಆಫ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಸಾನ್ವಿ ಕಿತ್ತಲಿ ಪ್ರಥಮ ಸ್ಥಾನ ಪಡೆದರೆ, ಮರಳು ಸಿದ್ದೇಶ್ ಹಿರೇಮಠ, ಮಲ್ಲನಗೌಡ ಕೆಂಚನಗೌಡ್ರು, ಆದಿಲ್ ಕೊತಬಾಳ ಹಾಗೂ ಸುಮಾ ಅಂಗಡಿ ದ್ವಿತೀಯ ಸ್ಥಾನ ಹಾಗೂ ಟ್ರೋಫಿ ಪಡೆದಿದ್ದಾರೆ.

ಸೀನಿಯರ್ ವಿಭಾಗದಲ್ಲಿ ಸಿಂಚನ ಕೊಣ್ಣೂರ ಚಾಂಪಿಯನ್ ಆಫ್ ಚಾಂಪಿಯನ್ ಆಗಿ ಪ್ರಶಸ್ತಿ ಪಡೆದರು. ಗಿರೀಶ ಗೌಡ ಚೆನ್ನಪ್ಪ ಗೌಡ್ರು ಹಾಗೂ ತೇಜಸ್ವಿನಿ ಅಜಗುಂಡಿ ಪ್ರಥಮ ಸ್ಥಾನ, ಕೃತಿಕಾ ಬಡಿಗೇರ, ತರುಣ ಬಡಿಗೇರ ಹಾಗೂ ನಿಸರ್ಗ ಮೆಣಸಗಿ ದ್ವಿತೀಯ ಸ್ಥಾನ ಗಳಿಸಿದರು. ಆಧ್ಯಾ ಪಟ್ಟಣಶೆಟ್ಟಿ ಹಾಗೂ ಲೋಕೇಶ್ವರಿ ಕೆಲೂರ್ ತೃತೀಯ ಸ್ಥಾನ ಪಡೆದಿದ್ದಾರೆ. ಇನ್ನುಳಿದ ವಿದ್ಯಾರ್ಥಿಗಳು ಸಮಾಧಾನಕರ ಬಹುಮಾನಗಳನ್ನು ಪಡೆದು ಸಂಸ್ಥೆಗೆ ಗೌರವ ತಂದಿದ್ದಾರೆ.

ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಸದ್ವಿದ್ಯಾ ಸಂಸ್ಥೆಯ ಪದಾಧಿಕಾರಿಗಳು, ಸದ್ವಿದ್ಯಾ ಶಾಲಾ ಸಿಬ್ಬಂದಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದು, ಮಕ್ಕಳ ಪಾಲಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.

ಶ್ರೀ ಶಿವಶಾಂತವೀರ ಶರಣರ ತುಲಾಭಾರ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಸುಕ್ಷೇತ್ರ ಬಳಗಾನೂರಿನ ಚಿಕೇನಕೊಪ್ಪದ ಚನ್ನವೀರ ಶರಣರ ಮಠದಲ್ಲಿ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವದ ಅಂಗವಾಗಿ ಬಳೂಟಿಗಿ ಹಿರೇಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳಿಂದ ಮಹಾತ್ಮರ ಜೀವನ ದರ್ಶನ, ಪ್ರವಚನ ಜರುಗಿತು.

ಇದೇ ಸಂದರ್ಭದಲ್ಲಿ ದಾಟನಾಳ ಗ್ರಾಮದ ಹಾಗೂ ಬಳಗಾನೂರಿನ ಶಾಂಭವಿ ಅಕ್ಕನ ಬಳಗ ಹಾಗೂ ಚನ್ನವೀರ ಶರಣರ ಭೀಮಾಂಬಿಕಾ ಸೇವಾ ಸಮಿತಿ ಹಳೆ ಮಸೂತಿ ಬಡಾವಣೆಯ ಸಮಸ್ತ ಸದ್ಭಕ್ತರಿಂದ ಶಿವಶಾಂತವೀರ ಶರಣರ ತುಲಾಭಾರದ ಭಕ್ತಿಸೇವೆ ಜರುಗಿತು.

ಉತ್ತಮ ಫಸಲಿಗೆ ಮಣ್ಣು ಪರೀಕ್ಷೆ ಅಗತ್ಯ: ಚೇತನಾ ಪಾಟೀಲ

0

ವಿಜಯಸಾಕ್ಷಿ ಸುದ್ದಿ, ರೋಣ: ರೈತರು ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಬಳಕೆ ಮಾಡಿಕೊಂಡು ಅದರಿಂದ ಗೊಬ್ಬರ ತಯಾರಿಸಿ ಗುಣಮಟ್ಟದ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು ಎಂದು ಕೃಷಿ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಹೇಳಿದರು.

ಅವರು ಶುಕ್ರವಾರ ತಾಲೂಕಿನ ಬಾಸಲಾಪೂರ ಗ್ರಾಮದ ಬಳಿ ಶಿವಯೋಗಿ ನಡುವಿನಮನಿ ಇವರ ಜಮೀನಿನಲ್ಲಿ ಹಿಂಗಾರು ಹಂಗಾಮಿನ ಕಡಲೆ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಈಗಿನ ಕಾಲಘಟ್ಟದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡುವುದು ಹೆಚ್ಚಾಗಿದ್ದು, ಇದು ಸಮಂಜಸವಲ್ಲ. ಬದಲಾಗಿ ರೈತರು ಸಾವಯವ ಗೊಬ್ಬರ ಬಳಕೆಯತ್ತ ಮುಖ ಮಾಡಬೇಕು. ಮನೆಗಳಲ್ಲಿ ಜಾನುವಾರುಗಳ ಸಾಕಾಣಿಕೆ ಮಾಡಬೇಕು. ಇದರಿಂದ ಕುಟುಂಬ ನಿರ್ವಹಣೆ ಜೊತೆಗೆ ಜಮೀನುಗಳಿಗೆ ಗೊಬ್ಬರ ಸಹ ಸಿಗುತ್ತದೆ. ಅಲ್ಲದೆ ಬೇವಿನ ಮರದ ಎಲೆಗಳಿಂದ ಕ್ರಿಮಿನಾಶಕ ಔಷಧಿಗಳನ್ನು ತಯಾರಿಸಬಹುದು. ಕೃಷಿ ಸಂಪನ್ಮೂಲ ವ್ಯಕ್ತಿಗಳು ತಿಳಿಸಿದ ಹಾಗೆ ಪತ್ರಿ ಕಾಯಿಗಳಿಂದ ಗೊಬ್ಬರ ತಯಾರಿಸಿ ಬೆಳೆಗಳಿಗೆ ಸಿಂಪರಣೆ ಮಾಡಬಹುದು. ಸಾವಯವ ಗೊಬ್ಬರ ಬಳಕೆಯಿಂದ ಬೆಳೆಗಳಿಗೆ ತಗಲುವ ಅನೇಕ ರೋಗಗಳನ್ನು ತಡೆಗಟ್ಟಬಹುದು ಎಂದರು.

ಕೃಷಿ ಸಂಪನ್ಮೂಲ ವ್ಯಕ್ತಿ ಸುರೇಶಗೌಡ ಪಾಟೀಲ ಮಾತನಾಡಿ, ರೈತರು ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡುತ್ತಿರುವುದು ಭೂಮಿಗೆ ವಿಷ ಹಾಕಿದಂತೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ರುಚಿಕಟ್ಟಾದ ಧಾನ್ಯಗಳನ್ನು ಬೆಳೆಯಲು ಅಸಾಧ್ಯ. ಅಲ್ಲದೆ ಭೂಮಿಯ ಸತ್ವ ಕೂಡ ಬರಡಾಗುತ್ತದೆ. ಇದರಿಂದ ಮನುಷ್ಯನಿಗೂ ಅನೇಕ ರೋಗಗಳು ತಗಲಬಹುದು ಎಂದು ಎಚ್ಚರಿಸಿದ ಅವರು, ಸಾವಯವ ಗೊಬ್ಬರದತ್ತ ರೈತರು ಮುಖ ಮಾಡಬೇಕು ಎಂದರು.

ರಾಸಾಯನಿಕ ಗೊಬ್ಬರ ಬಳಕೆ ಮಾಡಿ ಬೆಳೆಯುವ ಬೆಳೆಗಳು ಬಾಳಿಕೆ ಬರುವುದಿಲ್ಲ. ಜೊತೆಗೆ ಮಾರುಕಟ್ಟೆಯಲ್ಲಿ ಬೆಲೆಯೂ ಸಿಗುವುದಿಲ್ಲ ಎಂಬ ಸತ್ಯವನ್ನು ಮೊದಲು ರೈತರು ತಿಳಿಯುವುದು ಅವಶ್ಯಕವಾಗಿದೆ. ಉತ್ತಮ ಮತ್ತು ಪೌಷ್ಠಿಕತೆಯಿರುವ ಬೆಳೆಗಳು ಬರಲು ಸಾವಯವ ಗೊಬ್ಬರದಿಂದ ಮಾತ್ರ ಸಾಧ್ಯ. ಹೀಗಾಗಿ, ತಮ್ಮ ಜಮೀನುಗಳಲ್ಲಿಯೇ ಸಿಗುವ ಕಸ ಕಡ್ಡಿಗಳಿಂದ ಗೊಬ್ಬರ ತಯಾರಿಸಿ ಬೆಳೆಗಳಿಗೆ ನೀಡಬಹುದು. ಅಗತ್ಯ ಮಾಹಿತಿ ಬೇಕಿದ್ದಲ್ಲಿ ಹುಲಕೋಟಿ ಗ್ರಾಮದಲ್ಲಿರುವ ನಮ್ಮ ಜಮೀನುಗಳನ್ನು ನೋಡಬಹುದು ಎಂದರು.

ಇದೇ ಸಂದರ್ಭದಲ್ಲಿ ಜಮೀನಿನ ಮಾಲಕರಾದ ಶಿವಯೋಗಿ ನಡುವಿನಮನಿ ಸೇರಿದಂತೆ ಕೃಷಿಕ ಸಮಾಜದ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ಅಂದಪ್ಪ ಗಡಗಿ, ಮೇಘರಾಜ ಭಾವಿ, ಎಸ್.ಎಫ್. ತಹಸೀಲ್ದಾರ, ಪ್ರಮೋದ ಕುಲಕರ್ಣಿ ಸೇರಿದಂತೆ ಕೃಷಿಕ ಸಮಾಜದ ಪ್ರತಿನಿಧಿಗಳು ಮತ್ತು ರೈತರು ಉಪಸ್ಥಿತರಿದ್ದರು.

ರೈತರು ತಮ್ಮ ಜಮೀನುಗಳಲ್ಲಿನ ಮಣ್ಣು ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಬೇಕು. ಕಾರಣ ಯಾವ ಮಣ್ಣಿನಲ್ಲಿ ಎಷ್ಟು ಸತ್ವಯುತ ಅಂಶಗಳಿವೆ ಎನ್ನುವುದು ಮಣ್ಣು ಪರೀಕ್ಷೆಯಿಂದ ತಿಳಿಯುತ್ತದೆ ಹಾಗೂ ಈ ಮಣ್ಣಿನಲ್ಲಿ ಯಾವ ಬೆಳೆಯನ್ನು ಬೆಳೆಯಬಹುದು ಎಂಬ ನಿಖರತೆಯನ್ನು ತಿಳಿಯಲು ಸಹಾಯವಾಗುತ್ತದೆ. ಇದರಿಂದ ರೈತರಿಗೂ ಲಾಭವಾಗಲಿದೆ. ಮುಖ್ಯವಾಗಿ ಮಹಿಳೆಯರು ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಬೇಕು. ಕುಟುಂಬಕ್ಕೆ ಬೇಕಾದ ವಸ್ತುಗಳನ್ನು ಜಮೀನುಗಳಲ್ಲಿ ಬೆಳೆಯುವ ಆಸಕ್ತಿಯನ್ನು ಇಟ್ಟುಕೊಳ್ಳಬೇಕು ಎಂದು ಚೇತನಾ ಪಾಟೀಲ ತಿಳಿಸಿದರು.

ಕೆಆರ್ ಪುರಂನಲ್ಲಿ ಹಿಟ್ ಅಂಡ್ ರನ್: ಡೆಲಿವರಿ ಬಾಯ್ ಸ್ಥಳದಲ್ಲೇ ಸಾವು

0

ಬೆಂಗಳೂರು: ಹಿಟ್ ಅಂಡ್ ರನ್ ಅಪಘಾತದಲ್ಲಿ ಡೆಲಿವರಿ ಬಾಯ್ ಒಬ್ಬರು ಸಾವನ್ನಪ್ಪಿರುವ ದುರ್ಘಟನೆ ಕೆಆರ್ ಪುರಂನ ಭಟ್ಟರಹಳ್ಳಿ ಸಿಗ್ನಲ್ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ನೇಪಾಳ ಮೂಲದ ಸುರೇಂದರ್ ಬಹದ್ದೂರ್ (38) ಎಂದು ಗುರುತಿಸಲಾಗಿದೆ. ಸುರೇಂದರ್ ಕಳೆದ ಮೂರು ವರ್ಷಗಳ ಹಿಂದೆ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದಿದ್ದು, ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು.

ಇಂದು ಬೆಳಗ್ಗೆ ಸುಮಾರು 3:30ರ ವೇಳೆಗೆ, ಸುರೇಂದರ್ ಡೆಲಿವರಿ ನೀಡಲು ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ, ವೇಗವಾಗಿ ಬಂದ ಕಾರೊಂದು ಅವರ ವಾಹನಕ್ಕೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ. ಡಿಕ್ಕಿಯ ತೀವ್ರತೆಯಿಂದ ಸುರೇಂದರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯ ಹಿಟ್ ಅಂಡ್ ರನ್ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರ ಆಧಾರದ ಮೇಲೆ ಆರೋಪಿಯ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಈ ಸಂಬಂಧ ಕೆಆರ್ ಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತ ಎಸಗಿ ಪರಾರಿಯಾಗಿರುವ ಕಾರು ಚಾಲಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

PUC ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ: ಪೊಲೀಸ್ ಕಾನ್ಸ್ ಟೇಬಲ್ ಅರೆಸ್ಟ್

0

ಬೆಂಗಳೂರು: ಪಿಯುಸಿ ಓದುತ್ತಿದ್ದ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಆರ್ ಟಿ ನಗರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಒಬ್ಬರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಕಾನ್ಸ್‌ಟೇಬಲ್ ಫ್ರೀಡಂ ಪಾರ್ಕ್‌ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ವೇಳೆ, ಪ್ರಥಮ ಪಿಯುಸಿ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ವಿದ್ಯಾರ್ಥಿಯ ಪೋಷಕರು ದೂರು ನೀಡಿದ್ದು, ಪ್ರಕರಣ ಬೆಳಕಿಗೆ ಬಂದಿದೆ.

ದೂರು ಆಧಾರದ ಮೇಲೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ. ಆರೋಪಿತ ಕಾನ್ಸ್‌ಟೇಬಲ್ ನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಈ ಘಟನೆ ಪೊಲೀಸ್ ಇಲಾಖೆಯ ವಲಯದಲ್ಲೇ ತೀವ್ರ ಚರ್ಚೆಗೆ ಕಾರಣವಾಗಿದೆ.

error: Content is protected !!