Home Blog Page 117

Gadag Breaking: ಡಾ. ಚಂದ್ರು ಲಮಾಣಿ ಬಂಧನ ಖಂಡಿಸಿ ಅಭಿಮಾನಿಗಳಿಂದ ಬೃಹತ್ ಪ್ರತಿಭಟನೆ!

0

ಗದಗ: ಲಂಚ ಪ್ರಕರಣದಲ್ಲಿ ಶಿರಹಟ್ಟಿ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಬಂಧನವಾಗಿರುವ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರ ಪಟ್ಟಣದಲ್ಲಿ ಅವರ ಅಭಿಮಾನಿಗಳು ಬೃಹತ್ ಪ್ರತಿಭಟನೆ ನಡೆಸಿದರು.

ಶಾಸಕರ ಬಂಧನವನ್ನು ಖಂಡಿಸಿ ಅಭಿಮಾನಿಗಳು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು. ಲಕ್ಷ್ಮೇಶ್ವರದ ಸೋಮೇಶ್ವರ ತೇರಿನಲ್ಲಿರುವ ಮನೆಯಿಂದ ಆರಂಭವಾದ ರ‍್ಯಾಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಪ್ರತಿಭಟನಾ ಮೆರವಣಿಗೆಯಲ್ಲಿ ಶಾಸಕ ಡಾ. ಚಂದ್ರು ಲಮಾಣಿ ವಿರುದ್ಧದ ಕ್ರಮವನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು. ಅಲ್ಲದೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಮೊಳಗಿಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಬೆಂಗಳೂರಿನಲ್ಲಿ GST ಅಧಿಕಾರಿಗಳ ಸೋಗಿನಲ್ಲಿ 5 ಲಕ್ಷ ಸುಲಿಗೆ: ಇಬ್ಬರು ಅರೆಸ್ಟ್

0

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇಲಾಖೆಯ ಅಧಿಕಾರಿಗಳಂತೆ ನಟಿಸಿ ವ್ಯಾಪಾರಿಯನ್ನು ಬೆದರಿಸಿ 5 ಲಕ್ಷ ರೂಪಾಯಿ ಸುಲಿಗೆ ಮಾಡಿದ ಆರೋಪದಲ್ಲಿ ಇಬ್ಬರನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ನಾಗರಾಜ್ ಹಾಗೂ ದಾದಾಪೀರ್ ಎಂದು ಗುರುತಿಸಲಾಗಿದೆ. ಇವರು ಬನಶಂಕರಿಯಲ್ಲಿರುವ ಜಿಎಸ್‌ಟಿ ಇಲಾಖೆಯ ಪ್ರಧಾನ ಆಯುಕ್ತರ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಹೌಸ್‌ಕೀಪಿಂಗ್ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಎಲ್‌ಟಿಎಸ್ ಹಾಗೂ ಇಂಟಲಿಜೆನ್ಸ್ ಅಧಿಕಾರಿಗಳಂತೆ ನಕಲಿ ಐಡಿ ಕಾರ್ಡ್‌ಗಳನ್ನು ತಯಾರಿಸಿಕೊಂಡಿದ್ದ ಆರೋಪಿಗಳು, ಜನವರಿ 10ರಂದು ಪೀಣ್ಯದಲ್ಲಿರುವ ಒಬ್ಬ ಗುಟ್ಕಾ ವ್ಯಾಪಾರಿಯನ್ನು ಬೆದರಿಸಿ 5 ಲಕ್ಷ ರೂಪಾಯಿ ವಸೂಲಿ ಮಾಡಿದ್ದರು ಎಂದು ತಿಳಿದುಬಂದಿದೆ.

ಆರೋಪಿಗಳ ಚಟುವಟಿಕೆ ಬಗ್ಗೆ ಅನುಮಾನಗೊಂಡ ಕಚೇರಿ ಅಧಿಕಾರಿಗಳು ಫೆಬ್ರವರಿ 17ರಂದು ಅವರು ವಾಸವಿದ್ದ ಕಚೇರಿಯ ಕೊಠಡಿಯಲ್ಲಿ ತಪಾಸಣೆ ನಡೆಸಿದರು. ಈ ವೇಳೆ ನಕಲಿ ಐಡಿ ಕಾರ್ಡ್‌ಗಳು ಹಾಗೂ ಸರ್ಚ್ ವಾರೆಂಟ್ ಪ್ರತಿಗಳು ಪತ್ತೆಯಾಗಿವೆ.

ತಕ್ಷಣ ಜಿಎಸ್‌ಟಿ ಅಧಿಕಾರಿಗಳು ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆನೇಕಲ್ ನಲ್ಲಿ ಹೆಮ್ಮೆಯ ಕಥೆ: ಬಡತನವನ್ನು ಮೆಟ್ಟಿ ಜಡ್ಜ್ ಆದ ಆಟೋ ಚಾಲಕನ ಮಗಳು!

0

ಬೆಂಗಳೂರು: ಬಡತನದ ನಡುವೆಯೂ ಕನಸುಗಳನ್ನು ಕೈಬಿಡದೇ ಸಾಧನೆ ಮಾಡಿದ ಹೆಮ್ಮೆಯ ಕಥೆ ಇದು. ಬೆಂಗಳೂರು ಹೊರವಲಯದ ತಿರುಪಾಳ್ಯ ಗ್ರಾಮದ ನಾಗಿಣಿ ಎಲ್. ಅವರು ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗುವ ಮೂಲಕ ಸಾಧನೆಯ ಶಿಖರಕ್ಕೇರಿದ್ದಾರೆ.

ನಾಗಿಣಿಯ ತಂದೆ ಲಕ್ಷ್ಮಣ್ ದಿನವಿಡೀ ಆಟೋ ಚಾಲನೆ ಮಾಡಿ ಕುಟುಂಬವನ್ನು ಸಾಗಿಸುತ್ತಿದ್ದರು. ತಾಯಿ ಮಂಜುಳಾ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದರು. ಆರ್ಥಿಕ ಸಂಕಷ್ಟಗಳಿದ್ದರೂ ಮಗಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಲಿಲ್ಲ. ಮಗಳು ಓದಿ ದೊಡ್ಡವಳಾಗಬೇಕು ಎಂಬ ಕನಸಿಗಾಗಿ ಅವರು ನಿರಂತರ ಶ್ರಮಿಸಿದರು.

ನಾಗಿಣಿ ಬಾಲ್ಯದಿಂದಲೇ ಪರಿಶ್ರಮಿ. ಬೆಳಗ್ಗೆ ತಾಯಿಗೆ ಹೂ ಮಾರಾಟದಲ್ಲಿ ಸಹಾಯ ಮಾಡಿ ನಂತರ ಶಾಲೆಗೆ ತೆರಳುತ್ತಿದ್ದಳು. 1ರಿಂದ 10ನೇ ತರಗತಿವರೆಗೆ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ ಮಾಡಿದರು. ಬಳಿಕ ಕಾನೂನು ಪದವಿ ಪಡೆದು ವಕೀಲೆಯಾಗಿ ಸೇವೆ ಸಲ್ಲಿಸಿದರು. ವೃತ್ತಿಯ ಜೊತೆಗೆ ನ್ಯಾಯಾಂಗ ಪರೀಕ್ಷೆಗೆ ತಯಾರಿ ನಡೆಸಿ ಹಗಲಿರುಳು ಅಧ್ಯಯನ ಮಾಡಿದ ನಾಗಿಣಿ, ಇದೀಗ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ.

ಮಗಳ ಸಾಧನೆ ಕುರಿತು ತಾಯಿ ಮಂಜುಳಾ ಸಂತಸ ವ್ಯಕ್ತಪಡಿಸಿ, ನಮ್ಮ ಕಷ್ಟ ವ್ಯರ್ಥವಾಗಲಿಲ್ಲ. ಮಗಳು ಶ್ರಮಪಟ್ಟು ಓದಿದ್ದಕ್ಕೆ ಇಂದು ಈ ಗೌರವ ಸಿಕ್ಕಿದೆ ಎಂದರು. ತಂದೆ ಲಕ್ಷ್ಮಣ್ ಕೂಡ, “ಬಡತನ ಇದ್ದರೂ ಮಕ್ಕಳಿಗೆ ಶಿಕ್ಷಣ ನೀಡಬೇಕು. ಮಗಳು ನಮ್ಮ ಕನಸು ನನಸು ಮಾಡಿದ್ದಾಳೆ.

ನ್ಯಾಯಾಧೀಶೆಯಾಗಿ ನೊಂದವರಿಗೆ ನ್ಯಾಯ ನೀಡಲಿ ಎಂದು ಆಶಿಸಿದರು. ನಾಗಿಣಿಯ ಸಾಧನೆ ಇಂದಿನ ಯುವ ಸಮುದಾಯಕ್ಕೆ ಪ್ರೇರಣೆಯಾಗಿದೆ. ಸಂಕಲ್ಪ ಮತ್ತು ಪರಿಶ್ರಮ ಇದ್ದರೆ ಬಡತನ ಸಾಧನೆಗೆ ಅಡ್ಡಿಯಲ್ಲ ಎಂಬುದಕ್ಕೆ ಅವರು ಜೀವಂತ ಸಾಕ್ಷಿಯಾಗಿದ್ದಾರೆ.

ಸಚಿವೆ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಅಂಗನವಾಡಿ ಮಕ್ಕಳಿಗೆ ಅವಧಿ ಮೀರಿದ ಸಿರಿಧಾನ್ಯ ಲಡ್ಡು ವಿತರಣೆ!

0

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲೇ ಅಂಗನವಾಡಿ ಮಕ್ಕಳಿಗೆ ಅವಧಿ ಮೀರಿದ (ಎಕ್ಸ್‌ಪೈರ್ಡ್) ಸಿರಿಧಾನ್ಯ ಲಡ್ಡು ವಿತರಣೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಮೂರು ಅಂಗನವಾಡಿ ಕೇಂದ್ರಗಳಿಗೆ ಸಿರಿಧಾನ್ಯ ಆಧಾರಿತ ಪೌಷ್ಟಿಕ ಲಡ್ಡುಗಳನ್ನು ಪೂರೈಕೆ ಮಾಡಲಾಗಿದ್ದು,

ಅವುಗಳಲ್ಲಿ ಕೆಲವು ಪದಾರ್ಥಗಳು ಆರು ತಿಂಗಳ ಹಿಂದೆಯೇ ಅವಧಿ ಮೀರಿರುವುದಾಗಿ ತಿಳಿದುಬಂದಿದೆ. ರಾಜ್ಯದ ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವ ಉದ್ದೇಶದಿಂದ ಮಿಲೆಟ್ ಲಡ್ಡು ವಿತರಣೆ ಮಾಡಲಾಗುತ್ತಿದೆ. ಆದರೆ ಈ ಪೌಷ್ಟಿಕ ಆಹಾರ ವಿತರಣೆಯಲ್ಲೇ ಅಕ್ರಮ ನಡೆದಿದೆ ಎಂಬ ಆರೋಪ ವ್ಯಕ್ತವಾಗಿದೆ.

ಕನ್ನಡ ಹೋರಾಟಗಾರ್ತಿ ಕಸ್ತೂರಿಭಾವಿ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ವೇಳೆ ಅವಧಿ ಮೀರಿದ ಪದಾರ್ಥಗಳು ವಿತರಣೆ ಆಗಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಈ ಸಂಬಂಧ ಅವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ. ವಿಡಿಯೋದಲ್ಲಿ ಹುಳ ಬಿದ್ದ ರವಾ, ಅವಧಿ ಮುಗಿದ ಸಜ್ಜೆ ಲಡ್ಡು ಹಾಗೂ ಸಾಂಬಾರ್ ಪುಡಿ ಕಾಣಿಸುತ್ತಿದೆ ಎಂದು ತಿಳಿದುಬಂದಿದೆ.

2025ರ ಅಕ್ಟೋಬರ್‌ನಲ್ಲಿ ಅವಧಿ ಮುಗಿದ ಮಿಲೆಟ್ ಲಡ್ಡುಗಳನ್ನು ಇದೀಗ ವಿತರಣೆ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಹಾಗೂ ಅಂಗನವಾಡಿ ಸಹಾಯಕಿಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಅವಧಿ ಮೀರಿದ ಆಹಾರ ಸೇವನೆಯಿಂದ ಅಜೀರ್ಣ, ವಾಂತಿ-ಭೇದಿ, ಜ್ವರ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ: ಎಲ್ಲಾ ಹುದ್ದೆಗಳ ಭರ್ತಿಗೆ ಸರ್ಕಾರ ಸಿದ್ಧ – ಪ್ರಿಯಾಂಕ್ ಖರ್ಗೆ

0

ಬೆಂಗಳೂರು: ರಾಜ್ಯ ಸರ್ಕಾರ ಎಲ್ಲಾ ಖಾಲಿ ಹುದ್ದೆಗಳ ಭರ್ತಿಗೆ ಸಿದ್ಧವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ವಯೋಮಿತಿ ಹೆಚ್ಚಳದ ಕುರಿತೂ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಕುರಿತಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಚಿವರು, ಸರ್ಕಾರಕ್ಕೆ ಯುವಕರ ಸಮಸ್ಯೆಗಳ ಅರಿವು ಇದೆ. ನಾವು ವಿಪಕ್ಷದಲ್ಲಿದ್ದಾಗಲೂ ಸ್ಪಂದಿಸಿದ್ದೇವೆ. ಈಗಾಗಲೇ 35–40 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ ಎಂದು ಹೇಳಿದರು.

ಒಳಮೀಸಲಾತಿ ಸಂಬಂಧಿತ ಕೆಲವು ಸಮಸ್ಯೆಗಳಿವೆ. ಅವುಗಳನ್ನು ಸರಿಪಡಿಸಿಕೊಂಡು ನೇಮಕಾತಿ ಪ್ರಕ್ರಿಯೆ ಮುಂದುವರಿಸಲಾಗುತ್ತದೆ. ಗುರುವಾರ ನಡೆಯುವ ಕ್ಯಾಬಿನೆಟ್ ಸಭೆಯಲ್ಲೂ ಈ ವಿಷಯ ಚರ್ಚೆಗೆ ಬರಲಿದೆ ಎಂದು ತಿಳಿಸಿದರು. ತಕ್ಷಣ ಮಾಡಬಹುದಾದ ನೇಮಕಾತಿಗಳನ್ನು ತಕ್ಷಣ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಮೀಸಲಾತಿಯೂ ಇರಬೇಕು, ಸಾಮಾಜಿಕ ನ್ಯಾಯವೂ ಕಾಪಾಡಬೇಕು. ಸಂವಿಧಾನದ ಪ್ರಕಾರ ಕ್ರಮ ಕೈಗೊಳ್ಳುವಾಗ ಕೆಲವು ವಿಳಂಬಗಳು ಆಗಬಹುದು. ಯಾರಾದರೂ ನ್ಯಾಯಾಲಯಕ್ಕೆ ಹೋದರೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮಟ್ಟದಲ್ಲಿ ತೀರ್ಮಾನವಾಗುವವರೆಗೆ ತಡವಾಗಬಹುದು,” ಎಂದು ಹೇಳಿದರು.

ವಯೋಮಿತಿ ಹೆಚ್ಚಳದ ಬಗ್ಗೆ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದ್ದು, ಇನ್ನಷ್ಟು ಬೇಡಿಕೆಗಳಿದ್ದರೆ ಪರಿಶೀಲಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಧಾನಸೌಧ “ವ್ಯಾಪಾರ ಸೌಧ”ವಾಗಿತ್ತು ಎಂದು ಕಿಡಿಕಾರಿದ ಅವರು, ಆ ಅವಧಿಯಲ್ಲಿ ಅನೇಕ ಹಗರಣಗಳು ನಡೆದಿವೆ. ಕೆಲವು ಹುದ್ದೆಗಳು ಹಣಕ್ಕೆ ಮಾರಾಟವಾಗಿದ್ದವು ಎಂಬ ಆರೋಪ ಮಾಡಿದರು.

ಚಿಕ್ಕಪೇಟೆ ಮೆಟ್ರೋ ಬಳಿ ಭೀಕರ ಅಗ್ನಿ ಅವಘಡ: ಶಾರ್ಟ್ ಸರ್ಕ್ಯೂಟ್‌ನಿಂದ ಫ್ಯಾನ್ಸಿ ಸ್ಟೋರ್ ಭಸ್ಮ

0

ಬೆಂಗಳೂರು: ನಗರದಲ್ಲಿ ಇಂದು ಬೆಳಿಗ್ಗೆ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಚಿಕ್ಕಪೇಟೆ ಮೆಟ್ರೋ ನಿಲ್ದಾಣ ಸಮೀಪದ ಫ್ಯಾನ್ಸಿ ಸ್ಟೋರ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ.

ಬೆಳಿಗ್ಗೆ ಸುಮಾರು 7 ಗಂಟೆ ವೇಳೆಗೆ ಆರಂಭವಾದ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿ ಅಂಗಡಿಯಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಭಸ್ಮಗೊಳಿಸಿದೆ. ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದ್ದು, ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ತಕ್ಷಣವೇ ಆರು ಅಗ್ನಿಶಾಮಕದಳ ವಾಹನಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿವೆ. ದಟ್ಟ ಹೊಗೆಯಿಂದಾಗಿ ಅಗ್ನಿಶಾಮಕ ಸಿಬ್ಬಂದಿ ಆಕ್ಸಿಜನ್ ಸಿಲಿಂಡರ್ ಹಾಗೂ ಮಾಸ್ಕ್ ಧರಿಸಿ ಅಂಗಡಿ ಒಳಗೆ ಪ್ರವೇಶಿಸಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ. ಕಳೆದ ಒಂದು ಗಂಟೆಯಿಂದ ನಿರಂತರವಾಗಿ ಕಾರ್ಯಾಚರಣೆ ಮುಂದುವರಿದಿದೆ.

ಕಾಫಿನಾಡಲ್ಲಿ ಗಜಭೀತಿ : ನಗರ ಸಮೀಪವೇ ಪುಂಡಾನೆಗಳು, ಕೃಷಿಕರಿಗೆ ಜೀವಭಯ

0

ಚಿಕ್ಕಮಗಳೂರು: ಕಾಫಿನಾಡಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಗರಕ್ಕೆ ತೀರಾ ಸಮೀಪದಲ್ಲಿರುವ ಮತ್ತಾವರ ಹಾಗೂ ನಲ್ಲೂರು ಗ್ರಾಮಗಳ ಸುತ್ತ ಎರಡು ಪುಂಡಾನೆಗಳು ಬೀಡುಬಿಟ್ಟಿದ್ದು, ಎಸ್ಟೇಟ್‌ಗಳ ನಡುವೆ ನಿರಂತರ ಸಂಚಾರ ನಡೆಸುತ್ತಿವೆ.

ಕಾಫಿ ತೋಟಗಳಿಗೆ ಕೆಲಸಕ್ಕೆ ತೆರಳುವ ಕಾರ್ಮಿಕರು ಆತಂಕಗೊಂಡಿದ್ದು, ಭತ್ತದ ಪೈರುಗಳು ಹಾನಿಗೊಳಗಾಗಿವೆ. ಇದೇ ವೇಳೆ ಚಿಕ್ಕಮಗಳೂರು–ಬೇಲೂರು ಗಡಿಭಾಗದ ಚೀಕನಹಳ್ಳಿಯಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದ್ದು, ನರಸಿಂಹರಾಜಪುರ ತಾಲೂಕಿನ ಮಡಬೂರು ಗ್ರಾಮದ ಯಕ್ಕಡಬೈಲು ಅರಣ್ಯ ಪ್ರದೇಶದಲ್ಲಿ ಆನೆಗಳ ಹಿಂಡೂ ತಂಗಿರುವುದು ಪತ್ತೆಯಾಗಿದೆ.

ಒಂಟಿ ಸಲಗಗಳಷ್ಟೇ ಅಲ್ಲದೆ, ಗುಂಪು ಗುಂಪಾಗಿ ಸಂಚರಿಸುತ್ತಿರುವ ಆನೆಗಳು ಕೃಷಿಕರ ನೆಮ್ಮದಿಯನ್ನು ಕಸಿದುಕೊಂಡಿವೆ. ಬೆಳೆ ಹಾನಿಯ ಜೊತೆಗೆ ಜೀವಭಯವೂ ಕಾಡುತ್ತಿದೆ.

ಅರಣ್ಯ ಇಲಾಖೆ ಮುನ್ನೆಚ್ಚರಿಕಾ ಸೂಚನೆ ನೀಡಿದ್ದು, ಮುಂಜಾನೆ ತೋಟಗಳಿಗೆ ತೆರಳುವವರು, ವಾಕಿಂಗ್‌ಗೆ ಹೋಗುವವರು ಮತ್ತು ರಾತ್ರಿ ವಾಹನ ಚಲಾಯಿಸುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದೆ. ಕಾಡಾನೆಗಳನ್ನು ಕೆಣಕದೆ, ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ.

ಸಚಿವ ಸ್ಥಾನಕ್ಕೆ ಲಾಬಿ ಶುರು! 24 MLCಗಳಿಂದ ಹೈಕಮಾಂಡ್ʼಗೆ ಪತ್ರ

0

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ಪುನಾರಚನೆ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಇತ್ತೀಚೆಗೆ 31 ಶಾಸಕರು ಸಚಿವ ಸಂಪುಟ ಪುನಾರಚನೆಗೆ ಒತ್ತಾಯಿಸಿ ಹೈಕಮಾಂಡ್‌ ನಾಯಕರಿಗೆ ಪತ್ರ ಬರೆದಿದ್ದ ಬೆನ್ನಲ್ಲೇ, ಇದೀಗ 24 ಮಂದಿ ವಿಧಾನ ಪರಿಷತ್ ಸದಸ್ಯರು (ಎಂಎಲ್‌ಸಿಗಳು) ಸಹ ಪತ್ರ ಬರೆದಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರನ್ನು ಭೇಟಿ ಮಾಡಿದ ಎಂಎಲ್‌ಸಿಗಳು, ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡುವಂತೆ ಮನವಿ ಸಲ್ಲಿಸಿದರು. 24 ಮಂದಿ ಸಹಿ ಮಾಡಿದ ಪತ್ರವನ್ನು ಖರ್ಗೆ ಅವರಿಗೆ ನೀಡಲಾಗಿದೆ.

ಸಂಪುಟದಲ್ಲಿ ಎಂಎಲ್‌ಸಿಗಳಿಗೆ ಪ್ರಾತಿನಿಧ್ಯ ಇಲ್ಲದಿರುವುದು ಅಸಮಾನತೆ ಹಾಗೂ ನಿರುತ್ಸಾಹ ಭಾವನೆ ಉಂಟುಮಾಡುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಎಂಎಲ್‌ಸಿಗಳಿಗೆ ರಾಜಕೀಯ ಭವಿಷ್ಯ ಇಲ್ಲ ಎಂಬ ಭಾವನೆ ಮೂಡಬಹುದು ಎಂದು ತಿಳಿಸಿದ್ದಾರೆ.

ಸಮರ್ಥ ನಾಯಕರು ವಿಧಾನ ಪರಿಷತ್‌ ಚುನಾವಣೆಯಲ್ಲಿ ಸ್ಪರ್ಧಿಸುವ ಬದಲು ವಿಧಾನಸಭಾ ಟಿಕೆಟ್ ಪಡೆಯಲು ಮುಂದಾಗುವ ಸಾಧ್ಯತೆ ಇದೆ. ಇದರಿಂದ ಗುಂಪುಗಾರಿಕೆ ಹೆಚ್ಚಾಗಿ ಪಕ್ಷದ ಸಂಘಟನೆಯನ್ನು ದುರ್ಬಲಗೊಳಿಸಬಹುದು ಎಂದು ಎಚ್ಚರಿಸಲಾಗಿದೆ.

ವಿಧಾನ ಪರಿಷತ್ತಿನ ಕನಿಷ್ಠ ಐದು ಸದಸ್ಯರನ್ನು ಸಚಿವ ಸಂಪುಟದಲ್ಲಿ ಸೇರಿಸಬೇಕು ಎಂದು ಎಂಎಲ್‌ಸಿಗಳು ಒತ್ತಾಯಿಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಒಬ್ಬರು, ಪದವೀಧರ ಅಥವಾ ಶಿಕ್ಷಕರ ಕ್ಷೇತ್ರದಿಂದ ಒಬ್ಬರು, ಕೆಳಮನೆ ಅಥವಾ ನಾಮನಿರ್ದೇಶಿತ ವರ್ಗದಿಂದ ಒಬ್ಬರನ್ನು ಆಯ್ಕೆ ಮಾಡುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ.

ಭಾರತ-ಪಾಕ್‌ ನ್ಯೂಕ್ಲಿಯರ್‌ ವಾರ್‌ ನಿಲ್ಲಿಸಿದ್ದು ನಾನೇ:‌ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

0

ವಾಷಿಂಗ್ಟನ್: ನನ್ನ ಮಧ್ಯಸ್ಥಿಕೆ ಇಲ್ಲದಿದ್ದರೆ ಭಾರತ ವಿರುದ್ಧದ ಯುದ್ಧದಲ್ಲಿ ಪಾಕಿಸ್ತಾನ ಪ್ರಧಾನಿ ಸಾವನ್ನಪ್ಪುತ್ತಿದ್ದರು ಎಂದು 3.5 ಕೋಟಿ ಜನರು ಹೇಳುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ತಮ್ಮ ಎರಡನೇ ಅವಧಿಯ ಸರ್ಕಾರಕ್ಕೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ 2026ರ ರಾಷ್ಟ್ರೀಯ ಒಕ್ಕೂಟವನ್ನುದ್ದೇಶಿಸಿ ಅವರು ಭಾಷಣ ಮಾಡಿದರು. ಈ ವೇಳೆ ಅಮೆರಿಕ ಗತವೈಭವಕ್ಕೆ ಮರಳಿದ್ದು, ಹಿಂದೆಂದಿಗಿಂತಲೂ ದೊಡ್ಡದು, ಉತ್ತಮದು, ಶ್ರೀಮಂತ ಹಾಗೂ ಬಲಿಷ್ಠ ರಾಷ್ಟ್ರವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಭಾರತ–ಪಾಕಿಸ್ತಾನ ನಡುವಿನ ಯುದ್ಧವನ್ನು ತಾವು ನಿಲ್ಲಿಸಿದ್ದಾಗಿ ಮತ್ತೊಮ್ಮೆ ಉಲ್ಲೇಖಿಸಿದರು. ನನ್ನ ಮೊದಲ 10 ತಿಂಗಳ ಅವಧಿಯಲ್ಲೇ 8 ಯುದ್ಧಗಳನ್ನು ನಿಲ್ಲಿಸಿದ್ದೇನೆ. ಅದರಲ್ಲಿ ಭಾರತ–ಪಾಕಿಸ್ತಾನ ಯುದ್ಧವು ಪರಮಾಣು ಸಂಘರ್ಷವಾಗುವ ಸಾಧ್ಯತೆ ಇತ್ತು. ನಾನು ಮಧ್ಯಸ್ಥಿಕೆ ವಹಿಸದಿದ್ದರೆ ಪಾಕಿಸ್ತಾನದ ಪ್ರಧಾನಿ ಸಾವನ್ನಪ್ಪುತ್ತಿದ್ದರು ಎಂದು 3.5 ಕೋಟಿ ಜನರು ಹೇಳುತ್ತಿದ್ದಾರೆ ಎಂದು ಟ್ರಂಪ್ ಅಭಿಪ್ರಾಯಪಟ್ಟರು.

ಮುಂದುವರೆದು ಮಾತನಾಡಿದ ಅವರು, ಕಳೆದ 9 ತಿಂಗಳಲ್ಲಿ ಅಮೆರಿಕಕ್ಕೆ ಅಕ್ರಮವಾಗಿ ಯಾರೂ ಪ್ರವೇಶಿಸಿಲ್ಲ. ಅಕ್ರಮ ವಲಸಿಗರ ಸಂಖ್ಯೆ ಶೂನ್ಯಕ್ಕೆ ಇಳಿದಿದೆ. ಕಾನೂನುಬದ್ಧ ವಿಧಾನದಲ್ಲಿ ಮಾತ್ರ ವಲಸೆಗೆ ಅವಕಾಶ ನೀಡಲಾಗುತ್ತಿದೆ ಎಂದು ಹೇಳಿದರು.

ಅಮೆರಿಕಕ್ಕೆ ಸ್ವಾತಂತ್ರ್ಯ ಸಿಕ್ಕು ಈ ಜುಲೈ 4ರಂದು 250 ವರ್ಷ ಪೂರ್ತಿಯಾಗಲಿದೆ. ಆ ವೇಳೆಗೆ ಅಮೆರಿಕ ಭೂಮಿಯ ಮೇಲಿನ ಅತ್ಯಂತ ಪ್ರಗತಿಪರ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಈ ಹಿಂದೆ ದೇಶದಲ್ಲಿ ಹತ್ಯೆ ಪ್ರಮಾಣ ಹೆಚ್ಚು ಇದ್ದರೂ, ಈಗ ಕೊಲೆ ಪ್ರಮಾಣ ಇತಿಹಾಸದಲ್ಲೇ ಅತಿದೊಡ್ಡ ಮಟ್ಟದ ಕುಸಿತ ಕಂಡಿದೆ ಎಂದು ಟ್ರಂಪ್ ಶ್ಲಾಘಿಸಿದರು.

ಅಡಿಗೆಮನೆ ಶುದ್ಧವಾಗಿರಲಿ, ನಕಾರಾತ್ಮಕ ಶಕ್ತಿ ದೂರವಾಗಲಿ!

0

ಅಡಿಗೆಮನೆ ನಮ್ಮ ಮನೆಯ ಅತ್ಯಂತ ಪ್ರಮುಖ ಮತ್ತು ಶಕ್ತಿಶಾಲಿ ಸ್ಥಳಗಳಲ್ಲಿ ಒಂದಾಗಿದೆ. ಇದು ಕೇವಲ ಅಡುಗೆಯನ್ನು ತಯಾರಿಸುವ ಸ್ಥಳವಲ್ಲ, ದೇಹಕ್ಕೆ ಶಕ್ತಿ, ಒಳ್ಳೆಯ ಆಲೋಚನೆಗಳು ಮತ್ತು ಆರೋಗ್ಯವನ್ನು ಒದಗಿಸುವ ಕೇಂದ್ರವಾಗಿದೆ.

ಆರೋಗ್ಯವಿದ್ದಾಗ ಮಾತ್ರ ನಮ್ಮ ಶ್ರೇಯಸ್ಸು, ಕೀರ್ತಿ ಮತ್ತು ಪ್ರತಿಷ್ಠೆ ಹೆಚ್ಚುತ್ತವೆ; ಆರೋಗ್ಯ ನಷ್ಟವಾದರೆ ಎಲ್ಲವೂ ಕಳೆದುಹೋಗುತ್ತದೆ ಎಂಬುದನ್ನು ಮರೆಯಬಾರದು. ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ, ಅಡಿಗೆಮನೆಯಲ್ಲಿ ಇರಬಾರದ ವಸ್ತುಗಳು ಮತ್ತು ಸ್ಥಿತಿಗಳ ಬಗ್ಗೆ ಸಲಹೆ ನೀಡುತ್ತಾರೆ.

ವಾಸ್ತು ಶಾಸ್ತ್ರದ ಪ್ರಕಾರ, ಅಡಿಗೆಮನೆಯಲ್ಲಿ ಕೆಲವು ವಸ್ತುಗಳು ಅಥವಾ ತಪ್ಪು ಸ್ಥಿತಿಗಳು ಬಡತನ, ಆಲಸ್ಯ ಮತ್ತು ನಕಾರಾತ್ಮಕ ಆಲೋಚನೆಗಳಿಗೆ ಕಾರಣವಾಗುತ್ತವೆ. ಸಾಮಾನ್ಯವಾಗಿ ಅಡಿಗೆಮನೆಯನ್ನು ಆಗ್ನೇಯ (ಸೌತ್ ಈಸ್ಟ್) ದಿಕ್ಕಿನಲ್ಲಿ ನಿರ್ಮಿಸುವುದು ಶುಭಕರ, ಮತ್ತು ಬಳಿಕ ವಾಯುವ್ಯ (ನಾರ್ತ್ ವೆಸ್ಟ್) ದಿಕ್ಕನ್ನು ಆಯ್ಕೆ ಮಾಡಬಹುದು. ಅಡುಗೆ ಮಾಡುವಾಗ ಸೂರ್ಯನ ಕಡೆ ಮುಖ ಮಾಡುವುದನ್ನು ಶುಭಕರ ಎಂದು ಪರಿಗಣಿಸಲಾಗುತ್ತದೆ.

ಅಡಿಗೆಮನೆಯಲ್ಲಿ ಗಮನಹರಿಸಬೇಕಾದ ಪ್ರಮುಖ ಅಂಶಗಳು:

  1. ಉಳಿದ ಅಥವಾ ಹಾಳಾದ ಆಹಾರ:
    ಅಡುಗೆ ಮಾಡಿದ ಆಹಾರವನ್ನು ಎಲ್ಲರೂ ಸೇವಿಸಿದ ನಂತರ ಉಳಿದ ಆಹಾರವನ್ನು ಹಾಳಾಗಲು ಬಿಡಬಾರದು. ಹಾಳಾದ ಆಹಾರ ಮನೆಯಲ್ಲಿ ದಾರಿದ್ರ್ಯವನ್ನು ಹೆಚ್ಚಿಸುತ್ತದೆ. ಉಳಿದ ಆಹಾರವನ್ನು ಪ್ರಾಣಿಗಳು ಅಥವಾ ಹಸಿದವರಿಗೆ ಹಂಚಬಹುದು.
  2. ಮುರಿದ ಪಾತ್ರೆಗಳು:
    ಮುರಿದ ಅಥವಾ ಒಡೆದ ಪಾತ್ರೆಗಳನ್ನು ಅಡಿಗೆಮನೆಯಲ್ಲಿ ಇಡಬಾರದು. ಇವು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತವೆ. ಪಾತ್ರೆಗಳು ಹಾಳಾಗದೆ, ಸಿಂಕ್‌ನಲ್ಲಿ ಉಳಿದ ಆಹಾರ ಪದಾರ್ಥಗಳೊಂದಿಗೆ ಇಡುವುದನ್ನು ತಪ್ಪಿಸಬೇಕು.
  3. ಸಿಂಕ್‌ನಲ್ಲಿ ಆಹಾರ ಪದಾರ್ಥಗಳು:
    ಸಿಂಕ್‌ನಲ್ಲಿ ಊಟ ಮಾಡಿದ ತಟ್ಟೆ ಅಥವಾ ಪಾತ್ರೆಗಳಲ್ಲಿ ಉಳಿದಿರುವ ಆಹಾರವನ್ನು ಕೂಡಲೇ ವಿಲೇವಾರಿ ಮಾಡಬೇಕು. ಆಹಾರದ ಅವಶೇಷಗಳನ್ನು ಪ್ರಾಣಿಗಳಿಗೆ ನೀಡಬೇಕು. ಇಲ್ಲದಿದ್ದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಮತ್ತು ಗಂಡ-ಹೆಂಡತಿಯ ನಡುವೆ ಕಲಹ ಉಂಟಾಗಬಹುದು.
  4. ಅಡಿಗೆಮನೆಯಲ್ಲಿ ಕಸ:
    ಅಡಿಗೆಮನೆ ಯಾವಾಗಲೂ ಸ್ವಚ್ಛವಾಗಿರಬೇಕು. ಈರುಳ್ಳಿ ಸಿಪ್ಪೆ, ತರಕಾರಿ ತುಂಡುಗಳು ಅಥವಾ ಯಾವುದೇ ಕಸವನ್ನು ಬಿಡಬಾರದು. ಸ್ವಚ್ಛತೆ ಇಲ್ಲದ ಅಡಿಗೆಮನೆಗೆ ಲಕ್ಷ್ಮಿ ದೇವಿಯು ಪ್ರವೇಶಿಸದೆ, ಅಲ್ಲಿ ತಯಾರಾದ ಆಹಾರ ಸೇವಿಸುವವರಿಗೆ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

ಡಾ. ಬಸವರಾಜ್ ಗುರೂಜಿಯವರ ಪ್ರಕಾರ, ಅಡಿಗೆಮನೆ ಸ್ವಚ್ಛ ಮತ್ತು ಶುದ್ಧವಾಗಿದ್ದರೆ, ಮನೆಯಲ್ಲಿನ ಶಕ್ತಿ, ಶ್ರೀಮಂತಿಕೆ ಮತ್ತು ಆರೋಗ್ಯವು ಹೆಚ್ಚುತ್ತದೆ.

 

error: Content is protected !!