Home Blog Page 118

ಧಾರಾಕಾರ ಮಳೆಗೆ ಚಿಗುರೊಡೆದ ಕೃಷಿ ಕನಸು ಶಿರಹಟ್ಟಿಯಲ್ಲಿ ಭರದಿಂದ ಬಿತ್ತನೆ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಮುಂಗಾರು ಆರಂಭದಲ್ಲೇ ಉತ್ತಮ ಮಳೆಯಾಗಿರುವುದು ಶಿರಹಟ್ಟಿ ತಾಲೂಕಿನ ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದ್ದು, ತಾಲೂಕಿನಾದ್ಯಂತ ಬಿತ್ತನೆ ಕಾರ್ಯ ಜೋರಾಗಿ ಸಾಗುತ್ತಿದೆ. ವಾಡಿಕೆಗಿಂತ ಶೇ.35ರಷ್ಟು ಅಧಿಕ ಮಳೆಯಾಗಿರುವ ಹಿನ್ನೆಲೆಯಲ್ಲಿ ಹೊಲಗಳು ಹದಗೊಂಡಿದ್ದು, ರೈತರು ಬೀಜ ಮತ್ತು ಗೊಬ್ಬರಗಳೊಂದಿಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.

ತಾಲೂಕಿನಲ್ಲಿ ಜನವರಿ 1ರಿಂದ ಜೂನ್ 4ರವರೆಗೆ 130.9 ಮಿ.ಮೀ. ವಾಡಿಕೆ ಮಳೆಯಾಗಬೇಕಾಗಿತ್ತು. ಆದರೆ ಇದೇ ಅವಧಿಯಲ್ಲಿ 176.9 ಮಿ.ಮೀ. ಮಳೆಯಾಗಿದ್ದು, ಶೇ.35ರಷ್ಟು ಹೆಚ್ಚುವರಿ ಮಳೆ ದಾಖಲಾಗಿದೆ. ಮುಂಗಾರು ಪೂರ್ವದಲ್ಲಿಯೇ ಆಗಿಂದಾಗ್ಗೆ ಸುರಿದ ಮಳೆಯಿಂದ ರೈತರು ತಮ್ಮ ಜಮೀನುಗಳನ್ನು ಬಿತ್ತನೆಗೆ ಸಿದ್ಧಪಡಿಸಿಕೊಂಡಿದ್ದರು. ಇದೀಗ ಜಮೀನುಗಳು ಬಿತ್ತನೆಗೆ ಯೋಗ್ಯವಾಗಿರುವುದರಿಂದ ರೈತರು ಬೀಜ-ಗೊಬ್ಬರ ಖರೀದಿಸಿ ಹೊಲಗಳತ್ತ ಮುಖ ಮಾಡಿದ್ದಾರೆ.

ಶಿರಹಟ್ಟಿ ತಾಲೂಕಿನಲ್ಲಿ ಒಟ್ಟು 51,698 ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣವಿದ್ದು, ಅದರಲ್ಲಿ 46,735 ಹೆಕ್ಟೇರ್ ಪ್ರದೇಶ ಕೃಷಿಗೆ ಯೋಗ್ಯವಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 36,430 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ.

ಈಗಾಗಲೇ 10,355 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಪೂರ್ಣಗೊಂಡಿದೆ. ಮೆಕ್ಕೆಜೋಳ 8,500 ಹೆಕ್ಟೇರ್, ಹೆಸರು 1,220 ಹೆಕ್ಟೇರ್, ತೊಗರಿ 550 ಹೆಕ್ಟೇರ್, ಶೇಂಗಾ 25 ಹೆಕ್ಟೇರ್, ಸೋಯಾಬಿನ್ 15 ಹೆಕ್ಟೇರ್ ಹಾಗೂ ಹತ್ತಿ 45 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಮುಂದಿನ ಕೆಲ ದಿನಗಳಲ್ಲಿ ಮಳೆ ಮುಂದುವರಿದರೆ ಬಿತ್ತನೆ ಕಾರ್ಯ ಮತ್ತಷ್ಟು ವೇಗ ಪಡೆಯುವ ನಿರೀಕ್ಷೆಯಿದೆ.

ಕೃಷಿ ಇಲಾಖೆಯ ಅಂಕಿ-ಅಂಶಗಳ ಪ್ರಕಾರ ತಾಲೂಕಿನಲ್ಲಿ ಯೂರಿಯಾ 783.5 ಮೆಟ್ರಿಕ್ ಟನ್, ಡಿಎಪಿ 126.5 ಮೆಟ್ರಿಕ್ ಟನ್ ಹಾಗೂ ಕಾಂಪ್ಲೆಕ್ಸ್ ಗೊಬ್ಬರ 617 ಮೆಟ್ರಿಕ್ ಟನ್ ದಾಸ್ತಾನು ಲಭ್ಯವಿದೆ.

ಹೆಸರು ಬೀಜ 67.20 ಕ್ವಿಂಟಲ್ ದಾಸ್ತಾನು ಇದ್ದು, ಅದರಲ್ಲಿ 66.20 ಕ್ವಿಂಟಲ್ ವಿತರಿಸಲಾಗಿದೆ. ತೊಗರಿ ಬೀಜ 187.20 ಕ್ವಿಂಟಲ್ ವಿತರಿಸಲಾಗಿದೆ. ಮೆಕ್ಕೆಜೋಳ ಬೀಜ 476.24 ಕ್ವಿಂಟಲ್ ಲಭ್ಯವಿದ್ದು, 208.86 ಕ್ವಿಂಟಲ್ ವಿತರಿಸಲಾಗಿದ್ದು, 267.86 ಕ್ವಿಂಟಲ್ ದಾಸ್ತಾನು ಉಳಿದಿದೆ.

ಕೃಷಿ ಇಲಾಖೆಯಿಂದ ಹೆಚ್ಚಿನ ಮಾರ್ಗದರ್ಶನಕ್ಕೆ ಒತ್ತಾಯ

ಪ್ರಸ್ತುತ ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳ ಹಾಗೂ ತಳಿಗಳ ಬೀಜಗಳು ಮಾರಾಟವಾಗುತ್ತಿದ್ದು, ಅವುಗಳ ಗುಣಮಟ್ಟದ ಬಗ್ಗೆ ರೈತರಿಗೆ ಸಮರ್ಪಕ ಮಾಹಿತಿ ನೀಡಬೇಕಾಗಿದೆ. ಕೃಷಿ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆಗಳ ಸ್ಥಿತಿಗತಿ ಪರಿಶೀಲಿಸಬೇಕು ಹಾಗೂ ರೋಗ-ಕೀಟಗಳ ಹತೋಟಿ ಕುರಿತು ಸಲಹೆ ನೀಡಬೇಕು ಎಂಬ ಒತ್ತಾಯ ರೈತರಿಂದ ಕೇಳಿಬಂದಿದೆ.

ಜೊತೆಗೆ ಬೀಜ ಮತ್ತು ಗೊಬ್ಬರಗಳ ಕೃತಕ ಅಭಾವ ಉಂಟಾಗದಂತೆ ನಿಗಾ ವಹಿಸುವುದು, ಬೆಳೆಗಳಲ್ಲಿ ರೋಗ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಜಾಗೃತಿ ಮೂಡಿಸುವುದು ಹಾಗೂ ಹೆಚ್ಚಿನ ಇಳುವರಿ ಪಡೆಯಲು ವೈಜ್ಞಾನಿಕ ಕೃಷಿ ಪದ್ಧತಿಗಳ ಕುರಿತು ತರಬೇತಿ ನೀಡುವುದು ಅಗತ್ಯವಾಗಿದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಕಾಶಪ್ಪನವರ, ರೈತರು ಯೂರಿಯಾ ಗೊಬ್ಬರವನ್ನು ಮಿತವಾಗಿ ಬಳಸಬೇಕು. ಬೀಜ ಮತ್ತು ಗೊಬ್ಬರ ಖರೀದಿಸುವಾಗ ಕಡ್ಡಾಯವಾಗಿ ಎಂಆರ್‌ಪಿ ಬಿಲ್ ಪಡೆಯಬೇಕು. ಮಾರಾಟಗಾರರು ಸಹ ರೈತರಿಗೆ ಬಿಲ್ ನೀಡುವುದನ್ನು ಕಡ್ಡಾಯವಾಗಿ ಪಾಲಿಸಬೇಕು. ದಾಸ್ತಾನು ಪ್ರಮಾಣವನ್ನು ಅಂಗಡಿಗಳಲ್ಲಿ ಪ್ರದರ್ಶಿಸುವಂತೆ ಸೂಚಿಸಲಾಗಿದೆ. ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿಎಪಿ ಬಳಕೆ ಮಾಡುವುದರಿಂದ ಗೊಬ್ಬರ ಬಳಕೆ ಕಡಿಮೆಯಾಗಿ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಸಲಹೆ ನೀಡಿದರು.

“ರೈತರು ಯೂರಿಯಾ ಗೊಬ್ಬರವನ್ನು ಮಿತವಾಗಿ ಬಳಸಬೇಕು. ಬೀಜ-ಗೊಬ್ಬರ ಖರೀದಿಸುವಾಗ ಕಡ್ಡಾಯವಾಗಿ ಬಿಲ್ ಪಡೆಯಬೇಕು. ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿಎಪಿ ಬಳಕೆ ಮಾಡುವುದು ಸೂಕ್ತ.”

 ಶಿವಕುಮಾರ ಕಾಶಪ್ಪನವರ

ಸಹಾಯಕ ಕೃಷಿ ನಿರ್ದೇಶಕ

ಮಡಿವಾಳ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಅಬ್ದುಲ್ ಖಾದರ್ ಜೈಲಿನಲ್ಲಿ ನಿಧನ!

ಬೆಂಗಳೂರು: 2008ರ ಮಡಿವಾಳ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಹಾಗೂ ಶಂಕಿತ ಉಗ್ರ ಅಬ್ದುಲ್ ಖಾದರ್ (60) ಜೈಲಿನಲ್ಲಿ ಅನಾರೋಗ್ಯದಿಂದ ಮೃತಪಟ್ಟ ಘಟನೆ ನಡೆದಿದೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ 2010ರಿಂದ ನ್ಯಾಯಾಂಗ ಬಂಧನದಲ್ಲಿದ್ದ ಅಬ್ದುಲ್ ಖಾದರ್‌ಗೆ ಗುರುವಾರ ಏಕಾಏಕಿ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದು, ಅವರನ್ನು ತಕ್ಷಣ ಜಯದೇವ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗಮಧ್ಯೆ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬಸ್ಥರಿಗೆ ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ತೀರ್ಪು ಹೊರಬೀಳುವ ಸಾಧ್ಯತೆ ಇತ್ತು. ಆದರೆ ತೀರ್ಪು ಪ್ರಕಟವಾಗುವ ಮೊದಲೇ ಆರೋಪಿ ಸಾವನ್ನಪ್ಪಿರುವುದು ಗಮನಾರ್ಹವಾಗಿದೆ.

ಮೂಲತಃ ಕೊಡಗು ಜಿಲ್ಲೆಯ ವಿರಾಜಪೇಟೆ ನಿವಾಸಿಯಾಗಿದ್ದ ಅಬ್ದುಲ್ ಖಾದರ್ ವಿರುದ್ಧ 2008ರ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪವಿದ್ದು, ಈ ಸಂಬಂಧ ರಾಷ್ಟ್ರೀಯ ತನಿಖಾ ದಳ ಅವರನ್ನು ಬಂಧಿಸಿತ್ತು.

ಹುಬ್ಬಳ್ಳಿಯಲ್ಲಿ ಭಾವನಾತ್ಮಕ ಕ್ಷಣ: ಗುರುಗೆ ಹಳೆಯ ವಿದ್ಯಾರ್ಥಿಯಿಂದ ಕಾರು ಉಡುಗೊರೆ!

ಹುಬ್ಬಳ್ಳಿ: ಗುರು-ಶಿಷ್ಯ ಸಂಬಂಧಕ್ಕೆ ಭಾವನಾತ್ಮಕ ಉದಾಹರಣೆಯೊಂದು ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ಬಾಲ್ಯದಲ್ಲಿ ಶಿಕ್ಷಣ ಮುಂದುವರಿಸಲು ನೆರವಾಗಿದ್ದ ಶಿಕ್ಷಕರಿಗೆ ಹಳೆಯ ವಿದ್ಯಾರ್ಥಿಯೊಬ್ಬರು ಹೊಸ ಕಾರನ್ನು ಉಡುಗೊರೆಯಾಗಿ ನೀಡಿದ ಘಟನೆ ಎಲ್ಲರ ಗಮನ ಸೆಳೆದಿದೆ.

ಹಾವೇರಿ ಜಿಲ್ಲೆಯ ಹಾನಗಲ್‌ನ ಕುಮಾರೇಶ್ವರ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಸಿ.ಎಸ್. ವಸ್ತ್ರದ್ ಅವರಿಗೆ ಅವರ ಹಳೆಯ ವಿದ್ಯಾರ್ಥಿ ನವೀನ್ ಹುಲಿಹಳ್ಳಿ ಅವರು ಮಾರುತಿ ಸುಜುಕಿ ಸ್ವಿಫ್ಟ್ ಕಾರು ಉಡುಗೊರೆಯಾಗಿ ನೀಡಿದ್ದಾರೆ.

2007ರ ಎಸ್‌ಎಸ್‌ಎಲ್‌ಸಿ ಬ್ಯಾಚ್‌ನ ವಿದ್ಯಾರ್ಥಿಯಾಗಿದ್ದ ನವೀನ್, ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿದ್ದಾಗ ಶಿಕ್ಷಕ ವಸ್ತ್ರದ್ ಅವರು ಶಾಲಾ ಶುಲ್ಕ ಪಾವತಿಸಿ ಶಿಕ್ಷಣ ಮುಂದುವರಿಸಲು ನೆರವಾಗಿದ್ದರು. ಜೊತೆಗೆ ರಜಾ ದಿನಗಳಲ್ಲಿ ವಿಶೇಷ ತರಗತಿಗಳನ್ನು ನಡೆಸಿ ಅವರ ಶಿಕ್ಷಣಕ್ಕೆ ಬೆನ್ನೆಲುಬಾಗಿ ನಿಂತಿದ್ದರು ಎಂದು ತಿಳಿದುಬಂದಿದೆ.

ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ನವೀನ್, ತಮ್ಮ ಜೀವನ ರೂಪಿಸಿದ ಗುರುಗಳ ಋಣ ತೀರಿಸುವ ಉದ್ದೇಶದಿಂದ ಈ ಉಡುಗೊರೆಯನ್ನು ನೀಡಿರುವುದಾಗಿ ತಿಳಿಸಿದ್ದಾರೆ. ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ನಡೆದ ಸಮಾರಂಭದಲ್ಲಿ ಕಾರಿನ ಕೀ ಹಸ್ತಾಂತರಿಸಲಾಯಿತು.

ಅನಿರೀಕ್ಷಿತ ಉಡುಗೊರೆಯಿಂದ ಭಾವುಕರಾದ ಶಿಕ್ಷಕ ವಸ್ತ್ರದ್ ಅವರು ತಮ್ಮ ಶಿಷ್ಯನ ಪ್ರೀತಿ ಮತ್ತು ಗೌರವಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಗುರು-ಶಿಷ್ಯ ಬಾಂಧವ್ಯಕ್ಕೆ ಮಾದರಿಯಾದ ಈ ಘಟನೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಕೆಆರ್ ಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ವೀಲಿಂಗ್ ಪುಂಡರ ಹಾವಳಿ: ಸ್ಥಳೀಯರ ಆಕ್ರೋಶ!

ಕೆಆರ್ ಪುರ: ರಾಷ್ಟ್ರೀಯ ಹೆದ್ದಾರಿ-75ರ ಮೇಡಹಳ್ಳಿ ಬ್ರಿಡ್ಜ್ ಬಳಿ ವೀಲಿಂಗ್ ಪುಂಡರ ಅಟ್ಟಹಾಸ ಮತ್ತೆ ಮುಂದುವರಿದಿದೆ.

ರಾತ್ರಿ ಸಮಯದಲ್ಲಿ ಬೈಕ್‌ಗಳಲ್ಲಿ ಅಪಾಯಕರ ವೀಲಿಂಗ್ ಹಾಗೂ ಕಾರುಗಳಿಂದ ವಿಡಿಯೋ ಮತ್ತು ಫೋಟೋಶೂಟ್ ನಡೆಸುತ್ತಿರುವ ದೃಶ್ಯಗಳು ಸ್ಥಳೀಯರ ಗಮನ ಸೆಳೆದಿವೆ.

ಜೂನ್ 11ರ ರಾತ್ರಿ ಸುಮಾರು 10 ಗಂಟೆ ವೇಳೆಗೆ ನಡೆದ ಈ ಘಟನೆ ವೇಳೆ ವೀಲಿಂಗ್ ಗ್ಯಾಂಗ್ ರಸ್ತೆ ಮೇಲೆ ಅಪಾಯಕರವಾಗಿ ಸಂಚರಿಸಿರುವುದು ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಬಿದ್ದಿದೆ.

ಮೇಡಹಳ್ಳಿ ಬ್ರಿಡ್ಜ್ ಮೂಲಕ ಕೆಆರ್ ಪುರ ಭಾಗಕ್ಕೆ ಪ್ರವೇಶಿಸುವ ವೇಳೆ ಈ ಗ್ಯಾಂಗ್ ನಿರಂತರವಾಗಿ ನಿಯಮ ಉಲ್ಲಂಘನೆ ಮಾಡುತ್ತಿದ್ದು, ರಾತ್ರಿ ವೇಳೆಯಲ್ಲಿ ಇಂತಹ ಚಟುವಟಿಕೆಗಳು ಹೆಚ್ಚಾಗುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ವೀಲಿಂಗ್ ಪುಂಡರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಹೆದ್ದಾರಿಯಲ್ಲಿ ಸುರಕ್ಷತೆ ಹೆಚ್ಚಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹೊರಗಿನ ಜ್ಯೂಸ್ ಸುರಕ್ಷಿತವೇ? ಕೊಳೆತ ಹಣ್ಣು ಜ್ಯೂಸ್ ಕುರಿತು ತಜ್ಞರ ವಾರ್ನಿಂಗ್!

0

ಗುಜರಾತ್‌ನಲ್ಲಿ ಹಾಳಾದ ಹಾಗೂ ಹುಳು ಬಿದ್ದ ಮಾವಿನ ಹಣ್ಣುಗಳನ್ನು ಜ್ಯೂಸ್ ತಯಾರಿಕೆಗೆ ಬಳಸಲಾಗುತ್ತಿದ್ದ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಹೊರಗೆ ಸಿಗುವ ಜ್ಯೂಸ್‌ನ ಸುರಕ್ಷತೆ ಕುರಿತು ಮತ್ತೆ ಚರ್ಚೆ ಆರಂಭವಾಗಿದೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ ಅಧಿಕಾರಿಗಳು ದೊಡ್ಡ ಪ್ರಮಾಣದ ಹಾಳಾದ ಹಣ್ಣುಗಳನ್ನು ವಶಪಡಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ.

ತಜ್ಞರ ಪ್ರಕಾರ, ಸ್ವಲ್ಪ ಹಣ್ಣಾದ ಹಣ್ಣುಗಳು ಸಾಮಾನ್ಯವಾಗಿ ಅಪಾಯಕಾರಿಯಾಗದಿದ್ದರೂ, ಕೊಳೆತ ಅಥವಾ ಹುಳು ಬಿದ್ದ ಹಣ್ಣುಗಳಲ್ಲಿ ಬ್ಯಾಕ್ಟೀರಿಯಾ, ಫಂಗಸ್ ಮತ್ತು ಕೀಟಾಣುಗಳು ವೇಗವಾಗಿ ಬೆಳೆಯುವ ಸಾಧ್ಯತೆ ಇದೆ. ಇವುಗಳಿಂದ ತಯಾರಿಸಲಾದ ಜ್ಯೂಸ್ ಸೇವನೆಯಿಂದ ಹೊಟ್ಟೆನೋವು, ವಾಂತಿ, ಹೊಟ್ಟೆ ಉಬ್ಬರ, ಜ್ವರ ಹಾಗೂ ಫುಡ್ ಪಾಯ್ಸನಿಂಗ್‌ನಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಕೆಲ ಸಂದರ್ಭಗಳಲ್ಲಿ ಫಂಗಸ್‌ನಿಂದ ಉತ್ಪತ್ತಿಯಾಗುವ “ಮೈಕೋಟಾಕ್ಸಿನ್” ಎಂಬ ವಿಷಕಾರಿ ಅಂಶ ಯಕೃತ್ ಹಾಗೂ ಮೂತ್ರಪಿಂಡಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ವಿಶೇಷವಾಗಿ ಮಕ್ಕಳು, ಗರ್ಭಿಣಿಯರು, ವೃದ್ಧರು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಹೆಚ್ಚು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇದೆ.

ರಾಸಾಯನಿಕ ಬಳಸಿ ಹಣ್ಣಾಗಿಸುವ ಹಣ್ಣುಗಳನ್ನೂ ಗುರುತಿಸುವುದು ಅಗತ್ಯವಾಗಿದೆ ಎಂದು ಆಹಾರ ತಜ್ಞರು ಹೇಳುತ್ತಿದ್ದಾರೆ. ಅಸಹಜ ಬಣ್ಣ, ಕಡಿಮೆ ರುಚಿ ಹಾಗೂ ನೀರಿನಲ್ಲಿ ತೇಲುವ ಗುಣ ಇಂತಹ ಲಕ್ಷಣಗಳು ಕಂಡುಬರಬಹುದು ಎಂದು ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಜ್ಯೂಸ್ ಸೇವಿಸುವಾಗ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ. ಸಾಧ್ಯವಾದಷ್ಟು ನಿಮ್ಮ ಎದುರಲ್ಲೇ ಹಣ್ಣು ಕತ್ತರಿಸಿ ಜ್ಯೂಸ್ ತಯಾರಿಸಿಕೊಳ್ಳುವುದು, ಮುಂಚಿತವಾಗಿ ತಯಾರಿಸಿದ ಪಲ್ಪ್ ಬಳಕೆಯನ್ನು ತಪ್ಪಿಸುವುದು ಹಾಗೂ ಮನೆಯಲ್ಲೇ ತಾಜಾ ಜ್ಯೂಸ್ ತಯಾರಿಸುವುದು ಸುರಕ್ಷಿತ ಎಂದು ತಜ್ಞರು ಸೂಚಿಸಿದ್ದಾರೆ.

ಮೋದಿ ಕಾಲದಲ್ಲಿ ಉತ್ಪಾದನೆ, ಉದ್ಯೋಗ ಆಧರಿತ ಕೈಗಾರಿಕೆಗಳಿಗೆ ಹೆಚ್ಚು ಉತ್ತೇಜನ: ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಉತ್ಪಾದನೆ ಮತ್ತು ಉದ್ಯೋಗ ಆಧರಿತ ಕೈಗಾರಿಕೆಗಳಿಗೆ ಹೆಚ್ಚು ಉತ್ತೇಜನ ನೀಡಲಾಗುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು. ಬೆಂಗಳೂರಿನ ಕೇಂದ್ರೀಯ ಕೈಗಾರಿಕಾ ಉತ್ಪಾದನಾ ಸಂಸ್ಥೆ (CMTI) ಯ 65ನೇ ಸಂಸ್ಥಾಪನಾ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉತ್ಪಾದನೆ ಮತ್ತು ಸಂಶೋಧನೆಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಈ ಮೂಲಕ ಕೈಗಾರಿಕಾ ಕ್ಷೇತ್ರವು ದೊಡ್ಡ ಪ್ರಮಾಣದಲ್ಲಿ ಬೆಳವಣಿಗೆ ಸಾಧಿಸುತ್ತಿದೆ. ಉದ್ಯೋಗ ಸೃಷ್ಟಿಯು ಅಗಾಧವಾಗಿ ಆಗುತ್ತಿದೆ ಎಂದ ಸಚಿವರು; ಮೋದಿ ಅವರು ಪ್ರಧಾನಿಯಾಗಿ ಬಂದ ಮೇಲೆ ಕಳೆದ ಹನ್ನೆರಡು ವರ್ಷಗಳಲ್ಲಿ ಕೈಗಾರಿಕಾ ಸಂಶೋಧನೆಗೆ ಅತಿ ಹೆಚ್ಚು ಒತ್ತು ಕೊಡಲಾಗಿದೆ ಎಂದರು.

ತಾಂತ್ರಿಕ ಶಿಕ್ಷಣ ಪಡೆಯುವ ಅಭ್ಯರ್ಥಿಗಳಿಗೆ ಉದ್ಯೋಗ ಆಕಾಶ ಸಿಗುವುದು ಕಷ್ಟವೆನ್ನುವ ಪರಿಸ್ಥಿತಿಯ ನಡುವೆ, ಎಂಜಿನಿಯರಿಂಗ್ ಮತ್ತು ಡಿಪ್ಲೋಮೋ ಓದಿರುವ ವಿದ್ಯಾರ್ಥಿಗಳಿಗೆ ವಿಪುಲವಾಗಿ ಉದ್ಯೋಗಗಳನ್ನು ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಕೌಶಲ್ಯ ಆಧರಿತ ಉದ್ಯೋಗಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಒತ್ತು ನೀಡುತ್ತಿದೆ.

ಸಿಎಂಟಿಐ ಹೆಮ್ಮೆಯ ಸಂಸ್ಥೆ:

ಬೆಂಗಳೂರು ನಗರದಲ್ಲಿ ಕೇಂದ್ರವನ್ನಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಕೇಂದ್ರೀಯ ಕೈಗಾರಿಕಾ ಉತ್ಪಾದನಾ ಸಂಸ್ಥೆ (ಸಿಎಂಟಿಐ) ಉತ್ತಮವಾಗಿ ಕೆಲಸ ಮಾಡುತ್ತಿದೆ. ಬಾಹ್ಯಾಕಾಶ ರಕ್ಷಣೆ ಸೇರಿದಂತೆ ಹಲವಾರು ಸೂಕ್ಷ್ಮ ವಲಯಗಳಿಗೆ ಉಪಕರಣಗಳನ್ನು ತಯಾರಿಸಿ ಕೊಡುತ್ತಿದೆ ಎಂದು ಸಚಿವ ಕುಮಾರಸ್ವಾಮಿ ಅವರು ತಮ್ಮ ಭಾಷಣದಲ್ಲಿ ಪ್ರಮುಖವಾಗಿ ಉಲ್ಲೇಖಿಸಿದರು.

ಸಿಎಂಟಿಐ ಅನ್ನು ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವಿಸ್ತರಿಸುವ ಉದ್ದೇಶವನ್ನು ಕೇಂದ್ರ ಸರಕಾರ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಹಾಗೂ ಮೇಕ್ ಇನ್ ಇಂಡಿಯಾ ಯೋಜನೆಗಳ ಅಡಿಯಲ್ಲಿ ಈ ಸಂಸ್ಥೆಗೆ ಹೆಚ್ಚಿನ ಆರ್ಥಿಕ ಶಕ್ತಿಯನ್ನು ತುಂಬುವ ಕೆಲಸ ಮಾಡುತ್ತೇವೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

65 ವರ್ಷಗಳ ಹಿಂದೆ ಸಣ್ಣ ಸಂಸ್ಥೆಯಾಗಿ ಆರಂಭಗೊಂಡ ಸಿಎಂಟಿಐ ಇಂದು ಅಗಾಧವಾಗಿ ಬೆಳೆದು ನಿಂತಿದೆ. ನೂರಾರು ಜನರಿಗೆ ಉದ್ಯೋಗವನ್ನು ಕಲ್ಪಿಸಿ ಸಾವಿರಾರು ಕುಟುಂಬಗಳಿಗೆ ಆಧಾರ ಸ್ಥಂಭವಾಗಿದೆ. ಅಷ್ಟೇ ಅಲ್ಲದೆ ಸಂಶೋಧನೆ ಆವಿಷ್ಕಾರ ಅಭಿವೃದ್ಧಿ ವಿಭಾಗಗಳಲ್ಲಿ ಬದ್ಧತೆಯಿಂದ ಕೆಲಸ ಮಾಡುತ್ತಿದೆ ಈ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ದೊಡ್ಡ ಕೊಡುಗೆಯನ್ನು ನೀಡುತ್ತಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಮುಕ್ತಕಂಠದಿಂದ ಶ್ಲಾಘಿಸಿದರು.

ಅಂತಿಮ ಹಂತದಲ್ಲಿ ಹೆಚ್ಎಂಟಿಗೆ ಕಾಯಕಲ್ಪ ನೀಡುವ ಯೋಜನೆ:

ಉತ್ಪಾದನೆ ಆಧರಿತ ಕೈಗಾರಿಕೆಗಳಿಗೆ ಉತ್ತೇಜಿನ ನೀಡುವ ಪ್ರಧಾನಿಗಳ ದೂರ ದೃಷ್ಟಿ ಹಿನ್ನೆಲೆಯಲ್ಲಿ ಭಾರತದ ಪ್ರತಿಷ್ಠಿತ ಉದ್ಯಮಿಗಳಲ್ಲಿ ಒಂದಾದ ಹಿಂದುಸ್ತಾನ್ ಮಷೀನ್ ಟೂಲ್ಸ್ (ಹೆಚ್ಎಂಟಿ) ಕಂಪನಿಗೆ ಮರುಜೀವ ನೀಡುವ ಯೋಜನೆ ಅಂತಿಮ ಅಂತದಲ್ಲಿ ಇದೆ ಎಂದು ಸಚಿವ ಕುಮಾರಸ್ವಾಮಿ ಅವರು ಈ ಸಂದರ್ಭದಲ್ಲಿ ಕೇಳಿದರು.

ಬೆಂಗಳೂರು ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಹೆಚ್ಎಂಟಿ ಎಲ್ಲಾ ವಿಭಾಗಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶ ಕೇಂದ್ರ ಸರ್ಕಾರ ಹೊಂದಿದ್ದು, ಡಿಪಿಆರ್ ಕೂಡ ಅಂತಿಮ ಹಂತದಲ್ಲಿದ್ದು, ಶೀಘ್ರವೇ ವಿಸ್ತ ಸಚಿವರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದೇನೆ ಎಂದು ಸಚಿವರು ಹೇಳಿದರು.

ಕಳೆದ ಎರಡು ವರ್ಷಗಳಿಂದ ಎಚ್ಎಂಟಿ ಕಂಪನಿಗೆ ಕಾಯಕಲ್ಪ ನೀಡುವ ಉದ್ದೇಶದಿಂದ ಸರ್ಕಾರ ಕೆಲಸ ಮಾಡುತ್ತಿದೆ. ನೀತಿ ಆಯೋಗದ ಸದಸ್ಯರಾದ ಡಾ. ವಿ.ಕೆ.ಸಾರಸ್ವತ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ ವರದಿಯನ್ನು ಪಡೆದುಕೊಳ್ಳಲಾಗಿದೆ. ಸಮಿತಿಯು ಮೌಲಿಕವಾದ ಅನೇಕ ಶಿಫಾರಸುಗಳನ್ನು ಮಾಡಿದೆ. ಆ ಆಧಾರದ ಮೇಲೆ ಕಂಪನಿಯನ್ನು ಮೇಲೆತ್ತುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಬೃಹತ್ ಕೈಗಾರಿಕೆ ಸಚಿವರು ಸಭೆಯಲ್ಲಿ ಹೇಳಿದರು.

ನಮ್ಮ ಪ್ರಯತ್ನಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಪೂರ್ಣ ಸಹಕಾರವಿದ್ದು, ಅವರ ಮಾರ್ಗದರ್ಶನದಲ್ಲಿ ಹೆಚ್ಎಂಟಿ ಅಪೂರ್ವ ವೈಭವವನ್ನು ಮರಳಿ ತರುವ ಕೆಲಸ ಆರಂಭಿಸಿದ್ದೇವೆ ಎಂದರು ಕೇಂದ್ರ ಸಚಿವರು.ಇದೇ

ಸಂದರ್ಭದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಸಿಎಂಟಿಐ ನಲ್ಲಿರುವ ಸುಧಾರಿತ ಎಂಜಿನಿಯರಿಂಗ್ ಸಾಮಗ್ರಿ ಪರೀಕ್ಷಾ ಸೌಲಭ್ಯ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದರು. ತದನಂತರ ಸಚಿವರು ಇಡೀ ಸಂಸ್ಥೆಯನ್ನು ವೀಕ್ಷಿಸಿದರು. ವಿವಿಧ ವಿಭಾಗಗಳಿಗೆ ತೆರಳಿ ಮಾಹಿತಿಯನ್ನು ಪಡೆದುಕೊಂಡರು. ಅಲ್ಲದೆ ಯುವ ವಿಜ್ಞಾನಿಗಳ ಜತೆ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ಸಿಎಂಟಿಐ ನಿರ್ದೇಶಕ ಡಾ. ನಾಗಹನುಮಯ್ಯ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕೆ ಅವಕಾಶ ನೀಡಬಾರದು; ರಾಜ್ಯ ಸರ್ಕಾರಕ್ಕೆ ಗೋವಿಂದ ಕಾರಜೋಳ ಆಗ್ರಹ

ಬೆಂಗಳೂರು: ರಾಜ್ಯ ಸರ್ಕಾರ ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕೆ ಅವಕಾಶ ನೀಡಬಾರದು ಹಾಗೂ ರೈತರು ಬೀದಿಗಿಳಿದು ಹೋರಾಟ ನಡೆಸುವಂತಹ ಪರಿಸ್ಥಿತಿ ಸೃಷ್ಟಿಸಬಾರದು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.

ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳಿಗೆ ಅವಕಾಶ ನೀಡುವ ಪ್ರಕ್ರಿಯೆಯಿಂದ ರೈತರಲ್ಲಿ ಆತಂಕ ಹೆಚ್ಚಾಗಿದೆ ಎಂದು ಹೇಳಿದರು.

ಟಾಟಾ ಪವರ್ ಸೇರಿದಂತೆ ಖಾಸಗಿ ಸಂಸ್ಥೆಗಳಿಗೆ ವಿದ್ಯುತ್ ವಿತರಣೆಯಲ್ಲಿ ಅವಕಾಶ ಕಲ್ಪಿಸುವ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ರೈತ ಸಮುದಾಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಖಾಸಗಿ ಕಂಪನಿಗಳು ಲಾಭದ ಉದ್ದೇಶದಿಂದ ಕಾರ್ಯನಿರ್ವಹಿಸುತ್ತವೆ. ವಿದ್ಯುತ್ ಲೈನ್ ಅಥವಾ ಟ್ರಾನ್ಸ್‌ಫಾರ್ಮರ್ (ಟಿಸಿ) ಹಾನಿಗೊಳಗಾದರೆ, ಅದರ ದುರಸ್ತಿಗಾಗಿ ರೈತರು ಹೆಚ್ಚಿನ ಮೊತ್ತವನ್ನು ಪಾವತಿಸಬೇಕಾಗುವ ಸಾಧ್ಯತೆ ಇದೆ ಎಂದು ಕಾರಜೋಳ ಹೇಳಿದರು.

ರೈತರಿಗೆ ಐಪಿ ಸೆಟ್ ಸಂಪರ್ಕ ಹಾಗೂ ಟ್ರಾನ್ಸ್‌ಫಾರ್ಮರ್ ಅಳವಡಿಕೆಗೆ ಪ್ರಸ್ತುತ ₹2.5 ಲಕ್ಷದಿಂದ ₹3 ಲಕ್ಷದವರೆಗೆ ವೆಚ್ಚವಾಗುತ್ತಿದೆ ಎಂದು ಆರೋಪಿಸಿದ ಅವರು, ಖಾಸಗಿ ಕಂಪನಿಗಳ ಹಸ್ತಕ್ಷೇಪ ಹೆಚ್ಚಾದರೆ ಈ ವೆಚ್ಚ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.

ಬಿಜೆಪಿ ಆಡಳಿತದ ಅವಧಿಯಲ್ಲಿ ಕಡಿಮೆ ವೆಚ್ಚದಲ್ಲಿ ರೈತರಿಗೆ ಐಪಿ ಸೆಟ್ ಸಂಪರ್ಕ ಹಾಗೂ ಅಗತ್ಯ ವಿದ್ಯುತ್ ಸೌಲಭ್ಯಗಳನ್ನು ಒದಗಿಸಲಾಗುತ್ತಿತ್ತು. ಆದರೆ ಕಳೆದ ಮೂರು ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದ್ದು, ರೈತರು ಹೆಚ್ಚುವರಿ ಆರ್ಥಿಕ ಹೊರೆ ಎದುರಿಸುತ್ತಿದ್ದಾರೆ ಎಂದು ಟೀಕಿಸಿದರು.

ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿತ್ತು; ಸತ್ಯಾಸತ್ಯತೆ ಹೊರಬರಬೇಕು ಎಂದ ವಿಜಯೇಂದ್ರ

ಬೆಂಗಳೂರು: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸ್ವಾಮಿಯ ಸನ್ನಿಧಿಗೆ ಕಳಂಕ ತರುವ ಉದ್ದೇಶದಿಂದ ದೊಡ್ಡ ಮಟ್ಟದ ಷಡ್ಯಂತ್ರ ನಡೆದಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.

ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೂಗಳ ಧಾರ್ಮಿಕ ನಂಬಿಕೆ ಮತ್ತು ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಪ್ರಯತ್ನ ನಡೆದಿದ್ದು, ಈ ಸಂಬಂಧ ಹಲವು ಸಂಗತಿಗಳು ಇದೀಗ ಬೆಳಕಿಗೆ ಬರುತ್ತಿವೆ ಎಂದು ಹೇಳಿದರು.

ಧರ್ಮಸ್ಥಳಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಗ್ರ ಪರಿಶೀಲನೆ ನಡೆಸದೆ ಎಸ್‌ಐಟಿ ತನಿಖೆಗೆ ಆದೇಶ ನೀಡಿದ್ದರು ಎಂದು ವಿಜಯೇಂದ್ರ ಟೀಕಿಸಿದರು. ಈ ನಿರ್ಧಾರವು ಆರಂಭದಿಂದಲೇ ಹಲವು ಅನುಮಾನಗಳಿಗೆ ಕಾರಣವಾಗಿತ್ತು ಎಂದು ಅವರು ಅಭಿಪ್ರಾಯಪಟ್ಟರು.

“ಒಂದು ದಿನ ಮೊದಲು ತನಿಖೆಯ ಅಗತ್ಯವಿಲ್ಲ ಎಂದು ಹೇಳಲಾಗಿತ್ತು. ಆದರೆ ನಂತರ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಏಕಾಏಕಿ ಎಸ್‌ಐಟಿ ತನಿಖೆಗೆ ಆದೇಶ ನೀಡಲಾಯಿತು. ಈ ಬೆಳವಣಿಗೆಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ” ಎಂದು ಅವರು ಹೇಳಿದರು.

ಧರ್ಮಸ್ಥಳದ ಪರವಾಗಿ ಬಿಜೆಪಿ ಈ ಹಿಂದೆ ‘ಧರ್ಮಸ್ಥಳ ಚಲೋ’ ಪ್ರತಿಭಟನೆ ಹಮ್ಮಿಕೊಂಡಿತ್ತು ಎಂದು ಉಲ್ಲೇಖಿಸಿದ ವಿಜಯೇಂದ್ರ, ಪ್ರಕರಣದ ಹಿಂದೆ ಪ್ರಭಾವಿ ಹಿತಾಸಕ್ತಿಗಳು ಹಾಗೂ ದೊಡ್ಡ ಪ್ರಮಾಣದ ಹಣಕಾಸು ವ್ಯವಹಾರಗಳು ನಡೆದಿರುವ ಬಗ್ಗೆ ಶಂಕೆಗಳು ವ್ಯಕ್ತವಾಗಿವೆ ಎಂದು ಆರೋಪಿಸಿದರು.

ಕೊಲ್ಲೂರಿನಲ್ಲಿ ಸಿಎಂ ವಿಜಯ್ ವಿಶೇಷ ಪ್ರಾರ್ಥನೆ: ಮೂಕಾಂಬಿಕೆ ದೇವಿಗೆ ಬೆಳ್ಳಿ ಖಡ್ಗ ಸಮರ್ಪಣೆ

0

ಉಡುಪಿ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ದೇವಿಯ ಆಶೀರ್ವಾದ ಪಡೆದರು. ಮುಖ್ಯಮಂತ್ರಿಯಾದ ಬಳಿಕ ಕರ್ನಾಟಕಕ್ಕೆ ನೀಡಿದ ಮೊದಲ ಭೇಟಿಯಲ್ಲಿ ಅವರು ಕ್ಷೇತ್ರದ ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಗಮನ ಸೆಳೆದರು.

ದೇವಸ್ಥಾನಕ್ಕೆ ಆಗಮಿಸಿದ ಸಿಎಂ ವಿಜಯ್ ಅವರನ್ನು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅರ್ಚಕ ವೃಂದ ಸಾಂಪ್ರದಾಯಿಕವಾಗಿ ಸ್ವಾಗತಿಸಿತು. ಶಲ್ಯ ಧರಿಸಿ ದೇವಸ್ಥಾನ ಪ್ರವೇಶಿಸಿದ ಅವರು ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ನಡೆದ ಸಂಕಲ್ಪ ಪೂಜೆಯಲ್ಲಿ ಭಾಗವಹಿಸಿದರು.

ದೇವಿಗೆ ರೇಷ್ಮೆ ಸೀರೆ, ಫಲ-ತಾಂಬೂಲ ಸಮರ್ಪಿಸಿದ ವಿಜಯ್ ಸುಮಾರು 30 ನಿಮಿಷಗಳ ಕಾಲ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ 1 ಕೆಜಿ 600 ಗ್ರಾಂ ತೂಕದ ಬೆಳ್ಳಿ ಖಡ್ಗವನ್ನು ಕಾಣಿಕೆಯಾಗಿ ಅರ್ಪಿಸಿದರು. ದೇವಸ್ಥಾನದ ನಿತ್ಯ ಪೂಜಾ ವಿಧಿವಿಧಾನಗಳಂತೆ ದೀಪಾರಾಧನೆ ನೆರವೇರಿಸಲಾಯಿತೇ ಹೊರತು ಯಾವುದೇ ವಿಶೇಷ ಪೂಜೆ ಆಯೋಜಿಸಲಾಗಿಲ್ಲ ಎಂದು ದೇವಸ್ಥಾನ ಮೂಲಗಳು ತಿಳಿಸಿವೆ.

ಪೂಜೆ ಬಳಿಕ ಅರ್ಚಕರು ರಕ್ಷಾದಾರ ಕಟ್ಟಿದ ನಂತರ ಸಿಎಂ ವಿಜಯ್ ದೇವಸ್ಥಾನದಿಂದ ನಿರ್ಗಮಿಸಿದರು. ಅವರ ಭೇಟಿ ಹಿನ್ನೆಲೆಯಲ್ಲಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

ಮೇಕೆದಾಟು ಸೇರಿ ನಾಲ್ಕು ಮಹತ್ವದ ನೀರಾವರಿ ಯೋಜನೆಗಳಿಗೆ ಅನುಮತಿ ನೀಡಿ; ಕೇಂದ್ರಕ್ಕೆ ಡಿಕೆಶಿ ಮನವಿ

0

ನವದೆಹಲಿ: ಕರ್ನಾಟಕ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಾದ ಮೇಕೆದಾಟು, ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ, ಮಹದಾಯಿ ಯೋಜನೆಗಳಿಗೆ ಅನುಮತಿ, ಅನುದಾನ ನೀಡಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಜಲಶಕ್ತಿ ಸಚಿವರಿಗೆ ಮನವಿ ಮಾಡಿದ್ದಾರೆ.

ರಾಜ್ಯದ ನಿರಾವರಿ ಯೋಜನೆಗಳಿಗೆ ಹೆಚ್ಚಿನ ಕಾಳಜಿ ವಹಿಸಿರುವ ಮುಖ್ಯಮಂತ್ರಿಗಳು ಗುರುವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದ ಶಿವಕುಮಾರ್ ಅವರು ಶುಕ್ರವಾರ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ನೀರಾವರಿ ಯೋಜನೆಗಳ ಜಾರಿಗೆ ಸಹಕಾರ ಕೋರಿದರು.

ಮುಖ್ಯಮಂತ್ರಿಗಳ ಪ್ರಸ್ತಾವನೆಯ ಪ್ರಮುಖ ಅಂಶಗಳು ಹೀಗಿವೆ:

1. ಮೇಕೆದಾಟು ಯೋಜನೆ:

ಸುಪ್ರೀಂ ಕೋರ್ಟ್ 13.11.2025 ರಂದು ತಮಿಳುನಾಡು ರಾಜ್ಯದ ವಿವಿಧ ಅರ್ಜಿಗಳನ್ನು ವಜಾಗೊಳಿಸಿದೆ ಮತ್ತು ಮೇಕೆದಾಟು ಯೋಜನೆಯ ಅನುಮತಿಯ ಬಗ್ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಕೇಂದ್ರ ಜಲ ಆಯೋಗ (CWC) ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ. CWMA ಈಗಾಗಲೇ ಯೋಜನೆಯನ್ನು ಮೌಲ್ಯಮಾಪನ ಮಾಡಲು CWC ಗೆ ಸೂಚಿಸಿರುವುದರಿಂದ, ಈ ಯೋಜನೆಗೆ ಶೀಘ್ರ ಅನುಮತಿ ಸಿಗುವಂತೆ ನೋಡಿಕೊಳ್ಳಬೇಕು.

2. ಕೃಷ್ಣಾ ನೀರು ವಿವಾದ ನ್ಯಾಯಾಧೀಕರಣ (KWDT-II) ತೀರ್ಪಿನ ಗೆಜೆಟ್ ಅಧಿಸೂಚನೆ:

ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ, ಕೃಷ್ಣಾ ನೀರು ವಿವಾದ ನ್ಯಾಯಾಧೀಕರಣ-II (KWDT-II) ತೀರ್ಪು ನೀಡಿ ಒಂದು ದಶಕಕ್ಕೂ ಹೆಚ್ಚು ಕಾಲ ಕಳೆದಿದ್ದರೂ, ಕೇಂದ್ರ ಸರ್ಕಾರವು ಇನ್ನು ಸಹ ಈ ತೀರ್ಪನ್ನು ಗೆಜೆಟ್‌ನಲ್ಲಿ ಅಧಿಸೂಚಿಸಿಲ್ಲ. ಕರ್ನಾಟಕ ರಾಜ್ಯವು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-III ರ ಅನುಷ್ಠಾನದಲ್ಲಿ ಭಾರಿ ಮೊತ್ತವನ್ನು ಹೂಡಿಕೆ ಮಾಡಿದೆ ಮತ್ತು ನಮ್ಮ ಯೋಜನೆಯನ್ನು ಮುಂದುವರಿಸಲು ಹಾಗೂ ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ಕೇಂದ್ರದ ಬೆಂಬಲದ ಅಗತ್ಯವಿದೆ.

3. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ನೆರವು:

ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರವು 2023-24 ರ ಕೇಂದ್ರ ಬಜೆಟ್‌ನಲ್ಲಿ 5,300 ಕೋಟಿ ರೂ.ಗಳ ನೆರವನ್ನು ಘೋಷಿಸಿತ್ತು. ಆದರೆ, 3 ವರ್ಷಗಳು ಕಳೆದರೂ ರಾಜ್ಯಕ್ಕೆ ಈ ಹಣಕಾಸಿನ ನೆರವು ಬಿಡುಗಡೆಯಾಗಿಲ್ಲ. ಈ ಯೋಜನೆಯ 21,167.93 ಕೋಟಿ ರೂ.ಗಳ ಪರಿಷ್ಕೃತ ವೆಚ್ಚದ ಅಂದಾಜಿನ ಪ್ರಸ್ತುತ ಪ್ರಸ್ತಾವನೆಯನ್ನು ಮೌಲ್ಯಮಾಪನ ಮಾಡಿದೆ. PMKSY-AIBP ಯೋಜನೆಯಡಿ ಈ ಯೋಜನೆಗೆ ಕೇಂದ್ರದ ನೆರವನ್ನು ಶೀಘ್ರ ಬಿಡುಗಡೆ ಮಾಡಬೇಕು.

4. ಮಹದಾಯಿ ಕಣಿವೆಯ ಕಳಸಾ ಮತ್ತು ಬಂಡೂರಿ ನಾಲಾ ಯೋಜನೆಗಳು:

ಮಹದಾಯಿ ಕಣಿವೆಯಡಿ ಬರುವ ಕಳಸಾ ಮತ್ತು ಬಂಡೂರಿ ನಾಲಾ ಯೋಜನೆಗಳನ್ನು ಹುಬ್ಬಳ್ಳಿ-ಧಾರವಾಡದ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಉದ್ದೇಶಿಸಲಾಗಿದೆ. ಇವುಗಳಿಗೆ ಡಿಸೆಂಬರ್ 2022 ರಲ್ಲಿ CWC/ಜಲಶಕ್ತಿ ಸಚಿವಾಲಯವು ಅನುಮತಿ ನೀಡಿದ್ದರೂ,

ಈ ಯೋಜನೆಗೆ ಯಾವುದೇ ಕಾನೂನು ಅಡಚಣೆಗಳಿಲ್ಲದಿದ್ದರೂ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ (MoEF & CC) ಅರಣ್ಯ/ವನ್ಯಜೀವಿ ಅನುಮತಿ ಇನ್ನೂ ಸಿಕ್ಕಿಲ್ಲ. ಇದರಿಂದಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ತೀರ್ಪಿನ ಅನ್ವಯ ಹಂಚಿಕೆಯಾದ ನೀರನ್ನು ಬಳಸಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಆದಷ್ಟು ಬೇಗ ಈ ಯೋಜನೆಗಳಿಗೆ ಅನುಮತಿ ಕೊಡಿಸಬೇಕು.

5. ಏತ ನೀರಾವರಿ, ಕಾಲುವೆ ಕಾಮಗಾರಿಗಳಿಗೆ AIBP-PMKSY ಮತ್ತು FMBAP ಯೋಜನೆಗಳಡಿ ಕೇಂದ್ರದ ನೆರವು:

ಭಾರತ ಸರ್ಕಾರದ AIBP-PMKSY ಮತ್ತು FMBAP ಯೋಜನೆಗಳಡಿ ಕೇಂದ್ರದ ನೆರವು ಕೋರಿ ಕರ್ನಾಟಕ ರಾಜ್ಯವು ಫೆಬ್ರವರಿ 2025 ರಲ್ಲಿ ಈ ಕೆಳಗಿನ ಯೋಜನೆಗಳ PFR / DPR ಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ.

ಸೊಂತಿ ಏತ ನೀರಾವರಿ, ಇಂಡಿ ಶಾಖಾ ಕಾಲುವೆ, ಮಲಪ್ರಭಾ ಕಾಲುವೆ ಬಾಕಿ ಕಾಮಗಾರಿ, ಘಟಪ್ರಭಾ ಬಲದಂಡೆ ಕಾಲುವೆ ಮತ್ತು ಚಿಕ್ಕೋಡಿ ಶಾಖಾ ಕಾಲುವೆ, ತುಂಗಭದ್ರಾ ಎಡದಂಡೆ ಕಾಲುವೆ ಬಾಕಿ ಕಾಮಗಾರಿ, ಬೆಣ್ಣಿಹಳ್ಳ ನದಿಯ ಪ್ರವಾಹ ನಿಯಂತ್ರಣ ಮತ್ತು ಪ್ರವಾಹ ನಿರ್ವಹಣೆ ಯೋಜನೆಗಳಿಗೆ ಕೇಂದ್ರ ಸರ್ಕಾರ ನೆರವು ನೀಡಬೇಕು.

6. ನದಿ ಜೋಡಣೆ ಯೋಜನೆಯಲ್ಲಿ ರಾಜ್ಯಕ್ಕೆ ನ್ಯಾಯಯುತ ಪಾಲು ಹಂಚಿಕೆ

ಕೇಂದ್ರ ಸರ್ಕಾರದ ನದಿಗಳ ಜೋಡಣೆಯ ಪ್ರಸ್ತಾವನೆಗಳ ಅಡಿಯಲ್ಲಿ, ನದಿ ಜೋಡಣೆ (ILR) ಯೋಜನೆಗಳಿಂದ “ಸಮತೆ ಮತ್ತು ಸಮಾನ ಹಂಚಿಕೆಯ ತತ್ವದ” ಮೇಲೆ ಕರ್ನಾಟಕ ರಾಜ್ಯಕ್ಕೆ ನ್ಯಾಯಸಮ್ಮತವಾದ ಪಾಲನ್ನು ಹಂಚಿಕೆ ಮಾಡಬೇಕು.