Home Blog Page 12

ಶಾಸಕ ಡಾ. ಚಂದ್ರು ಲಮಾಣಿ ಪರ ಲಕ್ಷ್ಮೇಶ್ವರದಲ್ಲಿ ಅಭಿಮಾನಿ ಬಳಗದಿಂದ ಬೃಹತ್ ಪ್ರತಿಭಟನೆ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಅವರನ್ನು ಕಾಂಗ್ರೆಸ್ ಪಕ್ಷದವರು ಲಂಚ ನೀಡಿದ ಷಡ್ಯಂತ್ರ-ಕುತಂತ್ರದಿಂದ ಲೋಕಾ ಬಲೆಗೆ ಸಿಕ್ಕಿಸಿ ಮೋಸ ಮಾಡಿದ್ದಾರೆ ಎಂದು ಬುಧವಾರ ಡಾ. ಚಂದ್ರು ಲಮಾಣಿ ಅಭಿಮಾನಿ ಬಳಗ ಹಾಗೂ ಬಂಜಾರ ಸಮಾಜದಿಂದ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತೀವ್ರ ಅಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಶ್ರೀಸೋಮೇಶ್ವರ ತೇರಿನ ಮನೆ ಆವರಣದಲ್ಲಿ ಲಕ್ಷ್ಮೇಶ್ವರ ಸೇರಿ ಶಿರಹಟ್ಟಿ, ಮುಂಡರಗಿ ಭಾಗದಿಂದ ಜಮಾಸಿದ ನೂರಾರು ಅಭಿಮಾನಿಗಳು, ಬಂಜಾರ ಸಮಾಜದವರು ಶಾಸಕ ಚಂದ್ರು ಲಮಾಣಿ ಅವರ ಬಂಧನಕ್ಕೆ ಹೆಣೆದ ಕುತಂತ್ರದ ವಿರುದ್ಧ ಸಿಡಿದೆದ್ದರು.

ಪ್ರತಿಭಟನಾ ರ‍್ಯಾಲಿಯುದ್ದಕ್ಕೂ ಶಾಸಕರೇ ನಾವು ನಿಮ್ಮೊಂದಿಗಿದ್ದೇವೆ ಯಾವುದೇ ಕಾರಣಕ್ಕೂ ಅಳುಕಬೇಡಿ, ಕುತಂತ್ರದಿಂದ ನಿಮ್ಮ ಏಳಿಗೆ ಸಹಿಸದವರು ಇಂತಹ ಹೇಯ ಕೃತ್ಯಕ್ಕೆ ಇಳಿಯುವ ಕಾರ್ಯ ಮಾಡಿದ್ದಾರೆ ಎಂದು ಘೋಷಣೆ ಕೂಗಿದರು. ನಮ್ಮ ಶಾಸಕ ನಮ್ಮ ಹೆಮ್ಮೆ, ಅನ್ನದಾತ ಶಾಸಕ, ಜನಪರ ಕಾಳಜಿ ಶಾಸಕ, ಪ್ರಾಮಾಣಿಕ ಸೇವಕ ಶಾಸಕ, ನಿಮ್ಮೊಂದಿಗೆ ನಾವಿದ್ದೇವೆ ಎಂಬಿತ್ಯಾದಿ ನೂರಾರು ಬಿತ್ತಿ ಪತ್ರಗಳನ್ನು ಹಿಡಿದ ಸಾವಿರಾರು ಜನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಭಟನಾ ಮೆರವಣಿಗೆಯು ಸೋಮೇಶ್ವರ ತೇರಿನ ಮನೆಯಿಂದ ಸಾಗಿ ಕಾಶೆಟ್ಟಿಯವರ ಓಣಿ, ಪೇಟೆ ರಸ್ತೆ, ಪುರಸಭೆ ಶಿಗ್ಲಿ ನಾಕಾ ಮೂಲಕ ಹಾಯ್ದು ಹೊಸ ಬಸ್‌ನಿಲ್ದಾಣದಲ್ಲಿ ಸುಮಾರು 1 ಗಂಟೆಗೂ ಅಧಿಕ ಕಾಲ ರಸ್ತೆಯಲ್ಲಿ ಕುಳಿತು ಅಕ್ರೋಶ ವ್ಯಕ್ತಪಡಿಸಿದರು. ನಂತರ ಸಭೆಯಲ್ಲಿ ಡಾ. ಚಂದ್ರು ಲಮಾಣಿ ಅಭಿಮಾನಿ ಬಳಗದ ಹಿರಿಯ ಸದಸ್ಯ ಸುನೀಲ್ ಮಹಾಂತಶೆಟ್ಟರ, ಶಂಕರ ಮರಾಠೆ, ಅಶೋಕ ಶಿರಹಟ್ಟಿ, ತಿಮ್ಮರಡ್ಡಿ ಮರಡ್ಡಿ, ಕುಮಾರಸ್ವಾಮಿ ಹಿರೇಮಠ, ನವೀನ ಹಿರೇಮಠ, ನಾಗರಾಜ ಲಕ್ಕುಂಡಿ, ಲಿಂಗರಾಜ ಪಾಟೀಲ, ಶಿವಣ್ಣ ಲಮಾಣಿ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಅವರ ಪತ್ನಿ ಮುಡಾ ಹಗರಣದಲ್ಲಿ 14 ಸೈಟ್ ಪಡೆದು ಪ್ರಕರಣ ದಾಖಲಾಗುತ್ತಿದ್ದಂತೆಯೇ 14 ಸೈಟ್ ವಾಪಸು ಕೊಟ್ಟರಲ್ಲ, ಆಗ ಅವರ ರಾಜೀನಾಮೆ ಕೇಳಿದಿರಾ? ಅಬಕಾರಿ ಹಗರಣದಲ್ಲಿ ಆರ್.ಬಿ. ತಿಮ್ಮಾಪೂರವರು ರಾಜೀನಾಮೆ ನೀಡಿದ್ದಾರಾ ಎಂದು ಪ್ರಶ್ನಿಸಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಡಾ. ಭೀಮಸಿಂಗ ರಾಠೋಡ, ಚವ್ಹಾಣ, ಆನಂದಗೌಡ ಪಾಟೀಲ, ಎಂ.ಎಸ್. ದೊಡ್ಡಗೌಡರ, ಶಿವಪ್ರಕಾಶ ಮಹಾಜನಶೆಟ್ಟರ, ಡಿ.ವೈ. ಹುನಗುಂದ, ಟೋಪಣ್ಣ, ಲಮಾಣಿ, ಥಾವರಪ್ಪ ಲಮಾಣಿ, ಕರಬಸಪ್ಪ ಹಂಚಿನಾಳ, ಶಿವಯೋಗಿ ಅಂಕಲಕೋಟಿ, ಫಕ್ಕಿರೇಶ ರಟ್ಟಿಹಳ್ಳಿ, ಪೂರ್ಣಾಜಿ ಖರಾಟೆ, ವಿಜಯ ಮೆಕ್ಕಿ, ರಮೇಶ್ ಧನದಮನಿ, ದೇವಪ್ಪ ಮತ್ತೂರ, ಬಸವರಾಜ ಗಾಣಗೇರ, ಈರಣ್ಣ ಪೂಜಾರ, ಜಾನು ಲಮಾಣಿ, ಸಂತೋಷ ಲಮಾಣಿ, ಗಿರೀಶ ಚೌರಡ್ಡಿ, ಮಲ್ಲೇಶಪ್ಪ ಲಮಾಣಿ, ಅಶೋಕ ಬಟಕುರ್ಕಿ, ನಿಂಗಪ್ಪ ಪ್ಯಾಟಿ, ಭೀಮಣ್ಣ ಯಂಗಾಡಿ, ಶಿವಾನಂದ ಮೆಕ್ಕಿ, ಕಲ್ಲಪ್ಪ ಹಡಪದ, ನಂದಾ ಪಲ್ಲೇದ, ಜ್ಯೋತಿ ಹಾನಗಲ್, ಅಶ್ವಿನಿ ಅಂಕಲಕೋಟಿ, ಪೂರ್ಣಿಮಾ ಪಾಟೀಲ್, ವಾಣಿ ಹತ್ತಿ, ಮಂಜುಳಾ ಗುಂಜಳ, ಮೋಹನ ಗುತ್ತೆಮ್ಮನವರ, ಶಿವಣಗೌಡರ ಕಂಟಿಗೌಡರ, ಶಂಕರ ಬಾವಿ, ಮಹೇಶ್ ಬಡ್ನಿ, ಫಕ್ಕೀರೇಶ ರಟ್ಟೆಹಳ್ಳಿ, ತಿಪ್ಪಣ್ಣ ಕೊಂಚಿಗೇರಿ, ಬಸವರಾಜ ಇಟಗಿ, ರಾಜು ಅಂದಲಗಿ ಸೇರಿದಂತೆ ಸಾವಿರಾರು ಅಭಿಮಾನಿಗಳು ಪಾಲ್ಗೊಂಡಿದ್ದರು.

ದಲಿತ ಮುಖಂಡನಾಗಿ ಈ ಭಾಗದಲ್ಲಿ ಒಳ್ಳೆಯ ಹೆಸರು ಮಾಡುತ್ತಿದ್ದ ಯುವಕ ಬೆಳೆಯುತ್ತಿರುವುದನ್ನು ಕಂಡು ಇಂತಹ ಹೇಯ ಕೃತ್ಯಕ್ಕೆ ಮುಂದಾಗಿದ್ದಾರೆ. ಬಂಜಾರ ಸಮಾಜವನ್ನು ತುಳಿಯುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದರು. ಷಡ್ಯಂತ್ರದ ಮೂಲಕ ದಲಿತ ಶಾಸಕರನ್ನು ಬಂಧಿಸಿ ಮಟ್ಟ ಹಾಕುವ ಹುನ್ನಾರವನ್ನು ಕಾರ್ಯಕರ್ತರು ಸಹಿಸುವುದಿಲ್ಲ, ಇಂತಹ ಗೊಡ್ಡು ಬೇದರಿಕೆಗಳಿಗೆ ಹೆದರುವುದಿಲ್ಲ ಎಂದು ಪ್ರತಿಭಟನಾಕಾರರು ಅಕ್ರೋಶ ವ್ಯಕ್ತಪಡಿಸಿದರು.

ವಿಬಿಜೀ ರಾಮ್ ಜೀ ಯೋಜನೆಯ ಜನಜಾಗೃತಿ

0

ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜನತಾ ಪಾರ್ಟಿ ಗದಗ ವಿಧಾನಸಭಾ ಕ್ಷೇತ್ರ ಗದಗ ಗ್ರಾಮೀಣ ಮಂಡಲದ ಹರ್ತಿ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆ ವಿಬಿಜೀ ರಾಮ್ ಜೀ ಯೋಜನೆಯ ಜನಜಾಗೃತಿ ಸಭೆ ಹಮ್ಮಿಕೊಳ್ಳಲಾಗಿತ್ತು.

ಸಭೆಯ ಅಧ್ಯಕ್ಷತೆಯನ್ನು ಗದಗ ಗ್ರಾಮೀಣ ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮೀಣ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಹಳ್ಳೂರಮಠ, ಸುಭಾಸ ಸುಂಕದ, ಮುಖಂಡರಾದ ಡಿ.ಬಿ. ಕರೀಗೌಡ್ರ, ಎಸ್.ಎಂ. ಬಳ್ಳೊಳ್ಳಿ, ಎಸ್.ಎಸ್. ಬಳ್ಳೊಳ್ಳಿ, ಬಸವರಾಜ ಚುರ್ಚಿಹಾಳ, ಬಸವಂತಪ್ಪ ಆರಟ್ಟಿ, ವಿ.ಸಿ. ಹುಲ್ಲೂರ, ವೀರಪ್ಪ ಹಡಪದ, ಬಿ.ಡಿ. ಖಾನಾಪೂರ, ಅಂದಾನಗೌಡ ಅಂದಾನಿಗೌಡ್ರ, ಡಿ.ಐ. ಅಣ್ಣಿಗೇರಿ, ಚಂದ್ರಗೌಡ ಮಲ್ಲನಗೌಡ್ರ, ಮಲ್ಲಪ್ಪ ಖಾನಾಪೂರ, ಪ್ರಭು ಶಲವಡಿ, ಮೋಹನ ಕೋರಿ, ರಾಜು ಕುಲಕರ್ಣಿ, ಹನುಮಂತ ನಿಂಬನಾಯ್ಕರ, ವೆಂಕಟೇಶ ಸೂರಣಗಿ, ರಾಜು ಗುಡಸಲಮನಿ, ಮಂಜುನಾಥಗೌಡ ಮರೀಯಪ್ಪಗೌಡ್ರ, ಪಾಂಡುರೆಡ್ಡಿ ಹುಲಿ ಮುಂತಾದವರಿದ್ದರು.

ಗ್ರಾ.ಪಂ ಉಪಾಧ್ಯಕ್ಷರ ಅವಿರೋಧ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ರೋಣ: ತಾಲೂಕಿನ ಹೊಸಳ್ಳಿ ಗ್ರಾ.ಪಂ ಉಪಾಧ್ಯಕ್ಷ ಸ್ಥಾನಕ್ಕೆ ಸದಸ್ಯ ಪ್ರವೀಣ ಬಸೇವಡೆಯರ ಅವಿರೋಧವಾಗಿ ಆಯ್ಕೆಯಾದರು. ಈ ಮೊದಲು ಉಪಾಧ್ಯಕ್ಷರಾಗಿದ್ದ ಶಿವಯೋಗಿ ಥಡಿ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ಬುಧವಾರ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು.

ಒಟ್ಟು 10 ಸದಸ್ಯರನ್ನು ಹೊಂದಿರುವ ಹೊಸಳ್ಳಿ ಗ್ರಾ.ಪಂನಲ್ಲಿ ಪ್ರವೀಣ ಬಸೇವಡೆಯರ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಇವರ ವಿರುದ್ಧವಾಗಿ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಕಂದಕೂರ, ಪ್ರವೀಣ ಬಸೇವಡೆಯರ ಅವಿರೋಧವಾಗಿ ಆಯ್ಕೆಯಾದರೆ ಎಂದು ಘೋಷಿಸಿದರು.

ಈ ಸಂದರ್ಭದಲ್ಲಿ ಹಿರಿಯ ಸದಸ್ಯ ಬಿ.ಎಸ್. ರೆಡ್ಡೆರ ಮಾತನಾಡಿ, ಗ್ರಾ.ಪಂ ಉಪಾಧ್ಯಕ್ಷರಾಗಿ ಆಯ್ಕೆಯಾದ ಪ್ರವೀಣ ಬಸೇವಡೆಯರ ಅಭಿವೃದ್ಧಿಪರ ಚಿಂತಕರಾಗಿದ್ದು, ಅವರು ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವ ವಿಶ್ವಾಸವಿದೆ. ಅವರಿಗೆ ಎಲ್ಲ ಸದಸ್ಯರು** ಸಹಕಾರ ನೀಡಬೇಕು ಎಂದರು.

ಗ್ರಾ.ಪಂ ಅಧ್ಯಕ್ಷೆ ಬಸಮ್ಮ ಸ್ಥಾವರಮಠ, ರೇಖಾ ಮಾದರ, ಶಾರದಾ ಅಂಗಡಿ, ಬಸಪ್ಪ ಮಾರನಬಸರಿ, ಲಲಿತಾ ಕುರಿ, ಶೋಭಾ ಗೊಟಗೊಂಡ, ಅನ್ನಪೂರ್ಣ ಈರಗಾರ ಮುಂತಾದವರು ಉಪಸ್ಥಿತರಿದ್ದರು.

ವರವಿ ವಿರೂಪಾಕ್ಷ ಸ್ವಾಮಿಗಳ ಪುಣ್ಯಾರಾಧನೆ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನ ವರವಿ ಕ್ಷೇತ್ರದ ಬ್ರಹ್ಮಲೀನ ಶ್ರೀ ವಿರೂಪಾಕ್ಷಯ್ಯ ಸ್ವಾಮಿಗಳ 110ನೇ ವಾರ್ಷಿಕ ಪುಣ್ಯಾರಾಧನೆಯ ಸಪ್ತಾಹ ಕಾರ್ಯಕ್ರಮವು ಫೆ. 26ರಿಂದ ಮಾ. 5ರವರೆಗೆ ಶ್ರೀ ಮಠದಲ್ಲಿ ಜರುಗಲಿದೆ.

ಫೆ. 26ರ ಬ್ರಾಹ್ಮೀ ಮುಹೂರ್ತದಲ್ಲಿ ಶಿವನಾಮಸ್ಮರಣೆಯೊಂದಿಗೆ ಸಪ್ತಾಹ ಪ್ರಾರಂಭವಾಗಿ ಪ್ರತಿ ದಿವಸ ಬೆಳಿಗ್ಗೆ 8ರಿಂದ 10.30ರವರೆಗೆ ಸಂಗೀತ, ಬ್ರಹ್ಮ ಜಿಜ್ಞಾಸೆ, ಶಾಸ್ತ್ರ ಶ್ರವಣ ನಡೆಯಲಿದೆ.

ಮಾ. 1ರಿಂದ ಮಾ. 3ರವರೆಗೆ ಪ್ರತಿದಿನ ಸಂಜೆ 7.30 ಗಂಟೆಗೆ ಕಾರ್ಯಕ್ರಮಗಳು ನಡೆಯಲಿದ್ದು, ಮಾ. 4ರಂದು ಸಪ್ತಾಹ ಸಮಾರೋಪಗೊಳ್ಳಲಿದೆ.

ಸಮಾರೋಪ ಕಾರ್ಯಕ್ರಮದ ಸಾನ್ನಿಧ್ಯವನ್ನು ಅಣ್ಣಿಗೇರಿ ದಾಸೋಹಮಠದ ಶಿವಕುಮಾರ ಸ್ವಾಮೀಜಿ, ಬನ್ನಿಕೊಪ್ಪದ ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಅಧ್ಯಕ್ಷತೆಯನ್ನು ವರವಿಯ ಮೌನೇಶ್ವರ ಸ್ವಾಮೀಜಿ, ಉದ್ಘಾಟನೆಯನ್ನು ಸಚಿವ ಎಚ್.ಕೆ. ಪಾಟೀಲ ನೆರವೇರಿಸಲಿದ್ದಾರೆ. ಶಾಸಕ ಡಾ. ಚಂದ್ರು ಲಮಾಣಿ, ಸಂಸದ ಬಸವರಾಜ ಬೊಮ್ಮಾಯಿ, ಕೆಪಿಸಿಸಿ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಜಿ.ಪಂ ಮಾಜಿ ಅಧ್ಯಕ್ಷ ವಿ.ವಿ. ಕಪ್ಪತ್ತನವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ್ ಮಾಗಡಿ ಮುಂತಾದವರು ಉಪಸ್ಥಿತರಿರುವರು ಎಂದು ಶ್ರೀಮಠದ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಕೇರಳಂ ನಂತರ ದೆಹಲಿಗೆ ‘ಇಂದ್ರಪ್ರಸ್ಥ’ ಮರುನಾಮಕರಣದ ಶಿಫಾರಸು!?

0

ದೆಹಲಿ: ಕೇರಳವನ್ನು ಕೇರಳಂ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಇದೀಗ ದೆಹಲಿಯನ್ನು ಇಂದ್ರಪ್ರಸ್ಥ ಎಂದು ಮರುನಾಮಕರಣ ಮಾಡುವ ಪ್ರಶ್ನೆ ಚರ್ಚೆಗೆ ಬಂದಿದೆ.

ಕೇಂದ್ರ ಸಚಿವ ಅಮಿತ್ ಶಾಗೆ, ದೆಹಲಿಯ ಚಾಂದಿನಿಚೌಕ್‌ನ ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್ ಅವರಿಂದ ಈ ಕುರಿತಾಗಿ ಪತ್ರ ಬರೆಯಲಾಗಿದೆ. ದೆಹಲಿಯ ಪ್ರಾಚೀನ ನಾಗರಿಕತೆಯ ಬೇರುಗಳನ್ನು ಉಲ್ಲೇಖಿಸುತ್ತಾ, ಇಂದ್ರಪ್ರಸ್ಥ ನಗರವನ್ನು ಹಳೆಯ ಐತಿಹಾಸಿಕ ಹೆಸರುಗಳಿಂದ ಸಂಪರ್ಕಿಸುವುದು ಮುಖ್ಯ ಎಂದು ಅವರಿಗೆ ತೋರಿಸಲಾಗಿದೆ. ಪತ್ರದಲ್ಲಿ ಹಳೆ ದೆಹಲಿ ರೈಲು ನಿಲ್ದಾಣವನ್ನು ಇಂದ್ರಪ್ರಸ್ಥ ಜಂಕ್ಷನ್ ಮತ್ತು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಇಂದ್ರಪ್ರಸ್ಥ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡುವ ಶಿಫಾರಸು ಮಾಡಲಾಗಿದೆ.

ಮಹಾಭಾರತದ ಪುರಾಣ ಕಥೆಯ ಪ್ರಕಾರ, ಪಾಂಡವರು ಹಸ್ತಿನಾಪುರದಿಂದ ಬೇರ್ಪಟ್ಟ ನಂತರ ಇಂದ್ರಪ್ರಸ್ಥದಲ್ಲಿ ರಾಜಧಾನಿ ಸ್ಥಾಪಿಸಿದ್ದರು. ದ್ರೌಪದಿಯ ಸ್ವಯಂವರದ ನಂತರ ಧೃತರಾಷ್ಟ್ರನು ಪಾಂಡವರಿಗೆ ಖಾಂಡವಪ್ರಸ್ಥದ ಪಾಳುಭೂಮಿಯನ್ನು ನೀಡಿದ್ದು, ಶ್ರೀಕೃಷ್ಣನ ಮಾರ್ಗದರ್ಶನದಲ್ಲಿ ಅದನ್ನು ಮಾಯಾನಗರಿಯಾಗಿ ನಿರ್ಮಿಸಲಾಯಿತು. ಇಂದಿನ ಹಳೆಯ ದೆಹಲಿಯ ಹಳೆಭಾಗವು ಅದೇ ಐತಿಹಾಸಿಕ ಇಂದ್ರಪ್ರಸ್ಥ ನಗರಕ್ಕೆ ಸಂಬಂಧಿಸಿರುವುದಾಗಿ ತಿಳಿದುಬರುತ್ತದೆ. ಯಮುನಾ ನದಿ ತೀರದಲ್ಲಿ ದೇವಲೋಕದ ಶಿಲ್ಪಿಗಳು ಮತ್ತು ಮಯಾಸುರನಿಂದ ನಿರ್ಮಿತವಾದ ವೈಭವೋಪೇತ ಪ್ರಾಚೀನ ನಗರ ಎಂಬ ಭಾವನೆ ಈ ಸ್ಥಳಕ್ಕೆ ಇದ್ದು, ಮರುನಾಮಕರಣದ ಕುರಿತ ಚರ್ಚೆಯನ್ನು ಪ್ರಚೋದಿಸಿದೆ.

ಚಿತ್ರದುರ್ಗದಲ್ಲಿ ಸ್ಕ್ರೀನ್ ಗಾರ್ಡ್ ವಿಚಾರಕ್ಕೆ ಚಾಕು ಇರಿತ ಪ್ರಕರಣ: ಸಿಸಿ ಟಿವಿ ದೃಶ್ಯ ವೈರಲ್!

0

ಚಿತ್ರದುರ್ಗ: ಅನ್ಯ ಕೋಮಿನ ಯುವಕನಿಂದ ನಡೆದ ಚಾಕು ಇರಿತ ಪ್ರಕರಣದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ನಗರದ ಸಂತೇ ಮೈದಾನದ ಸಮೀಪದ ಮೊಬೈಲ್ ಅಂಗಡಿಯಲ್ಲಿ ಮೊಬೈಲ್‌ಗೆ ಸ್ಕ್ರೀನ್ ಗಾರ್ಡ್ ಅಳವಡಿಸುವ ವಿಚಾರಕ್ಕೆ ಗಲಾಟೆ ನಡೆದಿದ್ದು, ಅದು ತೀವ್ರಗೊಂಡು ಚಾಕು ಇರಿತಕ್ಕೆ ತಿರುಗಿದೆ.

ಘಟನೆಯಲ್ಲಿ ಅಂಗಡಿ ಮಾಲೀಕ ವಿಕ್ರಮ್ ಚೌದ್ರಿ ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುವಿನ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಸ್ಕ್ರೀನ್ ಗಾರ್ಡ್ ವಿಚಾರದಲ್ಲಿ ಉಂಟಾದ ವಾಗ್ವಾದದ ಹಿನ್ನೆಲೆಯಲ್ಲಿ ಅನ್ಯ ಕೋಮಿನ ಯುವಕ ಅಂಗಡಿ ಮಾಲೀಕನಿಗೆ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ. ಚಾಕು ಇರಿತದ ದೃಶ್ಯಗಳು ಅಂಗಡಿಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ.

ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.

ರಶ್ಮಿಕಾ–ವಿಜಯ್ ಮದುವೆಗೆ ಕ್ಷಣಗಣನೆ; ಶೃಂಗಾರಗೊಂಡ ವಿರಾಜಪೇಟೆಯ ಮನೆ

0

ಮಡಿಕೇರಿ: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಅವರ ಮದುವೆಗೆ ಕ್ಷಣಗಣನೆ ಆರಂಭಗೊಂಡಿದ್ದು, ವಿರಾಜಪೇಟೆ ಸಮೀಪದಲ್ಲಿರುವ ರಶ್ಮಿಕಾ ಅವರ ಮೂಲ ಮನೆ ಸಂಭ್ರಮದ ವಾತಾವರಣದಲ್ಲಿ ಶೃಂಗಾರಗೊಂಡಿದೆ.

ರಶ್ಮಿಕಾ ಮಂದಣ್ಣ ಅವರು ವಿರಾಜಪೇಟೆ ಸಮೀಪದ ಕದನೂರು ಗ್ರಾಮದವರಾಗಿದ್ದು, ಅವರ ಪೋಷಕರು ಇಂದಿಗೂ ಅಲ್ಲಿಯೇ ವಾಸವಿದ್ದಾರೆ. ಮದುವೆ ಹಿನ್ನೆಲೆ ಮನೆಯ ಮುಂದೆ ಚಪ್ಪರ ಹಾಕಲಾಗಿದ್ದು, ಮನೆಯ ಬಾಗಿಲು ಹಾಗೂ ಮುಂಭಾಗವನ್ನು ಹೂವಿನಿಂದ ಅಲಂಕರಿಸಲಾಗಿದೆ.

ಹತ್ತು ದಿನಗಳ ಹಿಂದೆಯೇ ರಶ್ಮಿಕಾ ಅವರ ಪೋಷಕರು ಹಾಗೂ ಬಂಧುಮಿತ್ರರು ವಿವಾಹ ಸಮಾರಂಭದಲ್ಲಿ ಭಾಗವಹಿಸಲು ರಾಜಸ್ಥಾನದ ಉದಯಪುರಕ್ಕೆ ತೆರಳಿದ್ದಾರೆ. ಪ್ರಸ್ತುತ ಮನೆಯಲ್ಲಿ ಯಾರೂ ಇಲ್ಲದಿದ್ದರೂ, ಮನೆ ನೋಡಿಕೊಳ್ಳುತ್ತಿರುವ ಸರೋಜಮ್ಮ ಅವರು ಸಂಪ್ರದಾಯದಂತೆ ಚಪ್ಪರ ಶಾಸ್ತ್ರವನ್ನು ನೆರವೇರಿಸಿದ್ದಾರೆ.

ಸರೋಜಮ್ಮ ಅವರು ಮಾತನಾಡುತ್ತಾ, ತಾವು ಎತ್ತಿ ಬೆಳೆಸಿದ ಮಗಳು ಇನ್ನೊಬ್ಬರ ಮನೆಗೆ ದೀಪವಾಗಲು ಹೊರಡುತ್ತಿರುವುದು ಸಂತಸ ಹಾಗೂ ಹೆಮ್ಮೆಯ ವಿಚಾರ ಎಂದು ತಿಳಿಸಿದರು. ಮಗಳ ಮದುವೆ ನಡೆಯುತ್ತಿರುವುದು ಅಪಾರ ಖುಷಿ ತಂದಿದೆ ಎಂದರು. ಇತ್ತೀಚೆಗೆ ರಶ್ಮಿಕಾ ಊರಿಗೆ ಬಂದ ಸಂದರ್ಭದಲ್ಲಿ ಮೈಸೂರಿನವರೆಗೆ ಹೋಗಿ ಬಿಟ್ಟು ಬಂದಿದ್ದಾಗಿ ಹೇಳಿದರು.

ಇನ್ನೂ ಕೊಡಗಿನ ಜನರು ಹಾಗೂ ಬಂಧುಮಿತ್ರರಿಗಾಗಿ ಏಪ್ರಿಲ್ ತಿಂಗಳಲ್ಲಿ ವಿಶೇಷ ಔತಣಕೂಟ ಆಯೋಜಿಸುವ ಸಿದ್ಧತೆ ನಡೆದಿದೆ. ಮಗಳು ಹಾಗೂ ಅಳಿಯನನ್ನು ನೋಡಲು ತಾವು ಕೂಡ ಕಾತುರದಿಂದ ಕಾಯುತ್ತಿದ್ದೇನೆ ಎಂದು ಸರೋಜಮ್ಮ ತಿಳಿಸಿದ್ದಾರೆ.

ಚೆನ್ನೈ–ಸಿಂಗಾಪುರ ವಿಮಾನದಲ್ಲಿ 5 ಗಂಟೆಗಳ ಕಾಲ ಸಿಲುಕಿದ 200ಕ್ಕೂ ಹೆಚ್ಚು ಪ್ರಯಾಣಿಕರು

0

ಚೆನ್ನೈ: ಚೆನ್ನೈಯಿಂದ ಸಿಂಗಾಪುರಗೆ ತೆರಳಬೇಕಿದ್ದ ಇಂಡಿಗೋ ವಿಮಾನದಲ್ಲಿ 200ಕ್ಕೂ ಹೆಚ್ಚು ಪ್ರಯಾಣಿಕರು ಐದು ಗಂಟೆಗಳ ಕಾಲ ವಿಮಾನದೊಳಗೆ ಕಾಯಬೇಕಾದ ಘಟನೆ ನಡೆದಿದೆ.

ವಿಮಾನಕ್ಕೆ ಹತ್ತಿದ ಬಳಿಕವೂ ಹಾರಾಟ ಪ್ರಾರಂಭವಾಗದೆ ಸುಮಾರು ಐದು ಗಂಟೆಗಳ ಕಾಲ ಪ್ರಯಾಣಿಕರು ಕುಳಿತೇ ಕಾಯುವ ಪರಿಸ್ಥಿತಿ ನಿರ್ಮಾಣವಾಯಿತು. ಈ ವಿಳಂಬದಿಂದ ಬೇಸತ್ತ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು. ಕೆಲವರು ವಿಮಾನ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಘಟನೆಯ ಬಳಿಕ ಇಂಡಿಗೋ ಸಂಸ್ಥೆ ಸ್ಪಷ್ಟನೆ ನೀಡಿದೆ. ವಿಮಾನದ ಒಳಭಾಗದ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿರುವುದನ್ನು ಪೈಲಟ್ ಗಮನಿಸಿದ ಕಾರಣ ತಾಂತ್ರಿಕ ತಂಡಕ್ಕೆ ಮಾಹಿತಿ ನೀಡಲಾಗಿದೆ. ಸಮಸ್ಯೆಯನ್ನು ಪರಿಶೀಲಿಸುವ ಪ್ರಕ್ರಿಯೆ ನಡೆಯುತ್ತಿದ್ದುದರಿಂದ ಹಾರಾಟ ವಿಳಂಬವಾಗಿದೆ ಎಂದು ತಿಳಿಸಿದೆ.

ಇದಲ್ಲದೆ, ಈ ಮಧ್ಯೆ ಕಾಕ್‌ಪಿಟ್ ಸಿಬ್ಬಂದಿ ತಮ್ಮ ಕರ್ತವ್ಯ ಸಮಯ ಮಿತಿಯನ್ನು ಮೀರಿದ ಕಾರಣ ಬದಲಿ ಸಿಬ್ಬಂದಿಯನ್ನು ನಿಯೋಜಿಸಬೇಕಾಯಿತು. ಇದರ ಪರಿಣಾಮವಾಗಿ ವಿಮಾನ ಹಾರಾಟ ಮತ್ತಷ್ಟು ತಡವಾಯಿತು ಎಂದು ಸಂಸ್ಥೆ ವಿವರಿಸಿದೆ.

ಒಟ್ಟಿನಲ್ಲಿ ತಾಂತ್ರಿಕ ತೊಂದರೆ ಹಾಗೂ ಸಿಬ್ಬಂದಿ ಬದಲಾವಣೆ ಕಾರಣಗಳಿಂದ ಪ್ರಯಾಣಿಕರು ನಿರೀಕ್ಷೆಗಿಂತ ಹೆಚ್ಚು ಸಮಯ ವಿಮಾನದೊಳಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ಸಹಕಾರ ಸಂಘಗಳ ಮೂಲಕ ಪೂರಕ ಯೋಜನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗ್ರಾಮೀಣ ಜನರಿಗೆ ನೆರವಾಗುವ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯೋಜನೆಗಳನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖಾಂತರ ರೂಪಿಸಲಾಗಿದೆ. ಈ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರಿಗೆ ಸಾಲ ಸೌಲಭ್ಯ ನೀಡುವುದು, ಹೆಚ್ಚು ಠೇವಣಿಗಳನ್ನು ಸಂಗ್ರಹಿಸುವ ಮೂಲಕ ರೈತರಿಗೆ ರಸಗೊಬ್ಬರಗಳನ್ನು, ಕೃಷಿ ಉಪಕರಣಗಳನ್ನು ವಿತರಿಸುವುದು, ಹೀಗೆ ಹತ್ತು ಹಲವಾರು ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ನಮ್ಮ ಸಹಕಾರ ಸಂಘಗಳು ಮುನ್ನಡೆಯುತ್ತಿವೆ ಎಂದು ಕೆ.ಸಿ.ಸಿ ಬ್ಯಾಂಕ್ ಧಾರವಾಡ ಹಾಗೂ ಗದಗ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಎಂ.ಎಫ್. ಕಲಗುಡಿ ಹೇಳಿದರು.

ಸಹಕಾರ ಇಲಾಖೆ ಗದಗ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಗದಗ ಜಿಲ್ಲಾ ಸಹಕಾರ ಯೂನಿಯನ್, ಕೆ.ಸಿ.ಸಿ ಬ್ಯಾಂಕ್ ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗದಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಸಿ.ಎಂ. ಪಾಟೀಲ ಮಾತನಾಡುತ್ತಾ, ಗ್ರಾಮೀಣ ಜನರಿಗೆ ಅವರ ಮನೆ ಬಾಗಿಲಿಗೆ ಕಡಿಮೆ ವೆಚ್ಚದ ಸೇವೆಗಳು, ಹೆಚ್ಚಿನ ವ್ಯಾಪ್ತಿ ಮತ್ತು ಸಾಲ ವಿತರಣೆಯ ಸುಧಾರಣೆಗಾಗಿ ಸಹಕಾರಿ ಸಂಘ ಇತರ ಸರ್ಕಾರಿ ಮತ್ತು ಹಣಕಾಸು ಸಂಸ್ಥೆಗಳಲ್ಲಿ ಕಾರ್ಯವಿಧಾನ, ಹೊಸ ವ್ಯವಹಾರಗಳು ಮತ್ತು ಆದಾಯ ಉತ್ಪಾದನೆಯ ಅವಕಾಶಗಳನ್ನು ಕಲ್ಪಿಸುವುದು ಮತ್ತು ಬದಲಾವಣೆಯನ್ನು ತರುವುದು ಈ ತರಬೇತಿಯ ಉದ್ದೇಶವಾಗಿದೆ ಎಂದು ಹೇಳಿದರು.

ಕೃಷಿ ಅಧಿಕಾರಿಗಳಾದ ಚೈತ್ರಾ ಬಿ.ಎಂ, ಸಂಜೀವಕುಮಾರ ನೆಗಳೂರು ಮಾತನಾಡಿದರು. ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕಿ ಎಸ್.ಎಸ್. ಕಬಾಡೆ, ಸಹಾಯಕ ನಿಬಂಧಕಿ ಪುಷ್ಪಾ ಕೆ. ಕಡಿವಾಳ, ಶಿರಹಟ್ಟಿ ಸಹಕಾರ ಅಭಿವೃದ್ಧಿ ಅಧಿಕಾರಿ ಕೆ.ಸಿ. ಕೂಸನೂರಮಠ, ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿಯ ಮಾರಾಟಾಧಿಕಾರಿ ಬಿ.ಆರ್. ನಿಡಗುಂದಿ, ಪ್ರಶಾಂತ ಮುಧೋಳ, ಕೆ.ಸಿ.ಸಿ. ಬ್ಯಾಂಕ್‌ನ ಎಸ್.ಎಂ. ಚಿಕ್ಕಮಠ, ಡಿ.ಬಿ. ದೊಕ್ಕಣ್ಣವರ, ಕೆ.ಸಿ.ಸಿ ಬ್ಯಾಂಕ್ ನಿರೀಕ್ಷಕ ಎ.ಎ. ಶಾಬಾದಿ, ಸುನಿಲಕುಮಾರ ಚಳಗೇರಿ, ಸುರೇಶಕುಮಾರ ಎಸ್ ಉಪಸ್ಥಿತರಿದ್ದರು.

ಕಾರ್ಯಾಗಾರದಲ್ಲಿ ಮೇಘನಾ ನಾಡಗೇರ, ಬಸವರಾಜ ಎಂ. ಮುಚ್ಚಕಣ್ಣವರ, ಪ್ರಮೋದ ಕುಸುಬಿ, ಪ್ರಕಾಶ ಬೇಲಿ ಉಪನ್ಯಾಸ ನೀಡಿದರು. ಎಸ್.ವ್ಹಿ. ಗರ್ಜಪ್ಪನವರ ಪ್ರಾರ್ಥಿಸಿದರು. ಗದಗ ಜಿಲ್ಲಾ ಸಹಕಾರ ಯೂನಿಯನ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಎಸ್. ಕರಿಯಪ್ಪನವರ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ರಶೀದಾಬಾನು ಸಿ. ಯಲಿಗಾರ ವಂದಿಸಿದರು.

ವಿದ್ಯುತ್ ಬಿಲ್ ಕಟ್ಟದ ಬ್ರಿಮ್ಸ್: ಜೆಸ್ಕಾಂ ಇಬ್ಬಗೆ ನೀತಿ ವಿರುದ್ಧ ಜನರ ಆಕ್ರೋಶ!

0

ಬೀದರ್: ಸಾಮಾನ್ಯ ಜನರು ವಿದ್ಯುತ್ ಬಿಲ್ ಪಾವತಿಯಲ್ಲಿ ಸ್ವಲ್ಪ ತಡವಾದರೂ ಕೂಡ ತಕ್ಷಣ ಸಂಪರ್ಕ ಕಡಿತಗೊಳಿಸುವ ವಿದ್ಯುತ್ ಇಲಾಖೆ, ಬೀದರ್‌ನ ಪ್ರತಿಷ್ಠಿತ ಬ್ರಿಮ್ಸ್ ಆಸ್ಪತ್ರೆ ವಿಚಾರದಲ್ಲಿ ಮಾತ್ರ ಮೃದು ಧೋರಣೆ ತಾಳುತ್ತಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಬೀದರ್‌ನ ಬ್ರಿಮ್ಸ್ ಆಸ್ಪತ್ರೆ ಕಳೆದ ಸುಮಾರು ಹತ್ತು ವರ್ಷಗಳಿಂದ ವಿದ್ಯುತ್ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಮೊತ್ತ ಕೇಳಿದರೆ ಅಚ್ಚರಿಯಾಗುತ್ತದೆ. ಒಟ್ಟು ಒಂದು ಕೋಟಿ ಎಪ್ಪತ್ತು ಲಕ್ಷ ಎಂಬತ್ತ ಸಾವಿರ ರೂಪಾಯಿ ವಿದ್ಯುತ್ ಬಿಲ್ ಬಾಕಿಯಾಗಿದೆ. ಈ ಮೊತ್ತ ಪಾವತಿಸುವಂತೆ ಜೆಸ್ಕಾಂ ವತಿಯಿಂದ ಹಲವು ಬಾರಿ ನೋಟಿಸ್ ನೀಡಿದರೂ ಕೂಡ ಆಸ್ಪತ್ರೆ ಆಡಳಿತ ಮಂಡಳಿ ಇದುವರೆಗೆ ಹಣ ಪಾವತಿಸಿಲ್ಲ.

ಜನಸಾಮಾನ್ಯರು ಒಂದು ತಿಂಗಳು ವಿದ್ಯುತ್ ಬಿಲ್ ಕಟ್ಟದೇ ಹೋದರೆ ತಕ್ಷಣ ಅವರ ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಆದರೆ ಸರ್ಕಾರಿ ಆಸ್ಪತ್ರೆ ಎಂಬ ಕಾರಣಕ್ಕೆ ಹತ್ತು ವರ್ಷಗಳಿಂದ ಕೋಟ್ಯಂತರ ರೂಪಾಯಿ ಬಾಕಿ ಇದ್ದರೂ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದು ಜೆಸ್ಕಾಂ ಇಲಾಖೆಯ ತಾರತಮ್ಯ ನೀತಿಯನ್ನು ಬಯಲಿಗೆಳೆದಿದೆ. ಇದರಿಂದ ಗಡಿಭಾಗದ ಬೀದರ್ ಜಿಲ್ಲೆಯ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಿವಾಸಿ ಅಂಬ್ರೇಶ ಕೆಂಚಾ ಸೇರಿದಂತೆ ಹಲವು ಸಾರ್ವಜನಿಕರು, ಬಾಕಿ ಉಳಿದಿರುವ ಹಣವನ್ನು ಕೂಡಲೇ ವಸೂಲಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ಸೇರಿಸಬೇಕು ಎಂದು ಜೆಸ್ಕಾಂ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ. ಲೋಡ್ ಶೆಡ್ಡಿಂಗ್‌ನಿಂದ ಜನತೆ ಹಾಗೂ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿರುವ ಈ ಸಮಯದಲ್ಲಿ, ಬಾಕಿ ಮೊತ್ತ ವಸೂಲಾದರೆ ವಿದ್ಯುತ್ ಖರೀದಿ ಮತ್ತು ಸಮರ್ಪಕ ಪೂರೈಕೆಗೆ ಸಹಕಾರಿಯಾಗಲಿದೆ ಎಂಬುದು ಜನರ ಅಭಿಪ್ರಾಯವಾಗಿದೆ.

ಕೋಟ್ಯಂತರ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿದಿರುವ ಕುರಿತು ಜೆಸ್ಕಾಂ ಸರಣಿ ನೋಟಿಸ್ ನೀಡಿದರೂ ಹಣ ಪಾವತಿಯಾಗದೇ ಇರುವುದು ಇಲಾಖೆಯನ್ನೇ ಹೈರಾಣಾಗಿಸಿದೆ. ಆದರೆ ಸರ್ಕಾರಿ ಆಸ್ಪತ್ರೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಕನಿಷ್ಠ ಅರ್ಧ ಮೊತ್ತವನ್ನಾದರೂ ತಕ್ಷಣ ಪಾವತಿಸಿದರೆ ವಿದ್ಯುತ್ ವ್ಯವಸ್ಥೆ ಸುಧಾರಣೆಗೆ ಸಹಾಯವಾಗಲಿದೆ ಎಂದು ತಿಳಿದುಬಂದಿದೆ. ಆದರೆ ಈ ಕುರಿತು ಜೆಸ್ಕಾಂ ಅಧಿಕಾರಿಗಳು ಮಾಧ್ಯಮಗಳೊಂದಿಗೆ ಮಾತನಾಡಲು ಮುಂದಾಗಿಲ್ಲ. ಒಟ್ಟಿನಲ್ಲಿ ಬ್ರಿಮ್ಸ್ ಆಸ್ಪತ್ರೆಯಿಂದ ಬರಬೇಕಾದ ಕೋಟ್ಯಂತರ ರೂಪಾಯಿ ಹಣ ಜೆಸ್ಕಾಂಗೆ ಪಾವತಿಯಾದರೆ ಜನತೆಗೂ, ಇಲಾಖೆಗೂ ಲಾಭವಾಗಲಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

error: Content is protected !!