Home Blog Page 13

35 ವರ್ಷಗಳ ಸೇವೆಯ ಸಾರ್ಥಕತೆ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಶಿಕ್ಷಕ ವೃತ್ತಿಯನ್ನು ಕೇವಲ ಉದ್ಯೋಗವಲ್ಲ, ವಿದ್ಯಾರ್ಥಿಗಳ ಬದುಕು ರೂಪಿಸುವ ತಪಸ್ಸೆಂದು ಪರಿಗಣಿಸಿ 35 ವರ್ಷಗಳ ಕಾಲ ಸಾವಿರಾರು ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದ ಮೂಲಕ ಭವಿಷ್ಯದ ದಾರಿ ತೋರಿದ ಜಗದ್ಗುರು ತೋಂಟದಾರ್ಯ ಐಟಿಐ ಕಾಲೇಜಿನ ಪ್ರಾಚಾರ್ಯ ಎಸ್.ಎಂ. ಶಿವರಾಚಯ್ಯ ಅವರು ಮೇ 31ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಭುಜಂಗನಗರದಲ್ಲಿ ಸಿದ್ದರಾಮಯ್ಯ-ನಾಗಮ್ಮ ದಂಪತಿಯ ಪುತ್ರರಾಗಿ ಜನಿಸಿದ ಶಿವರಾಚಯ್ಯ ಅವರು ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಛತ್ರಪತಿ ಶಿವಾಜಿ ವಿದ್ಯಾಮಂದಿರದಲ್ಲಿ ಹಾಗೂ ಡಿಪ್ಲೊಮಾ ಶಿಕ್ಷಣವನ್ನು ಬಳ್ಳಾರಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪೂರ್ಣಗೊಳಿಸಿದರು.

1991ರ ಸೆಪ್ಟೆಂಬರ್ 11ರಂದು ಮಾದರ ಚೆನ್ನಯ್ಯ ಐಟಿಐ ಕಾಲೇಜಿನಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಹಿರಿಯ ತರಬೇತುದಾರರಾಗಿ ಸೇವೆ ಸಲ್ಲಿಸಿದರು. ಬಳಿಕ 1997ರ ಆಗಸ್ಟ್ 1ರಂದು ಡಂಬಳದ ಪ್ರತಿಷ್ಠಿತ ಜಗದ್ಗುರು ತೋಂಟದಾರ್ಯ ಐಟಿಐ ಕಾಲೇಜಿನ ಪ್ರಾಚಾರ್ಯರಾಗಿ ಅಧಿಕಾರ ಸ್ವೀಕರಿಸಿ ಸಂಸ್ಥೆಯ ಬೆಳವಣಿಗೆಗೆ ಹೊಸ ಆಯಾಮ ನೀಡಿದರು.

ಅವರ ಆಡಳಿತಾವಧಿಯಲ್ಲಿ ಬೆಂಗಳೂರಿನ ಬಿಡದಿಯ ಪ್ರಸಿದ್ಧ ಟೋಯೊಟಾ ಮೋಟಾರು ಕಾರ್ಪೊರೇಷನ್ ಕಂಪನಿಯೊಂದಿಗೆ ತರಬೇತಿ ಮತ್ತು ಅಪ್ರೆಂಟಿಸ್‌ಶಿಪ್ ಸಂಬಂಧಿತ ಒಡಂಬಡಿಕೆ ಮಾಡಿಕೊಳ್ಳುವ ಅವಕಾಶ ಸಂಸ್ಥೆಗೆ ದೊರೆಯಿತು. ರಾಜ್ಯದ ಕೇವಲ ಐದು ಖಾಸಗಿ ಐಟಿಐ ಸಂಸ್ಥೆಗಳಲ್ಲಿ ಡಂಬಳ ಐಟಿಐ ಸ್ಥಾನ ಪಡೆದಿದ್ದು, ನೂರಾರು ವಿದ್ಯಾರ್ಥಿಗಳಿಗೆ ಕೈಗಾರಿಕಾ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳ ಬಾಗಿಲು ತೆರೆದಿದೆ.

ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ದೃಷ್ಟಿಯಿಂದ ವಿವಿಧ ಕಂಪನಿಗಳನ್ನು ಕಾಲೇಜಿಗೆ ಆಹ್ವಾನಿಸಿ ಕ್ಯಾಂಪಸ್ ನೇಮಕಾತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕುವಂತೆ ಮಾಡಿದರು. ಅವರ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ದೇಶ-ವಿದೇಶಗಳ ಪ್ರತಿಷ್ಠಿತ ಕಂಪನಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಜೆ.ಟಿ.ಮಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ ಮಾತನಾಡಿ, ಸಂಸ್ಥೆಯ ಅಭಿವೃದ್ಧಿ, ವಿದ್ಯಾರ್ಥಿಗಳ ಕೌಶಲ್ಯ ವೃದ್ಧಿ ಹಾಗೂ ಸಿಬ್ಬಂದಿಯೊಂದಿಗೆ ಉತ್ತಮ ಸಮನ್ವಯ ಸಾಧಿಸುವಲ್ಲಿ ಶಿವರಾಚಯ್ಯ ಅವರ ಕೊಡುಗೆ ಅಪಾರವಾಗಿದೆ ಎಂದು ಶ್ಲಾಘಿಸಿದರು.

“ಐಟಿಐ ಶಿಕ್ಷಣವು ವಿದ್ಯಾರ್ಥಿಗಳ ಭವಿಷ್ಯದ ಭದ್ರ ಅಡಿಪಾಯ. ಶಿಸ್ತು, ಪ್ರಾಮಾಣಿಕತೆ ಮತ್ತು ಪರಿಶ್ರಮದಿಂದ ತಾಂತ್ರಿಕ ಕೌಶಲ್ಯಗಳನ್ನು ಅಳವಡಿಸಿಕೊಂಡರೆ ಯಶಸ್ಸು ಖಚಿತ.”

ಎಸ್.ಎಂ. ಶಿವರಾಚಯ್ಯ

ನಿವೃತ್ತ ಪ್ರಾಚಾರ್ಯರು

“ಶಿಕ್ಷಣವೆಂದರೆ ಕೇವಲ ಜ್ಞಾನ ನೀಡುವುದಲ್ಲ, ಉತ್ತಮ ವ್ಯಕ್ತಿತ್ವವನ್ನು ರೂಪಿಸುವ ಮಹತ್ತರ ಕಾರ್ಯ. ಶಿವರಾಚಯ್ಯ ಅವರು ಶಿಸ್ತು, ಪ್ರಾಮಾಣಿಕತೆ ಹಾಗೂ ಕರ್ತವ್ಯನಿಷ್ಠೆಯಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದಾರೆ.”

ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

ಮಕ್ಕಳ ಕೈಗೆ ಕೆಲಸವಲ್ಲ, ಪುಸ್ತಕ ಕೊಡಿ

0

ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳ ಕೈಗೆ ಕೆಲಸವಲ್ಲ, ಶಿಕ್ಷಣದ ಬೆಳಕು ತಲುಪಿಸಬೇಕೆಂಬ ಸಂದೇಶದೊಂದಿಗೆ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನದ ಅಂಗವಾಗಿ ಗದಗ ನಗರದಲ್ಲಿ ಗುರುವಾರ ಬೃಹತ್ ಜನಜಾಗೃತಿ ಜಾಥಾ ನಡೆಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿ (ರಿ) ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಜಾಥಾಕ್ಕೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹಾಗೂ ಹಿರಿಯ ದಿವಾಣಿ ನ್ಯಾಯಾಧೀಶ ಸಿ.ಎಸ್. ಶಿವನಗೌಡ್ರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶಿವನಗೌಡ್ರ ಅವರು, ಮಕ್ಕಳು ದೇಶದ ಭವಿಷ್ಯವಾಗಿದ್ದು, ಅವರನ್ನು ಬಾಲ ಕಾರ್ಮಿಕ ಪದ್ಧತಿಯಿಂದ ಮುಕ್ತಗೊಳಿಸಿ ಶಿಕ್ಷಣದ ಮುಖ್ಯವಾಹಿನಿಗೆ ತರುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

14 ವರ್ಷದೊಳಗಿನ ಮಕ್ಕಳನ್ನು ಹೋಟೆಲ್, ಗ್ಯಾರೇಜ್, ಕಟ್ಟಡ ಕಾಮಗಾರಿ ಸೇರಿದಂತೆ ಯಾವುದೇ ಉದ್ಯಮಗಳಲ್ಲಿ ಕೆಲಸಕ್ಕೆ ನೇಮಿಸುವುದು ಕಾನೂನುಬಾಹಿರವಾಗಿದ್ದು, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಸಾರ್ವಜನಿಕರು ತಮ್ಮ ಸುತ್ತಮುತ್ತ ಬಾಲ ಕಾರ್ಮಿಕ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.

ಗದಗ-ಬೆಟಗೇರಿ ನಗರಸಭೆ ಆವರಣದಿಂದ ಆರಂಭವಾದ ಜಾಥಾ ಮಹಾತ್ಮ ಗಾಂಧಿ ವೃತ್ತ, ಮಹೇಂದ್ರಕರ್ ಸರ್ಕಲ್, ಟಾಂಗಕೂಟ, ಹಳೆ ಬಸ್ ನಿಲ್ದಾಣ, ರೋಟರಿ ಸರ್ಕಲ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಜಾಗೃತಿ ಮೂಡಿಸಿತು.

ಜಾಥಾದಲ್ಲಿ ಭಾಗವಹಿಸಿದ್ದ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು “ಬಾಲ ಕಾರ್ಮಿಕ ಪದ್ಧತಿ ತೊಲಗಲಿ, ಮಕ್ಕಳ ಭವಿಷ್ಯ ಬೆಳಗಲಿ”, “ಮಕ್ಕಳಿಗೆ ಕೆಲಸ ಬೇಡ, ಅಕ್ಷರ ನೀಡಿ” ಎಂಬ ಘೋಷಣೆಗಳನ್ನು ಕೂಗಿ ಜನರಲ್ಲಿ ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜಯದೇವಿ ಕವಲೂರು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಡಾ. ನಂದಾ ಹಣಬರಹಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ರಾಧಾ ಮಣ್ಣೂರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಯಶ್ರೀ ಆರ್., ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

“ಶಾಲೆಗೆ ಹೋಗಬೇಕಾದ ವಯಸ್ಸಿನಲ್ಲಿ ಮಕ್ಕಳನ್ನು ದುಡಿಮೆಗೆ ತಳ್ಳುವುದು ಅಪರಾಧ. ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಪ್ರತಿಯೊಬ್ಬ ನಾಗರಿಕರೂ ಕೈಜೋಡಿಸಬೇಕು.”

ಶಿವನಗೌಡ್ರ, ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ

ಮಳೆರಾಯನ ಅಬ್ಬರಕ್ಕೆ ಮನೆ ಗೋಡೆ ಕುಸಿತ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ಅಬ್ಬರಕ್ಕೆ ಡಂಬಳ ಗ್ರಾಮದ ರೈತ ಹನಮಂತಪ್ಪ ಶಿವಪ್ಪ ಆಲೂರ ಅವರಿಗೆ ಸೇರಿದ ಮಣ್ಣಿನ ಮನೆಯ ಗೋಡೆ ಕುಸಿದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಮನೆ ಭಾಗಶಃ ನೆಲಸಮವಾಗಿದ್ದು, ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.

ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಮನೆಯ ಗೋಡೆಗಳು ಏಕಾಏಕಿ ಕುಸಿದು ಬಿದ್ದಿವೆ. ಮನೆಯ ಒಂದು ಭಾಗ ಸಂಪೂರ್ಣ ನೆಲಸಮವಾಗಿದ್ದರೆ, ಮತ್ತೊಂದು ಗೋಡೆ ಶೇ.65ರಷ್ಟು ಕುಸಿದು ಬೀಳುವ ಸ್ಥಿತಿಯಲ್ಲಿದೆ. ಗೋಡೆ ಕುಸಿದ ಪರಿಣಾಮ ಮನೆಯ ಪಕ್ಕದಲ್ಲಿದ್ದ ಮೂರು ಟ್ರ್ಯಾಕ್ಟರ್‌ಗಳಷ್ಟು ಸಿಂಗಾ ಹೊಟ್ಟು ಸಂಪೂರ್ಣ ಹಾಳಾಗಿದ್ದು, ರೈತ ಕುಟುಂಬಕ್ಕೆ ಭಾರೀ ನಷ್ಟ ಉಂಟಾಗಿದೆ.

ಘಟನೆ ನಡೆದ ವೇಳೆ ಮನೆಯಲ್ಲಿದ್ದ ಕುಟುಂಬದ ಸದಸ್ಯರು ಸಮಯಕ್ಕೆ ಸರಿಯಾಗಿ ಹೊರಬಂದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ವಾಸಿಸಲು ಸುರಕ್ಷಿತ ಆಶ್ರಯವಿಲ್ಲದೆ ಕುಟುಂಬ ಆತಂಕದ ದಿನಗಳನ್ನು ಎದುರಿಸುತ್ತಿದೆ. ಮನೆ ಕುಸಿದಿದ್ದರೂ ಅದೇ ಅವಶೇಷಗಳ ನಡುವೆ ಅಡುಗೆ ಮಾಡುತ್ತಿರುವ ಕುಟುಂಬದ ದೃಶ್ಯ ಮನಕಲಕುವಂತಿತ್ತು.

ಕುಟುಂಬದ ಸದಸ್ಯೆ ಪ್ರೇಮವ್ವ ಹನಮಂತಪ್ಪ ಆಲೂರ ಮಾತನಾಡಿ, “ಸಾಲ ಮಾಡಿ ಕೃಷಿ ಮಾಡಿದ್ದೇವೆ. ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಮನೆ ಕಟ್ಟಲು ಸಹ ಸಾಲ ಮಾಡಿದ್ದೇವೆ. ಈಗ ಮಳೆಗೆ ಮನೆ ಕುಸಿದಿದೆ. ನಾವು ಎಲ್ಲಿಗೆ ಹೋಗಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಸರ್ಕಾರ ನಮಗೆ ಆಶ್ರಯ ಮನೆ ಕಲ್ಪಿಸಬೇಕು” ಎಂದು ಕಣ್ಣೀರಿಟ್ಟರು.

ಮಾಹಿತಿ ತಿಳಿಯುತ್ತಿದ್ದಂತೆಯೇ ಉಪ ತಹಸೀಲ್ದಾರ್ ಎಸ್.ಎಸ್. ಬಿಚಾಲಿ, ಕಂದಾಯ ಅಧಿಕಾರಿ ಪ್ರಭು ಬಾಗಲಿ ಹಾಗೂ ಕಂದಾಯ ಆಡಳಿತಾಧಿಕಾರಿ ಲಕ್ಷ್ಮಣ ಗುಡಸಲಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾನಿಯ ಪ್ರಮಾಣದ ಕುರಿತು ಮಾಹಿತಿ ಸಂಗ್ರಹಿಸಿ ವರದಿ ಸಿದ್ಧಪಡಿಸಲಾಗಿದ್ದು, ಸರ್ಕಾರದ ನಿಯಮಾನುಸಾರ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.

ಸತತ ಮಳೆಯಿಂದ ಗ್ರಾಮದಲ್ಲಿ ಹಲವಾರು ಹಳೆಯ ಮಣ್ಣಿನ ಮನೆಗಳು ಅಪಾಯದ ಸ್ಥಿತಿಯಲ್ಲಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಉಪ ತಹಸೀಲ್ದಾರ್ ಎಸ್.ಎಸ್. ಬಿಚಾಲಿ ಮನವಿ ಮಾಡಿದ್ದಾರೆ.

“ಸಾಲ ಮಾಡಿ ಬದುಕು ಕಟ್ಟಿಕೊಂಡಿದ್ದೇವೆ. ಈಗ ಮನೆ ಕುಸಿದಿದೆ. ನಮಗೆ ಆಶ್ರಯ ಮನೆ ಕಲ್ಪಿಸಿ.”

ಪ್ರೇಮವ್ವ ಹನಮಂತಪ್ಪ ಆಲೂರ

ಗದಗದ ಕವಿತಾಗೆ ಅಂತಾರಾಷ್ಟ್ರೀಯ ಗೌರವ

0

ವಿಜಯಸಾಕ್ಷಿ ಸುದ್ದಿ, ಗದಗ: ಆರಿ ವರ್ಕ್ ಕೌಶಲ್ಯದ ಮೂಲಕ ನೂರಾರು ಮಹಿಳೆಯರ ಬದುಕಿಗೆ ಹೊಸ ಬೆಳಕು ನೀಡಿರುವ ಗದಗದ ಭಾರ್ಗವಿ ಮಹಿಳಾ ಫೌಂಡೇಶನ್ ಸಂಸ್ಥಾಪಕಿ ಕವಿತಾ ಕೊಣ್ಣೂರ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ದೊರೆತಿದೆ. ಇತ್ತೀಚೆಗೆ ಮಲೇಶಿಯಾದಲ್ಲಿ ನಡೆದ World Fashion Summit 2026 ಕಾರ್ಯಕ್ರಮದಲ್ಲಿ ಉಗಾಂಡಾದ World Fashion University ವತಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಸನ್ಮಾನಿಸಲಾಗಿದೆ.

ಆರಿ ವರ್ಕ್ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡುವುದರ ಜೊತೆಗೆ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಲು ಶ್ರಮಿಸಿರುವ ಕವಿತಾ ಕೊಣ್ಣೂರ ಅವರ ಸೇವೆಯನ್ನು ಗುರುತಿಸಿ ಈ ಅಂತಾರಾಷ್ಟ್ರೀಯ ಗೌರವ ನೀಡಲಾಗಿದೆ.

ಕೇವಲ ತರಬೇತಿ ನೀಡುವುದಷ್ಟೇ ಅಲ್ಲದೆ, ತಮ್ಮನ್ನು ಅರಸಿ ಬರುವ ಮಹಿಳೆಯರಿಗೆ ಮಾರ್ಗದರ್ಶಕಿಯಾಗಿ, ಅಕ್ಕನ ಸ್ಥಾನದಲ್ಲಿ ನಿಂತು ಆತ್ಮವಿಶ್ವಾಸ ತುಂಬುವ ಕಾರ್ಯವನ್ನು ಕವಿತಾ ನಿರಂತರವಾಗಿ ಮಾಡುತ್ತಿದ್ದಾರೆ. ಆರಿ ವರ್ಕ್ ಮೂಲಕ ಅನೇಕ ಮಹಿಳೆಯರು ಸ್ವಂತ ಉದ್ಯೋಗ ಆರಂಭಿಸಿ ಆರ್ಥಿಕ ಸ್ವಾವಲಂಬನೆ ಸಾಧಿಸಿದ್ದಾರೆ.

ಸಾಮಾಜಿಕ ಸೇವೆಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕವಿತಾ ಕೊಣ್ಣೂರ, ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಾರೆ.

ಮಲೇಶಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಕಾರ್ಯಕ್ರಮದಲ್ಲಿ ವಿವಿಧ ದೇಶಗಳ ಗಣ್ಯರು, ಸಮಾಜಸೇವಕರು ಹಾಗೂ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ವೇಳೆ ಗೌರವ ಸ್ವೀಕರಿಸಿದ ಕವಿತಾ ಕೊಣ್ಣೂರ, ಈ ಪ್ರಶಸ್ತಿ ತಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದ್ದು, ಸಮಾಜ ಸೇವೆಯಲ್ಲಿ ಮತ್ತಷ್ಟು ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಜಿಲ್ಲೆಗೆ ಹೆಮ್ಮೆಯ ಕ್ಷಣ

ಗದಗ ಜಿಲ್ಲೆಯ ಮಹಿಳಾ ಪ್ರತಿಭೆಯೊಬ್ಬರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊರೆತ ಈ ಗೌರವ ಜಿಲ್ಲೆಯ ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕವಿತಾ ಕೊಣ್ಣೂರ ಅವರ ಸಾಧನೆಗೆ ವಿವಿಧ ಸಂಘ-ಸಂಸ್ಥೆಗಳು, ಸಮಾಜಮುಖಿ ಸಂಘಟನೆಗಳು ಹಾಗೂ ಅವರ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

“ಇದು ನನ್ನೊಬ್ಬಳ ಸಾಧನೆಯಲ್ಲ. ನನ್ನ ಕುಟುಂಬ, ಗುರುಗಳು, ಸ್ನೇಹಿತರು ಹಾಗೂ ನನ್ನನ್ನು ಬೆಂಬಲಿಸಿದ ಎಲ್ಲರ ಆಶೀರ್ವಾದದ ಫಲ. ಈ ಗೌರವ ನನ್ನ ಸಾಮಾಜಿಕ ಸೇವೆಗೆ ಮತ್ತಷ್ಟು ಪ್ರೇರಣೆ ನೀಡಿದೆ.”

ವಿತಾ ಕೊಣ್ಣೂರ

ಸಂಸ್ಥಾಪಕಿ, ಭಾರ್ಗವಿ ಮಹಿಳಾ ಫೌಂಡೇಶನ್

ಎಚ್.ಕೆ. ಪಾಟೀಲರಿಗೆ ಡಿಸಿಎಂ ಸ್ಥಾನ ನೀಡುವಂತೆ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಗದಗ ಶಾಸಕ ಎಚ್.ಕೆ. ಪಾಟೀಲ ಅವರಿಗೆ ಸಚಿವ ಸಂಪುಟದಲ್ಲಿ ಪ್ರಮುಖ ಖಾತೆ ನೀಡುವುದರ ಜೊತೆಗೆ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆಯನ್ನೂ ನೀಡಬೇಕು ಎಂದು ಎಸ್‌ಎಸ್‌ಕೆ ಸಮಾಜದ ಕಾಂಗ್ರೆಸ್ ಬೆಂಬಲಿಗರು ಆಗ್ರಹಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಎಸ್‌ಕೆ ಸಮಾಜದ ಮುಖಂಡ ವಿನೋದ ಆರ್. ಶಿದ್ಲಿಂಗ, ಎಚ್.ಕೆ. ಪಾಟೀಲರು ದೂರದೃಷ್ಟಿಯುಳ್ಳ, ನಿಷ್ಕಳಂಕ ಹಾಗೂ ಜನಪರ ರಾಜಕಾರಣಿಯಾಗಿದ್ದಾರೆ. ನಾಡು-ನುಡಿ, ನೆಲ-ಜಲ ಮತ್ತು ರೈತರ ಹಿತಾಸಕ್ತಿಗಾಗಿ ನಿರಂತರ ಹೋರಾಟ ನಡೆಸಿರುವ ಅಪರೂಪದ ನಾಯಕ ಎಂದು ಬಣ್ಣಿಸಿದರು.

ಗದಗ ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿಗೆ ಹೊಸ ಆಯಾಮ ನೀಡಿರುವ ಪಾಟೀಲರು, ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದಂತಹ ಮಹತ್ವಾಕಾಂಕ್ಷಿ ಯೋಜನೆಗಳ ಮೂಲಕ ಜಿಲ್ಲೆಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ತಮಗೆ ವಹಿಸಲಾದ ಪ್ರತಿಯೊಂದು ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ಸರ್ಕಾರಕ್ಕೆ ಉತ್ತಮ ಹೆಸರು ತಂದಿದ್ದಾರೆ ಎಂದು ಹೇಳಿದರು.

ಸಮಾಜದ ಹಿರಿಯ ಮುಖಂಡ ಆರ್.ಕೆ. ಹಬೀಬ (ಬುಡ್ಡಣ್ಣ) ಮಾತನಾಡಿ, ಮೊದಲ ಹಂತದ ಸಚಿವ ಸಂಪುಟ ಪಟ್ಟಿಯಲ್ಲಿ ಎಚ್.ಕೆ. ಪಾಟೀಲರ ಹೆಸರು ಘೋಷಣೆಯಾಗದಿರುವುದು ಅಚ್ಚರಿ ಹಾಗೂ ಬೇಸರದ ಸಂಗತಿಯಾಗಿದೆ ಎಂದು ಹೇಳಿದರು.

ಗ್ರಾಮೀಣ ಭಾಗಗಳಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಅಭಿವೃದ್ಧಿಯ ಹೊಸ ಮಾದರಿ ನಿರ್ಮಿಸಿರುವ ಪಾಟೀಲರಿಗೆ ಸರ್ಕಾರ ಉನ್ನತ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು.

ಮುಖಂಡ ಮೋಹನ ಪವಾರ ಮಾತನಾಡಿ, ಎಚ್.ಕೆ. ಪಾಟೀಲರ ಸುದೀರ್ಘ ರಾಜಕೀಯ ಅನುಭವ, ಪ್ರಾಮಾಣಿಕತೆ ಹಾಗೂ ಆಡಳಿತಾತ್ಮಕ ಸಾಮರ್ಥ್ಯ ಸರ್ಕಾರಕ್ಕೆ ಹೆಚ್ಚಿನ ಬಲ ನೀಡಲಿದೆ. ಇಂತಹ ಹಿರಿಯ ನಾಯಕರಿಗೆ ಮಹತ್ವದ ಜವಾಬ್ದಾರಿ ನೀಡಿದರೆ ಸರ್ಕಾರದ ವರ್ಚಸ್ಸು ಮತ್ತಷ್ಟು ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟರು.

ಎಸ್‌ಎಸ್‌ಕೆ ಸಮಾಜದ ಕಾಂಗ್ರೆಸ್ ಬೆಂಬಲಿಗರ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ರಾಜು ಬದಿ, ರಾಮಣ್ಣ ಬಾಕಳೆ, ಸುರೇಶಕುಮಾರ ಬದಿ, ವಿಷ್ಣುಸಾ ಶಿದ್ಲಿಂಗ, ಪ್ರಕಾಶ ಖೋಡೆ, ಅಂಬಾಸಾ ಖೋಡೆ, ಅಂಬಾಸಾ ಶಿದ್ಲಿಂಗ, ಜಗದೀಶ ಪವಾರ, ವಿಷ್ಣು ಹಬೀಬ ಹಾಗೂ ಶ್ರೀಮತಿ ಗೀತಾ ಹಬೀಬ ಉಪಸ್ಥಿತರಿದ್ದರು.

“ನಾಡು-ನುಡಿ, ನೆಲ-ಜಲ ಹಾಗೂ ರೈತರ ಹಿತಾಸಕ್ತಿಗಾಗಿ ನಿರಂತರ ಹೋರಾಟ ನಡೆಸಿರುವ ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನ ಮಾತ್ರವಲ್ಲ, ಉಪಮುಖ್ಯಮಂತ್ರಿ ಹುದ್ದೆಯನ್ನೂ ನೀಡಿ ಗೌರವಿಸಬೇಕು.”

ವಿನೋದ ಆರ್. ಶಿದ್ಲಿಂಗ, ಎಸ್‌ಎಸ್‌ಕೆ ಸಮಾಜದ ಮುಖಂಡ

ಒಂದು ಗಿಡ ನೆಡಿ, ಭವಿಷ್ಯ ಉಳಿಸಿ: ಚಂದ್ರಶೇಖರ ಬಿ. ಕಂದಕೂರ

0
ವಿಜಯಸಾಕ್ಷಿ ಸುದ್ದಿ, ಹೊಳೆಆಲೂರು: ಹವಾಮಾನ ವೈಪರೀತ್ಯ, ತಾಪಮಾನ ಏರಿಕೆ ಹಾಗೂ ಪರಿಸರ ಮಾಲಿನ್ಯದಂತಹ ಸವಾಲುಗಳ ನಡುವೆ ಪರಿಸರ ಸಂರಕ್ಷಣೆಯ ಅಗತ್ಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪ್ರತಿಯೊಬ್ಬ ನಾಗರಿಕನು ತನ್ನ ಮನೆಯ ಸುತ್ತಮುತ್ತ ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು ಅದರ ಪೋಷಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ರೋಣ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ಕರೆ ನೀಡಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರೋಣ ತಾಲೂಕಿನ ಕೌಶಲ್ಯ ಉದ್ಯಮಶೀಲತೆ ಜೀವನೋಪಾಯ ಸಂಜೀವಿನಿ ಮಹಿಳಾ ಸಂಘ, ಹೊಳೆಆಲೂರು ಗ್ರಾಮ ಪಂಚಾಯಿತಿ ಹಾಗೂ ಕಲ್ಲೇಶ್ವರ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪರಿಸರ ಜಾಗೃತಿ ಮತ್ತು ಸಸಿ ನೆಡುವ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ಸಂರಕ್ಷಣೆ ಇಂದಿನ ಅತ್ಯಂತ ಪ್ರಮುಖ ಅಗತ್ಯವಾಗಿದ್ದು, ಪ್ರಕೃತಿಯೊಂದಿಗೆ ಮಾನವನ ಬದುಕು ಅವಿನಾಭಾವ ಸಂಬಂಧ ಹೊಂದಿದೆ. ಅರಣ್ಯ ನಾಶ, ಜಲಮೂಲಗಳ ಕ್ಷೀಣತೆ ಹಾಗೂ ಮಾಲಿನ್ಯದಿಂದ ಪರಿಸರ ಸಮತೋಲನಕ್ಕೆ ಧಕ್ಕೆಯಾಗುತ್ತಿದ್ದು, ಇದನ್ನು ತಡೆಯಲು ಪ್ರತಿಯೊಬ್ಬರೂ ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ವಿಶೇಷವಾಗಿ ಶಾಲಾ ವಿದ್ಯಾರ್ಥಿಗಳಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಇಂದಿನ ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸಿದರೆ ನಾಳಿನ ಸಮಾಜ ಹಸಿರು ಮತ್ತು ಆರೋಗ್ಯಕರವಾಗಿರಲಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು, ಸ್ವಚ್ಛತಾ ಅಭಿಯಾನ, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ಜಲ ಸಂರಕ್ಷಣೆ, ಹಸಿರು ಗ್ರಾಮ ನಿರ್ಮಾಣ ಸೇರಿದಂತೆ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಯೋಜನೆಗಳ ಕುರಿತು ಚರ್ಚೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಎನ್‌ಆರ್‌ಎಲ್‌ಎಂ ಸಿಬ್ಬಂದಿ, ಪಿಡಿಒ, ಗ್ರಾಮ ಪಂಚಾಯಿತಿ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಕಲ್ಲೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
 “ಪರಿಸರ ರಕ್ಷಣೆ ಸರ್ಕಾರದ ಕೆಲಸ ಮಾತ್ರವಲ್ಲ; ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಹೌದು. ಪ್ರತಿಯೊಂದು ಮನೆಯಲ್ಲೂ ಕನಿಷ್ಠ ಒಂದು ಗಿಡ ಬೆಳೆದರೆ ಪರಿಸರ ಸಮತೋಲನ ಸಾಧ್ಯ.”
ಚಂದ್ರಶೇಖರ ಬಿ. ಕಂದಕೂರ

ಪರಿಸರ ರಕ್ಷಣೆ ನಮ್ಮೆಲ್ಲರ ಮೊದಲ ಆದ್ಯತೆ: ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಗದಗ: ಪರಿಸರದ ಅಸಮತೋಲನ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮನುಷ್ಯನ ಅತಿಯಾದ ದುರಾಸೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಆರೋಗ್ಯಕರ ಜೀವನಕ್ಕಾಗಿ ಪರಿಸರ ಸಂರಕ್ಷಣೆ ಅತ್ಯಗತ್ಯವಾಗಿದ್ದು, ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ನಗರದ ಲಿಂಗಾಯತ ಪ್ರಗತಿಶೀಲ ಸಂಘದಲ್ಲಿ ನಡೆದ 2801ನೇ ಶಿವಾನುಭವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು, ಅಭಿವೃದ್ಧಿಯ ಹೆಸರಿನಲ್ಲಿ ಸಹಜ ಪರಿಸರವನ್ನು ನಾಶಪಡಿಸಿ ಕಾಂಕ್ರೀಟ್ ಕಾಡುಗಳನ್ನು ನಿರ್ಮಿಸಲಾಗುತ್ತಿದೆ. ಇದರ ಪರಿಣಾಮವಾಗಿ ನೀರು, ಗಾಳಿ ಹಾಗೂ ಆಹಾರದಲ್ಲಿ ವಿಷಕಾರಿ ಅಂಶಗಳು ಸೇರಿ ಮಾನವ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಅಂತರಾಷ್ಟ್ರೀಯ ಪರಿಸರ ದಿನಾಚರಣೆ ಅಂಗವಾಗಿ ಉಪನ್ಯಾಸ ನೀಡಿದ ಪ್ರೊ. ಸಿ.ಎಸ್. ಅರಸನಾಳ, ಪ್ರಕೃತಿ ತನ್ನ ಸಮತೋಲನ ಕಾಪಾಡಿಕೊಳ್ಳಲು ಹಲವು ಸಂಕೇತಗಳನ್ನು ನೀಡುತ್ತಿದ್ದರೂ ಮನುಷ್ಯ ಅದನ್ನು ನಿರ್ಲಕ್ಷಿಸುತ್ತಿದ್ದಾನೆ. ಗಿಡಮರಗಳ ನಾಶದಿಂದ ಶುದ್ಧ ಗಾಳಿ, ನೀರು ಮತ್ತು ಆಹಾರಕ್ಕಾಗಿ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿಯೊಬ್ಬರೂ ಗಿಡ ನೆಟ್ಟು ಅವುಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಅಣ್ಣಿಗೇರಿ ಶಾಲೆಯ ಶಿಕ್ಷಕ ವಿ.ಎಂ. ಹಿರೇಮಠ ಅವರನ್ನು ಪರಿಸರ ಸಂರಕ್ಷಣೆಯಲ್ಲಿ ಸಲ್ಲಿಸಿರುವ ಸೇವೆಗಾಗಿ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸನ್ಮಾನಿಸಿ ಆಶೀರ್ವದಿಸಿದರು. ಮನೆ, ಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಿಡಮರಗಳನ್ನು ಬೆಳೆಸಿ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡುತ್ತಿರುವ ಅವರ ಕಾರ್ಯವನ್ನು ಪ್ರಶಂಸಿಸಲಾಯಿತು.

ಇದೇ ವೇಳೆ ಶ್ರೀಮಠದ ಆವರಣವನ್ನು ನಿತ್ಯ ಸ್ವಚ್ಛಗೊಳಿಸುತ್ತಿರುವ ಶ್ರೀಮತಿ ಚೌರಮ್ಮ ಕರಿಗಾರ ಹಾಗೂ ನಗರಸಭೆ ಮತ್ತು ಆಸ್ಪತ್ರೆಗಳ ತ್ಯಾಜ್ಯವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುತ್ತಿರುವ ಸಿಬ್ಬಂದಿಯನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ. ಉಮೇಶ ವಿ. ಪುರದ ಸ್ವಾಗತಿಸಿದರು. ಶ್ರೀಮತಿ ಸುರೇಖಾ ಪಿಳ್ಳಿ ಕಾರ್ಯಕ್ರಮ ನಿರೂಪಿಸಿದರು. ಮೃತ್ಯುಂಜಯ ಹಾಗೂ ಸುತಾರ ವಚನ ಸಂಗೀತ, ಭೂಮಿಕಾ ಕೆ. ತುಕ್ಕಪ್ಪನವರ ಧರ್ಮಗ್ರಂಥ ಪಠಣ, ಬಸವರಾಜ ಕೆ. ತುಕ್ಕಪ್ಪನವರ ವಚನ ಚಿಂತನೆ ನಡೆಸಿಕೊಟ್ಟರು. ಆರಂಭದಲ್ಲಿ ಡಾ. ನಿಂಗೂ ಸೊಲಗಿ ಪರಿಸರ ಗೀತೆಗಳನ್ನು ಪ್ರಸ್ತುತಪಡಿಸಿದರು.

ವೇದಿಕೆಯಲ್ಲಿ ಶ್ರೀಮತಿ ಪ್ರಭಾವತಿ ಕಲ್ಲನಗೌಡರ ಉಪಸ್ಥಿತರಿದ್ದರು. ಶಿವಾನುಭವ ಸಮಿತಿಯ ಚೇರ್‌ಮನ್ ಡಾ. ರಮೇಶ ಮ. ಕಲ್ಲನಗೌಡರ, ಉಪಾಧ್ಯಕ್ಷ ಪ್ರಭು ಗಂಜಿಹಾಳ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ ಸೇರಿದಂತೆ ಪದಾಧಿಕಾರಿಗಳು ಹಾಗೂ ಭಕ್ತರು ಭಾಗವಹಿಸಿದ್ದರು.

ಮೋದಿ ಆಡಳಿತದ ಸುವರ್ಣ ಅಧ್ಯಾಯ: ವಿಜಯಕುಮಾರ ಗಡ್ಡಿ

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಕ್ಕೆ 12 ವರ್ಷಗಳು ಪೂರ್ಣಗೊಂಡಿರುವ ಸಂದರ್ಭದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಹೊಸ ಗುರುತು ಮೂಡಿಸಿಕೊಂಡಿದ್ದು, ದೇಶದ ಅಭಿವೃದ್ಧಿ, ಭದ್ರತೆ ಹಾಗೂ ಜನಕಲ್ಯಾಣದ ಕ್ಷೇತ್ರಗಳಲ್ಲಿ ಐತಿಹಾಸಿಕ ಸಾಧನೆಗಳನ್ನು ದಾಖಲಿಸಿದೆ ಎಂದು ಬಿಜೆಪಿ ಮುಖಂಡ ಹಾಗೂ ಉದ್ಯಮಿ ವಿಜಯಕುಮಾರ ಗಡ್ಡಿ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತವು ವಿಶ್ವದ ಪ್ರಬಲ ರಾಷ್ಟ್ರಗಳ ಸಾಲಿನಲ್ಲಿ ಸ್ಥಾನ ಪಡೆದುಕೊಂಡಿದ್ದು, ನವಭಾರತದ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಲಾಗಿದೆ ಎಂದು ಅಭಿಪ್ರಾಯಪಟ್ಟರು.

ಪ್ರಧಾನಿ ಮೋದಿ ಅವರು ರಾಜಕಾರಣವನ್ನು ಅಧಿಕಾರದ ಸಾಧನವಾಗಿ ಬಳಸದೇ, ಸೇವೆಯ ತಪಸ್ಸಾಗಿ ಆಚರಿಸುತ್ತಿದ್ದಾರೆ. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಜನಸೇವೆಗೆ ಆದ್ಯತೆ ನೀಡುತ್ತಾ, ಯುವಜನರಿಗೆ ಮಾದರಿಯಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದರು.

ಪ್ರಧಾನಮಂತ್ರಿ ಆವಾಸ್ ಯೋಜನೆ, ಜಲ್ ಜೀವನ್ ಮಿಷನ್, ಫಸಲ್ ಬಿಮಾ ಯೋಜನೆ, ಪಿಎಂ ಸ್ವನಿಧಿ, ಡಿಜಿಟಲ್ ಇಂಡಿಯಾ, ಜನಧನ್, ಕಿಸಾನ್ ಸಮ್ಮಾನ್ ನಿಧಿ, ಆಯುಷ್ಮಾನ್ ಭಾರತ್, ಸ್ಟಾರ್ಟ್‌ಅಪ್ ಇಂಡಿಯಾ ಹಾಗೂ ಸ್ಟ್ಯಾಂಡ್‌ಅಪ್ ಇಂಡಿಯಾ ಸೇರಿದಂತೆ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಕೋಟ್ಯಂತರ ಜನರ ಬದುಕಿನಲ್ಲಿ ಪರಿವರ್ತನೆ ತಂದಿದ್ದಾರೆ ಎಂದು ಶ್ಲಾಘಿಸಿದರು.

ದೇಶದ ಭದ್ರತೆ ಹಾಗೂ ಏಕತೆಯ ವಿಚಾರದಲ್ಲಿ ಮೋದಿ ಅವರು ಎಂದಿಗೂ ರಾಜಿ ಮಾಡಿಕೊಳ್ಳದೆ ದಿಟ್ಟ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ವಿಧಿ 370 ರದ್ದು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಸೇರಿದಂತೆ ಹಲವು ಐತಿಹಾಸಿಕ ನಿರ್ಧಾರಗಳ ಮೂಲಕ ದೇಶದ ಆಶೋತ್ತರಗಳಿಗೆ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಇಂದು ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು, ಜಾಗತಿಕ ವೇದಿಕೆಯಲ್ಲಿ ತನ್ನ ಪ್ರಭಾವವನ್ನು ಮತ್ತಷ್ಟು ವಿಸ್ತರಿಸಿದೆ. ಭಾರತದ ಏಳಿಗೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ಪ್ರಧಾನಿ ಮೋದಿ ಅವರಂತಹ ನಾಯಕತ್ವ ದೇಶಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ವಿಜಯಕುಮಾರ ಗಡ್ಡಿ ತಿಳಿಸಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿ ಅವರ 12 ವರ್ಷಗಳ ಆಡಳಿತ ಭಾರತವನ್ನು ವಿಶ್ವದ ಗಮನ ಸೆಳೆಯುವ ರಾಷ್ಟ್ರವನ್ನಾಗಿ ರೂಪಿಸಿದೆ. ಅಭಿವೃದ್ಧಿ, ಭದ್ರತೆ ಮತ್ತು ಜನಕಲ್ಯಾಣದ ಮೂಲಕ ನವಭಾರತದ ಕನಸನ್ನು ನನಸು ಮಾಡುವ ದಿಕ್ಕಿನಲ್ಲಿ ದೇಶವನ್ನು ಮುನ್ನಡೆಸುತ್ತಿರುವ ಅವರು ನಿಜಕ್ಕೂ ನವಭಾರತದ ಭಾಗ್ಯವಿಧಾತರು.”

ವಿಜಯಕುಮಾರ ಗಡ್ಡಿ

ಬಿಜೆಪಿ ಮುಖಂಡ ಹಾಗೂ ಉದ್ಯಮಿ

ಗೃಹಲಕ್ಷ್ಮಿ ಹಣದ ಸೋರಿಕೆಗೆ ಬೀಗ!

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ವಿತರಣೆಯಲ್ಲಿ ಯಾವುದೇ ರೀತಿಯ ವಿಳಂಬಕ್ಕೆ ಅವಕಾಶ ನೀಡಬಾರದು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಗೃಹಲಕ್ಷ್ಮಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರ ಆರ್ಥಿಕ ಸಬಲೀಕರಣದ ಉದ್ದೇಶದಿಂದ ಜಾರಿಗೊಂಡಿರುವ ಯೋಜನೆಯ ಪ್ರಯೋಜನ ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ತಲುಪಬೇಕು ಎಂದು ಹೇಳಿದರು.

ಯೋಜನೆಯ ಹಣ ದುರುಪಯೋಗವಾಗದಂತೆ ನಿಗಾ ವಹಿಸಬೇಕು. ವಿಶೇಷವಾಗಿ ಮೃತಪಟ್ಟ ಫಲಾನುಭವಿಗಳ ಖಾತೆಗಳಿಗೆ ಹಣ ಜಮೆಯಾಗದಂತೆ ಕ್ರಮ ಕೈಗೊಳ್ಳಬೇಕು. ಈಗಾಗಲೇ ಅಂತಹ ಪ್ರಕರಣಗಳು ಕಂಡುಬಂದಿದ್ದರೆ ಸರ್ಕಾರಕ್ಕೆ ಹಣ ಮರುಪಾವತಿಸುವ ಪ್ರಕ್ರಿಯೆ ಆರಂಭಿಸಬೇಕು ಎಂದು ನಿರ್ದೇಶನ ನೀಡಿದರು.

ಅಂಗನವಾಡಿ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಫಲಾನುಭವಿಗಳ ಹಾಗೂ ಮೃತಪಟ್ಟವರ ಮಾಹಿತಿಯನ್ನು ಸಂಗ್ರಹಿಸಬೇಕು. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಈ ಕುರಿತು ಸಮಗ್ರ ವರದಿ ಸಿದ್ಧಪಡಿಸಿ ಬ್ಯಾಂಕ್‌ಗಳಿಗೆ ಸಲ್ಲಿಸುವಂತೆ ಸೂಚಿಸಿದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಸದಸ್ಯ ಅಶೋಕ ಮಂದಾಲಿ, ಆಧಾರ್ ಸೀಡಿಂಗ್ ಹಾಗೂ ಇತರ ತಾಂತ್ರಿಕ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಬೇಕು. ಮನೆಮನೆ ಸಮೀಕ್ಷೆಯಲ್ಲಿ ವಿಳಂಬವಾಗಬಾರದು. ಅಗತ್ಯವಿದ್ದರೆ ಹೆಚ್ಚುವರಿ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರಾಧಾ ಮಣ್ಣೂರ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಜಾರಿಗೊಂಡಿರುವ ಯೋಜನೆಯ ಅನುಷ್ಠಾನದಲ್ಲಿ ಎದುರಾಗುತ್ತಿರುವ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಇ-ಕೆವೈಸಿ, ಎನ್‌ಪಿಸಿಐ ಹಾಗೂ ಇತರೆ ತಾಂತ್ರಿಕ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಪದಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಅಂಗನವಾಡಿ ಮೇಲ್ವಿಚಾರಕರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ 2.61 ಲಕ್ಷ ಅರ್ಜಿಗಳ ನೋಂದಣಿ

ಗೃಹಲಕ್ಷ್ಮಿ ಯೋಜನೆಯಡಿ ಗದಗ ಜಿಲ್ಲೆಯಲ್ಲಿ ಫೆಬ್ರವರಿ 2026ರವರೆಗೆ 2,61,860 ಅರ್ಜಿಗಳು ನೋಂದಣಿಯಾಗಿದ್ದು, 2,52,843 ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ. ಜಿಲ್ಲೆ ಒಟ್ಟಾರೆ ಶೇ.96.56ರಷ್ಟು ಸಾಧನೆ ದಾಖಲಿಸಿದೆ.

ತಾಲೂಕುವಾರು ಸಾಧನೆಯಲ್ಲಿ ಶಿರಹಟ್ಟಿ (96.97%) ಮೊದಲ ಸ್ಥಾನದಲ್ಲಿದ್ದು, ಲಕ್ಷ್ಮೇಶ್ವರ (96.83%), ನರಗುಂದ (96.62%), ಮುಂಡರಗಿ (96.52%), ರೋಣ (96.53%), ಗದಗ (96.50%) ಹಾಗೂ ಗಜೇಂದ್ರಗಡ (96.14%) ಕ್ರಮವಾಗಿ ಸ್ಥಾನ ಪಡೆದಿವೆ.

“ಗೃಹಲಕ್ಷ್ಮಿ ಯೋಜನೆಯ ಸೌಲಭ್ಯದಿಂದ ಯಾವುದೇ ಅರ್ಹ ಮಹಿಳೆ ವಂಚಿತರಾಗಬಾರದು. ಯೋಜನೆಯ ಹಣ ದುರುಪಯೋಗ ಹಾಗೂ ಮೃತರ ಖಾತೆಗೆ ಜಮೆಯಾಗುವುದನ್ನು ತಡೆಯಲು ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು.”

ಬಿ.ಬಿ. ಅಸೂಟಿ

ಅಧ್ಯಕ್ಷರು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ

ಈಗ ಗಂಡು ಮಕ್ಕಳಿಗೂ ಶಕ್ತಿ ಯೋಜನೆ ಲಾಭ: ಉಚಿತ ಬಸ್ ಪಾಸ್ ಆರಂಭ!

ಬೆಂಗಳೂರು: ರಾಜ್ಯದ ವಿದ್ಯಾರ್ಥಿ ಸಮೂಹಕ್ಕೆ ಕಾಂಗ್ರೆಸ್ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ ಲಭಿಸಿದೆ.

ಶಕ್ತಿ ಯೋಜನೆಯಡಿ ಇದುವರೆಗೆ ಮಹಿಳಾ ವಿದ್ಯಾರ್ಥಿನಿಯರಿಗೆ ಮಾತ್ರ ಸೀಮಿತವಾಗಿದ್ದ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಇದೀಗ ಗಂಡು ವಿದ್ಯಾರ್ಥಿಗಳಿಗೂ ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಈ ಕುರಿತು ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇನ್ನು ಒಂದೆರಡು ದಿನಗಳಲ್ಲಿ ಅಧಿಕೃತ ಗೈಡ್‌ಲೈನ್ಸ್ ಬಿಡುಗಡೆ ಆಗುವ ಸಾಧ್ಯತೆ ಇದೆ.

ಸರ್ಕಾರದ ಈ ನಿರ್ಧಾರದಿಂದ ರಾಜ್ಯದ ಲಕ್ಷಾಂತರ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಆರ್ಥಿಕ ಭಾರ ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.

ಉಚಿತ ಬಸ್ ಪಾಸ್ ಪಡೆಯಲು ವಿದ್ಯಾರ್ಥಿಗಳು ತಮ್ಮ ಹತ್ತಿರದ ‘ಕರ್ನಾಟಕ ಒನ್’ ಅಥವಾ ‘ಬೆಂಗಳೂರು ಒನ್’ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ದಾಖಲೆಗಳ ಪರಿಶೀಲನೆಯ ಬಳಿಕ ಸಂಪೂರ್ಣ ಉಚಿತವಾಗಿ ಬಸ್ ಪಾಸ್ ವಿತರಣೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

error: Content is protected !!