Home Blog Page 12

ಪಾತಾಳಕ್ಕೆ ಇಳಿದ ಟೊಮ್ಯಾಟೋ ಬೆಲೆ: ರೈತರು ಕಂಗಾಲು

0

ವಿಜಯನಗರ: ಒಮ್ಮೆ ಲಾಭದಾಯಕ ಬೆಳೆ ಎಂದೇ ಗುರುತಿಸಿಕೊಂಡಿದ್ದ ಟೊಮ್ಯಾಟೋ ಈಗ ರೈತರಿಗೆ ಭಾರವಾದ ನಷ್ಟದ ಸಂಕೇತವಾಗಿ ಪರಿಣಮಿಸಿದೆ. ವಿಜಯನಗರ ಜಿಲ್ಲೆಯಲ್ಲಿ ಟೊಮ್ಯಾಟೋ ಬೆಲೆ ಏಕಾಏಕಿ ಕುಸಿದು, ರೈತರ ಬದುಕನ್ನೇ ಅಸ್ತವ್ಯಸ್ತಗೊಳಿಸಿದೆ.

1000 ರಿಂದ 1200 ರೂ.ವರೆಗೆ ಮಾರಾಟವಾಗುತ್ತಿದ್ದ ಒಂದು ಬಾಕ್ಸ್ ಟೊಮ್ಯಾಟೋ ದರ ಈಗ ಕೇವಲ 80–100 ರೂ.ಗೆ ಕುಸಿದಿದ್ದು, ಮಾರುಕಟ್ಟೆಯಲ್ಲಿ ಬೆಲೆ ಸಂಪೂರ್ಣವಾಗಿ ಧ್ವಂಸಗೊಂಡಂತಾಗಿದೆ. 20 ರೂ.ಗೆ 2ರಿಂದ 4 ಕೆಜಿ ಟೊಮ್ಯಾಟೋ ಮಾರಾಟವಾಗುತ್ತಿರುವ ದೃಶ್ಯಗಳು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿವೆ.

ಸಾಲ ಮಾಡಿ ಬೆಳೆದ ರೈತರು ಇದೀಗ ಹೂಡಿಕೆ ಸಹ ವಾಪಸು ಪಡೆಯಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಲೆ ಕುಸಿತದಿಂದ ಕಂಗಾಲಾದ ರೈತರ ಪರಿಸ್ಥಿತಿ ಕರುಣಾಜನಕವಾಗಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಇರಾನ್–ಇಸ್ರೇಲ್ ಸಂಘರ್ಷದಿಂದ ರಫ್ತು ಕುಂಠಿತಗೊಂಡಿದ್ದು, ದೇಶೀಯವಾಗಿ ಸಿಲಿಂಡರ್ ಕೊರತೆಯಿಂದ ಹೋಟೆಲ್ ಉದ್ಯಮ ಕುಸಿತಗೊಂಡಿರುವುದು ಬೇಡಿಕೆಯನ್ನು ತೀವ್ರವಾಗಿ ಕಡಿಮೆ ಮಾಡಿದೆ. ಇದರ ನೇರ ಪರಿಣಾಮವಾಗಿ ಟೊಮ್ಯಾಟೋ ಮಾರುಕಟ್ಟೆ ಸಂಪೂರ್ಣ ಕುಸಿತ ಕಂಡಿದೆ.

ಮುಳಬಾಗಿಲು | ಮನೆ ಕುಸಿದು ಬಾಲಕಿ ಸಾವು: ನಾಲ್ವರ ಸ್ಥಿತಿ ಗಂಭೀರ

0

ಕೋಲಾರ: ಜಿಲ್ಲೆಯ ಮುಳಬಾಗಿಲು ನಗರದಲ್ಲಿ ಸಂಭವಿಸಿದ ಭೀಕರ ಮನೆ ಕುಸಿತ ದುರಂತವು ಆತಂಕ ಸೃಷ್ಟಿಸಿದೆ. ಜೀರ್ಣಾವಸ್ಥೆಯಲ್ಲಿದ್ದ ಹಳೆಯ ಕಟ್ಟಡ ಏಕಾಏಕಿ ಕುಸಿದು ಬಿದ್ದ ಪರಿಣಾಮ 15 ವರ್ಷದ ವಹಿನೂರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯ ತೀವ್ರತೆಯಲ್ಲಿ ಸುಹೇಲ್, ಕೌಸರ್, ಅಯಾಜ್ ಹಾಗೂ ಅಬ್ಜರ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಕಟ್ಟಡದ ದುರ್ಬಲ ಸ್ಥಿತಿಯೇ ಅವಘಡಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಈ ಘಟನೆ ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದ್ದು, ಹಳೆಯ ಕಟ್ಟಡಗಳ ಸುರಕ್ಷತೆ ಕುರಿತು ಪ್ರಶ್ನೆಗಳು ಮತ್ತೆ ಉದ್ಭವಿಸಿವೆ.

ಮುಳಬಾಗಿಲು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ತನಿಖೆಯನ್ನು ವೇಗಗೊಳಿಸಿದ್ದಾರೆ.

ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು: ದೆಹಲಿ ಆಸ್ಪತ್ರೆಗೆ ದಾಖಲು

0

ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರಾಗಿರುವ ಹಿನ್ನೆಲೆಯಲ್ಲಿ ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳವಾರ ಸಂಜೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ವೈದ್ಯರ ತಂಡ ನಿಗಾ ವಹಿಸಿದೆ. ಹವಾಮಾನದ ಬದಲಾವಣೆಯಿಂದ ಅಸ್ವಸ್ಥರಾಗಿದ್ದು, ಗಂಭೀರ ಸಮಸ್ಯೆಯಿಲ್ಲ ಎಂದು ಮೂಲಗಳು ತಿಳಿಸಿವೆ. ಮಗ ರಾಹುಲ್ ಗಾಂಧಿ ಹಾಗೂ ಮಗಳು ಪ್ರಿಯಾಂಕಾ ಗಾಂಧಿ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.

ಇದಕ್ಕೂ ಮುನ್ನ ಜನವರಿಯಲ್ಲಿ ಚಳಿಗಾಲದ ಪರಿಣಾಮ ಉಸಿರಾಟ ಸಂಬಂಧಿತ ಸಮಸ್ಯೆಯಿಂದಾಗಿ ಸೋನಿಯಾ ಗಾಂಧಿ ಅವರನ್ನು ಇದೇ ಆಸ್ಪತ್ರೆಗೆ ಆರು ದಿನಗಳ ಕಾಲ ದಾಖಲಿಸಲಾಗಿತ್ತು. ಬಳಿಕ ಚೇತರಿಸಿಕೊಂಡು ಮನೆಗೆ ಮರಳಿ ವಿಶ್ರಾಂತಿ ಪಡೆಯುತ್ತಿದ್ದರು.

ರಾಜ್ಯದಲ್ಲಿ ಇಂದು ವರುಣನ ಆರ್ಭಟ ಜೋರು! ಗದಗ, ಧಾರವಾಡ ಸೇರಿ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

ಬೆಂಗಳೂರು:- ಕರ್ನಾಟಕದ ಹಲವೆಡೆ ಇಂದು ಗುಡುಗು ಸಹಿತ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೀದರ್, ಕಲಬುರ್ಗಿ, ಬಾಗಲಕೋಟೆ, ವಿಜಯಪುರ, ಯಾದಗಿರಿ,ರಾಯಚೂರು, ಕೊಪ್ಪಳ, ಗದಗ, ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಬಳ್ಳಾರಿ, ಹಾವೇರಿ, ವಿಜಯನಗರ, ಉಡುಪಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಮೈಸೂರು, ಕೊಡಗು, ಹಾಸನ, ತುಮಕೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯಿದ್ದು, ಯೆಲ್ಲೋ ಅಲರ್ಟ್​ ನೀಡಲಾಗಿದೆ.

ಇನ್ನುಳಿದ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಗದಗದಲ್ಲಿ ಮಳೆ ಅವಾಂತರ:-

ಗದಗ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಭಾರಿ ಗಾಳಿ, ಗುಡುಗು ಸಹಿತ ಮಳೆಯ ಅಬ್ಬರದಿಂದ ಹಲವು ಕಡೆ ಅವಾಂತರಗಳು ಸಂಭವಿಸಿವೆ.

ವಿಶೇಷವಾಗಿ ಮುಂಡರಗಿ ತಾಲೂಕಿನ ದಿಂಡೂರ ತಾಂಡಾದಲ್ಲಿ ಗಾಳಿಯ ತೀವ್ರತೆಗೆ ನಾಲ್ಕಕ್ಕೂ ಹೆಚ್ಚು ಮನೆಗಳ ಮೇಲಿನ ತಗಡಿನ ಶೀಟ್‌ಗಳು ಹಾರಿ ಹೋಗಿ ನಿವಾಸಿಗಳಿಗೆ ಭಾರೀ ತೊಂದರೆ ಉಂಟಾಗಿದೆ. ಶೀಟ್‌ಗಳು ಹಾರಿದ ಪರಿಣಾಮ ಶಿವಪ್ಪ ಲಮಾಣಿ ಕಾಲಿಗೆ ಗಾಯಗೊಂಡಿದ್ದು, ಸೋಮವ್ವ ಲಮಾಣಿ ಅವರ ಕೈ ಮುರಿದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಗ್ರಾಮಸ್ಥರು ಪರದಾಡಿದ ಘಟನೆ ನಡೆದಿದೆ.

DCM ಅಜಿತ್ ಪವಾರ್ ಸಾವು ಆಕಸ್ಮಿಕವಲ್ಲ, ವ್ಯವಸ್ಥಿತ ಸಂಚು!? ಅಳಿಯನ ದೂರು, ಬೆಂಗಳೂರಿನಲ್ಲಿ ಝೀರೋ FIR ದಾಖಲು

ಬೆಂಗಳೂರು: ವಿಮಾನ ದುರಂತದಲ್ಲಿ ಕೆಲವು ದಿನಗಳ ಹಿಂದೆ ಸಾವನ್ನಪ್ಪಿದ್ದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ.

ಅಜಿತ್ ಪವಾರ್ ಅವರದ್ದು ವಿಮಾನ ದುರಂತವಲ್ಲ ಅದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿ ಅವರ ಅಳಿಯ ರೋಹಿತ್ ರಾಜೇಂದ್ರ ಪವಾರ್ ಅವರು ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಝೀರೋ ಎಫ್‌ಐಆರ್‌ ದಾಖಲಿಸಿದ್ದಾರೆ.

ಎಫ್‌ಐಆರ್‌ನಲ್ಲಿ, ಹಲವು ಆಂಶಗಳನ್ನ ಅಳವಡಿಸುವ ಮೂಲಕ ಇದೊಂದು ದುರಂತವಲ್ಲ ವ್ಯವಸ್ಥಿತ ಕೊಲೆ ಎಂದು ಆರೋಪಿಸಿದ್ದಾರೆ. ಹಾರಾಟದ ಅವಧಿ ಮುಗಿದಿದ್ದರೂ ವಿಮಾನ ಹಾರಾಡಿದ್ದು ಯಾಕೆ..? ಸುಮಾರು 8,000 ಗಂಟೆಗಳ ಕಾಲ ಹಾರಾಟ ನಡೆಸಿದ್ದರೂ ಅದನ್ನ ಮುಚ್ಚಿಡಲಾಗಿದೆ. ಡಿಜಿಸಿಎ ತನಿಖೆಯಲ್ಲಿ ವಿಮಾನವು ಹಾರಾಟಕ್ಕೆ ಯೋಗ್ಯವಾಗಿರಲಿಲ್ಲವೆಂದು ವರದಿ ನೀಡಿದ್ದರೂ ಬಳಸಿರುವುದು ಯಾಕೆ..? ಎಂದು ಹಲವು ಅನುಮಾನಗಳನ್ನು FIR ನಲ್ಲಿ ಉಲ್ಲೇಖ ಮಾಡಿದ್ದಾರೆ.

ಅಷ್ಟೆ ಅಲ್ಲ, ಅಮೆರಿಕದಲ್ಲಿ ಸೇವೆಯಿಂದ ನಿವೃತ್ತಿಗೊಂಡಿದ್ದ ವಿಮಾನವನ್ನ ಭಾರತಕ್ಕೆ ತಂದು ಬಳಸಿದ್ದಾರೆಂದು ಆರೋಪಿಸಲಾಗಿದೆ. ಅಲ್ಲದೇ, ವಿಮಾನದ ಪೈಲಟ್ ಸುಮಿತ್ ಕಪೂರ್ ಈ ಹಿಂದೆ ಎರಡು ಬಾರಿ ಮದ್ಯಪಾನ ಮಾಡಿ ಸಿಕ್ಕಿಬಿದ್ದಿದ್ದ ಅವರನ್ನ ಅಮಾನತು ಮಾಡಿದ್ದರು. ಆದ್ರೂ ಅದೇ ಪೈಲಟ್‌ರನ್ನ ನೇಮಿಸಲಾಗಿದೆ. ಇಂತಹ ಇತಿಹಾಸವಿದ್ದರೂ ಉಪಮುಖ್ಯಮಂತ್ರಿಗಳ ವಿಮಾನಕ್ಕೆ ಅವರನ್ನೇ ಪೈಲಟ್ ಆಗಿ ನೇಮಿಸಿದ್ದು ಯಾಕೆ!? ಈ ನಿರ್ಧಾರದ ಹಿಂದೆ ಯಾರು ಇದ್ದಾರೆಂಬುದನ್ನು ತನಿಖೆ ಮಾಡಬೇಕೆಂದು ಎಫ್‌ಐಆರ್‌ನಲ್ಲಿ ರೋಹಿತ್ ರಾಜೇಂದ್ರ ಪವಾರ್ ಉಲ್ಲೇಖಿಸಿದ್ದಾರೆ.

ಝೀರೋ ಎಫ್‌ಐಆರ್ ಎಂದರೇನು?

ಝೀರೋ ಎಫ್‌ಐಆರ್ ಎಂದರೆ ಅಪರಾಧ ನಡೆದ ಸ್ಥಳದ ಮಿತಿಯನ್ನು ಲೆಕ್ಕಿಸದೆ, ದೇಶದ ಯಾವುದೇ ಪೊಲೀಸ್ ಠಾಣೆಯಲ್ಲಿ ತಕ್ಷಣವೇ ದೂರು ದಾಖಲಿಸಬಹುದಾದ ವ್ಯವಸ್ಥೆ. ಇದಕ್ಕೆ ‘0’ ಸಂಖ್ಯೆ ನೀಡಿ, ನಂತರ ತನಿಖೆಗಾಗಿ ಸಂಬಂಧಿತ ಪೊಲೀಸ್ ಠಾಣೆಗೆ ವರ್ಗಾಯಿಸಲಾಗುತ್ತದೆ.

ಆಸ್ತಿ ವೈಷಮ್ಯ: ಮಾರಕಾಸ್ತ್ರದಿಂದ ಕೊಚ್ಚಿ ವ್ಯಕ್ತಿ ಕೊಲೆಗೈದ ಅಪ್ರಾಪ್ತ!

0

ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಕಡ್ಲೆಗುದ್ದು ಗ್ರಾಮದಲ್ಲಿ ಎರಡು ಕುಟುಂಬದ ಮಧ್ಯೆ ಆಸ್ತಿ ವೈಷಮ್ಯ ಹಿನ್ನೆಲೆ ಮಾರಕಾಸ್ತ್ರದಿಂದ ಕೊಚ್ಚಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜರುಗಿದೆ.

55 ವರ್ಷದ ವೀರಭದ್ರಪ್ಪ ಕೊಲೆಯಾದ ದುರ್ದೈವಿ. 16 ವರ್ಷದ ಅಪ್ರಾಪ್ತ ಈ ಕೃತ್ಯ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ದೊಡ್ಡಾಲಘಟ್ಟದಿಂದ ಜಮೀನಿಗೆ ಹೋಗುವ ರಸ್ತೆಯಲ್ಲಿ ಮಚ್ಚಿನಿಂದ ಹೊಡೆದು ಕೊಲೆ ಮಾಡಲಾಗಿದೆ.

ಘಟನಾ ಸ್ಥಳಕ್ಕೆ ಭರಮಸಾಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಅಪ್ರಾಪ್ತ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.

ಕಬ್ಬು ನಾಟಿ ಮಾಡುತ್ತಿದ್ದ ಯುವಕ ಸಿಡಿಲು ಬಡಿದು ಸಾವು!

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಶಾದಿಪುರ ತಾಂಡಾದಲ್ಲಿ ಕಬ್ಬು ನಾಟಿ ಮಾಡುತ್ತಿದ್ದಾಗ ಸಿಡಿಲು ಬಡಿದು ಯುವ ರೈತ ಸಾವನ್ನಪ್ಪಿರುವ ಘಟನೆ ಜರುಗಿದೆ.

24 ವರ್ಷದ ಮಹೇಶ್ ಚೌವ್ಹಾಣ್ (24) ಸಿಡಿಲಿಗೆ ಬಲಿಯಾದ ರೈತ. ಮಂಗಳವಾರ ಕಲಬುರಗಿ ಜಿಲ್ಲೆಯ ವಿವಿಧೆಡೆ ಬಿರುಗಾಳಿ, ಗುಡುಗು ಸಹಿತ ಮಳೆಯಾಗಿದೆ. ಈ ವೇಳೆ ಜಮೀನಿನಲ್ಲಿ ಕಬ್ಬು ನಾಟಿ ಮಾಡಲೆಂದು ಹೋಗಿದ್ದ ಮಹೇಶ್ ಸಿಡಿಲಿಗೆ ಬಲಿಯಾಗಿದ್ದಾನೆ.

ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಂಚಾವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

17 ಸಾವಿರ ಕೋಟಿಗೆ ಆರ್‌ಸಿಬಿ ಸೇಲ್‌! ಆದಿತ್ಯಾ ಬಿರ್ಲಾ-ಟೈಮ್ಸ್ ಆಫ್‌ ಇಂಡಿಯಾ ಪಾಲಾದ ಬೆಂಗಳೂರು ತಂಡ!

0

ಬೆಂಗಳೂರು: ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಜನಪ್ರಿಯ ತಂಡಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗ ಹೊಸ ಮಾಲೀಕರ ತೆಕ್ಕೆಗೆ ಜಾರಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು, ಸುಮಾರು 1.78 ಬಿಲಿಯನ್ ಡಾಲರ್ (ಸುಮಾರು 16,779 ಕೋಟಿ ರೂ.) ಮೊತ್ತಕ್ಕೆ ಮಾರಾಟವಾಗಿದ್ದು, ಕ್ರಿಕೆಟ್ ಹೂಡಿಕೆ ಇತಿಹಾಸದಲ್ಲಿ ಹೊಸ ದಾಖಲೆ ಸ್ಥಾಪಿಸಿದೆ.

ಮುಖ್ಯ ಮಾಲೀಕರಾದ ಡಿಯಾಜಿಯೊ ಸಂಸ್ಥೆಯಿಂದ ಈ ಫ್ರಾಂಚೈಸಿಯನ್ನು ಪ್ರಮುಖ ಹೂಡಿಕೆದಾರರ ಒಕ್ಕೂಟವು ಖರೀದಿಸಿದೆ. ಹೊಸ ಮಾಲೀಕರಲ್ಲಿ ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಟ್ ವೆಂಚರ್ಸ್ ಮತ್ತು ಅಮೆರಿಕದ ಖಾಸಗಿ ಇಕ್ವಿಟಿ ದೈತ್ಯ ಬ್ಲ್ಯಾಕ್‌ಸ್ಟೋನ್ ಸೇರಿದ್ದಾರೆ.

ನಿರ್ದೇಶಕರ ಘೋಷಣೆಯ ಪ್ರಕಾರ, ಆದಿತ್ಯ ಬಿರ್ಲಾ ಗ್ರೂಪ್‌ನ ಆರ್ಯಮನ್ ವಿಕ್ರಮ್ ಬಿರ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ, ಟೈಮ್ಸ್ ಆಫ್ ಇಂಡಿಯಾ ಗ್ರೂಪ್‌ನ ಸತ್ಯನ್ ಗಜ್ವಾನಿ ಫ್ರಾಂಚೈಸಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. 2026 ರ 19ನೇ ಐಪಿಎಲ್ ಆವೃತ್ತಿಯ ನಂತರ ಈ ಹೊಸ ಮಾಲೀಕತ್ವ ಅಧಿಕೃತವಾಗಿ ಜಾರಿಗೆ ಬರಲಿದೆ. ಆವರೆಗೆ ಡಿಯಾಜಿಯೊ ತಂಡದ ಜವಾಬ್ದಾರಿಯನ್ನು ನಿರ್ವಹಿಸುತ್ತದೆ.

2008 ರಲ್ಲಿ ವಿಜಯ್ ಮಲ್ಯ ಒಡೆತನದ ಯುನೈಟೆಡ್ ಸ್ಪಿರಿಟ್ಸ್ 111.6 ಮಿಲಿಯನ್ ಡಾಲರ್ (ಸಾವಿರಕ್ಕೂ ಹೆಚ್ಚು ಕೋಟಿ ರೂ.)ಕ್ಕೆ ಆರ್‌ಸಿಬಿಯನ್ನು ಖರೀದಿಸಿತ್ತು. 2012 ರಲ್ಲಿ ಕಿಂಗ್‌ಫಿಶರ್ ಏರ್‌ಲೈನ್ಸ್ ಕಾರ್ಯಾಚರಣೆ ನಿಲ್ಲಿಸಿದಾಗ, ಉದ್ಯಮ ನಷ್ಟದಿಂದ ಯುನೈಟೆಡ್ ಸ್ಪಿರಿಟ್ಸ್ ಡಿಯಾಜಿಯೊಗೆ ಸ್ವಾಧೀನಗೊಂಡಿತು.

18ನೇ ಆವೃತ್ತಿಯಲ್ಲಿ ಆರ್‌ಸಿಬಿ ಚಾಂಪಿಯನ್‌ ಆಗಿ ಹೊರಹೊಮ್ಮಿದ ಬಳಿಕ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಪ್ರಕರಣದ ಬಳಿಕ ಯುನೈಟೆಡ್ ಸ್ಪಿರಿಟ್ಸ್ ಹೂಡಿಕೆದಾರರು ಆತಂಕ ಹೊರಹಾಕಿದ್ದರು. ಜೊತೆಗೆ ವಿರಾಟ್‌ ಕೊಹ್ಲಿ ಐಪಿಎಲ್‌ಗೆ ನಿವೃತ್ತಿ ಹೇಳುವ ಸಾಧ್ಯತೆಯಿದೆ. ಕೊಹ್ಲಿ ನಿವೃತ್ತಿ ಹೇಳಿದರೆ ಆರ್‌ಸಿಬಿ ಮೌಲ್ಯ ಕುಸಿಯುವ ಸಾಧ್ಯತೆಯಿದೆ. ಈ ಕಾರಣಕ್ಕೆ ಆರ್‌ಸಿಬಿ ತಂಡವನ್ನ ಯುನೈಟೆಡ್ ಸ್ಪಿರಿಟ್ಸ್ ಮಾರಾಟ ಮಾಡಿದೆ ಎನ್ನಲಾಗ್ತಿದೆ.

ಆರ್‌ಸಿಬಿ ತಂಡವು ಇತ್ತೀಚಿನ ವರ್ಷಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. 2025ರಲ್ಲಿ ಪುರುಷರ ತಂಡ ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿತು. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲೂ ಎರಡು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ವಿರಾಟ್ ಕೊಹ್ಲಿಯಂತಹ ಜಾಗತಿಕ ಸೂಪರ್‌ಸ್ಟಾರ್‌ಗಳನ್ನು ಹೊಂದಿರುವ ಈ ತಂಡಕ್ಕೆ ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ನಂಬಲಾರ್ಹವಾದ ಅಚಲವಾದ ಅಭಿಮಾನಿ ಬಳಗವಿದೆ.

“ಆರ್‌ಸಿಬಿ ಈಗಾಗಲೇ ಐಪಿಎಲ್‌ನ ಅತ್ಯಂತ ಜನಪ್ರಿಯ ಬ್ರ್ಯಾಂಡ್ ಆಗಿದೆ. ನಾವು ಇದನ್ನು ಬೆಂಗಳೂರು ಮತ್ತು ಕರ್ನಾಟಕದ ಬೇರುಗಳಿಗೆ ಹತ್ತಿರವಾಗಿಯೇ ಇರಿಸಿಕೊಂಡು, ಜಾಗತಿಕ ಮಟ್ಟದ ಕ್ರೀಡಾ ಸಂಸ್ಥೆಯನ್ನಾಗಿ ಬೆಳೆಸುವ ಉದ್ದೇಶ ಹೊಂದಿದ್ದೇವೆ” ಎಂದು ಟೈಮ್ಸ್ ಆಫ್ ಇಂಡಿಯಾ ಗ್ರೂಪ್‌ನ ಸಿಇಒ ಸತ್ಯನ್ ಗಜ್ವಾನಿ ಮಾತನಾಡಿದ್ದಾರೆ.

ಭೀಕರ ಅಪಘಾತ| ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದು ನಟಿ ಸಾವು!

ಜೈಪುರ: ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ನಟಿ ಮತ್ತು ರೂಪದರ್ಶಿ ಹರ್ಷಿಲ್ ಕಾಲಿಯಾ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಜೈಪುರದ ಶಿಪ್ರಾ ಪಾತ್ ರಸ್ತೆಯಲ್ಲಿ ಜರುಗಿದೆ

ರಾತ್ರಿ 11:30 ರ ಸುಮಾರಿಗೆ ಕಾಲಿಯಾ, ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಅವರ ವಾಹನವು ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿಯಾಗಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಈ ಭೀಕರ ದೃಶ್ಯ ಕಂಡುಬಂದಿದೆ. ಸ್ಥಳೀಯ ನಿವಾಸಿಗಳು ವಾಹನವನ್ನು ಸರಿಪಡಿಸಿ ಕಾಲಿಯಾಳನ್ನು ರಕ್ಷಿಸಿದರು. ನಂತರ ನಟಿಯನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ತಲೆಗೆ ತೀವ್ರ ಪೆಟ್ಟಾಗಿದ್ದು, ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಯುವತಿ ಅನುಮಾನಾಸ್ಪದ ಸಾವು: ಡೈರಿಯಲ್ಲಿ ಇಬ್ಬರ ಹೆಸರು ಉಲ್ಲೇಖ!

ಚಿಕ್ಕಮಗಳೂರು: ನಾಗಾಲ್ಯಾಂಡ್ ಮೂಲದ 22 ವರ್ಷದ ಯುವತಿಯೊಬ್ಬಳು ನಗರದ ಅರವಿಂದ ನಗರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಮೃತರನ್ನು ಲಿನ್ಸುಲಾ ಎಂದು ಗುರುತಿಸಲಾಗಿದೆ. ಅವರು ಸ್ಥಳೀಯ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಸಾವಿಗೆ ಎರಡು ದಿನಗಳ ಮುನ್ನ ಕಿವಿಶೆ ಕಿನಿಮಿ ಎಂಬವರೊಂದಿಗೆ ಸುಮಾರು ಅರ್ಧ ಗಂಟೆ ಮಾತನಾಡಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನೂ, ಸಾವಿಗೆ ಮೊದಲು ಲಿನ್ಸುಲಾ ತನ್ನ ಡೈರಿಯಲ್ಲಿ ರಾಜೇಶ್ ಹಾಗೂ ತೇಜಸ್ ಎಂಬವರ ಹೆಸರನ್ನು ಉಲ್ಲೇಖಿಸಿದ್ದಾಳೆ. ಈ ಇಬ್ಬರಿಂದ ಮಾನಸಿಕ ಹಿಂಸೆ ಆಗುತ್ತಿತ್ತು ಎಂದು ಲಶಿಲಾ ಇಂಚುಗರ್ ಅವರು ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಬಸವನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

error: Content is protected !!