Home Blog Page 12

ಚಳಿಗಾಲದಲ್ಲಿ ಬಿರುಕು ಬಿಟ್ಟ ಹಿಮ್ಮಡಿಯನ್ನು ಗುಣಪಡಿಸಲು ಸಹಕಾರಿ ಈ ಮನೆಮದ್ದುಗಳು!

0

ಚಳಿಗಾಲದಲ್ಲಿ ಪ್ರತಿಯೊಬ್ಬರೂ ತಮ್ಮ ಹಿಮ್ಮಡಿಯ ಕಾಳಜಿವಹಿಸಬೇಕು. ಅದರಲ್ಲೂ ಚಳಿಗೆ ಹಿಮ್ಮಡಿಯ ಮೇಲಿನ ಚರ್ಮವು ದಪ್ಪಗೆ, ಒರಟಾಗುವುದು ಮತ್ತು ಬಿರುಕು ಬಿಡಲಾರಂಭಿಸುತ್ತದೆ.

ಈ ಒರಟಾದ ಚರ್ಮ ಕಿರಿಕಿರಿಯನ್ನುಂಟು ಮಾಡಿದರೆ ಬಿರುಕು ಬಿಟ್ಟಿರುವ ಪಾದದಿಂದಾಗಿ ನಡೆಯಲೂ ಕಷ್ಟವಾಗುತ್ತದೆ. ಸಿಕ್ಕಾಪಟ್ಟೆ ನೋವನ್ನುಂಟು ಮಾಡುತ್ತದೆ. ಎಸ್, ನಿಮ್ಮ ಪಾದಗಳಲ್ಲಿ ಹಿಮ್ಮಡಿ ಬಿರುಕು ಬಿಟ್ಟಿರುವುದು ಚಳಿಗಾಲದಲ್ಲಿ ಸಾಮಾನ್ಯವಾಗಿ ಎದುರಾಗುವ ಸಮಸ್ಯೆ. ಚಳಿಯ ಸಮಯದಲ್ಲಿ ನಮ್ಮ ದೇಹ, ವಿಶೇಷವಾಗಿ ಕೈ ಮತ್ತು ಪಾದಗಳು ಹೆಚ್ಚಿನ ತೇವವನ್ನು ಕಳೆದುಕೊಂಡು ಒಣಗುತ್ತವೆ. ಇದರಿಂದ ಚರ್ಮ ತುಂಬಾ ಶುಷ್ಕವಾಗಿ, ಬಿರುಕು ಬಿದ್ದಂತೆ ಕಾಣುತ್ತದೆ. ಹಿಮ್ಮಡಿ ಬಿರುಕು ಬಿಟ್ಟಿರುವುದು ಕೇವಲ ಅಸೌಂದರ್ಯದ ಸಮಸ್ಯೆ ಮಾತ್ರವಲ್ಲ, ಕೆಲವೊಮ್ಮೆ ನೋವು, ಸುಟ್ಟಾಯಿಕೆ ಮತ್ತು ಸೋಂಕು ಸೇರಿದಂತೆ ಆರೋಗ್ಯದ ಅಡೆತಡೆಗಳಿಗೆ ಕಾರಣವಾಗಬಹುದು. ಆದರೆ ಇದರ ಬಗ್ಗೆ ಕಾಳಜಿ ವಹಿಸಿದರೆ, ದುಬಾರಿ ಉತ್ಪನ್ನಗಳ ಅವಶ್ಯಕತೆ ಇಲ್ಲದೆ ಸಹ ಮನೆಮದ್ದುಗಳ ಮೂಲಕ ಸಮಸ್ಯೆಯನ್ನು ಕಡಿಮೆ ಮಾಡಬಹುದು.

1. ನಿಂಬೆ, ಗ್ಲಿಸರಿನ್ ಮತ್ತು ರೋಸ್ ವಾಟರ್ ಬಳಸಿ ಪಾದಗಳ ಆರೈಕೆ:

ಅರ್ಧ ಬಕೆಟ್ ಬಿಸಿ ನೀರನ್ನು ತಯಾರಿಸಿ, ಅದಕ್ಕೆ ಒಂದು ಚಮಚ ನಿಂಬೆ ರಸ, ಒಂದು ಚಮಚ ಗ್ಲಿಸರಿನ್ ಮತ್ತು ಒಂದು ಚಮಚ ರೋಸ್ ವಾಟರ್ ಸೇರಿಸಿ. ನಿಮ್ಮ ಪಾದಗಳನ್ನು ಈ ದ್ರಾವಣದಲ್ಲಿ 15–20 ನಿಮಿಷಗಳ ಕಾಲ ನೆನೆಸಿಕೊಳ್ಳಿ. ನಂತರ ಹೀಲ್ ಸ್ಕ್ರಬ್ಬರ್ ಅಥವಾ ಪೆಡಿ ಸ್ಟೋನ್ ಬಳಸಿ ಹಿಮ್ಮಡಿಗಳನ್ನು ಸ್ಕ್ರಬ್ ಮಾಡಿ. ನಂತರ, ಗ್ಲಿಸರಿನ್, ನಿಂಬೆ ರಸ ಮತ್ತು ರೋಸ್ ವಾಟರ್ ಅನ್ನು ಒಂದು ಚಮಚ ಸೇರಿಸಿ ಮಿಶ್ರಣ ಮಾಡಿ, ಅದನ್ನು ಪಾದಗಳಲ್ಲಿ ಹಚ್ಚಿ ಮತ್ತು ಸಾಕ್ಸ್ ಧರಿಸಿ. ಬೆಳಿಗ್ಗೆ ಪಾದಗಳನ್ನು ಸ್ವಚ್ಛಗೊಳಿಸಿ ತೊಳೆಯಿರಿ. ಇದರಿಂದ ಹಿಮ್ಮಡಿ ಮೃದುವಾಗುತ್ತದೆ ಮತ್ತು ಬಿರುಕು ಕಡಿಮೆ ಆಗುತ್ತದೆ.

2. ಜೇನುತುಪ್ಪ ಬಳಸಿ ಪಾದಗಳ ಆರೈಕೆ:

ಒಂದು ಬಕೆಟ್ ಬಿಸಿ ನೀರಿನಲ್ಲಿ ಒಂದು ಕಪ್ ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಕರಗಿಸಿ. ನಿಮ್ಮ ಪಾದಗಳನ್ನು ಅದರಲ್ಲಿ 15–20 ನಿಮಿಷಗಳ ಕಾಲ ನೆನೆಸಿಕೊಳ್ಳಿ. ನಂತರ ಹಿಮ್ಮಡಿಗಳನ್ನು ಸ್ಕ್ರಬ್ ಮಾಡಿ. ಕೊನೆಗೆ ಉಗುರು ಬಿಸಿ ನೀರಿನಿಂದ ಪಾದಗಳನ್ನು ತೊಳೆಯಿರಿ. ಜೇನುತುಪ್ಪದ ನೈಸರ್ಗಿಕ ಆಂಟಿಬ್ಯಾಕ್ಟೀರಿಯಲ್ ಗುಣಗಳು ಹಿಮ್ಮಡಿಯನ್ನು ತೇವಗೊಂಡಂತೆ ಮಾಡಿ, ಚರ್ಮವನ್ನು ಮೃದುವಾಗಿಸುತ್ತವೆ.

3. ತೆಂಗಿನ ಎಣ್ಣೆ ಬಳಸಿ ಮಸಾಜ್:

ರಾತ್ರಿ ಮಲಗುವ ಮುನ್ನ, ಬಿರುಕು ಬಿಟ್ಟ ಹಿಮ್ಮಡಿಗಳನ್ನು ತೆಂಗಿನ ಎಣ್ಣೆಯಿಂದ ಸವಿಸಿ ಮಸಾಜ್ ಮಾಡಿ. ನಂತರ ಸಾಕ್ಸ್ ಧರಿಸಿ. ತೆಂಗಿನ ಎಣ್ಣೆ ನೈಸರ್ಗಿಕ ಮಾಯಿಶ್ಚರೈಸರ್ ಆಗಿದ್ದು, ಹಿಮ್ಮಡಿಯನ್ನು ತೇವವಂತಾಗಿಸುವ ಮೂಲಕ ಚರ್ಮವನ್ನು ಪುನರುಜ್ಜೀವನಗೊಳಿಸುತ್ತದೆ.

4. ಅಲೋವೆರಾ ಜೆಲ್ ಬಳಸಿ ಚಿಕಿತ್ಸೆ:

ಅಲೋವೆರಾ ಜೆಲ್ ಚರ್ಮವನ್ನು ತೇವದಿಂದ ತುಂಬಿಸುತ್ತದೆ ಮತ್ತು ಚರ್ಮದ ಪುನರುದ್ಧಾರಕ್ಕೆ ಸಹಾಯ ಮಾಡುತ್ತದೆ. ಮಲಗುವ ಮುನ್ನ ಪಾದಗಳನ್ನು ಸ್ವಚ್ಛಗೊಳಿಸಿ, ಅಲೋವೆರಾ ಜೆಲ್ ಹಚ್ಚಿ ಸಾಕ್ಸ್ ಧರಿಸಿ. ಇದರಿಂದ ಹಿಮ್ಮಡಿ ವೇಗವಾಗಿ ಗುಣಪಡುತ್ತದೆ ಮತ್ತು ಬಿರುಕು ಕಡಿಮೆ ಆಗುತ್ತದೆ.

5. ಬಾಳೆಹಣ್ಣು ಬಳಸಿ ಪಾದ ಆರೈಕೆ:

ಒಡೆದ ಬಾಳೆಹಣ್ಣನ್ನು ಮ್ಯಾಶ್ ಮಾಡಿ ಹಿಮ್ಮಡಿಗಳಿಗೆ ಹಚ್ಚಿ 15 ನಿಮಿಷಗಳ ಕಾಲ ಬಿಡಿ. ನಂತರ ಪಾದಗಳನ್ನು ಉಗುರು ಬಿಸಿ ನೀರಿನಿಂದ ತೊಳೆಯಿರಿ ಮತ್ತು ಮಾಯಿಶ್ಚರೈಸರ್ ಹಚ್ಚಿ. ಬಾಳೆಹಣ್ಣಿನಲ್ಲಿರುವ ಪೋಷಕ ತತ್ವಗಳು ಚರ್ಮವನ್ನು ತೇವದಿಂದ ತುಂಬಿಸಿ, ಹಿಮ್ಮಡಿ ಮೃದುವಾಗಲು ಸಹಾಯ ಮಾಡುತ್ತವೆ.

ಹಿಮ್ಮಡಿ ಬಿರುಕು ನಿವಾರಣೆಗಾಗಿ ಆಹಾರದಲ್ಲಿ ಗಮನ:

ಚರ್ಮದ ಆರೋಗ್ಯವನ್ನು ಒಳಚಟುವಟಿಕೆಗಳಿಂದ ಮಾತ್ರವಲ್ಲ, ಆಹಾರದಿಂದಲೂ ಬೆಂಬಲಿಸಬಹುದು. ಸತು, ವಿಟಮಿನ್ ಇ, ವಿಟಮಿನ್ ಸಿ, ಒಮೆಗಾ-3 ಮತ್ತು ವಿಟಮಿನ್ ಬಿ3 ಸಮೃದ್ಧ ಆಹಾರವನ್ನು ಸೇವಿಸುವುದು ಉತ್ತಮ. ಇದರಲ್ಲಿ ನಟ್ಸ್, ಬೀಜಗಳು, ಹಸಿರು ಹಣ್ಣು ಮತ್ತು ತರಕಾರಿಗಳನ್ನು ಸೇರಿಸುವುದು ಚರ್ಮಕ್ಕೆ ಅಗತ್ಯ ಪೋಷಣೆ ನೀಡುತ್ತದೆ ಮತ್ತು ಶುಷ್ಕತೆಯನ್ನು ಕಡಿಮೆ ಮಾಡುತ್ತದೆ.

ಇತರೆ ಸಲಹೆಗಳು:

ಪಾದಗಳನ್ನು ದಿನಕ್ಕೆ ಕನಿಷ್ಠ 1–2 ಬಾರಿ ತೇವಗೊಳಿಸಿ, ಒಣಗುವುದನ್ನು ತಡೆಯಿರಿ.

ಈ ಸರಳ ಮನೆಮದ್ದುಗಳು ಮತ್ತು ಆಹಾರ ಕ್ರಮಗಳನ್ನು ಅನುಸರಿಸಿದರೆ, ಚಳಿಗಾಲದಲ್ಲಿ ಬಿರುಕು ಬಿಟ್ಟ ಹಿಮ್ಮಡಿ ಸಮಸ್ಯೆಯನ್ನು ಕಡಿಮೆ ಮಾಡಬಹುದು, ಪಾದಗಳನ್ನು ಮೃದುವಾಗಿರಿಸುವುದರ ಜೊತೆಗೆ ಪಾದಗಳ ಸೌಂದರ್ಯವನ್ನು ಕಾಪಾಡಬಹುದು.

ನ. 26ರಂದು ಧರ್ಮ ಜಾಗೃತಿ ಕಾರ್ಯಕ್ರಮ

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಖಾನತೋಟ ವೀರನಾರಾಯಣ ದೇವಸ್ಥಾನ ಹತ್ತಿರ ಶ್ರೀ ಬಾಲಮಾರುತಿ ದೇವಸ್ಥಾನದ ಬಳಿ ಕ್ರಾಂತಿಸೇನಾ, ಶ್ರೀ ರಾಜರಾಜೇಶ್ವರಿ ಮಹಿಳಾ ಮಂಡಳ, ಶ್ರೀ ಜಗದಂಬಾ ಸೇವಾ ಸಮಿತಿ, ಶ್ರೀ ಬಾಲ ಮಾರುತಿ ಪಾಲಕಿ ಸೇವಾ ಸಮಿತಿ, ಉಪನಯನ ಸಮಿತಿಯ ವತಿಯಿಂದ ನ. 26ರಂದು 4ನೇ ವರ್ಷದ ಎಸ್.ಎಸ್.ಕೆ ಹಾಗೂ ಕ್ಷತ್ರಿಯ ಸಮಾಜದ ಸಾಮೂಹಿಕ ವಿವಾಹ ಹಾಗೂ ಉಪನಯನ ಕಾರ್ಯಕ್ರಮ ನಡೆಯಲಿದ್ದು, ಇದರ ಅಂಗವಾಗಿ ನ. 22ರಂದು ಸಾಯಂಕಾಲ 5 ಗಂಟೆಗೆ ಸನಾತನ ಹಿಂದೂ ಸಮಾಜದ ಯುವತಿಯರಿಗೆ ಹಿಂದೂ ಸಂಸ್ಕಾರದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮುಖ್ಯ ಭಾಷಣಕಾರರಾಗಿ ಪ್ರಖರ ವಾಗ್ಮಿ ಚೈತ್ರಾ ಕುಂದಾಪುರ ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಹಾಗೂ ಸರ್ವ ಹಿಂದೂ ಸಮಾಜದ ಬಾಂಧವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಉಪನಯನ ಸಮಿತಿಯ ಅಧ್ಯಕ್ಷ ಉಮೇಶ್ ಹಬೀಬ, ಸಂಸ್ಥಾಪಕರು ಬಾಬು ಬಾಕಳೆ ಹಾಗೂ ಉಪನಯನ ಸಮಿತಿಯ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ಶಿಕ್ಷಕ ಬಸಪ್ಪ ಎನ್. ಉಕ್ಕುಂದರಿಗೆ ಗೌರವ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಸದಾಕಾಲ ತಮ್ಮ ಪ್ರಾಮಾಣಿಕ ಕಲಿಕೆಯ ಮೂಲಕ ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿರುವ ಕದಾಂಪುರ ಗ್ರಾಮದ ಪ್ರೌಢಶಾಲೆಯ ಗಣಿತ ವಿಷಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಬಸಪ್ಪ ಎನ್. ಉಕ್ಕುಂದ ಅವರು ರೋಣದ ಹೊಳೆಆಲೂರಿನ ಎಸ್.ಎಸ್. ಆಡಿನ ಜನಸೇವಾ ಸಂಸ್ಥೆ ನವೆಂಬರ್ 23ರಂದು ಹಮ್ಮಿಕೊಂಡಿರುವ `ಗದಗ ಜಿಲ್ಲಾ ಕನ್ನಡ ನುಡಿ ಸಮ್ಮೇಳನ’ ಕಾರ್ಯಕ್ರಮದಲ್ಲಿ ಕೊಡಮಾಡುವ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನಾಗಪ್ಪ-ಲಲಿತಮ್ಮ ಅವರು ಬಸಪ್ಪ ಉಕ್ಕುಂದ ಅವರ ತಂದೆ-ತಾಯಿಗಳು. ಯಲ್ಲಾಪುರದಲ್ಲಿ ಪ್ರಾಥಮಿಕ ಶಿಕ್ಷಣ, ದೇವರಗುಡ್ಡದ ಶ್ರೀ ಮಾಂತೇಶ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿದರು. ಪಿಯುಸಿ ಬಳಿಕ ಆರ್‌ಟಿಎಸ್ ಮಹಾವಿದ್ಯಾಲಯ ಕಾಲೇಜಿನಲ್ಲಿ ಬಿಎಸ್ಸಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿಇಡ್ ಶಿಕ್ಷಣ ಪಡೆದರು. ಎಂಎಸ್‌ಸಿ ದೂರ ಶಿಕ್ಷಣದಲ್ಲಿ ಪಡೆದುಕೊಂಡಿದ್ದಾರೆ.

ವೀಣಾ ಅವರನ್ನು ಕೈ ಹಿಡಿದರು. 2010ರಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗಡಿ ಭಾಗವಾಗಿದ್ದ ದಳಸನೂರ ಗ್ರಾಮದಲ್ಲಿ ವೃತ್ತಿ ಜೀವನ ಪ್ರಾರಂಭಿಸಿ, 6 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಮುಂಡರಗಿ ತಾಲೂಕಿನ ಕದಾಂಪುರ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಸೃಜನಶೀಲತೆಯಿಂದ ಗಣಿತದ ಮೂಲಭೂತ ಜ್ಞಾನವನ್ನು ಬಲಗೊಳಿಸಿ, ತಾರ್ಕಿಕ ಚಿಂತನೆಗೆ ಉತ್ತೇಜನ ನೀಡಿ, ಸಮಸ್ಯೆ ಪರಿಹಾರದ ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ರೂಪಿಸುವುದರ ಮೂಲಕ ವಿದ್ಯಾರ್ಥಿಗಳ ಮೆಚ್ಚುಗೆಯ ಶಿಕ್ಷಕರಾಗಿದ್ದಾರೆ.

ಕರ್ನಾಟಕ ರಾಜ್ಯ ಗಣಿತ ವಿಷಯದ ಸಂಚಾಲಕರಾಗಿ, ಗದಗನಲ್ಲಿ ನಡೆದ ಜಿಲ್ಲಾ ಮಟ್ಟದ ಮಕ್ಕಳ ಗಣಿತ, ಗಣಿತ ವಿಷಯದ ಮಾರ್ಗದರ್ಶಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಹಲವು ಗಣಿತ ವಿಷಯ ಕಾರ್ಯಾಗಾರಗಳನ್ನು ನಡೆಸುವುದರ ಮೂಲಕ ಸೇವೆ ಸಲ್ಲಿಸಿದ ಇವರ ಕಾರ್ಯಕ್ಕೆ ಶಿಕ್ಷಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕರಾದ ಬಸಪ್ಪ ಉಕ್ಕುಂದ ಅವರು ಗಣಿತ ಭಾಷೆಯ ಬೋಧನಾ ಕೌಶಲ್ಯದ ಮೂಲಕ ಗ್ರಾಮೀಣ ಮಕ್ಕಳ ಆಶಾಕಿರಣವಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿ ಹಲವು ಉನ್ನತ ಹುದ್ದೆಗಳನ್ನು ಹೊಂದುವಂತೆ ಮಾಡಿದ್ದಾರೆ. ಗಣಿತ ಶಿಕ್ಷಣ ನೀಡುವುದರೊಂದಿಗೆ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಿರಂತರ ಶ್ರಮಿಸುತ್ತಿರುವ ಫಲವಾಗಿ ಸಾವಿರಾರು ವಿದ್ಯಾರ್ಥಿಗಳು ಉನ್ನತ ಹುದ್ದೆಯನ್ನು ಹೊಂದುವಂತೆ ಮಾಡುತ್ತಿರುವ ಶ್ರೇಯಸ್ಸು ಇವರದಾಗಿದೆ.

“ವಿದ್ಯಾರ್ಥಿಗಳ ಕಲಿಕೆಗಾಗಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕ ಬಸಪ್ಪ ಉಕ್ಕುಂದ ಅವರನ್ನು ಗುರುತಿಸಿ ಎಸ್.ಎಸ್. ಆಡಿನ ಜನಸೇವಾ ಸಂಸ್ಥೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಪ್ರಶಂಸನೀಯ.”

ಬಸಪ್ಪ ಚನ್ನಬಸಪ್ಪ ನರೇಗಲ್ಲ.
ಎಸ್‌ಡಿಎಮ್‌ಸಿ ಅಧ್ಯಕ್ಷ, ಕದಾಂಪುರ.

“ವಿದ್ಯಾರ್ಥಿಗಳ ಕಲಿಕೆಗಾಗಿ ನಿರಂತರ ಸೃಜನಾತ್ಮಕವಾದ ಕಾರ್ಯ, ಶಿಸ್ತು, ಸೇವೆ, ವಿದ್ಯಾರ್ಥಿಗಳ ಜ್ಞಾನದ ಪ್ರಾವೀಣ್ಯತೆ ಹೆಚ್ಚಿಸಲು ಶ್ರಮಿಸುತ್ತಿರುವ ಶಿಕ್ಷಕ ಬಸಪ್ಪ ಉಕ್ಕುಂದ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದುಬಂದಿರುವುದು ಸಂತೋಷ ತಂದಿದೆ”

ಎ.ಎಲ್. ಬಿಜಾಪುರ.
ಮುಖ್ಯೋಪಾಧ್ಯಾಯ,
ಸರ್ಕಾರಿ ಪ್ರೌಢಶಾಲೆ ಕದಾಂಪುರ.

“ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗಣಿತ ಸೇರಿದಂತೆ ವಿವಿಧ ವಿಷಯಗಳು ಪ್ರಮುಖ ಪಾತ್ರ ವಹಿಸಲಿದ್ದು, ವಿದ್ಯಾರ್ಥಿಗಳು ಈಗಿನಿಂದಲೇ ಗಣಿತ ವಿಷಯದಲ್ಲಿ ಪ್ರಾವೀಣ್ಯತೆ ಹೊಂದಲು ಮುಂದಾಗಬೇಕು”

ಬಸಪ್ಪ ಎನ್. ಉಕ್ಕುಂದ.
ಪ್ರಶಸ್ತಿ ಪುರಸ್ಕೃತ ಶಿಕ್ಷಕ.

ಯೋಜನೆಗಳ ಪೋಸ್ಟರ್ ಬಿಡುಗಡೆ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತರಾಜನ್ ಜತ್ತಣ್ಣ ಅವರು ಗದಗ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕ್ರಿಶ್ಚಿಯನ್ ಸಮುದಾಯದ ಸಿಎಸ್‌ಐ ಚರ್ಚ್ ಗದಗ ಸಭಾಭವನದಲ್ಲಿ 2025-26ನೇ ಸಾಲಿನ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ನಿಗಮದ ವಿವಿಧ ಯೋಜನೆಗಳ ಪೋಸ್ಟರ್ ಬಿಡುಗಡೆ ಹಾಗೂ ವಿವಿಧ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಕ್ರಿಶ್ಚಿಯನ್ ಸಮುದಾಯದ ಫಲಾನುಭವಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಗದಗ ಜಿಲ್ಲೆಯ ಜಿಲ್ಲಾ ವ್ಯವಸ್ಥಾಪಕರಾದ ಸಯ್ಯದ್ ಜೊಹೈಬುಲ್ಲಾಹ್, ಸಿಬ್ಬಂದಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕ್ರಿಶ್ಚಿಯನ್ ಸಮುದಾಯದ ಮುಖಂಡರಾದ ಜೊಸೇಫ್ ಜೋಶಿ, ಎಲಿಷ್ ಕುಮಾರ, ರಿಜನಾಲ್ಡ್ ಫೌಂಡ್, ಡೋರಿಟಾ ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ಯುವಕರಿಗೆ ಸಂಸ್ಕಾರ, ಸನ್ನಡತೆ, ಶಿಕ್ಷಣ ಮುಖ್ಯ: ಪ್ರಭಾಕರ ಬೋಧಲೆ ಮಹಾರಾಜರು

0

ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ಆಧುನಿಕ ದಿನಮಾನಗಳಲ್ಲಿ ಪಾಲಕ-ಪೋಷಕರು ತಮ್ಮ ಮಕ್ಕಳಿಗೆ ಧರ್ಮದ ಹಾದಿಯಲ್ಲಿ ಮುನ್ನಡೆಸುವ ಮೂಲಕ ಅವರಿಗೆ ಒಳ್ಳೆಯ ಸಂಸ್ಕಾರ, ಸನ್ನಡತೆಯನ್ನು ರೂಢಿಸಬೇಕು. ಸಂಸ್ಕಾರ-ಸನ್ನಡತೆ ಇಲ್ಲದಿದ್ದರೆ ಶಿಕ್ಷಣಕ್ಕಿಲ್ಲ ನೆಲ-ಬೆಲೆ ಎಂದು ಶ್ರೀಕ್ಷೇತ್ರ ಪಂಡರಾಪೂರದ ಪೂಜ್ಯ ಪ್ರಭಾಕರ (ದಾದಾ) ಬೋಧಲೆ ಮಹಾರಾಜರು ಹೇಳಿದರು.

ಅವರು ಗದಗ ವಿಠ್ಠಲ ಮಂದಿರದಲ್ಲಿ ಗದಗ ಭಾವಸಾರ ಕ್ಷತ್ರಿಯ ಸಮಾಜ ಏರ್ಪಡಿಸಿದ್ದ ಸಂತ ಶ್ರೀ ಜ್ಞಾನೇಶ್ವರ ಮಹಾರಾಜರ 729ನೇ ಸಂಜೀವಿನಿ ಸಮಾಧಿ ನಿಮಿತ್ತ ದಿಂಡಿ ಸೋಹಳಾ ಉತ್ಸವದ ಅಂಗವಾಗಿ ಜರುಗಿದ ಕಾಲಕೀರ್ತನೆಯಲ್ಲಿ ಮಾತನಾಡಿದರು.

ಯುವಕರು ಕೇವಲ ಮನೆ, ಸಮಾಜಕ್ಕೆ ಮಾತ್ರವಲ್ಲ, ದೇಶಕ್ಕೆ ಆಸ್ತಿಯಾಗಿದ್ದಾರೆ. ಇಂತಹ ಯುವ ಜನಾಂಗವನ್ನು ದುಶ್ಚಟಗಳಿಂದ ದೂರವಿರಿಸಿ ಸದೃಢವಾಗಿ ಬೆಳೆಸಬೇಕು. ಯು ಎಂದರೆ ಯುದಿಷ್ಠನಲ್ಲಿದ್ದಂತಹ ನೀತಿ, ವ ಎಂದರೆ ವಸಿಷ್ಠನಲ್ಲಿದ್ದಂತಹ ಜ್ಞಾನ, ಕ ಎಂದರೆ ಗಾನ, ಕೇಳು ಎಂದರ್ಥ. ಇವೆಲ್ಲವೂ ಸಮ್ಮಿಳಿತಗೊಂಡು ‘ಯುವಕ’ ಎಂದು ಅರ್ಥೈಸಬಹುದಾಗಿದೆ ಎಂದು ವಿಶ್ಲೇಷಿಸಿದರು.

ಧರ್ಮದ ಸನ್ಮಾರ್ಗದಲ್ಲಿ ಮುನ್ನಡೆಯುವವರನ್ನು ದೇವರು ಎಂದಿಗೂ ಕೈಬಿಡುವುದಿಲ್ಲ. ಅವರಿಗೆ ಭವಿಷ್ಯದಲ್ಲಿ ಫಲ ಪ್ರಾಪ್ತಿ ಆಗುವದು ನಿಶ್ಚಿತ. ಆದ್ದರಿಂದ ಎಲ್ಲರೂ ಧರ್ಮವಂತರಾಗಿ, ಕಾಯಕ ಮಾಡಿ, ದಾಸೋಹ, ಧರ್ಮ ಕಾರ್ಯ ಮಾಡಿ ಎಂದರಲ್ಲದೆ, ಗದಗ ಭಾವಸಾರ ಕ್ಷತ್ರಿಯ ಸಮಾಜವು ಉತ್ಸವ ಸಮಿತಿ, ಯುವಕ ಸಮಿತಿ ಹಾಗೂ ಮಹಿಳಾ ಸಮಿತಿಯ ಮೂಲಕ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಇವರೆಲ್ಲರಿಗೂ ಸೂಕ್ತ ಮಾರ್ಗದರ್ಶನ ಮಾಡಿದ ಸಮಾಜದ ಗುರು-ಹಿರಿಯರು ಅಭಿನಂದನೀಯರು ಎಂದರು.

ಕಾಲಕೀರ್ತನೆ ಬಳಿಕ ಆರತಿ, ಮಹಾಪ್ರಸಾದ ಜರುಗಿತು. ಸಂಜೆ ದಿಂಡಿಯು ನಗರ ಪ್ರದಕ್ಷಿಣೆಯ ನಂತರ ದೇವಸ್ಥಾನಕ್ಕೆ ಮರಳಿತು.

ರಾಮನಗರ: ಕುರಿಗಳ ಮೈತೊಳೆಯಲು ಹೋಗಿ ದಂಪತಿ ನೀರುಪಾಲು!

0

ರಾಮನಗರ:- ಕುರಿಗಳ ಮೈತೊಳೆಯಲು ಹೋಗಿ ದಂಪತಿ ನೀರುಪಾಲಾಗಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಗ್ರಾಮ ಗುಂಗರಹಳ್ಳಿ ಗ್ರಾಮದಲ್ಲಿ ಜರುಗಿದೆ.

ಕೆರೆಯಲ್ಲಿ ಕುರಿಗಳ ಮೈತೊಳೆಯಲು ಹೋದವೇಳೆ ದುರ್ಘಟನೆ ಸಂಭವಿಸಿದೆ. ಗುಂಗರಹಳ್ಳಿ ಗ್ರಾಮದ ಲಕ್ಷ್ಮಣ (71) ಹಾಗೂ ಜಯಮ್ಮ (65) ನೀರುಪಾಲಾದ ದಂಪತಿ. ಪತ್ನಿ ಜಯಮ್ಮ ಮೃತದೇಹ ಪತ್ತೆಯಾಗಿದ್ದು, ಲಕ್ಷ್ಮಣ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರಿದಿದೆ.

ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಕರ್ನಾಟಕದಲ್ಲಿ ಡೀಪ್ ಟೆಕ್ ಪ್ರಾಜೆಕ್ಟ್‌ಗೆ ₹786.43 ಕೋಟಿ ಹೂಡಿಕೆ: ಸಚಿವ ಪ್ರಿಯಾಂಕ ಖರ್ಗೆ!

0

ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ಬಳಿಯ ಬಿಐಇಸಿಯಲ್ಲಿ ನಡೆಯುತ್ತಿರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ 2025ರ 28ನೇ ಆವೃತ್ತಿಗೆ ಇಂದು ತೆರೆ ಬಿದ್ದಿದೆ.

ಮಾದವಾರ BIEC ಆವರಣದಲ್ಲಿ ನಡೆದ ಮೂರು ದಿನಗಳ ಬೆಂಗಳೂರು ಟೆಕ್ ಶೃಂಗಸಭೆ ಅದ್ಧೂರಿಯಾಗಿ ತೆರೆ ಕಂಡಿದೆ. ಶೃಂಗಸಭೆಯಲ್ಲಿ 60 ರಾಷ್ಟ್ರಗಳ ಪ್ರತಿನಿಧಿಗಳು ಭಾಗಿಯಾಗಿದ್ದರು ಅನ್ನೋದು ಮತ್ತೊಂದು ವಿಶೇಷ.

ಶಾಸಕ ಶರತ್ ಬಚ್ಚೇಗೌಡ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಇಂದು ಪ್ರಮುಖ ಕಾರ್ಯಕ್ರಮವಾಗಿ ಪ್ಯೂಚರ್ ಮೇಕರ್ಸ್ ಕಾನ್‌ಕ್ಲೈವ್‌ನಲ್ಲಿ 10 ಸಾವಿರ ಜನ ಸ್ಟಾರ್ಟ್ ಅಪ್‌ ಫೌಂಡರ್ಸ್‌ಗೆ ಸಾನಿಯಾ ಮಿರ್ಜಾ, ಶುಭಾಂಶು ಶುಕ್ಲಾ, ರಿಚಾ ಘೋಷ್ ಸೇರಿದಂತೆ ಹಲವರು ತಮ್ಮ ಜೀವನದ ಅನುಭವ ಹಂಚಿಕೊಂಡಿದ್ದು, ವಿಶೇಷವಾಗಿತ್ತು.

ಇಂದು ಮೂರನೇ ದಿನದ ಶೃಂಗಸಭೆಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್‌ ಖರ್ಗೆ, ಡೀಪ್ ಟೆಕ್ ಪ್ರಾಜೆಕ್ಟ್ ಸಲುವಾಗಿ ಕರ್ನಾಟಕದಲ್ಲಿ 786.43 ಕೋಟಿ ಹೂಡಿಕೆ ಆಗಿದ್ದು, ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಈ ಸಾಧನೆ ಆಗಿದೆ. ಬೆಂಗಳೂರು ಟೆಕ್ ಸಮ್ಮಿಟ್‌ನಿಂದ ಕರ್ನಾಟಕದಲ್ಲಿ ಈ ಸಾಧನೆ ಆಗಿದೆ ಎಂದು ತಿಳಿಸಿದರು.

ಕಾನೂನು- ಸುವ್ಯವಸ್ಥೆ ಸತ್ತು ಹೋಗಿದೆ, ಪೊಲೀಸರ ಬಗ್ಗೆ ದರೋಡೆಕೋರರಿಗೆ ಭಯವಿಲ್ಲ: ಆರ್‌.ಅಶೋಕ್

0

ಬೆಂಗಳೂರು: ಬೆಂಗಳೂರಿನಲ್ಲಿ ಹಗಲಿನಲ್ಲಿ ಜನ ನಿಬಿಡ ಪ್ರದೇಶದಲ್ಲಿ ಕೇವಲ 7 ನಿಮಿಷದಲ್ಲಿ 7 ಕೋಟಿ ರೂ. ದರೋಡೆಯಾಗಿದ್ದು, ಜನರು ಬ್ಯಾಂಕ್‌ಗೆ ಹೋಗಲು ಭಯಪಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ವಿಧಾನಸೌಧದ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಸತ್ತುಹೋಗಿದೆ. ಪೊಲೀಸರ ಬಗ್ಗೆ ದರೋಡೆಕೋರರಿಗೆ, ಕಳ್ಳರಿಗೆ ಭಯವಿಲ್ಲವಾಗಿದೆ. ಬೆಂಗಳೂರಿನ ಬ್ಯಾಂಕುಗಳು ಎಷ್ಟು ಸುರಕ್ಷಿತ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ. ಹಾಡುಹಗಲೇ ದುಷ್ಕರ್ಮಿಗಳು ರಾಬರಿ ನಡೆಸಿ ಪರಾರಿ ಆಗುತ್ತಾರೆ ಎಂದರೆ ಪರಿಸ್ಥಿತಿ ಯಾವ ಸ್ಥಿತಿ ತಲುಪಿದೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದರು.

ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತ, ಧರ್ಮಸ್ಥಳ ಘಟನೆ ಹೀಗೆ ಅನೇಕ ಪ್ರಕರಣಗಳಲ್ಲಿ ಪೊಲೀಸ್‌ ಇಲಾಖೆ ವಿಫಲವಾಗಿದೆ. ಅಧಿಕಾರಕ್ಕಾಗಿ ಕಿತ್ತಾಡುತ್ತಿರುವ ಕಾಂಗ್ರೆಸ್‌ ನಾಯಕರು ದೆಹಲಿಗೆ ಹೋಗಿರುವುದರಿಂದ ಪೊಲೀಸ್‌ ಇಲಾಖೆಯ ಮೇಲೆ ಯಾರಿಗೂ ನಿಯಂತ್ರಣವಿಲ್ಲದಂತಾಗಿದೆ. ಪ್ರತಿಯೊಂದು ಇಲಾಖೆಯಲ್ಲಿ ಕಮಿಶನ್‌ ವ್ಯವಸ್ಥೆ ಇರುವುದರಿಂದ ಎಲ್ಲೂ ಸಾರ್ವಜನಿಕರ ಕೆಲಸಗಳು ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್‌ ನಾಯಕರು ವಚನಭ್ರಷ್ಟರಾಗಿದ್ದಾರೆ. ಸಿದ್ದರಾಮಯ್ಯ ಓಸಿ ಮುಖ್ಯಮಂತ್ರಿ ಎಂದು ಡಿ.ಕೆ.ಶಿವಕುಮಾರ್‌ ಪರೋಕ್ಷವಾಗಿ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಕುರ್ಚಿ ಬಿಡಲ್ಲ ಎಂದು ದಿಟ್ಟತನದಿಂದ ಹೇಳಿದ್ದಾರೆ. ಅಗತ್ಯ ಇಲ್ಲದೆಯೇ ನಾನೇ ಸಿಎಂ ಎಂದು ಪದೇ ಪದೇ ಹೇಳುತ್ತಿದ್ದಾರೆ. ಇನ್ನು ಒಂದು ತಿಂಗಳೊಳಗೆ ಈ ಪ್ರಹಸನದ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ ಎಂದರು.

ಆರ್‌ಸಿಬಿ ಕಾಲ್ತುಳಿತ ಘಟನೆ ವರದಿಯಲ್ಲಿ ಯಾವುದೇ ಹುರುಳಿಲ್ಲ. 11 ಮಂದಿ ಅಮಾಯಕರ ಸಾವಿಗೆ ಸರ್ಕಾರ ಕಾರಣ. ಘಟನೆಯಿಂದಾಗಿ ಯಾವುದೇ ಕ್ರಿಕೆಟ್‌ ಪಂದ್ಯಗಳು ಇಲ್ಲಿ ನಡೆಯುತ್ತಿಲ್ಲ. ಆರ್‌ಸಿಬಿ ಹಾಗೂ ಕೆಎಸ್‌ಸಿಎ ಮೇಲೆ ಗೂಬೆ ಕೂರಿಸಲು ತನಿಖಾ ವರದಿ ಸಿದ್ಧಪಡಿಸಲಾಗಿದೆ ಎಂದರು.

ಸಿಎಂ ಬಳಿ ಅಧಿಕಾರ ಹಸ್ತಾಂತರ ವಿಚಾರ ಚರ್ಚೆ ಮಾಡುವಷ್ಟು ದೊಡ್ಡವನು ನಾನಲ್ಲ: ಡಿ.ಕೆ. ಸುರೇಶ್

0

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಎಂದೂ ಕೊಟ್ಟ ಮಾತನ್ನು ತಪ್ಪುವವರಲ್ಲ. ಅವರು ಯಾರಿಗೆ ಮಾತು ಕೊಟ್ಟರೂ ತಪ್ಪುವುದಿಲ್ಲ” ಎಂದು ಬಮೂಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್ ಅವರು ತಿಳಿಸಿದರು. ಸದಾಶಿವನಗರ ನಿವಾಸದಲ್ಲಿ ಸುರೇಶ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.

ನೀವು ಸಿಎಂ ಅವರನ್ನು ಭೇಟಿ ಮಾಡಿದಾಗ ಅಧಿಕಾರ ಹಸ್ತಾಂತರ ವಿಚಾರ ಚರ್ಚೆ ಮಾಡಿದಿರಾ ಎಂದು ಕೇಳಿದಾಗ, “ಸಿಎಂ ಅವರ ಬಳಿ ಅಧಿಕಾರ ಹಸ್ತಾಂತರ ವಿಚಾರ ಚರ್ಚೆ ಮಾಡಿಲ್ಲ. ಅಷ್ಟು ದೊಡ್ಡವನೂ ನಾನಲ್ಲ. ಅವರು ಹಿರಿಯ ನಾಯಕರು. ಅವರಿಗೆ ತಮ್ಮದೇ ಆದ ಜವಾಬ್ದಾರಿ ಇದೆ. ಕರ್ನಾಟಕದ ಜನರಿಗೆ ಕೊಟ್ಟ ಎಲ್ಲಾ ಭರವಸೆ ಈಡೇರಿಸಿದ್ದಾರೆ. ಈ ಸರ್ಕಾರದಲ್ಲೂ ಅವರು ಯಾರಿಗೆ ಯಾವ ಮಾತು ಕೊಟ್ಟಿದ್ದಾರೋ ಅದರಂತೆ ನಡೆಯುತ್ತಿದ್ದಾರೆ” ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಗಿರುವ ಬಗ್ಗೆ ಕೇಳಿದಾಗ, “ಕರ್ನಾಟಕದ ಜನರ ಆಶೀರ್ವಾದದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಇಂದಿಗೆ ಎರಡೂವರೆ ವರ್ಷ ತುಂಬಿದೆ. ಕೊಟ್ಟ ಮಾತಿನಂತೆ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ. ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ” ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರು ಪವರ್ ಶೇರಿಂಗ್ ವಿಚಾರದಲ್ಲೂ ಕೊಟ್ಟ ಮಾತಿನಂತೆ ನಡೆಯುತ್ತಾರಾ ಎಂದು ಕೇಳಿದಾಗ, “ಅದು ನನಗೆ ಗೊತ್ತಿಲ್ಲದ ವಿಚಾರ. ಅವರು ಈಗ ಮುಖ್ಯಮಂತ್ರಿ ಆಗಿದ್ದಾರೆ. ಈ ವಿಚಾರವನ್ನು ಪಕ್ಷದ ವರಿಷ್ಠರು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡುತ್ತಾರೆ. ಈ ವಿಚಾರದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನೀವು ಮಾಧ್ಯಮಗಳಲ್ಲಿ ತೋರಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ” ಎಂದರು.

ಶಿವಕುಮಾರ್ ಅವರು ಎರಡೂವರೆ ವರ್ಷಗಳ ಬಳಿಕ ಸಿಎಂ ಆಗುತ್ತಾರೆ ಎಂಬ ಚರ್ಚೆ ಅಭಿಮಾನಿ, ಕಾರ್ಯಕರ್ತರಲ್ಲಿದೆ ಎಂದು ಕೇಳಿದಾಗ, “ಎಲ್ಲರಿಗೂ ಆ ಆಸೆ ಇದೆ. ಅವರ ಅಭಿಮಾನಿಗಳು ಹೇಳುತ್ತಿರುತ್ತಾರೆ, ಪೂಜೆ ಮಾಡುತ್ತಿರುತ್ತಾರೆ, ಅವರಿಗೆ ಏನು ಬೇಕೋ ಮಾಡುತ್ತಿರುತ್ತಾರೆ. ನಾವುಗಳು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುವವರು. ಪಕ್ಷ ಏನು ಹೇಳುತ್ತದೆಯೋ ಅದನ್ನು ಸಿಎಂ, ಡಿಸಿಎಂ ಸೇರಿದಂತೆ ಎಲ್ಲಾ ನಾಯಕರು ಪಾಲನೆ ಮಾಡುತ್ತಾರೆ.

ಇದು ನಮ್ಮ, ನಿಮ್ಮ ಮುಂದೆ ನಡೆಯುವ ಚರ್ಚೆಯಲ್ಲ. ಇದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಸದ್ಯಕ್ಕೆ ಸಿಎಂ ಹುದ್ದೆ ಖಾಲಿ ಇಲ್ಲ. ಏನೇ ತೀರ್ಮಾನ ಮಾಡುವುದಿದ್ದರೂ ಹೈಕಮಾಂಡ್ ತೀರ್ಮಾನ ಮಾಡಬೇಕು. ಇಲ್ಲಿ ವೈಯಕ್ತಿಕ ವಿಚಾರ ಇಲ್ಲ. ” ಎಂದು ತಿಳಿಸಿದರು. ನಿನ್ನೆ ಶಿವಕುಮಾರ್ ಅವರು ತ್ಯಾಗದ ಮಾತುಗಳನ್ನು ಆಡಿದ್ದಾರೆ ಎಂದು ಕೇಳಿದಾಗ, “ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ನೀವು ಅವರನ್ನೇ ಕೇಳಿ” ಎಂದು ತಿಳಿಸಿದರು.

ಶಿವಕುಮಾರ್ ಅವರು ಪಕ್ಷದ ಅಧ್ಯಕ್ಷರಾಗಿ ಆರು ವರ್ಷ ಪೂರ್ಣಗೊಳ್ಳುತ್ತಿದೆ ಎಂದು ಕೇಳಿದಾಗ, “ಅವರು ಪಕ್ಷದ ಕೆಲಸ ಮಾಡುತ್ತಿದ್ದು, ನಾಳೆ ಬೇರೆಯವರು ಅಧ್ಯಕ್ಷರಾದರೆ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತಾರೆ. ಯಾರೇ ಅಧ್ಯಕ್ಷರಾದರೂ ಅವರಿಗೆ ಅವಕಾಶ ಮಾಡಿಕೊಡಲು ಶಿವಕುಮಾರ್ ಅವರು ಸಿದ್ಧರಿದ್ದಾರೆ” ಎಂದು ತಿಳಿಸಿದರು.

ಅವರೇ ಮುಂದುವರಿಯುತ್ತಾರೆಯೇ ಎಂದು ಕೇಳಿದಾಗ, “ಅವರು ರಾಜೀನಾಮೆ ನೀಡುವುದಿಲ್ಲ ಎಂದು ನಿಮ್ಮ ಬಳಿ ಹೇಳಿಲ್ಲವಲ್ಲ. ನೀವು ಆ ರೀತಿ ಹೇಳುತ್ತಿದ್ದೀರಾ. ಅವಕಾಶ ಸಿಕ್ಕಾಗ ಏನೆಲ್ಲಾ ಮಾಡಬೇಕೋ ಅದನ್ನು ಶಿವಕುಮಾರ್ ಅವರು ಮಾಡಿದ್ದಾರೆ” ಎಂದರು.

ನಾನು ಅಧ್ಯಕ್ಷ ಸ್ಥಾನದಿಂದ ಇಳಿದರೂ ಮುಂದಾಳತ್ವ ವಹಿಸುವೆ, ಧೈರ್ಯವಾಗಿರಿ ಎಂದು ಕಾರ್ಯಕರ್ತರಿಗೆ ಹೇಳಿರುವ ಬಗ್ಗೆ ಕೇಳಿದಾಗ, “ಒಬ್ಬೊಬ್ಬರೂ ಒಂದೊಂದು ರೀತಿ ವ್ಯಾಖ್ಯಾನ ಮಾಡಿ ಕಾರ್ಯಕರ್ತರನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಹೀಗಾಗಿ ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬುವುದು ಪಕ್ಷ ಹಾಗೂ ಅಧ್ಯಕ್ಷರ ಜವಾಬ್ದಾರಿ. ಹೀಗಾಗಿ ಈ ಮಾತುಗಳನ್ನು ಆಡಿರುತ್ತಾರೆ” ಎಂದು ತಿಳಿಸಿದರು.

Traffic Fine Discount: ಟ್ರಾಫಿಕ್ ದಂಡ ಪಾವತಿಗೆ ಮತ್ತೊಮ್ಮೆ ಶೇ 50 ರಷ್ಟು ರಿಯಾಯಿತಿ ಘೋಷಣೆ!

0

ಬೆಂಗಳೂರು :  ವಾಹನ ಸವಾರರಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಸಿಹಿ ಸುದ್ದಿ ನೀಡಿದ್ದು, ಸಂಚಾರ ನಿಯಮ ಉಲ್ಲಂಘನೆಯ ಬಾಕಿ ಪ್ರಕರಣಗಳ ದಂಡದ ಮೊತ್ತ ಪಾವತಿಯಲ್ಲಿ ಶೇ.50ರಷ್ಟು ರಿಯಾಯಿತಿ ನೀಡಿದೆ.ಈ ಸಂಬಂಧ ಸರ್ಕಾರ ಗುರುವಾರ ಆದೇಶ ಹೊರಡಿಸಿದ್ದು, ಈ ತಿಂಗಳ 21 ರಿಂದ ಡಿಸೆಂಬರ್ 12 ರವರೆಗೆ ಜಾರಿಯಲ್ಲಿರಲಿದ್ದು, ಈ ಅವಧಿಯಲ್ಲಿ ಚಾಲಕರು ತಮ್ಮ ಬಾಕಿ ದಂಡವನ್ನು ಅರ್ಧ ಮೊತ್ತಕ್ಕೆ ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು.

ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳಿಗೆ ಮಾತ್ರ ಈ ರಿಯಾಯಿತಿ ಅನ್ವಯವಾಗಲಿದೆ ಎಂದು ತಿಳಿಸಿದೆ. ಇದರ ಬೆನ್ನಲ್ಲೇ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಪಾವತಿಗೆ ಸಂಚಾರ ಪೊಲೀಸರು ಅವಕಾಶ ನೀಡಿದ್ದಾರೆ. ತ್ವರಿತವಾಗಿ ಸಂಚಾರ ಉಲ್ಲಂಘನೆ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವಂತೆ ಸಂಚಾರ ವಿಭಾಗದ ಪೊಲೀಸರೂ ಮನವಿ ಮಾಡಿದ್ದಾರೆ.

ಬಾಕಿ ಇರುವ ದಂಡದ ವಿವರಗಳನ್ನು ವೀಕ್ಷಿಸುವ ಮತ್ತು ಪಾವತಿಸುವ ವಿಧಾನ

1.ಕರ್ನಾಟಕ ಸ್ಟೇಟ್ ಪೊಲೀಸ್ (ಕೆಎಸ್‌ಪಿ) ಆ್ಯಪ್ ಮುಖಾಂತರ ಪಾವತಿಸಬಹುದು.

2.ಬೆಂಗಳೂರು ಪೊಲೀಸರ ಬಿಟಿಪಿ ಅಸ್ತ್ರಂ ಆ್ಯಪ್ ಮುಖಾಂತರ ಪಾವತಿಸಬಹುದು.

3.ಸಂಚಾರ ಪೊಲೀಸ್ ಠಾಣೆಗಳಲ್ಲಿ ವಾಹನ ನೋಂದಣಿ ಸಂಖ್ಯೆ ವಿವರ ಒದಗಿಸಿ ದಂಡ ಕಟ್ಟಬಹುದು.

4.ಸಂಚಾರ ನಿರ್ವಹಣಾ ಕೇಂದ್ರದಲ್ಲಿ (ಟಿಎಂಸಿ) ಪಾವತಿಸಬಹುದು.

5.ಕರ್ನಾಟಕ ಒನ್/ಬೆಂಗಳೂರು ಒನ್ ವೆಬ್‌ಸೈಟ್‌ನಲ್ಲಿ ವಿವರ ಪಡೆದು ಪಾವತಿಸಬಹುದು.

error: Content is protected !!