Home Blog Page 120

ಬೀದರ್ ಪಶು ವಿವಿ ಹಗರಣ ಸಾಬೀತು: ಮಾಜಿ ಉಪಕುಲಪತಿ ಸೇರಿ 6 ಮಂದಿ ಲೋಕಾಯುಕ್ತ ಬಲೆಗೆ

ಬೀದರ್: ರಾಜ್ಯದಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಬೀದರ್ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಬಹುಕೋಟಿ ಹಗರಣ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಸುಮಾರು 45 ಕೋಟಿ ರೂಪಾಯಿ ಅವ್ಯವಹಾರ ನಡೆದಿರುವುದು ತನಿಖೆಯಲ್ಲಿ ಸಾಬೀತಾಗಿದ್ದು, ಲೋಕಾಯುಕ್ತ ಪೊಲೀಸರು ಮಾಜಿ ಉಪಕುಲಪತಿ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರಲ್ಲಿ ಪಶು ವಿವಿಯ ಮಾಜಿ ಉಪಕುಲಪತಿ ಪ್ರೊ. ಹೆಚ್.ಡಿ. ನಾರಾಯಣಸ್ವಾಮಿ, 2017-18ನೇ ಸಾಲಿನ ಹಣಕಾಸು ನಿಯಂತ್ರಣಾಧಿಕಾರಿಯಾಗಿದ್ದ ಕೆ.ಎಲ್. ಸುರೇಶ್, ಮೃತ್ಯುಂಜಯ ಹಿರೇಮಠ, ಬೊಪಣ್ಣ, ಮಂಜುನಾಥ ಹಾಗೂ ರಾಮಗೊಂಡ ಸೇರಿದ್ದಾರೆ.

ಏನಿದು ಹಗರಣ?

2017-18ರ ಅವಧಿಯಲ್ಲಿ ವಿಶ್ವವಿದ್ಯಾಲಯದ ವಿವಿಧ ಸಾಮಗ್ರಿಗಳ ಖರೀದಿಯ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ 45 ಕೋಟಿ ರೂಪಾಯಿಗೂ ಹೆಚ್ಚು ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪ ಕೇಳಿಬಂದಿತ್ತು. ಯಾವುದೇ ವಸ್ತುಗಳನ್ನು ಖರೀದಿಸದೇ ಖಾಸಗಿ ಎಂಟರ್‌ಪ್ರೈಸಸ್‌ಗಳ ಜೊತೆಗೂಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ವರ್ಗಾವಣೆ ಮಾಡಲಾಗಿದೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಈ ಸಂಬಂಧ 2021ರಲ್ಲಿ ಲೋಕಾಯುಕ್ತ ಪೊಲೀಸರು ಮೊದಲ ಹಂತದ ದಾಳಿ ನಡೆಸಿದ್ದರು. ಬಳಿಕ ತನಿಖೆ ತೀವ್ರಗೊಳಿಸಿದ ಅಧಿಕಾರಿಗಳು 2025ರ ಸೆಪ್ಟೆಂಬರ್ 10ರಂದು ರಾಜ್ಯದ 25ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.

ತನಿಖೆ ವೇಳೆ ವಿಶ್ವವಿದ್ಯಾಲಯದ ಉನ್ನತಾಧಿಕಾರಿಗಳು, ಸಿಬ್ಬಂದಿ ಹಾಗೂ ಖಾಸಗಿ ಸಂಸ್ಥೆಗಳ ಮಾಲೀಕರು ಸೇರಿ ಸಂಚು ರೂಪಿಸಿ ಅವ್ಯವಹಾರ ನಡೆಸಿರುವುದು ದೃಢಪಟ್ಟಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಬೀದರ್ ಜಿಲ್ಲಾ ಸತ್ರ ನ್ಯಾಯಾಲಯ ಬಂಧನ ವಾರಂಟ್ ಜಾರಿಗೊಳಿಸಿತ್ತು. ಅದರ ಬೆನ್ನಲ್ಲೇ ಲೋಕಾಯುಕ್ತ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆ ಇದೆ. ಲೋಕಾಯುಕ್ತ ಎಡಿಜಿಪಿ ಮನೀಷ್ ಕರಬಿಕರ್, ಐಜಿಪಿ ಡಾ. ಎ.ಎಸ್. ಸುಬ್ರಮಣ್ಯೇಶ್ವರ ಹಾಗೂ ಎಸ್‌ಪಿ ಸಿ & ಟಿ ಬದ್ರಿನಾಥ್ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆದಿದ್ದು, ಎಸ್‌ಪಿ ಸಿದ್ದರಾಜು ನೇತೃತ್ವದಲ್ಲಿ ಬೀದರ್ ಲೋಕಾಯುಕ್ತ ಡಿಎಸ್ಪಿ ಹಣಮಂತರಾಯ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.

ಮಹಿಳೆಯರು ರಾತ್ರಿ ಕಾಫಿ ಕುಡಿದರೆ ಏನಾಗುತ್ತದೆ? ಸಂಶೋಧನೆಯಲ್ಲಿ ಹೊರಬಿದ್ದ ಅಚ್ಚರಿಯ ಮಾಹಿತಿ

ಅನೇಕರು ಕಚೇರಿ ಕೆಲಸ, ಅಧ್ಯಯನ ಅಥವಾ ರಾತ್ರಿ ಜಾಗರಣೆಯ ವೇಳೆ ಕಾಫಿ ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಕಾಫಿಯಲ್ಲಿರುವ ಕೆಫೀನ್ ಆಯಾಸವನ್ನು ಕಡಿಮೆ ಮಾಡಿ ದೇಹಕ್ಕೆ ಚೈತನ್ಯ ನೀಡುತ್ತದೆ ಎನ್ನುವುದು ಸಾಮಾನ್ಯ ನಂಬಿಕೆ. ಆದರೆ ಇತ್ತೀಚಿನ ಅಧ್ಯಯನವೊಂದು ರಾತ್ರಿಯಲ್ಲಿ ಕಾಫಿ ಅಥವಾ ಕೆಫೀನ್ ಆಧಾರಿತ ಪಾನೀಯಗಳನ್ನು ಸೇವಿಸುವುದರಿಂದ ನಿದ್ರಾಹೀನತೆ ಮಾತ್ರವಲ್ಲದೆ, ಮಾನಸಿಕ ವರ್ತನೆಯಲ್ಲಿ ಅಪಾಯಕಾರಿ ಬದಲಾವಣೆಗಳೂ ಉಂಟಾಗಬಹುದು ಎಂದು ಎಚ್ಚರಿಸಿದೆ.

ಎಲ್ ಪಾಸೊದಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದ ಪ್ರಕಾರ, ರಾತ್ರಿ ವೇಳೆಯಲ್ಲಿ ಕೆಫೀನ್ ಸೇವಿಸಿದಾಗ ಮೆದುಳಿನ ನಿಯಂತ್ರಣ ಸಾಮರ್ಥ್ಯ ಕುಂಠಿತವಾಗುತ್ತದೆ. ಇದರ ಪರಿಣಾಮವಾಗಿ ವ್ಯಕ್ತಿಗಳು ತಾರ್ಕಿಕ ಯೋಚನೆ ಇಲ್ಲದೆ ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಅನಗತ್ಯ ಅಪಾಯಗಳಿಗೆ ಮುಂದಾಗುವುದು ಸೇರಿದಂತೆ ನಕಾರಾತ್ಮಕ ವರ್ತನೆ ತೋರಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ಜರ್ನಲ್ ಐಸೈನ್ಸ್‌ ಅಧ್ಯಯನದಲ್ಲಿ ಮತ್ತೊಂದು ಮಹತ್ವದ ಅಂಶವೂ ಬೆಳಕಿಗೆ ಬಂದಿದೆ. ಹಗಲಿನಲ್ಲಿ ಕೆಫೀನ್ ಸೇವಿಸಿದಾಗ ಇದೇ ರೀತಿಯ ವರ್ತನಾ ಬದಲಾವಣೆಗಳು ಕಂಡುಬಂದಿಲ್ಲ. ಅಂದರೆ, ಕೆಫೀನ್ ಸೇವಿಸುವ ಸಮಯವು ಮೆದುಳಿನ ಕಾರ್ಯವೈಖರಿ ಮತ್ತು ನಿರ್ಧಾರ ಸಾಮರ್ಥ್ಯದ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಇದಲ್ಲದೆ, ಪುರುಷರಿಗಿಂತ ಮಹಿಳೆಯರಲ್ಲಿ ಈ ಪರಿಣಾಮ ಹೆಚ್ಚು ಕಂಡುಬಂದಿದೆ ಎಂದು ಅಧ್ಯಯನ ತಿಳಿಸಿದೆ. ಮಹಿಳೆಯರ ದೇಹದಲ್ಲಿನ ಹಾರ್ಮೋನ್ ವ್ಯವಸ್ಥೆ ಮತ್ತು ಚಯಾಪಚಯ ಕ್ರಿಯೆಗಳು ಕೆಫೀನ್‌ಗೆ ವಿಭಿನ್ನವಾಗಿ ಪ್ರತಿಕ್ರಿಯಿಸುವುದರಿಂದ ಕಿರಿಕಿರಿ, ಆತಂಕ ಮತ್ತು ಭಾವನಾತ್ಮಕ ಅಸ್ಥಿರತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ವಿಜ್ಞಾನಿಗಳ ಪ್ರಕಾರ, ಸಾಮಾನ್ಯವಾಗಿ ದೇಹ ದಣಿದಾಗ ಅಡೆನೊಸಿನ್ ಎಂಬ ರಾಸಾಯನಿಕ ಮೆದುಳಿನಲ್ಲಿ ಬಿಡುಗಡೆಯಾಗಿ ನಿದ್ರೆಗೆ ಸಹಕಾರ ನೀಡುತ್ತದೆ. ಆದರೆ ಕೆಫೀನ್ ಈ ಪ್ರಕ್ರಿಯೆಯನ್ನು ತಡೆದು ಮೆದುಳನ್ನು ಅತಿಯಾಗಿ ಚುರುಕುಗೊಳಿಸುತ್ತದೆ. ಇದರಿಂದ ರಾತ್ರಿ ವೇಳೆ ಮೆದುಳಿನ ಸಮತೋಲನ ಹದಗೆಟ್ಟು ತೀರ್ಪು ಸಾಮರ್ಥ್ಯ ಮತ್ತು ಭಾವನಾತ್ಮಕ ನಿಯಂತ್ರಣದ ಮೇಲೆ ಪರಿಣಾಮ ಬೀರುತ್ತದೆ.

ಇದರಿಂದ ಮಧ್ಯರಾತ್ರಿ ಅನಗತ್ಯ ಆನ್‌ಲೈನ್ ಖರೀದಿ, ಅಜಾಗರೂಕ ಚಾಲನೆ, ಅತಿವೇಗದಂತಹ ಅಪಾಯಕಾರಿ ವರ್ತನೆಗಳು ಸಂಭವಿಸುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಆರೋಗ್ಯ ತಜ್ಞರ ಪ್ರಕಾರ, ಮಲಗುವ ಮೊದಲು ಕನಿಷ್ಠ ಆರು ಗಂಟೆಗಳ ಕಾಲ ಕಾಫಿ, ಟೀ ಮತ್ತು ಎನರ್ಜಿ ಡ್ರಿಂಕ್ಸ್ ಸೇವನೆ ತಪ್ಪಿಸುವುದು ಉತ್ತಮ. ಇಲ್ಲವಾದರೆ ನಿದ್ರಾಹೀನತೆ, ಆಯಾಸ, ಆತಂಕ ಮತ್ತು ಮಾನಸಿಕ ಒತ್ತಡದ ವಿಷವರ್ತುಲಕ್ಕೆ ಒಳಗಾಗುವ ಅಪಾಯ ಹೆಚ್ಚುತ್ತದೆ ಎಂದು ತಿಳಿಸಿದ್ದಾರೆ.

ತಜ್ಞರು ಹೇಳುವಂತೆ, ಕಾಫಿ ಆರೋಗ್ಯಕರ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವ ಉತ್ತಮ ಪಾನೀಯವಾಗಿದ್ದರೂ, ಅದನ್ನು ಸರಿಯಾದ ಸಮಯದಲ್ಲಿ ಸೇವಿಸುವುದು ಅತ್ಯಂತ ಮುಖ್ಯ. ರಾತ್ರಿ ವೇಳೆಯಲ್ಲಿ ಕಾಫಿ ಸೇವನೆ ಕಡಿಮೆ ಮಾಡಿ ಉತ್ತಮ ನಿದ್ರೆಗೆ ಆದ್ಯತೆ ನೀಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.

ಕಾರ್‌ಗೆ ಬೈಕ್ ಟಚ್ ಮಾಡಿ ರೌಡಿಸಂ.. ಕಾರ್ ಚಾಲಕನಿಗೆ ಯುವತಿಯಿಂದ ಅಶ್ಲೀಲ ಬೈಗುಳ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಸ್ತೆ ರಂಪಾಟದ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಕಾರ್‌ಗೆ ಬೈಕ್ ಟಚ್ ಆದ ವಿಚಾರಕ್ಕೆ ಯುವತಿಯೊಬ್ಬಳು ಕಾರ್ ಚಾಲಕನಿಗೆ ನಡುರಸ್ತೆಯಲ್ಲೇ ಅವಾಚ್ಯ ಪದಗಳಿಂದ ನಿಂದಿಸಿರುವ ಘಟನೆ ನಡೆದಿದೆ.

ನಗರದ 8ನೇ ಮೈಲಿ ರಸ್ತೆಯಲ್ಲಿ ನಿನ್ನೆ ಈ ಘಟನೆ ನಡೆದಿದ್ದು, KA 06 HP 1149 ಸಂಖ್ಯೆಯ ಬೈಕ್‌ನಲ್ಲಿ ಬಂದಿದ್ದ ಯುವತಿ ಎಡಭಾಗಕ್ಕೆ ಟರ್ನ್ ಮಾಡುವ ವೇಳೆ ಕಾರ್‌ಗೆ ಟಚ್ ಮಾಡಿದ್ದಾರೆ ಎನ್ನಲಾಗಿದೆ. ಇಂಡಿಕೇಟರ್ ಹಾಕದೇ ಏಕಾಏಕಿ ಟರ್ನ್ ಮಾಡಿದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.

ಈ ಬಗ್ಗೆ ಪ್ರಶ್ನೆ ಮಾಡಿದ ಕಾರ್ ಚಾಲಕನಿಗೆ ಯುವತಿ ಆಕ್ರೋಶ ವ್ಯಕ್ತಪಡಿಸಿ ಅಶ್ಲೀಲ ಹಾಗೂ ಅವಾಚ್ಯ ಪದಗಳಿಂದ ಬೈದಿದ್ದಾರೆ. ನಡು ರಸ್ತೆಯಲ್ಲೇ ಕೆಟ್ಟ ಪದಗಳನ್ನು ಬಳಸಿ ಗದ್ದಲ ಸೃಷ್ಟಿಸಿದ ದೃಶ್ಯಗಳು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿವೆ ಎನ್ನಲಾಗಿದೆ.

ಇನ್ನೂ, ಘಟನೆ ವೇಳೆ ಯುವತಿ ಹೆಲ್ಮೆಟ್ ಧರಿಸದೇ ಸಂಚಾರ ನಿಯಮ ಉಲ್ಲಂಘಿಸಿರುವುದೂ ಕಂಡುಬಂದಿದೆ. ಘಟನೆ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ.

ಕುಡಿದ ಅಮಲಿನ ಗಲಾಟೆ ಕೊಲೆಯಲ್ಲಿ ಅಂತ್ಯ; ದೊಣ್ಣೆ ಹೊಡೆತಕ್ಕೆ ವ್ಯಕ್ತಿ ಸಾವು

ಬೆಂಗಳೂರು: ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್ ರಸ್ತೆ ಕುಂದಲಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ಮೃತ ವ್ಯಕ್ತಿಯನ್ನು ಮೆಹಬೂಬ್ ಬಾಷಾ (59) ಎಂದು ಗುರುತಿಸಲಾಗಿದ್ದು, ಸುಂದರಮೂರ್ತಿ ಎಂಬಾತ ಕೊಲೆ ಕೃತ್ಯ ಎಸಗಿರುವ ಆರೋಪ ಕೇಳಿಬಂದಿದೆ.

ಮೊನ್ನೆ ಸಂಜೆ ಮೆಹಬೂಬ್ ಬಾಷಾ ಮದ್ಯ ಸೇವಿಸಿ ಮನೆ ಸಮೀಪ ಬಿದ್ದಿದ್ದರು ಎನ್ನಲಾಗಿತ್ತು. ಆರಂಭದಲ್ಲಿ ಇದು ಸಾಮಾನ್ಯ ಅಪಘಾತ ಅಥವಾ ಅಸ್ವಾಭಾವಿಕ ಸಾವು ಎಂದು ಶಂಕಿಸಲಾಗಿತ್ತು. ಆದರೆ ತಲೆಗೆ ಗಂಭೀರ ಗಾಯಗಳಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು.

ಮರಣೋತ್ತರ ಪರೀಕ್ಷೆ ಹಾಗೂ ಸ್ಥಳೀಯರ ವಿಚಾರಣೆ ವೇಳೆ ಇದು ಕೊಲೆ ಪ್ರಕರಣ ಎಂಬುದು ಬಹಿರಂಗವಾಗಿದೆ. ಇಬ್ಬರು ವ್ಯಕ್ತಿಗಳ ನಡುವೆ ನಡೆದ ಗಲಾಟೆ ವೇಳೆ ಆರೋಪಿ ಸುಂದರಮೂರ್ತಿ, ಮೆಹಬೂಬ್ ಬಾಷಾ ಅವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಮೆಹಬೂಬ್ ಬಾಷಾ ಮೃತಪಟ್ಟಿದ್ದಾರೆ. ಆರಂಭದಲ್ಲಿ ದಾಖಲಾಗಿದ್ದ ಯುಡಿಆರ್ ಪ್ರಕರಣವನ್ನು ಇದೀಗ ಕೊಲೆ ಪ್ರಕರಣವಾಗಿ ಪರಿವರ್ತಿಸಲಾಗಿದೆ.

ಈ ಸಂಬಂಧ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ಸುಂದರಮೂರ್ತಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಬಿಸಿಲಿಗೆ ಬ್ರೇಕ್; ಬೆಂಗಳೂರು ಸೇರಿದಂತೆ ಹಲವೆಡೆ ಇಂದು ಗುಡುಗು ಸಹಿತ ಭಾರಿ ಮಳೆ!

ಬೆಂಗಳೂರು: ರಾಜ್ಯಾದ್ಯಂತ ತೀವ್ರ ಬಿಸಿಲು ಮತ್ತು ಉಷ್ಣಾಂಶದಿಂದ ಕಂಗೆಟ್ಟಿದ್ದ ಜನತೆಗೆ ವರುಣದೇವ ಕೊನೆಗೂ ತಂಪಿನ ಸುದ್ದಿ ನೀಡಿದ್ದಾನೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯ ಮತ್ತು ಚಂಡಮಾರುತದ ಪರಿಣಾಮವಾಗಿ ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಆರಂಭವಾಗಿರುವ ಮಳೆಯ ವಾತಾವರಣ ಇಂದು ಕೂಡ ಮುಂದುವರಿಯಲಿದ್ದು, ಮಧ್ಯಾಹ್ನದ ಬಳಿಕ ದಟ್ಟ ಮೋಡ ಕವಿಯುವ ಸಾಧ್ಯತೆ ಇದೆ. ಸಂಜೆ ಅಥವಾ ರಾತ್ರಿ ವೇಳೆಗೆ ನಗರಾದ್ಯಂತ ಗುಡುಗು, ಮಿಂಚು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಮಳೆಯ ಪರಿಣಾಮ ನಗರದಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗುವ ಸಾಧ್ಯತೆ ಇದೆ.

ಇನ್ನು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ದಿನಪೂರ್ತಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕೆಲವೆಡೆ ಗುಡುಗು, ತೀಕ್ಷ್ಣ ಸಿಡಿಲು ಮತ್ತು ಬಿರುಗಾಳಿಯೂ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯುವಾಗ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.

ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಲ್ಲೂ ಗುಡುಗು ಸಹಿತ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.

ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದ್ದು, ಮಳೆಯೊಂದಿಗೆ ಗಾಳಿಯ ಅಬ್ಬರವೂ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮಲೆನಾಡು ಭಾಗದ ಮಡಿಕೇರಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಪ್ರೀ-ಮಾನ್ಸೂನ್ ಮಳೆ ಚುರುಕುಗೊಳ್ಳಲಿದ್ದು, ಕೆಲವೆಡೆ ಬಲವಾದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ.

ಒಟ್ಟಾರೆಯಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಕೆಲ ದಿನಗಳು ತಾಪಮಾನದಲ್ಲಿ ಇಳಿಕೆಯಾಗಲಿದ್ದು, ಮಳೆ ಹಾಗೂ ತಂಪಾದ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.

ಪೊಲೀಸರಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದ ‘ಸ್ಪಾಟ್ ನಾಗ’! ರೌಡಿಯ ಮೂಳೆ ಮುರಿತ

ಬೆಂಗಳೂರು: ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿಶೀಟರ್ ಒಬ್ಬ ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಕೆಳಗೆ ಹಾರಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿಯಲ್ಲಿ ನಡೆದಿದೆ.

ಗಾಯಗೊಂಡ ಆರೋಪಿಯನ್ನು ನಗರದ ಕುಖ್ಯಾತ ರೌಡಿಶೀಟರ್ ನಾಗರಾಜ್ ಅಲಿಯಾಸ್ ‘ಸ್ಪಾಟ್ ನಾಗ’ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಈ ಹಿಂದೆಯೇ ಹಲವು ಪ್ರಕರಣಗಳು ದಾಖಲಾಗಿದ್ದು, ಯುವಕನೊಬ್ಬನಿಗೆ ಚಾಕು ಇರಿದು ಕೊಲೆ ಯತ್ನ ನಡೆಸಿದ ಪ್ರಕರಣದಲ್ಲೂ ಪೊಲೀಸರಿಗೆ ಬೇಕಾಗಿದ್ದ ಆರೋಪಿ ಎನ್ನಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಸ್ಪಾಟ್ ನಾಗ ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿ ರಹಸ್ಯವಾಗಿ ಹೊಸ ಮನೆ ನಿರ್ಮಾಣ ಮಾಡಿಸುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಸೋಲದೇವನಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಲು ದಾಳಿ ನಡೆಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಅಲರ್ಟ್ ಆದ ಸ್ಪಾಟ್ ನಾಗ, ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ತನ್ನನ್ನು ಹಿಡಿಯಲು ಬಂದ ಪೊಲೀಸರನ್ನು ತಳ್ಳಿ ಹಾಕಿ, ಅವರ ಮೇಲೆಯೇ ದಾಳಿ ನಡೆಸಲು ಮುಂದಾಗಿದ್ದಾನೆ ಎಂದು ತಿಳಿದುಬಂದಿದೆ. ಬಳಿಕ ಅಲ್ಲಿಂದ ಎಸ್ಕೇಪ್ ಆಗುವ ಆತುರದಲ್ಲಿ ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಕೆಳಗೆ ಜಿಗಿದಿದ್ದಾನೆ.

ಆದರೆ ಕಟ್ಟಡದಿಂದ ಕೆಳಗೆ ಬಿದ್ದ ರಭಸಕ್ಕೆ ಸ್ಪಾಟ್ ನಾಗ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಪೊಲೀಸರು ಆತನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಆತನ ಸೊಂಟದ ಮೂಳೆ ಜಾಯಿಂಟ್ ಕಂಪ್ರೆಷನ್ ಆಗಿರುವುದು ದೃಢಪಟ್ಟಿದೆ.

ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ಪಾಟ್ ನಾಗ ವಿರುದ್ಧ ಕರ್ತವ್ಯ ನಿರತ ಪೊಲೀಸರಿಗೆ ಅಡ್ಡಿಪಡಿಸಿದ, ಜೀವ ಬೆದರಿಕೆ ಹಾಕಿದ ಹಾಗೂ ಹಲ್ಲೆಗೆ ಯತ್ನಿಸಿದ ಆರೋಪದಡಿ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

ಆಲೂರು ಬಳಿ ಭೀಕರ ಅಪಘಾತ: ಆಟೋ ಪಲ್ಟಿಯಾಗಿ ತಾಯಿ-ಮಗ ದಾರುಣ ಸಾವು!

ಹಾಸನ: ಆಲೂರು ತಾಲೂಕಿನ ಹೊನ್ನೇನಹಳ್ಳಿ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ತಾಯಿ ಹಾಗೂ ಮಗ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಮೃತರನ್ನು ಕುದುರುವಳ್ಳಿ ಗ್ರಾಮದ ಪ್ರಿಯಾಂಕ (28) ಹಾಗೂ ಅವರ ಪುತ್ರ ವಿನಿತ್ (7) ಎಂದು ಗುರುತಿಸಲಾಗಿದೆ. ಮಗನನ್ನು ಹಾಸನದ ಶಾಲೆಗೆ ಸೇರಿಸಲು ವರ್ಗಾವಣೆ ಪತ್ರ ಪಡೆಯಲು ಇಬ್ಬರೂ ಆಟೋದಲ್ಲಿ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಅಪಘಾತದಲ್ಲಿ ಆಟೋ ಚಾಲಕ ಅಬ್ಬಾಸ್ (52) ಹಾಗೂ ಬಾಲಕ ಸಾಗರ್ (13) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಆಲೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಆಲೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

IPL 2026: ಫೈನಲ್ ಟಿಕೆಟ್‌ಗೆ ಹೋರಾಟ: ಇಂದು RCB Vs GT ಕ್ವಾಲಿಫೈಯರ್-1 ರಣರೋಚಕ ಕದನ!

19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನ ಲೀಗ್ ಹಂತದ 70 ಪಂದ್ಯಗಳು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಇದೀಗ ಪ್ಲೇಆಫ್ ಹಂತ ಆರಂಭವಾಗಿದೆ.

ಇಂದು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಧರ್ಮಶಾಲಾದ HPCA ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಪಂದ್ಯ ಸಂಜೆ 7:30ಕ್ಕೆ ಆರಂಭವಾಗಲಿದೆ.

ಕ್ವಾಲಿಫೈಯರ್-1 ಗೆದ್ದ ತಂಡ ನೇರವಾಗಿ ಫೈನಲ್‌ಗೆ ಪ್ರವೇಶಿಸಲಿದೆ. ಸೋತ ತಂಡಕ್ಕೆ ಇನ್ನೂ ಒಂದು ಅವಕಾಶ ಸಿಗಲಿದ್ದು, ಎಲಿಮಿನೇಟರ್ ಪಂದ್ಯದಲ್ಲಿ ಜಯಶಾಲಿಯಾದ ತಂಡದ ವಿರುದ್ಧ ಕ್ವಾಲಿಫೈಯರ್-2 ಆಡಬೇಕಾಗುತ್ತದೆ.

ಈ ಬಾರಿಯ ಪ್ಲೇಆಫ್‌ನಲ್ಲಿ ಕಳೆದ 8 ವರ್ಷಗಳ ಇತಿಹಾಸವೂ ಮಹತ್ವ ಪಡೆದುಕೊಂಡಿದ್ದು, ಕ್ವಾಲಿಫೈಯರ್-1 ಗೆದ್ದ ತಂಡವೇ ಬಹುತೇಕ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿರುವುದು ವಿಶೇಷವಾಗಿದೆ. ಇದರಿಂದ ಇಂದಿನ ಪಂದ್ಯಕ್ಕೆ ಇನ್ನಷ್ಟು ಮಹತ್ವ ಬಂದಿದೆ ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಧರ್ಮಶಾಲಾ ಪಿಚ್ ಬ್ಯಾಟರ್‌ಗಳಿಗೆ ಅನುಕೂಲಕರವಾಗಿದ್ದು, ಹೆಚ್ಚಿನ ಸ್ಕೋರ್ ಪಂದ್ಯ ನಿರೀಕ್ಷಿಸಲಾಗಿದೆ. 200 ರಿಂದ 220 ರನ್ ಗುರಿ ಸುರಕ್ಷಿತ ಎಂದು ವಿಶ್ಲೇಷಕರು ಹೇಳಿದ್ದಾರೆ. ಇಬ್ಬನಿ ಪರಿಣಾಮದಿಂದ ಚೇಸಿಂಗ್ ಮಾಡುವ ತಂಡಕ್ಕೂ ಲಾಭವಾಗುವ ಸಾಧ್ಯತೆ ಇದೆ. ಟಾಸ್ ಕೂಡ ಮಹತ್ವದ ಪಾತ್ರ ವಹಿಸಲಿದೆ.

RCB ತಂಡದಲ್ಲಿ ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ದೇವದತ್ ಪಡಿಕ್ಕಲ್, ಟಿಂ ಡೇವಿಡ್ ಹಾಗೂ ಜಿತೇಶ್ ಶರ್ಮಾ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಜಲ್‌ವುಡ್ ಪ್ರಮುಖ ಶಕ್ತಿಯಾಗಿದ್ದಾರೆ.

ಇತ್ತ ಗುಜರಾತ್ ಟೈಟಾನ್ಸ್ ತಂಡದಲ್ಲಿ ಶುಭಮನ್ ಗಿಲ್, ಸಾಯಿ ಸುದರ್ಶನ್ ಹಾಗೂ ರಶೀದ್ ಖಾನ್, ಕಗಿಸೋ ರಬಾಡಾ, ಮೊಹಮ್ಮದ್ ಸಿರಾಜ್ ಸೇರಿದಂತೆ ಬಲಿಷ್ಠ ಆಟಗಾರರು ತಂಡದ ಆಧಾರವಾಗಿದ್ದಾರೆ.

ಹೀಗಾಗಿ ಇಂದಿನ ಪಂದ್ಯದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂಬುದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು!

ಬೆಳಗಾವಿ: ಜಿಲ್ಲೆಯ ರಾಯಬಾಗ ಪಟ್ಟಣದ ಹೊರವಲಯದಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ರಾಂಗ್ ಸೈಡ್‌ನಲ್ಲಿ ಅತಿವೇಗವಾಗಿ ಬಂದ ಗೂಡ್ಸ್ ಆಟೋ ಬೈಕ್‌ಗೆ ನೇರವಾಗಿ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತರನ್ನು ಬೊಮ್ಮನಾಳ ಗ್ರಾಮದ ನಿವಾಸಿಗಳಾದ ಮಹಾಂತೇಶ್ ಮಾನೆ (27), ಅವರ ಪತ್ನಿ ಸಾಕ್ಷಿ ಮಾನೆ (23) ಹಾಗೂ ಅವರ 9 ತಿಂಗಳ ಮಗು ಸಮರ್ಥ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಹಾಂತೇಶ್ ಮಾನೆ ತಮ್ಮ ಕುಟುಂಬದೊಂದಿಗೆ ಬೊಮ್ಮನಾಳ ಗ್ರಾಮದಿಂದ ರಾಯಬಾಗ ಪಟ್ಟಣದತ್ತ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಈ ವೇಳೆ ಎದುರಿನಿಂದ ರಾಂಗ್ ಸೈಡ್‌ನಲ್ಲಿ ವೇಗವಾಗಿ ಬಂದ ಗೂಡ್ಸ್ ಆಟೋ ಬೈಕ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಡಿಕ್ಕಿಯ ರಭಸಕ್ಕೆ ದಂಪತಿ ಹಾಗೂ ಮಗು ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಅಪಘಾತದ ನಂತರ ಗೂಡ್ಸ್ ಆಟೋ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ಮಾಹಿತಿ ದೊರಕುತ್ತಿದ್ದಂತೆಯೇ ರಾಯಬಾಗ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆಟೋ ಚಾಲಕನಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ. ಒಂದೇ ಕುಟುಂಬದ ಮೂವರು ಮೃತಪಟ್ಟ ಹಿನ್ನೆಲೆಯಲ್ಲಿ ಬೊಮ್ಮನಾಳ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.

ಪೆಟ್ರೋಲ್-ಡೀಸೆಲ್ ಬಳಿಕ ಈಗ ಸಿಎನ್‌ಜಿ ಬೆಲೆ ಹೆಚ್ಚಳ; ದೆಹಲಿಯಲ್ಲಿ ಹೊಸ ದರ ಜಾರಿ!

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ನಡುವೆಯೇ ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಿಎನ್‌ಜಿ ದರದಲ್ಲೂ ಏರಿಕೆ ಕಂಡುಬಂದಿದೆ.

ಇಂದಿನಿಂದ ಜಾರಿಗೆ ಬರುವಂತೆ ಸಂಕುಚಿತ ನೈಸರ್ಗಿಕ ಅನಿಲ (CNG) ಬೆಲೆಯನ್ನು ಪ್ರತಿ ಕೆಜಿಗೆ ₹2 ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ದರದ ಪ್ರಕಾರ ದೆಹಲಿಯಲ್ಲಿ ಸಿಎನ್‌ಜಿ ಪ್ರತಿ ಕೆಜಿ ಬೆಲೆ ₹8.09ಕ್ಕೆ ತಲುಪಿದೆ. ಇತ್ತೀಚಿನ ದಿನಗಳಲ್ಲಿ ಇದು ಎರಡನೇ ಬಾರಿಗೆ ನಡೆದ ದರ ಏರಿಕೆಯಾಗಿದ್ದು, ಕಳೆದ 12 ದಿನಗಳಲ್ಲಿ ಒಟ್ಟಾರೆ ₹6 ಹೆಚ್ಚಳವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಜಾಗತಿಕ ತೈಲ ಮಾರುಕಟ್ಟೆಯ ಅಸ್ಥಿರತೆ ಮತ್ತು ಇಂಧನ ವೆಚ್ಚದ ಏರಿಕೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಸಿಎನ್‌ಜಿ ಬಳಸುವ ಆಟೋ, ಟ್ಯಾಕ್ಸಿ, ಶಾಲಾ ವ್ಯಾನ್ ಹಾಗೂ ಖಾಸಗಿ ವಾಹನ ಚಾಲಕರಿಗೆ ಈ ದರ ಏರಿಕೆ ದೊಡ್ಡ ಹೊರೆ ತಂದಿದೆ.

ಈ ಬೆಲೆ ಏರಿಕೆಯ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಪ್ರಯಾಣ ದರ ಹಾಗೂ ಸರಕು ಸಾಗಣೆ ದರಗಳಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಂಘಟನೆಗಳು ಎಚ್ಚರಿಕೆ ನೀಡಿವೆ.

error: Content is protected !!