ನವದೆಹಲಿ: ದೇಶಾದ್ಯಂತ ಮುಂಗಾರು ಮಳೆ ಚುರುಕುಗೊಂಡಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೃಷಿ ವೆಚ್ಚಗಳಿಗೆ ಆರ್ಥಿಕ ನೆರವಾಗುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯ 23ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ ಶನಿವಾರ ಬಿಡುಗಡೆ ಮಾಡಲಿದೆ.
ಪಶ್ಚಿಮ ಬಂಗಾಳದ ಹೂಗ್ಲಿಯ ತಾರಕೇಶ್ವರದಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಜನೆಯ 23ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ ದೇಶದ 9 ಕೋಟಿಗೂ ಹೆಚ್ಚು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮೆಯಾಗಲಿದೆ.
e-KYC ಕಡ್ಡಾಯ
ಯೋಜನೆಯ 23ನೇ ಕಂತಿನ ಹಣ ಪಡೆಯಲು ರೈತರು ತಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದ e-KYC ಪೂರ್ಣಗೊಳಿಸಿರುವುದು ಕಡ್ಡಾಯ. e-KYC ಮಾಡಿಸದ ಫಲಾನುಭವಿಗಳ ಖಾತೆಗೆ ಈ ಕಂತಿನ ಹಣ ಜಮೆಯಾಗುವುದಿಲ್ಲ.
e-KYC ಮಾಡುವ ವಿಧಾನ:
- PM-Kisan ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- ಮುಖಪುಟದಲ್ಲಿರುವ e-KYC ಆಯ್ಕೆಯನ್ನು ಕ್ಲಿಕ್ ಮಾಡಿ.
- ಆಧಾರ್ ಸಂಖ್ಯೆಯನ್ನು ನಮೂದಿಸಿ OTP ಮೂಲಕ ಪರಿಶೀಲನೆ ಪೂರ್ಣಗೊಳಿಸಿ.
- ವೆಬ್‌ಸೈಟ್‌ನಲ್ಲಿ ಸಾಧ್ಯವಾಗದಿದ್ದರೆ PM-Kisan ಮೊಬೈಲ್ ಆ್ಯಪ್‌ನಲ್ಲಿ Face Authentication ಮೂಲಕ ಅಥವಾ ಹತ್ತಿರದ ಸಾಮಾನ್ಯ ಸೇವಾ ಕೇಂದ್ರದಲ್ಲಿ (CSC) ಬಯೋಮೆಟ್ರಿಕ್ ಮೂಲಕ e-KYC ಪೂರ್ಣಗೊಳಿಸಬಹುದು.
ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಪರಿಶೀಲಿಸುವುದು ಹೇಗೆ?
ಪ್ರತಿ ಕಂತು ಬಿಡುಗಡೆಗೂ ಮುನ್ನ ಕೇಂದ್ರ ಸರ್ಕಾರ ಅರ್ಹ ಫಲಾನುಭವಿಗಳ ಹೊಸ ಪಟ್ಟಿಯನ್ನು ಪ್ರಕಟಿಸುತ್ತದೆ. ಈ ಪಟ್ಟಿಯಲ್ಲಿ ಹೆಸರು ಇರುವ ರೈತರಿಗೆ ಮಾತ್ರ ಹಣ ಜಮೆಯಾಗುತ್ತದೆ.
ಹೆಸರು ಪರಿಶೀಲಿಸುವ ವಿಧಾನ:
- PM-Kisan ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- Beneficiary List ಆಯ್ಕೆಯನ್ನು ಕ್ಲಿಕ್ ಮಾಡಿ.
- ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮದ ವಿವರಗಳನ್ನು ಆಯ್ಕೆ ಮಾಡಿ.
- Get Report ಆಯ್ಕೆಯನ್ನು ಕ್ಲಿಕ್ ಮಾಡಿದರೆ ನಿಮ್ಮ ಗ್ರಾಮದ ಫಲಾನುಭವಿಗಳ ಪಟ್ಟಿ ಕಾಣಿಸುತ್ತದೆ.
- ಅದರಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಬಹುದು.
PM-Kisan ಯೋಜನೆ ಕುರಿತು
ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು 2019ರಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿಗೆ ತಂದಿತ್ತು. ಯೋಜನೆಯಡಿ ಅರ್ಹ ರೈತರಿಗೆ ವರ್ಷಕ್ಕೆ ₹6,000 ಆರ್ಥಿಕ ನೆರವನ್ನು ಮೂರು ಸಮಾನ ಕಂತುಗಳಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಇದುವರೆಗೆ ಯೋಜನೆಯಡಿ 22 ಕಂತುಗಳ ಹಣ ರೈತರ ಖಾತೆಗಳಿಗೆ ಯಶಸ್ವಿಯಾಗಿ ಜಮೆಯಾಗಿದ್ದು, ಇದೀಗ 23ನೇ ಕಂತಿನ ಬಿಡುಗಡೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದೆ.



