ಮೈಸೂರು: ಆಯುರ್ವೇದ ತೈಲ ಮಾರಾಟದ ಉದ್ದೇಶದಿಂದ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಮೈಸೂರು ಜಿಲ್ಲೆಯ ಒಂಬತ್ತು ಮಂದಿ, ಅಗತ್ಯ ಸರ್ಕಾರಿ ಅನುಮತಿ ಇಲ್ಲದೆ ವ್ಯಾಪಾರ ನಡೆಸಿದ ಆರೋಪದಡಿ ಸ್ಥಳೀಯ ಪೊಲೀಸರ ವಶವಾಗಿದ್ದಾರೆ. ಈ ಬೆಳವಣಿಗೆಯಿಂದ ಕುಟುಂಬಸ್ಥರಲ್ಲಿ ಆತಂಕ ಮನೆಮಾಡಿದೆ.
ಹುಣಸೂರು ತಾಲೂಕಿನ ಪಕ್ಷಿರಾಜಪುರ ಗ್ರಾಮದ ನಿವಾಸಿಗಳಾದ ಈ ಒಂಬತ್ತು ಮಂದಿ ಸುಮಾರು ಎರಡು ತಿಂಗಳ ಹಿಂದೆ ಆಫ್ರಿಕಾಕ್ಕೆ ತೆರಳಿದ್ದರು. ಆಯುರ್ವೇದ ಉತ್ಪನ್ನಗಳ ಮಾರಾಟದಲ್ಲಿ ತೊಡಗಿದ್ದ ವೇಳೆ ಸ್ಥಳೀಯ ಕಾನೂನು ಹಾಗೂ ವಾಣಿಜ್ಯ ನಿಯಮಗಳನ್ನು ಉಲ್ಲಂಘಿಸಿರುವ ಆರೋಪ ಕೇಳಿಬಂದಿದ್ದು, ಪೊಲೀಸರು ಬಂಧಿಸಿದ್ದಾರೆ.
ಬಂಧಿತರಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ನಿರೋಣಿ, ಪ್ರಭುದೇವ, ಗಿರೀಶ್, ಷಹಜಹಾನ್, ಶಾಂತಿ ಸೇರಿದಂತೆ ಇತರರು ಸೇರಿದ್ದಾರೆ.
ಸರ್ಕಾರದ ಮಧ್ಯಪ್ರವೇಶಕ್ಕೆ ಮನವಿ
ಬಂಧಿತರ ಕುಟುಂಬ ಸದಸ್ಯರು ಹುಣಸೂರು ಕ್ಷೇತ್ರದ ಮಾಜಿ ಶಾಸಕ ಹೆಚ್.ಪಿ. ಮಂಜುನಾಥ್ ಅವರನ್ನು ಭೇಟಿ ಮಾಡಿ ನೆರವು ಕೋರಿದ್ದಾರೆ. ಬಳಿಕ ಅವರು ಸಚಿವ ಡಾ. ಯತೀಂದ್ರ ಅವರೊಂದಿಗೆ ವಿಷಯ ಚರ್ಚಿಸಿ, ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದೆ.
ಕೇಂದ್ರ ವಿದೇಶಾಂಗ ಸಚಿವಾಲಯ ಹಾಗೂ ಆಫ್ರಿಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮೂಲಕ ಅಗತ್ಯ ರಾಜತಾಂತ್ರಿಕ ಕ್ರಮ ಕೈಗೊಂಡು, ಬಂಧಿತರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಮನವಿ ಸಲ್ಲಿಸಲಾಗಿದೆ.



