ಶಿವಮೊಗ್ಗ: ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಜನ-ಜಾನುವಾರುಗಳ ಕುಡಿಯುವ ನೀರಿನ ಅಗತ್ಯತೆ ಪೂರೈಸಲು ಭದ್ರಾ ಜಲಾಶಯದ ವಿತರಣಾ ನಾಲೆಗಳಿಗೆ 15 ದಿನಗಳ ಕಾಲ ನೀರು ಹರಿಸಲು ನಿರ್ಧರಿಸಲಾಗಿದೆ.
ಸೆಪ್ಟೆಂಬರ್ 17ರ ಮಧ್ಯರಾತ್ರಿ 12 ಗಂಟೆಯಿಂದ ಅಕ್ಟೋಬರ್ 2ರವರೆಗೆ ಭದ್ರಾ ಜಲಾಶಯದಿಂದ ನೀರು ಹರಿಸಲಾಗುತ್ತದೆ. ಅಚ್ಚುಕಟ್ಟು ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ, ಅಂತರ್ಜಲ ವೃದ್ಧಿ ಹಾಗೂ ಕೆರೆ-ಹಳ್ಳಗಳನ್ನು ತುಂಬಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವಂತೆ ರೈತರು, ಶಾಸಕರು ಹಾಗೂ ರೈತ ಮುಖಂಡರು ಒತ್ತಾಯಿಸಿದ್ದರು. ಶಿವಮೊಗ್ಗ, ಭದ್ರಾವತಿ, ದಾವಣಗೆರೆ, ಶಾಂತಿಸಾಗರ ಹಾಗೂ ಮಲೆಬೆನ್ನೂರು ಭಾಗಗಳಲ್ಲೂ ಈ ಸಂಬಂಧ ಪ್ರತಿಭಟನೆಗಳು ನಡೆದಿದ್ದವು.
ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯ ಆಧಾರದ ಮೇಲೆ ಜಲಸಂಪನ್ಮೂಲ ಸಚಿವರು ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಮಧು ಬಂಗಾರಪ್ಪ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನೀರು ಬಿಡುಗಡೆ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ.
ಈ ನೀರನ್ನು ಕೇವಲ ಕುಡಿಯುವ ನೀರು, ಅಂತರ್ಜಲ ವೃದ್ಧಿ ಹಾಗೂ ಕೆರೆಗಳನ್ನು ತುಂಬಿಸಲು ಮಾತ್ರ ಬಳಸಬೇಕು. ಡಿಸೆಂಬರ್ 2026ರವರೆಗೆ ನೀರಿನ ಅಭಾವ ಎದುರಾಗದಂತೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.



