ಮುಂಬೈ: ಕಂಗನಾ ರಣಾವತ್ ಅವರ ಇನ್ಸ್ಟಾಗ್ರಾಮ್ ಸ್ಟೋರಿ ಮತ್ತೆ ಬಾಲಿವುಡ್ನಲ್ಲಿ ವಿವಾದ ಹುಟ್ಟುಹಾಕಿದೆ. ಯಾವುದೇ ಹೆಸರನ್ನು ಉಲ್ಲೇಖಿಸದೇ ನಟಿಯೊಬ್ಬಳ ಉಡುಗೆ, ವರ್ತನೆ ಹಾಗೂ ಪ್ರತಿಭಟನೆಗಳ ಬಗ್ಗೆ ತೆಗೆದುಕೊಂಡ ನಿಲುವನ್ನು ಟೀಕಿಸಿರುವ ಕಂಗನಾ, ಪರೋಕ್ಷವಾಗಿ ಸೋನಾಕ್ಷಿ ಸಿನ್ಹಾ ಅವರನ್ನೇ ಗುರಿಯಾಗಿಸಿಕೊಂಡಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.
ನೀಟ್ ಹಾಗೂ ಜಾರ್ಖಂಡ್ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಕುರಿತ ಪೋಸ್ಟ್ಗೆ ತಾವು ಲೈಕ್ ಮಾಡಿದ್ದಾಗಿ ವೈರಲ್ ಆಗಿದ್ದ ಸ್ಕ್ರೀನ್ಶಾಟ್ ನಕಲಿ ಎಂದು ಕಂಗನಾ ಸ್ಪಷ್ಟಪಡಿಸಿದ್ದಾರೆ. ಆದರೆ ಅದಾದ ಬಳಿಕ ಹಂಚಿಕೊಂಡ ಪೋಸ್ಟ್ ಹೊಸ ಚರ್ಚೆಗೆ ಕಾರಣವಾಗಿದೆ.
ಸ್ಟೈಲಿಂಗ್ಗೂ ಕ್ಲಾಸ್ ತೆಗೆದುಕೊಂಡ ಕಂಗನಾ
‘ಹಾಫ್ ಪ್ಯಾಂಟ್, ಉಲ್ಟಾ ಕ್ಯಾಪ್ ಧರಿಸಿ ಜೇಬುಗಳ್ಳರಂತೆ ಮಾತನಾಡುವ ನಟಿಯೊಬ್ಬಳು ಪ್ರತಿಭಟನಾಕಾರರನ್ನು ಬೆಂಬಲಿಸುತ್ತಿದ್ದಾಳೆ. ಉಡುಗೆ ಕೂಡ ವ್ಯಕ್ತಿತ್ವದ ಭಾಗ’ ಎಂದು ಕಂಗನಾ ಬರೆದುಕೊಂಡಿದ್ದಾರೆ.
‘ನಿನ್ನ ಸಂಗಾತಿ ನಿನ್ನನ್ನು ಜೇಬುಗಳ್ಳನಂತೆ ಕಾಣುವಂತೆ ಮಾಡಿದ್ದಾರೆ. ಹಿಂದೆ ನೀನು ತುಂಬಾ ಅಚ್ಚುಕಟ್ಟಾಗಿದ್ದೆ. ನಿನ್ನ ಅಭಿಪ್ರಾಯಗಳು ನಿನ್ನವೇ ಆಗಿರಲಿ. ಆದರೆ ಸ್ಟೈಲಿಂಗ್ನಲ್ಲಿ ಬದಲಾವಣೆ ಬೇಕು. ಸಹಾಯ ಬೇಕಾದರೆ ನಾನು ಇದ್ದೇನೆ’ ಎಂದು ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವ್ಯಂಗ್ಯವಾಡಿದ್ದಾರೆ.
ಏಕೆ ಸೋನಾಕ್ಷಿ ಹೆಸರು ಕೇಳಿಬರುತ್ತಿದೆ?
ಇತ್ತೀಚೆಗೆ ವಿದ್ಯಾರ್ಥಿ ಪ್ರತಿಭಟನೆ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಪರವಾಗಿ ಸೋನಾಕ್ಷಿ ಸಿನ್ಹಾ ಸಾರ್ವಜನಿಕವಾಗಿ ಧ್ವನಿ ಎತ್ತಿದ್ದರು. ಆ ವೇಳೆ ಟಿ-ಶರ್ಟ್, ಶಾರ್ಟ್ಸ್ ಹಾಗೂ ಕ್ಯಾಪ್ ಧರಿಸಿದ್ದ ಅವರ ವಿಡಿಯೋ ಕೂಡ ವೈರಲ್ ಆಗಿತ್ತು.
ಕಂಗನಾ ಪೋಸ್ಟ್ನಲ್ಲಿರುವ ಉಲ್ಲೇಖಗಳು ಅದಕ್ಕೆ ಹೋಲಿಕೆಯಾಗಿರುವ ಕಾರಣ ನೆಟ್ಟಿಗರು ಸೋನಾಕ್ಷಿ ಸಿನ್ಹಾ ಅವರ ಹೆಸರನ್ನೇ ಮುಂದಿಟ್ಟಿದ್ದಾರೆ. ಆದರೆ ಕಂಗನಾ ಯಾವುದೇ ಹೆಸರನ್ನು ಉಲ್ಲೇಖಿಸಿಲ್ಲ. ಆದರೂ ಅವರ ಪೋಸ್ಟ್ ಬಾಲಿವುಡ್ನಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ.



