ಮೈಸೂರು: ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಜೆಡಿಎಸ್ ಒಳಗಿನ ಅಸಮಾಧಾನ ಸ್ಫೋಟಗೊಂಡಿದ್ದು, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪಕ್ಷದ ನಾಲ್ವರು ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎಂದು ನೇರ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲ, ಅವರು ಪಕ್ಷ ತೊರೆಯುವ ಚರ್ಚೆಯನ್ನೂ ನಡೆಸಿದ್ದರು ಎಂದು ಬಹಿರಂಗಪಡಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ಅಡ್ಡ ಮತದಾನ ಮಾಡಿದವರ ಬಗ್ಗೆ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ. ಅವರು ಯಾವ ಕಾರಣಕ್ಕೆ ಹೀಗೆ ಮಾಡಿದ್ದಾರೆ ಎಂಬುದೂ ಗೊತ್ತಿದೆ. ಇದು ನನಗೆ ಆಘಾತವಲ್ಲ, ಮೊದಲೇ ನಿರೀಕ್ಷಿಸಿದ್ದ ಬೆಳವಣಿಗೆ ಎಂದು ಹೇಳಿದರು.
ಪಕ್ಷದೊಳಗಿನ ನಿಷ್ಠಾವಂತರನ್ನು ಹಾಗೂ ಹಿತಶತ್ರುಗಳನ್ನು ಗುರುತಿಸುವ ಉದ್ದೇಶದಿಂದಲೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೆವು. ನಿನ್ನೆ ಬಂದ ಫಲಿತಾಂಶ ಮತ್ತೊಂದು ಅನುಭವ ನೀಡಿದೆ. ಕೆಲವರ ಮೇಲೆ ಅತಿಯಾದ ನಂಬಿಕೆ ಇಡಬಾರದು ಎಂಬ ಪಾಠವನ್ನು ಈ ಚುನಾವಣೆ ಕಲಿಸಿದೆ ಎಂದು ಅವರು ಕಿಡಿಕಾರಿದರು.
ಪಕ್ಷ ತೊರೆಯುವವರು ಹೋಗಲಿ. ಜೆಡಿಎಸ್ ಅನ್ನು ಯುವಕರ ಕೈಯಲ್ಲಿ ಪುನರ್‌ನಿರ್ಮಿಸುತ್ತೇನೆ. ಮುಂದಿನ ದಿನಗಳಲ್ಲಿ ಹೊಸ ಮುಖಗಳಿಗೆ ಆದ್ಯತೆ ಸಿಗಲಿದೆ ಎಂದು ಘೋಷಿಸಿದರು.
ಜಿ.ಟಿ ದೇವೇಗೌಡ ಕುರಿತು ಪ್ರಶ್ನೆ ಕೇಳುತ್ತಿದ್ದಂತೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “ಅವರ ವಿಚಾರ ಮುಗಿದ ಅಧ್ಯಾಯ. ಅವರು ಒಂದು ಕಾಲಲ್ಲ, ಎರಡು ಕಾಲುಗಳನ್ನೂ ಪಕ್ಷದ ಹೊರಗೆ ಇಟ್ಟಿದ್ದಾರೆ. ಈ ಬಾರಿ ಟಿಕೆಟ್ ನೀಡುವ ವಿಚಾರದಲ್ಲಿ ಅಂತಿಮ ನಿರ್ಧಾರ ನನ್ನದೇ. ಯಾರ ಒತ್ತಡಕ್ಕೂ ಮಣಿಯುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
“ದೊಡ್ಡ ಗೌಡರಿಗೆ ಜಿ.ಟಿ.ಡಿ ಮೇಲೆ ಪ್ರೀತಿ ಇರಬಹುದು. ಆದರೆ ಆ ಭಾವನೆಯನ್ನು ದುರುಪಯೋಗಪಡಿಸಿಕೊಳ್ಳಲು ನಾನು ಅವಕಾಶ ನೀಡುವುದಿಲ್ಲ” ಎಂದು ಹೇಳುವ ಮೂಲಕ ಪಕ್ಷದೊಳಗಿನ ಭಿನ್ನಮತಕ್ಕೆ ತೆರೆ ಎಳೆಯುವ ಸಂದೇಶ ರವಾನಿಸಿದರು.



