ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮೊಬೈಲ್ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ, ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ಖದೀಮನೊಬ್ಬ ಫುಟ್ಪಾತ್ ಮೇಲೆಯೇ ಕುಸಿದು ಬಿದ್ದು ಸಾವನ್ನಪ್ಪಿರುವ ವಿಚಿತ್ರ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತನನ್ನು ಜುನೈದ್ ಎಂದು ಗುರುತಿಸಲಾಗಿದೆ. ಜೂನ್ 16ರಂದು ಕಬ್ಬನ್ಪೇಟೆಯ 14ನೇ ಕ್ರಾಸ್ ಬಳಿ ಪಾದಚಾರಿಯೊಬ್ಬರ ಮೊಬೈಲ್ ಕಸಿದುಕೊಂಡು ಸಹಚರನೊಂದಿಗೆ ಬೈಕ್ನಲ್ಲಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಸಂತ್ರಸ್ತ ಯುವಕ ಕಳ್ಳ ಕಳ್ಳ ಎಂದು ಕೂಗಿಕೊಂಡಿದ್ದಾನೆ. ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಕಾರ್ಮಿಕನೊಬ್ಬ ಸಮಯಪ್ರಜ್ಞೆ ಮೆರೆದು ಕಳ್ಳರನ್ನು ತಡೆಯಲು ಯತ್ನಿಸಿದ ಪರಿಣಾಮ, ಆರೋಪಿಗಳು ಬೈಕ್ನಿಂದ ಕೆಳಗೆ ಬಿದ್ದಿದ್ದಾರೆ.
ಬೈಕ್ನಿಂದ ಬಿದ್ದ ಬಳಿಕ ಕಳ್ಳರು ಕದ್ದ ಮೊಬೈಲ್ನ್ನು ಬಿಟ್ಟು ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಕೆಲವೇ ಕ್ಷಣಗಳಲ್ಲಿ ಜುನೈದ್ ಫುಟ್ಪಾತ್ ಮೇಲೆಯೇ ಕುಸಿದು ಬಿದ್ದಿದ್ದಾನೆ. ಸ್ಥಳೀಯರು ನೆರವಿಗೆ ಧಾವಿಸುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ.
ಪ್ರಾಥಮಿಕ ಮಾಹಿತಿಯಂತೆ ಜುನೈದ್ ಈ ಹಿಂದೆಯೇ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಎನ್ನಲಾಗಿದ್ದು, ಪರಾರಿಯಾಗುವ ವೇಳೆ ಹೃದಯಾಘಾತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನೊಬ್ಬ ಆರೋಪಿ ಅರ್ಬಾಜ್ನನ್ನು ವಶಕ್ಕೆ ಪಡೆದಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ.



