Home Blog Page 125

ಗ್ರಾಹಕರ ಗಮನಕ್ಕೆ; ನಾಳೆ ಬ್ಯಾಂಕ್ ಓಪನ್ ಇರಲ್ಲ! ಯಾಕೆ ಗೊತ್ತಾ?

0

ಬೆಂಗಳೂರು: ಬ್ಯಾಂಕ್ ಗ್ರಾಹಕರು ನೋಡಲೇಬೇಕಾದ ಸ್ಟೋರಿ. ನಾಳೆ ದೇಶಾದ್ಯಂತ ಬ್ಯಾಂಕ್‌ಗಳಲ್ಲಿ ಸೇವೆ ವ್ಯತ್ಯಯವಾಗುವ ಸಾಧ್ಯತೆ ಇದೆ.

ಬ್ಯಾಂಕ್ ಸಿಬ್ಬಂದಿ ತಮ್ಮ ಬೇಡಿಕೆಗಳನ್ನು ಈಡೇರಿಸಲು ಮುಷ್ಕರಕ್ಕೆ ಕರೆ ನೀಡಿದ್ದು, ವಾರಕ್ಕೆ 6 ದಿನದ ಬದಲಿಗೆ 5 ದಿನಗಳ ಕೆಲಸದ ಅವಧಿಯನ್ನು ಖಾಯಂಗೊಳಿಸಲು ಒತ್ತಾಯಿಸಿದ್ದಾರೆ. ಕಳೆದ ಮೂರು ದಿನಗಳಿಂದ ಸರಣಿ ರಜೆಗಳ ಕಾರಣದಿಂದ ಹೀಗಾಗಲೇ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿಲ್ಲ, ಮತ್ತು ನಾಳೆ ಮುಷ್ಕರದಿಂದ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್ ವ್ಯವಹಾರಗಳು ಸ್ಥಗಿತಗೊಳ್ಳುತ್ತವೆ.

ಹೀಗಾಗಿ, ಹಣ ವಿತ್‌ಡ್ರಾ, ಚೆಕ್ ಕ್ಲಿಯರೆನ್ಸ್, ಡಿಮ್ಯಾಂಡ್ ಡ್ರಾಫ್ಟ್ ಸಿದ್ಧಪಡಿಸುವುದು, ಹೊಸ ಖಾತೆ ತೆರೆಯುವುದು ಅಥವಾ KYC ಅಪ್‌ಡೇಟ್ ಮೊದಲಾದ ಸೇವೆಗಳಲ್ಲಿ ವ್ಯತ್ಯಯ ಸಂಭವಿಸುತ್ತದೆ. ಆದರೆ ಡಿಜಿಟಲ್ ಬ್ಯಾಂಕಿಂಗ್, ಮೊಬೈಲ್/ಇಂಟರ್ನೆಟ್ ಬ್ಯಾಂಕಿಂಗ್, UPI ಪಾವತಿಗಳು ಮತ್ತು ಎಟಿಎಂ ಸೇವೆಗಳು ಲಭ್ಯವಾಗುತ್ತವೆ.

ಆದರೂ, ಎಟಿಎಂನಲ್ಲಿ ಹಣದ ಕೊರತೆ ಉಂಟಾಗುವ ಸಾಧ್ಯತೆ ಇದೆ. ಗ್ರಾಹಕರು ಶಾಖೆಗಳಿಗೆ ಭೇಟಿ ನೀಡುವುದಕ್ಕಿಂತ ಮೊದಲು ಈ ಮಾಹಿತಿಯನ್ನು ಗಮನಿಸಿ ತುರ್ತು ಹಣಕಾಸಿನ ವರ್ಗಾವಣೆಗಳಿಗಾಗಿ ಡಿಜಿಟಲ್ ಮಾಧ್ಯಮಗಳನ್ನು ಬಳಸುವುದೇ ಸೂಕ್ತ.

ರಜೆ ಮುಗಿಸಿ ಬೆಂಗಳೂರಿನತ್ತ ಸಿಟಿ ಮಂದಿ| ನೆಲಮಂಗಲ – ಕುಣಿಗಲ್‌ ರಸ್ತೆಯಲ್ಲಿ 4 ಕಿ.ಮೀ ಟ್ರಾಫಿಕ್‌ ಜಾಮ್

0

ನೆಲಮಂಗಲ:- ಸಾಲು ಸಾಲು ರಜೆ ಮುಗಿಸಿಕೊಂಡು ಜನರು ಬೆಂಗಳೂರಿನತ್ತ ಮರಳುತ್ತಿರುವ ಹಿನ್ನೆಲೆಯಲ್ಲಿ ನೆಲಮಂಗಲ–ಕುಣಿಗಲ್ ರಸ್ತೆಯಲ್ಲಿ ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದೆ.

ಮೂರು ದಿನಗಳ ರಜೆ ಕಾರಣದಿಂದ ಊರಿಗೆ ತೆರಳಿದ್ದವರು ಒಂದೇ ವೇಳೆ ವಾಪಸ್ಸಾಗುತ್ತಿರುವುದರಿಂದ ಹಾಸನ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಜಾಮ್ ಆಗಿದ್ದು, ಸುಮಾರು ನಾಲ್ಕು ಕಿಲೋಮೀಟರ್ ದೂರದವರೆಗೆ ವಾಹನಗಳು ನಿಂತುಹೋಗಿವೆ.

ಇದರಿಂದ ವಾಹನ ಸವಾರರು ತೀವ್ರ ಪರದಾಟ ಅನುಭವಿಸುತ್ತಿದ್ದು, ಟ್ರಾಫಿಕ್ ನಿಯಂತ್ರಣಕ್ಕಾಗಿ ನೆಲಮಂಗಲ ಸಂಚಾರಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದ ‘ಧಮ್ಕಿ’ ರಾಜೀವ್ ಗೌಡ; ತಲೆಮರೆಸಿಕೊಂಡಿದ್ದವ ಸಿಕ್ಕಿದ್ದೆಲ್ಲಿ?

0

ಮಂಗಳೂರು: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಜೀವ ಬೆದರಿಕೆ ಹಾಕಿ ತಲೆಮರೆಸಿಕೊಂಡಿದ್ದ ಪುಢಾರಿ ನಾಯಕ ರಾಜೀವ್‌ ಗೌಡ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ನಿನ್ನೆ ಮಂಗಳೂರಿನಿಂದ ರೈಲಿನಲ್ಲಿ ಕೇರಳಕ್ಕೆ ಪರಾರಿಯಾಗಿದ್ದ ರಾಜೀವ್‌ ಗೌಡನನ್ನು ಚಿಕ್ಕಬಳ್ಳಾಪುರ ಪೊಲೀಸರು ಕೇರಳದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಅಳವಡಿಸಿದ್ದ ಬ್ಯಾನರ್‌ಗಳನ್ನು ತೆರವುಗೊಳಿಸಿದ್ದ ವಿಚಾರಕ್ಕೆ ಸಂಬಂಧಿಸಿ ಪೌರಾಯುಕ್ತೆ ಅಮೃತಾ ಗೌಡಗೆ ರಾಜೀವ್‌ ಗೌಡ ಫೋನ್ ಮೂಲಕ ಧಮ್ಕಿ ಹಾಕಿದ್ದನು. ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ನೀಡಿದ್ದ ಆಡಿಯೋ ಪ್ರಕರಣ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಸಂಬಂಧ ಪೌರಾಯುಕ್ತೆ ಅಮೃತಾ ಗೌಡ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡ ಚಿಕ್ಕಬಳ್ಳಾಪುರ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದರು. ದೂರು ದಾಖಲಾಗುತ್ತಿದ್ದಂತೆಯೇ ರಾಜೀವ್‌ ಗೌಡ ತಲೆಮರೆಸಿಕೊಂಡು ಪರಾರಿಯಾಗಿದ್ದ.

ಬಂಧನದಿಂದ ತಪ್ಪಿಸಿಕೊಳ್ಳಲು ಕಾನೂನು ಹೋರಾಟಕ್ಕೂ ಮುಂದಾಗಿದ್ದ ಆತ, ಜಾಮೀನು ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದನು. ಆದರೆ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಇದಾದ ಬಳಿಕ ಆರೋಪಿಯ ಬಂಧನ ಯಾವಾಗ ಎಂಬ ಪ್ರಶ್ನೆ ಉದ್ಭವಿಸಿತ್ತು. ಇದೇ ನಡುವೆ, ರಾಜೀವ್‌ ಗೌಡನ ಕಾರು ಮಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಈ ಮಹತ್ವದ ಸುಳಿವಿನ ಆಧಾರದಲ್ಲಿ ಶಿಡ್ಲಘಟ್ಟ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದರು. ಆರೋಪಿಯ ಚಲನವಲನಗಳ ಮೇಲೆ ನಿಗಾ ವಹಿಸಿ ಕೇರಳಕ್ಕೆ ತೆರಳಿದ ಪೊಲೀಸರು, ರಾಜೀವ್‌ ಗೌಡನನ್ನು ಅಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ಕೇರಳದಿಂದ ಆರೋಪಿಯನ್ನು ನೇರವಾಗಿ ಶಿಡ್ಲಘಟ್ಟಕ್ಕೆ ಕರೆತರುತ್ತಿರುವ ಪೊಲೀಸರು, ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿದ್ಧತೆ ನಡೆಸಿದ್ದಾರೆ. ಬಳಿಕ ರಾಜೀವ್‌ ಗೌಡನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಉಡುಪಿ| ಕೋಡಿಬೆಂಗ್ರೆ ಬಳಿ ಪ್ರವಾಸಿ ದೋಣಿ ಮುಳುಗಿ ಇಬ್ಬರ ಸ್ಥಿತಿ ಗಂಭೀರ!

0

ಉಡುಪಿ: ಲೈಫ್ ಜಾಕೆಟ್ ಧರಿಸದೇ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ದೋಣಿಯೊಂದು ಸಮುದ್ರದಲ್ಲಿ ಅಕಸ್ಮಿಕವಾಗಿ ಮುಳುಗಿದ ಪರಿಣಾಮ ಇಬ್ಬರು ಗಂಭೀರ ಸ್ಥಿತಿಗೆ ತಲುಪಿದ್ದು, ಇನ್ನೂ ಹಲವರು ಅಸ್ವಸ್ಥಗೊಂಡ ಘಟನೆ ಇಂದು ಬೆಳಗ್ಗೆ ಕೋಡಿಬೆಂಗ್ರೆ ಬೀಚ್ ಸಮೀಪ ನಡೆದಿದೆ.

ರೆಸಾರ್ಟ್‌ನಲ್ಲಿ ಉಳಿದಿದ್ದ ಸುಮಾರು 10–15 ಮಂದಿ ಪ್ರವಾಸಿಗರನ್ನು ವಿಹಾರಕ್ಕಾಗಿ ದೋಣಿಯಲ್ಲಿ ಸಮುದ್ರಕ್ಕೆ ಕರೆದೊಯ್ಯಲಾಗಿತ್ತು. ಆದರೆ ದೋಣಿಯಲ್ಲಿ ಯಾರೂ ಲೈಫ್ ಜಾಕೆಟ್ ಧರಿಸಿರಲಿಲ್ಲ ಎನ್ನಲಾಗಿದೆ. ಸಮುದ್ರದಲ್ಲಿ ದೋಣಿ ಮುಳುಗುತ್ತಿದ್ದಂತೆ ಎಲ್ಲ ಪ್ರವಾಸಿಗರು ನೀರಿಗೆ ಬಿದ್ದಿದ್ದು, ಸ್ಥಳೀಯರು ಹಾಗೂ ರಕ್ಷಣಾ ತಂಡದವರು ಹಲವರನ್ನು ರಕ್ಷಿಸಿದ್ದಾರೆ.

ಘಟನೆಯಲ್ಲಿ ನಾಲ್ವರು ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಅವರಲ್ಲಿ ಇಬ್ಬರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಹಿತಿ ಪಡೆದ ಮಲ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿಜಯಪುರ| ಪಿಸ್ತೂಲ್‌ ತೋರಿಸಿ ಚಿನ್ನಾಭರಣದ ಮಳಿಗೆ ದರೋಡೆ; ಇಬ್ಬರು ಮುಸುಕುಧಾರಿಗಳಿಂದ ಕೃತ್ಯ!

0

ವಿಜಯಪುರ:- ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ಭಯಂಕರ ದರೋಡೆ ನಡೆದಿದೆ.

ಮಂಕಿ ಕ್ಯಾಪ್ ಮತ್ತು ಹೆಲ್ಮೆಟ್ ಧರಿಸಿದ್ದ ಇಬ್ಬರು ಮುಸುಕುಧಾರಿಗಳು ಪಿಸ್ತೂಲ್ ತೋರಿಸಿ, ಮಹಾರುದ್ರ ಕಂಚಗಾರರಿಗೆ ಸೇರಿದ ಚಿನ್ನಾಭರಣ ಮತ್ತು ಮೊಬೈಲ್ ಅಂಗಡಿಯನ್ನು ಲೂಟಿ ಮಾಡಿ ಬೈಕಿನಲ್ಲಿ ಪರಾರಿಯಾಗಿದ್ದಾರೆ. ದರೋಡೆ ಸಮಯದಲ್ಲಿ ವಿಡಿಯೋ ಮಾಡಲು ಮುಂದಾದ ಆತ್ಮಲಿಂಗ ಹೂಗಾರ ಎಂಬ ಯುವಕನ ಕಾಲಿಗೆ ಗುಂಡು ತಗುಲಿ ಗಾಯಗೊಂಡಿದ್ದಾರೆ. ಗಾಯಗೊಂಡ ಯುವಕನನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಾಗಿದೆ.

ಈ ದರೋಡೆ ದೃಶ್ಯಾವಳಿ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಳ್ಳರು ಸುಮಾರು 200 ಗ್ರಾಂ ಚಿನ್ನ ಮತ್ತು 1 ಕೆಜಿ ಬೆಳ್ಳಿಯನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಘಟನೆ ಸ್ಥಳಕ್ಕೆ ಎಸ್.ಪಿ. ಲಕ್ಷ್ಮಣ ನಿಂಬರಗಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ದರೋಡೆ ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

“ನಾನು ಜೆಡಿಎಸ್ ಬಿಟ್ಟರೆ ದ್ರೋಹನಾ?” – ಶಿವಲಿಂಗೇಗೌಡ ಸ್ಫೋಟಕ ಹೇಳಿಕೆ, ಗೌಡರ ಕುಟುಂಬದ ವಿರುದ್ಧ ವಾಗ್ದಾಳಿ

0

ಹಾಸನ:“ನಾನು ಜೆಡಿಎಸ್ ಬಿಟ್ಟಿದ್ದಕ್ಕೆ ದ್ರೋಹ ಅಂತೆ. ಆದರೆ ಯಡಿಯೂರಪ್ಪರಿಗೆ ಮುಖ್ಯಮಂತ್ರಿ ಸ್ಥಾನ ಕೊಡ್ತೀನಿ ಅಂತ ಹೇಳಿ ಮೋಸ ಮಾಡಿದ್ರಲ್ಲಾ – ಅದು ದ್ರೋಹ ಅಲ್ಲವಾ?” ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಅರಸೀಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನನ್ನ ವಿರುದ್ಧ ಸಮಾವೇಶ ಮಾಡಿ ಬೈದ್ರು. ಗೌಡರ ಮಕ್ಕಳು ಭಾಷಣ ಮಾಡಿದರು. ದೇವೇಗೌಡರ ಬಗ್ಗೆ ಗೌರವ ಇದೆ, ಅವರ ಬಗ್ಗೆ ಮಾತಾಡಲ್ಲ. ಆದರೆ ಕುಟುಂಬ ರಾಜಕಾರಣಕ್ಕೆ ಬೇಸತ್ತು ಪಕ್ಷ ಬಿಟ್ಟೆ” ಎಂದು ಬಹಿರಂಗ ಆರೋಪ ಮಾಡಿದರು.

ಇನ್ನೂ, “ನಾನು ಮಂತ್ರಿಯಾಗಲೇಬೇಕು ಅನ್ನೋ ಆಸೆ ಇದೆ. ನಿಮಗೆ ಆಸೆ ಇರಬಹುದು, ನನಗೂ ಇದೆ. ಅರಸೀಕೆರೆಯ ಅಭಿವೃದ್ಧಿಗಾಗಿ ಕಾಂಗ್ರೆಸ್‌ಗೆ ಹೋದೆ. ಜೆಡಿಎಸ್ ಬಿಜೆಪಿ ಜೊತೆ ಹೋಗಿದ್ರೆ ತಪ್ಪಿಲ್ಲ ಅಂದ್ರೆ, ನಾನು ಕಾಂಗ್ರೆಸ್‌ಗೆ ಹೋದ್ರೆ ತಪ್ಪಾ?” ಎಂದು ಪ್ರಶ್ನಿಸಿದರು.

“ಮುಂದಿನ ಚುನಾವಣೆಯಲ್ಲಿ ನನ್ನ ವಿರುದ್ಧ ಎಷ್ಟು ಪ್ರಚಾರ ಮಾಡಿದ್ರೂ 50 ಸಾವಿರ ಮತವೂ ಬರಲ್ಲ” ಎಂದು ಭವಿಷ್ಯ ನುಡಿದಿದ್ದು, ಈ ಹೇಳಿಕೆಗಳು ಜೆಡಿಎಸ್ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಚನ್ನಪಟ್ಟಣದಲ್ಲಿ ಗಿಲ್ಲಿ ಕ್ರೇಜ್: ವೇದಿಕೆ ಏರಿದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ

0

ರಾಮನಗರ: ಚನ್ನಪಟ್ಟಣದ ಬೊಂಬೆನಾಡು ಉತ್ಸವ ಕ್ಷಣಾರ್ಧದಲ್ಲಿ ಅಭಿಮಾನಿಗಳ ಅಟ್ಟಹಾಸಕ್ಕೆ ವೇದಿಕೆಯಾಗಿಬಿಟ್ಟಿತು. ಬಿಗ್ ಬಾಸ್ ಸೀಸನ್ 12 ವಿಜೇತ ಗಿಲ್ಲಿ ನಟರಾಜ್ ವೇದಿಕೆಯಲ್ಲಿ ಮಾತಾಡುತ್ತಿದ್ದಾಗಲೇ ಅಭಿಮಾನಿಗಳು ನಿಯಂತ್ರಣ ಕಳೆದುಕೊಂಡು ವೇದಿಕೆ ಮೇಲೆ ಹಾರಿದರು. ಶೇಕ್ ಹ್ಯಾಂಡ್, ಸೆಲ್ಫಿ, ಘೋಷಣೆ… ಒಂದೇ ವೇಳೆ ಗದ್ದಲ ಆರಂಭವಾಯಿತು.

ಪರಿಸ್ಥಿತಿ ಕೈಮೀರದಂತೆ ನೋಡಿಕೊಳ್ಳಲು ಪೊಲೀಸರು ತಕ್ಷಣ ಮಧ್ಯಪ್ರವೇಶ ಮಾಡಿ ಅಭಿಮಾನಿಗಳನ್ನು ವೇದಿಕೆಯಿಂದ ಕೆಳಗಿಳಿಸಿದರು. ಕೆಲಕಾಲ ಕಾರ್ಯಕ್ರಮವೇ ಸ್ಥಗಿತಗೊಂಡ ಸ್ಥಿತಿ ನಿರ್ಮಾಣವಾಯಿತು. ವೇದಿಕೆಯಲ್ಲಿ ಗಿಲ್ಲಿಯ ಭದ್ರತೆ ಕುರಿತಾಗಿ ಆತಂಕ ಮೂಡಿತ್ತು.

ಬಿಗ್ ಬಾಸ್ ಗೆಲುವಿನ ಬಳಿಕ ಗಿಲ್ಲಿಗೆ 50 ಲಕ್ಷ ರೂ. ನಗದು, ಕಾರು ಹಾಗೂ ಸುದೀಪ್ ಅವರಿಂದ 10 ಲಕ್ಷ ರೂ. ಬಹುಮಾನ ದೊರೆತಿದೆ. ಗೆಲುವಿನ ದಿನದಿಂದಲೇ ರಾಜ್ಯಾದ್ಯಂತ ಗಿಲ್ಲಿ ಕ್ರೇಜ್ ಜೋರಾಗಿದ್ದು, ಎಲ್ಲಿ ಹೋದರೂ ಅಭಿಮಾನಿಗಳ ಪ್ರವಾಹ ಕಾಣಿಸುತ್ತಿದೆ.

ಬೊಂಬೆನಾಡು ಗಂಗೋತ್ಸವವನ್ನು ಶಾಸಕ ಸಿ.ಪಿ ಯೋಗೇಶ್ವರ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದು, ಸ್ಥಳೀಯ ಪ್ರತಿಭೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ.

ಚಿಕ್ಕಬಳ್ಳಾಪುರ | ವಿವಾಹಿತ ಪ್ರಿಯತಮೆ ಕೊಂದು ವಿವಾಹಿತ ಪ್ರಿಯಕರ ನೇಣಿಗೆ ಶರಣು

0

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನ ಗರಿಗಿರೆಡ್ಡಿ ಪಾಳ್ಯದಲ್ಲಿ ಪ್ರೇಮ ಸಂಬಂಧವೇ ರಕ್ತಪಾತದ ಅಂತ್ಯ ಕಂಡ ಭೀಕರ ಘಟನೆ ನಡೆದಿದೆ. ಮಾತಿಗೆ ಮಾತು ಬೆಳೆದು ನಡೆದ ಜಗಳದ ಪರಿಣಾಮವಾಗಿ ವಿವಾಹಿತ ಪ್ರಿಯತಮೆಯನ್ನು ಕತ್ತು ಕೊಯ್ದು ಕೊಂದ ಪ್ರಿಯಕರ, ಕೆಲವೇ ಗಂಟೆಗಳಲ್ಲಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತಳಾದ 40 ವರ್ಷದ ಸಲ್ಮಾ, ತನ್ನ ಪ್ರಿಯಕರ 46 ವರ್ಷದ ಬಾಬಾಜಾನ್‌ನೊಂದಿಗೆ ಕಳೆದ ಆರು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಘಟನೆ ನಡೆದ ದಿನ ಇಬ್ಬರ ಮಧ್ಯೆ ತೀವ್ರ ಜಗಳ ಉಂಟಾಗಿದ್ದು, ಆಕ್ರೋಶಗೊಂಡ ಬಾಬಾಜಾನ್ ಚಾಕುವಿನಿಂದ ಸಲ್ಮಾಳ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.

ಕೊಲೆ ಬಳಿಕ ಅಲ್ಲಿಂದ ಪಲಾಯನ ಮಾಡಿದ ಆರೋಪಿ ಬಾಬಾಜಾನ್, ಚೇಳೂರಿನ ತನ್ನ ನಿವಾಸಕ್ಕೆ ತೆರಳಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸಲ್ಮಾಗೆ ಗಂಡ ಮತ್ತು ಇಬ್ಬರು ಮಕ್ಕಳು ಇದ್ದರೆ, ಬಾಬಾಜಾನ್‌ಗೆ ಮೂರು ಮಕ್ಕಳು ಇದ್ದರೂ ಹೆಂಡತಿ ಹಾಗೂ ಮಕ್ಕಳು ಆತನನ್ನು ಬಿಟ್ಟು ಹೋಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಘಟನೆ ತಿಳಿಯುತ್ತಿದ್ದಂತೆ ಚೇಳೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎರಡೂ ಮೃತದೇಹಗಳನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಇದು ಪ್ರೇಮ ಸಂಬಂಧದ ವೈಷಮ್ಯದಿಂದ ನಡೆದ ಡಬಲ್ ಡೆತ್ ಪ್ರಕರಣ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಟೆಕ್ಕಿ ಶರ್ಮಿಳಾ ಕೊಲೆ ರಹಸ್ಯ: ಅತ್ಯಾಚಾರಕ್ಕೆ ಯತ್ನಿಸಿದ್ದಾಗಿ ಬಾಯ್ಬಿಟ್ಟ ಆರೋಪಿ!

0

ಬೆಂಗಳೂರು: ರಾಮಮೂರ್ತಿ ನಗರದಲ್ಲಿ ನಡೆದ ಟೆಕ್ಕಿ ಶರ್ಮಿಳಾ ಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಪೊಲೀಸ್ ತನಿಖೆ ವೇಳೆ ಆರೋಪಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದು, ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದೇನೆ ಎಂದು ಬಾಯ್ಬಿಟ್ಟಿದ್ದಾನೆ.

ಮೃತ ಶರ್ಮಿಳಾಳ ನೆರೆಮನೆಯವನಾಗಿರುವ 18 ವರ್ಷದ ಆರೋಪಿ ಕರ್ನಲ್, ಮೊದಲಿಗೆ ಲೈಂಗಿಕ ದೌರ್ಜನ್ಯ ಆರೋಪವನ್ನು ತಳ್ಳಿಹಾಕಿದ್ದ. ಆದರೆ ವಿಚಾರಣೆ ವೇಳೆ, ಆಕೆಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.

34 ವರ್ಷದ ಟೆಕ್ಕಿ ಶರ್ಮಿಳಾಳನ್ನು ಪ್ರೀತಿಸುತ್ತಿದ್ದ ಆರೋಪಿ, ಒಂದುವರೆ ತಿಂಗಳಿಂದ ಪ್ರತಿದಿನವೂ ಟೆರಸ್‌ನಿಂದ ಆಕೆಯ ಚಲನ-ವಲನಗಳನ್ನು ಗಮನಿಸುತ್ತಿದ್ದ. ಶರ್ಮಿಳಾ ಕೆಲಸಕ್ಕೆ ಹೋಗುವಾಗ ಹಾಗೂ ಕೆಲಸ ಮುಗಿಸಿ ವಾಪಸ್ ಬರುವ ವೇಳೆಯಲ್ಲೂ ಆಕೆಯನ್ನು ಹಿಂಬಾಲಿಸುತ್ತಿದ್ದ ಎನ್ನುವ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಜನವರಿ 3ರ ರಾತ್ರಿ ಆರೋಪಿ ಶರ್ಮಿಳಾ ಮನೆಗೆ ನುಗ್ಗಿ, ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಶರ್ಮಿಳಾ ಜೋರಾಗಿ ಕಿರುಚಿಕೊಂಡಾಗ, ಆಕೆಯ ಬಾಯಿಯನ್ನು ಗಟ್ಟಿಯಾಗಿ ಮುಚ್ಚಿದ್ದಾನೆ. ಮಹಿಳೆ ಎಷ್ಟೇ ಬೇಡಿಕೊಂಡರೂ ಕನಿಕರವಿಲ್ಲದೆ ಆರೋಪಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಕೊಲೆಯನ್ನು ಮುಚ್ಚಿಹಾಕಲು ಟಿಶ್ಯು ಪೇಪರ್‌ನ್ನು ಹಾಸಿಗೆ ಮೇಲೆ ಇಟ್ಟು ಬೆಂಕಿ ಹಚ್ಚಿದ್ದಾನೆ.

ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಬಾಲ್ಕನಿ ಡೋರ್ ಮೂಲಕ ಜಿಗಿದು ಆರೋಪಿ ಪರಾರಿಯಾಗಿದ್ದ. ಅಗ್ನಿ ಅವಘಡದಿಂದ ಮಹಿಳೆ ಸಾವನ್ನಪ್ಪಿದ್ದಾಳೆ ಎಂಬಂತೆ ಬಿಂಬಿಸಲು ಯತ್ನಿಸಿದ್ದಾನೆ. ಆದರೆ ಪೊಲೀಸ್ ವಿಚಾರಣೆಯಲ್ಲಿ ಆತನ ಸತ್ಯ ಹೊರಬಿದ್ದಿದೆ. ಸದ್ಯ ಮೃತರ ಪೋಸ್ಟ್‌ಮಾರ್ಟಮ್ ವರದಿ ಹಾಗೂ ಕೆಲವು ಮೆಡಿಕಲ್ ಸ್ಯಾಂಪಲ್‌ಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ತನಿಖೆ ಮುಂದುವರಿದಿದೆ.

400 ಕೋಟಿ ದರೋಡೆಗೆ ಬಿಗ್‌ ಟ್ವಿಸ್ಟ್: ರಾಬರಿಯಾದ ಹಣ ಆ ಪವರ್‌ಫುಲ್ ರಾಜಕಾರಣಿಗೆ ಸೇರಿದ್ದಾ?

0

ಬೆಳಗಾವಿ: ಚೋರ್ಲಾ ಘಾಟ್ ಬಳಿ ನಡೆದ 400 ಕೋಟಿ ರೂ. ರಾಬರಿ ಪ್ರಕರಣ ಇದೀಗ ಕೇವಲ ಕ್ರೈಂ ಕೇಸ್ ಆಗಿಯೇ ಉಳಿಯದೆ, ರಾಜಕೀಯ ತಲ್ಲಣಕ್ಕೆ ಕಾರಣವಾಗುವ ಮಟ್ಟಕ್ಕೆ ತಲುಪಿದೆ. ಪ್ರಕರಣದಲ್ಲಿ ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ಸಂಪರ್ಕವಿದೆ ಎಂಬ ಶಂಕೆಗಳು ಹೆಚ್ಚಾಗುತ್ತಿದ್ದು, ತನಿಖೆಯ ದಿಕ್ಕು ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ.

ಈ ನಡುವೆ ಮಹಾರಾಷ್ಟ್ರ ಪೊಲೀಸರು ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಆರೋಪವನ್ನು ಕರ್ನಾಟಕದ ಸಚಿವ ಸತೀಶ್ ಜಾರಕಿಹೊಳಿ ಹೊರಿಸಿದ್ದಾರೆ. “ಘಟನೆ ನಡೆದ ಸ್ಥಳ ಯಾವ ರಾಜ್ಯ ವ್ಯಾಪ್ತಿಗೆ ಸೇರಿದೆ ಎಂಬುದೇ ಸ್ಪಷ್ಟವಾಗಿಲ್ಲ. ದೂರು ಬಂದರೆ ನಮ್ಮ ಪೊಲೀಸರು ತನಿಖೆ ಮಾಡುತ್ತಾರೆ. ಆದರೆ ವಾಸ್ತವದಲ್ಲಿ ಏನಾಗಿದೆ ಎಂಬುದು ಇನ್ನೂ ಗೊತ್ತಿಲ್ಲ” ಎಂದು ಅವರು ಹೇಳಿದ್ದಾರೆ. 400 ಕೋಟಿ ಕಾಂಗ್ರೆಸ್‌ಗೆ ಸೇರಿದೆ ಎಂಬ ಮಹಾರಾಷ್ಟ್ರ ಸಿಎಂ ಆರೋಪಕ್ಕೂ ಅವರು ಪ್ರಶ್ನೆ ಎತ್ತಿದ್ದಾರೆ.

ಇತ್ತ, ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಹಣ ಯಾರದ್ದು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಬಿಜೆಪಿ ನಾಯಕರಿಗೆ ಮೊದಲೇ ಮಾಹಿತಿ ಹೇಗೆ ಗೊತ್ತಾಯಿತು? ಇದು ಲೀಗಲ್ ಹಣ ಆಗಲು ಸಾಧ್ಯವೇ ಇಲ್ಲ. ಸಂಪೂರ್ಣ ತನಿಖೆಯಾಗಬೇಕು. ತಪ್ಪಿತಸ್ಥರು ಹೊರಬರಬೇಕು” ಎಂದು ಆಗ್ರಹಿಸಿದ್ದಾರೆ.

ಪ್ರಕರಣ ಇದೀಗ ಕೇವಲ ದರೋಡೆ ಅಲ್ಲ, ಬಹುರಾಜ್ಯ ಹಣದ ಜಾಲವೊಂದರ ಸುಳಿವು ನೀಡುತ್ತಿರುವಂತೆ ಕಾಣಿಸುತ್ತಿದ್ದು, ಎಸ್‌ಐಟಿ ತನಿಖೆಯಿಂದ ಇನ್ನಷ್ಟು ಸ್ಫೋಟಕ ವಿಚಾರಗಳು ಹೊರಬೀಳುವ ಸಾಧ್ಯತೆ ಇದೆ.

error: Content is protected !!