Home Blog Page 126

ವಿಂಜೋ ಆನ್ಲೈನ್ ಗೇಮಿಂಗ್: 3,522 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಬಹಿರಂಗ – ಚಾರ್ಜ್ ಶೀಟ್ ಸಲ್ಲಿಸಿದ ED

0

ಬೆಂಗಳೂರು: ವಿಂಜೋ ಆನ್‌ಲೈನ್ ಗೇಮಿಂಗ್ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಬೆಂಗಳೂರು ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ವಿಂಜೋ ಪ್ರೈವೇಟ್ ಲಿಮಿಟೆಡ್, ಕಂಪನಿಯ ನಿರ್ದೇಶಕರಾದ ಪವನ್ ನಂದಾ, ಸೌಮ್ಯ ಸಿಂಗ್ ರಾಥೋಡ್, ಹಾಗೂ ವಿಂಜೋದ ಭಾರತ ಮತ್ತು ವಿದೇಶಿ ಅಂಗಸಂಸ್ಥೆಗಳಾದ ವಿಂಜೋ ಯುಎಸ್, ವಿಂಜೋ ಎಸ್ಜಿ ಪ್ರೈವೇಟ್ ಲಿಮಿಟೆಡ್ ಮತ್ತು ಜೋ ಪ್ರೈವೇಟ್ ಲಿಮಿಟೆಡ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.

ಇ.ಡಿ ತನಿಖೆಯಲ್ಲಿ ಸುಮಾರು 3,522 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ನಡೆದಿರುವುದು ಬಹಿರಂಗವಾಗಿದೆ. ಈ ಸಂಬಂಧ ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆ ಸೇರಿದಂತೆ ರಾಜಸ್ಥಾನ, ನವದೆಹಲಿ ಮತ್ತು ಗುರುಗ್ರಾಮಗಳಲ್ಲಿ ಎಫ್‌ಐಆರ್‌ಗಳು ದಾಖಲಾಗಿದ್ದವು. ಬಳಿಕ ಇ.ಡಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು.

ತನಿಖೆಯ ಭಾಗವಾಗಿ ವಿಂಜೋ ಕಂಪನಿಯ ಕಚೇರಿಗಳು, ನಿರ್ದೇಶಕರ ನಿವಾಸಗಳು ಮತ್ತು ಸಂಬಂಧಿತ ಸ್ಥಳಗಳಲ್ಲಿ ಇ.ಡಿ ದಾಳಿ ನಡೆಸಿತ್ತು. ಈ ವೇಳೆ ಬ್ಯಾಂಕ್ ಬ್ಯಾಲೆನ್ಸ್, ಪೇಮೆಂಟ್ ಗೇಟ್‌ವೇ ಬ್ಯಾಲೆನ್ಸ್, ಮ್ಯೂಚುವಲ್ ಫಂಡ್‌ಗಳು, ಬಾಂಡ್‌ಗಳು, ಫಿಕ್ಸೆಡ್ ಡೆಪಾಸಿಟ್ ಹಾಗೂ ಕ್ರಿಪ್ಟೋಕರೆನ್ಸಿ ವಾಲೆಟ್‌ಗಳು ಸೇರಿದಂತೆ ಸುಮಾರು 690 ಕೋಟಿ ರೂ. ಮೌಲ್ಯದ ಚರಾಸ್ತಿಗಳನ್ನು ಫ್ರೀಜ್ ಮಾಡಲಾಗಿದೆ.

ವಿಂಜೋ ಮೊಬೈಲ್ ಅಪ್ಲಿಕೇಶನ್ ಮೂಲಕ ರಿಯಲ್ ಮನಿ ಗೇಮ್ಸ್ ನಡೆಸುತ್ತಿದ್ದು, ಸುಮಾರು 25 ಕೋಟಿ ಬಳಕೆದಾರರನ್ನು ಹೊಂದಿತ್ತು. 100ಕ್ಕೂ ಹೆಚ್ಚು ಆಟಗಳನ್ನು ನೀಡುತ್ತಿದ್ದ ಕಂಪನಿ, ಬಳಕೆದಾರರ ಬೆಟ್ಟಿಂಗ್ ಮೊತ್ತದಿಂದ ಕಮಿಷನ್ ಪಡೆಯುತ್ತಿತ್ತು. ಆರಂಭದಲ್ಲಿ ಬೋನಸ್ ನೀಡಿ ಸುಲಭವಾಗಿ ಗೆಲ್ಲುವಂತೆ ಮಾಡಲಾಗುತ್ತಿತ್ತು. ಆದರೆ ನಂತರ ತಂತ್ರಜ್ಞಾನದ ಮೂಲಕ ಬಳಕೆದಾರರನ್ನು ವ್ಯವಸ್ಥಿತವಾಗಿ ಸೋಲಿಸಿ ಸುಮಾರು 734 ಕೋಟಿ ರೂ. ವಂಚನೆ ನಡೆಸಲಾಗಿದೆ ಎಂದು ಇ.ಡಿ ತಿಳಿಸಿದೆ.

ಭಾರತ ಸರ್ಕಾರ ರಿಯಲ್ ಮನಿ ಗೇಮ್ಸ್ ನಿಷೇಧಿಸಿದ ನಂತರವೂ, ಬಳಕೆದಾರರ 47.66 ಕೋಟಿ ರೂ. ಠೇವಣಿಯನ್ನು ವಿಂಜೋ ಹಿಂದಿರುಗಿಸಿಲ್ಲ. 2021–22ನೇ ಆರ್ಥಿಕ ವರ್ಷದಲ್ಲಿ 3,522.05 ಕೋಟಿ ರೂ. ವಂಚನೆಯಿಂದ ಗಳಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಅಕ್ರಮವಾಗಿ ಗಳಿಸಿದ ಹಣವನ್ನು ಯುಎಸ್‌ಎ ಮತ್ತು ಸಿಂಗಾಪುರದ ಶೆಲ್ ಕಂಪನಿಗಳಿಗೆ ವರ್ಗಾಯಿಸಿದ್ದು, ವಿದೇಶಿ ನೇರ ಹೂಡಿಕೆ ಸೋಗಿನಲ್ಲಿ ಸುಮಾರು 55 ಮಿಲಿಯನ್ ಯುಎಸ್ ಡಾಲರ್ ಹಣ ವಿದೇಶಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿರುವುದು ಬಹಿರಂಗವಾಗಿದೆ ಎಂದು ಇ.ಡಿ ಹೇಳಿದೆ.

400 ಕೋಟಿ ರೂ. ದರೋಡೆ ಪ್ರಕರಣ: ಮಹಾರಾಷ್ಟ್ರ ಪೊಲೀಸರು ಸರಿಯಾಗಿ ಮಾಹಿತಿ ನೀಡುತ್ತಿಲ್ಲ – ಸತೀಶ್ ಜಾರಕಿಹೊಳಿ

0

ಬೆಳಗಾವಿ: ಚೋರ್ಲಾ ಘಾಟ್‌ನಲ್ಲಿ ನಡೆದ 400 ಕೋಟಿ ರೂ. ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಮ್ಮ ಎಸ್‌ಪಿ ಮಹಾರಾಷ್ಟ್ರಕ್ಕೆ ಪತ್ರ ಬರೆದಿದ್ದಾರೆ ಮತ್ತು ನಮ್ಮ ಪೊಲೀಸ್ ತಂಡ ಅಲ್ಲಿಗೆ ಭೇಟಿ ನೀಡಿದೆ. ಆದರೆ ಮಹಾರಾಷ್ಟ್ರ ಪೊಲೀಸರು ಸರಿಯಾದ ಮಾಹಿತಿ ನೀಡುತ್ತಿಲ್ಲ. ಮಾಹಿತಿ ನೀಡಿದರೆ ನಮ್ಮ ಕೆಲಸವನ್ನು ನಾವು ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಇಂದು 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಘಟನೆ ಅಕ್ಟೋಬರ್ 16ರಂದು ನಡೆದಿದೆ ಎಂದು ತಿಳಿಸಿದರು. ಘಟನೆ ನಡೆದಿರುವುದು ಚೋರ್ಲಾ ಘಾಟ್ ಗಡಿಭಾಗವಾಗಿದ್ದು, ಅದು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೆ ಸಂಪರ್ಕ ಹೊಂದಿದೆ. ಘಟನೆ ನಡೆದ ಸ್ಥಳ ಯಾವ ರಾಜ್ಯದ ವ್ಯಾಪ್ತಿಗೆ ಸೇರಿದೆ ಎಂಬುದು ಮೊದಲು ಸ್ಪಷ್ಟವಾಗಬೇಕಿದೆ ಎಂದು ಹೇಳಿದರು.

ಈ ಪ್ರಕರಣದಲ್ಲಿ ಕರ್ನಾಟಕ ಪೊಲೀಸರ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, “ಅವರ ಜನರೇ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅದು ಎಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ. ದೂರುದಾರನೇ ಬಂದು ಪ್ರಕರಣದಲ್ಲಿ ಪೊಲೀಸರ ಪಾತ್ರದ ಬಗ್ಗೆ ಹೇಳಬೇಕು. ಆಗ ಸತ್ಯ ಗೊತ್ತಾಗುತ್ತದೆ” ಎಂದು ಹೇಳಿದರು.

400 ಕೋಟಿ ರೂ. ಹಣ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೆ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, “ಆ ಹಣವನ್ನು ಎಣಿಸಿದವರು ಯಾರು? ಇಲ್ಲಿ ಕಾಂಗ್ರೆಸ್–ಬಿಜೆಪಿ ಎಂಬ ಪ್ರಶ್ನೆಯೇ ಇಲ್ಲ. ಎಲ್ಲ ಪಕ್ಷದವರೂ ಸೇರಿಯೇ ಇರುತ್ತಾರೆ. ಮೊದಲಿಗೆ ಘಟನೆ ಎಲ್ಲಿ ನಡೆದಿದೆ ಎಂಬುದೇ ಗೊತ್ತಿಲ್ಲ” ಎಂದು ತಿಳಿಸಿದರು.

ಗಣರಾಜ್ಯೋತ್ಸವ ದಿನದಂದೇ ತಪ್ಪಿದ ಭಾರಿ ದುರಂತ: BMTC ಬಸ್‌ʼಗೆ ಗುದ್ದಿದ ಪ್ಯಾಸೆಂಜರ್ ರೈಲು

0

ಬೆಂಗಳೂರು: ಗಣರಾಜ್ಯೋತ್ಸವದ ದಿನವೇ ಸಂಭವಿಸಬಹುದಾದ ಭಾರಿ ದುರಂತವೊಂದು ಅದೃಷ್ಟವಶಾತ್ ತಪ್ಪಿದೆ. ಕಾಡುಗೋಡಿ ಸಮೀಪದ ಸಾದರಮಂಗಲದಲ್ಲಿ ಬಿಎಂಟಿಸಿ ಬಸ್‌ಗೆ ಪ್ಯಾಸೆಂಜರ್ ರೈಲು ಗುದ್ದಿದ ಘಟನೆ ನಡೆದಿದೆ.

ಪ್ರಯಾಣಿಕರನ್ನು ಇಳಿಸಿದ ನಂತರ ಬಸ್ ಡಿಪೋಗೆ ತೆರಳುವ ಸಲುವಾಗಿ ರಿವರ್ಸ್ ಮಾಡುತ್ತಿದ್ದ ಸಂದರ್ಭದಲ್ಲೇ, ಹಿಂಬದಿಯಿಂದ ವೇಗವಾಗಿ ಬಂದ ಪ್ಯಾಸೆಂಜರ್ ರೈಲು ಬಸ್‌ಗೆ ಗುದ್ದಿದೆ.

ಈ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಆದರೆ ರೈಲು ಗುದ್ದಿದ ತೀವ್ರತೆಗೆ ಬಿಎಂಟಿಸಿ ಬಸ್‌ನ ಹಿಂಭಾಗ ಸಂಪೂರ್ಣವಾಗಿ ಚಿದ್ರಚಿದ್ರವಾಗಿದೆ.

ಗುದ್ದಿದ ರೈಲು ಎಸ್‌ಎಂಬಿಟಿ – ಟಾಟಾನಗರ ಮಾರ್ಗದಲ್ಲಿ ಸಂಚರಿಸುತ್ತಿತ್ತು. ಬಿಎಂಟಿಸಿ ಬಸ್ ಸಾದರಮಂಗಲದಲ್ಲಿ ಪ್ರಯಾಣಿಕರನ್ನು ಇಳಿಸಿ ಡಿಪೋ ನಂಬರ್ 51ಕ್ಕೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.

ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ರೈಲ್ವೆ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.

ಗಡಿಭಾಗದಲ್ಲಿ 400 ಕೋಟಿ ದರೋಡೆ ಪ್ರಕರಣ: ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದೇನು..?

0

ತುಮಕೂರು: ಬೆಳಗಾವಿ–ಮಹಾರಾಷ್ಟ್ರ ಗಡಿಭಾಗದಲ್ಲಿ ನಡೆದ ಸುಮಾರು 400 ಕೋಟಿ ರೂ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರಕರಣದ ತನಿಖೆಗೆ ಮಹಾರಾಷ್ಟ್ರ ಸರ್ಕಾರ ವಿಶೇಷ ತನಿಖಾ ತಂಡ (SIT) ರಚನೆ ಮಾಡಿದೆ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರ ಪೊಲೀಸ್ ತನಿಖೆಯಿಂದ ಯಾವ ವರದಿ ಬರುತ್ತದೆಯೋ ಅದರ ನಂತರವೇ ಸಂಪೂರ್ಣ ಸತ್ಯ ತಿಳಿದುಬರಲಿದೆ ಎಂದು ಹೇಳಿದರು. ಪ್ರಸ್ತುತ ಪ್ರಕರಣದಲ್ಲಿ ಸಾಕಷ್ಟು ಗೊಂದಲಗಳಿದ್ದು, ನಮಗೂ ಕೆಲವೊಂದು ಮಾಹಿತಿಗಳು ಲಭ್ಯವಾಗಿವೆ. ಆದರೆ ಆ ಮಾಹಿತಿಗಳಲ್ಲೂ ಕನ್‌ಫ್ಯೂಷನ್ ಇರುವುದರಿಂದ ಸ್ಪಷ್ಟವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಗೃಹ ಸಚಿವರು ಹೇಳಿದರು.

ಈ ಹಿನ್ನೆಲೆಯಲ್ಲಿ ಕರ್ನಾಟಕ ಡಿಜಿಪಿ ಅವರು ಮಹಾರಾಷ್ಟ್ರ ಡಿಜಿಪಿಯವರೊಂದಿಗೆ ಮಾತನಾಡಿದ್ದು, ಕೆಲವೊಂದು ಮಾಹಿತಿಗಳನ್ನು ಮಹಾರಾಷ್ಟ್ರ ಪೊಲೀಸರು ಹಂಚಿಕೊಂಡಿದ್ದಾರೆ. ಆದರೆ ತನಿಖೆಯನ್ನು SIT ಕೈಗೆತ್ತಿಕೊಂಡಿರುವುದರಿಂದ, ತನಿಖೆ ಪೂರ್ಣಗೊಂಡು ಹೊರಬರುವ ತನಕ ಯಾವುದೇ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ಪೊಲೀಸರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಡಾ. ಜಿ. ಪರಮೇಶ್ವರ್, ಇಲ್ಲಿಯವರೆಗೆ ಲಭ್ಯವಾದ ಪ್ರಾಥಮಿಕ ಮಾಹಿತಿಯ ಪ್ರಕಾರ ಬೆಳಗಾವಿ ಪೊಲೀಸರು ಸೇರಿದಂತೆ ಯಾವುದೇ ಕರ್ನಾಟಕ ಪೊಲೀಸ್ ಸಿಬ್ಬಂದಿ ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದರು.

Union Budget: ಬಜೆಟ್ ನಂತರ ಚಿನ್ನ–ಬೆಳ್ಳಿ ದರ ಏರಿಕೆಯಾಗುತ್ತಾ? ಇಳಿಕೆಯಾಗುತ್ತಾ?

0

ನವದೆಹಲಿ: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಬಜೆಟ್ ಬಳಿಕ ಈ ದರ ಇಳಿಕೆಯಾಗುತ್ತದೆಯೇ ಅಥವಾ ಮತ್ತಷ್ಟು ಏರಿಕೆಯಾಗುತ್ತದೆಯೇ ಎಂಬ ಪ್ರಶ್ನೆ ಜನರಲ್ಲಿ ಉದ್ಭವಿಸಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ತಮ್ಮ ಎಂಟನೇ ಬಜೆಟ್ ಮಂಡಿಸಲಿದ್ದಾರೆ. ಈ ಹಿನ್ನೆಲೆ ಚಿನ್ನ ಮತ್ತು ಬೆಳ್ಳಿಯ ದರಗಳ ಕುರಿತು ಮಾರುಕಟ್ಟೆಯಲ್ಲಿ ನಿರೀಕ್ಷೆ ಹೆಚ್ಚಾಗಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿವಿಧ ರಾಷ್ಟ್ರಗಳ ಮೇಲೆ ಸುಂಕ ಸಮರದ ಬೆದರಿಕೆ ಹಾಕುತ್ತಿರುವ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದೆ. ಇದರಿಂದ ಹೂಡಿಕೆದಾರರು ಸುರಕ್ಷಿತ ಹೂಡಿಕೆಯೆಂದು ಪರಿಗಣಿಸುವ ಚಿನ್ನ ಮತ್ತು ಬೆಳ್ಳಿಯತ್ತ ಹೆಚ್ಚಿನ ಮೊರೆ ಹೋಗುತ್ತಿದ್ದಾರೆ. ಇದರ ಪರಿಣಾಮವಾಗಿ ಚಿನ್ನ–ಬೆಳ್ಳಿಯ ದರದಲ್ಲಿ ಭಾರೀ ಏರಿಕೆ ಕಂಡುಬರುತ್ತಿದೆ.

ಚಿನ್ನ ಹಾಗೂ ಬೆಳ್ಳಿ ದಿನೇದಿನೇ ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ಈ ಲೋಹಗಳ ಮೇಲಿರುವ ಕಸ್ಟಮ್ಸ್ ಸುಂಕವನ್ನು ಕಡಿತಗೊಳಿಸಲಾಗುತ್ತದೆಯೇ ಎಂಬ ಪ್ರಶ್ನೆ ಮತ್ತಷ್ಟು ತೀವ್ರವಾಗಿದೆ.

ಪ್ರಸ್ತುತ ಭಾರತಕ್ಕೆ ಆಮದಾಗುವ ಚಿನ್ನದ ಮೇಲೆ ಒಟ್ಟು 6% ಸುಂಕ ವಿಧಿಸಲಾಗಿದೆ. ಇದರಲ್ಲಿ 5% ಮೂಲ ಕಸ್ಟಮ್ಸ್ ಸುಂಕ, 1% ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ಸೇರಿದ್ದು, ಜೊತೆಗೆ ಮೌಲ್ಯದ ಮೇಲೆ 3% ಜಿಎಸ್‌ಟಿ ವಿಧಿಸಲಾಗುತ್ತಿದೆ.

ಗಮನಾರ್ಹವಾಗಿ, 2023ರವರೆಗೆ ಚಿನ್ನದ ಮೇಲೆ 15% ಸುಂಕ ಜಾರಿಯಲ್ಲಿತ್ತು. ಆದರೆ ಅಕ್ರಮ ಕಳ್ಳಸಾಗಣೆ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಸರ್ಕಾರ 2024ರ ಬಜೆಟ್‌ನಲ್ಲಿ ಸುಂಕವನ್ನು 6%ಕ್ಕೆ ಇಳಿಕೆ ಮಾಡಿತ್ತು.

ಈ ಬಜೆಟ್‌ನಲ್ಲಿ ಚಿನ್ನ ಹಾಗೂ ಬೆಳ್ಳಿಗೆ ಸಂಬಂಧಿಸಿದಂತೆ ಯಾವುದೇ ಹೊಸ ಘೋಷಣೆ ಆಗದೇ ಇದ್ದರೆ, ಹಾಲಿ ತೆರಿಗೆ ವ್ಯವಸ್ಥೆಯೇ ಮುಂದುವರಿಯಲಿದೆ. ಆದರೆ ಸುಂಕ ಇಳಿಕೆಯಾದಲ್ಲಿ ಚಿನ್ನದ ದರದಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ಕಂಡುಬರುವ ಸಾಧ್ಯತೆಯಿದೆ.

ಆದರೆ ಜಾಗತಿಕ ಮಟ್ಟದಲ್ಲಿ ನಡೆಯುವ ಆರ್ಥಿಕ ಬೆಳವಣಿಗೆಗಳು ಚಿನ್ನದ ದರದ ಮೇಲೆ ದೊಡ್ಡ ಪ್ರಭಾವ ಬೀರುತ್ತವೆ. ಡಾಲರ್ ಬಲಿಷ್ಠವಾಗಿ ರೂಪಾಯಿ ಮೌಲ್ಯ ಕುಸಿದರೆ, ಸುಂಕ ಇಳಿಕೆಯಾದರೂ ಚಿನ್ನದ ದರ ಏರಿಕೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಯಾವ ರೀತಿಯ ಘೋಷಣೆ ಮಾಡಲಿದ್ದಾರೆ ಎಂಬುದರ ಮೇಲೆ ಎಲ್ಲರ ಕುತೂಹಲ ನೆಟ್ಟಿದೆ.

ಮಲ್ಪೆ ಬೀಚ್​ನಲ್ಲಿ ಮಗುಚಿ ಬಿದ್ದ ಟೂರಿಸ್ಟ್ ಬೋಟ್: ನಾಲ್ವರ ಸ್ಥಿತಿ ಗಂಭೀರ

0

ಉಡುಪಿ: ಜಿಲ್ಲೆಯ ಕೋಡಿಬೆಂಗ್ರೆ ಸಮೀಪದ ಅರಬ್ಬಿ ಸಮುದ್ರದಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಟೂರಿಸ್ಟ್ ಬೋಟ್ ಅಚಾನಕ್ ಮಗುಚಿ ಬಿದ್ದು ಭಯಾನಕ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಅಪಘಾತದಲ್ಲಿ ನಾಲ್ವರು ಪ್ರವಾಸಿಗರ ಸ್ಥಿತಿ ಗಂಭೀರವಾಗಿದ್ದು, ಹಲವರು ಗಾಯಗೊಂಡಿದ್ದಾರೆ.

ಮೈಸೂರಿನ ಸರಸ್ವತಿಪುರಂನಿಂದ ಪ್ರವಾಸಕ್ಕೆ ಆಗಮಿಸಿದ್ದ ಬಿಪಿಒ ಕಾಲ್ ಸೆಂಟರ್ ಉದ್ಯೋಗಿಗಳ 28 ಮಂದಿಯ ತಂಡ ಎರಡು ಬೋಟ್‌ಗಳಲ್ಲಿ ಸಮುದ್ರ ವಿಹಾರಕ್ಕೆ ತೆರಳಿತ್ತು. ಪ್ರತಿ ಬೋಟ್‌ನಲ್ಲಿ 14 ಮಂದಿ ಇದ್ದು, ಕೋಡಿಬೆಂಗ್ರೆ ಅಳಿವೆ ಬಾಗಿಲು ಬಳಿ ಸಮುದ್ರದ ಭಾರೀ ಅಲೆಗಳ ನಡುವೆ ಒಂದು ಬೋಟ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಪ್ರವಾಸಿಗರು ಸಮುದ್ರದಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯ ಮೀನುಗಾರರು ತಕ್ಷಣ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿ ಎಲ್ಲರನ್ನು ಜೀವಂತವಾಗಿ ರಕ್ಷಿಸಿದ್ದಾರೆ. ಸ್ಥಳೀಯರ ಸಮಯಪ್ರಜ್ಞೆಯಿಂದ ದೊಡ್ಡ ದುರಂತ ತಪ್ಪಿದಂತಾಗಿದೆ.

ನೀರಿನಿಂದ ಹೊರತೆಗೆಯಲಾದವರ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬಾಹ್ಯಾಕಾಶ ಸಾಧನೆಗೆ ಮಹಾ ಗೌರವ: ಶುಭಾಂಶು ಶುಕ್ಲಾಗೆ “ಅಶೋಕ ಚಕ್ರ” ಪ್ರದಾನ

0

ನವದೆಹಲಿ: 2026ರ ಗಣರಾಜ್ಯೋತ್ಸವದ ಸಂಭ್ರಮದಂದು ದೇಶವು ಹೆಮ್ಮೆಯ ಕ್ಷಣಕ್ಕೆ ಸಾಕ್ಷಿಯಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ ಭಾರತದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರವನ್ನು ಪ್ರದಾನ ಮಾಡಿದರು.

ಬಾಹ್ಯಾಕಾಶದಲ್ಲಿ ಭಾರತದ ಪತಾಕೆಯನ್ನು ಹಾರಿಸುವ ಮೂಲಕ ಇತಿಹಾಸ ನಿರ್ಮಿಸಿದ ಮಹತ್ತರ ಸಾಧನೆಗಾಗಿ ಮತ್ತು ತೋರಿದ ಅಪಾರ ಧೈರ್ಯಕ್ಕಾಗಿ ಈ ಗೌರವವನ್ನು ಶುಭಾಂಶು ಶುಕ್ಲಾ ಅವರಿಗೆ ನೀಡಲಾಗಿದೆ. ಈ ಪ್ರಶಸ್ತಿ ಅವರು ರಾಷ್ಟ್ರಕ್ಕಾಗಿ ನೀಡಿದ ಅಪ್ರತಿಮ ಕೊಡುಗೆಯನ್ನು ಸ್ಮರಿಸುತ್ತದೆ.

ಅಶೋಕ ಚಕ್ರವು ಯುದ್ಧಭೂಮಿಯ ಹೊರಗೆ ತೋರಿದ ಅದ್ಭುತ ಸಾಹಸ, ಆತ್ಮತ್ಯಾಗ ಅಥವಾ ಧೈರ್ಯಕ್ಕಾಗಿ ಸೈನಿಕರು ಮತ್ತು ನಾಗರಿಕರಿಗೆ ನೀಡಲಾಗುವ ಭಾರತದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾಗಿದೆ. ಇದು ಯುದ್ಧಕಾಲದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಪರಮವೀರ ಚಕ್ರಕ್ಕೆ ಸಮಾನವಾಗಿದೆ.

ಶುಭಾಂಶು ಶುಕ್ಲಾ ಅವರು ಆಕ್ಸಿಯಮ್–4 (Axiom-4) ಬಾಹ್ಯಾಕಾಶ ಕಾರ್ಯಾಚರಣೆಯ ಭಾಗವಾಗಿ 2025ರ ಜೂನ್ 25ರಂದು ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ತೆರಳಿದ್ದರು. ಅಲ್ಲಿ ಸುಮಾರು 18 ದಿನಗಳ ಕಾಲ ಉಳಿದು, ಜುಲೈ 15ರಂದು ಸುರಕ್ಷಿತವಾಗಿ ಭೂಮಿಗೆ ಮರಳಿದರು.

ತಮ್ಮ 17 ದಿನಗಳ ವಾಸ್ತವ್ಯದ ಅವಧಿಯಲ್ಲಿ ಅವರು ಇತರ ವಿಜ್ಞಾನಿಗಳೊಂದಿಗೆ 60ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿದ್ದು, ಅಂತರರಾಷ್ಟ್ರೀಯ ಸಂಶೋಧನಾ ಪ್ರಯತ್ನಗಳಿಗೆ ಅಮೂಲ್ಯವಾದ ಮಾಹಿತಿಯನ್ನು ಒದಗಿಸಿದ್ದಾರೆ. ಈ ಮಿಷನ್‌ನಲ್ಲಿ ಶುಭಾಂಶು ಶುಕ್ಲಾ ಅವರೊಂದಿಗೆ ಕಮಾಂಡರ್ ಪೆಗ್ಗಿ ವಿಟ್ಸನ್ (ಅಮೆರಿಕ), ಮಿಷನ್ ಸ್ಪೆಷಲಿಸ್ಟ್ ಸಾವೋಸ್ಜ್ ಉಜ್ನಾನ್ಸ್ಕಿ–ವಿಸ್ನಿಯೆವ್ಸ್ಕಿ (ಪೋಲೆಂಡ್) ಮತ್ತು ಟಿಬೋರ್ ಕಾಪು (ಹಂಗೇರಿ) ಕೂಡ ಭಾಗವಹಿಸಿದ್ದರು. ಎಲ್ಲಾ ಸದಸ್ಯರು ಯಶಸ್ವಿಯಾಗಿ ಭೂಮಿಗೆ ವಾಪಸ್ ಆಗಿದ್ದಾರೆ.

ಪ್ರವಾಸಿ ವಾಹನ ಡಿಕ್ಕಿ: ಕೃಷಿ ಪತ್ತಿನ ಸಹಕಾರ ಸಂಘದ ಮಹಿಳಾ ಸಿಬ್ಬಂದಿ ಸಾವು!

0

ಚಿಕ್ಕಮಗಳೂರು: ಆಲ್ದೂರು ಸಮೀಪ ಪ್ರವಾಸಿ ವಾಹನ ಡಿಕ್ಕಿಯಾಗಿ ಅಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಅಪಘಾತದ ಬಳಿಕ ವಾಹನವನ್ನು ನಿಲ್ಲಿಸದೇ ಚಾಲಕ ಪರಾರಿಯಾಗಿದ್ದಾನೆ. ಮೃತರನ್ನು ನವಮಿ (26) ಎಂದು ಗುರುತಿಸಲಾಗಿದ್ದು, ಅವರು ಆಲ್ದೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕೆಲಸ ಮಾಡುತ್ತಿದ್ದರು.

ಅಪಘಾತಕ್ಕೆ ಕಾರಣವಾದ ವಾಹನವು ತುಮಕೂರು ಜಿಲ್ಲೆಯ ತಿಪಟೂರು ಮೂಲದ್ದಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿದ ಹಿನ್ನೆಲೆ, ಆಲ್ದೂರು ಹೋಬಳಿಯಲ್ಲಿ ನಡೆಯಬೇಕಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕರಾಳ ಕೃಷಿ ಕಾಯ್ದೆ ಹಿಂಪಡೆದಂತೆ G RAM G ಕಾಯ್ದೆ ಹಿಂಪಡೆಯುವವರೆಗೂ ಹೋರಾಟ: ಡಿ.ಕೆ. ಶಿವಕುಮಾರ್

0

ಬೆಂಗಳೂರು: “ಮನರೇಗಾ ಉಳಿಸುವ ಸಲುವಾಗಿ ಮಂಗಳವಾರ ರಾಜಭವನ ಚಲೋ ನಡೆಸಲಾಗುವುದು. ಪ್ರತಿ ತಾಲ್ಲೂಕಿನಲ್ಲೂ ಕನಿಷ್ಠ ಐದು ಕಿಲೋಮೀಟರ್ ಪಾದಯಾತ್ರೆ ನಡೆಸಲಾಗುವುದು. ಪ್ರತಿ ಪಂಚಾಯತಿ ಮಟ್ಟದಲ್ಲೂ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳಿಗೆ ಸೋಮವಾರ ಅವರು ಪ್ರತಿಕ್ರಿಯೆ ನೀಡಿದರು.

“20 ವರ್ಷಗಳ ಹಿಂದೆ ಸೋನಿಯಾಗಾಂಧಿ ಅವರ ನಾಯಕತ್ವದಲ್ಲಿ ಮನಮೋಹನ್ ಸಿಂಗ್ ಅವರ ಸರ್ಕಾರ ಜಾರಿಗೆ ತಂದಿದ್ದ ಸಾಂವಿಧಾನಿಕ ಹಕ್ಕಾಗಿ ಬಂದಿರುವ ಮನರೇಗಾವನ್ನು ನಾಶ ಮಾಡಲು ಹೊರಟಿರುವುದು ನಮಗೆಲ್ಲಾ ಆಶ್ಚರ್ಯ ಉಂಟು ಮಾಡಿದೆ. ಮಹಾತ್ಮಗಾಂಧಿ ಅವರ ಹೆಸರಿನಲ್ಲಿ ಪ್ರಾರಂಭವಾದ ಯೋಜನೆ ಗ್ರಾಮೀಣ ಭಾಗದ ಜನರ ಉದ್ಯೋಗದ ಹಕ್ಕಿಗೆ ಖಾತ್ರಿ ನೀಡಿತ್ತು. ಆದರೆ ಈ ಹಕ್ಕು ಈಗ ಮೊಟಕಾಗಿದೆ. ಆದಕಾರಣ ಇಡೀ ದೇಶದ ಉದ್ದಗಲಕ್ಕೂ ಈ ಬಗ್ಗೆ ಹೋರಾಟ ರೂಪಿಸಲಾಗಿದೆ” ಎಂದರು.

“ಪ್ರತಿವರ್ಷ 6 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿಗಳು ಮನರೇಗಾ ಅಡಿ ನಡೆಯುತ್ತಿದ್ದವು. ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ದೊರೆಯುತ್ತಿತ್ತು. ವಿಧಾನಸಭೆಯಲ್ಲೂ ಇದರ ಬಗ್ಗೆ ಪ್ರತಿಭಟನೆ ಹಾಗೂ ನಿರ್ಣಯ ತೆಗೆದುಕೊಳ್ಳಲು ನಾವು ಸಜ್ಜಾಗಿದ್ದೇವೆ” ಎಂದರು‌.

“ಮನರೇಗಾ ಮರು ಸ್ಥಾಪಿಸುವವರೆಗೂ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು” ಎಂದರು.

ಕೃಷಿ ಕರಾಳ ಕಾಯ್ದೆ ಹಿಂಪಡೆದಂತೆ ಜಿ ರಾಮ್ ಜಿ ಕಾಯ್ದೆ ಹಿಂಪಡೆಯುವವರೆಗೆ ಹೋರಾಟ

ಯಾವ ರೀತಿಯ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಕೇಳಿದಾಗ, “ಮನರೇಗಾವನ್ನು ನಾಶ ಮಾಡುವ ಕಾನೂನನ್ನು ಹಿಂಪಡೆಯಬೇಕು ಎಂದು ಆಗ್ರಹಿಸಲಾಗುವುದು. ರೈತರ ಕರಾಳ ಕಾಯ್ದೆಗಳನ್ನು ಹೇಗೆ ಹಿಂಪಡೆಯಲಾಯಿತೋ ಅದೇ ರೀತಿ ಇದನ್ನೂ ಹಿಂಪಡೆಯಬೇಕು. ಹಿಂಪಡೆಯುವವರೆಗೂ ಹೋರಾಟ ಮುಂದುವರೆಸಲಾಗುವುದು” ಎಂದರು.

ಜೆಡಿಎಸ್ ಮನರೇಗಾ ಬದಲಾವಣೆ ಬಗ್ಗೆ ವಿರೋಧ ವ್ಯಕ್ತಪಡಿಸದೇ ಇರುವ ಬಗ್ಗೆ ಕೇಳಿದಾಗ, “ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೂ ಸಹ ಬಾಯಿ ಬಿಡುತ್ತಿಲ್ಲ. ಹೊಸ ಕಾಯ್ದೆಯನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ಗ್ರಾಮೀಣ ಭಾಗದ ಜನಪ್ರತಿನಿಧಿಯಾಗಿ ನನ್ನ ಅನುಭವದಲ್ಲಿ ಹೇಳುವುದಾದರೆ ಇದರ ಅನುಷ್ಠಾನ ಅಸಾಧ್ಯ” ಎಂದರು.

“ಈ ಯೋಜನೆಗೆ ಅನುದಾನ ಒದಗಿಸಿ ಕೊಡುವವರು ಯಾರು? ಕೇಂದ್ರವೇ ಅನುದಾನ ಒದಗಿಸಿಕೊಡಲಿ. ಕೆಲವು ನಾಯಕರು ಚರ್ಚೆಗೆ ಬರುತ್ತೇವೆ ಎಂದು ಹೇಳಿದ್ದಾರೆ. ನಾವು ಸದನದಲ್ಲಿ ಅವರ ಚರ್ಚೆಗೆ ಉತ್ತರ ನೀಡಲು ಸಿದ್ಧರಿದ್ದೇವೆ” ಎಂದರು.

2028 ಕ್ಕೆ ಮುಖ್ಯಮಂತ್ರಿಯಾಗುತ್ತೇನೆ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಇಂತಹ ಒಳ್ಳೆ ದಿನ ಏಕೆ ಅಶುಭ ಮಾತನ್ನಾಡುವುದು, ಆ ವಿಚಾರ ಬೇಡ ಬಿಡಿ” ಎಂದರು.

Republic Day Parade: ಕರ್ತವ್ಯ ಪಥದಲ್ಲಿ ಭಾರತೀಯ ಸೇನೆಯ ‘ಸೈಲೆಂಟ್ ವಾರಿಯರ್ಸ್’ ಪ್ರಾಣಿಗಳ ಶಕ್ತಿಯ ಪ್ರದರ್ಶನ!

0

ನವದೆಹಲಿ: 77ನೇ ಗಣರಾಜ್ಯೋತ್ಸವದ ಅಂಗವಾಗಿ ಕರ್ತವ್ಯ ಪಥದಲ್ಲಿ ನಡೆಯುತ್ತಿರುವ ಇಂದು ನಡೆದ ಪರೇಡ್ ಹಲವು ವಿಶೇಷತೆಗಳಿಂದ ಗಮನ ಸೆಳೆದಿದೆ. ಪರೇಡ್ಆರಂಭದಲ್ಲೇ ಬ್ಯಾಕ್ಟ್ರಿಯನ್ ಒಂಟೆಗಳು, ಶಿಕಾರಿ ಪಕ್ಷಿ ಬ್ಲ್ಯಾಕ್ ಕೈಟ್ಸ್, ಸೈನಿಕ ಶ್ವಾನಗಳು ಸೇರಿದಂತೆ ರಕ್ಷಣಾ ವಲಯದ ವಿವಿಧ ಘಟಕಗಳು ಭಾರತೀಯ ಸೇನೆಯ ಶಕ್ತಿಯನ್ನೆತ್ತಿ ತೋರಿಸಿವೆ.
ಭಾರತೀಯ ಸೇನೆಯ ರಿಮೌಂಟ್ ಮತ್ತು ಪಶುವೈದ್ಯಕೀಯ ದಳ (RVC) ತನ್ನ ಸಮರ್ಪಿತ ಪ್ರಾಣಿ ತಂಡವನ್ನು ಪರೇಡ್ ನಲ್ಲಿ ಪರಿಚಯಿಸಿದ್ದು, ಕಠಿಣ ಭೂಪ್ರದೇಶಗಳಲ್ಲಿ ಸೇನೆಗೆ ಸೌಲಭ್ಯ ನೀಡುವ ಪ್ರಾಣಿಗಳ ಸೇವೆಯನ್ನು ಅನಾವರಣಗೊಳಿಸಿದೆ.

ʻಸೈಲೆಂಟ್ ವಾರಿಯರ್ಸ್ʼ ಎಂದೇ ಗುರುತಿಸಿಕೊಂಡ ತಂಡವು ಕಠಿಣ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುತ್ತಾ ಶತ್ರುಗಳ ಮೇಲೆ ನಿಗಾ ವಹಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಬಾರಿ ಪರೇಡ್ ನಲ್ಲಿ ಪ್ರದರ್ಶಿತ ಪ್ರಾಣಿಗಳಲ್ಲಿ ಬ್ಯಾಕ್ಟ್ರಿಯನ್ ಒಂಟೆಗಳು, ಜನ್ಸ್ಕಾರ್ ಪೋನಿಗಳು, ಬ್ಲ್ಯಾಕ್ ಕೈಟ್ಸ್, ವಿಜಿಲೆಂಟ್ ಬರ್ಡ್ಸ್, ಭಾರತೀಯ ತಳಿಯ ಸೇನಾ ನಾಯಿಗಳು (ಮುಧೋಳ ಹೌಂಡ್, ರಾಂಪುರ್ ಹೌಂಡ್, ಚಿಪ್ಪಿಪರೈ, ಕೊಂಬೈ ಮತ್ತು ರಾಜಪಾಳಯಂ) ಮತ್ತು ಸಾಂಪ್ರದಾಯಿಕ ಮಿಲಿಟರಿ ಶ್ವಾನಗಳು ಸೇರಿದ್ದರು.
ಪ್ರದರ್ಶನವು ಪ್ರಾಣಿಗಳ ಮಹತ್ವಪೂರ್ಣ ಪಾತ್ರ ಹಾಗೂ ಭಾರತೀಯ ಸೇನೆಯ ನವೀನತೆಯನ್ನು ಜನತೆಗೆ ತೋರಿಸುವುದರ ಜೊತೆಗೆ, ಗಣರಾಜ್ಯೋತ್ಸವದ ಸಾಂಸ್ಕೃತಿಕ ಮತ್ತು ಸೇನಾ ವೈಭವವನ್ನು ಹೆಚ್ಚಿಸಿದೆ.

error: Content is protected !!