Home Blog Page 127

ಗಣರಾಜ್ಯೋತ್ಸವ ವೇದಿಕೆ ಅಂಗಳದಲ್ಲೇ ಬಿಜೆಪಿ–ಕಾಂಗ್ರೆಸ್ ಜಟಾಪಟಿ; ಧ್ವಜಾರೋಹಣ ಕಾರ್ಯಕ್ರಮದಲ್ಲಿ ರಾಜಕೀಯ ಬಣ್ಣ!

0

ಗದಗ: ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮ ರಾಜಕೀಯ ಗದ್ದಲಕ್ಕೆ ವೇದಿಕೆಯಾದ ಘಟನೆ ಬೆಳಕಿಗೆ ಬಂದಿದೆ. ಸಚಿವ ಎಚ್‌ ಕೆ ಪಾಟೀಲ್ ಭಾಷಣದ ಮಧ್ಯೆ ಬಿಜೆಪಿ ಎಂಎಲ್ಸಿ ಎಸ್‌ವಿ ಸಂಕನೂರ ವೇದಿಕೆಗೆ ಆಗಮಿಸಿ ಸಾರ್ವಜನಿಕವಾಗಿ ಆಕ್ಷೇಪ ವ್ಯಕ್ತಪಡಿಸಿದ ಘಟನೆ ಸಂಚಲನ ಮೂಡಿಸಿದೆ.

ಗಣರಾಜ್ಯೋತ್ಸವ ಭಾಷಣದಲ್ಲಿ ಸಚಿವ ಎಚ್‌ ಕೆ ಪಾಟೀಲ್ ಅವರು ವಿಬಿ ರಾಮ್ ಜಿ ಯೋಜನೆ ಕುರಿತು ಪ್ರಸ್ತಾಪ ಮಾಡುತ್ತಿದ್ದಂತೆಯೇ ಎಂಎಲ್ಸಿ ಸಂಕನೂರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೇದಿಕೆಯ ಸಮೀಪಕ್ಕೆ ಬಂದು ಭಾಷಣವನ್ನು ತಡೆಹಿಡಿಯಲು ಪ್ರಯತ್ನಿಸಿದ್ದು, ಕಾರ್ಯಕ್ರಮ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಆದರೆ ಸಚಿವ ಎಚ್‌ ಕೆ ಪಾಟೀಲ್ ಯಾವುದೇ ಪ್ರತಿಕ್ರಿಯೆ ನೀಡದೆ ಭಾಷಣ ಮುಂದುವರೆಸಿದರು. ಇದರಿಂದ ಕೋಪಗೊಂಡ ಸಂಕನೂರ ಅವರು ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿ ವೇದಿಕೆಯಿಂದ ಹೊರನಡೆದರು.

“ಕಾನೂನು ಸಚಿವರಿಗೆ ಕಾನೂನು ಗೊತ್ತಿಲ್ಲ” – ಸಂಕನೂರ ಕಿಡಿ

ಕಾರ್ಯಕ್ರಮದ ಬಳಿಕ ಮಾತನಾಡಿದ ಎಸ್‌ವಿ ಸಂಕನೂರ, “ಎಚ್‌ ಕೆ ಪಾಟೀಲ್ ಅವರ ಭಾಷಣವನ್ನು ನಾನು ಖಂಡಿಸುತ್ತೇನೆ. ಕಾನೂನು ಸಚಿವರು ಮೊದಲು ಕಾನೂನು ತಿಳಿದುಕೊಳ್ಳಬೇಕು. ಹಿಂದೆಯೇ 100 ದಿನ ಉದ್ಯೋಗ ಯೋಜನೆ ಇತ್ತು. ನಾವು ಅದನ್ನು 125 ದಿನಗಳಿಗೆ ಹೆಚ್ಚಿಸಿದ್ದೇವೆ. ವಾರಕ್ಕೆ ಕೂಲಿ ಕಾರ್ಮಿಕರಿಗೆ ವೇತನ ಕೊಡುತ್ತಿದ್ದೇವೆ. ಆದರೆ ಸಚಿವರು ಸುಳ್ಳು ಮಾಹಿತಿ ನೀಡುತ್ತಿದ್ದಾರೆ” ಎಂದು ತೀವ್ರ ಆಕ್ರೋಶ ಹೊರಹಾಕಿದರು.
ಗಣರಾಜ್ಯೋತ್ಸವದಂತಹ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಈ ರೀತಿಯ ರಾಜಕೀಯ ಗದ್ದಲ ನಡೆದಿರುವುದು ಜಿಲ್ಲೆಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಸ್ವಿಮ್ಮಿಂಗ್ ಪೂಲ್‌ನಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು: ಪತಿಯ ಮೇಲೆ ಗಂಭೀರ ಆರೋಪ

0

ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಬೆಟ್ಟೆಗೌಡನದೊಡ್ಡಿ ಗ್ರಾಮದಲ್ಲಿ ಅನುಮಾನ ಹುಟ್ಟಿಸುವ ಭೀಕರ ಘಟನೆ ನಡೆದಿದೆ. 32 ವರ್ಷದ ಗೃಹಿಣಿ ಪ್ರತಿಭಾ ಅವರ ಮೃತದೇಹ ಮನೆಯ ಸ್ವಿಮ್ಮಿಂಗ್ ಪೂಲ್‌ನಲ್ಲಿ ಪತ್ತೆಯಾಗಿದ್ದು, ಈ ಪ್ರಕರಣ ಇದೀಗ ಕೊಲೆನಾ? ಆತ್ಮಹತ್ಯೆಯಾ? ಎಂಬ ಗಂಭೀರ ಅನುಮಾನಗಳನ್ನು ಹುಟ್ಟಿಸಿದೆ.

ಮೃತ ಮಹಿಳೆಯ ಪತಿ ನಂಜೇಗೌಡ ಮೇಲೆ ಕುಟುಂಬಸ್ಥರು ನೇರವಾಗಿ ಕೊಲೆ ಆರೋಪ ಮಾಡಿದ್ದಾರೆ. ಆದರೆ ನಂಜೇಗೌಡ ಮಾತ್ರ, “ಪತ್ನಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು” ಎಂದು ಹೇಳುವ ಮೂಲಕ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವುದು ಅನುಮಾನಕ್ಕೆ ಮತ್ತಷ್ಟು ಬಲ ನೀಡಿದೆ.

ಮನೆ ಒಳಗೇ ನಡೆದಿದೆಯೇ ಕ್ರೈಂ?

ಇಂದು ಬೆಳಿಗ್ಗೆ ನಂಜೇಗೌಡ ತನ್ನ ಅತ್ತಿಗೆ ಮನೆಯ ಬಳಿ ಬಂದು, “ಪ್ರತಿಭಾ ರೂಮ್ ಬಾಗಿಲು ತೆಗೆಯುತ್ತಿಲ್ಲ” ಎಂದು ಮಾಹಿತಿ ನೀಡಿದ್ದಾನೆ. ತಕ್ಷಣವೇ ಪ್ರತಿಭಾ ಸಹೋದರ ಪರಮೇಶ್ ಮನೆಗೆ ತೆರಳಿ ಪರಿಶೀಲಿಸಿದಾಗ ಮನೆಯೊಳಗೆ ಪ್ರತಿಭಾ ಎಲ್ಲಿಯೂ ಕಾಣಿಸಿಲ್ಲ. ನಂತರ ಮನೆಯ ಆವರಣದಲ್ಲಿದ್ದ ಸ್ವಿಮ್ಮಿಂಗ್ ಪೂಲ್ ಪರಿಶೀಲಿಸಿದಾಗ, ನೀರಿನೊಳಗೆ ಪ್ರತಿಭಾ ಮೃತದೇಹ ಪತ್ತೆಯಾಗಿದೆ. ಈ ದೃಶ್ಯ ಕಂಡ ಕುಟುಂಬಸ್ಥರು ಶಾಕ್ ಆಗಿದ್ದು, ಘಟನೆ ಸ್ಥಳದಲ್ಲೇ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ನಂಜೇಗೌಡಗೆ ಪ್ರತಿಭಾ ಎರಡನೇ ಪತ್ನಿ. ಆರಂಭದಲ್ಲಿ ದಾಂಪತ್ಯ ಜೀವನ ಸುಗಮವಾಗಿದ್ದರೂ, ಮೊದಲ ಪತ್ನಿ ವಿಚಾರವಾಗಿ ದಂಪತಿ ನಡುವೆ ಆಗಾಗ ಗಲಾಟೆಗಳು ನಡೆಯುತ್ತಿದ್ದವು ಎಂಬ ಮಾಹಿತಿ ಲಭ್ಯವಾಗಿದೆ. ಇದೇ ಹಿನ್ನೆಲೆಯಲ್ಲಿ, ಕುಟುಂಬಸ್ಥರು ಇದು ಪೂರ್ವ ಯೋಜಿತ ಕೊಲೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.

ಇನ್ನೂ ಸಂಶಯ ಹೆಚ್ಚಿಸುವ ಸಂಗತಿ ಎಂದರೆ – ನಿನ್ನೆ ರಾತ್ರಿ ಪ್ರತಿಭಾ ತನ್ನ ಮನೆಯಲ್ಲಿದ್ದ ಕುಟುಂಬಸ್ಥರನ್ನು ಏಕಾಏಕಿ ಮನೆಗೆ ವಾಪಸ್ ಕಳುಹಿಸಿದ್ದಾಳೆ. ಆ ನಂತರ ರಾತ್ರಿ ಏನಾಯ್ತು ಎಂಬುದು ಇನ್ನೂ ರಹಸ್ಯವಾಗಿಯೇ ಉಳಿದಿದೆ.

ಘಟನೆಯ ಗಂಭೀರತೆಯನ್ನು ಗಮನಿಸಿ ಕೋಡಿಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ತೀವ್ರಗೊಳಿಸಿದ್ದಾರೆ. ಪ್ರತಿಭಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ನಂತರವೇ ಸತ್ಯ ಬಹಿರಂಗವಾಗಲಿದೆ.

ಚಿನ್ನ ಕೊಟ್ಟ ಪ್ರಾಮಾಣಿಕತೆಗೆ ಸರ್ಕಾರದ ಬಂಪರ್ ಬಹುಮಾನ: ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಸೈಟ್, ₹5 ಲಕ್ಷ ಮತ್ತು ಸರ್ಕಾರಿ ಉದ್ಯೋಗ!

0

ಗದಗ: ಚಿನ್ನದ ನಿಧಿಯನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ ಬಾಲಕ ಪ್ರಜ್ವಲ್ ರಿತ್ತಿ ಮತ್ತು ಅವರ ಕುಟುಂಬಕ್ಕೆ ಸರ್ಕಾರದಿಂದ ಗಣರಾಜ್ಯೋತ್ಸವದ ಬಂಪರ್ ಗಿಫ್ಟ್ ಘೋಷಿಸಲಾಗಿದೆ. ಸಚಿವ ಎಚ್ ಕೆ ಪಾಟೀಲ್ ಅವರು ಗದಗ ನಗರದ ಕೆ ಎಚ್ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಮಹತ್ವದ ಘೋಷಣೆ ಮಾಡಿದ್ದಾರೆ.

ಜನವರಿ 10 ರಂದು ಮನೆ ಪಾಯ ಅಗೆಯುವ ವೇಳೆ ಗದಗ ಜಿಲ್ಲೆಯ 466 ಗ್ರಾಮದ ಪುರಾತನ ಚಿನ್ನದ ಒಡವೆಗಳ ತಂಬಿಗೆ ಪತ್ತೆಯಾಗಿತ್ತು. ಈ ಅಮೂಲ್ಯ ಚಿನ್ನವನ್ನು ಪ್ರಜ್ವಲ್ ರಿತ್ತಿ ಕುಟುಂಬ ಸರ್ಕಾರಕ್ಕೆ ಪ್ರಾಮಾಣಿಕವಾಗಿ ಒಪ್ಪಿಸಿತ್ತು. ಈ ಪ್ರಾಮಾಣಿಕತೆಗೆ ಸರ್ಕಾರ ವಿಶೇಷ ಗೌರವ ತೋರಿದೆ.

ಸಚಿವ ಎಚ್ ಕೆ ಪಾಟೀಲ್ ಅವರು ಘೋಷಣೆ ಮಾಡಿದಂತೆ, ಪ್ರಜ್ವಲ್ ರಿತ್ತಿ ಕುಟುಂಬಕ್ಕೆ 30×40 ಅಳತೆಯ ನಿವೇಶನ, ಮನೆ ನಿರ್ಮಾಣಕ್ಕೆ ₹5 ಲಕ್ಷ ನಗದು ಸಹಾಯ ಮತ್ತು ತಾಯಿ ಕಸ್ತೂರೆವ್ವ ಅವರಿಗೆ ಹೊರಗುತ್ತಿಗೆ ಆಧಾರದ ಸರ್ಕಾರಿ ಉದ್ಯೋಗ ನೀಡಲಾಗುತ್ತದೆ.

ಕೆ ಎಚ್ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲಕ ಪ್ರಜ್ವಲ್ ರಿತ್ತಿ ಮತ್ತು ತಾಯಿ ಕಸ್ತೂರೆವ್ವ ಅವರನ್ನು ಜಿಲ್ಲಾಡಳಿತದಿಂದ ಸನ್ಮಾನ ಮಾಡಿ ಗೌರವಿಸಲಾಯಿತು. ಈ ವೇಳೆ ಸಚಿವರು ನಿವೇಶನದ ಪ್ರಮಾಣ ಪತ್ರ ಮತ್ತು ಕಸ್ತೂರೆವ್ವ ಅವರಿಗೆ ಉದ್ಯೋಗ ಆದೇಶ ಪತ್ರವನ್ನು ಹಸ್ತಾಂತರಿಸಿದರು.

ಸರ್ಕಾರದ ಈ ನಿರ್ಧಾರವನ್ನು ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಪ್ರಾಮಾಣಿಕತೆಗೆ ದೊರಕಿದ ಅತ್ಯುತ್ತಮ ಗೌರವ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

Republic Day: ಕರ್ತವ್ಯ ಪಥದಲ್ಲಿ ಭಾರತದ ಸೇನಾ ಶಕ್ತಿ ಅನಾವರಣ: ಮೊದಲ ಬಾರಿಗೆ ಡ್ರೋನ್ ಪ್ರದರ್ಶನ!

0

ನವದೆಹಲಿ: 77ನೇ ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯ ಕರ್ತವ್ಯ ಪಥದಲ್ಲಿ ಭಾರತೀಯ ಸೇನೆಯ ಶಕ್ತಿಯುತ ಸಾಮರ್ಥ್ಯವನ್ನು ಪ್ರದರ್ಶಿಸುವ ಭವ್ಯ ಮೆರವಣಿಗೆ ನಡೆಯಿತು. ದೇಶದ ರಕ್ಷಣಾ ಶಕ್ತಿ, ಆಧುನಿಕ ಶಸ್ತ್ರಾಸ್ತ್ರಗಳು ಹಾಗೂ ತಂತ್ರಜ್ಞಾನ ಸಾಮರ್ಥ್ಯವನ್ನು ಈ ಮೆರವಣಿಗೆಯಲ್ಲಿ ಜನತೆಗೆ ಪರಿಚಯಿಸಲಾಯಿತು.

ಮೆರವಣಿಗೆಯಲ್ಲಿ ಆಪರೇಷನ್ ಸಿಂಧೂರ್ ಟ್ಯಾಬ್ಲೋ ವಿಶೇಷ ಆಕರ್ಷಣೆಯಾಗಿ ಕಾಣಿಸಿಕೊಂಡಿತು. ಇದೇ ಮೊದಲ ಬಾರಿಗೆ ಸೇನೆಯ ಡ್ರೋನ್ ತಂತ್ರಜ್ಞಾನವನ್ನು ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರದರ್ಶಿಸಲಾಗಿದ್ದು, ಸೇನೆಯ ಆಧುನಿಕೀಕರಣದ ಸಂಕೇತವಾಗಿ ಗಮನ ಸೆಳೆಯಿತು.

ಗರುಡಾ ಫಾರ್ಮೇಷನ್‌ನಲ್ಲಿ ಅಪಾಚೆ ಮತ್ತು ಧ್ರುವ ಹೆಲಿಕಾಪ್ಟರ್‌ಗಳು ಆಕಾಶದಲ್ಲಿ ಕೌಶಲ್ಯ ಪ್ರದರ್ಶಿಸಿದರೆ, ಭೂಮಿಯಲ್ಲಿ T-90 ಭೀಷ್ಮ ಟ್ಯಾಂಕ್, ನಾಗ್ ಕ್ಷಿಪಣಿ ವ್ಯವಸ್ಥೆ, ಶಕ್ತಿಬಾನ್ ಮತ್ತು ದಿವ್ಯಾಸ್ತ್ರ, ಧನುಷ್ ಹಾಗೂ ಅಮೋಘ್ ಸಿಸ್ಟಮ್, ಸೂರ್ಯಾಸ್ತ್ರ ರಾಕೆಟ್ ಲಾಂಚರ್, ಬ್ರಹ್ಮೋಸ್ ಸೂಪರ್ ಸಾನಿಕ್ ಮಿಸೈಲ್ ವೆಪನ್ ಸಿಸ್ಟಮ್, ಆಕಾಶ್ ಹಾಗೂ ಅಭರ ಮಧ್ಯಮ ಶ್ರೇಣಿಯ ಕ್ಷಿಪಣಿ ವ್ಯವಸ್ಥೆಗಳ ಪ್ರದರ್ಶನ ನಡೆಯಿತು.

ಇದರ ಜೊತೆಗೆ ವಂದೇ ಮಾತರಂ ಗೀತೆಯ 150ನೇ ವರ್ಷದ ಆಚರಣೆ, ದೇಶದ ಅಭಿವೃದ್ಧಿ ಪಯಣ ಹಾಗೂ ಭಾರತದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಸ್ತಬ್ಧಚಿತ್ರಗಳನ್ನೂ ಪ್ರದರ್ಶಿಸಲಾಯಿತು.

ಈ ಭವ್ಯ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಹಾಗೂ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಗೆಲುವಿನ ಹಾದಿಯಲ್ಲಿ ಟೀಂ ಇಂಡಿಯಾ: ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ಸೂರ್ಯಕುಮಾರ್ ಯಾದವ್

0

ಟಿ20 ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಗೆಲುವಿನ ಸರಣಿ ಮುಂದುವರೆದಿದೆ. ನ್ಯೂಝಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಮೂರು ಪಂದ್ಯಗಳಲ್ಲೂ ಭಾರತ ತಂಡ ಭರ್ಜರಿ ಗೆಲುವು ದಾಖಲಿಸಿದ್ದು, ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ.

ನ್ಯೂಝಿಲೆಂಡ್ ವಿರುದ್ಧದ ಸರಣಿ ಗೆಲುವಿನ ಮೂಲಕ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡದ ಮೂರನೇ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ಇದುವರೆಗೆ ಈ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದರು. ಇದೀಗ ಸೂರ್ಯ, ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಒಟ್ಟು 52 ಟಿ20 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 32 ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. 18 ಪಂದ್ಯಗಳಲ್ಲಿ ಸೋಲು ಕಂಡಿದ್ದರೆ, 2 ಪಂದ್ಯಗಳು ಟೈನಲ್ಲಿ ಅಂತ್ಯಗೊಂಡಿದ್ದವು. ಅಲ್ಲದೆ 2 ಪಂದ್ಯಗಳು ರದ್ದಾಗಿದ್ದವು.

ಇದೀಗ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಒಟ್ಟು 41 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದೆ. ಈ ಪೈಕಿ ಭಾರತ ತಂಡ 33 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಕೇವಲ 6 ಪಂದ್ಯಗಳಲ್ಲಿ ಮಾತ್ರ ಸೋಲು ಕಂಡಿದೆ. ಇನ್ನು 2 ಪಂದ್ಯಗಳು ಕಾರಣಾಂತರಗಳಿಂದ ರದ್ದಾಗಿವೆ.

ಭಾರತ ಟಿ20 ತಂಡದ ಯಶಸ್ವಿ ನಾಯಕರುಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಭಾರತ ತಂಡ 62 ಟಿ20 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 50 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ.

ಇನ್ನು ದ್ವಿತೀಯ ಸ್ಥಾನದಲ್ಲಿ ಮಹೇಂದ್ರ ಸಿಂಗ್ ಧೋನಿ ಇದ್ದು, ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ 72 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದು 41 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಮಾನವೀಯತೆಯ ಸೂಪರ್‌ಸ್ಟಾರ್: 15 ವರ್ಷಗಳಿಂದ ₹5ಗೆ ಪರೋಟ ಮಾರುವ ವ್ಯಾಪಾರಿಗೆ ರಜನೀಕಾಂತ್ ವಿಶೇಷ ಗೌರವ

ಚೆನ್ನೈ: ನಟ ರಜನೀಕಾಂತ್ ಅವರು ಮತ್ತೊಮ್ಮೆ ತಮ್ಮ ಮಾನವೀಯತೆಯ ಮೂಲಕ ಜನಮನ ಗೆದ್ದಿದ್ದಾರೆ. ಮಧುರೈ ಮೂಲದ ರಸ್ತೆ ಬದಿ ವ್ಯಾಪಾರಿ ಶೇಖರ್ ಅವರನ್ನು ಕುಟುಂಬ ಸಮೇತ ತಮ್ಮ ನಿವಾಸಕ್ಕೆ ಆಹ್ವಾನಿಸಿ ಗೌರವಿಸಿದ ಘಟನೆ ಇದೀಗ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ಶೇಖರ್ ಕಳೆದ 15 ವರ್ಷಗಳಿಂದಲೂ ಕೇವಲ 5 ರೂಪಾಯಿಗೆ ಪರೋಟ ಮಾರಾಟ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ರಸ್ತೆ ಬದಿ ಹೋಟೆಲ್‌ಗಳಲ್ಲಿ ಪರೋಟ ಬೆಲೆ 30ರಿಂದ 50 ರೂಪಾಯಿ ಇದ್ದರೂ, ಶೇಖರ್ ಮಾತ್ರ ಬೆಲೆ ಏರಿಸದೇ ಸೇವಾ ಮನೋಭಾವದಿಂದ ವ್ಯಾಪಾರ ನಡೆಸುತ್ತಿದ್ದಾರೆ. ಈ ಕಾರ್ಯವೇ ರಜನೀಕಾಂತ್ ಗಮನ ಸೆಳೆದಿದೆ.

ಶೇಖರ್ ಅವರನ್ನು ಮನೆಗೆ ಕರೆಸಿದ ರಜನೀಕಾಂತ್, ಆತಿಥ್ಯ ನೀಡಿ, ಚಿನ್ನದ ಚೈನ್ ನೀಡುವ ಮೂಲಕ ಸನ್ಮಾನ ಮಾಡಿದ್ದಾರೆ. ಜೊತೆಗೆ ಶೇಖರ್ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಲಾಗಿದೆ ಎನ್ನಲಾಗಿದೆ.

ಶೇಖರ್ ರಜನೀಕಾಂತ್ ಅವರ ಅಪ್ಪಟ ಅಭಿಮಾನಿ. ರಜನೀಕಾಂತ್ ಹುಟ್ಟುಹಬ್ಬದ ನೆನಪಿಗಾಗಿ 5 ರೂಪಾಯಿ ಪರೋಟ ಮಾರಾಟ ಆರಂಭಿಸಿದ್ದ ಶೇಖರ್, ತಮ್ಮ ಹೋಟೆಲಿನಲ್ಲಿ ನಟನ ಫೋಟೋಗಳನ್ನು ಅಳವಡಿಸಿಕೊಂಡಿದ್ದು, ಕೈ ಮೇಲೆ ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾರೆ.

ಈ ಘಟನೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಜನೀಕಾಂತ್ ಅವರ ವ್ಯಕ್ತಿತ್ವಕ್ಕೆ ಜನರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸ್ಪರ್ಧಿಗಳ ಟೀಕೆಗೂ ನಗುವಿನಿಂದ ಉತ್ತರ: ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟನ ನಿಷ್ಕಲ್ಮಶ ಮಾತುಗಳಿಗೆ ಫ್ಯಾನ್ಸ್ ಫಿದಾ

‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿಜೇತ ಗಿಲ್ಲಿ ನಟ ಇದೀಗ ಮಾಧ್ಯಮ ಸಂದರ್ಶನಗಳಲ್ಲಿ ತಮ್ಮ ವ್ಯಕ್ತಿತ್ವದ ಮೂಲಕ ಮತ್ತೆ ಜನಮನ ಸೆಳೆಯುತ್ತಿದ್ದಾರೆ. ಕಾರ್ಯಕ್ರಮದ ವೇಳೆ ನಡೆದ ಜಗಳಗಳು, ಟೀಕೆಗಳ ಬಗ್ಗೆ ಮಾತನಾಡಿರುವ ಅವರು, “ಯಾರ ಮೇಲೂ ದ್ವೇಷ ಇಲ್ಲ” ಎಂದು ಹೇಳಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಕಾಮಿಡಿ ಮತ್ತು ಸರಳ ಸ್ವಭಾವದ ಮೂಲಕ ಗಿಲ್ಲಿ ನಟ ವೀಕ್ಷಕರ ಹೃದಯ ಗೆದ್ದಿದ್ದರು. ಬಿಗ್ ಬಾಸ್ ಮುಗಿದ ನಂತರವೂ ಅವರ ಜನಪ್ರಿಯತೆ ಇಳಿಮುಖವಾಗದೇ, ಕರ್ನಾಟಕ ಮಾತ್ರವಲ್ಲದೆ ಅಕ್ಕಪಕ್ಕದ ರಾಜ್ಯಗಳಲ್ಲಿಯೂ ಅವರ ರೀಲ್ಸ್ ವೈರಲ್ ಆಗುತ್ತಿವೆ.

ಸೀಸನ್ ಮುಗಿದ ಬಳಿಕ ಹಲವಾರು ಸ್ಪರ್ಧಿಗಳು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಡಾಗ್ ಸತೀಶ್ ಅವರು ಗಿಲ್ಲಿ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿದ್ದು, ಅಶ್ವಿನಿ ಗೌಡ ಅವರು ಗಿಲ್ಲಿಯ ಗೆಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಎಲ್ಲಾ ವಿಚಾರಗಳಿಗೆ ಪ್ರತಿಕ್ರಿಯಿಸಿರುವ ಗಿಲ್ಲಿ ನಟ,
“ಬಿಗ್ ಬಾಸ್ ಮನೆಯಲ್ಲಿ ಜಗಳ ಸಹಜ. ಟಾಸ್ಕ್, ನಾಮಿನೇಷನ್ ಎಲ್ಲವೂ ಆಟದ ಭಾಗ. ಹೊರಬಂದ ಮೇಲೆ ನಾನು ಯಾವುದನ್ನೂ ಮನಸ್ಸಿಗೆ ಹಚ್ಚಿಕೊಂಡಿಲ್ಲ” ಎಂದು ಹೇಳಿದ್ದಾರೆ.

ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ನಟರನ್ನು ಹೊಗಳುತ್ತಿದ್ದು, “ನಿನ್ನ ಮನಸ್ಸು ಬಹಳ ಶುದ್ಧ” ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ಗಿಲ್ಲಿ ನಟರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸಾಮಾನ್ಯ ಹಿನ್ನೆಲೆಯಿಂದ ಬಂದ ಗಿಲ್ಲಿ ನಟ, ಕಷ್ಟಪಟ್ಟು ಈ ಮಟ್ಟಕ್ಕೆ ತಲುಪಿದ್ದಾರೆ. ಈಗ ಅವರಿಗೆ ಸಿನಿಮಾಗಳಲ್ಲಿ ಅವಕಾಶಗಳು ಹೆಚ್ಚಾಗುತ್ತಿದ್ದು, ಅನೇಕ ವೇದಿಕೆಗಳಲ್ಲಿ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಗಿಲ್ಲಿ ನಟರನ್ನು 2 ಮಿಲಿಯನ್‌ಗಿಂತ ಹೆಚ್ಚು ಜನ ಫಾಲೋ ಮಾಡುತ್ತಿರುವುದು ಅವರ ಜನಪ್ರಿಯತೆಯ ಸಾಕ್ಷಿಯಾಗಿದೆ.

ಭಾರಿ ಸದ್ದು ಮಾಡಿದ ಮದುವೆಗೆ ಬ್ರೇಕ್: ವಿಚ್ಛೇದನ ಘೋಷಿಸಿದ ‘ರಾಧಾ ರಮಣ’ ಖ್ಯಾತಿಯ ಅನುಷಾ ಹೆಗಡೆ 

ಟಿವಿ ಲೋಕದಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ಇದೀಗ ಕಿರುತೆರೆ ನಟಿ ಅನುಷಾ ಹೆಗಡೆ ದಾಂಪತ್ಯಕ್ಕೂ ಅಂತ್ಯ ಬಂದಿದೆ. ಅನುಷಾ ಹೆಗಡೆ ಅವರು ತಮ್ಮ ಪತಿ ಪ್ರತಾಪ್ ಸಿಂಗ್ ಅವರಿಂದ ಅಧಿಕೃತವಾಗಿ ವಿಚ್ಛೇದನ ಪಡೆದಿರುವುದನ್ನು ಸಾಮಾಜಿಕ ಜಾಲತಾಣದ ಮೂಲಕ ಪ್ರಕಟಿಸಿದ್ದಾರೆ.

‘ರಾಧಾ ರಮಣ’ ಧಾರಾವಾಹಿಯ ದೀಪಿಕಾ ಪಾತ್ರದಿಂದ ಮನೆಮಾತಾಗಿದ್ದ ಅನುಷಾ ಹೆಗಡೆ, ನಂತರ ತೆಲುಗು ಮತ್ತು ಕನ್ನಡ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ತೆಲುಗಿನ ‘ನಿನ್ನೆ ಪೆಳ್ಳಾಡತಾ’ ಧಾರಾವಾಹಿಯಲ್ಲಿ ನಟಿಸುವಾಗಲೇ ಪ್ರತಾಪ್ ಸಿಂಗ್ ಅವರೊಂದಿಗೆ ಪ್ರೀತಿ ಬೆಳೆದು, ಇಬ್ಬರೂ ವಿವಾಹವಾಗಿದ್ದರು.

2020ರ ಫೆಬ್ರವರಿಯಲ್ಲಿ ಹೈದರಾಬಾದ್‌ನ ತಾರಮತಿ ಬಾರಾದಾರಿ ಅರಮನೆಯಲ್ಲಿ ಅದ್ಧೂರಿಯಾಗಿ ನಡೆದ ಈ ಮದುವೆ ಭಾರಿ ಸುದ್ದಿಯಾಗಿತ್ತು. ಐದು ಗಂಟೆಗಳ ಕಾಲ ನಡೆದ ವಿವಾಹ ಶಾಸ್ತ್ರಗಳು ಆ ಸಮಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದವು. ಆದರೆ ಅದೇ ಸಂಬಂಧ ಇದೀಗ ಕೇವಲ ಆರು ವರ್ಷಗಳಲ್ಲಿ ಅಂತ್ಯ ಕಂಡಿದೆ.

2023ರಿಂದಲೇ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದರೂ, ಅನುಷಾ ಅಧಿಕೃತವಾಗಿ ಸ್ಪಷ್ಟನೆ ನೀಡಿರಲಿಲ್ಲ. ಇದೀಗ ಇನ್ಸ್ಟಾಗ್ರಾಂನಲ್ಲಿ,
“2023ರಿಂದ ಸಮಸ್ಯೆಗಳು ಆರಂಭವಾಗಿದ್ದು, 2025ರಲ್ಲಿ ಕಾನೂನಾತ್ಮಕವಾಗಿ ವಿಚ್ಛೇದನ ಪಡೆದಿದ್ದೇವೆ” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಈ ವಿಚಾರವನ್ನು ಮುಂದುವರೆಸಿ ಚರ್ಚಿಸುವ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.

ಅನುಷಾ ಹೆಗಡೆ ಅವರ ವೃತ್ತಿಜೀವನದ ಕುರಿತು ಹೇಳುವುದಾದರೆ, 2016ರಲ್ಲಿ ‘ಎನ್ಎಚ್ 37’ ಸಿನಿಮಾದಲ್ಲಿ ಅಭಿನಯ, ‘ಬಣ್ಣ ಬಣ್ಣದ ಬದುಕು’ ಸಿನಿಮಾಕ್ಕೆ ನೃತ್ಯ ನಿರ್ದೇಶನ, 2017ರಲ್ಲಿ ‘ರಾಧಾ ರಮಣ’, 2018ರಲ್ಲಿ ‘ನಿನ್ನೇ ಪೆಲ್ಲಾಡುತಾ’, 2019ರಲ್ಲಿ ‘ಸೂರ್ಯಕಾಂತಂ’, 2022ರಲ್ಲಿ ‘ಆನಂದ ರಾಗಂ’ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಪ್ರಸ್ತುತ ಕನ್ನಡದ ‘ಅನು ಪಲ್ಲವಿ’ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.

‘ನನ್ನನ್ನು ಯಾರೂ ಮುರಿಯಲು ಸಾಧ್ಯವಿಲ್ಲ’ — ರಾಜಕೀಯ ದಾಳಿ, ಸಿಬಿಎಫ್ಸಿ ಸಂಕಷ್ಟ, ಸಿಬಿಐ ವಿಚಾರಣೆಗಳ ನಡುವೆ ವಿಜಯ್ ಸವಾಲಿನ ಮಾತು

ಚೆನ್ನೈ: ದಳಪತಿ ವಿಜಯ್ ರಾಜಕೀಯ ಪ್ರವೇಶಿಸಿದ ನಂತರ ಸಂಕಷ್ಟಗಳು ಸರಮಾಲೆಯಂತೆ ಎದುರಾಗುತ್ತಿವೆ. ಕರೂರು ಕಾಲ್ತುಳಿತ ಪ್ರಕರಣದ ಚರ್ಚೆ, ಸಿಬಿಐ ವಿಚಾರಣೆಗಳು ಹಾಗೂ ತಮ್ಮ ಕೊನೆಯ ಸಿನಿಮಾ ‘ಜನ ನಾಯಗನ್’ಗೆ ಸಿಬಿಎಫ್ಸಿ ಪ್ರಮಾಣಪತ್ರ ವಿಳಂಬ – ಈ ಎಲ್ಲಾ ಬೆಳವಣಿಗೆಗಳು ವಿಜಯ್ ಅವರನ್ನು ಸುತ್ತಿಕೊಂಡಿವೆ.

ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗ ವಿಜಯ್ ಅವರ ಪಕ್ಷಕ್ಕೆ ‘ವಿಶಲ್’ ಚಿಹ್ನೆಯನ್ನು ಅಧಿಕೃತವಾಗಿ ಮಂಜೂರು ಮಾಡಿದೆ. ಈ ಹಿನ್ನೆಲೆಯಲ್ಲಿ ನಡೆದ ಬೃಹತ್ ಸಭೆಯಲ್ಲಿ ವಿಜಯ್ ತಮ್ಮ ವಿರೋಧಿಗಳಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.

“ಕಳೆದ ಮೂರು ದಶಕಗಳಲ್ಲಿ ರಾಜಕೀಯ ಪಕ್ಷಗಳು ಜನರನ್ನು ನಿರ್ಲಕ್ಷ್ಯ ಮಾಡಿವೆ. ಜನರು ನನಗೆ ನೀಡಿದ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತೇನೆ” ಎಂದು ಹೇಳಿದರು.
“ನಾನು ಯಾರಿಗೂ ಬಗ್ಗುವುದಿಲ್ಲ, ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ” ಎಂದು ಘೋಷಿಸಿದರು.

ಇತ್ತೀಚಿನ ದಿನಗಳಲ್ಲಿ ವಿಜಯ್ ರಾಜಕೀಯ ಒತ್ತಡದಿಂದ ಕುಗ್ಗಿದ್ದಾರೆ, ಅವರು ರಾಜಕೀಯದಿಂದ ಹಿಂದೆ ಸರಿಯಬಹುದು ಅಥವಾ ಬೇರೆ ಪಕ್ಷದೊಂದಿಗೆ ಸಂಧಾನ ಮಾಡಬಹುದು ಎಂಬ ವದಂತಿಗಳು ಹರಿದಾಡಿದ್ದವು. ಇದಕ್ಕೆ ಪ್ರತಿಕ್ರಿಯೆಯಂತೆ ವಿಜಯ್ ತಮ್ಮ ಭಾಷಣದಲ್ಲಿ ಈ ಮಾತುಗಳನ್ನಾಡಿದ್ದಾರೆ.

ಇನ್ನೊಂದೆಡೆ, ‘ಜನ ನಾಯಗನ್’ ಸಿನಿಮಾಗೆ ಸಿಬಿಎಫ್ಸಿ ಪ್ರಮಾಣಪತ್ರ ನಿರಾಕರಣೆ ವಿಚಾರ ನ್ಯಾಯಾಲಯದ ಮುಂದೆ ಇದ್ದು, ಜನವರಿ 27ರಂದು ತೀರ್ಪು ಪ್ರಕಟವಾಗಲಿದೆ. ಅಂದು ಈ ಸಿನಿಮಾದ ಮುಂದಿನ ಭವಿಷ್ಯ ಸ್ಪಷ್ಟವಾಗಲಿದೆ.

ಧರ್ಮೇಂದ್ರಗೆ ಪದ್ಮವಿಭೂಷಣ; ಮಮ್ಮುಟ್ಟಿ, ಅಲ್ಕಾ ಯಾಗ್ನಿಕ್‌ಗೆ ಪದ್ಮಭೂಷಣ ಪ್ರಶಸ್ತಿ ಗೌರವ

ನವದೆಹಲಿ: 2026ರ ಸಾಲಿನ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಪದ್ಮ ವಿಭೂಷಣ, ಪದ್ಮ ಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗಳನ್ನು ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸೇವೆ ಸಲ್ಲಿಸಿದ ಸಾಧಕರಿಗೆ ನೀಡಲಾಗಿದೆ.

ಈ ಬಾರಿ ಕಲಾ ಕ್ಷೇತ್ರದ ಸಾಧಕರಿಗೆ ಹೆಚ್ಚಿನ ಗೌರವ ಲಭಿಸಿದೆ. ಹಿರಿಯ ನಟ ಧರ್ಮೇಂದ್ರ ಅವರಿಗೆ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಅವರು 2025ರ ನವೆಂಬರ್‌ನಲ್ಲಿ ನಿಧನರಾಗಿದ್ದರು. ತಮಿಳುನಾಡಿನ ವೈಯಲಿನ್ ವಾದಕಿ ಎನ್. ರಾಜನ್ ಅವರಿಗೂ ಪದ್ಮ ವಿಭೂಷಣ ಲಭಿಸಿದೆ. ಪದ್ಮ ವಿಭೂಷಣ ಪಡೆದ ಐವರಲ್ಲಿ ಇಬ್ಬರು ಕಲಾ ಕ್ಷೇತ್ರಕ್ಕೆ ಸೇರಿದವರು.

ಒಟ್ಟು 13 ಪದ್ಮ ಭೂಷಣ ಪ್ರಶಸ್ತಿಗಳಲ್ಲಿ ನಾಲ್ಕು ಕಲಾ ಕ್ಷೇತ್ರಕ್ಕೆ ಲಭಿಸಿವೆ. ಖ್ಯಾತ ಗಾಯಕಿ ಅಲ್ಕಾ ಯಾಗ್ನಿಕ್, ಮಲಯಾಳಂ ನಟ ಮಮ್ಮುಟಿ, ಜಾಹೀರಾತು ಕ್ಷೇತ್ರದ ದಿಗ್ಗಜ ಪಿಯೂಷ್ ಪಾಂಡೆ (ಮರಣೋತ್ತರ) ಹಾಗೂ ಕರ್ನಾಟಕದ ಶತಾವಧಾನಿ ಗಣೇಶ್ ಅವರಿಗೆ ಪದ್ಮ ಭೂಷಣ ಘೋಷಿಸಲಾಗಿದೆ.

ಇನ್ನು ಪದ್ಮಶ್ರೀ ಪ್ರಶಸ್ತಿಗಳನ್ನು ತೆಲುಗಿನ ಹಿರಿಯ ನಟ ರಾಜೇಂದ್ರ ಪ್ರಸಾದ್, ನಟ ಮಾಗಂಟಿ ಮುರಳಿ ಮೋಹನ್ ಸೇರಿದಂತೆ ಹಲವು ಕಲಾವಿದರಿಗೆ ನೀಡಲಾಗಿದೆ. ಬಾಲಿವುಡ್‌ನ ಖ್ಯಾತ ನಟ ಹಾಗೂ ನಿರ್ದೇಶಕ ಸತೀಶ್ ಶಾ ಅವರಿಗೆ ಮರಣೋತ್ತರ ಪದ್ಮಶ್ರೀ ಗೌರವ ಲಭಿಸಿದೆ.

ಪದ್ಮ ಪ್ರಶಸ್ತಿಗಳು ಕಲೆ, ಸಮಾಜಸೇವೆ, ಶಿಕ್ಷಣ, ಸಾಹಿತ್ಯ, ವಿಜ್ಞಾನ, ವೈದ್ಯಕೀಯ, ಕ್ರೀಡೆ, ಆಡಳಿತ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ದೇಶಕ್ಕೆ ಮಹತ್ವದ ಕೊಡುಗೆ ನೀಡಿದವರಿಗೆ ನೀಡುವ ಅತ್ಯುನ್ನತ ನಾಗರಿಕ ಗೌರವಗಳಾಗಿವೆ.

error: Content is protected !!