Home Blog Page 128

ನರೇಂದ್ರ ಮೋದಿಯವರ ಆಡಳಿತ ಸೂತ್ರಗಳಿಂದ ದೇಶದ ಅದ್ಭುತ ಆರ್ಥಿಕ ಪ್ರಗತಿ: ಡಿ.ವಿ.ಸದಾನಂದ ಗೌಡ

0

ಬೆಂಗಳೂರು: ನಮ್ಮ ದೇಶದ ಆರ್ಥಿಕ ಪ್ರಗತಿ ಅತ್ಯಂತ ಅದ್ಭುತವಾಗಿರುವುದಕ್ಕೆ ವಿಕಸಿತ ಭಾರತದ ನಿರ್ಮಾಣಕ್ಕೆ ಪಣ ತೊಟ್ಟಿರುವ ನರೇಂದ್ರ ಮೋದಿಯವರ ಆಡಳಿತ ಸೂತ್ರಗಳೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಅಭಿಪ್ರಾಯಪಟ್ಟರು.

ಗಣರಾಜ್ಯೋತ್ಸವದ ಪ್ರಯುಕ್ತ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಧ್ವಜಾರೋಹಣ ನೆರವೇರಿಸಿದ ಅವರು ಮಾತನಾಡಿ, ಭಾರತವು ಪ್ರತಿ ಕ್ಷೇತ್ರದಲ್ಲೂ ಸ್ವಾಭಿಮಾನಿ ರಾಷ್ಟ್ರವಾಗುತ್ತಿದೆ. ಹಾಲು ಉತ್ಪಾದನೆಯಲ್ಲಿ ಅದು ಜಗತ್ತಿನ ನಂಬರ್ ಒನ್ ರಾಷ್ಟ್ರವಾಗಿದೆ. ಮಾವಿನ ಹಣ್ಣು ಮತ್ತಿತರ ತೋಟಗಾರಿಕಾ ಬೆಳೆಗಳನ್ನು ಹಾಗೂ ಆಹಾರೋತ್ಪನ್ನಗಳನ್ನು ನಾವು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಸರಬರಾಜು ಮಾಡುತ್ತಿದ್ದೇವೆ. ಚಂದ್ರಯಾನದಲ್ಲೂ ಭಾರತ ಮುಂಚೂಣಿಯಲ್ಲಿದೆ ಎಂದು ವಿವರಿಸಿದರು.

ಸುಮಾರು 50 ವರ್ಷಕ್ಕೂ ಹೆಚ್ಚು ಕಾಲ ದೇಶದ ಆಡಳಿತ ನಡೆಸಿದವರು ಸಂವಿಧಾನಕ್ಕೆ ಅಪಚಾರ ಮಾಡುವುದನ್ನು ನಾವು ನೋಡುತ್ತಿದ್ದೇವೆ. ಸಂವಿಧಾನಬದ್ಧವಾದ ವೇದಿಕೆಯನ್ನು ಮಾನ್ಯ ರಾಜ್ಯಪಾಲರ ಮೂಲಕ ದುರ್ಬಳಕೆ ಮಾಡಲು ಬೇಕಾದ ಪ್ರಯತ್ನಗಳನ್ನು ಮಾಡಿದ್ದಾರೆ. ಇದನ್ನು ಇಂದಿನ ವಿದ್ಯಮಾನಗಳನ್ನು ಗಮನಿಸಿದರೆ ಗೊತ್ತಾಗುತ್ತದೆ ಎಂದು ವಿಶ್ಲೇಷಿಸಿದರು.

ಗೌರವಾನ್ವಿತ ರಾಜ್ಯಪಾಲರ ಭಾಷಣದ ಮೂಲಕ ದ್ವೇಷ ಹರಡುವ ಪ್ರಯತ್ನ ಮಾಡಿದ್ದಾರೆ. ಇದೊಂದು ಕೆಟ್ಟ ಸಂಪ್ರದಾಯವಾಗಿದ್ದು, ಇದನ್ನು ಇಡೀ ರಾಜ್ಯದ ಜನತೆ ಖಂಡಿಸಬೇಕಾದ ದಿನವಿದು ಎಂದು ನುಡಿದರು. ಮೋದಿಜೀ ಅವರು ಪ್ರತಿ ಪ್ರಾದೇಶಿಕ ಭಾಷೆಗೆ ನೀಡುತ್ತಿದ್ದು, ಆಯಾ ರಾಜ್ಯದ ಸಂಸ್ಕøತಿ, ಸಂಸ್ಕಾರಗಳಿಗೆ ಉತ್ತೇಜನ ಕೊಡುತ್ತಿದ್ದಾರೆ ಎಂದು ವಿವರಿಸಿದರು.

ಗಣರಾಜ್ಯೋತ್ಸವಕ್ಕೂ ಮುನ್ನ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಮೋದಿ ಭೇಟಿ: ಹುತಾತ್ಮ ಯೋಧರಿಗೆ ಗೌರವ ನಮನ

0

ನವದೆಹಲಿ: 77ನೇ ಗಣರಾಜ್ಯೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು. ಪ್ರಧಾನಿ ಮೋದಿ ರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ವಾಗತಿಸಿದರು.

ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಪ್ರಧಾನಿ ಮೋದಿ ಅವರು ಎರಡು ನಿಮಿಷ ಮೌನಾಚರಣೆ ನಡೆಸಿ, ಪುಷ್ಪಗುಚ್ಛ ಸಮರ್ಪಿಸುವ ಮೂಲಕ ಮಡಿದ ವೀರಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಬಳಿಕ ಪ್ರಧಾನಿ ಮೋದಿ ಹಾಗೂ ಇತರ ಗಣ್ಯರು ಗಣರಾಜ್ಯೋತ್ಸವ ಪರೇಡ್ ವೀಕ್ಷಿಸಲು ಕರ್ತವ್ಯ ಪಥದತ್ತ ತೆರಳಿದರು.

ಕರ್ತವ್ಯ ಪಥದಲ್ಲಿ ನಡೆದ ಪರೇಡ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಹಾಗೂ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಹಾಜರಿದ್ದರು. ಮೂರು ಸೇನಾ ಪಡೆಗಳ ಮುಖ್ಯಸ್ಥರೂ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

ಗಣ್ಯರ ಸ್ವಾಗತದ ಬಳಿಕ ಪ್ರಧಾನಿಗಳು ಅತಿಥಿಗಳೊಂದಿಗೆ ಮುಖ್ಯ ವೇದಿಕೆಗೆ ತೆರಳಿದರು. ರಾಷ್ಟ್ರಗೀತೆ ನುಡಿಸಿದ ನಂತರ ಗಣರಾಜ್ಯೋತ್ಸವ ಪರೇಡ್ ಅಧಿಕೃತವಾಗಿ ಆರಂಭವಾಯಿತು. ಸಂಪ್ರದಾಯದಂತೆ ಪ್ರಧಾನಿ ಹಾಗೂ ಗಣ್ಯರ ಸಮ್ಮುಖದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 77ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಲಾದ 105 ಎಂಎಂ ಲೈಟ್ ಫೀಲ್ಡ್ ಗನ್‌ಗಳಿಂದ 21 ಗನ್ ಸೆಲ್ಯೂಟ್ ನೀಡಲಾಯಿತು. 172 ಫೀಲ್ಡ್ ರೆಜಿಮೆಂಟ್‌ನ 1721 ಸೆರಿಮೋನಿಯಲ್ ಬ್ಯಾಟರಿಯಿಂದ ಗೌರವ ವಂದನೆ ಸಲ್ಲಿಸಲಾಯಿತು.

ವಂದೇ ಮಾತರಂ ಗೀತೆ 150 ವರ್ಷಗಳನ್ನು ಪೂರೈಸಿರುವ ಹಿನ್ನೆಲೆ ಈ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮಗಳು ‘ವಂದೇ ಮಾತರಂ’ ಥೀಮ್‌ನಡಿ ನಡೆಯುತ್ತಿವೆ. ಪರೇಡ್ನಲ್ಲಿ ಆಪರೇಷನ್ ಸಿಂಧೂರ ಮಿಷನ್ ಪ್ರಮುಖ ಆಕರ್ಷಣೆಯಾಗಿದ್ದು, ದೇಶದ ಅಭೂತಪೂರ್ವ ಅಭಿವೃದ್ಧಿ, ಬಲಿಷ್ಠ ಸೈನಿಕ ಶಕ್ತಿ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯ ವೈಭವವನ್ನು ಪ್ರದರ್ಶಿಸಲಾಗುತ್ತಿದೆ.

ಗಣರಾಜ್ಯೋತ್ಸವ ಪರೇಡಿನಲ್ಲಿ ಎಸ್-400 ಪ್ರದರ್ಶನ: ಕರ್ತವ್ಯ ಪಥದಲ್ಲಿ ಭಾರತದ ಗೇಮ್ ಚೇಂಜರ್ ಶಕ್ತಿ ಅನಾವರಣ

0

ನವದೆಹಲಿ: ದೇಶಾದ್ಯಂತ 77ನೇ ಗಣರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ಈ ನಡುವೆ ಇಡೀ ದೇಶದ ಜನರ ಚಿತ್ತ ಇಂದು ದೆಹಲಿಯಕರ್ತವ್ಯ ಪಥದಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವ ಪರೇಡಿನತ್ತ ನೆಟ್ಟಿದೆ. ವಿಶೇಷವಾಗಿ, ಆಪರೇಷನ್ ಸಿಂಧೂರ ವೇಳೆ ಪಾಕಿಸ್ತಾನದ ಕ್ಷಿಪಣಿಗಳನ್ನು ಧ್ವಂಸಗೊಳಿಸಲು ಭಾರತ ಬಳಸಿದ್ದ ಎಸ್-400 ವಾಯುರಕ್ಷಣಾ ವ್ಯವಸ್ಥೆ ಇಂದು ಪರೇಡಿನಲ್ಲಿ ಪ್ರದರ್ಶಿಸಲ್ಪಡುತ್ತಿದೆ.

77ನೇ ಗಣರಾಜ್ಯೋತ್ಸವ ಪರೇಡಿನಲ್ಲಿ 17 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಹತ್ತಾರು ಟ್ಯಾಬ್ಲೋಗಳು ಭಾಗವಹಿಸಿವೆ. ಇದರ ಜೊತೆಗೆ ರಕ್ಷಣಾ ಇಲಾಖೆಯ ಟ್ಯಾಬ್ಲೋ ವಿಭಾಗದಲ್ಲಿ ಎಸ್-400 (ಸುದರ್ಶನ ಚಕ್ರ) ವಾಯುರಕ್ಷಣಾ ವ್ಯವಸ್ಥೆಯನ್ನು ವಿಶೇಷ ಆಕರ್ಷಣೆಯಾಗಿ ಪ್ರದರ್ಶಿಸಲಾಗುತ್ತಿದೆ.

ವಾಯುಪಡೆಯ ‘ಗೇಮ್ ಚೇಂಜರ್’

ಭಾರತೀಯ ವಾಯುಪಡೆಯ ಗೇಮ್ ಚೇಂಜರ್ ಎಂದೇ ಗುರುತಿಸಿಕೊಂಡಿರುವ ಎಸ್-400 ವಾಯುರಕ್ಷಣಾ ವ್ಯವಸ್ಥೆ, ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿತ್ತು. ದೀರ್ಘ ಶ್ರೇಣಿಯ ಮೇಲ್ಮೈಯಿಂದ ಆಕಾಶಕ್ಕೆ ಹೊಡೆಯುವ ಈ ಕ್ಷಿಪಣಿ ವ್ಯವಸ್ಥೆ, ಪಾಕಿಸ್ತಾನದ ಮಿಸೈಲ್ ಹಾಗೂ ಡ್ರೋನ್‌ಗಳನ್ನು ಪರಿಣಾಮಕಾರಿಯಾಗಿ ಹೊಡೆದುರುಳಿಸಿತ್ತು. ಇದರ ಪರಿಣಾಮವಾಗಿ, ಎಸ್-400 ವ್ಯವಸ್ಥೆಗೆ ಜಾಗತಿಕ ಮಟ್ಟದಲ್ಲೂ ಬೇಡಿಕೆ ಹೆಚ್ಚಾಗಿದೆ.

ರಷ್ಯಾ ಜೊತೆಗೆ ಮಹತ್ವದ ಒಪ್ಪಂದ

2018ರಲ್ಲಿ ಭಾರತ, ಎಸ್-400 ವಾಯುರಕ್ಷಣಾ ವ್ಯವಸ್ಥೆಗಳ ಖರೀದಿಗಾಗಿ ರಷ್ಯಾ ಜೊತೆ 5.5 ಶತಕೋಟಿ ಡಾಲರ್ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿತ್ತು. ಚೀನಾದ ಹೆಚ್ಚುತ್ತಿರುವ ಸೈನಿಕ ಶಕ್ತಿಯನ್ನು ಎದುರಿಸುವ ಉದ್ದೇಶದಿಂದ ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆರಂಭದಲ್ಲಿ ಪೂರೈಕೆಯಲ್ಲಿ ವಿಳಂಬವಾಗಿದ್ದರೂ, ಒಪ್ಪಂದದ ಅಡಿಯಲ್ಲಿ ಉಳಿದಿರುವ ಕೊನೆಯ ಎರಡು ಘಟಕಗಳು 2026 ಮತ್ತು 2027ರ ಅವಧಿಯಲ್ಲಿ ಭಾರತಕ್ಕೆ ಲಭ್ಯವಾಗುವ ಸಾಧ್ಯತೆ ಇದೆ.

Republic Day 2026: ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆ ಕೊಂಡಾಡಿದ ರಾಜ್ಯಪಾಲರು!

0

ಬೆಂಗಳೂರು: ರಾಜ್ಯದಲ್ಲಿ ಪ್ರಾದೇಶಿಕ ಅಸಮಾನತೆಗಳನ್ನು ಹೋಗಲಾಡಿಸಲು ಕರ್ನಾಟಕ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದ್ದು, ಇದರ ಪರಿಣಾಮವಾಗಿ ಸಾಮಾಜಿಕ ಹಾಗೂ ರಾಜಕೀಯ ಚೈತನ್ಯ ಬೆಳೆಯುತ್ತಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದ್ದಾರೆ.

77ನೇ ಗಣರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ಮಾಣೆಕ್‌ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನದಲ್ಲಿ ಉಲ್ಲೇಖಿಸಿರುವ ಸ್ವಾತಂತ್ರ, ಸಮಾನತೆ ಮತ್ತು ಭ್ರಾತೃತ್ವವನ್ನು ರಾಜ್ಯ ಸರ್ಕಾರ ತನ್ನ ಆಡಳಿತದ ಕೇಂದ್ರಬಿಂದುವಾಗಿಸಿಕೊಂಡಿದೆ ಎಂದು ಹೇಳಿದರು.

ರಾಜ್ಯದ ಪ್ರತಿಯೊಂದು ಪ್ರದೇಶ ಹಾಗೂ ಸಮುದಾಯಗಳ ಧ್ವನಿಯನ್ನು ಆಲಿಸಿ, ನ್ಯಾಯಯುತ ಪರಿಹಾರ ನೀಡುವ ಕಾರ್ಯ ಸರ್ಕಾರ ಮಾಡುತ್ತಿದೆ. ವಿವಿಧ ನೇಮಕಾತಿಗಳಲ್ಲಿ ಅಲಕ್ಷಿತ ಮತ್ತು ಹಿಂದುಳಿದ ವರ್ಗಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಜನಸಮುದಾಯಗಳ ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಅರ್ಥಮಾಡಿಕೊಳ್ಳಲು ಆಯೋಗಗಳನ್ನು ರಚಿಸಿ ಅವುಗಳ ಶಿಫಾರಸುಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.
ಸಂವಿಧಾನದ ಆಶಯದಂತೆ ಅತ್ಯಂತ ಹಿಂದುಳಿದ ವರ್ಗಗಳ ಬಲವರ್ಧನೆಗಾಗಿ ಹಾಗೂ ಜನರಿಗೆ ಆರ್ಥಿಕ ಚೈತನ್ಯ ಒದಗಿಸಲು ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಜನಕಲ್ಯಾಣ ಕಾರ್ಯಕ್ರಮಗಳಿಗೆ ವರ್ಷಕ್ಕೆ ಸುಮಾರು 1.12 ಲಕ್ಷ ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, ಗ್ಯಾರಂಟಿ ಯೋಜನೆಗಳಿಗಾಗಿ ಇದುವರೆಗೆ 1.13 ಲಕ್ಷ ಕೋಟಿ ರೂ.ಗೂ ಅಧಿಕ ಅನುದಾನ ನೀಡಲಾಗಿದೆ ಎಂದು ರಾಜ್ಯಪಾಲರು ಮಾಹಿತಿ ನೀಡಿದರು.

ಈ ಯೋಜನೆಗಳ ಪರಿಣಾಮವಾಗಿ ಜನರ ಕೊಳ್ಳುವ ಶಕ್ತಿ ಹೆಚ್ಚಿದ್ದು, ಕುಟುಂಬಗಳು ಆರ್ಥಿಕವಾಗಿ ಸಬಲವಾಗುತ್ತಿವೆ. ಮಹಿಳೆಯರಲ್ಲಿ ಹೊಸ ಆರ್ಥಿಕ ಹಾಗೂ ಸಾಮಾಜಿಕ ಉತ್ಸಾಹ ಮೂಡಿದೆ. ಗ್ರಾಹಕ ಬೆಲೆ ಸೂಚ್ಯಂಕಗಳು ಆರೋಗ್ಯಕರವಾಗಿರುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ ಎಂದು ಅವರು ಹೇಳಿದರು. ಗಣರಾಜ್ಯೋತ್ಸವದ ಮಹತ್ವವನ್ನು ವಿವರಿಸಿದ ರಾಜ್ಯಪಾಲರು, ಸಾವಿರಾರು ವರ್ಷಗಳ ರಾಜಪ್ರಭುತ್ವ ಹಾಗೂ ಶತಮಾನಗಳ ವಸಾಹತುಶಾಹಿ ಆಡಳಿತಕ್ಕೆ ತೆರೆ ಎಳೆದ ದಿನವೇ ಜನವರಿ 26 ಎಂದು ಸ್ಮರಿಸಿದರು. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ಪ್ರತಿಷ್ಠಾಪಿಸುವ ಸಂವಿಧಾನವನ್ನು ಜಾರಿಗೆ ತಂದ ದಿನವೇ ಗಣರಾಜ್ಯೋತ್ಸವ ಎಂದು ಹೇಳಿದರು.

ಗಣತಂತ್ರ ವ್ಯವಸ್ಥೆಯ ನಿರ್ಮಾಣಕ್ಕಾಗಿ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಪೂರ್ವಕವಾಗಿ ಸ್ಮರಿಸೋಣ. ನಮ್ಮ ಹಿರಿಯರ ಶ್ರಮ ವ್ಯರ್ಥವಾಗದಂತೆ ಸಂವಿಧಾನದ ಮೌಲ್ಯಗಳನ್ನು ಕಾಪಾಡಿಕೊಳ್ಳುವ ಪ್ರತಿಜ್ಞೆ ಮಾಡೋಣ ಎಂದು ಕರೆ ನೀಡಿದರು. ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳನ್ನು ಉಲ್ಲೇಖಿಸಿದ ಅವರು, ರಾಜಕೀಯ ಪ್ರಜಾಪ್ರಭುತ್ವವನ್ನು ಸಾಮಾಜಿಕ ಪ್ರಜಾಪ್ರಭುತ್ವವಾಗಿಸಬೇಕೆಂದು ಹೇಳಿದರು. ಸ್ವಾತಂತ್ರ, ಸಮಾನತೆ ಮತ್ತು ಭ್ರಾತೃತ್ವ ಇವುಗಳನ್ನು ಬದುಕಿನ ಮೌಲ್ಯಗಳಾಗಿ ಅಳವಡಿಸಿಕೊಂಡಾಗಲೇ ನಿಜವಾದ ಪ್ರಜಾಪ್ರಭುತ್ವ ಸಾಧ್ಯ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟರು.

ಕುಡಿದ ಮತ್ತಲ್ಲಿ ಅಡ್ಡಾದಿಡ್ಡಿ ಚಾಲನೆ: ಮರಕ್ಕೆ ಕಾರು ಡಿಕ್ಕಿ, ಯುವಕ ಸ್ಥಳದಲ್ಲೇ ಸಾವು, ಚಾಲಕ ಗಂಭೀರ!

0

ಬೆಂಗಳೂರು: ಕುಡಿದ ಮತ್ತಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಪರಿಣಾಮ ಮರಕ್ಕೆ ಕಾರು ಡಿಕ್ಕಿಯಾಗಿ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿ, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಕಮ್ಮಸಂದ್ರದಲ್ಲಿ ನಡೆದಿದೆ.

ಹೆಬ್ಬಗೋಡಿ ನಿವಾಸಿ ಪ್ರಶಾಂತ್ (28) ಮೃತ ಯುವಕ. ಅಪಘಾತದಲ್ಲಿ ರೋಶನ್ ಹೆಗ್ಗಡೆ (27) ಗಂಭೀರವಾಗಿ ಗಾಯಗೊಂಡಿದ್ದಾನೆ. ಭಾನುವಾರ ಕ್ರಿಕೆಟ್ ಪಂದ್ಯ ವೀಕ್ಷಣೆ ಮುಗಿದ ಬಳಿಕ ಸಂಜೆ ಇಬ್ಬರೂ ಸೇರಿ ಎಣ್ಣೆಪಾರ್ಟಿ ನಡೆಸಿದ್ದರು. ಈ ವೇಳೆ ಇಬ್ಬರ ನಡುವೆ ಕಿರಿಕ್ ನಡೆದಿದ್ದು, ಮನೆಗೆ ಹೊರಡುವ ಸಂದರ್ಭದಲ್ಲೂ ಕಾರಿನೊಳಗೆ ವಾಗ್ವಾದ ಮುಂದುವರಿದಿದೆ ಎನ್ನಲಾಗಿದೆ. ಕಾರು ಚಾಲನೆ ಮಾಡುತ್ತಿದ್ದ ರೋಶನ್ ಹೆಗ್ಗಡೆಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದರಿಂದ ಆಕ್ರೋಶಗೊಂಡ ರೋಶನ್, ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ್ದಾನೆ. ಪರಿಣಾಮವಾಗಿ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಪ್ರಶಾಂತ್ ಮೃತಪಟ್ಟಿದ್ದಾನೆ.

ಗಾಯಾಳು ರೋಶನ್‌ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭೀಕರ ಅಪಘಾತದ ದೃಶ್ಯ ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೆಂಗಳೂರು| 77ನೇ ಗಣರಾಜ್ಯೋತ್ಸವ ಸಂಭ್ರಮ: ಮಾಣೆಕ್‌ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲರಿಂದ ಧ್ವಜಾರೋಹಣ!

0

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ನಗರದ ಮಾಣೆಕ್‌ ಷಾ ಪರೇಡ್ ಮೈದಾನದಲ್ಲಿ ಬೆಳಿಗ್ಗೆ ಸರಿಯಾಗಿ 9 ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಬಳಿಕ ರಾಷ್ಟ್ರಗೀತೆಯೊಂದಿಗೆ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಲಾಯಿತು. ಧ್ವಜಾರೋಹಣದ ನಂತರ ರಾಜ್ಯಪಾಲರು ಪೊಲೀಸ್ ಪಡೆಗಳಿಂದ ವಂದನಾ ಗೌರವ ಸ್ವೀಕರಿಸಿ, ಗಣರಾಜ್ಯೋತ್ಸವ ಪರೇಡ್ ವೀಕ್ಷಿಸಿದರು. ನಂತರ ಅವರು ರಾಜ್ಯದ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಉನ್ನತ ಅಧಿಕಾರಿಗಳು ಹಾಗೂ ಅನೇಕ ಗಣ್ಯರು ಭಾಗವಹಿಸಿದ್ದರು.

ಗಣರಾಜ್ಯೋತ್ಸವದ ಹಿನ್ನೆಲೆ ಮಾಣೆಕ್‌ ಷಾ ಪರೇಡ್ ಮೈದಾನ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕಠಿಣ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು. ನಗರಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ವಹಿಸಿತ್ತು. ಸಾರ್ವಜನಿಕರಿಗಾಗಿ ಆನ್‌ಲೈನ್ ಮೂಲಕ 2,000 ಇ-ಪಾಸ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಇನ್ನೂ ಪರೇಡ್‌ನಲ್ಲಿ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಒಳಗೊಂಡಂತೆ ಒಟ್ಟು 516 ಮಂದಿ ಭಾಗವಹಿಸಿದ್ದರು. ಭದ್ರತಾ ವ್ಯವಸ್ಥೆಯ ಭಾಗವಾಗಿ ಸುಮಾರು 2,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಬೈಕ್ ಗೆ ಕಾರು ಡಿಕ್ಕಿ; ತಾಯಿ ಸ್ಥಳದಲ್ಲೇ ಸಾವು, ಮಗಳು ಪಾರು; ಚಾಲಕ ಅರೆಸ್ಟ್

0

ಬೆಂಗಳೂರು:- ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ತಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಗಳಿಗೆ ಗಾಯವಾಗಿರುವ ಘಟನೆ ಬಾಣಸವಾಡಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

ಬಾಬುಸಾಬ್ ಪಾಳ್ಯ ನಿವಾಸಿ ಅರುಣಾ (42) ಮೃತ ಮಹಿಳೆ. ಜ. 24ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತ ಮಹಿಳೆ, ಹೆಣ್ಣೂರು ಅಂಡರ್ ಪಾಸ್ ಮೂಲಕ ಮಗಳನ್ನ ತಮ್ಮ ಬೈಕ್ ನಲ್ಲಿ ಕೂರಿಸಿಕೊಂಡು ಹೋಗ್ತಿದ್ದರು. ಈ‌ ವೇಳೆ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದಿತ್ತು. ಪರಿಣಾಮ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಮಹಿಳೆಗೆ ತೀವ್ರ ಗಾಯಗಳಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಮಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೋಲೀಸರು ತನಿಖೆ ಚುರುಕುಗೊಳಿಸಿ, ಕಾರು ಚಾಲಕನನ್ನು ಬಂಧಿಸಿದ್ದಾರೆ. ಬಂಧಿತ ಕಾರು ಚಾಲಕ ಕೇರಳ ಮೂಲದವ ಎನ್ನಲಾಗಿದೆ. ಬಾಣಸವಾಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು ಸೇರಿ ಕೆಲ ಜಿಲ್ಲೆಗಳಲ್ಲಿ ಇಂದು ತುಂತುರು ಮಳೆ; ಇಂದಿನ ಹವಾಮಾನ ವರದಿ ಹೀಗಿದೆ!

0

ಬೆಂಗಳೂರು:- ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ತೀವ್ರ ಚಳಿ ಮತ್ತು ಒಣಹವೆಯ ವಾತಾವರಣ ಮುಂದುವರಿದಿದ್ದು, ಇಂದು ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿಂದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಒಳನಾಡು ಪ್ರದೇಶಗಳಲ್ಲಿ ತೀವ್ರ ಚಳಿ ಮತ್ತು ಒಣಹವೆಯ ವಾತಾವರಣ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.

ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಇಂದೂ ಒಣಹವೆಯ ವಾತಾವರಣವೇ ಇರಲಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಮಳೆಯಿಲ್ಲದೆ ಒಣಹವೆ ಮುಂದುವರಿಯಲಿದೆ.

ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣಹವೆಯ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು ಬೆಂಗಳೂರಿನಲ್ಲಿ ಚಳಿಯ ಜೊತೆಗೆ ಮಂಜು ಮುಸುಕಿದ ವಾತಾವರಣ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಅಂದಾಜಿಸಲಾಗಿದೆ. ಚಳಿಯಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಹಾಗೂ ವೈದ್ಯರು ಸಲಹೆ ನೀಡಿದ್ದು, ಬೆಚ್ಚಗಿನ ಉಡುಪು ಧರಿಸುವುದು, ಬಿಸಿ ಆಹಾರ ಸೇವನೆ ಹಾಗೂ ಸಮತೋಲನ ಆಹಾರಕ್ಕೆ ಒತ್ತು ನೀಡುವಂತೆ ಸೂಚಿಸಿದ್ದಾರೆ.

ಭೀಕರ ರಸ್ತೆ ಅಪಘಾತ: ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರು, ಮೂವರು ಸಾವು!

0

ತುಮಕೂರು:- ತುಮಕೂರು ತಾಲೂಕಿನ ನೆಲಹಾಳ್ ಸಮೀಪದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ.

ಮೃತರೆಲ್ಲರೂ ಬೆಂಗಳೂರು ಮೂಲದ ನಿವಾಸಿಗಳು ಎಂದು ಹೇಳಲಾಗಿದ್ದು, ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಓರ್ವ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತರು ಗೋಕರ್ಣ, ಮುರುಡೇಶ್ವರ ಹಾಗೂ ಉಡುಪಿ ಕಡೆ ಪ್ರವಾಸಕ್ಕೆ ತೆರಳಿದ್ದು, ಪ್ರವಾಸ ಮುಗಿಸಿ ಇಂದು ಬೆಂಗಳೂರಿಗೆ ವಾಪಸ್ ಆಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಿಂತಿದ್ದ ಲಾರಿಗೆ ವೇಗವಾಗಿ ಬಂದ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಅಪಘಾತದ ಮಾಹಿತಿ ತಿಳಿದ ತಕ್ಷಣ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆವಿ ಹಾಗೂ ಕೋರಾ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

‘ವಂದೇ ಮಾತರಂ’ ಥೀಂನಲ್ಲಿ ಗಣರಾಜ್ಯೋತ್ಸವ ಆಚರಣೆ; ದೇಶದ ಜನತೆಗೆ ಶುಭ ಕೋರಿದ ಪಿಎಂ ಮೋದಿ!

0

ನವದೆಹಲಿ: ಭಾರತ ಇಂದು 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದೆ.

ದೆಹಲಿಯ ಕರ್ತವ್ಯಪಥದಲ್ಲಿ ಹತ್ತಾರು ವಿಶೇಷತೆಗಳೊಂದಿಗೆ ಗಣರಾಜ್ಯೋತ್ಸವ ಪಥಸಂಚಲನ ನಡೆಯಲಿದ್ದು, ದೇಶದ ಪ್ರಜಾಪ್ರಭುತ್ವದ ಶಕ್ತಿ, ಸೇನಾ ಸಾಮರ್ಥ್ಯ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ವಿಶ್ವದ ಮುಂದೆ ಪ್ರದರ್ಶಿಸಲಾಗುತ್ತಿದೆ. ಗಣರಾಜ್ಯೋತ್ಸವದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ,
“ಗಣರಾಜ್ಯೋತ್ಸವದಂದು ನಮ್ಮ ಎಲ್ಲಾ ದೇಶವಾಸಿಗಳಿಗೆ ಹಾರ್ದಿಕ ಶುಭಾಶಯಗಳು. ಭಾರತದ ಹೆಮ್ಮೆ ಮತ್ತು ವೈಭವದ ಸಂಕೇತವಾದ ಈ ರಾಷ್ಟ್ರೀಯ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಹೊಸ ಶಕ್ತಿ ಮತ್ತು ಉತ್ಸಾಹವನ್ನು ತುಂಬಲಿ. ವಿಕಸಿತ ಭಾರತದ ಸಂಕಲ್ಪ ಇನ್ನಷ್ಟು ಬಲಗೊಳ್ಳಲಿ” ಎಂದು ಶುಭಕೋರಿದ್ದಾರೆ.

ಈ ವರ್ಷ ಗಣರಾಜ್ಯೋತ್ಸವವನ್ನು ‘ವಂದೇ ಮಾತರಂ’ ಪರಿಕಲ್ಪನೆಯಲ್ಲಿ ಆಚರಿಸಲಾಗುತ್ತಿದ್ದು, ವಂದೇ ಮಾತರಂ ಗೀತೆ 150 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಎಲ್ಲಾ ಕಾರ್ಯಕ್ರಮಗಳೂ ಅದೇ ಥೀಮ್‌ನಡಿ ನಡೆಯಲಿವೆ. ಬೆಳಗ್ಗೆ 10.30ಕ್ಕೆ ಪಥಸಂಚಲನ ಆರಂಭವಾಗಲಿದ್ದು, ಸುಮಾರು 90 ನಿಮಿಷಗಳ ಕಾಲ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಈ ವರ್ಷದ ಗಣರಾಜ್ಯೋತ್ಸವಕ್ಕೆ ವಿದೇಶಿ ಅತಿಥಿಗಳಾಗಿ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್‌ಲೇನ್ ಹಾಗೂ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೋ ಕೋಸ್ಟಾ ಭಾಗವಹಿಸಲಿದ್ದು, ಪದ್ಧತಿಯಂತೆ 21 ಗನ್ ಸೆಲ್ಯೂಟ್ ಮತ್ತು ಗಾರ್ಡ್ ಆಫ್ ಆನರ್ ಮೂಲಕ ಗೌರವಿಸಲ್ಪಡಲಿದ್ದಾರೆ.

ಪಥಸಂಚಲನದ ಪ್ರಮುಖ ಆಕರ್ಷಣೆಯಾಗಿ ಆಪರೇಷನ್ ಸಿಂಧೂರ ಮಿಷನ್ ಪ್ರದರ್ಶನಗೊಳ್ಳಲಿದೆ. ಇದೇ ಮೊದಲ ಬಾರಿಗೆ ಭಾರತೀಯ ಸೇನೆ ಬ್ಯಾಟಲ್ ಅರೇ (ಯುದ್ಧ ಶ್ರೇಣಿ) ಪ್ರದರ್ಶಿಸಲಿದೆ. ಈ ಸಂದರ್ಭದಲ್ಲಿ ಆಧುನಿಕ ಶಸ್ತ್ರಾಸ್ತ್ರಗಳು, ಟ್ಯಾಂಕ್‌ಗಳು, ಕ್ಷಿಪಣಿಗಳು, ಡ್ರೋನ್‌ಗಳು ಹಾಗೂ ವಿವಿಧ ಸೇನಾ ರಚನೆಗಳ ಪ್ರದರ್ಶನ ನಡೆಯಲಿದೆ. ಭಾರತೀಯ ವಾಯುಪಡೆಯ ಯುದ್ಧವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಹಾರಾಟವೂ ಜನರ ಗಮನ ಸೆಳೆಯಲಿದೆ.

ಜೊತೆಗೆ ವಾಯುಪಡೆಯ ನಿವೃತ್ತ ಸೈನಿಕರ ವಿಶೇಷ ಟ್ಯಾಬ್ಲೋ ಕೂಡ ಪ್ರದರ್ಶಿಸಲಾಗುತ್ತದೆ.
ಈ ಬಾರಿ ಪಥಸಂಚಲನದಲ್ಲಿ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ವಿವಿಧ ಸಚಿವಾಲಯಗಳು ಹಾಗೂ ಇಲಾಖೆಗಳ ಒಟ್ಟು 30 ಸ್ತಬ್ಧಚಿತ್ರಗಳು ಭಾಗವಹಿಸಲಿದ್ದು, ಭಾರತದ ಸಂಸ್ಕೃತಿ, ಪರಂಪರೆ, ನವೀನತೆ ಮತ್ತು ಸ್ವಾವಲಂಬನೆಯನ್ನು ಬಿಂಬಿಸಲಿವೆ. ಸುಮಾರು 2500 ಕಲಾವಿದರು ಪಥಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಕೆಂಪುಕೋಟೆಯಲ್ಲಿ ಭಾರತ ಪರ್ವ, ರಾಷ್ಟ್ರೀಯ ಶಾಲಾ ಬ್ಯಾಂಡ್ ಸ್ಪರ್ಧೆ, ಪ್ರಾಜೆಕ್ಟ್ ವೀರ್ ಗಾಥಾ 5.0 ಮತ್ತು ಪ್ರಧಾನಮಂತ್ರಿಯವರ ಎನ್‌ಸಿಸಿ ರ್ಯಾಲಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

error: Content is protected !!