Home Blog Page 129

‘ವಂದೇ ಮಾತರಂ’ ಥೀಂನಲ್ಲಿ ಗಣರಾಜ್ಯೋತ್ಸವ ಆಚರಣೆ; ದೇಶದ ಜನತೆಗೆ ಶುಭ ಕೋರಿದ ಪಿಎಂ ಮೋದಿ!

0

ನವದೆಹಲಿ: ಭಾರತ ಇಂದು 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದೆ.

ದೆಹಲಿಯ ಕರ್ತವ್ಯಪಥದಲ್ಲಿ ಹತ್ತಾರು ವಿಶೇಷತೆಗಳೊಂದಿಗೆ ಗಣರಾಜ್ಯೋತ್ಸವ ಪಥಸಂಚಲನ ನಡೆಯಲಿದ್ದು, ದೇಶದ ಪ್ರಜಾಪ್ರಭುತ್ವದ ಶಕ್ತಿ, ಸೇನಾ ಸಾಮರ್ಥ್ಯ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ವಿಶ್ವದ ಮುಂದೆ ಪ್ರದರ್ಶಿಸಲಾಗುತ್ತಿದೆ. ಗಣರಾಜ್ಯೋತ್ಸವದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ,
“ಗಣರಾಜ್ಯೋತ್ಸವದಂದು ನಮ್ಮ ಎಲ್ಲಾ ದೇಶವಾಸಿಗಳಿಗೆ ಹಾರ್ದಿಕ ಶುಭಾಶಯಗಳು. ಭಾರತದ ಹೆಮ್ಮೆ ಮತ್ತು ವೈಭವದ ಸಂಕೇತವಾದ ಈ ರಾಷ್ಟ್ರೀಯ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಹೊಸ ಶಕ್ತಿ ಮತ್ತು ಉತ್ಸಾಹವನ್ನು ತುಂಬಲಿ. ವಿಕಸಿತ ಭಾರತದ ಸಂಕಲ್ಪ ಇನ್ನಷ್ಟು ಬಲಗೊಳ್ಳಲಿ” ಎಂದು ಶುಭಕೋರಿದ್ದಾರೆ.

ಈ ವರ್ಷ ಗಣರಾಜ್ಯೋತ್ಸವವನ್ನು ‘ವಂದೇ ಮಾತರಂ’ ಪರಿಕಲ್ಪನೆಯಲ್ಲಿ ಆಚರಿಸಲಾಗುತ್ತಿದ್ದು, ವಂದೇ ಮಾತರಂ ಗೀತೆ 150 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಎಲ್ಲಾ ಕಾರ್ಯಕ್ರಮಗಳೂ ಅದೇ ಥೀಮ್‌ನಡಿ ನಡೆಯಲಿವೆ. ಬೆಳಗ್ಗೆ 10.30ಕ್ಕೆ ಪಥಸಂಚಲನ ಆರಂಭವಾಗಲಿದ್ದು, ಸುಮಾರು 90 ನಿಮಿಷಗಳ ಕಾಲ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಈ ವರ್ಷದ ಗಣರಾಜ್ಯೋತ್ಸವಕ್ಕೆ ವಿದೇಶಿ ಅತಿಥಿಗಳಾಗಿ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್‌ಲೇನ್ ಹಾಗೂ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೋ ಕೋಸ್ಟಾ ಭಾಗವಹಿಸಲಿದ್ದು, ಪದ್ಧತಿಯಂತೆ 21 ಗನ್ ಸೆಲ್ಯೂಟ್ ಮತ್ತು ಗಾರ್ಡ್ ಆಫ್ ಆನರ್ ಮೂಲಕ ಗೌರವಿಸಲ್ಪಡಲಿದ್ದಾರೆ.

ಪಥಸಂಚಲನದ ಪ್ರಮುಖ ಆಕರ್ಷಣೆಯಾಗಿ ಆಪರೇಷನ್ ಸಿಂಧೂರ ಮಿಷನ್ ಪ್ರದರ್ಶನಗೊಳ್ಳಲಿದೆ. ಇದೇ ಮೊದಲ ಬಾರಿಗೆ ಭಾರತೀಯ ಸೇನೆ ಬ್ಯಾಟಲ್ ಅರೇ (ಯುದ್ಧ ಶ್ರೇಣಿ) ಪ್ರದರ್ಶಿಸಲಿದೆ. ಈ ಸಂದರ್ಭದಲ್ಲಿ ಆಧುನಿಕ ಶಸ್ತ್ರಾಸ್ತ್ರಗಳು, ಟ್ಯಾಂಕ್‌ಗಳು, ಕ್ಷಿಪಣಿಗಳು, ಡ್ರೋನ್‌ಗಳು ಹಾಗೂ ವಿವಿಧ ಸೇನಾ ರಚನೆಗಳ ಪ್ರದರ್ಶನ ನಡೆಯಲಿದೆ. ಭಾರತೀಯ ವಾಯುಪಡೆಯ ಯುದ್ಧವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಹಾರಾಟವೂ ಜನರ ಗಮನ ಸೆಳೆಯಲಿದೆ.

ಜೊತೆಗೆ ವಾಯುಪಡೆಯ ನಿವೃತ್ತ ಸೈನಿಕರ ವಿಶೇಷ ಟ್ಯಾಬ್ಲೋ ಕೂಡ ಪ್ರದರ್ಶಿಸಲಾಗುತ್ತದೆ.
ಈ ಬಾರಿ ಪಥಸಂಚಲನದಲ್ಲಿ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ವಿವಿಧ ಸಚಿವಾಲಯಗಳು ಹಾಗೂ ಇಲಾಖೆಗಳ ಒಟ್ಟು 30 ಸ್ತಬ್ಧಚಿತ್ರಗಳು ಭಾಗವಹಿಸಲಿದ್ದು, ಭಾರತದ ಸಂಸ್ಕೃತಿ, ಪರಂಪರೆ, ನವೀನತೆ ಮತ್ತು ಸ್ವಾವಲಂಬನೆಯನ್ನು ಬಿಂಬಿಸಲಿವೆ. ಸುಮಾರು 2500 ಕಲಾವಿದರು ಪಥಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಕೆಂಪುಕೋಟೆಯಲ್ಲಿ ಭಾರತ ಪರ್ವ, ರಾಷ್ಟ್ರೀಯ ಶಾಲಾ ಬ್ಯಾಂಡ್ ಸ್ಪರ್ಧೆ, ಪ್ರಾಜೆಕ್ಟ್ ವೀರ್ ಗಾಥಾ 5.0 ಮತ್ತು ಪ್ರಧಾನಮಂತ್ರಿಯವರ ಎನ್‌ಸಿಸಿ ರ್ಯಾಲಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ನಮ್ಮ ಭವಿಷ್ಯಕ್ಕೆ ನಾವೇ ನಿರ್ಮಾತೃಗಳು; ಗಣರಾಜ್ಯೋತ್ಸವ ಸಂದೇಶದಲ್ಲಿ ದ್ರೌಪತಿ ಮುರ್ಮು ಕರೆ

0

ನವದೆಹಲಿ:- ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರವನ್ನುದ್ದೇಶಿಸಿ ಭಾನುವಾರ ಭಾಷಣ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ವೀರರಿಗೆ ಗೌರವಾರ್ಪಣೆ ಸಲ್ಲಿಸಿದರು.

ನಾವು ಭಾರತೀಯರು ಅಪಾರ ಉತ್ಸಾಹದಿಂದ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಇದು ನಮ್ಮ ದೇಶದ ಭೂತ, ವರ್ತಮಾನ ಮತ್ತು ಭವಿಷ್ಯವನ್ನು ಅವಲೋಕಿಸಲು ಸೂಕ್ತವಾದ ಸುದಿನವಾಗಿದೆ ಎಂದು ಅವರು ಹೇಳಿದರು. 1950ರ ಜನವರಿ 26ರಿಂದ ಸಂವಿಧಾನ ಸಂಪೂರ್ಣವಾಗಿ ಜಾರಿಯಾಗಿದ್ದು, ಅದೇ ದಿನದಿಂದ ನಮ್ಮ ಗಣತಂತ್ರವು ಸಾಂವಿಧಾನಿಕ ಗುರಿಗಳತ್ತ ಮುನ್ನಡೆಯುತ್ತಿದೆ. ವಿಶ್ವದ ಅತಿದೊಡ್ಡ ಗಣತಂತ್ರ ರಾಷ್ಟ್ರವಾಗಿರುವ ಭಾರತಕ್ಕೆ ಸಂವಿಧಾನವೇ ಮೂಲ ಆಧಾರ ದಾಖಲೆ. ಸಂವಿಧಾನವನ್ನು ರೂಪಿಸಿದವರು ರಾಷ್ಟ್ರದ ಏಕತೆ ಮತ್ತು ರಾಷ್ಟ್ರೀಯತೆಗೆ ಭದ್ರ ಬುನಾದಿ ಹಾಕಿದ್ದಾರೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಿಳಿಸಿದರು.

ಈ ಸಂದರ್ಭದಲ್ಲಿ ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿರುವ ವಿಚಾರವನ್ನು ಪ್ರಸ್ತಾಪಿಸಿದ ಅವರು, ವಂದೇ ಮಾತರಂ ದೇಶದ ಜನರ ಹೃದಯದಲ್ಲಿ ದೇಶಭಕ್ತಿಯನ್ನು ಉರಿಯುವ ಅಮೋಘ ಗೀತೆ ಎಂದು ಬಣ್ಣಿಸಿದರು. ರಾಷ್ಟ್ರೀಯವಾದಿ ಕವಿ ಸುಬ್ರಹ್ಮಣ್ಯ ಭಾರತಿ ಅವರು ತಮಿಳಿನಲ್ಲಿ “ವಂದೇ ಮಾತರಂ ಎನ್ಬೋಮ್” ಎಂದು ಹಾಡು ರಚಿಸಿದ್ದು, ಅದು ಜನರನ್ನು ಇನ್ನಷ್ಟು ವ್ಯಾಪಕವಾಗಿ ತಲುಪಲು ಸಹಾಯವಾಯಿತು. ಇತರ ಭಾರತೀಯ ಭಾಷೆಗಳಲ್ಲಿಯೂ ವಂದೇ ಮಾತರಂ ಅನುವಾದಗಳು ಜನಪ್ರಿಯವಾಗಿವೆ ಎಂದು ಹೇಳಿದರು.

ಭಾಷಣದಲ್ಲಿ ಜಿಎಸ್‌ಟಿ ಸುಧಾರಣೆ ಹಾಗೂ ಆಪರೇಷನ್ ಸಿಂದೂರ್‌ನ್ನು ರಾಷ್ಟ್ರಪತಿಗಳು ಶ್ಲಾಘಿಸಿದರು. ಜೊತೆಗೆ ದೇಶಕ್ಕೆ ಆಹಾರ ಭದ್ರತೆ ಒದಗಿಸುತ್ತಿರುವ ರೈತರ ಪರಿಶ್ರಮವನ್ನು ಪ್ರಶಂಸಿಸಿದರು. ಜನವರಿ 25ರ ರಾಷ್ಟ್ರೀಯ ಮತದಾರರ ದಿನವನ್ನು ಉಲ್ಲೇಖಿಸಿದ ಮುರ್ಮು ಅವರು, ಮತದಾನದಿಂದ ರಾಜಕೀಯ ಶಿಕ್ಷಣ ಲಭ್ಯವಾಗುತ್ತದೆ ಎಂಬುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯವಾಗಿತ್ತು. ಇಂದು ಅದು ಸಾಕಾರಗೊಳ್ಳುತ್ತಿದೆ ಎಂದರು. ಮತದಾನ ಪ್ರಕ್ರಿಯೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿರುವುದು ಗಣತಂತ್ರಕ್ಕೆ ಮತ್ತಷ್ಟು ಬಲ ನೀಡುತ್ತದೆ ಎಂದು ಹೇಳಿದರು.

ಸಬಲೀಕೃತ ಮಹಿಳೆಯು ದೇಶದ ಅಭ್ಯುದಯಕ್ಕೆ ಅತ್ಯಂತ ಅಗತ್ಯ. ಆರೋಗ್ಯ, ಶಿಕ್ಷಣ, ಸುರಕ್ಷತೆ ಹಾಗೂ ಆರ್ಥಿಕ ಸಬಲೀಕರಣಕ್ಕೆ ಕೈಗೊಳ್ಳಲಾದ ಕ್ರಮಗಳು ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ನೆರವಾಗಿವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಮ್ಮ ಭಾಷಣದಲ್ಲಿ ಅಭಿಪ್ರಾಯಪಟ್ಟರು.

ರಾತ್ರಿ ಮನೆ ಕಳ್ಳತನ, ಹಗಲು ಹೊಲದಲ್ಲಿ ಕಬ್ಬು ಕಟಾವು; ಖತರ್ನಾಕ್​​ ಗ್ಯಾಂಗ್ ಬಂಧಿಸಿದ ಪೊಲೀಸರು!

0

ಬಾಗಲಕೋಟೆ: ಕಬ್ಬು ಕಟಾವು ಮಾಡುವ ನೆಪದಲ್ಲಿ ಮನೆ ಕಳ್ಳತನಗಳನ್ನು ನಡೆಸುತ್ತಿದ್ದ ಮಹಾರಾಷ್ಟ್ರ ಮೂಲದ ಖತರ್ನಾಕ್​​ ಗ್ಯಾಂಗ್​​ನ ಪೊಲೀಸರು ಬಾಗಲಕೋಟೆಯಲ್ಲಿ ಭೇದಿಸಿದ್ದಾರೆ.

ಶಂಕರ್ ಪವಾರ್ (20), ಅಭಿ ಬೋಸ್ಲೆ(19), ಲಕ್ಷ್ಮೀ ಬೋಸ್ಲೆ (40), ಕರಣ ಪವಾರ್ (20) ಮತ್ತು ಮಮತಾ ಬೋಸ್ಲೆ(21) ಬಂಧಿತರು. ಇವರೆಲ್ಲ ಮಹಾರಾಷ್ಟದ ಪರಬಾನಿ ಜಿಲ್ಲೆ ಮಂಗರೂಲ ತಾಂಡಾದ ನಿವಾಸಿಗಳು ಎಂಬುದು ಗೊತ್ತಾಗಿದೆ. ಬಂಧಿತರಿಂದ 6 ಲಕ್ಷದ 8 ಸಾವಿರ ಮೌಲ್ಯದ 25 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಕಬ್ಬು ಕಟಾವು ಕೆಲಸ ಮಾಡುವ ನೆಪದಲ್ಲಿ ಬಾಗಲಕೋಟೆಗೆ ಬಂದಿದ್ದ ಈ ತಂಡ ಹಗಲು ವೇಳೆ ಹೊಲದಲ್ಲಿ ಕೆಲಸ ಮಾಡಿದರೆ, ರಾತ್ರಿ ಕಳ್ಳತನಕ್ಕೆ ಇಳಿಯುತ್ತಿತ್ತು. ಜಾಕೆಟ್ ಮತ್ತು ಮಾಸ್ಕ್​​ ಹಾಕಿಕೊಂಡು ಕೈನಲ್ಲಿ ಬ್ಯಾಟರಿ, ರಾಡ್ ಹಿಡಿದು ಮನೆಗಳ್ಳತನ ಕೆಲಸ ಮಾಡ್ತಿತ್ತು. ಆರೋಪಿಗಳು ಕಳವು ಮಾಡುವ ದೃಶ್ಯಗಳು ಕೂಡ ಲಭ್ಯವಾಗಿದ್ದು, ಖತರ್ನಾಕ್​​ ಗ್ಯಾಂಗ್​​ನ ಹೆಡೆಮುರಿ ಕಟ್ಟುವಲ್ಲಿ ಗುಳೇದಗುಡ್ಡ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಖತರ್ನಾಕ್ ಕಳ್ಳರು ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ, ಬಾದಾಮಿ, ಗದಗ ಜಿಲ್ಲೆ ಸೇರಿ ಒಟ್ಟು ಆರು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು. ಗುಳೇದಗುಡ್ಡ ಪಟ್ಟಣ, ಗುಳೇದಗುಡ್ಡ ತಾಲೂಕಿನ ಬೂದಿನಗಡ, ಹಂಸನೂರು, ಬಾದಾಮಿ ತಾಲೂಕಿನ ಮುಮರೆಡ್ಡಿಕೊಪ್ಪ, ಮುತ್ತಲಗೇರಿಯಲ್ಲಿ‌ ಕೈಚಳಕ ತೋರಿಸಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ.

ಶಿವಮೊಗ್ಗ| ಖಾಸಗಿ ಬಸ್‌ನಲ್ಲಿ ಬೆಂಕಿ ಅವಘಡ; ಸ್ಥಳೀಯರ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ!

0

ಶಿವಮೊಗ್ಗ/ಸಾಗರ: ಸಿಗಂದೂರಿನಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡ ಘಟನೆ ಹುಲಿದೇವರಬನದ ಬಳಿ ನಡೆದಿದೆ.

ಆದರೆ ಸ್ಥಳೀಯರ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದ್ದು, ಬಸ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ. ಸಿಗಂದೂರು ಕ್ಷೇತ್ರದಿಂದ ವಾಪಸ್ ಆಗುತ್ತಿದ್ದ ಬಸ್‌ ಹುಲಿದೇವರಬನದ ಸಮೀಪ ಬರುತ್ತಿದ್ದಾಗ, ಏಕಾಏಕಿ ಬಸ್‌ನೊಳಗಿನಿಂದ ಬೆಂಕಿ ಕಾಣಿಸಿಕೊಂಡಿದೆ. ಈ ದೃಶ್ಯವನ್ನು ಗಮನಿಸಿದ ಸ್ಥಳೀಯರು, ತಕ್ಷಣವೇ ಬಸ್‌ನ್ನು ತಡೆದು, ಚಾಲಕ ಹಾಗೂ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿ, ಸ್ಥಳೀಯರ ಸಹಕಾರದಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ.

ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಮಯಕ್ಕೆ ಸರಿಯಾಗಿ ಸ್ಪಂದಿಸಿದ ಗ್ರಾಮಸ್ಥರು ಮತ್ತು ಬಸ್ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಸಾರ್ವಜನಿಕರು ಹಾಗೂ ಪ್ರಯಾಣಿಕರು ಶ್ಲಾಘಿಸಿದ್ದಾರೆ.

ನೆಲಮಂಗಲ ಬಳಿ ಚಾಕು, ಮಾರಕಾಸ್ತ್ರಗಳಿಂದ ರೌಡಿಶೀಟರ್‌ ಬರ್ಬರ ಹತ್ಯೆ!

0

ನೆಲಮಂಗಲ:- ನೆಲಮಂಗಲ ಬಳಿಯ ಬಾಲಾಜಿ ಫಾರಂ ಹೌಸ್‌ನಲ್ಲಿ ಚಾಕು ಹಾಗೂ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.

ಬೆಂಗಳೂರಿನ ಆಟೋ ನಾಗ್ (32) ಕೊಲೆಯಾದ ವ್ಯಕ್ತಿಯಾಗಿದ್ದು, ಈತನ ವಿರುದ್ಧ ಲಗ್ಗೆರೆ ಹಾಗೂ ಹುಲಿಯೂರು ದುರ್ಗ ಪೊಲೀಸ್ ಠಾಣೆಗಳಲ್ಲಿ ರೌಡಿಶೀಟ್ ಓಪನ್ ಆಗಿತ್ತು. ಬಾಲಾಜಿ ಫಾರಂ ಹೌಸ್‌ನ ರೂಮ್‌ನಲ್ಲೇ ಈ ಭೀಕರ ಕೊಲೆ ನಡೆದಿದ್ದು, ಹತ್ಯೆ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಪ್ರಕರಣದ ಮಾಹಿತಿ ತಿಳಿದ ತಕ್ಷಣ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

ಬೆಳಗಾವಿ| ಕಂಟೇನರ್ ಲಾರಿ ಡಿಕ್ಕಿ ಹೊಡೆದು ದಂಪತಿ ದಾರುಣ ಸಾವು!

0

ಬೆಳಗಾವಿ:- ಬೆಳಗಾವಿ ನಿಪ್ಪಾಣಿ ತಾಲೂಕಿನ ಕೂಗನೋಳ್ಳಿ ಬಳಿ ಕಂಟೇನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ದಂಪತಿ ಮೃತಪಟ್ಟ ಘಟನೆ ಜರುಗಿದೆ.

ಜಿಗರ್ ನಾಕ್ರಾನಿ ಮತ್ತು ಹೇತಿಕಾ ನಾಕ್ರಾನಿ ಮೃತಪಟ್ಟ ದುರ್ದೈವಿಗಳು. ಇವರು ಕೊಲ್ಲಾಪುರ ಮೂಲದವರು ಎನ್ನಲಾಗಿದೆ. ಹುಬ್ಬಳ್ಳಿಯಿಂದ ಕೊಲ್ಲಾಪುರಕ್ಕೆ ತೆರಳುವ ವೇಳೆ ಕುಗನೋಳ್ಳಿ ಬಳಿ ಕಾರು ನಿಲ್ಲಿಸಲಾಗಿತ್ತು.

ಈ ವೇಳೆ ರಭಸದಿಂದ ಬಂದ ಕಂಟೇನರ್ ವಾಹನ ಡಿಕ್ಕಿ ಹೊಡೆದಿದೆ. ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಿಪ್ಪಾಣಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಳಿಮಾವು ಪೊಲೀಸರಿಂದ ಬೃಹತ್ ಸೈಬರ್ ವಂಚನೆ ಜಾಲ ಪತ್ತೆ: ಪ್ರಕರಣದ ತನಿಖೆಗೆ ED ಎಂಟ್ರಿ

0

ಬೆಂಗಳೂರು: ಹುಳಿಮಾವು ಪೊಲೀಸರು ಬೃಹತ್ ಸೈಬರ್ ವಂಚನೆ ಜಾಲವನ್ನು ಪತ್ತೆಹಚ್ಚಿದ್ದು, ಪ್ರಕರಣದ ತನಿಖೆಗೆ ಜಾರಿ ನಿರ್ದೇಶನಾಲಯ (ಇಡಿ) ಮುಂದಾಗಿದೆ. ಇನ್ವೆಸ್ಟ್‌ಮೆಂಟ್ ಹೆಸರಿನಲ್ಲಿ ಅಮಾಯಕರನ್ನು ವಂಚಿಸುತ್ತಿದ್ದ ಗ್ಯಾಂಗ್ ದೆಹಲಿಯಿಂದ ಕಾರ್ಯಾಚರಣೆ ನಡೆಸುತ್ತಿದ್ದದ್ದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಆರೋಪಿಗಳು ವಾಟ್ಸಾಪ್ ಹಾಗೂ ಇನ್‌ಸ್ಟಾಗ್ರಾಂ ಮೂಲಕ ಲಿಂಕ್ ಕಳುಹಿಸಿ, ನಂತರ ನಿಯೋ ಸಿಸ್ಟಂ ಎಂಬ ಆಪ್ ಅನ್ನು ಇನ್‌ಸ್ಟಾಲ್ ಮಾಡಿಸುತ್ತಿದ್ದರು. ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ, ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಹೂಡಿಕೆ ಮಾಡಿಸಿ ವಂಚನೆ ನಡೆಸಲಾಗುತ್ತಿತ್ತು.

ಪ್ರಕರಣ ಸಂಬಂಧ ಹುಳಿಮಾವು ಪೊಲೀಸರು ಇದುವರೆಗೆ 12 ಜನರನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಆರಂಭಿಕ ತನಿಖೆಯಲ್ಲಿ ಸುಮಾರು 4500 ಬ್ಯಾಂಕ್ ಖಾತೆಗಳ ಮೂಲಕ 75 ಕೋಟಿ ರೂ. ಹಣ ವಹಿವಾಟು ನಡೆದಿರುವುದು ಪತ್ತೆಯಾಗಿತ್ತು. ತನಿಖೆ ಮುಂದುವರಿದಂತೆ, ಸುಮಾರು 9 ಸಾವಿರಕ್ಕೂ ಹೆಚ್ಚು ಖಾತೆಗಳ ಮೂಲಕ ಅಕ್ರಮ ಹಣ ವಹಿವಾಟು ನಡೆದಿರುವುದು ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಸಾವಿರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ. ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ಪ್ರೇಮ್ ನತನೇಜಾ ಎಂಬಾತ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಲುಕ್ ಔಟ್ ನೋಟಿಸ್ ಹೊರಡಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಇಡೀ ಪ್ರಕರಣದ ಮಾಹಿತಿಯನ್ನು ಹುಳಿಮಾವು ಪೊಲೀಸರಿಂದ ಪಡೆದಿರುವ ಜಾರಿ ನಿರ್ದೇಶನಾಲಯ, ಸ್ವಾಮೀಜಿ ಡಾಟ್ ಕಾಮ್ ಎಂಬ ಗೇಮಿಂಗ್ ಆಪ್ ಮೂಲಕ ಅಕ್ರಮ ಹಣ ವಹಿವಾಟು ನಡೆಸಿರುವ ಹಿನ್ನಲೆಯಲ್ಲಿ PMLA ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದೆ.

ಇತ್ತ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಪೊಲೀಸ್ ಇಲಾಖೆ, ಸೈಬರ್ ಕಮಾಂಡ್‌ನಿಂದಲೂ ತನಿಖೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಸೈಬರ್ ವಂಚನೆ ಜಾಲದ ಸಂಪೂರ್ಣ ಬೇರು ಕತ್ತರಿಸಲು ಬಹುಮಟ್ಟದ ತನಿಖೆ ಮುಂದುವರಿದಿದೆ.

T20 World Cup 2026: ಪಾಕಿಸ್ತಾನ ತಂಡ ಘೋಷಣೆ – ನಾಯಕ ಬದಲಾವಣೆ, 7 ಆಟಗಾರರಿಗೆ ಗೇಟ್ ಪಾಸ್

0

2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಈ ಬಾರಿ ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳು ಭಾಗವಹಿಸಲಿದ್ದು, ಇದರಲ್ಲಿ ಈಗಾಗಲೇ 15 ತಂಡಗಳು ತಮ್ಮ ತಂಡಗಳನ್ನು ಪ್ರಕಟಿಸಿವೆ. ಇದೀಗ ಜನವರಿ 25ರಂದು ಪಾಕಿಸ್ತಾನವೂ ತನ್ನ ವಿಶ್ವಕಪ್ ತಂಡವನ್ನು ಅಧಿಕೃತವಾಗಿ ಘೋಷಿಸಿದ್ದು, ತಂಡ ಪ್ರಕಟಿಸಿದ 16ನೇ ದೇಶವಾಗಿದೆ.

ಕಳೆದ ಟಿ20 ವಿಶ್ವಕಪ್ ತಂಡದ ಹೋಲಿಕೆಯಲ್ಲಿ ಈ ಬಾರಿ ಪಾಕಿಸ್ತಾನ ತಂಡದಲ್ಲಿ 7 ಬದಲಾವಣೆಗಳನ್ನು ಮಾಡಲಾಗಿದೆ. ಅದರಲ್ಲೂ ಪ್ರಮುಖವಾಗಿ ನಾಯಕತ್ವದಲ್ಲೇ ಬದಲಾವಣೆ ಮಾಡಿರುವುದು ಕ್ರಿಕೆಟ್ ವಲಯದಲ್ಲಿ ಗಮನ ಸೆಳೆದಿದೆ.

ಕಳೆದ ಟಿ20 ವಿಶ್ವಕಪ್‌ನಲ್ಲಿ ಬಾಬರ್ ಆಝಂ ನಾಯಕತ್ವದ ಪಾಕಿಸ್ತಾನ ತಂಡವು ಅತ್ಯಂತ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಗುಂಪು ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿದ್ದ ಪಾಕಿಸ್ತಾನ, ಯುಎಸ್ಎಯಂತಹ comparatively ದುರ್ಬಲ ತಂಡದ ವಿರುದ್ಧವೂ ಸೋಲು ಕಂಡಿತ್ತು. ಈ ಹಿನ್ನೆಲೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತಂಡದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡುವ ನಿರ್ಧಾರ ಕೈಗೊಂಡಿದೆ.

ಆಯ್ಕೆ ಸಮಿತಿಯು ಅನುಭವಿ ಬ್ಯಾಟ್ಸ್‌ಮನ್ ಬಾಬರ್ ಆಝಂ ಅವರನ್ನು ತಂಡದಲ್ಲಿ ಉಳಿಸಿಕೊಂಡಿದ್ದರೂ, ಹಿರಿಯ ಆಟಗಾರರಾದ ಮೊಹಮ್ಮದ್ ರಿಜ್ವಾನ್ ಮತ್ತು ವೇಗದ ಬೌಲರ್ ಹ್ಯಾರಿಸ್ ರೌಫ್‌ಗೆ ತಂಡದಿಂದ ಗೇಟ್‌ಪಾಸ್ ನೀಡಲಾಗಿದೆ. ಹೊಸ ಆಟಗಾರರಿಗೆ ಅವಕಾಶ ಕಲ್ಪಿಸುವ ಮೂಲಕ ತಂಡವನ್ನು ಪುನರ್‌ರಚಿಸುವ ಪ್ರಯತ್ನವನ್ನು ಪಿಸಿಬಿ ಮಾಡಿದೆ.

7 ಆಟಗಾರರು ಔಟ್

ಅಜಮ್ ಖಾನ್, ಹ್ಯಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಇಮಾದ್ ವಾಸಿಮ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಅಮೀರ್ ಮತ್ತು ಮೊಹಮ್ಮದ್ ರಿಜ್ವಾನ್ ಈ ಬಾರಿಯ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದಿಲ್ಲ. ಈ 7 ಆಟಗಾರರು ಕಳೆದ ವಿಶ್ವಕಪ್‌ನಲ್ಲಿ ತಂಡದ ಭಾಗವಾಗಿದ್ದರು.

7 ಆಟಗಾರರಿಗೆ ಮೊದಲ ಅವಕಾಶ

ಫಹೀಮ್ ಅಶ್ರಫ್, ಖ್ವಾಜಾ ಮೊಹಮ್ಮದ್ ನಫೆ, ಮೊಹಮ್ಮದ್ ನವಾಜ್, ಮೊಹಮ್ಮದ್ ಸಲ್ಮಾನ್ ಮಿರ್ಜಾ, ಸಾಹಿಬ್ಜಾದಾ ಫರ್ಹಾನ್ ಮತ್ತು ಉಸ್ಮಾನ್ ತಾರಿಕ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ಈ ಎಲ್ಲಾ ಏಳು ಆಟಗಾರರು ಟಿ20 ವಿಶ್ವಕಪ್‌ನಲ್ಲಿ ಆಡುತ್ತಿರುವುದು ಇದೇ ಮೊದಲು.

ಕಳೆದ ಟಿ20ವಿಶ್ವಕಪ್‌ನಲ್ಲಿ ಪಾಕ್ ಪ್ರದರ್ಶನ

ಕಳೆದ ಟಿ20 ವಿಶ್ವಕಪ್‌ನ ಗುಂಪು ಹಂತದಲ್ಲಿ ಪಾಕಿಸ್ತಾನ ತಂಡ ಒಟ್ಟು 4 ಪಂದ್ಯಗಳನ್ನು ಆಡಿತ್ತು. ಈ 4 ಪಂದ್ಯಗಳಲ್ಲಿ ಪಾಕಿಸ್ತಾನ ಕೇವಲ 2 ಪಂದ್ಯಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಅಮೆರಿಕ ಮತ್ತು ಟೀಂ ಇಂಡಿಯಾ ಪಾಕಿಸ್ತಾನವನ್ನು ಸೋಲಿಸಿದ್ದವು. ಇತ್ತ ಪಾಕಿಸ್ತಾನ ದುರ್ಬಲ ಕೆನಡಾ ಮತ್ತು ಐರ್ಲೆಂಡ್ ತಂಡದ ವಿರುದ್ಧ ಗೆಲುವು ಸಾಧಿಸಿತ್ತು.

ಟಿ20 ವಿಶ್ವಕಪ್​ಗೆ ಪಾಕ್ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಬಾಬರ್ ಆಝಂ, ಫಹೀಮ್ ಅಶ್ರಫ್, ಫಖರ್ ಝಮಾನ್, ಖ್ವಾಜಾ ಮೊಹಮ್ಮದ್ ನಫಾಯ್ (ವಿಕೆಟ್ ಕೀಪರ್), ಉಸ್ಮಾನ್ ಖಾನ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಝ್, ಮೊಹಮ್ಮದ್ ಸಲ್ಮಾನ್ ಮಿರ್ಝ, ನಸೀಮ್ ಶಾ, ಸಾಹಿಬ್​ಝಾದ ಫರ್ಹಾನ್ (ವಿಕೆಟ್ ಕೀಪರ್), ಸೈಮ್ ಅಯ್ಯೂಬ್, ಶಾಹೀನ್ ಶಾ ಅಫ್ರಿದಿ, ಉಸ್ಮಾನ್ ತಾರಿಖ್, ಶಾದಾಬ್​ ಖಾನ್.

ಪ್ರೊಫೆಸರ್ʼಗೆ ಚಾಕು ಇರಿದು ಕೊಲೆ: ಆರೋಪಿ ಅರೆಸ್ಟ್

0

ಮುಂಬೈ: ಮಲಾಡ್ ರೈಲ್ವೆ ನಿಲ್ದಾಣದಲ್ಲಿ ಕಾಲೇಜು ಪ್ರಾಧ್ಯಾಪಕರೊಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಪ್ರಕರಣದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಓಂಕಾರ್ ಶಿಂಧೆ (27) ಎಂದು ಗುರುತಿಸಲಾಗಿದೆ. ಮೃತ ಪ್ರಾಧ್ಯಾಪಕರಾದ ಅಲೋಕ್ ಸಿಂಗ್, ವಿಲೇ ಪಾರ್ಲೆಯ ಪ್ರಮುಖ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಪ್ರೊ. ಅಲೋಕ್ ಸಿಂಗ್ ಮತ್ತು ಓಂಕಾರ್ ಶಿಂಧೆ ಇಬ್ಬರೂ ಒಂದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಣ್ಣ ವಿಚಾರಕ್ಕೆ ಜಗಳ ಆರಂಭವಾಗಿದೆ. ಮಾತಿನ ಚಕಮಕಿ ತೀವ್ರಗೊಂಡು, ತಾಳ್ಮೆ ಕಳೆದುಕೊಂಡ ಆರೋಪಿ ಹರಿತವಾದ ಚಾಕುವನ್ನು ಹೊರತೆಗೆದು ಪ್ರಾಧ್ಯಾಪಕರ ಹೊಟ್ಟೆಗೆ ಹಲವು ಬಾರಿ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಅಲೋಕ್ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ಬಳಿಕ ಬಿಳಿ ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿದ್ದ ವ್ಯಕ್ತಿಯೊಬ್ಬರು ಪಾದಚಾರಿ ಸೇತುವೆ (FOB) ದಾಟಿ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿಗಳ ಆಧಾರದ ಮೇಲೆ ಬೊರಿವಲಿ ಜಿಆರ್‌ಪಿ ಠಾಣೆ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣ ಸಂಬಂಧ ಮುಂದಿನ ತನಿಖೆ ಮುಂದುವರಿದಿದೆ.

ದ್ವೇಷ ಭಾಷಣ ಮಸೂದೆ ನೆಪದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕತ್ತರಿ: ಸಿ.ಟಿ. ರವಿ ಆಕ್ರೋಶ

0

ಚಿಕ್ಕಮಗಳೂರು: ಯಾವ ಮತೀಯ ಗ್ರಂಥದಿಂದ ಕೋಮುಗಲಭೆಗಳು ನಡೆಯುತ್ತಿವೆ? ಜಾಗತಿಕ ಭಯೋತ್ಪಾದನೆಗೆ ಕಾರಣವಾಗುತ್ತಿರುವವರು ಮಕ್ಕಳ ಕೈಗೆ ಕಲ್ಲು ನೀಡಿ ದೇವರ ಹೆಸರಿನಲ್ಲಿ ಹಿಂಸೆಗೆ ಪ್ರೇರೇಪಿಸುತ್ತಿದ್ದಾರೆ. ಅಂಥವರಿಗೆ ನೋಟಿಸ್ ನೀಡಬೇಕೇ ಹೊರತು, ಸರ್ಕಾರ ಸುಮ್ಮನಿರುವುದು ಸರಿಯಲ್ಲ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತರೀಕೆರೆಯಲ್ಲಿ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ವಿಕಾಸ್ ಪುತ್ತೂರು ಅವರಿಗೆ ದ್ವೇಷ ಭಾಷಣ ಮಸೂದೆ–2025 ಉಲ್ಲಂಘನೆ ಆಗದಂತೆ ನೋಡಿಕೊಳ್ಳಿ ಎಂದು ಪೊಲೀಸರು ನೋಟಿಸ್ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದರು.

“ಈ ಮಸೂದೆಗೆ ಇನ್ನೂ ಕಾನೂನುಬದ್ಧತೆ ಸಿಕ್ಕಿಲ್ಲ. ಕಾನೂನಿನ ಅರಿವಿಲ್ಲದ ಪೊಲೀಸರಿಗೆ ಮೊದಲು ಕಾನೂನು ತಿಳಿಸುವ ಅಗತ್ಯವಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಕೋಲೆ ತೊಡಿಸಲು ಸರ್ಕಾರ ಹೊರಟಿದೆಯೇ?” ಎಂದು ಪ್ರಶ್ನಿಸಿದರು.

ತುರ್ತು ಪರಿಸ್ಥಿತಿ ಹೇರಿ ನಾಗರಿಕ ಹಕ್ಕುಗಳನ್ನು ಹತ್ತಿಕ್ಕಿದ ಕಾಂಗ್ರೆಸ್ ಪಕ್ಷವೇ ಇದೀಗ ಜನರ ಬಾಯಿಗೆ ಬೀಗ ಹಾಕಲು ಹೊರಟಿದೆ ಎಂದು ಆರೋಪಿಸಿದ ಅವರು, ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ನಡೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

error: Content is protected !!