Home Blog Page 127

ಜನಪದದ ಬೇರು ಕಳಚದಿರಲಿ: ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮ ನಾಡಿನ ಜನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಕೇವಲ ಹಿಂದಿನ ಪೀಳಿಗೆಯ ನೆನಪುಗಳಾಗಿ ಉಳಿಯದೆ, ಮುಂದಿನ ತಲೆಮಾರಿನ ಬದುಕಿನ ಭಾಗವಾಗಬೇಕು ಎಂಬ ಆಶಯದೊಂದಿಗೆ ಗದಗದಲ್ಲಿ ವಿಶ್ವ ಜಾನಪದ ದಿನಾಚರಣೆಯನ್ನು ಆಚರಿಸಲಾಯಿತು.

ನಗರದ ಎ.ಎಸ್.ಎಸ್. ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ತಂಜಾವೂರು ಹಾಗೂ ಎ.ಎಸ್.ಎಸ್. ವಾಣಿಜ್ಯ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ‘ಪಂಚಂ… ಪಗಡಂ…’ ಜಾನಪದ ಆಟ-ನೃತ್ಯ ಸಂಭ್ರಮಾಚರಣೆ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಚ್.ಕೆ. ಪಾಟೀಲ, ಜಗತ್ತಿನಲ್ಲೇ ವಿಶಿಷ್ಟ ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ಹೊಂದಿರುವ ನಾವು ಇಂದು ಅವುಗಳನ್ನು ಮರೆಯುತ್ತಿರುವುದು ವಿಷಾದನೀಯ. ಸ್ವಾತಂತ್ರ್ಯೋತ್ತರ ಪೀಳಿಗೆ ನಮ್ಮ ಮೂಲ ಕಲೆಗಳತ್ತ ಹೆಚ್ಚಿನ ಒಲವು ಬೆಳೆಸಿಕೊಳ್ಳಬೇಕಾಗಿತ್ತು. ಆದರೆ ಪಾಶ್ಚಾತ್ಯ ಸಂಸ್ಕೃತಿಯತ್ತ ಹೆಚ್ಚಿನ ಒಲವು ತೋರಿದ್ದರಿಂದ ಉತ್ತರ ಕರ್ನಾಟಕದ ಜನಪದ ಕಲೆ ಮತ್ತು ಸಾಹಿತ್ಯ ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆ ಕಾಣಲಿಲ್ಲ ಎಂದರು.

ನಮ್ಮ ಮೂಲ ಕಲೆಗಳನ್ನು ಉತ್ತೇಜಿಸುವ ಕೆಲಸ ಈಗ ಪ್ರಮುಖ ಆದ್ಯತೆಯಾಗಬೇಕು. ಜನಪದ ಅಕಾಡೆಮಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದು ಎಚ್.ಕೆ. ಪಾಟೀಲ ಹೇಳಿದರು.

ಮುಂಡರಗಿಯ ಸಾಹಿತಿ ಡಾ. ನಿಂಗು ಸೊಲಗಿ ಜಾನಪದ ಆಟಗಳ ಕುರಿತು ಉಪನ್ಯಾಸ ನೀಡಿದರು. ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ನಮ್ರತಾ ಎನ್. ಅಕಾಡೆಮಿಯ ಕಾರ್ಯಚಟುವಟಿಕೆಗಳನ್ನು ವಿವರಿಸಿ, ಇಂದಿನ ತಲೆಮಾರಿಗೆ ಮೂಲ ಜನಪದ ಆಟಗಳನ್ನು ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮರೆಯಾಗುತ್ತಿರುವ ಹಗ್ಗ ಜಗ್ಗಾಟ, ಸರ್ಕಲ್ ಕೋ-ಕೋ, ಕುಂಟೇಬಿಲ್ಲಿ, ಆಣಿಕೀರ, ಚಿಣಿಪಣಿ, ಕೆರೆ ದಡ ಸೇರಿದಂತೆ ವಿವಿಧ ಜಾನಪದ ಆಟಗಳನ್ನು ವಿದ್ಯಾರ್ಥಿಗಳಿಗೆ ಆಡಿಸಲಾಯಿತು. ಅಪರೂಪವಾಗುತ್ತಿರುವ ಗ್ರಾಮೀಣ ಆಟಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಹೊಸ ಅನುಭವದೊಂದಿಗೆ ಸಂಭ್ರಮಿಸಿದರು.

ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಗದಗ ಜಿಲ್ಲಾ ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ. ಶಿವಾನಂದ ಕೊರವರ, ಹಿರಿಯ ಸಾಂಸ್ಕೃತಿಕ ಚಿಂತಕ ಡಾ. ಜಿ.ಬಿ. ಪಾಟೀಲ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮೆಹಬೂಬ ಕಿಲ್ಲೇದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಲಾವಿದರಾದ ಯಲ್ಲಪ್ಪ ಡಕ್ಕಣ್ಣವರ, ಬಸವರಾಜ ಜಕ್ಕಮ್ಮನವರ, ಯಲ್ಲಪ್ಪ ಚಂದಣ್ಣವರ, ಸಂಕಪ್ಪ ಹುಲ್ಲೂರ, ದುರ್ಗಮ್ಮ ಮಾದರ, ಈರಣ್ಣ ಕಬ್ಬಿಣದ ಹಾಗೂ ಪ್ರಕಾಶ ಕುರುಬರ ಅವರನ್ನು ಸನ್ಮಾನಿಸಲಾಯಿತು.

ಕಾಲೇಜು ವಿದ್ಯಾರ್ಥಿಗಳ ಕನ್ನಡ ಬಳಗದವರು ನಾಡಗೀತೆ ಹಾಡಿದರು. ಬಸವರಾಜ ಈರಣ್ಣವರ ತಂಡ ಪ್ರಾರ್ಥಿಸಿತು. ಪ್ರಾಚಾರ್ಯ ಡಾ. ವಿ.ಟಿ. ನಾಯ್ಕರ ಸ್ವಾಗತಿಸಿದರು. ಪ್ರೊ. ಬಾಹುಬಲಿ ಜೈನರ್ ನಿರೂಪಿಸಿದರು. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಶಂಕ್ರಣ್ಣ ಸಂಕಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯ ಕಿರೇಸೂರ ವಂದಿಸಿದರು.

ನಮ್ಮ ಮೂಲ ಜನಪದ ಸಂಸ್ಕೃತಿಯ ವೈಭವ ಮಾಯವಾಗುತ್ತಿರುವುದು ಆತಂಕ ಮೂಡಿಸಿದೆ. ಮುಂದಿನ ಪೀಳಿಗೆಗೆ ಜನಪದ ಕಲೆಗಳನ್ನು ಪರಿಚಯಿಸಿ, ಉಳಿಸಿ ಬೆಳೆಸುವ ಕೆಲಸ ಹಿರಿಯ ಕಲಾವಿದರಿಂದ ಆಗಬೇಕು. ಇದಕ್ಕೆ ಅಗತ್ಯ ಸಹಕಾರವೂ ದೊರೆಯಬೇಕು.

— ಎಚ್.ಕೆ. ಪಾಟೀಲ, ಶಾಸಕ

ಆಝಾದ್ ಬ್ಯಾಂಕ್‌ಗೆ ₹1.30 ಕೋಟಿ ಲಾಭ; ಷೇರುದಾರರಿಗೆ ಶೇ.12 ಡಿವಿಡೆಂಡ್

0

ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ಆಝಾದ್ ಕೋ-ಆಪರೇಟಿವ್ ಬ್ಯಾಂಕ್ ಕಳೆದ ಸಾಲಿಗಿಂತ ಈ ವರ್ಷ ಉತ್ತಮ ಪ್ರಗತಿ ಸಾಧಿಸಿದ್ದು, ೨೦೨೫-೨೬ನೇ ಸಾಲಿನಲ್ಲಿ ₹೧ ಕೋಟಿ ೩೦ ಲಕ್ಷ ೬೦ ಸಾವಿರ ನಿವ್ವಳ ಲಾಭ ಗಳಿಸಿದೆ. ಷೇರುದಾರರಿಗೆ ಶೇ.೧೨ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಬ್ಯಾಂಕ್ ಅಧ್ಯಕ್ಷ ಹಾಜಿ ಸರಫರಾಜಅಹ್ಮದ್ ಎಸ್. ಉಮಚಗಿ ತಿಳಿಸಿದರು.

ನಗರದ ಬ್ಯಾಂಕ್ ಸಭಾಂಗಣದಲ್ಲಿ ಭಾನುವಾರ ನಡೆದ ಬ್ಯಾಂಕ್‌ನ ೬೫ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬ್ಯಾಂಕ್‌ನಲ್ಲಿ ೫,೭೯೨ ಸದಸ್ಯರಿದ್ದು, ₹೩ ಕೋಟಿ ೪೦.೨೭ ಲಕ್ಷ ಶೇರು ಬಂಡವಾಳ ಹೊಂದಿದೆ. ₹೧೧೪ ಕೋಟಿ ೬೨ ಲಕ್ಷ ಠೇವಣಿ ಇದ್ದು, ಠೇವಣಿಗಳಿಗೆ ವಿಮಾ ಭದ್ರತೆ ಇದೆ. ಬ್ಯಾಂಕಿನ ದುಡಿಯುವ ಬಂಡವಾಳ ₹೧೩೧ ಕೋಟಿ ೫೭.೬೪ ಲಕ್ಷವಾಗಿದ್ದು, ಶಾಖಾ ಕಚೇರಿಗಳನ್ನು ಒಳಗೊಂಡಂತೆ ಒಟ್ಟು ವ್ಯವಹಾರ ₹೧,೪೦೫ ಕೋಟಿ ೧೨.೩೫ ಲಕ್ಷ ತಲುಪಿದೆ ಎಂದು ಮಾಹಿತಿ ನೀಡಿದರು.

ಬ್ಯಾಂಕಿನ ಪ್ರಗತಿಗೆ ಠೇವಣಿದಾರರು, ಷೇರುದಾರರು ಹಾಗೂ ಸಾಲಗಾರರ ಸಹಕಾರ ಮುಖ್ಯವಾಗಿದೆ. ಪಿಗ್ಮಿ ಸಂಗ್ರಹಕಾರರು ಮತ್ತು ಸಿಬ್ಬಂದಿಯ ಪರಿಶ್ರಮವೂ ಬ್ಯಾಂಕಿನ ಪ್ರಗತಿಗೆ ಕಾರಣವಾಗಿದೆ ಎಂದರು.

ಬ್ಯಾಂಕಿನ ಖಾತೆದಾರರಿಗೆ ಈಗಾಗಲೇ ಎಟಿಎಂ ಕಾರ್ಡ್‌ಗಳನ್ನು ವಿತರಿಸಲಾಗಿದ್ದು, ರಾಜ್ಯ ಹಾಗೂ ಹೊರರಾಜ್ಯಗಳಲ್ಲಿರುವ ಯಾವುದೇ ಎಟಿಎಂನಲ್ಲಿ ಸಹಕಾರಿ ಬ್ಯಾಂಕಿನ ಕಾರ್ಡ್ ಬಳಸಿ ಹಣ ಪಡೆಯಲು ಹಾಗೂ ಹಣ ವರ್ಗಾವಣೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಬಳಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೆಸಿಸಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಹಾಗೂ ಸಹಕಾರಿ ಧುರೀಣ ರೋಣದ ಐ.ಎಸ್. ಪಾಟೀಲ ಮಾತನಾಡಿ, ಸಹಕಾರಿ ಕ್ಷೇತ್ರದ ಬೆಳವಣಿಗೆಯಲ್ಲಿ ಗದಗ ಜಿಲ್ಲೆಯ ಕೊಡುಗೆ ಮಹತ್ವದ್ದಾಗಿದೆ. ಸಹಕಾರಿ ಸಂಸ್ಥೆಗಳು ಜನಸಾಮಾನ್ಯರ ಆರ್ಥಿಕ ಅಗತ್ಯಗಳಿಗೆ ಸ್ಪಂದಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ನೆರವಾಗುತ್ತಿವೆ. ಆಝಾದ್ ಬ್ಯಾಂಕ್ ತನ್ನ ಆಡಳಿತ, ಹಣಕಾಸಿನ ಸ್ಥಿತಿ ಹಾಗೂ ಮುಂದಿನ ಯೋಜನೆಗಳನ್ನು ಶೇರುದಾರರ ಮುಂದಿಡುವ ಮೂಲಕ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿರುವುದು ಶ್ಲಾಘನೀಯ ಎಂದರು.

ಬಡವರು, ಕೂಲಿಕಾರರು ಹಾಗೂ ಮಧ್ಯಮ ವರ್ಗದ ಜನರಿಗೆ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಬ್ಯಾಂಕ್ ಸ್ಥಳೀಯರ ಆರ್ಥಿಕ ಪ್ರಗತಿಗೆ ನೆರವಾಗಿದೆ. ಬ್ಯಾಂಕಿನ ಆರ್ಥಿಕ ಸದೃಢತೆ ಕಾಪಾಡಲು ಪಾರದರ್ಶಕ ಆಡಳಿತ, ಪರಿಣಾಮಕಾರಿ ಸಾಲ ವಸೂಲಾತಿ ಹಾಗೂ ಅನುತ್ಪಾದಕ ಆಸ್ತಿಗಳ ನಿಯಂತ್ರಣಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಶೇರುದಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಎ.ಜಿ. ಯರಗುಡಿ ಸ್ವಾಗತಿಸಿ ಸಭೆಯ ಕಾರ್ಯಸೂಚಿ ಮಂಡಿಸಿ ಅನುಮೋದನೆ ಪಡೆದರು. ಶಾಖಾ ವ್ಯವಸ್ಥಾಪಕ ಆರ್.ಎಂ. ನದಾಫ ಲೆಕ್ಕಪರಿಶೋಧನಾ ವರದಿ ಮಂಡಿಸಿದರು. ನಿರ್ದೇಶಕ ಎನ್.ಬಿ. ಶಾಸ್ತ್ರಿ ನಿವ್ವಳ ಲಾಭ ಹಂಚಿಕೆಯ ವಿವರ ನೀಡಿದರು. ಪ್ರಧಾನ ಕಚೇರಿಯ ವ್ಯವಸ್ಥಾಪಕ ಯಾಸೀನ ಹುಬ್ಬಳ್ಳಿ ವಾರ್ಷಿಕ ಬಜೆಟ್ ಮಂಡಿಸಿ ಅನುಮೋದನೆ ಪಡೆದರು.

ವೇದಿಕೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಹುಲಗಣ್ಣ ಬಳ್ಳಾರಿ, ನಿರ್ದೇಶಕರಾದ ಎನ್.ಬಿ. ಶಾಸ್ತ್ರಿ, ಆರ್.ಎಲ್. ಬಾಗಲಕೋಟ, ಎಂ.ಎ. ಹಣಗಿ, ಗುಲ್ಜಾರ್‌ಭಾನು ಮುಜಾವರ, ಯಲ್ಲಪ್ಪ ತೋಟದ, ರೇಣುಕಾಬಾಯಿ ಕಲಾಲ, ಶಾನವಾಜ ಉಮಚಗಿ, ಬಿ.ಎಸ್. ಢಾಲಾಯತ, ಮಹೇಶ್ವರಯ್ಯ ಕೋಟಗುಣಶಿಮಠ, ಪರಶುರಾಮ ಪಾತ್ರೋಟ, ಎಚ್.ಎನ್. ಇಟಗಿ, ಡಾ. ಪ್ಯಾರಅಲಿ ನೂರಾನಿ, ಆರ್.ಕೆ. ಹಬೀಬ, ಎ.ಎಂ. ಮುಲ್ಲಾ ಹಾಗೂ ಇಸೂಫ್ ಇಟಗಿ ಉಪಸ್ಥಿತರಿದ್ದರು.

ಮಹ್ಮದ್‌ಗೌಸ್ ಜಮಾಲಸಾಬನವರ ಖುರಾನ್ ಪಠಿಸಿದರು. ಎಂ.ಎಂ. ಶಿರಹಟ್ಟಿ ನಿರೂಪಿಸಿದರು. ಎಂ.ಎ. ಹಣಗಿ ವಂದಿಸಿದರು. ಸಭೆಯಲ್ಲಿ ಶೇರುದಾರರು ಹಾಗೂ ಗಣ್ಯರು ಪಾಲ್ಗೊಂಡಿದ್ದರು.

ಈದ್ ಮಿಲಾದ್ ಹಬ್ಬವನ್ನು ಶಾಂತಿಯುತ ಆಚರಣೆಗೆ ಪಿಎಸ್‌ಐ ಕರೆ

0

ವಿಜಯಸಾಕ್ಷಿ ಸುದ್ದಿ, ಗದಗ: ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸದಾ ಸಿದ್ಧವಾಗಿದ್ದು, ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಶಾಂತಿ ಹಾಗೂ ಸೌಹಾರ್ದತೆಯಿಂದ ಈದ್ ಮಿಲಾದ್ ಆಚರಿಸಬೇಕು ಎಂದು ನರೇಗಲ್ಲ ಠಾಣೆ ಪಿಎಸ್‌ಐ ಐಶ್ವರ್ಯ ನಾಗರಾಳ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ನರೇಗಲ್ಲ ಪಟ್ಟಣ ಸೇರಿದಂತೆ ಠಾಣಾ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿಯೂ ಹಿಂದೂ-ಮುಸ್ಲಿಂ ಬಾಂಧವರು ಒಗ್ಗಟ್ಟಿನಿಂದ ಹಬ್ಬ ಆಚರಿಸಬೇಕು. ಶಾಂತಿಗೆ ಭಂಗ ತರುವ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಗೊಂದಲ ಅಥವಾ ಅಶಾಂತಿ ಸೃಷ್ಟಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ನರೇಗಲ್ಲ ಠಾಣೆ ವ್ಯಾಪ್ತಿಯ ಜನರು ಶಾಂತಿ ಮತ್ತು ಸೌಹಾರ್ದತೆಗೆ ಹೆಸರಾಗಿದ್ದಾರೆ. ಪಟ್ಟಣದಲ್ಲಿ ಈವರೆಗೆ ಯಾವುದೇ ಗಲಾಟೆ ನಡೆದಿಲ್ಲ. ಎಲ್ಲ ಹಬ್ಬಗಳ ಸಂದರ್ಭದಲ್ಲಿಯೂ ಸಾರ್ವಜನಿಕರು ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಸಹಕಾರ ನೀಡಿದ್ದಾರೆ. ಇದೇ ರೀತಿಯ ಸಹಕಾರವನ್ನು ಮುಂದುವರಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ಎ.ಎ. ನವಲಗುಂದ, ಎಂ.ಎಸ್. ಧಡೇಸೂರಮಠ, ನಿಂಗನಗೌಡ ಲಕ್ಕನಗೌಡ್ರ, ಮಲ್ಲಯ್ಯ ಗುಂಡಗೋಪುರಮಠ, ಈಶ್ವರ ಬೆಟಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪೇದೆ ಬಸವರಾಜ ಮಾಯಮ್ಮನವರ ನಿರ್ವಹಿಸಿದರು.

ಪ್ರವಾದಿಗಳ ಬೆಳಕಿನಲ್ಲಿ ಮಾನವೀಯತೆಯ ಮಹಾಪಯಣ

0

ಮಾನವ ಇತಿಹಾಸದ ಸುದೀರ್ಘ ಪಯಣದಲ್ಲಿ ಪ್ರವಾದಿಗಳು, ಸಂತರು, ಶರಣರು, ಋಷಿಗಳು ಹಾಗೂ ದಾರ್ಶನಿಕರು ಮನುಷ್ಯನಿಗೆ ಪ್ರೀತಿ, ಕರುಣೆ, ನ್ಯಾಯ, ಸಮಾನತೆ ಮತ್ತು ಸಹೋದರತ್ವದ ಸಂದೇಶ ಸಾರಿದ್ದಾರೆ. ಕಾಲ, ದೇಶ, ಭಾಷೆ ಮತ್ತು ಧಾರ್ಮಿಕ ಆಚರಣೆಗಳು ಬದಲಾದರೂ ಮನುಷ್ಯನ ಹೃದಯಕ್ಕೆ ಅಗತ್ಯವಾದ ಈ ಮೌಲ್ಯಗಳು ಎಂದಿಗೂ ಬದಲಾಗಿಲ್ಲ. ಆ ಶಾಶ್ವತ ಮಾನವೀಯ ಸಂದೇಶವನ್ನು ಕನ್ನಡದ ನೆಲದಲ್ಲಿ ಮತ್ತೊಮ್ಮೆ ಮೊಳಗಿಸುವ ಪ್ರಯತ್ನವೇ ಡಾ. ಎಂ.ಡಿ. ಸಮುದ್ರಿಯವರ ‘ಭಾವೈಕ್ಯತೆಯ ಬೆಳಕು’.

ಗದಗದ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದಲ್ಲಿ ಸೋಮವಾರ ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ಅಮೃತಹಸ್ತದಿಂದ ಶಿವಾನುಭವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಯಾಗಿದೆ. ಇದು ಕೇವಲ ಪುಸ್ತಕ ಬಿಡುಗಡೆಯಲ್ಲ; ಧರ್ಮಸಮನ್ವಯ, ಭಾವೈಕ್ಯತೆ ಮತ್ತು ಮಾನವೀಯತೆಯ ಪರವಾಗಿ ಬೆಳಗಿದ ದೀಪದ ಪ್ರಜ್ವಲನೆಯಾಗಿದೆ.

ಪ್ರವಾದಿ ಮಹಮ್ಮದ್ ಪೈಗಂಬರರ ಜೀವನ ಮತ್ತು ಸಂದೇಶದಲ್ಲಿ ಕರುಣೆ, ನ್ಯಾಯ, ಸಹೋದರತ್ವ, ದಾನ, ನೆರೆಹೊರೆಯವರ ಹಕ್ಕು, ದುರ್ಬಲರ ರಕ್ಷಣೆ ಹಾಗೂ ಮಾನವ ಘನತೆಗೆ ವಿಶೇಷ ಸ್ಥಾನವಿದೆ. ಮನುಷ್ಯನನ್ನು ಮನುಷ್ಯನಾಗಿ ಗೌರವಿಸುವುದು, ಅನ್ಯಾಯವನ್ನು ವಿರೋಧಿಸುವುದು ಹಾಗೂ ಸಮಾಜದ ದುರ್ಬಲರೊಂದಿಗೆ ನಿಲ್ಲುವುದು ಅವರ ಸಂದೇಶದ ಪ್ರಮುಖ ಆಶಯಗಳಾಗಿವೆ. ಧರ್ಮದ ನಿಜವಾದ ಪರೀಕ್ಷೆ ಕೇವಲ ಧಾರ್ಮಿಕ ಆಚರಣೆಗಳಲ್ಲಿ ನಡೆಯುವುದಿಲ್ಲ; ಹಸಿದವನಿಗೆ ಅನ್ನ ನೀಡುವ ಕೈಯಲ್ಲಿ, ಬಿದ್ದವನನ್ನು ಎತ್ತುವ ಮನಸ್ಸಿನಲ್ಲಿ ಮತ್ತು ಅನ್ಯಾಯಕ್ಕೊಳಗಾದವನ ಪರ ನಿಲ್ಲುವ ಧೈರ್ಯದಲ್ಲಿ ಧರ್ಮದ ಜೀವಂತ ರೂಪ ಕಾಣುತ್ತದೆ.

ಈ ಕೃತಿಯ ಪ್ರಮುಖ ವೈಚಾರಿಕ ಕೊಡುಗೆ ಎಂದರೆ ಪೈಗಂಬರರ ಮಾನವೀಯ ಸಂದೇಶವನ್ನು ಬಸವಣ್ಣನವರ ಶರಣ ಚಿಂತನೆಯೊಂದಿಗೆ ಸಂವಾದಕ್ಕೆ ತರುವ ಪ್ರಯತ್ನ. ಬಸವಣ್ಣನವರ ‘ಇವ ನಮ್ಮವ, ಇವ ನಮ್ಮವ’ ಎಂಬ ಭಾವವು ಜಾತಿ, ವರ್ಗ, ಜನ್ಮ ಮತ್ತು ಮೇಲು-ಕೀಳುಗಳ ಗೋಡೆಗಳನ್ನು ಮೀರಿ ಮನುಷ್ಯನನ್ನು ಮನುಷ್ಯನಾಗಿ ಕಾಣುವ ವಿಶಾಲ ದೃಷ್ಟಿಯಾಗಿದೆ. ಪೈಗಂಬರರ ಸಹೋದರತ್ವದ ಆಶಯವೂ ಮನುಷ್ಯರ ನಡುವೆ ಪರಸ್ಪರ ಹೊಣೆಗಾರಿಕೆ, ಕರುಣೆ ಮತ್ತು ಮಾನವೀಯ ಸಂಬಂಧವನ್ನು ಬಲಪಡಿಸುತ್ತದೆ.

ಬಸವಣ್ಣನವರ ಕಾಯಕದ ಪರಿಕಲ್ಪನೆ ಮನುಷ್ಯನ ಸ್ವಾಭಿಮಾನ ಮತ್ತು ಪ್ರಾಮಾಣಿಕ ದುಡಿಮೆಯನ್ನು ಪ್ರತಿಪಾದಿಸಿದರೆ, ದಾಸೋಹವು ಗಳಿಸಿದ್ದನ್ನು ಸಮಾಜದೊಂದಿಗೆ ಹಂಚಿಕೊಳ್ಳುವ ಸಂಸ್ಕೃತಿಯನ್ನು ಸಾರುತ್ತದೆ. ಇಸ್ಲಾಮಿನ ಜಕಾತ್ ಪರಂಪರೆಯೂ ಸಂಪತ್ತಿನಲ್ಲಿ ಬಡವರ ಹಕ್ಕನ್ನು ಗುರುತಿಸುವ ಸಾಮಾಜಿಕ ಹೊಣೆಗಾರಿಕೆಯನ್ನು ಪ್ರತಿಪಾದಿಸುತ್ತದೆ. ಕಾಯಕ ಕೈಗೆ ಶಕ್ತಿ ನೀಡಿದರೆ, ದಾಸೋಹ ಹೃದಯಕ್ಕೆ ವಿಶಾಲತೆ ನೀಡುತ್ತದೆ. ಗಳಿಸುವುದು ಬದುಕನ್ನು ಕಟ್ಟಿದರೆ, ಹಂಚಿಕೊಳ್ಳುವುದು ಸಮಾಜವನ್ನು ಕಟ್ಟುತ್ತದೆ ಎಂಬ ಸಂದೇಶ ಇಲ್ಲಿ ಮಹತ್ವ ಪಡೆಯುತ್ತದೆ.

ಇಂದಿನ ಸಮಾಜದಲ್ಲಿ ಧರ್ಮ, ಜಾತಿ, ಭಾಷೆ ಮತ್ತು ವಿಚಾರಗಳ ಭಿನ್ನತೆಗಳು ಕೆಲವೊಮ್ಮೆ ದ್ವೇಷಕ್ಕೆ ಕಾರಣವಾಗುತ್ತಿರುವುದು ಆತಂಕಕಾರಿ. ಇಂತಹ ಸಂದರ್ಭದಲ್ಲಿ ಭಾವೈಕ್ಯತೆಯ ಅಗತ್ಯ ಮತ್ತಷ್ಟು ಹೆಚ್ಚಿದೆ. ನಿನ್ನ ಧರ್ಮವನ್ನು ಪ್ರೀತಿಸು; ಆದರೆ ಮತ್ತೊಬ್ಬನ ಧರ್ಮವನ್ನು ದ್ವೇಷಿಸಬೇಡ. ನಿನ್ನ ನಂಬಿಕೆಯಲ್ಲಿ ದೃಢವಾಗಿರು, ಆದರೆ ಮತ್ತೊಬ್ಬನ ನಂಬಿಕೆಯ ಹಕ್ಕನ್ನು ಗೌರವಿಸು ಎಂಬ ಸರಳ ಸೂತ್ರವೇ ಸೌಹಾರ್ದ ಸಮಾಜದ ಅಡಿಪಾಯವಾಗಬಹುದು.

ಗದಗದ ನೆಲಕ್ಕೆ ಶರಣ ಪರಂಪರೆಯ ಜೊತೆಗೆ ಸೂಫಿ-ಸಂತ ಪರಂಪರೆಯ ಸೌಹಾರ್ದದ ನೆನಪೂ ಇದೆ. ವಿವಿಧ ಧರ್ಮಗಳ ಜನರು ಪರಸ್ಪರ ಗೌರವದಿಂದ ಬದುಕಿದ ಸಾಮಾಜಿಕ ಅನುಭವವೂ ಇಲ್ಲಿದೆ. ಇಂತಹ ನೆಲದಲ್ಲಿ ‘ಭಾವೈಕ್ಯತೆಯ ಬೆಳಕು’ ಕೃತಿ ಲೋಕಾರ್ಪಣೆಯಾಗಿರುವುದು ಅರ್ಥಪೂರ್ಣ ಸಾಂಸ್ಕೃತಿಕ ಸಂದರ್ಭವಾಗಿದೆ. ವಿಶೇಷವಾಗಿ ತೋಂಟದಾರ್ಯ ಸಂಸ್ಥಾನಮಠದ ಶಿವಾನುಭವದ ಪವಿತ್ರ ವಾತಾವರಣದಲ್ಲಿ ಕೃತಿ ಅನಾವರಣಗೊಂಡಿರುವುದು ಆಧ್ಯಾತ್ಮವು ಗೋಡೆಗಳನ್ನು ಕಟ್ಟುವುದಕ್ಕಾಗಿ ಅಲ್ಲ, ಹೃದಯಗಳನ್ನು ವಿಶಾಲಗೊಳಿಸುವುದಕ್ಕಾಗಿ ಎಂಬ ಸಂದೇಶವನ್ನು ನೀಡಿದೆ.

ಯುವಜನತೆ ಈ ಕೃತಿಯ ಆಶಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಇಂದು ಮಾಹಿತಿ ಯುಗದಲ್ಲಿ ಬದುಕುತ್ತಿರುವ ಯುವಕರಿಗೆ ಮಾಹಿತಿ ಮಾತ್ರವಲ್ಲ, ಸತ್ಯವನ್ನು ಪರಿಶೀಲಿಸುವ ವಿವೇಕ, ಭಿನ್ನತೆಯನ್ನು ಗೌರವಿಸುವ ಸಂಸ್ಕಾರ, ಸಂವಿಧಾನದ ಮೌಲ್ಯಗಳ ಅರಿವು ಮತ್ತು ಮಾನವೀಯ ದೃಷ್ಟಿಕೋನ ಅಗತ್ಯ. ಪ್ರವಾದಿಗಳ ಸಂದೇಶ, ಬಸವಣ್ಣನವರ ವಚನಗಳು ಮತ್ತು ಭಾರತೀಯ ಸಂವಿಧಾನದ ಭ್ರಾತೃತ್ವದ ಆಶಯಗಳನ್ನು ಅರಿತುಕೊಂಡು ಯುವಕರು ಸಮಾಜವನ್ನು ಮುನ್ನಡೆಸಿದರೆ ದೇಶದ ಏಕತೆ ಮತ್ತಷ್ಟು ಬಲಗೊಳ್ಳಲಿದೆ.

ವೈದ್ಯರಾಗಿರುವ ಡಾ. ಎಂ.ಡಿ. ಸಮುದ್ರಿಯವರು ದೇಹದ ನೋವನ್ನು ಗುಣಪಡಿಸುವ ವೃತ್ತಿಯ ಜೊತೆಗೆ ಸಮಾಜದ ನೋವನ್ನೂ ಅರ್ಥಮಾಡಿಕೊಂಡು ಈ ಕೃತಿಯನ್ನು ರಚಿಸಿರುವುದು ಅವರ ಸಾಮಾಜಿಕ ಕಾಳಜಿಯ ವಿಸ್ತಾರವನ್ನು ತೋರಿಸುತ್ತದೆ. ದೇಹದ ಗಾಯಕ್ಕೆ ಔಷಧಿ ಬೇಕು, ಮನಸ್ಸಿನ ಗಾಯಕ್ಕೆ ಮಾನವೀಯತೆ ಬೇಕು, ಸಮಾಜದ ಗಾಯಕ್ಕೆ ಭಾವೈಕ್ಯತೆ ಬೇಕು. ಈ ಮೂರನೆಯ ಚಿಕಿತ್ಸೆಯತ್ತ ‘ಭಾವೈಕ್ಯತೆಯ ಬೆಳಕು’ ನಮ್ಮ ಗಮನ ಸೆಳೆಯುತ್ತದೆ.

ಈ ಕೃತಿಯನ್ನು ಕೇವಲ ಪ್ರವಾದಿ ಮಹಮ್ಮದ್ ಪೈಗಂಬರರ ಜೀವನ ಮತ್ತು ಸಂದೇಶದ ಕುರಿತ ಕೃತಿಯಾಗಿ ನೋಡಿದರೆ ಅದರ ವ್ಯಾಪ್ತಿ ಸೀಮಿತವಾಗುತ್ತದೆ. ಇದು ಮೂಲತಃ “ಮನುಷ್ಯನು ಮನುಷ್ಯನನ್ನು ಹೇಗೆ ನೋಡಬೇಕು?” ಎಂಬ ಪ್ರಶ್ನೆಯನ್ನು ಮುಂದಿಡುತ್ತದೆ. ಧರ್ಮಗಳ ನಡುವಿನ ಭಿನ್ನತೆಯನ್ನು ಸಂಘರ್ಷದ ಕಾರಣವನ್ನಾಗಿಸುವ ಬದಲು, ಅವುಗಳಲ್ಲಿರುವ ಮಾನವೀಯ ಮೌಲ್ಯಗಳನ್ನು ಗುರುತಿಸಿ ಸಮಾಜವನ್ನು ಕಟ್ಟುವ ಸಾಧ್ಯತೆಯನ್ನು ಈ ಕೃತಿ ತೆರೆದಿಡುತ್ತದೆ.

ಪ್ರವಾದಿಗಳ ಕರುಣೆ, ಬಸವಣ್ಣನವರ ಸಮಾನತೆ ಮತ್ತು ಭಾರತೀಯ ಸಂವಿಧಾನದ ಭ್ರಾತೃತ್ವ ಒಂದಾಗಿ ಬೆಸೆದುಕೊಂಡಾಗ ಭಾರತ ವಿಶ್ವಮಾನವೀಯತೆಯ ದಾರಿದೀಪವಾಗಬಲ್ಲದು. ಕತ್ತಲೆ ಯಾರ ಧರ್ಮವೂ ಅಲ್ಲ, ಬೆಳಕು ಯಾರೊಬ್ಬರ ಸ್ವತ್ತೂ ಅಲ್ಲ. ಬೆಳಕು ಎಲ್ಲರಿಗೂ, ಮಾನವೀಯತೆ ಎಲ್ಲರಿಗೂ. ಹಾಗೆಯೇ ಭಾವೈಕ್ಯತೆಯೂ ಎಲ್ಲರಿಗೂ.

‘ಭಾವೈಕ್ಯತೆಯ ಬೆಳಕು’ ಕೇವಲ ಪುಸ್ತಕವಾಗಿ ಉಳಿಯದೆ, ಧರ್ಮಗಳ ನಡುವೆ ಸೇತುವೆ ನಿರ್ಮಿಸುವ, ಮನಸ್ಸುಗಳ ನಡುವೆ ಪ್ರೀತಿ ಬೆಳೆಸುವ ಮತ್ತು ಸಮಾಜದ ಕತ್ತಲಲ್ಲಿ ಮಾನವೀಯತೆಯ ದೀಪವಾಗಿ ಹೊತ್ತಿ ಉರಿಯುವ ಕೃತಿಯಾಗಲಿ ಎಂಬುದು ಆಶಯ.

— ಅಮೀರನಾಯಕ (ಕಲ್ಲಿಗನೂರ)

ಯುವ ಬರಹಗಾರರು

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ,

ಗ್ರಾಮ ಪಂಚಾಯಿತಿ, ಲಕ್ಕುಂಡಿ

ಭರವಸೆ ಬೇಡ, ಶಾಶ್ವತ ಪರಿಹಾರ ಬೇಕು

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ನಗರದ ದಶಕಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬ ಆಗ್ರಹದೊಂದಿಗೆ Gen Z Voters and Citizens Forum ವತಿಯಿಂದ ಹಮ್ಮಿಕೊಂಡಿರುವ ರಕ್ತ ಸಹಿ ಅಭಿಯಾನಕ್ಕೆ ನಗರದ 35ನೇ ವಾರ್ಡ್‌ನಲ್ಲಿ ಯುವಕರು, ಮಹಿಳೆಯರು ಹಾಗೂ ನಾಗರಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

35ನೇ ವಾರ್ಡ್‌ನ ನಿವಾಸಿಗಳು ಸ್ವಯಂಪ್ರೇರಿತರಾಗಿ ಅಭಿಯಾನದಲ್ಲಿ ಪಾಲ್ಗೊಂಡು, ಗದಗ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು, ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು ಹಾಗೂ ಸಂಕಷ್ಟದಲ್ಲಿರುವ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿ ರಕ್ತದ ಸಹಿ ಮೂಲಕ ತಮ್ಮ ಆಗ್ರಹವನ್ನು ವ್ಯಕ್ತಪಡಿಸಿದರು.

ಗದಗ-ಬೆಟಗೇರಿ ನಗರ ನಿವಾಸಿಗಳು ಹಲವು ವರ್ಷಗಳಿಂದ ಸಮರ್ಪಕ ಹಾಗೂ ನಿಯಮಿತ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಕುಡಿಯುವ ನೀರು ಪ್ರತಿಯೊಬ್ಬ ನಾಗರಿಕನ ಮೂಲಭೂತ ಅವಶ್ಯಕತೆಯಾಗಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕ ಕ್ರಮಗಳಿಗೆ ಸೀಮಿತವಾಗದೆ, ಮುಂದಿನ ಹಲವು ದಶಕಗಳ ಜನಸಂಖ್ಯೆ ಹಾಗೂ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಗದಗ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಿ, ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದು ಅಭಿಯಾನದಲ್ಲಿ ಆಗ್ರಹಿಸಲಾಯಿತು.

ಶಿಕ್ಷಣ ಪಡೆದ ಗದಗ ಜಿಲ್ಲೆಯ ಯುವಕರು ಉದ್ಯೋಗಕ್ಕಾಗಿ ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ವಿವಿಧ ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿಗೆ ಕಡಿವಾಣ ಹಾಕಬೇಕು. ಜಿಲ್ಲೆಯಲ್ಲಿ ಕೈಗಾರಿಕೆಗಳು, ಕೃಷಿ ಆಧಾರಿತ ಉದ್ಯಮಗಳು ಹಾಗೂ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸುವುದರ ಜೊತೆಗೆ ಹೊಸ ಹೂಡಿಕೆಗಳನ್ನು ಆಕರ್ಷಿಸಿ, ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ವಿಶೇಷ ಯೋಜನೆ ರೂಪಿಸಬೇಕು ಎಂಬುದು ಯುವಕರ ಪ್ರಮುಖ ಬೇಡಿಕೆಯಾಗಿದೆ.

ಗದಗದ ಯುವಶಕ್ತಿ ಉದ್ಯೋಗಕ್ಕಾಗಿ ಬೇರೆ ನಗರಗಳತ್ತ ಮುಖ ಮಾಡುವ ಪರಿಸ್ಥಿತಿ ಬಾರದಂತೆ, ಅವರ ಪ್ರತಿಭೆ ಹಾಗೂ ಪರಿಶ್ರಮಕ್ಕೆ ಜಿಲ್ಲೆಯಲ್ಲಿ ಅವಕಾಶ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಬೇಕು ಎಂದು ಒತ್ತಾಯಿಸಲಾಯಿತು.

ಇದೇ ವೇಳೆ ಮಳೆ ಕೊರತೆ, ಬೆಳೆ ನಷ್ಟ, ನೀರಾವರಿ ಸಮಸ್ಯೆ, ಹೆಚ್ಚುತ್ತಿರುವ ಕೃಷಿ ವೆಚ್ಚ ಹಾಗೂ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಆಗ್ರಹಿಸಲಾಯಿತು. ರೈತರ ಪರಿಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸುವುದರ ಜೊತೆಗೆ ನೀರಾವರಿ ಸೌಲಭ್ಯ, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಹಾಗೂ ಕೃಷಿ ಅಭಿವೃದ್ಧಿಗೆ ದೀರ್ಘಕಾಲೀನ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಯಿತು.

ಈ ರಕ್ತ ಸಹಿ ಅಭಿಯಾನ ಯಾವುದೇ ಪಕ್ಷ ಅಥವಾ ವೈಯಕ್ತಿಕ ಹಿತಾಸಕ್ತಿಗಾಗಿ ನಡೆಸುತ್ತಿರುವ ಹೋರಾಟವಲ್ಲ. ಗದಗದ ನೀರು, ಯುವಕರ ಭವಿಷ್ಯ ಹಾಗೂ ರೈತರ ಬದುಕಿಗಾಗಿ ನಡೆಯುತ್ತಿರುವ ಜನಪರ ಅಭಿಯಾನವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

35ನೇ ವಾರ್ಡ್‌ನ ಯುವಕರು, ಮಹಿಳೆಯರು ಹಾಗೂ ನಾಗರಿಕರು ಸ್ವಯಂಪ್ರೇರಿತರಾಗಿ ಅಭಿಯಾನದಲ್ಲಿ ಭಾಗವಹಿಸಿರುವುದು ನಗರದ ಅಭಿವೃದ್ಧಿ ಕುರಿತು ಜನರಲ್ಲಿ ಮೂಡುತ್ತಿರುವ ಜಾಗೃತಿಗೆ ಸಾಕ್ಷಿಯಾಗಿದೆ. ಅಭಿಯಾನದಲ್ಲಿ ಪಾಲ್ಗೊಂಡು ಜನಪರ ಹೋರಾಟಕ್ಕೆ ಶಕ್ತಿ ತುಂಬಿದ 35ನೇ ವಾರ್ಡ್‌ನ ಯುವಕರು, ಮಹಿಳೆಯರು, ನಾಗರಿಕರು ಹಾಗೂ ಮುಖಂಡರಿಗೆ Gen Z Voters and Citizens Forum ಕೃತಜ್ಞತೆ ಸಲ್ಲಿಸಿದೆ.

ರಕ್ತದ ಸಹಿಯಲ್ಲಿ ಮೊಳಗಿದ ಜನರ ಆಗ್ರಹ

ನಮ್ಮ ರಕ್ತದ ಪ್ರತಿಯೊಂದು ಸಹಿಯೂ ಗದಗದ ಅಭಿವೃದ್ಧಿಗಾಗಿ. ನಮ್ಮ ಹೋರಾಟ ಶಾಶ್ವತ ನೀರಿಗಾಗಿ. ನಮ್ಮ ಧ್ವನಿ ಯುವಕರ ಉದ್ಯೋಗಕ್ಕಾಗಿ. ನಮ್ಮ ಆಗ್ರಹ ರೈತರ ಬದುಕಿಗಾಗಿ. ಗದಗದ ಅಭಿವೃದ್ಧಿ ನಮ್ಮ ಹಕ್ಕು; ನ್ಯಾಯ ಸಿಗುವವರೆಗೂ ಜನರ ಧ್ವನಿ ನಿಲ್ಲುವುದಿಲ್ಲ ಎಂದು ಸಂಘಟನೆ ತಿಳಿಸಿದೆ.

ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆರೋಪ: ಎಚ್.ಕೆ.ಪಾಟೀಲ ವಿರುದ್ಧ ರಾಜು ಕುರುಡಗಿ ವಾಗ್ದಾಳಿ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಅವಳಿ ನಗರದ ವಾರ್ಡ್‌ಗಳಿಗೆ ಅನುದಾನ ಹಂಚಿಕೆ ಮಾಡುವಲ್ಲಿ ಶಾಸಕ ಎಚ್.ಕೆ.ಪಾಟೀಲರು ತಾರತಮ್ಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ಆರೋಪಿಸಿದರು.

ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕರ್ನಾಟಕ ಸರ್ಕಾರದ 2025-26ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಗದಗ-ಬೆಟಗೇರಿ ಅವಳಿ ನಗರದ 35 ವಾರ್ಡ್‌ಗಳಿಗೆ ಅನುದಾನ ಹಂಚಿಕೆ ಮಾಡುವ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿನಿಧಿಸುವ ವಾರ್ಡ್‌ಗಳಿಗೆ ಹೆಚ್ಚಿನ ಹಾಗೂ ಬಿಜೆಪಿ ಸದಸ್ಯರಿರುವ ವಾರ್ಡ್‌ಗಳಿಗೆ ಕಡಿಮೆ ಅನುದಾನ ನೀಡಲಾಗುತ್ತಿದೆ ಎಂದು ದೂರಿದರು.

ಕಾಂಗ್ರೆಸ್ ಸದಸ್ಯರಿರುವ ವಾರ್ಡ್‌ಗಳಿಗೆ ತಲಾ ₹1 ಕೋಟಿ ಹಾಗೂ ಬಿಜೆಪಿ ಸದಸ್ಯರಿರುವ ವಾರ್ಡ್‌ಗಳಿಗೆ ₹50 ಲಕ್ಷದಷ್ಟು ಅನುದಾನ ನೀಡುವ ಮೂಲಕ ತಾರತಮ್ಯ ಎಸಗಲಾಗಿದೆ. ಇದರಿಂದ ಬಿಜೆಪಿ ಸದಸ್ಯರ ವಾರ್ಡ್‌ಗಳ ಮತದಾರರ ಆಶಯಗಳಿಗೆ ಅನ್ಯಾಯವಾಗುತ್ತಿದೆ. ಜನಪ್ರತಿನಿಧಿಗಳು ಯಾವುದೇ ಪಕ್ಷಕ್ಕೆ ಸೇರಿದವರಾಗಿದ್ದರೂ ಕ್ಷೇತ್ರದ ಎಲ್ಲ ವಾರ್ಡ್‌ಗಳ ಅಭಿವೃದ್ಧಿಗೆ ಸಮಾನ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಯಾವುದೇ ತಾರತಮ್ಯ ಮಾಡದೆ ಎಲ್ಲ ವಾರ್ಡ್‌ಗಳಿಗೂ ಸಮಾನವಾಗಿ ಅನುದಾನ ಹಂಚಿಕೆ ಮಾಡಲಾಗಿತ್ತು. ಆದರೆ ಪ್ರಸ್ತುತ ಶಾಸಕರು ಕಾಂಗ್ರೆಸ್ ಸದಸ್ಯರು ಪ್ರತಿನಿಧಿಸುವ ಹಲವು ವಾರ್ಡ್‌ಗಳಿಗೆ ವಿವಿಧ ಇಲಾಖೆಗಳ ಮೂಲಕ ಅನುದಾನ ಒದಗಿಸಿ ರಸ್ತೆ, ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಹಕಾರ ನೀಡುತ್ತಿದ್ದಾರೆ. ಬಿಜೆಪಿ ಸದಸ್ಯರಿರುವ ವಾರ್ಡ್‌ಗಳಿಗೆ ಅಗತ್ಯ ಅನುದಾನ ನೀಡದೆ ಅಭಿವೃದ್ಧಿ ಕಾರ್ಯಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಲ್ಲಿಯೂ ವಾರ್ಡ್‌ವಾರು ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿರುವುದು ಖಂಡನೀಯ. ಈ ಧೋರಣೆಯನ್ನು ಗದಗ-ಬೆಟಗೇರಿ ಅವಳಿ ನಗರದ ಜನತೆ ಗಮನಿಸುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ರಾಜು ಕುರುಡಗಿ ಎಚ್ಚರಿಸಿದರು.

ಅನಧಿಕೃತ ಬ್ಯಾನರ್‌ಗಳಿಗೆ ನಗರಸಭೆ ಬ್ರೇಕ್! ಫ್ಲೆಕ್ಸ್‌, ಬ್ಯಾನರ್‌, ಕಟೌಟ್‌ಗಳ ತೆರವು

0

ಗದಗ: ನಗರದ ವಿವಿಧ ವೃತ್ತಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಗರಸಭೆಯ ಅನುಮತಿ ಪಡೆಯದೆ ಅಳವಡಿಸಿದ್ದ ಫ್ಲೆಕ್ಸ್‌, ಬ್ಯಾನರ್‌ ಮತ್ತು ಕಟೌಟ್‌ಗಳನ್ನು ಗದಗ-ಬೆಟಗೇರಿ ನಗರಸಭೆ ಅಧಿಕಾರಿಗಳು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು.

ಕಾರ್ಯಕ್ರಮಗಳು, ವೈಯಕ್ತಿಕ ಶುಭಾಶಯ ಹಾಗೂ ವಿವಿಧ ಉದ್ದೇಶಗಳಿಗಾಗಿ ನಗರದಲ್ಲಿ ಎಲ್ಲೆಂದರಲ್ಲಿ ಬ್ಯಾನರ್‌ ಅಳವಡಿಸುತ್ತಿರುವ ಹಿನ್ನೆಲೆಯಲ್ಲಿ ನಗರಸಭೆ ಈ ಕ್ರಮ ಕೈಗೊಂಡಿದೆ. ನಗರಸಭೆಯ ನಿಯಮಗಳನ್ನು ಉಲ್ಲಂಘಿಸಿ ಅಳವಡಿಸಲಾಗಿದ್ದ ಬ್ಯಾನರ್‌ಗಳನ್ನು ತೆರವುಗೊಳಿಸಿ, ಅನಧಿಕೃತ ಜಾಹೀರಾತು ಫಲಕಗಳ ಅಳವಡಿಕೆಗೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗಿದ್ದಾರೆ.

ನಗರದಲ್ಲಿ ಬ್ಯಾನರ್‌, ಫ್ಲೆಕ್ಸ್‌ ಅಥವಾ ಕಟೌಟ್‌ ಅಳವಡಿಸುವವರು ಕಡ್ಡಾಯವಾಗಿ ನಗರಸಭೆಯಿಂದ ಪೂರ್ವಾನುಮತಿ ಪಡೆಯಬೇಕು. ಅಲ್ಲದೆ, ನಿಗದಿತ ಶುಲ್ಕ ಪಾವತಿಸಿ ನಿಯಮಾನುಸಾರ ಬ್ಯಾನರ್‌ ಅಳವಡಿಸಬೇಕು. ಅನುಮತಿ ಪಡೆಯದೆ ಬ್ಯಾನರ್‌ ಅಳವಡಿಸಿದರೆ ಅವುಗಳನ್ನು ತೆರವುಗೊಳಿಸುವುದರ ಜತೆಗೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

ನಗರದ ಸೌಂದರ್ಯ ಕಾಪಾಡುವ ಜತೆಗೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಬ್ಯಾನರ್‌ ಹಾಗೂ ಜಾಹೀರಾತು ಫಲಕಗಳನ್ನು ಅಳವಡಿಸಬೇಕು. ನಗರಸಭೆಯ ನಿಯಮಗಳನ್ನು ಪಾಲಿಸುವ ಮೂಲಕ ಸಹಕರಿಸುವಂತೆ ಕಂದಾಯ ಅಧಿಕಾರಿ ಮಹೇಶ್ ಹಡಪದ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಭಾರತ ಜೋಡೋಗೆ ಯುವಶಕ್ತಿ ಕೈಜೋಡಿಸಲಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ‘ಭಾರತ ಜೋಡೋ ಯುವ ಸಂಘ’ಗಳ ಸ್ಥಾಪನೆಯು ಯುವ ಸಮುದಾಯದಲ್ಲಿ ರಾಷ್ಟ್ರೀಯ ಭಾವನೆ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವುದರ ಜೊತೆಗೆ ಸೌಹಾರ್ದತೆ ಮತ್ತು ಸೇವಾ ಮನೋಭಾವ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಸಂಘಗಳ ಸ್ಥಾಪನೆಯಲ್ಲಿ ಜಿಲ್ಲೆಯ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಕರೆ ನೀಡಿದರು.

ನಗರದ ಜಿಲ್ಲಾಡಳಿತ ಭವನದ ಕೇಸ್ವಾನ್ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಸೋಮವಾರ ನಡೆದ ‘ಭಾರತ ಜೋಡೋ ಯುವ ಸಂಘ’ಗಳ ಸ್ಥಾಪನೆ ಕುರಿತು ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯುವಜನರು ಸಮಾಜದ ಮುಖ್ಯವಾಹಿನಿಗೆ ಬಂದು ದೇಶದ ಅಭಿವೃದ್ಧಿ ಹಾಗೂ ಸಾಮಾಜಿಕ ಐಕ್ಯತೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಇಂತಹ ಸಂಘಟನೆಗಳು ಸಹಕಾರಿಯಾಗಲಿವೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳ ಯುವಕರು ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಯುವಜನರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಲು ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ಅವರ ಪಾತ್ರವನ್ನು ಹೆಚ್ಚಿಸಲು ಈ ಸಂಘಗಳು ಉತ್ತಮ ವೇದಿಕೆಯಾಗಲಿವೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಗದಿತ ಕಾಲಮಿತಿಯೊಳಗೆ ಸಂಘಗಳ ರಚನೆ ಪೂರ್ಣಗೊಳಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇತರ ಸಂಬಂಧಪಟ್ಟ ಇಲಾಖೆಗಳ ಸಿಬ್ಬಂದಿ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದು ಈ ಸಂಘಗಳ ಪ್ರಯೋಜನ ಪಡೆಯುವಂತೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಗ್ರಾಮ ಹಾಗೂ ವಾರ್ಡ್ ಮಟ್ಟದಲ್ಲಿ ಯುವ ಸಂಘಗಳನ್ನು ರಚಿಸುವ ಪ್ರಕ್ರಿಯೆ, ಸಂಘಗಳ ಕಾರ್ಯವೈಖರಿ ಹಾಗೂ ಮುಂದಿನ ಚಟುವಟಿಕೆಗಳ ರೂಪುರೇಷೆಗಳ ಕುರಿತು ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.

ಯುವಕರು ದುಶ್ಚಟಗಳಿಂದ ದೂರ ಉಳಿದು, ರಚನಾತ್ಮಕ ಸಾಮಾಜಿಕ ಕಾರ್ಯಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅಧಿಕಾರಿಗಳಿಗೆ ಹಾಗೂ ಸಂಘಟಕರಿಗೆ ನಿರ್ದೇಶನ ನೀಡಿದರು.

ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಸಂಘಗಳ ರಚನೆ ಹಾಗೂ ಮುಂದಿನ ಚಟುವಟಿಕೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಎಂ.ವಿ. ಚಳಗೇರಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶರಣು ಗೋಗೇರಿ, ಗದಗ ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಚ್.ಎಸ್. ಜಿನಗ, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ತಹಸೀಲ್ದಾರ್ ಅಧಿಕಾರಿಗಳು ಉಪಸ್ಥಿತರಿದ್ದರು.

ಭಾರತ ಜೋಡೋ ಯುವ ಸಂಘಗಳ ಸ್ಥಾಪನೆಯಿಂದ ಯುವಜನರಲ್ಲಿ ರಾಷ್ಟ್ರೀಯ ಭಾವನೆ, ಸಾಮಾಜಿಕ ಜಾಗೃತಿ, ಸೌಹಾರ್ದತೆ ಹಾಗೂ ಸೇವಾ ಮನೋಭಾವ ಬೆಳೆಸಲು ಸಾಧ್ಯವಾಗಲಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಗಳ ಸ್ಥಾಪನೆಯಲ್ಲಿ ಪಾಲ್ಗೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು.

ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ

ಭೀಮಾ ನದಿಯಲ್ಲಿ ಸ್ನಾನಕ್ಕೆ ಹೋಗಿದ್ದ ನಾಲ್ವರಲ್ಲಿ ಓರ್ವ ನಾಪತ್ತೆ; ಮೂವರು ಸೇಫ್!

0

ಯಾದಗಿರಿ: ಭೀಮಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಯುವಕನೋರ್ವ ನಾಪತ್ತೆಯಾಗಿರುವ ಘಟನೆ ಯಾದಗಿರಿ ತಾಲೂಕಿನ ಮಲ್ಹಾರ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ರಂಗಯ್ಯ (21) ನಾಪತ್ತೆಯಾಗಿರುವ ಯುವಕ. ಹೊಲದಲ್ಲಿ ಕ್ರಿಮಿನಾಶಕ ಸಿಂಪಡಣೆ ಮಾಡಿದ ಬಳಿಕ ಸ್ನೇಹಿತರೊಂದಿಗೆ ಭೀಮಾ ನದಿಗೆ ಸ್ನಾನಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ನಾಲ್ವರು ಸ್ನೇಹಿತರು ನದಿಗೆ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ಮೂವರು ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ಸ್ಥಳೀಯ ಮೀನುಗಾರರು ತಕ್ಷಣ ಕಾರ್ಯಾಚರಣೆ ನಡೆಸಿ ಮೂವರನ್ನು ರಕ್ಷಿಸಿದ್ದಾರೆ.

ಆದರೆ ರಂಗಯ್ಯ ನೀರಿನಲ್ಲಿ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸ್ಥಳೀಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ನಾಪತ್ತೆಯಾದ ಯುವಕನ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಘಟನೆ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸಿರವಾರ ಅತ್ಯಾಚಾರ-ಕೊಲೆ ಖಂಡಿಸಿ ಛಲವಾದಿ ಮಹಾಸಭಾದಿಂದ ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನಲ್ಲಿ 18 ವರ್ಷದ ಯುವತಿ ಅಶ್ವಿನಿ ತಿಪ್ಪಾರೆಡ್ಡಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ ಗದಗ ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸಲಾಯಿತು.

ಬಹಿರ್ದೆಸೆಗೆ ತೆರಳಿದ್ದ ಸಂದರ್ಭದಲ್ಲಿ ಯುವತಿಯನ್ನು ನಾಲ್ವರು ದುಷ್ಕರ್ಮಿಗಳು ಹಿಂಬಾಲಿಸಿ ಅತ್ಯಾಚಾರ ಎಸಗಿದ್ದಲ್ಲದೆ, ಬಾವಿಗೆ ಎಸೆದು ಕೊಲೆ ಮಾಡಿದ್ದಾರೆ ಎನ್ನಲಾಗಿದ್ದು, ಈ ಅಮಾನವೀಯ ಘಟನೆಯಿಂದ ಇಡೀ ಸಮಾಜವೇ ತಲೆತಗ್ಗಿಸುವಂತಾಗಿದೆ. ಪ್ರಕರಣವನ್ನು ತೀವ್ರವಾಗಿ ಖಂಡಿಸಿದ ಮಹಾಸಭಾ, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತು.

ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಟ್ಟೆಚ್ಚರ ವಹಿಸಬೇಕು. ಅತ್ಯಾಚಾರ, ಕೊಲೆ ಸೇರಿದಂತೆ ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಕಾರಣರಾಗುವವರಿಗೆ ಕಾನೂನಿನಡಿ ಮತ್ತಷ್ಟು ಕಠಿಣ ಶಿಕ್ಷೆ ವಿಧಿಸಬೇಕು. ತಪ್ಪಿತಸ್ಥರಿಗೆ ಯಾವುದೇ ರೀತಿಯ ಕಾನೂನು ಸಡಿಲಿಕೆ ಅಥವಾ ಅನುಕೂಲ ಕಲ್ಪಿಸಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಅತ್ಯಾಚಾರ ಸಂತ್ರಸ್ತರಿಗೆ ಉಚಿತ ಕಾನೂನು ನೆರವು ಒದಗಿಸುವುದರೊಂದಿಗೆ, ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಸಂತ್ರಸ್ತ ಕುಟುಂಬಕ್ಕೆ ಅಗತ್ಯ ಕಾನೂನು ರಕ್ಷಣೆ ನೀಡಬೇಕು ಎಂದು ಮಹಾಸಭಾ ಆಗ್ರಹಿಸಿದೆ.

ಜಿಲ್ಲಾ ಗೌರವಾಧ್ಯಕ್ಷ ಬಸವರಾಜ ಕಡೆಮನಿ, ಜಿಲ್ಲಾಧ್ಯಕ್ಷ ಆನಂದ ಶಿಂಗಾಡಿ, ಶಂಭು ಹುನಗುಂದ, ಅನಿಲ ಕಾಳೆ, ಮುತ್ತು ಬಿಳೆಯಲಿ, ದಸಂಸ ಅಂಬೇಡ್ಕರ್‌ವಾದ ಜಿಲ್ಲಾ ಸಂಚಾಲಕ ಬಾಲರಾಜ ಅರಬರ, ಸಹಸಂಚಾಲಕ ನಾಗರಾಜ ಗೋಕಾವಿ, ಪರಶು ಕಾಳೆ, ಮಂಜುನಾಥ ಹಗೆದಾಳ, ವಿನಾಯಕ ತಿಮ್ಮಾಪೂರ, ಬಸವರಾಜ ಬಿಳೆಯಲಿ, ಶ್ರೀಕಾಂತ ಮಳಲಿ, ರಾಘವೇಂದ್ರ ಮಿಟ್ಟಿ, ಶರೀಫ್ ಬಿಳೆಯಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.