Home Blog Page 127

ಚಿತ್ರದುರ್ಗದಲ್ಲಿ ಸ್ಕ್ರೀನ್ ಗಾರ್ಡ್ ವಿಚಾರಕ್ಕೆ ಚಾಕು ಇರಿತ ಪ್ರಕರಣ: ಸಿಸಿ ಟಿವಿ ದೃಶ್ಯ ವೈರಲ್!

0

ಚಿತ್ರದುರ್ಗ: ಅನ್ಯ ಕೋಮಿನ ಯುವಕನಿಂದ ನಡೆದ ಚಾಕು ಇರಿತ ಪ್ರಕರಣದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ನಗರದ ಸಂತೇ ಮೈದಾನದ ಸಮೀಪದ ಮೊಬೈಲ್ ಅಂಗಡಿಯಲ್ಲಿ ಮೊಬೈಲ್‌ಗೆ ಸ್ಕ್ರೀನ್ ಗಾರ್ಡ್ ಅಳವಡಿಸುವ ವಿಚಾರಕ್ಕೆ ಗಲಾಟೆ ನಡೆದಿದ್ದು, ಅದು ತೀವ್ರಗೊಂಡು ಚಾಕು ಇರಿತಕ್ಕೆ ತಿರುಗಿದೆ.

ಘಟನೆಯಲ್ಲಿ ಅಂಗಡಿ ಮಾಲೀಕ ವಿಕ್ರಮ್ ಚೌದ್ರಿ ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುವಿನ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಸ್ಕ್ರೀನ್ ಗಾರ್ಡ್ ವಿಚಾರದಲ್ಲಿ ಉಂಟಾದ ವಾಗ್ವಾದದ ಹಿನ್ನೆಲೆಯಲ್ಲಿ ಅನ್ಯ ಕೋಮಿನ ಯುವಕ ಅಂಗಡಿ ಮಾಲೀಕನಿಗೆ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ. ಚಾಕು ಇರಿತದ ದೃಶ್ಯಗಳು ಅಂಗಡಿಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ.

ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.

ರಶ್ಮಿಕಾ–ವಿಜಯ್ ಮದುವೆಗೆ ಕ್ಷಣಗಣನೆ; ಶೃಂಗಾರಗೊಂಡ ವಿರಾಜಪೇಟೆಯ ಮನೆ

0

ಮಡಿಕೇರಿ: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಅವರ ಮದುವೆಗೆ ಕ್ಷಣಗಣನೆ ಆರಂಭಗೊಂಡಿದ್ದು, ವಿರಾಜಪೇಟೆ ಸಮೀಪದಲ್ಲಿರುವ ರಶ್ಮಿಕಾ ಅವರ ಮೂಲ ಮನೆ ಸಂಭ್ರಮದ ವಾತಾವರಣದಲ್ಲಿ ಶೃಂಗಾರಗೊಂಡಿದೆ.

ರಶ್ಮಿಕಾ ಮಂದಣ್ಣ ಅವರು ವಿರಾಜಪೇಟೆ ಸಮೀಪದ ಕದನೂರು ಗ್ರಾಮದವರಾಗಿದ್ದು, ಅವರ ಪೋಷಕರು ಇಂದಿಗೂ ಅಲ್ಲಿಯೇ ವಾಸವಿದ್ದಾರೆ. ಮದುವೆ ಹಿನ್ನೆಲೆ ಮನೆಯ ಮುಂದೆ ಚಪ್ಪರ ಹಾಕಲಾಗಿದ್ದು, ಮನೆಯ ಬಾಗಿಲು ಹಾಗೂ ಮುಂಭಾಗವನ್ನು ಹೂವಿನಿಂದ ಅಲಂಕರಿಸಲಾಗಿದೆ.

ಹತ್ತು ದಿನಗಳ ಹಿಂದೆಯೇ ರಶ್ಮಿಕಾ ಅವರ ಪೋಷಕರು ಹಾಗೂ ಬಂಧುಮಿತ್ರರು ವಿವಾಹ ಸಮಾರಂಭದಲ್ಲಿ ಭಾಗವಹಿಸಲು ರಾಜಸ್ಥಾನದ ಉದಯಪುರಕ್ಕೆ ತೆರಳಿದ್ದಾರೆ. ಪ್ರಸ್ತುತ ಮನೆಯಲ್ಲಿ ಯಾರೂ ಇಲ್ಲದಿದ್ದರೂ, ಮನೆ ನೋಡಿಕೊಳ್ಳುತ್ತಿರುವ ಸರೋಜಮ್ಮ ಅವರು ಸಂಪ್ರದಾಯದಂತೆ ಚಪ್ಪರ ಶಾಸ್ತ್ರವನ್ನು ನೆರವೇರಿಸಿದ್ದಾರೆ.

ಸರೋಜಮ್ಮ ಅವರು ಮಾತನಾಡುತ್ತಾ, ತಾವು ಎತ್ತಿ ಬೆಳೆಸಿದ ಮಗಳು ಇನ್ನೊಬ್ಬರ ಮನೆಗೆ ದೀಪವಾಗಲು ಹೊರಡುತ್ತಿರುವುದು ಸಂತಸ ಹಾಗೂ ಹೆಮ್ಮೆಯ ವಿಚಾರ ಎಂದು ತಿಳಿಸಿದರು. ಮಗಳ ಮದುವೆ ನಡೆಯುತ್ತಿರುವುದು ಅಪಾರ ಖುಷಿ ತಂದಿದೆ ಎಂದರು. ಇತ್ತೀಚೆಗೆ ರಶ್ಮಿಕಾ ಊರಿಗೆ ಬಂದ ಸಂದರ್ಭದಲ್ಲಿ ಮೈಸೂರಿನವರೆಗೆ ಹೋಗಿ ಬಿಟ್ಟು ಬಂದಿದ್ದಾಗಿ ಹೇಳಿದರು.

ಇನ್ನೂ ಕೊಡಗಿನ ಜನರು ಹಾಗೂ ಬಂಧುಮಿತ್ರರಿಗಾಗಿ ಏಪ್ರಿಲ್ ತಿಂಗಳಲ್ಲಿ ವಿಶೇಷ ಔತಣಕೂಟ ಆಯೋಜಿಸುವ ಸಿದ್ಧತೆ ನಡೆದಿದೆ. ಮಗಳು ಹಾಗೂ ಅಳಿಯನನ್ನು ನೋಡಲು ತಾವು ಕೂಡ ಕಾತುರದಿಂದ ಕಾಯುತ್ತಿದ್ದೇನೆ ಎಂದು ಸರೋಜಮ್ಮ ತಿಳಿಸಿದ್ದಾರೆ.

ಚೆನ್ನೈ–ಸಿಂಗಾಪುರ ವಿಮಾನದಲ್ಲಿ 5 ಗಂಟೆಗಳ ಕಾಲ ಸಿಲುಕಿದ 200ಕ್ಕೂ ಹೆಚ್ಚು ಪ್ರಯಾಣಿಕರು

0

ಚೆನ್ನೈ: ಚೆನ್ನೈಯಿಂದ ಸಿಂಗಾಪುರಗೆ ತೆರಳಬೇಕಿದ್ದ ಇಂಡಿಗೋ ವಿಮಾನದಲ್ಲಿ 200ಕ್ಕೂ ಹೆಚ್ಚು ಪ್ರಯಾಣಿಕರು ಐದು ಗಂಟೆಗಳ ಕಾಲ ವಿಮಾನದೊಳಗೆ ಕಾಯಬೇಕಾದ ಘಟನೆ ನಡೆದಿದೆ.

ವಿಮಾನಕ್ಕೆ ಹತ್ತಿದ ಬಳಿಕವೂ ಹಾರಾಟ ಪ್ರಾರಂಭವಾಗದೆ ಸುಮಾರು ಐದು ಗಂಟೆಗಳ ಕಾಲ ಪ್ರಯಾಣಿಕರು ಕುಳಿತೇ ಕಾಯುವ ಪರಿಸ್ಥಿತಿ ನಿರ್ಮಾಣವಾಯಿತು. ಈ ವಿಳಂಬದಿಂದ ಬೇಸತ್ತ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು. ಕೆಲವರು ವಿಮಾನ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಘಟನೆಯ ಬಳಿಕ ಇಂಡಿಗೋ ಸಂಸ್ಥೆ ಸ್ಪಷ್ಟನೆ ನೀಡಿದೆ. ವಿಮಾನದ ಒಳಭಾಗದ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿರುವುದನ್ನು ಪೈಲಟ್ ಗಮನಿಸಿದ ಕಾರಣ ತಾಂತ್ರಿಕ ತಂಡಕ್ಕೆ ಮಾಹಿತಿ ನೀಡಲಾಗಿದೆ. ಸಮಸ್ಯೆಯನ್ನು ಪರಿಶೀಲಿಸುವ ಪ್ರಕ್ರಿಯೆ ನಡೆಯುತ್ತಿದ್ದುದರಿಂದ ಹಾರಾಟ ವಿಳಂಬವಾಗಿದೆ ಎಂದು ತಿಳಿಸಿದೆ.

ಇದಲ್ಲದೆ, ಈ ಮಧ್ಯೆ ಕಾಕ್‌ಪಿಟ್ ಸಿಬ್ಬಂದಿ ತಮ್ಮ ಕರ್ತವ್ಯ ಸಮಯ ಮಿತಿಯನ್ನು ಮೀರಿದ ಕಾರಣ ಬದಲಿ ಸಿಬ್ಬಂದಿಯನ್ನು ನಿಯೋಜಿಸಬೇಕಾಯಿತು. ಇದರ ಪರಿಣಾಮವಾಗಿ ವಿಮಾನ ಹಾರಾಟ ಮತ್ತಷ್ಟು ತಡವಾಯಿತು ಎಂದು ಸಂಸ್ಥೆ ವಿವರಿಸಿದೆ.

ಒಟ್ಟಿನಲ್ಲಿ ತಾಂತ್ರಿಕ ತೊಂದರೆ ಹಾಗೂ ಸಿಬ್ಬಂದಿ ಬದಲಾವಣೆ ಕಾರಣಗಳಿಂದ ಪ್ರಯಾಣಿಕರು ನಿರೀಕ್ಷೆಗಿಂತ ಹೆಚ್ಚು ಸಮಯ ವಿಮಾನದೊಳಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ಸಹಕಾರ ಸಂಘಗಳ ಮೂಲಕ ಪೂರಕ ಯೋಜನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗ್ರಾಮೀಣ ಜನರಿಗೆ ನೆರವಾಗುವ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯೋಜನೆಗಳನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖಾಂತರ ರೂಪಿಸಲಾಗಿದೆ. ಈ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರಿಗೆ ಸಾಲ ಸೌಲಭ್ಯ ನೀಡುವುದು, ಹೆಚ್ಚು ಠೇವಣಿಗಳನ್ನು ಸಂಗ್ರಹಿಸುವ ಮೂಲಕ ರೈತರಿಗೆ ರಸಗೊಬ್ಬರಗಳನ್ನು, ಕೃಷಿ ಉಪಕರಣಗಳನ್ನು ವಿತರಿಸುವುದು, ಹೀಗೆ ಹತ್ತು ಹಲವಾರು ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ನಮ್ಮ ಸಹಕಾರ ಸಂಘಗಳು ಮುನ್ನಡೆಯುತ್ತಿವೆ ಎಂದು ಕೆ.ಸಿ.ಸಿ ಬ್ಯಾಂಕ್ ಧಾರವಾಡ ಹಾಗೂ ಗದಗ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಎಂ.ಎಫ್. ಕಲಗುಡಿ ಹೇಳಿದರು.

ಸಹಕಾರ ಇಲಾಖೆ ಗದಗ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಗದಗ ಜಿಲ್ಲಾ ಸಹಕಾರ ಯೂನಿಯನ್, ಕೆ.ಸಿ.ಸಿ ಬ್ಯಾಂಕ್ ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗದಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಸಿ.ಎಂ. ಪಾಟೀಲ ಮಾತನಾಡುತ್ತಾ, ಗ್ರಾಮೀಣ ಜನರಿಗೆ ಅವರ ಮನೆ ಬಾಗಿಲಿಗೆ ಕಡಿಮೆ ವೆಚ್ಚದ ಸೇವೆಗಳು, ಹೆಚ್ಚಿನ ವ್ಯಾಪ್ತಿ ಮತ್ತು ಸಾಲ ವಿತರಣೆಯ ಸುಧಾರಣೆಗಾಗಿ ಸಹಕಾರಿ ಸಂಘ ಇತರ ಸರ್ಕಾರಿ ಮತ್ತು ಹಣಕಾಸು ಸಂಸ್ಥೆಗಳಲ್ಲಿ ಕಾರ್ಯವಿಧಾನ, ಹೊಸ ವ್ಯವಹಾರಗಳು ಮತ್ತು ಆದಾಯ ಉತ್ಪಾದನೆಯ ಅವಕಾಶಗಳನ್ನು ಕಲ್ಪಿಸುವುದು ಮತ್ತು ಬದಲಾವಣೆಯನ್ನು ತರುವುದು ಈ ತರಬೇತಿಯ ಉದ್ದೇಶವಾಗಿದೆ ಎಂದು ಹೇಳಿದರು.

ಕೃಷಿ ಅಧಿಕಾರಿಗಳಾದ ಚೈತ್ರಾ ಬಿ.ಎಂ, ಸಂಜೀವಕುಮಾರ ನೆಗಳೂರು ಮಾತನಾಡಿದರು. ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕಿ ಎಸ್.ಎಸ್. ಕಬಾಡೆ, ಸಹಾಯಕ ನಿಬಂಧಕಿ ಪುಷ್ಪಾ ಕೆ. ಕಡಿವಾಳ, ಶಿರಹಟ್ಟಿ ಸಹಕಾರ ಅಭಿವೃದ್ಧಿ ಅಧಿಕಾರಿ ಕೆ.ಸಿ. ಕೂಸನೂರಮಠ, ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿಯ ಮಾರಾಟಾಧಿಕಾರಿ ಬಿ.ಆರ್. ನಿಡಗುಂದಿ, ಪ್ರಶಾಂತ ಮುಧೋಳ, ಕೆ.ಸಿ.ಸಿ. ಬ್ಯಾಂಕ್‌ನ ಎಸ್.ಎಂ. ಚಿಕ್ಕಮಠ, ಡಿ.ಬಿ. ದೊಕ್ಕಣ್ಣವರ, ಕೆ.ಸಿ.ಸಿ ಬ್ಯಾಂಕ್ ನಿರೀಕ್ಷಕ ಎ.ಎ. ಶಾಬಾದಿ, ಸುನಿಲಕುಮಾರ ಚಳಗೇರಿ, ಸುರೇಶಕುಮಾರ ಎಸ್ ಉಪಸ್ಥಿತರಿದ್ದರು.

ಕಾರ್ಯಾಗಾರದಲ್ಲಿ ಮೇಘನಾ ನಾಡಗೇರ, ಬಸವರಾಜ ಎಂ. ಮುಚ್ಚಕಣ್ಣವರ, ಪ್ರಮೋದ ಕುಸುಬಿ, ಪ್ರಕಾಶ ಬೇಲಿ ಉಪನ್ಯಾಸ ನೀಡಿದರು. ಎಸ್.ವ್ಹಿ. ಗರ್ಜಪ್ಪನವರ ಪ್ರಾರ್ಥಿಸಿದರು. ಗದಗ ಜಿಲ್ಲಾ ಸಹಕಾರ ಯೂನಿಯನ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಎಸ್. ಕರಿಯಪ್ಪನವರ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ರಶೀದಾಬಾನು ಸಿ. ಯಲಿಗಾರ ವಂದಿಸಿದರು.

ವಿದ್ಯುತ್ ಬಿಲ್ ಕಟ್ಟದ ಬ್ರಿಮ್ಸ್: ಜೆಸ್ಕಾಂ ಇಬ್ಬಗೆ ನೀತಿ ವಿರುದ್ಧ ಜನರ ಆಕ್ರೋಶ!

0

ಬೀದರ್: ಸಾಮಾನ್ಯ ಜನರು ವಿದ್ಯುತ್ ಬಿಲ್ ಪಾವತಿಯಲ್ಲಿ ಸ್ವಲ್ಪ ತಡವಾದರೂ ಕೂಡ ತಕ್ಷಣ ಸಂಪರ್ಕ ಕಡಿತಗೊಳಿಸುವ ವಿದ್ಯುತ್ ಇಲಾಖೆ, ಬೀದರ್‌ನ ಪ್ರತಿಷ್ಠಿತ ಬ್ರಿಮ್ಸ್ ಆಸ್ಪತ್ರೆ ವಿಚಾರದಲ್ಲಿ ಮಾತ್ರ ಮೃದು ಧೋರಣೆ ತಾಳುತ್ತಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಬೀದರ್‌ನ ಬ್ರಿಮ್ಸ್ ಆಸ್ಪತ್ರೆ ಕಳೆದ ಸುಮಾರು ಹತ್ತು ವರ್ಷಗಳಿಂದ ವಿದ್ಯುತ್ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಮೊತ್ತ ಕೇಳಿದರೆ ಅಚ್ಚರಿಯಾಗುತ್ತದೆ. ಒಟ್ಟು ಒಂದು ಕೋಟಿ ಎಪ್ಪತ್ತು ಲಕ್ಷ ಎಂಬತ್ತ ಸಾವಿರ ರೂಪಾಯಿ ವಿದ್ಯುತ್ ಬಿಲ್ ಬಾಕಿಯಾಗಿದೆ. ಈ ಮೊತ್ತ ಪಾವತಿಸುವಂತೆ ಜೆಸ್ಕಾಂ ವತಿಯಿಂದ ಹಲವು ಬಾರಿ ನೋಟಿಸ್ ನೀಡಿದರೂ ಕೂಡ ಆಸ್ಪತ್ರೆ ಆಡಳಿತ ಮಂಡಳಿ ಇದುವರೆಗೆ ಹಣ ಪಾವತಿಸಿಲ್ಲ.

ಜನಸಾಮಾನ್ಯರು ಒಂದು ತಿಂಗಳು ವಿದ್ಯುತ್ ಬಿಲ್ ಕಟ್ಟದೇ ಹೋದರೆ ತಕ್ಷಣ ಅವರ ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಆದರೆ ಸರ್ಕಾರಿ ಆಸ್ಪತ್ರೆ ಎಂಬ ಕಾರಣಕ್ಕೆ ಹತ್ತು ವರ್ಷಗಳಿಂದ ಕೋಟ್ಯಂತರ ರೂಪಾಯಿ ಬಾಕಿ ಇದ್ದರೂ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದು ಜೆಸ್ಕಾಂ ಇಲಾಖೆಯ ತಾರತಮ್ಯ ನೀತಿಯನ್ನು ಬಯಲಿಗೆಳೆದಿದೆ. ಇದರಿಂದ ಗಡಿಭಾಗದ ಬೀದರ್ ಜಿಲ್ಲೆಯ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಿವಾಸಿ ಅಂಬ್ರೇಶ ಕೆಂಚಾ ಸೇರಿದಂತೆ ಹಲವು ಸಾರ್ವಜನಿಕರು, ಬಾಕಿ ಉಳಿದಿರುವ ಹಣವನ್ನು ಕೂಡಲೇ ವಸೂಲಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ಸೇರಿಸಬೇಕು ಎಂದು ಜೆಸ್ಕಾಂ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ. ಲೋಡ್ ಶೆಡ್ಡಿಂಗ್‌ನಿಂದ ಜನತೆ ಹಾಗೂ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿರುವ ಈ ಸಮಯದಲ್ಲಿ, ಬಾಕಿ ಮೊತ್ತ ವಸೂಲಾದರೆ ವಿದ್ಯುತ್ ಖರೀದಿ ಮತ್ತು ಸಮರ್ಪಕ ಪೂರೈಕೆಗೆ ಸಹಕಾರಿಯಾಗಲಿದೆ ಎಂಬುದು ಜನರ ಅಭಿಪ್ರಾಯವಾಗಿದೆ.

ಕೋಟ್ಯಂತರ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿದಿರುವ ಕುರಿತು ಜೆಸ್ಕಾಂ ಸರಣಿ ನೋಟಿಸ್ ನೀಡಿದರೂ ಹಣ ಪಾವತಿಯಾಗದೇ ಇರುವುದು ಇಲಾಖೆಯನ್ನೇ ಹೈರಾಣಾಗಿಸಿದೆ. ಆದರೆ ಸರ್ಕಾರಿ ಆಸ್ಪತ್ರೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಕನಿಷ್ಠ ಅರ್ಧ ಮೊತ್ತವನ್ನಾದರೂ ತಕ್ಷಣ ಪಾವತಿಸಿದರೆ ವಿದ್ಯುತ್ ವ್ಯವಸ್ಥೆ ಸುಧಾರಣೆಗೆ ಸಹಾಯವಾಗಲಿದೆ ಎಂದು ತಿಳಿದುಬಂದಿದೆ. ಆದರೆ ಈ ಕುರಿತು ಜೆಸ್ಕಾಂ ಅಧಿಕಾರಿಗಳು ಮಾಧ್ಯಮಗಳೊಂದಿಗೆ ಮಾತನಾಡಲು ಮುಂದಾಗಿಲ್ಲ. ಒಟ್ಟಿನಲ್ಲಿ ಬ್ರಿಮ್ಸ್ ಆಸ್ಪತ್ರೆಯಿಂದ ಬರಬೇಕಾದ ಕೋಟ್ಯಂತರ ರೂಪಾಯಿ ಹಣ ಜೆಸ್ಕಾಂಗೆ ಪಾವತಿಯಾದರೆ ಜನತೆಗೂ, ಇಲಾಖೆಗೂ ಲಾಭವಾಗಲಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಕಾರ್ಯಾಗಾರಕ್ಕೆ ಹೋಗಿದ್ದ ಮಹಿಳೆ ಈಜುಕೊಳದಲ್ಲೇ ಸಾವು!

0

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಚಿಂತಡಪಿ ಗ್ರಾಮದ ಸಮೀಪದ ಪ್ರವಾಸಿ ತಾಣದಲ್ಲಿ ಈಜುಕೊಳಕ್ಕೆ ಧುಮುಕಿದ ಮಹಿಳೆಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ನಡೆದಿದೆ.

ಕುಂದಲಗುರ್ಕಿ ಗ್ರಾಮದ ರೇಖಾ (37) ಮೃತ ಮಹಿಳೆ. ಅವರು ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸಂಸ್ಥೆಯ ವತಿಯಿಂದ ಚಿಂತಡಪಿ ಗ್ರಾಮದ ಪ್ರವಾಸಿ ತಾಣದಲ್ಲಿ ಎರಡು ದಿನಗಳ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ರೇಖಾ ಅವರು ಸಂಜೆ ಆರು ಗಂಟೆಯ ನಂತರ ಈಜುಕೊಳದಲ್ಲಿ ಈಜಲು ಧುಮುಕಿದ್ದಾರೆ.

ಈಜು ಬರುವವರಾಗಿದ್ದರೂ ದುರದೃಷ್ಟವಶಾತ್ ರೇಖಾ ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಆರಂಭದಲ್ಲಿ ಅವರು ಈಜಾಡುತ್ತಿದ್ದಾರೆ ಎಂದು ಸಹೋದ್ಯೋಗಿಗಳು ಭಾವಿಸಿದ್ದರು. ಆದರೆ ಕೆಲ ನಿಮಿಷಗಳಾದರೂ ಮೇಲಕ್ಕೆ ಬರದಿದ್ದರಿಂದ ಅನುಮಾನಗೊಂಡವರು ಅವರನ್ನು ನೀರಿನಿಂದ ಹೊರತೆಗೆದಿದ್ದಾರೆ. ತಕ್ಷಣ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಆಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿ ಅಗತ್ಯ ಸುರಕ್ಷತಾ ವ್ಯವಸ್ಥೆ ಒದಗಿಸದೆ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಪ್ರವಾಸಿ ತಾಣದ ಮಾಲೀಕರು ಹಾಗೂ ರೇಖಾರನ್ನು ಕರೆದುಕೊಂಡು ಬಂದ ಸಂಸ್ಥೆಯ ವಿರುದ್ಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ದುರ್ಘಟನೆಯಿಂದ ಮೃತಳ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಘಟನೆ ಸ್ಥಳದಲ್ಲಿದ್ದ ಭದ್ರತಾ ಕ್ಯಾಮೆರಾದಲ್ಲಿ ಸಂಪೂರ್ಣ ದೃಶ್ಯ ದಾಖಲಾಗಿರುವುದಾಗಿ ತಿಳಿದುಬಂದಿದೆ.

ಅನಾಮಧೇಯ ಅರ್ಜಿ ವಜಾಗೊಳಿಸುವ ಹೆಸರಲ್ಲಿ ಲಂಚ: ಗದಗ ಎಎಸ್‌ಐ ಅರೆಸ್ಟ್

0

ಗದಗ: ಗದಗ ಶಹರ ಪೊಲೀಸ್ ಠಾಣೆಯ ಎಎಸ್‌ಐ ಸಿ.ವೈ. ಇಂಗಳಹಳ್ಳಿ ಅವರು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರಿಂದ ರೆಡ್‌ಹ್ಯಾಂಡ್ ಆಗಿ ಬಂಧಿತರಾದ ಘಟನೆ ನಡೆದಿದೆ.

ಗದಗ ನಗರದ ಹುಡ್ಕೊ ಕಾಲೋನಿಯ ನಿವಾಸಿ ಕು. ವೀರೇಶ (ತಂದೆ: ದಿ. ವೆಂಕಟೇಶ ಪೂಜಾರ) ಅವರು ಗದಗ ಲೋಕಾಯುಕ್ತ ಪೊಲೀಸ್ ಠಾಣೆಗೆ ಗಣಕೀಕೃತ ದೂರು ಸಲ್ಲಿಸಿದ್ದರು. ದೂರಿನ ಪ್ರಕಾರ, ಅವರ ತಾಯಿಯ ವಿರುದ್ಧ ಅನಾಮಧೇಯ ವ್ಯಕ್ತಿಗಳಿಂದ ಹೆಸರು ಹಾಗೂ ಸಹಿ ಇಲ್ಲದೆ ಸಲ್ಲಿಸಲಾದ ಅರ್ಜಿಯನ್ನು ವಜಾಗೊಳಿಸುವುದಾಗಿ ಹೇಳಿ ಎಎಸ್‌ಐ ಇಂಗಳಹಳ್ಳಿ ಅವರು ಮೊದಲಿಗೆ ₹13 ಸಾವಿರ ಲಂಚ ಬೇಡಿಕೆ ಇಟ್ಟಿದ್ದರು. ಬಳಿಕ ₹10 ಸಾವಿರ ನೀಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ.

ಲಂಚ ನೀಡಲು ಸಾಧ್ಯವಿಲ್ಲದ ಹಿನ್ನೆಲೆ ವೀರೇಶ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡು ಬಲೆ ಬೀಸಿದ ಲೋಕಾಯುಕ್ತ ಅಧಿಕಾರಿಗಳು, ಫೆಬ್ರವರಿ 25ರಂದು ಪಿರ್ಯಾದುದಾರರಿಂದ ₹10 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಆರೋಪಿಯನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದರು.

ಈ ಕಾರ್ಯಾಚರಣೆ ಧಾರವಾಡ ವಿಭಾಗದ ಲೋಕಾಯುಕ್ತ ಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಗದಗ ವಿಭಾಗದ ಡಿವೈಎಸ್ಪಿ ವಿಜಯ್ ಬಿರಾದಾರ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಪರಮೇಶ ಕವಟಗಿ, ಶ್ರೀಮತಿ ಎಸ್.ಎಸ್. ತೇಲಿ ಹಾಗೂ ಸಿಬ್ಬಂದಿಗಳಾದ ಎಂ.ಎಂ. ಅಯ್ಯನಗೌಡ್ರ, ಯು.ಎನ್. ಸಂಗನಾಳ, ನೀಲಕಂಠ ಅಂಬಿಗೇರ, ಮುತರೆಡ್ಡಿ ಬಾರಡ್ಡಿ, ಹಸನ್ ದೇಪೂರವಾಲಾ, ಟಿ.ಎನ್. ಜವಳಿ, ಎಂ.ಆರ್. ಹಿರೇಮಠ, ಎಸ್.ವಿ. ನೈನಾಪೂರ ಹಾಗೂ ಇರ್ಪಾನ್ ಸೈಪಣ್ಣವರ್ ಈ ದಾಳಿಯಲ್ಲಿ ಭಾಗವಹಿಸಿದ್ದರು.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಊಟ ಮಾಡುವಾಗ ಮೊಬೈಲ್ ನೋಡ್ತೀರಾ? ನಿಮ್ಮ ಆರೋಗ್ಯಕ್ಕೆ ಇದು ಭಾರೀ ಅಪಾಯ

0

ಊಟ ಮಾಡುವಾಗ ನಮ್ಮ ಸಂಪೂರ್ಣ ಗಮನ ಆಹಾರದ ಮೇಲಿರಬೇಕು. ಊಟವನ್ನು ಆನಂದಿಸುತ್ತಾ, ನಿಧಾನವಾಗಿ ತಿನ್ನುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಹಿರಿಯರು ಸದಾ ಹೇಳುತ್ತಿದ್ದರು.

ಹಿಂದಿನ ಕಾಲದಲ್ಲಿ ನಮ್ಮ ಅಜ್ಜ-ಅಜ್ಜಿಯರು ಇದೇ ರೀತಿ ಶಾಂತವಾಗಿ ಊಟ ಮಾಡುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಬಹುತೇಕ ಎಲ್ಲರೂ ಊಟ ಮಾಡುವಾಗ ಟಿವಿ ಅಥವಾ ಮೊಬೈಲ್ ನೋಡುತ್ತಲೇ ಊಟ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದ ರೀಲ್ಸ್‌, ವಿಡಿಯೋಗಳನ್ನು ಸ್ಕ್ರೋಲ್ ಮಾಡುತ್ತಾ ಊಟ ಮಾಡುವ ಈ ಅಭ್ಯಾಸ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ನೀವು ಕೂಡ ಇದೇ ರೀತಿ ಮೊಬೈಲ್ ನೋಡುತ್ತಾ ಊಟ ಮಾಡುತ್ತಿದ್ದರೆ, ಅದರ ಪರಿಣಾಮಗಳನ್ನು ತಪ್ಪದೆ ತಿಳಿದುಕೊಳ್ಳಿ.

ಊಟ ಮಾಡುವಾಗ ಮೊಬೈಲ್ ಅಥವಾ ಟಿವಿ ನೋಡುವುದರಿಂದ ಆಗುವ ಸಮಸ್ಯೆಗಳು:

ಬೊಜ್ಜು ಹೆಚ್ಚಾಗುತ್ತದೆ:
ಟಿವಿ ಅಥವಾ ಮೊಬೈಲ್ ನೋಡುತ್ತಾ ಊಟ ಮಾಡಿದಾಗ ನಮ್ಮ ಗಮನ ಆಹಾರದಿಂದ ಬೇರೆಡೆಗೆ ಹೋಗುತ್ತದೆ. ಇದರ ಪರಿಣಾಮವಾಗಿ ಎಷ್ಟು ತಿನ್ನುತ್ತಿದ್ದೇವೆ ಎಂಬ ಅರಿವು ಇರದು. ಅತಿಯಾಗಿ ತಿನ್ನುವುದರಿಂದ ಜೀರ್ಣಕ್ರಿಯೆ ಮೇಲೆ ಒತ್ತಡ ಬಿದ್ದು, ಬೊಜ್ಜಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಜೀರ್ಣಕ್ರಿಯೆ ಸಮಸ್ಯೆಗಳು:
ಆಹಾರವನ್ನು ಸರಿಯಾಗಿ ಅಗಿಯದೇ, ಗಮನವಿಲ್ಲದೆ ತಿಂದರೆ ಜೀರ್ಣಕ್ರಿಯೆ ಸರಿಯಾಗಿ ನಡೆಯುವುದಿಲ್ಲ. ಇದರಿಂದ ಅಜೀರ್ಣ, ಹೊಟ್ಟೆ ನೋವು, ಮಲಬದ್ಧತೆ ಮುಂತಾದ ಸಮಸ್ಯೆಗಳು ಉಂಟಾಗಬಹುದು.

ಮಧುಮೇಹದ ಅಪಾಯ ಹೆಚ್ಚಾಗುತ್ತದೆ:
ಮೊಬೈಲ್ ಅಥವಾ ಟಿವಿ ನೋಡುತ್ತಾ ಊಟ ಮಾಡುವುದರಿಂದ ದೇಹದ ಚಯಾಪಚಯ ಕ್ರಿಯೆ ನಿಧಾನಗೊಳ್ಳುತ್ತದೆ. ಆಹಾರ ಸರಿಯಾಗಿ ಜೀರ್ಣವಾಗದೆ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಈ ಕಾರಣಗಳಿಂದ ಮಧುಮೇಹ ಬರುವ ಅಪಾಯವೂ ಹೆಚ್ಚಾಗುತ್ತದೆ.

ಊಟ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ:

• ಊಟ ಮಾಡುವಾಗ ಟಿವಿ ಅಥವಾ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ತಪ್ಪಿಸಿ.
• ಆಹಾರದ ಮೇಲಷ್ಟೇ ಗಮನ ಕೇಂದ್ರೀಕರಿಸಿ, ಅನಾವಶ್ಯಕ ಮಾತು ಅಥವಾ ಫೋನ್‌ ನೋಡುವುದನ್ನು ಬಿಡಿ.
• ಆಹಾರವನ್ನು ನಿಧಾನವಾಗಿ, ಚೆನ್ನಾಗಿ ಅಗಿದು ತಿನ್ನಿ.
• ಊಟವಾದ ತಕ್ಷಣ ನೀರು ಕುಡಿಯಬೇಡಿ. ಇದು ಜೀರ್ಣಕ್ರಿಯೆಗೆ ಅಡ್ಡಿಯಾಗಬಹುದು.

ಸಣ್ಣ ಅಭ್ಯಾಸ ಬದಲಾವಣೆಯಿಂದಲೇ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇಂದಿನಿಂದಲೇ ಮೊಬೈಲ್‌ ದೂರವಿಟ್ಟು, ಮನಸ್ಸಿಟ್ಟು ಊಟ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.

ಬೇಸಿಗೆಯಲ್ಲಿ ಹಾವುಗಳ ಕಾಟವೇ? ಸರ್ಪಗಂಧ ಗಿಡವೇ ಶಾಶ್ವತ ಪರಿಹಾರ!

0

ಬೇಸಿಗೆ ಕಾಲ ಆರಂಭವಾದರೆ ಹಾವುಗಳ ಕಾಟ ಹೆಚ್ಚಾಗುವುದು ಸಾಮಾನ್ಯ. ಬಿಸಿಲಿನ ತಾಪವನ್ನು ತಾಳಲಾರದೆ ಹಾವುಗಳು ತಮ್ಮ ಬಿಲಗಳಿಂದ ಹೊರಬಂದು ತಂಪಾದ ಸ್ಥಳಗಳನ್ನು ಹುಡುಕುತ್ತಾ ಮನೆಗಳ ಸುತ್ತಮುತ್ತ, ಪೊದೆಗಳು, ಮರಗಿಡಗಳ ಬಳಿ ಕಾಣಿಸಿಕೊಳ್ಳುತ್ತವೆ.

ಕೆಲವೊಮ್ಮೆ ಅವು ಮನೆಯೊಳಗೂ ಪ್ರವೇಶಿಸುವ ಅಪಾಯವಿರುತ್ತದೆ. ಹಾವು ಕಚ್ಚಿದರೆ ಪ್ರಾಣಾಪಾಯವೂ ಸಂಭವಿಸಬಹುದಾದ ಕಾರಣ, ಹಲವರು ಹಾವುಗಳನ್ನು ಕಂಡ ತಕ್ಷಣ ಭಯಭೀತರಾಗುತ್ತಾರೆ. ಅದಕ್ಕಾಗಿ ಹಾವುಗಳಿಂದ ರಕ್ಷಿಸಿಕೊಳ್ಳಲು ವಿವಿಧ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗುತ್ತದೆ.

ಈ ನಿಟ್ಟಿನಲ್ಲಿ ನೈಸರ್ಗಿಕ ಹಾಗೂ ಪರಿಣಾಮಕಾರಿ ಪರಿಹಾರವಾಗಿ ಸರ್ಪಗಂಧ ಸಸ್ಯ ಬಹಳ ಉಪಯುಕ್ತವಾಗಿದೆ. ಮನೆಯಂಗಳದಲ್ಲಿ ಅಥವಾ ಮನೆ ಬಾಗಿಲಿನ ಬಳಿ ಸರ್ಪಗಂಧ ಗಿಡವನ್ನು ನೆಡುವುದರಿಂದ ಹಾವುಗಳು ಮನೆ ಬಳಿ ಸುಳಿಯದಂತೆ ತಡೆಯಬಹುದು. ಈ ಸಸ್ಯದಲ್ಲಿ ಅಪಾರ ಪ್ರಮಾಣದ ಔಷಧೀಯ ಗುಣಗಳಿದ್ದು, ಮೆಣಸು ಅಥವಾ ಹಸಿರು ಮೆಣಸಿನಕಾಯಿ ತರಹದ ತೀಕ್ಷ್ಣ ವಾಸನೆಯನ್ನು ಹೊರಸೂಸುತ್ತದೆ. ಈ ವಾಸನೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹರಡುತ್ತಿದ್ದು, ಹಾವುಗಳಿಗೆ ಇದು ಅಸಹ್ಯವಾಗುತ್ತದೆ. ಆದ್ದರಿಂದ ಹಾವುಗಳು ಈ ಗಿಡ ಇರುವ ಪ್ರದೇಶದತ್ತ ಬರಲು ಹಿಂಜರಿಯುತ್ತವೆ.

ಹಾವುಗಳಿಗೆ ಮಾತ್ರವಲ್ಲದೆ, ಇತರೆ ಸರೀಸೃಪಗಳಿಗೂ ಸರ್ಪಗಂಧ ಸಸ್ಯ ಶತ್ರುವಾಗಿದೆ. ಹೀಗಾಗಿ ಮನೆ ಸುತ್ತಮುತ್ತ ಈ ಗಿಡವನ್ನು ನೆಡುವುದರಿಂದ ಹಾವುಗಳ ಅಪಾಯವನ್ನು ಬಹುಮಟ್ಟಿಗೆ ಕಡಿಮೆ ಮಾಡಬಹುದು. ಇದಲ್ಲದೆ, ಸರ್ಪಗಂಧ ಸಸ್ಯದ ಬೇರುಗಳನ್ನು ಮನೆ ಬಾಗಿಲು, ಕಿಟಕಿ ಅಥವಾ ಪ್ರವೇಶ ದ್ವಾರಗಳ ಬಳಿ ಇಟ್ಟರೆ, ಹಾವುಗಳು ಮನೆಯೊಳಗೆ ಪ್ರವೇಶಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಈ ಬೇರುಗಳಿಂದ ಹೊರಬರುವ ಬಲವಾದ ವಾಸನೆ ಹಾವುಗಳನ್ನು ದೂರ ಇಡುತ್ತದೆ.

ಸರ್ಪಗಂಧ ಸಸ್ಯದ ಬೀಜಗಳಲ್ಲೂ ಹಾವುಗಳನ್ನು ಓಡಿಸುವ ಶಕ್ತಿ ಇದೆ. ಈ ಬೀಜಗಳಲ್ಲಿ ಆಲ್ಕಲಾಯ್ಡ್‌ಗಳು, ರೆಸರ್ಪೈನ್, ಸರ್ಪೆಂಟೈನ್ ಹಾಗೂ ಅಜ್ಮಲೈಸಿನ್‌ನಂತಹ ಔಷಧೀಯ ಅಂಶಗಳಿದ್ದು, ಇವುಗಳ ತೀಕ್ಷ್ಣ ವಾಸನೆ ಹಾವುಗಳು ಆ ಪ್ರದೇಶಕ್ಕೆ ಬಾರದಂತೆ ಮಾಡುತ್ತದೆ.

ಸರ್ಪಗಂಧ ಸಸ್ಯದ ಜೊತೆಗೆ, ಚೆಂಡುಹೂವು, ತುಳಸಿ ಮತ್ತು ಲೆಮನ್ ಗ್ರಾಸ್ ಗಿಡಗಳನ್ನು ಮನೆಯ ಸುತ್ತಮುತ್ತ ನೆಡುವುದರಿಂದಲೂ ಹಾವುಗಳ ಕಾಟವನ್ನು ನಿಯಂತ್ರಿಸಬಹುದು. ಇವುಗಳ ವಾಸನೆ ಕೂಡ ಹಾವುಗಳಿಗೆ ಇಷ್ಟವಿರದ ಕಾರಣ, ನೈಸರ್ಗಿಕವಾಗಿ ಮನೆಗೆ ರಕ್ಷಣೆಯಾಗಿ ಕಾರ್ಯನಿರ್ವಹಿಸುತ್ತವೆ.

ಜಿಬಿಎ, ಸ್ಥಳೀಯ ಸಂಸ್ಥೆ ಚುನಾವಣೆ ಕುರಿತು ಬಿಜೆಪಿ ತೀರ್ಮಾನಿಸಲಿ: H. D. ದೇವೇಗೌಡ

0

ಬೆಂಗಳೂರು: ಜಿಬಿಎ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಜೊತೆ ಮೈತ್ರಿಯಾಗಿ ಸ್ಪರ್ಧಿಸುವ ಆಕಾಂಕ್ಷೆ ನಮ್ಮದಾಗಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ H. D. ದೇವೇಗೌಡ ತಿಳಿಸಿದ್ದಾರೆ.

ನಗರದ ಜೆಪಿ ಭವನದಲ್ಲಿ ಮಾತನಾಡಿದ ಅವರು, ನಾವು ಎನ್‌ಡಿಎ ಭಾಗವಾಗಿದ್ದೇವೆ. ಜಿಬಿಎ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಬಿಜೆಪಿ–ಜೆಡಿಎಸ್ ಒಟ್ಟಾಗಿ ಎದುರಿಸಬೇಕು ಎನ್ನುವುದು ನಮ್ಮ ಆಸೆ. ಇದರಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂದರು.

ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿದೆ. ಹೀಗಾಗಿ ಬಿಜೆಪಿ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ, ಅವರ ಭಾವನೆ ತಿಳಿದ ಬಳಿಕವೇ ನಾವು ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ದೇವೇಗೌಡ ಹೇಳಿದರು.

ಸಂಸತ್ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸುವ ನಿರ್ಧಾರ ಈಗಾಗಲೇ ಇದೆ. ಆದರೆ ಜಿಬಿಎ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸೀಟುಗಳು ಕಡಿಮೆ ಇರುವುದರಿಂದ ಹಂಚಿಕೆ ವಿಚಾರ ಸಂಕೀರ್ಣವಾಗಬಹುದು. ಆದರೂ ಮೈತ್ರಿಯಾಗಿ ಹೋಗಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.

ಕುಮಾರಸ್ವಾಮಿ ಅವರು ದೆಹಲಿಗೆ ತೆರಳಿ ಬಿಜೆಪಿ ಕೇಂದ್ರ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ. ಅವರು ಮರಳಿ ಬಂದ ನಂತರ ಅಂತಿಮ ರೂಪುರೇಷೆ ತೀರ್ಮಾನಿಸಲಾಗುತ್ತದೆ ಎಂದು ದೇವೇಗೌಡ ಹೇಳಿದರು.

error: Content is protected !!