Home Blog Page 127

ಬಸ್‌ ನಿಲ್ದಾಣದಲ್ಲೇ ನಡುಕ ಹುಟ್ಟಿಸಿದ ಅಪಘಾತ: ನಿಯಂತ್ರಣ ತಪ್ಪಿ ಮಹಿಳೆಯರ ಮೇಲೆ ಹರಿದ ಕೆಎಸ್‌ಆರ್‌ಟಿಸಿ ಬಸ್

0

ಗದಗ: ನಗರದ ಹೊಸ ಬಸ್ ನಿಲ್ದಾಣದಲ್ಲಿ ಸಂಭವಿಸಿದ ಭೀಕರ ಅಪಘಾತ ಜನರಲ್ಲಿ ಆತಂಕ ಮೂಡಿಸಿದೆ. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಅತಿವೇಗವಾಗಿ ನಿಲ್ದಾಣದೊಳಗೆ ಪ್ರವೇಶಿಸಿದ ಪರಿಣಾಮ ನಿಯಂತ್ರಣ ತಪ್ಪಿ ಮೂವರು ಮಹಿಳೆಯರ ಮೇಲೆ ಹರಿದಿದೆ.

ರಾಯಚೂರು ವಿಭಾಗದ ಮಾಸ್ಕಿ ಡಿಪೋ ಬಸ್ ಚಾಲಕನ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಸುನಗ ಗ್ರಾಮದ ಶಾಂತವ್ವ ಸಿದ್ದಪ್ಪ ಕೊರ್ತಿ ಗಂಭೀರವಾಗಿ ಗಾಯಗೊಂಡಿದ್ದು, ಅವರ ಕಾಲು ಬಸ್ ಚಕ್ರದಡಿ ತುಂಡಾಗಿದ್ದು ಬೆನ್ನಿಗೆ ಭಾರೀ ಪೆಟ್ಟಾಗಿದೆ.

ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ತಕ್ಷಣ ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನಿಬ್ಬರು ಮಹಿಳೆಯರೂ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗದಗ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಾಲಕನ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಇಂತಹ ಘಟನೆ ಮರುಕಳಿಸದಂತೆ ಸಾರಿಗೆ ಇಲಾಖೆ ಕೂಡ ಆಂತರಿಕ ತನಿಖೆ ಆರಂಭಿಸಿದೆ. ಸಾರ್ವಜನಿಕ ಸುರಕ್ಷತೆ ಬಗ್ಗೆ ಮತ್ತೆ ಪ್ರಶ್ನೆಗಳು ಎದ್ದಿವೆ.

ಕಾಂಗ್ರೆಸ್ ಸರ್ಕಾರ ಗೊಂದಲ ಬಿಟ್ಟು ಸೂಕ್ತ ಆಡಳಿತ ನಡೆಸಬೇಕು: ಮಾಜಿ ಸಚಿವ ಮುರುಗೇಶ್ ನಿರಾಣಿ

0

ಕಲಬುರಗಿ: ಕಾಂಗ್ರೆಸ್ ಸರ್ಕಾರ ಗೊಂದಲಗಳನ್ನು ಬಿಟ್ಟು ಸೂಕ್ತ ಆಡಳಿತ ನಡೆಸಬೇಕು ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಕಳೆದ ಒಂದು ವರ್ಷದಿಂದ ಗೊಂದಲದ ವಾತಾವರಣವಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಭವಸ್ಥರು. ಆದಷ್ಟು ಬೇಗ ಆಂತರಿಕ ಗೊಂದಲಗಳನ್ನು ಬಗೆಹರಿಸಿ ಅಭಿವೃದ್ಧಿಯತ್ತ ಚಿತ್ತ ಹರಿಸಬೇಕು ಎಂದು ವಾಗ್ದಾಳಿ ನಡೆಸಿದರು.31 ಹೊಸ ಕಾಂಗ್ರೆಸ್ ಶಾಸಕರು ಹೈಕಮಾಂಡ್‌ಗೆ ಪತ್ರ ಬರೆದ ವಿಚಾರದಲ್ಲಿ ತಪ್ಪೇನಿಲ್ಲ. ಸರ್ಕಾರಕ್ಕೆ ಪೂರ್ಣ ಬಹುಮತವಿರುವ ಹಿನ್ನೆಲೆಯಲ್ಲಿ ಗೊಂದಲ ಬಿಟ್ಟು ಪರಿಣಾಮಕಾರಿ ಆಡಳಿತ ನಡೆಸಬೇಕು ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ದೆಹಲಿಗೆ ಹೋಗಿ ಬರುತ್ತಿರುವ ವಿಚಾರ ಪ್ರಸ್ತಾಪಿಸಿದ ಅವರು, “ಯಾರು ಮುಖ್ಯಮಂತ್ರಿ ಆಗಬೇಕು ಎಂಬುದಕ್ಕಿಂತ ಮೊದಲು ಗೊಂದಲ ಬಗೆಹರಿಯಬೇಕು,” ಎಂದು ಹೇಳಿದರು. ಇದೇ ವೇಳೆ, ಗುಲ್ಬರ್ಗಾ ವಿಶ್ವವಿದ್ಯಾಲಯವು ತಮಗೆ ಗೌರವ ಡಾಕ್ಟರೇಟ್ ನೀಡಿರುವುದಕ್ಕಾಗಿ ರಾಜ್ಯಪಾಲರು ಹಾಗೂ ಉಪಕುಲಪತಿಗಳಿಗೆ ಧನ್ಯವಾದ ತಿಳಿಸಿದರು.

“ಕಾಂತಾರ ಚಾಪ್ಟರ್–1” ವಿವಾದ: ರಣವೀರ್ ಸಿಂಗ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಆದೇಶ

ಬೆಂಗಳೂರು: ಕಾಂತಾರ ಚಾಪ್ಟರ್–1 ಚಿತ್ರದ ದೈವಪಾತ್ರದ ಕುರಿತು ಅಪಮಾನಕಾರಿ ಸನ್ನೆ ಮಾಡಿದ ಆರೋಪದ ಹಿನ್ನೆಲೆ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಮುಂದಿನ ವಿಚಾರಣೆಯವರೆಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.

ಚಾವುಂಡಿ ದೈವಕ್ಕೆ ಅಪಮಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ತನ್ನ ವಿರುದ್ಧ ದಾಖಲಾಗಿರುವ ಖಾಸಗಿ ದೂರು ಹಾಗೂ ಅದರ ಮುಂದುವರಿದ ಭಾಗವಾಗಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ರಣವೀರ್ ಸಿಂಗ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಸಜನ್ ಪೂವಯ್ಯ ವಾದ ಮಂಡಿಸಿ, ಗೋವಾದಲ್ಲಿ ನಡೆದ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI) ಸಂದರ್ಭದಲ್ಲಿ ಕಾಂತಾರ ಚಾಪ್ಟರ್–1 ಕುರಿತು ಮಾತನಾಡುವ ವೇಳೆ ನಡೆದ ಸನ್ನೆಗೆ ರಣವೀರ್ ತಕ್ಷಣ ಕ್ಷಮೆ ಕೋರಿದ್ದಾರೆ ಎಂದು ತಿಳಿಸಿದರು. ಅವರು ಉದ್ದೇಶಪೂರ್ವಕವಾಗಿ ಯಾರ ಭಾವನೆಗೂ ಧಕ್ಕೆ ಉಂಟುಮಾಡಿಲ್ಲ. ಅಗತ್ಯವಿದ್ದರೆ ತಿದ್ದುಪಡಿ ಕ್ರಮ ಕೈಗೊಳ್ಳಲು ಸಿದ್ಧರಾಗಿದ್ದಾರೆ ಎಂದರು.

ಪೀಠವು, “ಚಾವುಂಡಿ ದೈವದ ಪಾತ್ರವನ್ನು ರಿಶಬ್‌ ಶೆಟ್ಟಿ ನಿರ್ವಹಿಸಿದ್ದಾರೆ. ದೈವವನ್ನು ‘ದೆವ್ವ’ ಎಂದು ಹೇಳಿ ಮಿಮಿಕ್ರಿ ಮಾಡುವುದು ಜನರ ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡುವ ವಿಚಾರ. ಜನರ ಮೇಲೆ ಪ್ರಭಾವ ಹೊಂದಿರುವ ನಟನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸೂಪರ್ ಸ್ಟಾರ್ ಆದ ಮಾತ್ರಕ್ಕೆ ಕಾನೂನಿಗಿಂತ ಮೇಲಲ್ಲ ಎಂದು ಅಭಿಪ್ರಾಯಪಟ್ಟಿತು.ಕ್ಷಮೆ ಕೇಳಿದರೂ ಹೇಳಿದ ಮಾತು ಅಳಿದು ಹೋಗುವುದಿಲ್ಲ. ಇಂಟರ್‌ನೆಟ್ ಯಾವುದನ್ನೂ ಮರೆತೇ ಬಿಡುವುದಿಲ್ಲ,” ಎಂದು ನ್ಯಾಯಪೀಠ ತೀಕ್ಷ್ಣವಾಗಿ ತಿಳಿಸಿತು.

ದೂರುದಾರರ ಪರ ವಕೀಲರು, ಘಟನೆ ವೇಳೆ ರಿಷಬ್ ಶೆಟ್ಟಿ ಬೇಡ ಎಂದು ಹೇಳಿದರೂ ರಣವೀರ್ ಮಾತು ಮುಂದುವರಿಸಿದ್ದರು ಎಂದು ಆರೋಪಿಸಿದರು.

ಜೊತೆಗೆ, ರಣವೀರ್ ಅವರ ಪತ್ನಿ ದೀಪಿಕಾ ಪಡಕೋಣೆ ಕರ್ನಾಟಕದವರಾಗಿರುವುದರಿಂದ ಸ್ಥಳೀಯ ಆಚರಣೆಗಳ ಅರಿವು ಇರಬೇಕಿತ್ತು ಎಂದು ವಾದಿಸಿದರು. ತನಿಖೆಗೆ ಸಹಕರಿಸುವಂತೆ ರಣವೀರ್‌ಗೆ ಸೂಚಿಸಿದ ಪೀಠ, ಸರ್ಕಾರ ಮತ್ತು ದೂರುದಾರರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ ವಿಚಾರಣೆಯನ್ನು ಸೋಮವಾರ (ಮಾ.2) ಸಂಜೆ 4 ಗಂಟೆಗೆ ಮುಂದೂಡಿತು.

ಗಜೇಂದ್ರಗಡ ಮನೆ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ಮೂವರು ಬಂಧನ, ₹4.50 ಲಕ್ಷ ಮೌಲ್ಯದ ಚಿನ್ನ–ಬೆಳ್ಳಿ ವಶ

0

ಗದಗ: ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಲಕ್ಷಾಂತರ ರೂ. ಮೌಲ್ಯದ ಚಿನ್ನ–ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಫೆಬ್ರವರಿ 17ರ ರಾತ್ರಿ 11.45ರಿಂದ 18ರ ಬೆಳಗ್ಗೆ 6.30ರ ನಡುವೆ ಟಗರಗಲ್ಲಿಯಲ್ಲಿರುವ ದೂರುದಾರರ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ.30/2026, ಕಲಂ 331(3), 331(4), 305 BNS-2023 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ ಅವರ ಮಾರ್ಗದರ್ಶನದಲ್ಲಿ, ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಭುಗೌಡ ಪಾಟೀಲ ಹಾಗೂ ಸಿಪಿಐ ವಿಜಯಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಪಿಎಸ್‌ಐ ಪ್ರಕಾಶ ಡಿ ಹಾಗೂ ತಾಂತ್ರಿಕ, ಫಿಂಗರ್‌ಪ್ರಿಂಟ್ ತಂಡದ ಸಹಕಾರದಿಂದ ತನಿಖೆ ಮುಂದುವರಿಸಲಾಯಿತು.

ಫೆಬ್ರವರಿ 23ರಂದು ಕುಷ್ಟಗಿ ರಾಷ್ಟ್ರೀಯ ಹೆದ್ದಾರಿ ಬ್ರಿಜ್ ಹತ್ತಿರ ಪ್ರಮುಖ ಆರೋಪಿ ನಾಗರಾಜ ದೇವರಮನಿ (45) ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕಳ್ಳತನ ಒಪ್ಪಿಕೊಂಡಿದ್ದಾನೆ. ಆತನ ಹೇಳಿಕೆಯ ಮೇರೆಗೆ ಶಿವಮ್ಮ ದೇವರಮನಿ (38) ಮತ್ತು ಬಸಮ್ಮ ಎರಿಬಗೇರಿ (40) ಅವರನ್ನು ದೇವದುರ್ಗ ತಾಲೂಕಿನ ಗಲಗ ಗ್ರಾಮದಲ್ಲಿ ಬಂಧಿಸಲಾಗಿದೆ.

ಆರೋಪಿಗಳಿಂದ 78 ಗ್ರಾಂ 730 ಮಿಲಿ ಚಿನ್ನ (₹3,93,650) ಮತ್ತು 711.47 ಗ್ರಾಂ ಬೆಳ್ಳಿ (₹56,918) ಸೇರಿ ಒಟ್ಟು ₹4,50,568 ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಎಸ್‌ಪಿ ರೋಹನ್ ಜಗದೀಶ ಪ್ರಶಂಸಿಸಿದ್ದಾರೆ.

ಅಂಗವಿಕಲರು–ಅನಾಥರ ಜೊತೆ ದಾನೇಶ್ವರಿ ಹುಟ್ಟುಹಬ್ಬ: ಕುಷ್ಟಗಿ ದಂಪತಿಯ ಮಾನವೀಯ ನಡೆ

0

ಕುಷ್ಟಗಿ: ಪ್ರತಿಯೊಬ್ಬ ತಂದೆ–ತಾಯಿಗೂ ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಬೇಕೆಂಬ ಆಸೆ ಇರುತ್ತದೆ. ಆದರೆ ಕುಷ್ಟಗಿ ತಾಲೂಕಿನ ಕಡೇಕೊಪ್ಪ ಗ್ರಾಮದ ನಿಂಗಪ್ಪ ಜಿಗೇರಿ ಮತ್ತು ರೇಖಾ ಜಿಗೇರಿ ದಂಪತಿಗಳು ತಮ್ಮ ಮಗಳು ದಾನೇಶ್ವರಿ ಅವರ ಎರಡನೇ ವರ್ಷದ ಹುಟ್ಟುಹಬ್ಬವನ್ನು ಸಮಾಜಮುಖಿ ರೀತಿಯಲ್ಲಿ ಆಚರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇವರು ತಮ್ಮ ಮಗಳ ಹುಟ್ಟುಹಬ್ಬವನ್ನು ಸುರಕ್ಷಾ ಸೇವಾ ಸಂಸ್ಥೆಯಲ್ಲಿ ಇರುವ ಅಂಗವಿಕಲರು ಹಾಗೂ ಅನಾಥರ ವೃದ್ಧಾಶ್ರಮದಲ್ಲಿ ಸರಳವಾಗಿ ಆಚರಿಸಿದರು. ಆಶ್ರಮದ ನಿವಾಸಿಗಳೊಂದಿಗೆ ಕೇಕ್ ಕತ್ತರಿಸಿ ಸಂತೋಷ ಹಂಚಿಕೊಂಡು, ಎಲ್ಲರಿಗೂ ಒಂದು ದಿನದ ವಿಶೇಷ ಭೋಜನ ವ್ಯವಸ್ಥೆ ಮಾಡಿದರು.

“ದುಂದು ವೆಚ್ಚ ಮಾಡುವುದಕ್ಕಿಂತ ಅಗತ್ಯವಿರುವವರೊಂದಿಗೆ ಸಂತೋಷ ಹಂಚಿಕೊಳ್ಳುವುದೇ ಸಾರ್ಥಕ. ಮಕ್ಕಳಿಗೆ ಬಾಲ್ಯದಲ್ಲೇ ಮಾನವೀಯ ಮೌಲ್ಯಗಳನ್ನು ಕಲಿಸಿದರೆ, ಅವರು ದೊಡ್ಡವರಾದ ಬಳಿಕ ತಂದೆ–ತಾಯಿಗಳನ್ನು ದೂರ ಮಾಡುವುದಿಲ್ಲ” ಎಂದು ನಿಂಗಪ್ಪ ಜಿಗೇರಿ ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಪುರುಷೋತ್ತಮ ದರಕ ಹಾಗೂ ಕಾರ್ಯಾಧ್ಯಕ್ಷ ಬಾಲಚಂದ್ರ ಕೆ ಉಪಸ್ಥಿತರಿದ್ದರು. ದಂಪತಿಯ ಈ ನಡೆಗೆ ಆಶ್ರಮದ ಸದಸ್ಯರು ಹಾಗೂ ಸ್ಥಳೀಯರು ಹೃತ್ಪೂರ್ವಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

 

ಸಂಕೇತ್ ಕೊಲೆ ಪ್ರಕರಣ: ಕೋಮು ಗಲಭೆ ಹುಟ್ಟು ಹಾಕಲು ಕೃತ್ಯ ಎಸಗಿದಂತಿದೆ – ಸಿ.ಟಿ. ರವಿ

0

ಬೆಂಗಳೂರು: ಶಿವಮೊಗ್ಗದಲ್ಲಿ ನಡೆದ ಸಂಕೇತ್ ಕೊಲೆ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಸರ್ಕಾರವನ್ನು ಆಗ್ರಹಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, 10ನೇ ತರಗತಿ ಓದುತ್ತಿದ್ದ ಸಂಕೇತ್ ಎಂಬ ವಿದ್ಯಾರ್ಥಿಯನ್ನು ಯಾವುದೇ ಸ್ಪಷ್ಟ ಕಾರಣವಿಲ್ಲದೆ ಹತ್ಯೆ ಮಾಡಲಾಗಿದೆ. ವಿಶೇಷ ತರಗತಿ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗಲೇ ಕೊಲೆ ನಡೆದಿದೆ ಎಂದು ಹೇಳಿದ್ದಾರೆ.

ಭಟ್ಕಳ ಮತ್ತು ಬಾಗಲಕೋಟೆ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಇಂತಹ ಘಟನೆಗಳು ನಡೆದಿರುವುದನ್ನು ಉಲ್ಲೇಖಿಸಿದ ಅವರು, ದೇಶದ ವಿವಿಧ ಕಡೆ ಕೋಮು ಗಲಭೆ ನಡೆಸುವ ಸಂಚಿನ ಹಿನ್ನಲೆಯಲ್ಲಿ ಕೆಲವರ ಬಂಧನಗಳೂ ನಡೆದಿವೆ. ಈ ಎಲ್ಲವನ್ನು ನೋಡಿದಾಗ ಯೋಜಿತವಾಗಿ ಕೋಮು ಗಲಭೆ ಹುಟ್ಟುಹಾಕಲು ಪ್ರಯತ್ನಿಸುತ್ತಿರುವಂತೆ ಕಾಣಿಸುತ್ತಿದೆ ಎಂದು ಹೇಳಿದರು.

ಇಂತಹ ಘಟನೆಗಳಲ್ಲಿ ಒಂದೇ ಸಮುದಾಯದ ಅಪ್ರಾಪ್ತರು ಭಾಗಿಯಾಗಿರುವುದು ಕಾಕತಾಳಿಯನಾ ಅಥವಾ ಯೋಜಿತವೋ ಎಂಬುದರ ಬಗ್ಗೆ ಸಮಗ್ರ ತನಿಖೆ ಅಗತ್ಯ,” ಎಂದು ಅವರು ಒತ್ತಾಯಿಸಿದರು. ಇದೇ ವೇಳೆ ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಹೆಚ್ಚುತ್ತಿದೆ ಎಂದು ದೂರಿದ ಅವರು, ರಾಜ್ಯ ಉಡ್ತಾ ಕರ್ನಾಟಕ ಆಗುತ್ತಿರುವಂತಿದೆ. ಎಲ್ಲೆಡೆ ಮಾದಕ ವಸ್ತುಗಳು ಸಿಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಯುವಜನರ ಕಣ್ಣೀರು, ಹೋರಾಟ ನಿಮಗೆ ಕಾಣುತ್ತಿಲ್ಲವೇ? ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ಧಾಳಿ

0

ಬೆಂಗಳೂರು: ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಇವತ್ತು ಯುವಜನತೆಯ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದ್ದಾರೆ.
ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿದರು.

ಯುವಜನತೆ ಕಳೆದ ಎರಡೂವರೆ ವರ್ಷದಿಂದ ಕಣ್ಣೀರು ಹಾಕುತ್ತಿದ್ದಾರೆ. ಪ್ರತಿಭಟನೆ- ಹೋರಾಟ ಮಾಡುತ್ತಿದ್ದಾರೆ; ಇದ್ಯಾವುದನ್ನೂ ಲೆಕ್ಕಿಸದೇ ಬೆಳಗಾವಿಯ ಅಧಿವೇಶನದ ಸಂದರ್ಭದಲ್ಲೂ ಇದೇ ವಿದ್ಯಾರ್ಥಿಗಳ ಒಕ್ಕೂಟ ಪ್ರತಿಭಟನೆ ಮಾಡಿದರೆ ಲಾಠಿ ಚಾರ್ಜ್ ಮಾಡಿದ್ದರು.

ಆಗಲೂ ಸರಕಾರ ಎಚ್ಚತ್ತುಕೊಳ್ಳಲಿಲ್ಲ ಎಂದು ದೂರಿದರು. ಮುಖ್ಯಮಂತ್ರಿಗಳ ಜೊತೆ ಭೇಟಿಗೆ ಸಮಯ ನಿಗದಿಪಡಿಸಲು ರಾಜ್ಯ ಹೈಕೋರ್ಟ್ ಮಧ್ಯಸ್ಥಿಕೆ ವಹಿಸಬೇಕಾಯಿತು ಎಂದು ಅವರು ತಿಳಿಸಿದರು.

ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ಅವರು ಕುರ್ಚಿ ಕಾಳಗದಲ್ಲಿ ಬ್ಯುಸಿ ಆಗಿದ್ದಾರೆ. ಒಬ್ಬರು ಕುರ್ಚಿ ಉಳಿಸಿಕೊಳ್ಳಲು, ಇನ್ನೊಬ್ಬರು ಕುರ್ಚಿ ಕಸಿದುಕೊಳ್ಳಲು ಮುಂದಾಗಿದ್ದಾರೆಯೇ ವಿನಾ ಈ ಯುವಜನತೆಯ ಸಮಸ್ಯೆ ಆಲಿಸಲು ಇವರಿಗೆ ಸಮಯ ಸಿಗುತ್ತಿಲ್ಲ ಎಂದು ಟೀಕಿಸಿದರು.

ನನ್ನನ್ನು ವಿದ್ಯಾರ್ಥಿಗಳ ಒಕ್ಕೂಟದವರು ಬಂದು ಭೇಟಿ ಮಾಡಿದ್ದರು. 2 ಲಕ್ಷ 85 ಸಾವಿರ ಹುದ್ದೆಗಳು ಇವತ್ತಿಗೂ ಖಾಲಿ ಬಿದ್ದಿವೆ. ಕಾಂಗ್ರೆಸ್ ಸರಕಾರಕ್ಕೆ ಅವುಗಳ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲು ಆಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ದೆಹಲಿಗೆ ಬರುವಂತೆ ಯಾವುದೇ ಕರೆ ಬಂದಿಲ್ಲ, ಇಲಾಖೆ ವಿಚಾರವಾಗಿ ಹೋಗಬೇಕಿದೆ: ಡಿ.ಕೆ. ಶಿವಕುಮಾರ್

0

ಬೆಂಗಳೂರು: ಮಹದೇವಪ್ಪ ಅವರು ಕೂಡ ನಮ್ಮ ಹೈಕಮಾಂಡ್ ಆಗಿರುವುದರಿಂದ ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡುತ್ತಾರೆ ಎಂಬ ವಿಚಾರ, ಮಾಹಿತಿ ಅವರಿಗೆ ತಿಳಿದಿರಬೇಕು. ಹೀಗಾಗಿ ಅವರು ದಲಿತ ಸಿಎಂ ವಿಚಾರ ಪ್ರಸ್ತಾಪ ಮಾಡಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಕುಮಾರಪಾರ್ಕ್ ಸರಕಾರಿ ನಿವಾಸ ಹಾಗೂ ಸುತ್ತೂರು ಸದನದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು. ರಾಜ್ಯ ರಾಜಕಾರಣದಲ್ಲಿ ಬದಲಾವಣೆ, ಅಧಿಕಾರ ಹಸ್ತಾಂತರ, ದಲಿತ ಸಿಎಂ ಬಗ್ಗೆ ಆಗುತ್ತಿರುವ ಚರ್ಚೆ ಕುರಿತು ಕೇಳಿದಾಗ, “ಮಹದೇವಪ್ಪ ಅವರ ಹೇಳಿಕೆ ನೋಡಿದೆ. ಅದರ ಹೊರತಾಗಿ ಬೇರೆ ಯಾವುದೇ ಚರ್ಚೆ ಇಲ್ಲ. ಅವರಿಗೆ ಸಿಎಂ ಬದಲಾವಣೆ ಮಾಹಿತಿ ಇರಬಹುದು, ಆದರೆ ಆ ವಿಚಾರವಾಗಿ ನನಗೆ ಯಾವುದೇ ಮಾಹಿತಿ ಇಲ್ಲ” ಎಂದರು.

ಇಲಾಖೆ ವಿಚಾರವಾಗಿ ದೆಹಲಿಗೆ ಹೋಗಬೇಕಿದೆ

ಹೈಕಮಾಂಡ್ ನಿಮ್ಮನ್ನು ಹಾಗೂ ಸಿಎಂ ಅವರನ್ನು ಕರೆದಿದ್ದಾರಾ ಎಂದು ಕೇಳಿದಾಗ, “ನನಗೆ ಯಾವುದೇ ಕರೆ ಬಂದಿಲ್ಲ. ನಾನು ನಮ್ಮ ಇಲಾಖೆಗೆ ಸಂಬಂಧಿಸಿದ ಕೆಲಸಗಳ ಮೇಲೆ ದೆಹಲಿಗೆ ಹೋಗಬೇಕಾಗಿದೆ. ನಗರಾಭಿವೃದ್ಧಿ ಇಲಾಖೆ ಯೋಜನೆಗೆ ಸಂಬಂಧಿಸಿದಂತೆ 1 ಲಕ್ಷ ಕೋಟಿ ರೂ. ನೀಡಲಾಗುತ್ತಿದ್ದು, ದೊಡ್ಡ ನಗರಗಳಿಗೆ ನೀಡುವುದಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ನಮ್ಮ ನಗರಾಭಿವೃದ್ಧಿ ಸಚಿವರ ಬಳಿ ಚರ್ಚೆ ಮಾಡಿ, 2 ಹಾಗೂ 3ನೇ ಹಂತದ ನಗರಗಳ ಅಭಿವೃದ್ಧಿಗೆ ಪ್ರಸ್ತಾವನೆ ಸಿದ್ಧಪಡಿಸಲು ಹೇಳುತ್ತೇನೆ” ಎಂದು ತಿಳಿಸಿದರು.

ಸಚಿವರು, ಶಾಸಕರನ್ನು ನಿಯಂತ್ರಿಸಬೇಕಿರುವುದು ಸಿಎಂ

ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಸಚಿವರ ಹೇಳಿಕೆಗಳ ಬಗ್ಗೆ ನೀವು ಮೌನವಾಗಿದ್ದೀರಿ ಎಂದು ಕೇಳಿದಾಗ, “ಸಚಿವರುಗಳನ್ನು ನಿಯಂತ್ರಣ ಮಾಡಬೇಕಿರುವುದು ಮುಖ್ಯಮಂತ್ರಿಗಳು. ಶಾಸಕರನ್ನು ಅವರೇ ನಿಯಂತ್ರಿಸಬೇಕು. ಪಕ್ಷದ ವಿಚಾರವಾಗಿ ದೆಹಲಿಗೆ ಮಾಹಿತಿ ನೀಡುವ ವಿಚಾರ ನಾನು ಮಾಡುತ್ತಿದ್ದೇನೆ” ಎಂದು ತಿಳಿಸಿದರು.

ಪರಮೇಶ್ವರ್ ಅವರಿಗೆ ಮೊದಲು ಕೂಲಿ ಕೊಡಲಿ ಎಂಬ ರಾಜಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ದೊಡ್ಡವರು” ಎಂದು ತಿಳಿಸಿದರು. ದೆಹಲಿಗೆ ಹೋಗುತ್ತೀರಾ, ಹೈಕಮಾಂಡ್ ನಾಯಕರು ಮೊದಲ ಬಾರಿಗೆ ನಿಮ್ಮನ್ನು ಕರೆಸಿ ಚರ್ಚೆ ಮಾಡುವುದಾಗಿ ಹೇಳಿದ್ದಾರೆ ಎಂದು ಕೇಳಿದಾಗ, “ಸಧ್ಯಕ್ಕೆ ನಾನು ಇಲ್ಲಿ ಕುಮಾರಕೃಪದಲ್ಲಿ ಇದ್ದೇನೆ” ಎಂದು ತಿಳಿಸಿದರು.

ದರ್ಶನ್ ಪ್ರಕರಣದಲ್ಲಿ ಪೊಲೀಸರ ತನಿಖೆ ಬಗ್ಗೆ ಅನುಮಾನ: ಸ್ಪಷ್ಟನೆ ನೀಡಿದ ಗೃಹ ಸಚಿವ ಜಿ. ಪರಮೇಶ್ವರ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪ್ರಮುಖ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ವಿಚಾರಣೆ ತೀವ್ರಗೊಳ್ಳುತ್ತಿದೆ.

ಈ ವೇಳೆ, ಇತರ ಆರೋಪಿಗಳ ಮೊಬೈಲ್‌ಗಳನ್ನು ವಶಪಡಿಸಿಕೊಂಡ ಪ್ರಕ್ರಿಯೆ ಕುರಿತು ಅನುಮಾನ ವ್ಯಕ್ತವಾಗಿದೆ. ಮಹಜರ್ ಪ್ರಕ್ರಿಯೆ ವಾಸ್ತವದಲ್ಲಿ ಬೇರೆಡೆ ನಡೆದಿದ್ದರೂ, ಅದನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ನಡೆಸಿದಂತೆ ದಾಖಲಿಸಲಾಗಿದೆ ಎಂಬುದು ಆರೋಪಿಗಳ ಪರ ವಕೀಲರ ವಾದವಾಗಿದೆ.

ಈ ವಿವಾದದ ನಡುವೆ ಗೃಹಸಚಿವ ಜಿ. ಪರಮೇಶ್ವರ್ ಹೇಳಿಕೆ ನೀಡಿ, “ವಕೀಲರು ತಮ್ಮ ವಾದ ಮಾಡಲಿ. ಪೊಲೀಸ್ ಇಲಾಖೆ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಿದೆ. ಅಗತ್ಯವಾದ ಉತ್ತರವನ್ನು ನ್ಯಾಯಾಲಯದಲ್ಲೇ ನೀಡಲಾಗುತ್ತದೆ” ಎಂದು ತಿಳಿಸಿದ್ದಾರೆ.

ಪ್ರಕರಣದ ಮುಂದಿನ ವಿಚಾರಣೆ ವೇಳೆ ಈ ವಿಷಯದಲ್ಲಿ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ.

ಬೇಡ್ತಿ–ಶರಾವತಿ ತಿರುವಿಗೆ ವಿರೋಧ: ಶಿರಸಿಯಲ್ಲಿ ಗಂಗಾರತಿ ಮೂಲಕ ನದಿ ರಕ್ಷಣೆ ಕೂಗು

0

ಶಿರಸಿ: ಉತ್ತರ ಕನ್ನಡ ಜಿಲ್ಲೆಗೆ ಪ್ರಸ್ತಾಪಿತ ನದಿ ತಿರುವು ಯೋಜನೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ವಿವಿಧ ನದಿ ಹಾಗೂ ಹಳ್ಳಗಳಿಗೆ ಡ್ಯಾಂ ಕಟ್ಟಿ ಉತ್ತರ ಕರ್ನಾಟಕದ ಕಡೆಗೆ ನೀರು ಹರಿಸುವ ಯೋಜನೆಗೆ ಸಾವಿರಾರು ಕೋಟಿ ವೆಚ್ಚ ಮಾಡುವ ಸರ್ಕಾರದ ನಿರ್ಧಾರಕ್ಕೆ ತಜ್ಞರು ಪಶ್ಚಿಮಘಟ್ಟದ ನಾಶ ಖಚಿತ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಹಿನ್ನೆಲೆಮುರೆಗಾರ್ ಜಲಪಾತದಲ್ಲಿ ನದಿ ಪೂಜೆ ‘ಗಂಗಾರತಿ’ ನಡೆಸಿ ಯೋಜನೆಗೆ ವಿರೋಧ ವ್ಯಕ್ತಪಡಿಸಲಾಗಿದೆ. ಇದು ಬೇಡ್ತಿ–ಶರಾವತಿ ನದಿ ತಿರುವು ಯೋಜನೆಯ ಭಾಗವಾಗಿದೆ.

**ಸ್ವರ್ಣವಲ್ಲಿ ಮಠ**ದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿ, “ನದಿಗಳು ಭಗವಂತನ ಇಚ್ಛೆಯಂತೆ ಹರಿಯುತ್ತಿವೆ. ಅವುಗಳ ದಿಕ್ಕು ಬದಲಿಸುವುದು ಅಧರ್ಮ. ಧರ್ಮಪೀಠ ಇದನ್ನು ವಿರೋಧಿಸುತ್ತದೆ” ಎಂದು ಹೇಳಿದರು. ಈ ಪೂಜೆ ಅಹಿಂಸಾತ್ಮಕ ಸತ್ಯಾಗ್ರಹವಾಗಿದ್ದು, ಮುಂದೆಯೂ ಪುನರಾವರ್ತನೆ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ಜನವರಿಯಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ 25 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಇದೀಗ ಸಹಿ ಸಂಗ್ರಹ ಚಳುವಳಿ ಆರಂಭಿಸಿ, ಸರ್ಕಾರಕ್ಕೆ ತಮ್ಮ ವಿರೋಧ ತಲುಪಿಸುವ ಪ್ರಯತ್ನ ನಡೆಯುತ್ತಿದೆ. ಅನಂತ್ ಹೆಗಡೆ ಅಶೀಸರ, ನೀರವಾರಿ ತಜ್ಞರೊಂದಿಗೆ ಅಧಿಕಾರಿಗಳನ್ನು ಭೇಟಿ ಮಾಡಿ ಯೋಜನೆ ಕುರಿತು ಚರ್ಚೆ ನಡೆಸುವ ಯೋಜನೆ ಇದೆ ಎಂದು ಹೇಳಿದ್ದಾರೆ.

ನದಿ ತಿರುವು ಯೋಜನೆ ವಿರುದ್ಧದ ಹೋರಾಟ ಇದೀಗ ಆಧ್ಯಾತ್ಮಿಕ ರೂಪ ಪಡೆದುಕೊಂಡಿದ್ದು, ಪರಿಸರ ರಕ್ಷಣೆ ಮತ್ತು ಜನಜಾಗೃತಿ ಎರಡನ್ನೂ ಒಟ್ಟಿಗೆ ಮುಂದುವರಿಸುವ ಸಂಕಲ್ಪ ವ್ಯಕ್ತವಾಗಿದೆ.

error: Content is protected !!